“ಎದೆಗೆ ಬಿದ್ದ ಅಕ್ಷರ” ಓದು ಸರಣಿ-1 // ರುಹಾನಿ ದೇವ್ ತುರುವನೂರು//

[ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕೃತಿ 14.12.2012 ರಂದು ಪ್ರಕಟವಾಗಿ, ಈ 9 ವರ್ಷಗಳಲ್ಲಿ 24 ಮುದ್ರಣಗಳನ್ನು ಕಂಡಿದೆ. ಹತ್ತನೆಯ ವರ್ಷದ ಕೊಡುಗೆಯಾಗಿ ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕಾಗಿ, “ಎದೆಗೆ ಬಿದ್ದ ಅಕ್ಷರ” ಓದು ಸರಣಿ ಪ್ರಾರಂಭಿಸಲಾಗುತ್ತಿದೆ. “ದಯೆಗಾಗಿ ನೆಲ ಒಣಗಿದೆ” ಅಧ್ಯಾಯವನ್ನು ವಾಚಿಸುವ ಮೂಲಕ ಮಹಾದೇವರ ಮೊಮ್ಮಗಳು ರುಹಾನಿ ದೇವ್ ತುರುವನೂರು ಈ ಸರಣಿಗೆ ಚಾಲನೆ ನೀಡಿದ್ದಾಳೆ]

 

“ದಯೆಗಾಗಿ ನೆಲ ಒಣಗಿದೆ”

ಬುದ್ಧನಂತೂ ಯಾವ ಸಹಸ್ರಮಾನವನ್ನೂ ಮೀರಿದವನು.
ಈಗಷ್ಟೆ ಕಳೆದುಹೋದ ಸಹಸ್ರಮಾನದ ಕ್ರಿಸ್ತನ ದೇಹದ ದಯೆಯ ರಕ್ತ ಈ ಭೂಮಿಗೆ ಬಿದ್ದು ಎರಡು ಸಾವಿರ ವರ್ಷಗಳು ಆದವಂತೆ. ರಕ್ತ ಭೂಮಿಗೆ ಬೀಳದಿರುವುದು ಅಂದಿಗಿಂತಲೂ ಇಂದಿಗೇ ಹೆಚ್ಚು ಬೇಕಾಗಿದೆ. ಕ್ರಿಸ್ತ ಮತ್ತು ದಯೆಗಾಗಿ ಭೂಮಿ ಒಣಗಿದೆ.
ಇದಾದ ಮೇಲೆ ನನಗೆ ಈ ಸಹಸ್ರಮಾನದಲ್ಲಿ ಕಾಣುವುದು ಹನ್ನೆರಡನೆಯ ಶತಮಾನದ ವಚನ ಆಂದೋಲನದ ಆ ಇಪ್ಪತ್ತೈದು ವರ್ಷಗಳು. ಜಗತ್ತಿನಲ್ಲೆ ಹುಡುಕಿದರೂ ಕರ್ನಾಟಕದ ಈ ಮಾದರಿ ಬಹುಶಃ ಎಲ್ಲೂ ಸಿಗುವುದಿಲ್ಲವೇನೋ! ಈ ವಚನಧರ್ಮವನ್ನು ಜಾತಿಯ ಬಚ್ಚಲಿನಿಂದ ಮೇಲೆತ್ತಿ ರಕ್ಷಿಸಿದರೆ ಜಗತ್ತಿಗೇ ಇದು ಬೆಳಕಾಗಬಹುದೇನೋ. ಇದು ಜಾತಿಯಾದರೆ ಕೆಟ್ಟ ಜಾತಿ; ಧರ್ಮವಾದರೆ ಮಹೋನ್ನತ ಧರ್ಮ.
ಆಮೇಲೆ ಪರಮಹಂಸ. ಒಂದು ದೇಹ ಮನಸ್ಸು ಅದೆಷ್ಟು ಮಾಧ್ಯಮವಾಗಬಹುದೋ ಅದಷ್ಟೂ ಒಂದೇ ದೇಹದಲ್ಲಿ ಸಂಭವಿಸಿದ ಒಂದು ಉದಾಹರಣೆ ಪರಮಹಂಸ. ಯಾವುದನ್ನೂ ಕೊಲ್ಲದೆ, ಒಳಿತುಗಳನ್ನೆ ಕೂಡಿಸುತ್ತ ಕೂಡಿಸುತ್ತ ಹೋದ ಪರಮಹಂಸ ಹಾಗೂ ನಾನು ಹುಟ್ಟುವ ಮೊದಲು ಕಾಲವಶವಾದ ಗಾಂಧಿ- ಒಂದು ಜೀವಿತದಲ್ಲಿ ಇರಬಹುದಾದ ಗಳಿಗೆ ಗಳಿಗೆಗಳನ್ನು ಬದುಕುತ್ತಾ ಗಳಿಗೆಯಿಂದ ಗಳಿಗೆಗೆ ಎಡವುತ್ತ ಸತ್ಯ ಸಮಾನತೆಗಳ ಕಡೆಗೆ ನಡೆಯುತ್ತ ಸಮಷ್ಟಿಯೇ ಆದ ಗಾಂಧಿ ಜೊತೆಗೆ ಅಂಬೇಡ್ಕರ್ ರ ಆರ್ತತೆ ಹಾಗೂ ಋಷಿ ಐನ್‍ಸ್ಟೈನ್.
ಇಷ್ಟಾದ ಮೇಲೆ ವ್ಯಾಸ ಕ್ರಿಸ್ತಪೂರ್ವವೋ ಕ್ರಿಸ್ತಶಕವೋ ನನಗೆ ತಿಳಿಯದು. ಅವನು ಎಲ್ಲಾ ಶತಮಾನಗಳ ಜತೆ ಬೆಳೆಯುತ್ತಲೇ ಇರುವವನು. ಟಾಲ್‍ಸ್ಟಾಯ್, ಶೇಕ್ಸ್ಪಿಯರ್ ಹಾಗೂ ನಮ್ಮ ನೆಲದ ಪಂಪ, ಕುಮಾರವ್ಯಾಸ, ಕವಿ ಬೇಂದ್ರೆಯವರ ಒಂದಿಷ್ಟು ಕವಿತೆ, ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’ ಪುಣ್ಯದಂತೆ ನನಗೆ ಕಾಣಿಸುತ್ತವೆ.