ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ದಲಿತ ಲೇಖಕ-

ದಲಿತ ಸಂವೇದನೆಯ ದನಿ-ಅಂಬೇಡ್ಕರ್ ವಾಹಿನಿ

ಸಂಪಾದಕ:ಆರ್.ರಾಮಮೂರ್ತಿ

[ಆರ್.ರಾಮಮೂರ್ತಿ ಸಂಪಾದಕತ್ವದ ಅಂಬೇಡ್ಕರ್ ವಾಹಿನಿ ಪತ್ರಿಕೆಯ ಫೆಬ್ರವರಿ 1991ರ ಸಂಚಿಕೆಯಲ್ಲಿ, ದೇವನೂರ ಮಹಾದೇವ ಅವರ ‘ಕುಸುಮಬಾಲೆ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆಯಾದ ಸಂದರ್ಭದ ವರದಿ ನಮ್ಮ ಮರು ಓದಿಗಾಗಿ. ವರದಿಯನ್ನು ಹುಡುಕಿಕೊಟ್ಟ ಸಹೃದಯರಿಗೆ ಧನ್ಯವಾದಗಳು.]

ಕನ್ನಡ ಸಾಹಿತ್ಯ ಲೋಕದ ಒಂದು ಅಪೂರ್ವ ಪ್ರತಿಭೆಯೆಂದೇ ಗುರುತಿಸಲ್ಪಟ್ಟಿರುವ ‘ದೇವನೂರ ಮಹಾದೇವ’ ಅವರ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಕನ್ನಡ ಭಾಷೆಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ದಲಿತ ಲೇಖಕ ಮಹಾದೇವ ಅವರು, ತಮ್ಮ ಸಣ್ಣ ಕಥೆಗಳ ಮೂಲಕ ಸಾಹಿತ್ಯ ಲೋಕ ಪ್ರವೇಶಿಸಿದರು. ಮಹಾದೇವ ಅವರ ಮೊದಲ ಕಥಾ ಸಂಕಲನ ‘ದ್ಯಾವನೂರು’ ಪ್ರಕಟವಾದಾಗ ಸಾಹಿತ್ಯಾಸಕ್ತರ ಗಮನ ಸೆಳೆಯಿತು. ಆನಂತರ ಬಂದ ‘ಒಡಲಾಳ’ ದಲಿತರ ಸಾಮಾಜಿಕ ಅಸ್ಮಿತೆಯನ್ನೂ, ಜೀವನ ವಿಧಾನವನ್ನೂ, ಸುಖ, ದುಃಖ, ನೋವು, ನಲಿವು, ಹಸಿವು, ಆತಂಕಗಳನ್ನು ಹಿಡಿದಿಡುವ ಸುಂದರ ಕಲಾಕುಸುಮವೆಂದೇ ಹೆಸರು ಮಾಡಿದೆ. ಅವರ ಮೂರನೆಯ ಕೃತಿ ‘ಕುಸುಮಬಾಲೆ’ ತಮ್ಮದೇ ಶೈಲಿಗಿಂತಲೂ ಸ್ವಲ್ಪ ಬೇರೆ ರೀತಿಯ ವಸ್ತುವನ್ನು ಕೇಂದ್ರೀಕರಿಸಿ ರಚಿಸಿದ ಪುಸ್ತಕ.
ನಂಜನಗೂಡಿನ ಹತ್ತಿರದ ದೇವನೂರು ಹಳ್ಳಿಯಲ್ಲಿ ಹುಟ್ಟಿದ ಅಸ್ಪೃಶ ಮಹಾದೇವ ಅವರು, ಜಾತಿ ಅಸಮಾನತೆ ಕಂಡು ಮರುಗುತ್ತಿರುವವರು. ಜಾತಿ ವಿಮೋಚನೆಗೆ ತಮ್ಮದೇ ರೀತಿಯ ಪರಿಹಾರ ಸೂಚಿಸುವವರು. ಹೋರಾಟದಲ್ಲಿ ಅಚಲ ನಂಬಿಕೆ ಇಟ್ಟಿರುವ ಮಹಾದೇವ ದಲಿತ ಸಂಘರ್ಷ ಸಮಿತಿಯ ಸ್ಥಾಪಕರಲ್ಲಿ ಒಬ್ಬರು. ಕೆಲವು ವರ್ಷಗಳ ಕಾಲ ರಾಜ್ಯ ಸಂಚಾಲಕರಾಗಿ ಕೆಲಸ ಮಾಡಿದವರು. ವಿದ್ಯಾರ್ಥಿ ದೆಸೆಯಿಂದಲೂ ಹೋರಾಟದ ದಾಖಲೆಗಳನ್ನು ಮಾಡಿದವರು. ತುರ್ತುಪರಿಸ್ಥಿತಿಯ ನಂತರದಲ್ಲಿ ಜೆ.ಪಿಯವರ ಮೈಸೂರು ಸಮಾರಂಭಕ್ಕೆ ಅಧ್ಯಕ್ಷತೆ ವಹಿಸಿದರು. ಲೋಹಿಯಾವಾದದಲ್ಲಿ ನಂಬಿಕೆ ಇಟ್ಟಿರುವ ಮಹಾದೇವ ಶಾಂತಿಪ್ರಿಯರಷ್ಟೇ ಸಂಘಟನಾತ್ಮಕ ಪ್ರತಿಭಟನೆಯನ್ನು ಒಪ್ಪುವವರು.
ಬಾಗಿಲಿಗೆ ಬಂದ ಪದವಿಗಳನ್ನು, ಅಧಿಕಾರಗಳನ್ನು ಬರಿಗಾಲಲ್ಲೇ ತಿರಸ್ಕರಿಸಿದವರು. 1979ರಲ್ಲಿ ಜನತಾ ಪಕ್ಷ ಪಾರ್ಲಿಮೆಂಟ್ ಸದಸ್ಯರನ್ನು ಮಾಡುತ್ತೇನೆಂದಾಗ ಒಪ್ಪದವರು. 1983ರಲ್ಲಿ ಕರ್ನಾಟಕ ಜನತಾದಳ ಸರ್ಕಾರ ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮಕರಣ ಮಾಡುತ್ತೆವೆಂದು ಹುಡುಕಿಕೊಂಡು ಹೋದಾಗ ನಿರಾಕರಿಸಿದವರು…