ಒಳಮೀಸಲಾತಿ ಕುರಿತ ಡಿಸೆಂಬರ್ 6ರ ಸಮಾವೇಶದ ನಿರ್ಣಯಕ್ಕೆ ನನ್ನ ಸಹಮತವಿದೆ- ದೇವನೂರ ಮಹಾದೇವ

[ಒಳಮೀಸಲಾತಿ ಹೊರಾಟದ ಬೃಹತ್ ಸಮಾವೇಶಕ್ಕಾಗಿ 11.12.2022 ರಂದು ದೇವನೂರ ಮಹಾದೇವ ಅವರು ಬರೆದ ಪತ್ರ]

ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಇನ್ನೂ ಬಹಿರಂಗಗೊಂಡಿಲ್ಲ. ಅದರೊಳಗಿಂದ ಸೋರಿಕೆಯಾಗಿದೆ ಎನ್ನಲಾದ ಒಂದಿಷ್ಟು ಮಾಹಿತಿಗಳನ್ನು ಮಾಧ್ಯಮಗಳು ಪ್ರಕಟಿಸಿವೆ. ಸೋರಿಕೆಯಾದ ಆ ಮಾಹಿತಿಗಳಲ್ಲಿ…
1) ದಲಿತರ ಮೀಸಲಾತಿಗೆ ಕ್ರೀಮೀ ಲೇಯರ್ ತರಬೇಕು.
2) ಒಂದು ತಲೆಮಾರು ಮೀಸಲಾತಿ ಪಡೆದ ಮೇಲೆ ಮೀಸಲಾತಿ ಸ್ಥಗಿತಗೊಳಿಸಬೇಕು.
3) ಜನಸಂಖ್ಯಾ ಆಧಾರದ ಮೇಲೆ ಮೀಸಲಾತಿ ಪ್ರಮಾಣ ಹೆಚ್ಚಿಸಬಾರದು…
ಇತ್ಯಾದಿಗಳು ಇದೆ ಎನ್ನಲಾಗಿದೆ. ಇವು ಸದಾಶಿವ ಆಯೋಗದಲ್ಲಿ ಇರುವುದು ನಿಜವಾದರೆ, ಇದು ದಲಿತ ಹಿತಾಸಕ್ತಿಗಳಿಗೆ ಒಳೇಟು ಅಂತಲೇ ನನಗನ್ನಿಸುತ್ತದೆ.
ಈಗ ಮೊದಲು, ಸದಾಶಿವ ಆಯೋಗದ ವರದಿ ತಕ್ಷಣವೇ ಬಹಿರಂಗ ಆಗಬೇಕು. ಚರ್ಚೆಯಾಗಬೇಕು. ಇದು ವೇಗವಾಗಿ ಆಗಬೇಕು. ಇಲ್ಲದಿದ್ದರೆ ಇದೊಂದು ವಂಚನೆ ಅಂತಲೇ ಅರ್ಥ. ಈ ರಾಜ್ಯ ಸರ್ಕಾರ ಇಂದು ನಾಳೆ ಅಂತ ಮುಂದಿನ ಚುನಾವಣೆವರೆಗೆ ಇದನ್ನು ತಳ್ಳಿಬಿಟ್ಟರೆ, ನೆನಪಿರಲಿ, ಚುನಾವಣೆ ಮುಗಿದ ಮೇಲೆ ಈ ಬಗ್ಗೆ ಹೇಳುವವರೂ ಇಲ್ಲ. ಕೇಳುವವರೂ ಇಲ್ಲ ಅಂತಾಗಿಬಿಡಬಹುದು.
ನಾವು ನೆನಪಿಟ್ಟುಕೊಳ್ಳಬೇಕು. ನಾವು ಪಡೆದು ಬಂದವರಲ್ಲ. ಕೆಲವೇ ದಿನಗಳ ಹಿಂದಷ್ಟೇ ಭಾರತದ ಒಕ್ಕೂಟ ಸರ್ಕಾರವು, ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲೂಎಸ್) ಎಂದು ಸಮಾಜದಲ್ಲಿ ಸ್ಥಾನಮಾನ ಇರುವ ಹಾಗೂ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ತುಂಬಾ ಹೆಚ್ಚು ಅನ್ನಿಸುವಷ್ಟು ಪ್ರಾತಿನಿಧ್ಯ ಇರುವ ಕೇವಲ ಶೇಕಡ 5% ಜನಸಂಖ್ಯೆಗೆ  10% ಮೀಸಲಾತಿ ನೀಡಿದೆ. ಅದೂ ಒಂದೆರಡು ದಿನಗಳಲ್ಲೇ ಸಂವಿಧಾನವನ್ನೇ ತಿದ್ದುಪಡಿ ಮಾಡಿ! ಮತ್ತು ಆರ್ಥಿಕ ದುರ್ಬಲ ಅನ್ನೋದಕ್ಕೆ ವರ್ಷಕ್ಕೆ 8 ಲಕ್ಷದ ಆದಾಯದ ಮಿತಿ ಬೇರೆ. ಇದು ಇಬ್ಬಂದಿ ನ್ಯಾಯ. ಸಂವಿಧಾನದ ಹೆಸರಲ್ಲೇ ಸಂವಿಧಾನದ ಆಶಯಗಳಿಗೆ ಎಳ್ಳು-ನೀರು ಬಿಡುವ ಕ್ರಿಯೆ. ಭಾರತ ಸರ್ಕಾರವೇ ಇದಕ್ಕೆ ಪುರೋಹಿತರಾದರೆ? ಯಾರಿಗೆ ಹೇಳಬೇಕು?
ಈಗ ಗುಜರಾತ್ ನಲ್ಲಿ ಪಾಟೀದಾರ್ ಸಮುದಾಯವು ಕೇಂದ್ರ ಸರ್ಕಾರಕ್ಕೆ ಧಮಕಿ ಹಾಕಿ ಇಡಬ್ಲೂಎಸ್ ನ 10% ಮೀಸಲಾತಿಯಲ್ಲೇ ಪಾಲು ಪಡೆದುಕೊಂಡಿದೆ ಎನ್ನಲಾಗುತ್ತಿದೆ. ಈ ಧಮಕಿ ಹಾಕುವ ಶಕ್ತಿಯೂ ನಮಗಿಲ್ಲ. ಇದನ್ನು ಮಾಡದಿದ್ದರೆ ನಿಮಗೆ ಮತ ನೀಡುವುದಿಲ್ಲ ಎಂದು ಒಕ್ಕೊರಲಿನಿಂದ ಹೇಳಿ ಅದನ್ನು ಕ್ರಿಯೆಗಿಳಿಸುವ ಇಚ್ಛಾಶಕ್ತಿಯೂ ನಮಗಿಲ್ಲ. ಒಗ್ಗಟ್ಟು ಇಲ್ಲ. ನಮ್ಮ ಮಾತು ಕೇಳುವವರು ಯಾರು?
ಈಗ ನಮ್ಮಮುಂದೆ ಯುಪಿಎ ಸರ್ಕಾರ 2006ರಲ್ಲಿ ಎಸ್ಸಿ ಕೆಟಗರಿ ಒಳಗಿನ ಅಸಮತೋಲನಕ್ಕೆ ಪರಿಹಾರ ಕಾಣಲು ನೇಮಿಸಿದ್ದ ನ್ಯಾಯಮೂರ್ತಿ ಉಷಾ ಮೆಹ್ತಾ ಅವರ ಸಂವಿಧಾನ ತಿದ್ದುಪಡಿ ಮಾಡಬೇಕೆನ್ನುವ ವರದಿ ಏನಾಯ್ತು ಗೊತ್ತಿಲ್ಲ. ಅದನ್ನು ಈಗ ಮುನ್ನೆಲೆಗೆ ತರಬೇಕಾಗಿದೆ. ಹಾಗೇ ರಾಜ್ಯ ಸರ್ಕಾರಗಳಿಗೆ ಇಚ್ಚಾಶಕ್ತಿ ಇದ್ದರೆ, ಪಂಜಾಬ್ ಸರ್ಕಾರ (ಮಜಬಿ ಸಿಖ್ ಹಾಗೂ ವಾಲ್ಮೀಕಿ ಸಮುದಾಯಗಳಿಗೆ) ಮತ್ತು ತಮಿಳುನಾಡು ಸರ್ಕಾರ (ಅರುಂಧತಿಯಾ‌ರ್ ಸಮುದಾಯಕ್ಕೆ) ಮಾಡಿದಂತೆ ಮಾಡಲು- ಕರ್ನಾಟಕ ರಾಜ್ಯ ಸರ್ಕಾರಕ್ಕೆ ಮನಸ್ಸಿದ್ದರೆ ಮಾರ್ಗ ಇದ್ದೇ ಇರುತ್ತದೆ. ಈ ದಿಕ್ಕಲ್ಲೂ ನೋಡಬೇಕು.
ನಾನು ಇದುವರೆಗೂ ಬ್ಯಾಕ್ ಲಾಗ್ ಮೀಸಲಾತಿ/ಆದ್ಯತೆ ಮೀಸಲಾತಿ/ಸಮತೋಲನ ಮೀಸಲಾತಿ ಎನ್ನುತ್ತಿದ್ದೆ. ಇದು ಪಂಜಾಬ್ ಸರ್ಕಾರ ಅಳವಡಿಸಿಕೊಂಡ ನೀತಿಗೆ ಸಮೀಪ, ಈಗ ಡಿಸೆಂಬರ್ 6ರಂದು ದಲಿತ ಸಂಘರ್ಷ ಸಮಿತಿಗಳ ಸಮಾವೇಶದಲ್ಲಿ ತೆಗೆದುಕೊಂಡ ಒಳಮೀಸಲಾತಿ ನಿರ್ಣಯಕ್ಕೆ ನನ್ನದೂ ಸಹಮತವಿದೆ.
ಇಂದು ಎಲ್ಲರೂ ಎಚ್ಚರಿಕೆಯಿಂದ, ಸರ್ಕಾರದ- ನುಡಿಗಳನ್ನಲ್ಲ, ನಡೆಗಳನ್ನು ಗಮನಿಸುತ್ತಿರಬೇಕಾಗಿದೆ. ಮುಂದಿನ ಚುನಾವಣೆಗೆ ಮೊದಲು ಏನಾದರೂ ಆದರೆ ಮಾತ್ರ ಆದಂತೆ. ನೆನಪಿಟ್ಟುಕೊಳ್ಳೋಣ.