ಚುನಾವಣೆ: ನೈಜ ಹಕ್ಕುದಾರನ ಧ್ವನಿ- ದೇವನೂರ ಮಹಾದೇವ

[ಬೆಂಗಳೂರಿನ, ಸಮಾಜವಾದಿ ವೇದಿಕೆಯ ವತಿಯಿಂದ 14.2.2023ರಂದು ಮೈಸೂರಿನಲ್ಲಿ ನಡೆದ “ಮುಕ್ತ ಮತದಾನ-ಸಮರ್ಥ ಸರ್ಕಾರ” ಜನತಂತ್ರದ ‘ನೈಜ ಹಕ್ಕುದಾರ’ರ ಧ್ವನಿ ಹಿಡಿದಿರುವ ‘ಡಯಾಗ್ನೋಸ್ಟಿಕ್” ವರದಿ ಬಿಡುಗಡೆಗೊಳಿಸಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ, ಅಕ್ಷರ ರೂಪ]

 

“ಮುಕ್ತ ಮತದಾನ- ಸಮರ್ಥ ಸರ್ಕಾರ” ಎಂಬ ಜನತಂತ್ರದ ‘ನೈಜ ಹಕ್ಕುದಾರ’ನ ಧ್ವನಿ ಹಿಡಿಯುವ ಪ್ರಯತ್ನದ ವರದಿಯನ್ನು ನಾನೀಗ ಬಿಡುಗಡೆ ಮಾಡಬೇಕಾಗಿದೆ. ಇದೊಂದು ಅಧ್ಯಯನ. ‘ಸಾಮಾಜಿಕ ವಿಜ್ಞಾನ ಚೌಕಟ್ಟಿನಲ್ಲಿ ಈ ಅಧ್ಯಯನ ಕೈಗೊಳ್ಳಲು ಪ್ರಯತ್ನಿಸಲಾಗಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ. ಇಲ್ಲಿ ಬಳಸಲಾಗಿರುವ ಅಧ್ಯಯನ ವಿಧಾನದ ಹೆಸರುಗಳೂ ನನಗೆ ಅಪರಿಚಿತ. ಜೊತೆಗೆ ಅರ್ಥವಾಗುವುದೂ ಕಷ್ಟ. ‘ಆಜ್ಞೆ ಚಾಲಿತ ಪ್ಯಾಕೇಜ್’ ಅಂತೆ, ಸಂಖ್ಯಾಶಾಸ್ತ್ರದ ಆಧುನಿಕ ತಂತ್ರಾಂಶ ಮಾಡಲ್ ‘Multinomial Logit Model’ ಅಂತೆ, ಸಂಖ್ಯಾಶಾಸ್ತ್ರದ ಉನ್ನತ ಸಾಧನ ‘Qualitative Choice- Logit Model ಅಂತೆ, ಇವೆಲ್ಲಾ ಗೊತ್ತಿಲ್ಲ ನನಗೆ. ಕೇಳಿ ಕೇಳಿ ತಿಳಿದುಕೊಳ್ಳಬೇಕು. ಎಷ್ಟೇ ತಿಳಿದುಕೊಂಡರೂ ನನ್ನ ಬುದ್ದಿ ಅಷ್ಟಕ್ಕಷ್ಟೆ. ಇಂಥ ದಯನೀಯ ಪರಿಸ್ಥಿತಿ ನನ್ನದಾಗಿದ್ದರೂ ಈ ಅಧ್ಯಯನದ ವರದಿ ಬಿಡುಗಡೆ ಮಾಡುವ ಧೈರ್ಯ ಮಾಡಿದ್ದೇನೆ. ಇದಕ್ಕೆ ಕಾರಣ, ಗೆಳೆಯರಾದ ಪ್ರಕಾಶ್ ಕಮ್ಮರಡಿ ಅವರಿಗೆ ನನ್ನ ಬಗ್ಗೆ ಇರುವ ವಿಶ್ವಾಸ. ತಪ್ಪಿಸಿಕೊಳ್ಳಲಾಗಲಿಲ್ಲ. ತಪ್ಪು ಮಾತಾಡಿದರೆ ಕ್ಷಮೆ ಇರಲಿ.
ಈ ಅಧ್ಯಯನದ ವರದಿಯನ್ನು ‘ಹಿತ್ತಲ ಗಿಡ’ ಪ್ರಕಟಣೆ ಹೊರ ತಂದಿದೆ. ‘ಹಿತ್ತಲ ಗಿಡ’ ಪದವೇ ನನ್ನನ್ನು ಸೆಳೆದುಕೊಂಡಿತು. ‘ಹಿತ್ತಲ ಗಿಡ ಮದ್ದಲ್ಲ’ ಎಂಬ ಮಾತಿದೆ. ಏನೆಂದರೆ, ಕಣ್ಮುಂದೆ ಇರೋದು. ನಮ್ಮ ಕೈಗೆಟುಕುವುದು, ನಮಗೆ ತುಂಬಾ ಪರಿಚಿತವಾದುದು ಔಷಧವಲ್ಲ ಎಂಬ ಅಸಡ್ಡೆ. ಅದಕ್ಕಾಗೇ ನಾವು ಚೈನಾದ ನಾರು ಬೇರಿಗೊ ಅಥವಾ ಇನ್ಯಾವುದೊ ದೇಶದ ಗಿಡಮೂಲಿಕೆ ಹುಡುಕುತ್ತೇವೆ.
ನಾನ್ಯಾಕೋ, ಅಧ್ಯಯನ ವಸ್ತುಗೆ ಕೈ ಹಾಕಲು ಧೈರ್ಯ ಸಾಲದೆ ಸುತ್ತಮುತ್ತ ಅಲೆಯುತ್ತಿದ್ದೇನೆ ಅನ್ನಿಸುತ್ತದೆ. ಈಗ ಬರುತ್ತೇನೆ. “ಸಾವಿರಕ್ಕೂ ಮಿಕ್ಕ ಅಂಕಿ ಅಂಶಗಳ ಆಧಾರಿತ ಅಂತಿಮ ಫಲಿತಾಂಶದ ಪರಿಣಾಮ ಮತ್ತು ಪರಿಹಾರಗಳತ್ತ ನೋಡುವ ಸಾಹಸಕ್ಕೆ ಕೈಹಾಕದೆ ಅಗತ್ಯವೆನಿಸಿದೆಡೆ ಕೆಲ ಅನಿಸಿಕೆಗಳನ್ನು (Impression) ಮಾತ್ರ ಕೊಡಲಾಗಿದೆ.”- ಹೀಗಂತ ಅಧ್ಯಯನಕಾರರು ಹೇಳುತ್ತಾರೆ. ನಾನೂ ಕೂಡ ಸಾಹಸಕ್ಕೆ ಕೈ ಹಾಕುವುದಿಲ್ಲ! ಕೆಲವೇ ಕೆಲವು ನನ್ನ ಅನ್ನಿಸಿಕೆಗಳನ್ನು ಮಾತ್ರ ಇಲ್ಲಿ ಹೇಳುತ್ತೇನೆ.
ಮೊದಲನೆಯದಾಗಿ- ಈ ಅಧ್ಯಯನದ ತಲೆಬರಹ ‘ಮುಕ್ತ ಮತದಾನ- ಸಮರ್ಥ ಸರ್ಕಾರ’ ಎಂದಿದೆ. ‘ಸಮರ್ಥ ಸರ್ಕಾರ’ ಎಂದರೆ ಏನು? ಅದು ಇದು ಏನೇನೋ ಹೇಳಬಹುದು. ಒಂದು ಸರ್ಕಾರ ಅಥವಾ ಆಳ್ವಿಕೆ ತನ್ನ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುತ್ತಿದೆಯೇ ಎಂಬುದರ ಮೇಲೆ ಸಮರ್ಥ ಅನ್ನುವುದು ನಿಂತಿದೆ. ಇದರೊಳಗೇನೆ ಸರ್ಕಾರವೂ ಕೂಡ ತನ್ನ ಕಾನೂನುಗಳನ್ನು ತಾನೂ ಪಾಲಿಸುವುದೂ ಕೂಡ ಅಂತರ್ಗತವಾಗಿರುತ್ತದೆ. ಬಹುಶಃ ಇದು ಒಂದು ಸರ್ಕಾರಕ್ಕೆ ಇರಬೇಕಾದ ಕನಿಷ್ಠ ಅರ್ಹತೆ. ಇದು ಆಳ್ವಿಕೆಯ ಬುಡದಂತೆ, ಬುಡ ಭದ್ರ ಇಲ್ಲದಿದ್ದರೆ ಅದರ ಮೇಲೆ ಏನೇ ಕಟ್ಟಿದರೂ ಅದು ಅಲ್ಲಾಡುತ್ತಿರುತ್ತದೆ- ಈ ಬಗ್ಗೆ ಈ ಅಧ್ಯಯನದಲ್ಲಿ ಕಂಡು ಬರುವುದಿಲ್ಲ. ನನ್ನ ಅನ್ನಿಸಿಕೆ ಸ್ವಲ್ಪವಾದರೂ ಸರಿ ಇರಬಹುದು ಅನ್ನಿಸಿ ಕಮ್ಮರಡಿಯವರು ಗಮನಿಸಲಿ ಎಂದು ಹೇಳುತ್ತಿರುವೆ. ಈ ಪ್ರಶ್ನೆ ಎತ್ತಿದ್ದರೆ ಇಂದಿನ ಹಳಿ ತಪ್ಪಿದ ರಾಜಕಾರಣದ ಈ ದುರಂತಕ್ಕೆ ಮತದಾರರು ಯಾವ ರೀತಿ ಸ್ಪಂಧಿಸುತ್ತಿದ್ದರು ಎನ್ನುವುದು ತಿಳಿದು ಬರುತ್ತಿತ್ತು.
ಈ ಅಧ್ಯಯನ ವರದಿಯನ್ನು 2022, ಆಗಸ್ಟ್ ಸೆಪ್ಟೆಂಬರ್ ತಿಂಗಳುಗಳಲ್ಲಿ ಕೈಗೊಳ್ಳಲಾಗಿದೆ. ಎಲ್ಲಾ ವಯಸ್ಸು ಮತ್ತು ಶೈಕ್ಷಣಿಕ ಹಿನ್ನಲೆಯ ವಿವಿಧ ಜಾತಿ, ಧರ್ಮಗಳ ಗಂಡು ಹೆಣ್ಣು ಅನುಪಾತದಲ್ಲಿ ರಾಜ್ಯದ 20 ಜಿಲ್ಲೆಗಳಲ್ಲಿ ಅಧ್ಯಯನ ಕೈಗೊಳ್ಳಲಾಗಿದೆ. ಇಲ್ಲಿ ಕೆಲವು ಆಸಕ್ತಿದಾಯಕ ಅಂಶಗಳೂ ಬೆಳಕಿಗೆ ಬಂದಿವೆ. ಈ ಸಮೀಕ್ಷೆಯಲ್ಲಿ “ಮಾಧ್ಯಮಗಳು ಜನರನ್ನು ಜಾಗೃತಗೊಳಿಸುವ ಬದಲಿಗೆ ದಿಕ್ಕು ತಪ್ಪಿಸುತ್ತಿವೆ” ಎಂದು ಮುಕ್ಕಾಲು ಪಾಲು ಮತದಾರರು ಅಭಿಪ್ರಾಯ ಪಟ್ಟಿದ್ದಾರೆ. ಇದು ಮತದಾರರು ಜಾಗೃತಗೊಂಡಿದ್ದಾರೆ ಎಂದು ಸೂಚಿಸುತ್ತದೆ. ಪ್ರಸ್ತುತ ಸರ್ಕಾರವು ನಿರುದ್ಯೋಗ, ಬೆಲೆ ಏರಿಕೆ, ಭ್ರಷ್ಟಾಚಾರ ನಿಯಂತ್ರಣ ಮಾಡದಿರುವ ಬಗ್ಗೆ ಹಾಗೂ ಕೋವಿಡ್ ಸಂದರ್ಭವನ್ನು ಸಮರ್ಪಕವಾಗಿ ನಿರ್ವಹಿಸದೆ ಇರುವ ಬಗ್ಗೆ ಜನರಲ್ಲಿ ಬೇಸರ ಅಧಿಕವಾಗಿದೆ. ಬಲತ್ಕಾರದ ಭೂ ಸ್ವಾಧೀನವು ರೈತರ ಆತಂಕ ಹೆಚ್ಚಿಸಿದೆ. ಮುಖ್ಯವಾಗಿ ರಾಜ್ಯದಲ್ಲಿ ಇತ್ತೀಚೆಗೆ ಜರುಗಿದ ಕೋಮು ಗಲಭೆ ಮತೀಯ ವಿವಾದಗಳು ಸಹಜವಾಗಿ ಹುಟ್ಟಿರುವುದಿಲ್ಲ ಎಂಬ ಎಚ್ಚರ ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಬಹುತೇಕ ಮತದಾರರಲ್ಲಿ ಕಂಡು ಬರುತ್ತದೆ. ಆಡಳಿತ ಪಕ್ಷದ ಮೇಲೆ ನಕಾರಾತ್ಮಕ ಭಾವನೆ ಹೆಚ್ಚುತ್ತಿರುವುದನ್ನೂ ಸಮೀಕ್ಷೆ ತಿಳಿಸುತ್ತದೆ. ಹೀಗಿದ್ದೂ ಮುಂದಿನ ಚುನಾವಣೆಯಲ್ಲಿ ಹಣ ಮುಂತಾದ ಆಮಿಷಗಳು ಹಾಗೂ ಮಾಧ್ಯಮಗಳ ಸುಳ್ಳು ನಿರೂಪಣೆಗಳು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತವೆ ಎಂಬ ಆತಂಕವೂ ಮತದಾರರಲ್ಲಿದೆ. ಈ ಆತಂಕ ನನ್ನದೂ ಆಗಿದೆ.
ಹೀಗೆ ಸಾಗುವ ವರದಿಯಲ್ಲಿ, ನನಗೆ ನಿಲುಕುವ, ಆಸಕ್ತಿದಾಯಕ ಅನ್ನಿಸುವ ಒಂದು ಸಂಗತಿ ಇದೆ. ಅದೇ ನಿಗೂಢ ಮತದಾರರು. ಶೇಕಡ 23 ರಿಂದ 35 ರಷ್ಟು ಇದೆ. ನಮ್ಮ ಮತದಾರರ ನಿಗೂಢತೆ ತುಂಬಾ ಹೆಚ್ಚೆನಿಸಿತು. ನಿಗೂಢತೆ ಹೆಚ್ಚಿದ್ದರೆ ನಮ್ಮ ಸುತ್ತಮುತ್ತ ವಾತಾವರಣ ದುಷ್ಟವಾಗಿದೆ ಅಂತಲೇ ಅರ್ಥ. ಉದಾಹರಣೆಗೆ ಅಲ್ಪಸಂಖ್ಯಾತರಲ್ಲಿ ನಿಗೂಢತೆಗೆ ಭೀತಿ ಕಾರಣವಾಗಿರಬಹುದು. ಹಾಗೇ ಮಹಿಳೆ ಮತ್ತು ಹಿರಿಯ ನಾಗರಿಕರಲ್ಲಿ ಹೆಚ್ಚು ನಿಗೂಢತೆ ಇದೆ ಎಂದಾದರೆ ಯಾಕೆ ಯಾರ್ಯಾರದೊ ಕೆಂಗಣ್ಣಿಗೆ ಬೀಳಬೇಕು ಅಂತ ಇವರು ಹೆಚ್ಚು ಹುಷಾರು ವಹಿಸಿರಬಹುದು. ಹಾಗೇ ಹೈದರಾಬಾದ್ ಕರ್ನಾಟಕದ ಕಡೆಗೂ ಸಾಕಷ್ಟು ನಿಗೂಢ ಮತದಾರರು ಇದ್ದಾರೆ. ಕಳೆದ ಚುನಾವಣೆಯಲ್ಲಿ ಯಾವುದೋ ಒಂದು ಪಕ್ಷಕ್ಕೆ ಓಟು ಕೊಟ್ಟು ಮುಂದಿನ ಚುನಾವಣೆಯಲ್ಲಿ ಆಯ್ಕೆ ಬದಲಿಸುವ ಕಾರಣ ಇಲ್ಲಿ ಇರಲೂಬಹುದು. ನಿಗೂಢ ಪದ ಒಂದೇ ಆದರೂ ಆ ಪದದೊಳಗಿನ ಅರ್ಥವು ಪರಿಸ್ಥಿತಿ, ಹಿನ್ನೆಲೆಗೆ ತಕ್ಕಂತೆ ಭಿನ್ನ ಭಿನ್ನ ಇರುವ ಸಾಧ್ಯತೆ ಇರುತ್ತದೆ. ಈ ನಿಗೂಢತೆ ಗಂಟು ಬಿಡಿಸಿದರೆ ನಮಗೆ ಹೆಚ್ಚು ತಿಳಿಯಬಹುದು. ಇದಕ್ಕೆ ಪ್ರಶ್ನೋತ್ತರ ಮಾದರಿ ಬಳಸದೆ ‘ಸನ್ನೆ’ ಮಾದರಿ ಬಳಸಬಹುದೆ? ಇದ್ಯಾವುದು ‘ಸನ್ನೆ’ ಮಾದರಿ, ನಾವು ಕೇಳೇ ಇಲ್ಲವಲ್ಲ ಅಂತ ಸಂಶೋಧಕರು ಗಾಬರಿಯಾಗಬಾರದು. ಈಗ ಮನಸ್ಸಿಗೆ ಬಂದುದ್ದನ್ನು ಹೇಳಿದೆ ಅಷ್ಟೆ. ಉದಾಹರಣೆಗೆ- ಕಳೆದ ಚುನಾವಣೆಯಲ್ಲಿ ಮತ ನೀಡಿದ ಪಕ್ಷಗಳ ಚಿಹ್ನೆ ತೋರಿಸಿ ಮತದಾರನ ಆಯ್ಕೆ ಪಕ್ಷ ತಿಳಿದುಕೊಳ್ಳುವುದಾದರೆ ಅರ್ಥ ಮಾಡಿಕೊಳ್ಳುವತ್ತ ಒಂದು ಬಾಗಿಲು ತೆಗೆಯಲೂಬಹುದು.
ಕೊನೆಯದಾಗಿ, ನನ್ನ ಆಶಯದ ವಿಷಯವನ್ನೂ ಈ ಅಧ್ಯಯನ ಗುರುತಿಸಿದೆ. ಸಮೀಕ್ಷೆಗೆ ಒಳಪಟ್ಟ ಮತದಾರರು- ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಇಂತಹ ಆಳ್ವಿಕೆಯ ಸಂಸಾರ ಮಾಡಿದ ಪಕ್ಷಗಳನ್ನು ಹೊರತುಪಡಿಸಿ, ಇದುವರೆಗೂ ಆಳ್ವಿಕೆಯ ಸಂಸಾರ ಮಾಡದೇ ಇರುವ ನವಪಕ್ಷ ಅಥವಾ ಒಕ್ಕೂಟದ ಕಡೆಗೆ ಹೆಚ್ಚು ಅನ್ನಿಸುವಷ್ಟು ಒಲವು ತೋರಿದ್ದಾರೆ. ಇದು ಒಟ್ಟು 46% ಇದೆ. ಇಷ್ಟನ್ನು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವ ಪಕ್ಷವೂ ಗಳಿಸಿಲ್ಲ. ಇದು ಮೇಲ್ನೋಟಕ್ಕೆ ಶುಭ ಸೂಚನೆ ಎಂಬಂತೆ ಕಾಣುತ್ತಿದೆ. ಇವು ಹೇಗೆ ಒಟ್ಟಾಗಿ ಎದುರಿಸುತ್ತವೆ ಎನ್ನುವುದರ ಮೇಲೆ ನಿಂತಿದೆ ಎನ್ನುವಂಥ ಸೂಚನೆಗಳೂ ಇಲ್ಲಿದೆ.
ಇಲ್ಲೊಂದು ಆಸಕ್ತಿದಾಯಕ ಪರಿಕಲ್ಪನೆ ಬರುತ್ತದೆ- ‘ಸಾಂಸ್ಥಿಕರಣಗೊಂಡ ಪಕ್ಷ ರಚನೆ’ ಎಂಬ ಮಾತು. ‘ಸಂಘ ಪರಿವಾರದಂತಹ ಗಟ್ಟಿ ಸಾಂಸ್ಥಿಕ ತಳಪಾಯದ ಮೂಲಕ ಬಿಜೆಪಿ ‘ಸಾಂಸ್ಥಿಕರಣಗೊಂಡ ಪಕ್ಷ ರಚನೆಯನ್ನು ಹೊಂದಿರುತ್ತದೆ’ ಎಂಬ ಅಧ್ಯಯನಕಾರರ ಅಭಿಪ್ರಾಯ ನಿಜವೆನ್ನಿಸುತ್ತದೆ. ಮುಂದುವರಿದು “ತಳಮಟ್ಟದವರೆಗೂ ಬೇರೂರಿರುವ ವಿವಿಧ ಪ್ರಗತಿಪರ ಸಂಘ, ಸಂಸ್ಥೆ ಮತ್ತು ಸಂಘಟನೆಗಳು ಜೊತೆಗೆ ಯುವ ಕಾರ್ಯಕರ್ತರ ಪಡೆಗಳು ಹೊಸ ರಾಜಕೀಯ ಪ್ರಯೋಗಕ್ಕೆ ಈ ರೀತಿಯ ಸಾಂಸ್ಥಿಕ ರಚನೆಯನ್ನು ಒದಗಿಸಬಹುದು” ಎಂದು ಹೇಳುತ್ತದೆ. ಇದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಅಂದರೆ ಠೇವಣಿಯಂತೆ ಸಾಂಸ್ಥಿಕ ರಚನೆಯೂ ಬೇಕು. ಈ ಹಿನ್ನೆಲೆಯ ರಾಜಕೀಯ ಪಕ್ಷ ಅಥವಾ ಒಕ್ಕೂಟ ಅಲೆ ಎಬ್ಬಿಸಬೇಕು.
ಇಂದು ಕರ್ನಾಟಕದ ಮುನ್ನಡೆಯ ಸಮಾಜಮುಖಿ ರಾಜಕೀಯ ಪಕ್ಷಗಳು ಅಲೆ ಎಬ್ಬಿಸುತ್ತಿಲ್ಲ. ಇವುಗಳ ಸಾಂಸ್ಥಿಕ ರಚನೆ ಗಟ್ಟಿಯಾಗೇ ಇದೆ. ಆದರೆ ಈ ಪಕ್ಷ ಅಥವಾ ಒಕ್ಕೂಟದ ಸಾಂಸ್ಥಿಕ ರಚನೆಯಲ್ಲಿ ರಾಜಕೀಯ ಪ್ರಜ್ಞೆ ಅಷ್ಟಾಗಿ ಇಲ್ಲ. ಸಂಘ ಪರಿವಾರದಂತೆ ತನ್ನ ರಾಜಕೀಯ ಪಕ್ಷ ಗೆಲುವಿನಲ್ಲೆ ತನ್ನ ಅಳಿವು ಉಳಿವು ಎಂಬಂತೆ ಮುನ್ನಡೆಯ ಪಕ್ಷಗಳ ಸಾಂಸ್ಥಿಕ ರಚನೆಗಳು ವರ್ತಿಸುತ್ತಿಲ್ಲ. ಹೊಸ ರಂಗಕ್ಕೆ ಸೇರಬಹುದಾದ ಆಮ್ ಆದ್ಮ ಪಕ್ಷಕ್ಕೆ ಸಾಂಸ್ಥಿಕ ರಚನೆ ಇಲ್ಲ. ಅದು ಅಲೆ ಎಬ್ಬಿಸುತ್ತಿರುವುದನ್ನು ಕಡೆಗಣಿಸುವಂತಿಲ್ಲ. ಆದರೆ ಆಮ್ ಆದ್ಮಿ ‘ಒಂಟಿ ಬಡಕ ಸುಂಟಗಾಳಿ’ ಎಂಬಂತೆ ಯಾರೊಡನೆಯೂ ಕೂಡುತ್ತಿಲ್ಲ. ಇದು ಪರಿಸ್ಥಿತಿ. ಆದರೆ ಏನಾದರೂ ಸಮಾಜಮುಖಿ, ರಚನಾತ್ಮಕ ಮುನ್ನಡೆಯ ರಾಜಕೀಯ ಪಕ್ಷಗಳ ಒಕ್ಕೂಟದ ತಳಮಟ್ಟದ ಸಾಂಸ್ಥಿಕ ರಚನೆಗಳಿಗೆ ರಾಜಕೀಯ ಪ್ರಜ್ಞೆ ಬಂದರೆ, ಬಹುಶಃ ಯಾರು ಇವರ ಮುಂದೆ ನಿಲ್ಲಲಾರರು. ಈ ಅಭಿಪ್ರಾಯಕ್ಕೆ ನಾನು ಬರಲು ಕಾರಣ- ಈ ಅಧ್ಯಯನವೇ ಆಗಿದೆ. ಇದಕ್ಕಾಗಿ ಅಧ್ಯಯನಕಾರರ ತಂಡಕ್ಕೆ ಕೃತಜ್ಞತೆ ಸಲ್ಲಿಸುವೆ.
ಈಗ ಚುನಾವಣೆ ನಮ್ಮ ಮುಂದಿದೆ. ರಾಜ್ಯ ಎಂತಹ ಪರಿಸ್ಥಿತಿ ಅನುಭವಿಸುತ್ತಿದೆ ಎಂದರೆ- ಕರ್ನಾಟಕದ ಮುಖ್ಯಮಂತ್ರಿ ಯಾರು? ಎಂದು ಪ್ರಶ್ನಿಸಿದರೆ ನರೇಂದ್ರ ಮೋದಿ! ಗೃಹಮಂತ್ರಿ? ಅಮಿತ್‌ ಷಾ! – ಇದು ಜನಪ್ರಿಯವಾಗುತ್ತಿದೆ. ಕರ್ನಾಟಕದ ರಾಜ್ಯ ಚುನಾವಣೆಗೆ ಭಾರತದ ಪ್ರಧಾನಿ ಹಾಗೂ ಗೃಹಸಚಿವರು ಅಷ್ಟೊಂದು ಓಡಾಡುತ್ತಿದ್ದಾರೆ. ಇನ್ನೂ ಒಂದು ಕಸಿ ಪದ ತುಂಬಾ ಛಾಲೂ ಆಗುತ್ತಿದೆ. ಅದೇ- ಮೊದಾನಿ, ಈ ಮೊದಾನಿ ಪದದ ಒಳಹೊಕ್ಕರೆ ಅದು ನಾನಾ ಅರ್ಥ ಹೇಳುತ್ತಿರುತ್ತದೆ. ಮೋದಿ ಮತ್ತು ಅದಾನಿ ಸೇರಿ ಒಂದೇ ಪದ! ಒಂದೇ ಹೆಸರು. ಅಧಿಕಾರ ಮತ್ತು ಕುರುಡು ಕಾಂಚಣ ಎರಡೂ ಕೂಡಿ ಒಂದೇ ಆಗಿದೆ. ಇಂತಹ ಕೇಡು ಕಾಲದಲ್ಲಿ ಚುನಾವಣೆ ಬಂದಿದೆ.
ಇಂದು ಫೆಬ್ರವರಿ 14, ಪ್ರೇಮಿಗಳ ದಿನಾಚರಣೆ. ಆಳ್ವಿಕೆಯ ಸಂಸಾರ ಮಾಡದ ಯುವ ರಾಜಕೀಯ ಪಕ್ಷಗಳು ಮತದಾರರ ಮುಂದೆ ಮಂಡಿಯೂರಿ ಕೆಂಪು ಗುಲಾಬಿ ಹಿಡಿದು ಆಸೆ ಕಂಗಳಿಂದ ನೋಡುತ್ತಿವೆ. ನಾನೇನು ಹೇಳಲಿ? ಗುಡ್‌ಲಕ್!