ಕಾರಣಿಕ ನುಡಿಗಳು! – ದೇವನೂರ ಮಹಾದೇವ

[ವಾರ್ತಾಭಾರತಿ -18ನೇ ವಾರ್ಷಿಕ ವಿಶೇಷಾಂಕಕ್ಕಾಗಿ ದೇವನೂರ ಮಹಾದೇವ ಅವರು ಬರೆದ ಲೇಖನ. ನಮ್ಮ ಮರು ಓದಿಗಾಗಿ….]


ಗೆಳೆಯ ರಹಮತ್ ತರೀಕೆರೆಯವರು ನನ್ನ ಒಂದು ಭಾಷಣವನ್ನು ಕೇಳಿಸಿಕೊಂಡು, ‘ಮಹಾದೇವ ಮಾತಾಡೋದು ಮೈಲಾರಲಿಂಗ ಪರಂಪರೆಯಲ್ಲಿನ ಗೊರವರ ಕಾರಣಿಕದಂತೆ. ಹಗ್ಗದ ಮೇಲೆ ನಿಂತುಕೊಂಡು ಯಾವುದೊ ಒಂದು ನುಡಿಗಟ್ಟನ್ನು ಎಸೆದು, ‘ಲೇ ಪರಾಕ್’ ಒಗಟಿನ ರೀತಿ ಮಾತಾಡ್ತಾರೆ. ನೆರೆದವರು, ಸುತ್ತ ಇರೋರು ಆ ನುಡಿಗಟ್ಟಿಗೆ ತಂತಮ್ಮ ಅರ್ಥ ಕಟ್ಟಿಕೊಳ್ಳುತ್ತಾರೆ. ಅದೇ ರೀತಿ ಮಹಾದೇವನ ಮಾತಿಗೂ ಅರ್ಥ ಕಟ್ಟಿಕೊಳ್ಳಬೇಕು ನಾವು’ ಅಂತ ನನ್ನ ಮಾತುಗಳನ್ನ ಪ್ರೀತಿಯಿಂದ ಗೇಲಿ ಮಾಡಿದ್ದರು. ನನಗೆ ಖುಷಿನೇ ಆಯ್ತು ಅದರಿಂದ. ಎಷ್ಟೋ ದಿನಗಳಾಗಿ ಆ ಮಾತುಗಳು ಮರೆತೂ ಹೋಗಿತ್ತು. ಆದರೆ ಇತ್ತೀಚೆಗೆ ಮೈಲಾರಲಿಂಗನ ಗೊರವಪ್ಪನ ಒಂದು ಕಾರಣಿಕ ನುಡಿ ನನ್ನ ಕಣ್ಣಿಗೆ ಬಿತ್ತು – ‘ಭೂಮಿಗೆ ಮುತ್ತು, ಆಕಾಶಕ್ಕೆ ಕುತ್ತು, ಲೇ ಪರಾಕ್’ ಅಂತ. ನನ್ನ ತಲೆಯೊಳಗೆ ನಾನೂ ಕಾರಣಿಕ ನುಡಿಯುವವನು ಅನ್ನೋ ಮಾತು ಕೂತು ಬಿಟ್ಟಿತ್ತಲ್ಲ ಅದು ಎಚ್ಚರವಾಯಿತು. ಹಾಗಾಗಿ ನಾನೂ ಅರ್ಥ ಕಟ್ಟಿದೆ! ‘ಭೂಮಿಗೆ ಮುತ್ತು ಅಂದ್ರೆ, ಭೂಮಿಯಲ್ಲಿ ಪ್ರೀತಿ ಪ್ರಣಯ ಹೆಚ್ಚುತ್ತೆ. ಆಕಾಶಕ್ಕೆ ಕುತ್ತು ಅಂದ್ರೆ, ಇದು ಆಕಾಶಕ್ಕೆ ಒಳ್ಳೆಯ ಕಾಲ ಅಲ್ಲ, ಆಕಾಶಕ್ಕೆ ಕೇಡೂ ಆಗಬಹುದು’ – ಅನ್ನೋ ಅರ್ಥ ಕಟ್ಟಿದೆ! ರಹಮತ್ ತರೀಕೆರೆ ಅವರಿಗೆ ಫೋನ್ ಮಾಡಿ – ‘ನೋಡ್ರಪ್ಪ ನೀವು ನನ್ನನ್ನು ಕಾರಣಿಕ ನುಡಿಯುವವನು ಅಂತ ಹೇಳಿದ್ರಿ, ನಾನು ಈ ರೀತಿ ಅರ್ಥ ಕಟ್ಟಿದ್ದೇನೆ’ ಅಂದೆ. ಇವತ್ತು ಮಂಗಳ ಗ್ರಹಕ್ಕೆ ಟಿಕೆಟ್ ಬುಕ್ ಮಾಡಿಸುತ್ತಾ ಇದ್ದಾರಲ್ಲಾ, ಅದನ್ನು ನೋಡಿದಾಗ, ಯಾಕೋ ನಾನು ಅರ್ಥ ಕಟ್ಟಿರೋದು ಸರಿ ಅನ್ನಿಸ್ತಿದೆ. ಯಾಕೆಂದರೆ ಈ ಭೂಮಿ ಕೆಡಿಸಿದವರು, ಈಗ ಆಕಾಶಕ್ಕೆ ಲಗ್ಗೆ ಇಡ್ತಾ ಇದ್ದಾರೆ.

ಈಗ ನಾನೇ ಒಂದು ಕಾರಣಿಕ ನುಡಿಯುತ್ತಿದ್ದೇನೆ. ರಹಮತ್ ನನ್ನನ್ನು ಕಾರಣಿಕ ನುಡಿಯುವವನು ಎಂದು ನಂಬಿದ್ದಾರೆ, ಆ ನಂಬಿಕೆ ಉಳಿಸಿಕೊಳ್ಳೋಣ ಅಂತ. ಆ ಕಾರಣಿಕ ಏನಂದ್ರೆ, ‘ರಾಜಧರ್ಮ ಇಲ್ಲದವನು ಆಳ್ವಿಕೆ ನಡೆಸಿದರೆ ಮಾಧ್ಯಮಕ್ಕೆ ಕುತ್ತು, ಧರ್ಮ ಸಂಸ್ಕೃತಿಗೆ ಮಿತ್ತು’. ಅರ್ಥಾನ ನೀವು ಬೇಕಾದ ಥರ ಕಟ್ಟಿಕೊಳ್ಳಬಹುದು. ಆದರೆ ನನಗೆ ಅರ್ಥವಾಗದೇ ಇರೋದು ಏನಂದ್ರೆ, ಮಾಧ್ಯಮಗಳ ಪ್ರಜ್ಞಾವಂತ ಗೆಳೆಯರು, ಜನಜೀವನದ ಜಂಜಡ ವಿದ್ಯಮಾನಗಳ ಜೊತೆ ದಿನನಿತ್ಯ ಮುಖಾಮುಖಿಯಾಗುವವರಿಗೇನೆ, ರಾಜಧರ್ಮದ ಅರಿವಿಲ್ಲದವನು ಅಧಿಕಾರಕ್ಕೆ ಬಂದ್ರೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೇನೆ ಮುಖ್ಯವಾಗಿ ಮಾಧ್ಯಮ ಕ್ಷೇತ್ರಕ್ಕೇನೇ ಮೊದಲು ಅಪಾಯ ಎಂಬ ಅರಿವಿಲ್ಲದವರಂತೆ ಇದ್ದಾರಲ್ಲಾ! ಎಚ್ಚರ ಇರುವವರಲ್ಲೆ ಒಂದೆಳೆನೂ ಆತಂಕ ಇಲ್ಲವಲ್ಲಾ! ಇದು ನನಗೆ ಅರ್ಥ ಆಗ್ತಾ ಇಲ್ಲ.
ಈಗ ಮತ್ತೆ ರಾಜಧರ್ಮಕ್ಕೆ ಬರುತ್ತೇನೆ. ರಾಜಧರ್ಮ ಅನ್ನುವುದನ್ನು ನಾನು ಅರ್ಥ ಮಾಡ್ಕೊಂಡಿರೋದು ಹೀಗೆ: ಶೇಕ್ಸ್ ಪಿಯರ್‍ನ ಒಂದು ನಾಟಕ, ನಾನೇನು ಆ ನಾಟಕ ಓದಿಲ್ಲ. ಕಥಾ ಸಾರಾಂಶ ಗೊತ್ತು ಅಷ್ಟೇನೆ. ಪ್ರಿನ್ಸ್ ಹಾಲ್, ರಾಜ ಅಂದರೆ ಹೆನ್ರಿಯಾಗುವ ಮೊದಲು ಅವನಿಗೊಬ್ಬ ಫಾಲ್ಸ್ ಸ್ಟಾಫ್ ಅಂತ ಪೋಲಿ ಗೆಳೆಯ ಇರ್ತಾನೆ. ಮಹಾ ಪೋಲಿ ಫ್ರೆಂಡ್. ಬರೀ ಮಜಾ ಮಾಡೋದೇ ಕೆಲಸ, ಮಾಡಬಾರದ್ದನ್ನ ಮಾಡೋದೇ ಕೆಲಸ. ಈತನೊಡನೆ ಹಾಲ್ ರಾಜಕುಮಾರನ ಒಡನಾಟ. ಅದೇ ರಾಜಕುಮಾರ ಹಾಲ್ ಯಾವಾಗ ಹೆನ್ರಿ ಅಂದರೆ ರಾಜ ಆಗುತ್ತಾನೋ ಆವಾಗ ಆ ಪೋಲಿ ಫ್ರೆಂಡ್‍ಗೆ ಎಂಟ್ರಿ ಕೊಡಲ್ಲ, ಭೇಟಿ ಮಾಡಲ್ಲ, ಈ ಎಚ್ಚರ ಬಂತಲ್ಲಾ ಇದು ರಾಜಧರ್ಮದ ಎಚ್ಚರ.

ಅಂದರೆ, ಯಾವುದೇ ವ್ಯಕ್ತಿ ಅಧಿಕಾರಕ್ಕೆ ಬಂದಾಗ, ತನಗಿಂತ ಆ ಸ್ಥಾನ ದೊಡ್ಡದು ಎಂಬ ವಿನಯ ಇರಬೇಕು. ತನ್ನ ದೇಶದ ಸಂವಿಧಾನ ದೊಡ್ಡದು ಅಂತ ನಡ್ಕೋಳೋನು ಮಾತ್ರ ರಾಜಧರ್ಮ ಬಲ್ಲವನು. ಗ್ಯಾನಿ ಜೇಲ್ ಸಿಂಗ್ ಅವರು ರಾಷ್ಟ್ರಪತಿಯಾದಾಗ, ಅವರು ರಾಷ್ಟ್ರಪತಿ ಸ್ಥಾನಕ್ಕೆ ಅವರು ನಡೆದುಕೊಳ್ಳುತ್ತಿದ್ದ ರೀತಿ ನೋಡ್ದಾಗ, ಆ ವಿನಯ ನೋಡ್ದಾಗ ಮತ್ತು ಆ ಸ್ಥಾನಕ್ಕೆ ಕುಳಿತಾಗ ಅವರಿಗೆ ಒಂದು ಘನತೆ ಬಂತಲ್ಲಾ ಅದನ್ನು ನೋಡ್ದಾಗ, ಅದು ಅರ್ಥ ಆಯ್ತು. ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆದ ಹತ್ಯಾಕಾಂಡದಲ್ಲಿ ಸ್ವಯಂ ಮುಖ್ಯಮಂತ್ರಿ ಮೋದಿಯವರ ಕಣ್ಸನ್ನೆಗಳು ಕಾರಣ ಎಂಬ ಗುಮಾನಿ ಇದ್ದಾಗ ‘ರಾಜಧರ್ಮ ಪಾಲಿಸಿ’ ಎಂದು ಮೋದಿಯವರಿಗೆ ಹೇಳಿದ ವಾಜಪೇಯಿ ಅವರೂ ಕೂಡ ಇದನ್ನೆ ಅಂದುಕೊಂಡಿದ್ದರೇನೋ. ಅದ್ವಾನಿಯವರಿಗೂ ಈ ಅಳುಕು ಇರಬಹುದು. ಇದೇ ಅಂತ ಅನ್ನಿಸ್ತಾ ಇದೆ. ಅದ್ವಾನಿಯವರು ಮೋದಿ ಹೆಸರನ್ನ ಪ್ರಧಾನಿ ಸ್ಥಾನಕ್ಕೆ ಒಪ್ಪದೇ ಇದ್ದಾಗ, ಕಟುವಾದ ಸರ್ವಾಧಿಕಾರಿ ವ್ಯಕ್ತಿತ್ವದ ಒಬ್ಬನಿಗೆ ಈ ದೇಶವನ್ನು ಕೊಡಬಾರದು, ಪ್ರಜಾಪ್ರಭುತ್ವವನ್ನು ಕಾಪಾಡಬೇಕು ಎನ್ನುವ ಆಸೆ ಇತ್ತೇನೋ. ಈ ಹಿಂದೆ ಅದ್ವಾನಿ ಅವರ ಹೆಸರು ಕೇಳಿದರೆ ಭೀತಿ ಆಗ್ತಿತ್ತು. ಆದ್ರೆ ಅಂತರಂಗದ ಬದಲಾವಣೆ ಇರುವವನು ಇದ್ದಾನಲ್ಲ, ಆತ ಒಂದಲ್ಲ ಒಂದು ದಿನ ಬದಲಾಗಬಹುದು. ರೂಪಾಂತರ ಆಗಬಹುದು. ಆದರೆ, ರೂಪಾಂತರವಾಗದ ಒಂದು ಜಡ ವ್ಯಕ್ತಿತ್ವವನ್ನು ಒಂದು ಕೋಮುವಾದಿ ಪಕ್ಷ ಮುಂದಿಟ್ಟು ಬಿಡ್ತೇನೊ ಅಂತ ಈಗ ಅನ್ನಿಸತೊಡಗಿದೆ.

ಈಗ ಎಲ್ಲಾ ಕಡೆ ಮೋದಿ ಬಣ್ಣ ಬಳಿಯಲಾಗುತ್ತಿದೆ. ವಿದ್ಯಾವಂತ ಯುವಕರು ಈ ಬಣ್ಣದ ಭ್ರಮೆಗೆ ಒಳಗಾಗುತ್ತಿದ್ದಾರೆ ಎನಿಸುತ್ತದೆ. ಒಮ್ಮೆ ಗುಲ್ಬರ್ಗಾಕ್ಕೆ ಹೋಗುತ್ತಿದ್ದಾಗ, ರೈಲಲ್ಲಿ ಒಬ್ಬ ರಜಪೂತ್ ಯುವಕ ಪರಿಚಯವಾದ. ತುಂಬಾ ಮಾತುಗಾರ. ಮಾತಿನ ನಡುವೆ ‘ಸಮೀಕ್ಷೆಯಲ್ಲಿ ಮೋದಿ ಮುಂದಿದ್ದಾರೆ’ ಅಂದ. ‘ಯಾಕೆ ಏನು’ ಅಂತ ಕೇಳ್ದೆ. ‘ಅದೇ ಅಭಿವೃದ್ಧಿ’ ಅಂತಂದ. ‘ಹೇಗೆ?’ ಅಂತ ಕೇಳ್ದೆ. ‘ನಾವು ಈ ಹಿಂದೆ ಬಂಡವಾಳಶಾಹಿಗಳಿಗೆ ಬನ್ನಿ ಹಣ ಹೂಡಿ, ನೀವೇ ಭೂಮಿ ಕೊಂಡುಕೊಳ್ಳಿ ಅಂತ ಹೇಳ್ತಿದ್ವಿ. ಆದ್ರೆ ಈಗ ಮೋದಿ ಹಂಗಲ್ಲ. ಎಷ್ಟು ಬೇಕಾದ್ರು ಭೂಮಿ ಕೊಡ್ತೀನಿ ಬನ್ನಿ, ಮಾಡಿ ಅಂತ್ಹೇಳ್ತಾರೆ’ ಅಂದ. ನಾನು ‘ಅಲ್ಲಪ್ಪ, ಈ ಭೂಮಿ ಕಳಕಂಡು ಏನ್ ಮಾಡ್ಬೇಕಪ್ಪಾ?’ ಅಂತ ಕೇಳ್ದೆ. ಅದಕ್ಕೆ ಆತ ‘ಈಗ ವ್ಯವಸಾಯ ಮಾಡ್ದೇನೆ ಖಾಲಿ ಬಿಟ್ಟಿರ್ತಾರಲ್ಲ ಅದಕ್ಕೇನು ಮಾಡ್ಬೇಕು’ ಅಂತ ಪ್ರಶ್ನೆ ಹಾಕಿದ. ‘ಅದರ ಬದಲು ಇದೇ ಒಳ್ಳೆದು. ದುಡ್ಡೂ ಸಿಗುತ್ತೆ, ಅದರಲ್ಲಿ ಏನಾದ್ರೂ ಮಾಡ್ಕಂಡು ಜೀವನ ಸಾಗಿಸಬಹುದು. ಜೊತೆಗೆ ಕಂಪನಿಗಳು ಬಂದರೆ ಒಂದಷ್ಟು ಜನಕ್ಕೆ ಕೆಲಸನೂ ಸಿಗುತ್ತೆ’ ಅಂದ. ಮತ್ತೆ ‘ಕೆ.ಐ.ಡಿ.ಬಿ. ತುಂಬಾ ಧಗಾ ಸಂಸ್ಥೆ ಅಂತನೂ ಹೇಳ್ದಾ. ನೈಸ್ ರಸ್ತೆ ಆಗಿದ್ರೆ, ಬೆಂಗಳೂರಿಂದ ಎರಡು ಗಂಟೆಲೀ ಮೈಸೂರಿಗೆ ಹೋಗಿ ಬಂದುಬಿಡಬಹುದಿತ್ತು’ ಅಂತ ಹೇಳ್ದಾ. ಒಟ್ಟಿನಲ್ಲಿ ಅವನನ್ನು ನಾನು ಗ್ರಹಿಸಿದಂತೆ, ವೇಗ ಹೆಚ್ಚಾದ್ರೆ ಅದೇ ಅಭಿವೃದ್ಧಿ ಅನ್ನೋ ಥರಾ ಇತ್ತು. ಇದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕೋ ಹೇಗೋ? ಸಾವಿಗೂ ಕೂಡ ವೇಗ ಹೆಚ್ಚಾಗುತ್ತೆ ಅಂತ ಅನ್ನಿಸತೊಡಗಿತು.

ಆಮೇಲೆ ನಾನೇ ಒಂದು ಪ್ರಶ್ನೆ ಕೇಳ್ದೆ. ‘ಗುಜರಾತ್‍ನಲ್ಲಿ ತಿಂಗಳಿಗೆ 361 ರೂಪಾಯಿ ಇದ್ದರೆ, ಆತ ಬಡತನ ರೇಖೆ ಮೇಲೆ ಬಂದು ಬಿಡ್ತಾನಂತಲ್ಲಪ್ಪಾ! ಇದನ್ನ ಹೇಗೆ ಅರ್ಥ ಮಾಡ್ಕೊಳನಾ?’ ಅಂದೆ. ‘ಆ ರಾಜ್ಯದಲ್ಲಿ ಅಷ್ಟಿದ್ದರೆ ಜೀವನ ಸಾಗಿಸಬಹುದೇನೋ’ ಅಂತ ಸಲೀಸಾಗಿ ಹೇಳಿದ. ನನಗೆ ಮಾತು ನಿಂತೋಯ್ತು. ದುಃಖ ಆಯ್ತು. ಯಾವುದು ಹೆಚ್ಚು ಮಾನವೀಯ? ದಿನಕ್ಕೆ 12 ರೂಪಾಯಿ ಚಿಲ್ರೆ ಕೊಟ್ಟು ‘ನೀನು ಬಡವನಲ್ಲ ಬದುಕಪ್ಪಾ ಅನ್ನೋದೊ ಅಥವಾ ಅವನನ್ನ ಕೊಂದುಬಿಡೋದೊ? ಯಾವುದು ಹೆಚ್ಚು ಮಾನವೀಯ?’ ಈ ಯೋಚನೆಯಲ್ಲಿ ನಾನು ಸಿಕ್ಕಿಹಾಕಿಕೊಂಡೆ.

ಕೊನೆಗೆ ಸುಸ್ತಾಗಿ ಪ್ರಶ್ನೆಗಳನ್ನ ನಾನೇ ಅವನ ಮುಂದೆ ಇಡತೊಡಗಿದೆ. ‘ಅಲ್ಲಪ್ಪಾ, ದಕ್ಷಿಣ ಅಮೆರಿಕಾ, ಐರೋಪ್ಯ ದೇಶಗಳಲ್ಲಿ, ಅಭಿವೃದ್ಧಿ ಮಾಡ್ತೀವಿ ಅಂತ ಹೋಗಿದ್ದ ಜೆ.ಪಿ.ಮೋರ್ಗನ್, ಗೋಲ್ಡ್ ಮನ್ ಸ್ಯಾಕ್ಸ್, ನೋಕಿಯಾ, ಪೋಸ್ಕೋ ಮುಂತಾದ ಕಂಪನಿಗಳು ಆ ದೇಶಗಳನ್ನು ಮುಳುಗಿಸಿ, ಈಗ ಇಲ್ಲಿ ಭಾರತವನ್ನು ಅಭಿವೃದ್ಧಿ ಮಾಡ್ತೀವಿ ಅಂತ ಬರ್ತಾ ಇವೆ. ಕೆಲವು ಬಂದೂ ಇವೆ. ಇಂಥವರನ್ನ ನೆಚ್ಚಿಕೊಂಡು ನಾವು ದಂಧೆಗೆ ಅವಕಾಶ ಕೊಟ್ಟರೆ ಅವರು ದಿವಾಳಿ ಮಾಡಿ, ಪರಾರಿ ಆಗಲ್ಲ ಅಂತ ಗ್ಯಾರಂಟಿ ಇದೆಯಾ?’ ಅಂತ ಕೇಳ್ದೆ. ಆತನಿಗೆ ಗಾಬರಿ ಆಯ್ತು. ಆಮೇಲೆ ಇನ್ನೂ ಒಂದು ಪ್ರಶ್ನೆ ಕೇಳ್ದೆ – ‘ಈ ಅಭಿವೃದ್ಧಿ ಅಂತಿದ್ದೀಯಲ್ಲಪ್ಪಾ, ಆ ಅಭಿವೃದ್ಧಿನ ನಮಗಿಂತಲೂ ಮೊದಲು ಆರಂಭಿಸಿದ ಗ್ರೀಸ್ ದೇಶ, ಆ ಅಭಿವೃದ್ಧಿಯಲ್ಲಿ ಸಿಕ್ಕಿಹಾಕಿಕೊಂಡು ಈಗ ಪಾಪರ್ ಆಗಿ ತಳಕಚ್ಚಿ ಹೋಗಿದೆ. ಗ್ರೀಸ್ ದೇಶವನ್ನು ಬಿಲತೋಡಿ ತಿಂದುಂಡ ಮೇಲೆ ಅಲ್ಲಿದ್ದ ಕಾರ್ಪೋರೇಟ್ ಕಂಪನಿಗಳು ಮುಳುಗುತ್ತಿರುವ ಹಡಗನ್ನು ತ್ಯಜಿಸಿ ಮತ್ತೊಂದು ಹಡಗಿಗೆ ಧಾವಿಸುವ ಹೆಗ್ಗಣಗಳಂತೆ ಅಲ್ಲಿಂದ ಕಾಲ್ತೆಗೆದು ಹೊಸ ಹೊಸ ದೇಶಗಳತ್ತ ತಿಂದುಂಡು ಮುಗಿಸಲು ಹೊರಟಿವೆ. ಈಗ ಗ್ರೀಸ್ ದೇಶದ ಸರ್ಕಾರ, ಸರ್ಕಾರಾನ ನಿರ್ವಹಣೆ ಮಾಡುವುದಕ್ಕೂ ಆಗದೆ, ಸರ್ಕಾರಿ ಆಸ್ತಿಪಾಸ್ತಿಗಳನ್ನ ಮಾರಾಟ ಮಾಡಿ ಹಾಗೂ ಹೀಗೂ ಸರ್ಕಾರಾನ ಸರಿದೂಗಿಸೋಕೆ ನೋಡ್ತಾ ಇದೆ. ಮಾರಾಟಕ್ಕಿರುವ ಗ್ರೀಸ್ ದೇಶದ ಆಸ್ತಿ ಪಾಸ್ತಿಗಳನ್ನು ಐರೋಪ್ಯ ದೇಶಗಳಿಗೆ ಕೊಂಡುಕೊಳ್ಳೋಕೆ ಶಕ್ತಿ ಇಲ್ಲವಂತೆ. ಈಗ ಗ್ರೀಸ್ ದೇಶ ಕೊಂಡುಕೊಳ್ಳಿ ಅಂತ ಚೈನಾಕ್ಕೆ ದುಂಬಾಲು ಬೀಳ್ತಾ ಇದೆ. ಈ ಪರಿಸ್ಥಿತಿ ಭಾರತಕ್ಕೆ ಬರಲ್ಲ ಅಂತೀರಾ? ಗ್ಯಾರಂಟಿ ಇದೆಯಾ ನಿಮಗೆ?’ ಅಂತ ಕೇಳ್ದೆ. ಆತನಿಗೆ ಗಾಬರಿ ಆದಂತೆ ಕಂಡಿತು.

ಇತ್ತೀಚೆಗೆ 2008ರಲ್ಲಿ, ಉತ್ತರ ಅಮೆರಿಕಾದಲ್ಲಿ ಬ್ಯಾಂಕ್‍ಗಳ ಹಿಂಜರಿತದಿಂದ ಆರ್ಥಿಕ ಕುಸಿತ ಆಯ್ತು. ಆ ಸಮಯದಲ್ಲಿ ಭಾರತದಲ್ಲಿ ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಸರ್ಕಾರ ಇತ್ತು. ಆಗ ಕಮ್ಯುನಿಸ್ಟರು ಕಾಂಗ್ರೆಸ್ ಸರ್ಕಾರದ ಜುಟ್ಟು ಹಿಡಿದುಕೊಂಡಿದ್ದರು. ಇದಿಲ್ಲದಿದ್ದರೆ, ಕಾಂಗ್ರೆಸ್ ಸರ್ಕಾರವೂ ಖಾಸಗೀಕರಣ, ಸಾರ್ವಜನಿಕ ಸಂಪತ್ತಿನ ಮಾರಾಟ, ಖಾಸಗಿ ಸಹಭಾಗಿತ್ವ, ಬ್ಯಾಂಕ್ ಶೇರು ಮಾರಾಟ, ವಿದೇಶಿ ವಿನಿಮಯದಲ್ಲಿ ಕರೆಂಟ್ ಅಕೌಂಟ್ ಮುಕ್ತಗೊಳಿಸುವುದು ಇತ್ಯಾದಿಗಳನ್ನು ಧಾರಾಳವಾಗಿ ಮಾಡುತ್ತಿತ್ತೇನೊ. ಆ ರೀತಿಯಾಗಿದ್ದರೆ, ಭಾರತದ ಆರ್ಥಿಕತೆ ಕುಸಿಯದೆ ಅದಕ್ಕೆ ಬೇರೆ ದಾರಿ ಇರುತ್ತಿರಲಿಲ್ಲವೇನೋ. ಬೇರೆ ದೇಶಗಳ ತಲೆ ಒಡೆದು ಬದುಕುವ ಅಮೇರಿಕಾ ಹೇಗೋ ಬಚಾವ್ ಆಗಬಹುದು, ಭಾರತಕ್ಕೆ ಇದು ಸಾಧ್ಯವಾ ಅಂತ ಕೇಳ್ದೆ. ಆ ಮಾತುಗಾರ ಮೌನವಾದರು.
ಆಮೇಲೆ ನಾನು, ‘ಈ ಅಭಿವೃದ್ಧಿಯ ಜನಕ ಯಾರಪ್ಪ? ಪಿ.ವಿ.ನರಸಿಂಹ ರಾವ್. ಈ ಪಿತೃವಿನ ಪುತ್ರರು ಮನಮೋಹನಸಿಂಗ್ – ಚಿದಂಬರಂ ದ್ವಯರು. ಈ ಪರಂಪರೆಯ ಶಿಶುವೇ ಮೋದಿ. ಆ ಪಿತೃಗಳು ಅಭಿವೃದ್ಧಿ ಅಂತ ಮಾಡುವಾಗ ಅದು ಇದು ಸ್ವಲ್ಪ ಹಿಂದೂಮುಂದು ನೋಡ್ಕಂಡು, ಸ್ವಲ್ಪ ಹಿಂಜರಿಕೆಯಿಂದ ಮಾಡೋರು. ಅವರಿಗೆ ಅಯ್ಯೋ ಏನಾಗುತ್ತಪ್ಪಾ, ಎತ್ತಾಗುತ್ತಪ್ಪಾ ಅಂತ ಅಳುಕಾದ್ರೂ ಇರ್ತಿತ್ತು. ಸಾರ್ವಜನಿಕ ಅಭಿಪ್ರಾಯಕ್ಕೆ ಹೆದರುತ್ತಿದ್ದರು. ಜೊತೆಗೆ ಕಮ್ಯುನಿಷ್ಟರ ಟಾಂಗ್ ಕೂಡ ಎದುರಾಗುತ್ತಿತ್ತು. ಆದರೆ ಈ ಶಿಶು ಮೋದಿ ಇದಾರಲ್ಲಾ ಇವರು ರೌಡಿ ಥರ ‘ಏಕ್ ಮಾರ್ ದೋ ತುಕುಡಾ’ ಥರ, ಬುಲ್ಡೋಜರ್ ಥರ ಹೊರಟಿದ್ದಾರೆ. ಇದು ನಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋಗಬಹುದು?’ ಎಂದು ಪ್ರಶ್ನಿಸಿದೆ.

ಆಮೇಲೆ – “ಇಲ್ಲಿ ಇನ್ನೊಂದು ಘೋರ ಅಪಾಯ ಏನೆಂದರೆ, ಮೋದಿಯವರ ನೆಲಗಟ್ಟು ಮತಾಂಧತೆ. ಮತಾಂಧತೆ ಇದ್ದಕಡೆ ಧರ್ಮ, ನ್ಯಾಯ, ಸಹನೆ, ಪ್ರೀತಿ, ಸಹಬಾಳ್ವೆ, ಸಾಮಾಜಿಕ ನ್ಯಾಯ ಹತ್ತಿರ ಸುಳಿಯೋದಿಲ್ಲ. ಯಾಕೆಂದರೆ ಎಲ್ಲಾ ಮೂಲಭೂತವಾದಿಗಳೂ ಒಂದೇನೆ, ಭೂತಕಾಲಕ್ಕೆ ಸಿಕ್ಕಾಕಂಡು ಒದ್ದಾಡ್ತಾ ಇರೋರು” ಎಂದು ಹೇಳಿದೆ. ಆ ನಂತರ ಅವರಿಗೆ ‘ಎದೆಗೆ ಬಿದ್ದ ಅಕ್ಷರ’ದಿಂದ ನಾಲ್ಕಾರು ಸಾಲು ಓದಿದೆ: “ಯಾರದೇ ಮತಾಂಧತೆಯು ತಿಂದು ಹಾಕುವುದು ಮಾನವತೆಯನ್ನು ಮಾತ್ರ. ಹಿಡಿಯಷ್ಟು ಇರುವ ಮತಾಂಧತೆಗೆ ಸುಮ್ಮನೆ ವೀಕ್ಷಕರಾಗಿರುವ ಬಹುಸಂಖ್ಯಾತ ಜನ ಸಮುದಾಯ ಬೆಚ್ಚಿ ಅಸಹಕಾರ ತೋರಿದರೆ ಮಾತ್ರ ಈಗ ಉಳಿಗಾಲವಿದೆ. ಇಲ್ಲದಿದ್ದರೆ ಯಾವುದೇ, ಯಾರದೇ ಮತಾಂಧತೆಯು ಮೊದಲು ಮಾಡುವುದು ತನ್ನವರ, ತನಗೆ ಸೇರಿದವರ ಕಣ್ಣುಗಳನ್ನು ಕಿತ್ತು ಅಂಧರನ್ನಾಗಿಸುವುದು. ಆಮೇಲೆ ಮಿದುಳು ಕಿತ್ತು ವಿವೇಕಶೂನ್ಯರನ್ನಾಗಿಸುವುದು. ನಂತರ ಹೃದಯ ಕಿತ್ತು ಕ್ರೂರಿಗಳನ್ನಾಗಿಸುವುದು. ಆಮೇಲೆ ನರಬಲಿ ಕೇಳುವುದು. ಇಂದು ಇದು ಹೆಚ್ಚುತ್ತಿದೆ. ಬಹಳ ತುರ್ತಾಗಿ ನಮ್ಮ ಮಕ್ಕಳ ಕಣ್ಣು ಹೃದಯ ಮಿದುಳುಗಳನ್ನು ಮತಾಂಧತೆಯ ದವಡೆಯಿಂದ ರಕ್ಷಿಸಬೇಕಿದೆ.”