“ಎದೆಗೆ ಬಿದ್ದ ಅಕ್ಷರ” ದವರೆಗೆ ನಡೆದ ದಾರಿ- ಪುರುಷೋತ್ತಮ ಬಿಳಮಲೆ

(ಪ್ರಸಿದ್ಧ ಬರಹಗಾರರೂ, ಚಿಂತಕರೂ ಆದ ಪ್ರೊ.ಪುರುಷೋತ್ತಮ ಬಿಳಮಲೆಯವರು 2015ರ ಸುಮಾರಿಗೆ “ಎದೆಗೆ ಬಿದ್ದ ಅಕ್ಷರ” ಕುರಿತು ಬರೆದ ಒಂದು ಬರಹ ನಮ್ಮ ಮರು ಓದಿಗಾಗಿ)
ಬಂಡಾಯ – ದಲಿತ ಸಾಹಿತ್ಯ ಚಳುವಳಿಯು ಪ್ರಬಲವಾಗಿ ಕಾಣಿಸಿಕೊಂಡದ್ದು 1970ರ ದಶಕದ ಉತ್ತರಾರ್ಧದಲ್ಲಿ.  ಆ ದಶಕದಲ್ಲಿ ನಡೆದ ಅನೇಕ ಘಟನೆಗಳು ಅಂಥದೊಂದು ಸಾಹಿತ್ಯ ಹುಟ್ಟಿಕೊಳ್ಳಲು ಕಾರಣವಾಯಿತು. ಪ್ರಬಲಗೊಂಡ‌ ಮಾರ್ಕ್ಸವಾದ, ಜನಪ್ರಿಯವಾಗುತ್ತಿದ್ದ ಲೋಹಿಯಾವಾದ, ದಲಿತರ ಕಣ್ದೆರೆಸಿದ ಅಂಬೇಡ್ಕರ್ ವಾದಗಳ ಜೊತೆಗೆ ಅನೇಕ ಜನಪರ ಚಳುವಳಿಗಳೂ ಪ್ರಗತಿಪರ ಸಾಹಿತ್ಯದ ಹುಟ್ಟಿಗೆ ಕಾರಣವಾದುವು.
 1969ರಲ್ಲಿ ದೇವರಾಜು ಅರಸರು‌ ಮುಖ್ಯ ಮಂತ್ರಿಯಾಗಿದ್ದ  ಜಿ.ಹಾವನೂರರು ಮಂಡಿಸಿದ ‘ಹಾವನೂರ ವರದಿ’ ಹಿಂದುಳಿದವರಲ್ಲಿ ಹೊಸ ಎಚ್ಚರ ಮೂಡಿಸಿತು.  1973ರಲ್ಲಿ ನಡೆದ ಬಸವಲಿಂಗಪ್ಪನವರ ‘ಬೂಸಾ ಪ್ರಕರಣ’ ಬಗೆಬಗೆಯ ವೈಚಾರಿಕ ಚರ್ಚೆಗಳಿಗೆ ನಾಂದಿ ಹಾಡಿತು. ತಲೆಯಲ್ಲಿ ಮಲಹೊರುವ ಪದ್ಧತಿಯ‌ ನಿಷೇಧವು ದಲಿತರ ಆತ್ಮಾಭಿಮಾನವನ್ನು ಬಡಿದೆಬ್ಬಿಸಿತು. 1973ರ ಆಗಸ್ಟ್ 25-26ರಂದು ಮೈಸೂರಿನಲ್ಲಿ ನಡೆದ ಜಾತಿವಿನಾಶ ಸಮ್ಮೇಳನವು ಬೇರೆಬೇರೆ ಜಾತಿಯ ಜನರನ್ನು ಹತ್ತಿರ ತಂದದ್ದಲ್ಲದೆ, ಅಂತರಜಾತಿಯ ವಿವಾಹಗಳಿಗೆ ಪ್ರೇರಣೆ ನೀಡಿತು.  1974ರ ಎಪ್ರಿಲ್ 24-25 ರಂದು ಮತ್ತೆ ಮೈಸೂರಿನಲ್ಲಿ ರಚನೆಯಾದ ‘ಬರಹಗಾರ ಮತ್ತು ಕಲಾವಿದರ ಒಕ್ಕೂಟ’, ಈ ಒಕ್ಕೂಟದ ಉದ್ಘಾಟನೆಯಲ್ಲಿ ಕುವೆಂಪು ಮಾಡಿದ ವಿಚಾರಪೂರಿತ ಭಾಷಣ, ಅದೇ ವರ್ಷ ಭದ್ರಾವತಿಯಲ್ಲಿ ಹುಟ್ಟಿಕೊಂಡ ದಲಿತ ಸಂಘರ್ಷ ಸಮಿತಿ, ನಾವೆಲ್ಲ ಉತ್ಸಾಹದಿಂದ ಭಾಗವಹಿಸುತ್ತಿದ್ದ ಸಮುದಾಯ ಮತ್ತು ಅದರ ಬೀದಿ ನಾಟಕಗಳು, ಪರಿಣಾಮಕಾರಿಯಾಗಿ ಜ್ಯಾರಿಗೆ ಬಂದ‌ ಭೂಮಸೂದೆ ಮತ್ತಿತರ ಅನೇಕ ಘಟನೆಗಳು ಕನ್ನಡದಲ್ಲಿ ಜನಪರ ಸಾಹಿತ್ಯವೊಂದನ್ನು ಹುಟ್ಟುಹಾಕಿದವು. ತೆಲುಗಿನ ದಿಗಂಬರ ಸಾಹಿತ್ಯ ಮತ್ತು ಮರಾಠಿಯ ದಲಿತರ ಆತ್ಮಚರಿತ್ರೆಗಳು ನನ್ನಂಥ ಹಲವರನ್ನು ಬಿಚ್ಚಿಬೀಳಿಸಿದ್ದುವು.
ಈ ಪ್ರಗತಿಪರ ಸಾಹಿತ್ಯದ ಮುಂಚೂಣಿಯಲ್ಲಿ ಅನೇಕ ಬರೆಹಗಾರರಿದ್ದು ಅವರಲ್ಲಿ ಇಬ್ಬರು ನಮ್ಮ ಕಣ್ಮಣಿಗಳಾಗಿದ್ದರು. ಒಬ್ಬರು ಸಿದ್ಧಲಿಂಗಯ್ಯನವರು ಇನ್ನೊಬ್ಬರು ದೇವನೂರು ಮಹಾದೇವನವರು. ನಾವು ಕರೆದಲ್ಲಿಗೆಲ್ಲಾ ಬಂದು,  ಪ್ರತಿಭಟನೆಗಳಲ್ಲಿ‌ ಪಾಲ್ಗೊಳ್ಳುತ್ತಿದ್ದ ಅವರ ಸರಳ, ನೇರ ಮತ್ತು ಸ್ಪಷ್ಟ ನುಡಿಗಳಿಂದ ಇಡೀ ಕರ್ನಾಟಕ ಅವರೆಡೆಗೆ ನೋಡುವಂತಾಗಿತ್ತು.
ಸಿದ್ಧಲಿಂಗಯ್ಯನವರು ಹೊಲೆಮಾದಿಗರ ಹಾಡು(1975) ಅನೇಕ ಹೋರಾಟಗಳಿಗೆ ಒಂದು ಮ್ಯಾನಿಫೆಷ್ಟೋ ( ಪ್ರಣಾಳಿಕೆ) ಆಗಿತ್ತು. ಅವರ ಎರಡನೆಯ ಕವನ ಸಂಕಲನ ‘ಸಾವಿರಾರು ನದಿಗಳು’ ರಾಜ್ಯದಾದ್ಯಂತ ಹೋರಾಟಗಾರರನ್ನು ಹುಚ್ಚೆಬ್ಬಿಸಿತ್ತು. ಅವರ ಕವಿತೆಗಳು ಗೋಡೆಗಳಲ್ಲಿ ರಾರಾಜಿಸಿದುವು. ಆದರೆ ಸಿದ್ಧಲಿಂಗಯ್ಯನವರು ಮುಂದೆ ಅಧಿಕಾರ ರಾಜಕಾರಣದ ಬೆನ್ನುಹತ್ತಿ ತನ್ನ ಬರವಣಿಗೆಯ ಪ್ರಖರತೆಯನ್ನು ದಯನೀಯವಾಗಿ ಕಳೆದುಕೊಳ್ಳುತ್ತಾ ಹೋದರು. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಕೆಲವು ಹುದ್ದೆಗಳನ್ನು ಹಿಡಿದಿಟ್ಟುಕೊಳ್ಳಬಲ್ಲ ಚಾಣಾಕ್ಷತೆಯನ್ನು ಮೆರೆಯುತ್ತಾ ಬಂದ ಅವರು ತಮ್ಮ ಬರೆವಣಿಗೆಗಳಿಗೆ ತಾನೇ ಅಪರಿಚಿತವಾಗುತ್ತಾ ಹೋದರು. ಆದರೆ ದೇವನೂರು ಮಹಾದೇವ ಹಾಗಾಗಲೇ ಇಲ್ಲ!
 ಹಾಗಾಗಲಿಲ್ಲ ಎಂಬುದಕ್ಕೆ ಅವರ ಈಚಿನ ಕೃತಿ ‘ಎದೆಗೆ ಬಿದ್ದ ಅಕ್ಷರ’ ( ಅಭಿನವ ಪ್ರಕಾಶನ, ಬೆಂಗಳೂರು 2013) ವೇ ಸಾಕ್ಷಿ. ಮೂರು ತಿಂಗಳುಗಳಲ್ಲಿ ಆರು ಮುದ್ರಣಗಳನ್ನು ಕಂಡ ಈ ಕೃತಿಯು ಪ್ರಾಮಾಣಿಕ ಕಳಕಳಿಯ ಬರೆಹಗಾರನೊಬ್ಬನ ಆತ್ಮನಿವೇದನೆಯನ್ನು ಮನಮುಟ್ಟುವಂತೆ ಕಟ್ಟಿಕೊಡುತ್ತದೆ.
ದೇವನೂರರ ‘ದ್ಯಾವನೂರು’( 1973) ಕಥಾ ಸಂಕಲನ ದಲಿತ ಲೋಕವನ್ನು ಮೊದಲ ಬಾರಿಗೆ ಕನ್ನಡದ ಓದುರಿಗೆ ತೆರೆದಿಟ್ಟು ಓದುಗರನ್ನು ಬೆಚ್ಚಿಸಿತು. ಆನಂತರದ ಕೃತಿಗಳಾದ ಒಡಲಾಳ ಮತ್ತು ಕುಸುಮಬಾಲೆಯು ದೇವನೂರು ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಿದ ಅಪೂರ್ವ ಕೃತಿಗಳು.
ಅವರ ಮೊದಲಿನ ಈ ಕೃತಿಗಳ ವೈಚಾರಿಕತೆಯನ್ನು ಮತ್ತೊಮ್ಮೆ ‘ಎದೆಗೆ ಬಿದ್ದ ಅಕ್ಷರ’ ಹೊಸಭಾಷೆಯಲ್ಲಿ ಮತ್ತು ಹೊಸ ಶೈಲಿಯಲ್ಲಿ ನವಿರಾಗಿ ನಿರೂಪಿಸುತ್ತದೆ. ಈ ಹೊಸ ಕೃತಿಯಲ್ಲಿ ಯಾವುದೇ ಘೋಷಣೆಯಿಲ್ಲ, ಒತ್ತಾಯದಿಂದ ತಂದು ತುರುಕಿದ ಶುಷ್ಕ ವೈಚರಿಕತೆಯಿಲ್ಲ, ಕ್ಲೀಷೆಯಾದ ಸಂವಾದಗಳಿಲ್ಲ, ಅತಿರಂಜಿತ ಅಭಿವ್ಯಕ್ತಿ ಕ್ರಮವಿಲ್ಲ, ಸಂಕೀರ್ಣ ತಂತ್ರಗಾರಿಕೆಯಿಲ್ಲ. ಬದಲು ಓದುತ್ತಾ ಹೋದಂತೆ ತಣ್ಣಗೆ ಕೊರೆಯುವ ಘಟನೆಗಳ ನಿರೂಪಣೆಗಳಿವೆ. ದಲಿತ ಲೋಕದ ಒಳಗಿನಿಂದ ಬಂದ ಅವರು ತನ್ನ ಅನುಭವ ಲೋಕದಲ್ಲಿ ಗಟ್ಟಿಯಾಗಿ ತಳವೂರಿ ನಿಂತು, ಮೇಲಿರುವ ಇತರರನ್ನು ನೋಡುವಾಗ ಅವರಲ್ಲಿ ಇತರ ದಲಿತ ಬರೆಹಗಾರರಲ್ಲಿ ಕಾಣಿಸುವ ಆಕ್ರೋಶ ಕಾಣಿಸುವುದಿಲ್ಲ. ಬದಲು ವ್ಯವಸ್ಥೆಗೆ ಬಲಿಯಾದ ಎಲ್ಲ ವರ್ಗದವರನ್ನೂ ಒಳಗೊಳ್ಳುವ ವಿಶಾಲವಾದ ನೋಟ ಮತ್ತು ಅನುಕಂಪೆಯನ್ನು ಕಾಣಿಸುತ್ತದೆ.
 ಸಾಮಾನ್ಯವಾಗಿ ಜಾತಿವ್ಯವಸ್ಥೆಯ ಮೇಲ್ತದಿಯಲ್ಲಿರುವವರು ಶ್ರೇಣೀಕರಣದ ಕೆಳಗಿರುವ ದಲಿತರನ್ನು ‘ ಕೊಳಕರೆಂದೂ, ಮುಟ್ಟುವುದಕ್ಕೆ ಮತ್ತು ನೋಡುವುದಕ್ಕೆ ಅನರ್ಹರಾದವರೆಂದೂ’ ಘೋಷಿಸುತ್ತಾರೆ. ಕೆಳತುದಿಯ ಜನರಿಗೆ ಜ್ಞಾನೋದಯವಾದಾಗ, ಮೇಲಿನವರನ್ನು ನೋಡಿ   ‘ಇಕ್ರಲಾ ವದೀರ್ಲಾ ʼ ಎಂದು ಅವರೂ‌ ಘರ್ಜಿಸುತ್ತಾರೆ. ಮೊದಲಿನದು ಮೇಲಿನಿಂದ ಕೆಳಗಡೆಗೆ ನೋಡಿದ ನೋಟವಾದರೆ, ಎರಡನೆಯದು ಕೆಳಗಿನಿಂದ ಮೇಲೆ ನೋಡಿದ ನೋಟ.
  ಆದರೆ ದೇವನೂರು ಈ ಎರಡೂ ಅತಿರೇಕಗಳಿಂದ ದೂರ ಉಳಿದು,  ‘ಭಾರತೀಯ ಶ್ರೇಣೀಕೃತ ಜಾತಿವ್ಯವಸ್ಥೆಗೆ ಎಲ್ಲರೂ ಬಲಿಪಶುಗಳು’ ಎಂದು ವಾದಿಸುತ್ತಾರೆ. ಪ್ರಸ್ತುತ ಪುಸ್ತಕದ ಒಂದು ಲೇಖನದಲ್ಲಿನ ಕೆಲವು ಸಾಲುಗಳು ಇಂತಿವೆ –
‘ಈ ದೇಶದಲ್ಲಿ ಬ್ರಾಹಣಿರಿಗೇನೇ ಒಂದು ರಾಜ್ಯ ಕೊಟ್ರೂವೆ, ಅಲ್ಲಿ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಮತ್ತಿನ್ಯಾವಾವುದೋ ಹುಟ್ಕಂಡು, ನೂರೆಂಟು ಭಿನ್ನಾಭಿಪ್ರಾಯಗಳು ಆ ಬ್ರಾಹ್ಮಣರ ರಾಜ್ಯದಲ್ಲಿಯೇ ಬರುತ್ತೆ. ಅಲ್ಲಿ ಜರುಗುವ ವಗ್ವಾದ, ಗೇಲಿ, ಅವಹೇಳನ, ಆತ್ಮಹತ್ಯೆಗಳು ಆ ರಾಜ್ಯದದ ಸಹಜ ಕ್ರಿಯೆಗಳಾಗಬಹುದು, ಹಾಗೇನೇ ದಲಿತರಿಗೆ ಒಂದು ರಾಜ್ಯ ಕೊಟ್ಟರೂನು, ಅಲ್ಲೂ ಕೂಡಾ ಬಲಗೈ, ಎಡಗೈ, ಎಡಗೈನ ಹೆಬ್ಬೆರಳು, ಬಲಗೈನ ಹೆಬ್ಬೆರಳು ಅಥವಾ ಕಿರುಬೆರಳು – ಹಿಂಗೆ ವಿವಾದ ಜಗಳ ಮತ್ತೆ ಕೊಲೆಗಳು ಈ ರಾಜ್ಯದ ದಿನನಿತ್ಯ ಜರುಗುವ ಕ್ರಿಯೆಗಳಾಗಬಹುದು’ ( ಕನ್ನಡಕ್ಕೂ ಒಂದು ರಾಷ್ಟ್ರೀಯತೆ, ಪುಟ: 139).
ಈ ವಿಶಾಲ ನೋಟ ದೇವನೂರರನ್ನು ಇತರ‌ ದಲಿತ ಬರೆಹಗಾರರಿಗಿಂತ ಪ್ರತ್ಯೇಕಿಸಿದ ಹಾಗೆ ನಮ್ಮ ನಡುವಿನ ಮಹತ್ವದ ಚಿಂತಕನನ್ನಾಗಿ ಮಾಡಿದೆ.
 ಭಾರತೀಯ ಜಾತಿ ವ್ಯವಸ್ಥೆಗೆ ಎಲ್ಲರೂ ಬಲಿಪಶುಗಳು ಎಂದು ದೇವನೂರು ಬಲವಾಗಿ ನಂಬುತ್ತಾರೆ. ಹಾಗಾಗಿ ಅವರ ಬರೆಹಗಳಲ್ಲಿ ವೈಯಕ್ತಿಕ ದ್ವೇಷ ಕಂಡು ಬರುವುದಿಲ್ಲ. ಆದರೆ ವ್ಯವಸ್ಥೆಯ ಬಗೆಗಣ ಅಸಹನೆ ಕಂಡು ಬರುತ್ತದೆ. ಜಾತಿ ವ್ಯವಸ್ಥೆಯ ಮೇಲ್ತುದಿಯಲ್ಲಿರುವವರು ಕೆಳಗಿನವರನ್ನು ನಿಕೃಷ್ಟವಾಗಿ ನೋಡುವುದು ಸಾಮಾನ್ಯ ಸಂಗತಿಯಾಗಿದೆ. ದಲಿತ ಬರೆಹಗಾರರೇ ‘ದಲಿತರದ್ದು ಹುಳು ತಿಂದ ಮೆದುಳುಗಳು’ ಎಂದು ಬಣ್ಣಿಸಿದ್ದುಂಟು. ಈ ನಡುವೆ ಒಂದು ವಿಷಯವನ್ನು ಇಲ್ಲಿ ಗಮನಿಸಬೇಕು. ದಲಿತರ ಕುರಿತು ಬರೆಯುವವರಲ್ಲಿ ಮುಖ್ಯವಾಗಿ ಎರಡು ಪ್ರಧಾನ ಧಾರೆಗಳಿವೆ. ಮೊದಲನೆಯ ಧಾರೆಯು ದಲಿತರ ಸಮಸ್ಯೆಯನ್ನುಬಹಳ ಗಂಭೀರವಾದ ಭಾಷೆಯಲ್ಲಿ ಮುಂದಿಡುತ್ತದೆ, ಶಿವರಾಮ ಕಾರಂತರು ಚೋಮನ ದುಡಿಯಲ್ಲಿ ಮಾಡಿದ ಹಾಗೆ. ಎರಡನೆಯದು ದಲಿತರ ಸಮಸ್ಯೆಯನ್ನು ಮೃದುಹಾಸ್ಯದಲ್ಲಿ ನವಿರಾಗಿ ಹಿಡಿದಿಡುವುದು. ದೇವನೂರು ಅವರದು ಎರಡನೆಯ ಹಾದಿ. ಅವರು, ದಲಿತ ಲೋಕದೊಳಗಿನ ಚೈತನ್ಯವನ್ನೂ ಅವರೊಳಗಿರುವ ಮಾನವೀಯತೆಯನ್ನೂ ಅದ್ಭುತವಾಗಿಅನಾವರಣ ಮಾಡುತ್ತಾರೆ.
 ಕೆಳಗಿನ ವಿವರಣೆಯನ್ನು ಗಮನಿಸಿ-
‘ಒಂದ್ಸಲ ನಮ್ಮ ಮನೆಯ ಕಕ್ಕಸ್ಸು ಕಮೋಡ್ಕಟ್ಟಿಕೊಂಡಿತ್ತು. ಕಡ್ಡೀಲಿ ಅಲ್ಲಾಡಿಸಿ ಸರಿ ಮಾಡಲು ನೋಡಿದೆ, ಆಗಲಿಲ್ಲ, ಕೈಗೇ ಪ್ಲಾಸ್ಟಿಕ್  ಚೀಲ ಬಳಸಿ ರಿಪೇರಿ ಮಾಡಲು ನೋಡಿದೆ, ಆಗಲಿಲ್ಲ. ಕೊನೆಗೆ ಸೋತು ‘ಅಯ್ಯೋ ನನ್ನ ಮಕ್ಕಳದಲ್ಲವೇ‘ ಎಂಬ ಭಾವನೆ ತಂದು ಕೊಂಡು ಕೈಯಲ್ಲೇ ಸರಿ ಮಾಡಿದೆ. ಈ ಭಾವನೆ ಬರದಿದ್ದರೆ ನಾನು ಕೈಹಾಕುತ್ತಿರಲಿಲ್ಲ. ಇಲ್ಲಿ ಸೋಲು ಮತ್ತು ಆ ಭಾವನೆ ಎರಡೂ ಇದೆ. ಮುಂದೆ ನನಗೆ ಆಶ್ಚರ್ಯ ಕಾದಿತ್ತು. ನನ್ನ ಪತ್ನಿ ಸುಮಿತ್ರಾ ತನ್ನ ಸಂಶೋಧನೆಗಾಗಿ ಒಬ್ಬ ಪೌರಕಾರ್ಮಿಕ ಹಿರಿಯರನ್ನು ‘ನಿಮಗೆ ಮ್ಯಾನ್ ಹೋಲ್ ಡ್ರೈನೇಜ್ ಮಾಡಲು ಕಷ್ಟ ಕಹಿ ಅಂತ ಅನ್ನಿಸುದಿಲ್ಲವೇ ?’ ಅಂತ ಪ್ರಶ್ನಿಸಿದ್ದಕ್ಕೆ‘ ಯಾಕ್ರಮ್ಮಾ ಕಷ್ಟ ಕಹಿ, ನನ್ನ ಮಕ್ಕಳದು ಅಂತ್ಕಂಡರಾಯಿತು ಅಂದರಂತೆ. ಅಸಹಾಯಕತೆ ಸೋಲಿನ ನಡುವೆಯೂ ಈ ದೊಡ್ಡ ಮನಸ್ಸು ಇಲ್ಲದಿದ್ದರೆ ಈ ಕೆಲ್ಸ ಮಾಡುವುದು ಕಷ್ಟ. ಆದರೆ ಇಂಥ ದೊಡ್ಡ ಮನಸ್ಸನ್ನೇ ಸಮಾಜ ಕೊಳಕು‌ ಅಂತ ಗಣಿಸಿದೆ. ಇದು ಸಮಾಜವೇ ಕೊಳಕಾಗಿರುವುದುರ ಲಕ್ಷಣ ಅಷ್ಟೆ” ( ಕೊಳಕು ಎಲ್ಲಿದೆ?, ಪುಟ‌ 14-15).
ಈ ಕೃತಿಯಲ್ಲಿ ದೇವನೂರು ನಿರೂಪಿಸಿದ ಅನೇಕ ಘಟನೆಗಳು ನಮ್ಮ ಸಮಾಜವು ಎಷ್ಟು ರೋಗಗ್ರಸ್ತವಾಗಿದೆ ಎಂಬುದನ್ನು ಸರಳವಾಗಿ ಆದರೆಗಾಢವಾಗಿ ನಿರೂಪಿಸುತ್ತಲೇ ಹೋಗುತ್ತದೆ. ‘ಬ್ರಾಹ್ಮಣರ ಬಹಿರಂಗ ಸಭೆಯ ಅಂತರಂಗದಲಿಕೆಲಕಾಲ’ ಲೇಖನವು ಕುವೆಂಪು ವಿರೋಧಿಗಳಕೊಳಕುತನವನ್ನು ಎಷ್ಟು ಶಕ್ತಿಶಾಲಿಯಾಗಿ ಬಯಲಿಗೆಳೆಯುತ್ತದೆ ಎಂದರೆ ಇದನ್ನು ಬರೆಯಲು ದೇವನೂರರಿಗೆ ಮಾತ್ರ ಸಾಧ್ಯ ಎಂಬಂಥ ಭಾವ ಮೂಡಿಬಿಡುತ್ತದೆ. ಅಸ್ಪೃಶ್ಯತೆ ಈ ದೇಶದ ಘನಘೋರವಾದ ಮತ್ತುಅತ್ಯಂತ ಹೇಯವಾದ ಸೃಷ್ಟಿ. ಆ ವರ್ಗದಲ್ಲಿ ಹುಟ್ಟಿದ ಸಂವೇದನಾಶೀಲಾ ಬರೆಹಗಾರನೊಬ್ಬನು ತನ್ನನ್ನು ನಿರಂತರವಾಗಿ ಶೋಷಿಸಿದ ಸಮಾಜವನ್ನು ಗೃಹಿಸಿದ ಬಗೆಯನ್ನು ತಿಳಿದುಕೊಳ್ಳಲು ನಾವೆಲ್ಲ “ಎದೆಗೆಬಿದ್ದ ಅಕ್ಷರ”ವನ್ನು ಅಗತ್ಯವಾಗಿ ಓದಬೇಕು. ಎಷ್ಟೋ ವಿಷಯಗಳ ಬಗೆಗೆ ದ್ವೇಷವಿಲ್ಲದೆ,ಆದರೆ ಎದೆಗೆ ಮುಟ್ಟುವಂತೆ ಹೇಗೆ‌ ಬರೆಯಬಹುದು‌ ಎಂಬುದಕ್ಕೆ ಈ ಪುಸ್ತಕ ಸಾಕ್ಷಿ.