ಒಡಲಾಳ ಕುರಿತು – ಡಾ. ಕೆ.ವಿ. ನಾರಾಯಣ.

[‘ಒಡಲಾಳ’ ಕುರಿತು ಡಾ. ಕೆ.ವಿ. ನಾರಾಯಣ ಹೀಗೆ ಹೇಳಿದ್ದಾರೆ….]

odal

 

ಖಂಡವಿದೆಕೋ ಮಾಂಸವಿದೆಕೋ ಎನ್ನುತ್ತ ತಮ್ಮ ಕಥೆಗಳನ್ನು ಕನ್ನಡಿಗರಿಗೆ ಕೊಟ್ಟವರು ದೇವನೂರ ಮಹಾದೇವ. ಅಲ್ಲಿಂದ ಕೆಲಕಾಲ ಕಳೆದ ಮೇಲೆ ‘ಒಡಲಾಳ’ ಎಂಬೊಂದು ಕಥೆ ಬರೆದರು. ಓದಿದವರಿಗೆ ಗುಂಗು ಹಿಡಿಸುವ ಕತೆ. ಸಾಕವ್ವ ಅವಳ ಮಕ್ಕಳು ಮೊಮ್ಮಕ್ಕಳು ಕನ್ನಡ ಪ್ರಜ್ಞೆಯೊಳಗೆ ಬಂದು ಕುಳಿತರು. ಸಾಕವ್ವ ಹೇಳುವ ಯಮದವರ ಕತೆಗಾಗಿ ಜಾನಪದ ಪಂಡಿತರು, ಪುಟಗೌರಿ ನವಿಲಿನ ಚಿತ್ರಕ್ಕಾಗಿ ಕಲೆಗಾರರು, ದುಪ್ಟಿಕಮೀಷನರಿಗಾಗಿ ಸಾಹಿತ್ಯ ವಿಮರ್ಶಕರು, ಕತ್ತಲ ಲೋಕದಲ್ಲಿ ಫಳಾರನೆ ಗಡಿಯಾರದ ಮಿಂಚು ಮಿಂಚಿಸುವ ಗುರುಸಿದ್ಧನಿಗಾಗಿ ಬಂಡಾಯಗಾರರು ಹುಡುಕಾಟ ಮುಂದುವರೆಸಿದ್ದಾರೆ. ಒಡಲಾಳದ ಶಿವು ಈಗ ಈ ಕತೆಯನ್ನು ಓದುತ್ತಿರಬಹುದು. ಆ ಕತೆಯಲ್ಲಿ ತನ್ನ ಮಾದರಿಯನ್ನು ಕಂಡುಕೊಳ್ಳುತ್ತಿರಬಹುದು. ಒಡಲಾಳದಂತಹ ಕೃತಿಗಳು ಮಾತ್ರವೇ ಒಂದು ಸಂಸ್ಕೃತಿಯಲ್ಲಿ ಕ್ರಿಯಾವರ್ತಗಳನ್ನು ಹುಟ್ಟಿಹಾಕಬಲ್ಲವು ಎಂಬುದನ್ನು ತಮ್ಮ ಗಮನಕ್ಕೆ ತರುವುದಕ್ಕೆ ಈ ಮಾತು ಹೇಳಿದೆ. ಕೃತಿಯನ್ನು ಅರಿಯಲು ಲೋಕದ ಮಾನದಂಡಗಳನ್ನು ಹುಡುಕುವ ನಮಗೆ ‘ಅಯ್ಯಾ ಹಾಗಲ್ಲ, ಈ ಕೃತಿಯ ಮೂಲಕ ಲೋಕವನ್ನು ಅರಿಯಲು ಸಾಧ್ಯವೇ ನೋಡು’ ಎಂದು ಇಂಥ ಕೃತಿಗಳು ಕೇಳುತ್ತವೆ.