‘ಎದೆಗೆ ಬಿದ್ದ ಅಕ್ಷರ’ ಓದು, ಕ್ರಿಯೆಗಳ ಮೂಲಕ ನಿರಂತರವಾಗಿ ಬೆಳೆಸಬೇಕಾದ ಒಂದು ಮಹತ್ವದ ಸಾಂಸ್ಕೃತಿಕ ಪಠ್ಯ-  ನಟರಾಜ ಹುಳಿಯಾರ್

[ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಕುರಿತು 29.5.2013 ರ ‘ಅವಧಿ’ ಅಂತರ್ಜಾಲ ತಾಣದಲ್ಲಿ ಸಾಹಿತಿ, ವಿಮರ್ಶಕ ನಟರಾಜ್ ಹುಳಿಯಾರ್ ಅವರು ಬರೆದ ಲೇಖನ ನಮ್ಮ ಮರು ಓದಿಗಾಗಿ…]

 

ಈಚಿನ ದಶಕಗಳಲ್ಲಿ ಲಂಕೇಶರ ಸಂಸ್ಕೃತಿ ಚಿಂತನೆಯ ನಂತರ ಓದುಗರೊಡನೆ ಆತ್ಮೀಯವಾಗಿ ಮಾತಾಡುತ್ತಾ, ಅವರನ್ನು ಆರೋಗ್ಯಕರವಾಗಿ ಒಲಿಸಿಕೊಳ್ಳುತ್ತಾ, ಅವರ ಪ್ರಜ್ಞೆಯನ್ನು ಬದಲಿಸುವ ಧ್ವನಿಯುಳ್ಳ ಬಹು ಮುಖ್ಯ ಕನ್ನಡ ಪುಸ್ತಕ ದೇವನೂರ ಮಹಾದೇವರ ‘ಎದೆಗೆ ಬಿದ್ದ ಅಕ್ಷರ’. ಮೂರು ತಿಂಗಳಲ್ಲಿ ಆರು ಮುದ್ರಣಗಳನ್ನು ಕಂಡಿರುವ ಈ ಪುಸ್ತಕದ ಬರಹಗಳು ಕರ್ನಾಟಕದ ಉದ್ದಕ್ಕೂ ಬಗೆಬಗೆಯ ಓದುಗರಲ್ಲಿ ಹಲವು ಬಗೆಯ ಪ್ರತಿಧ್ವನಿಗಳನ್ನು ಪಡೆಯುತ್ತಿರುವ ರೀತಿ ನಾಡಿನ ವೈಚಾರಿಕ ವಾತಾವರಣದ ಬಗ್ಗೆ ಭರವಸೆ ಹುಟ್ಟಿಸುತ್ತದೆ. ದೇವನೂರರ ಮಾತು, ಬರಹಗಳ ತಾತ್ವಿಕ ಭಿತ್ತಿಯ ಸ್ವರೂಪವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ, ಅದು ಒಟ್ಟಾರೆಯಾಗಿ ಸಮಾಜವಾದಿ ಚಿಂತನೆಯ ಈ ಕಾಲದ ಹೊಸ ಮಾದರಿಯಂತೆ ಕಾಣುತ್ತದೆ.

ಕರ್ನಾಟಕದಲ್ಲಿ ಪೂರ್ಣಚಂದ್ರ ತೇಜಸ್ವಿ, ಅನಂತಮೂರ್ತಿ, ಲಂಕೇಶ್, ಡಿ. ಎಸ್. ನಾಗಭೂಷಣ ಮೊದಲಾದವರು ಬೇರೆ ಬೇರೆ ರೀತಿಯಲ್ಲಿ ಸಮಾಜವಾದಿ ಚಿಂತನೆಯನ್ನು ಮರುವಿವರಿಸುತ್ತಾ ಬಂದಿದ್ದಾರೆ. ಹಾಗೆಯೇ ಸಮಾಜವಾದಿ ಮಾರ್ಗವನ್ನು ಕೆ. ರಾಮದಾಸ್ ತಮ್ಮ ಪ್ರತಿಭಟನೆಯ ರಾಜಕಾರಣದಲ್ಲಿ ವಿಸ್ತರಿಸಿದ್ದಾರೆ.

ಪ್ರೊ. ಎಂ. ಡಿ. ನಂಜುಂಡಸ್ವಾಮಿ ವ್ಯವಸ್ಥೆಯ ವಿರೋಧದ ಚಳುವಳಿಗಳಲ್ಲಿ, ರೈತ ಚಳುವಳಿ ಹಾಗೂ ಜಾಗತೀಕರಣ ಸಂದರ್ಭದ ಪಶ್ಚಿಮದ ಮಾರುಕಟ್ಟೆಯ ನಿಯಂತ್ರಣವನ್ನು ಎದುರಿಸುವ ಮಾರ್ಗಗಳಲ್ಲಿ ಸಮಾಜವಾದಿ ಚಿಂತನೆ-ಹೋರಾಟಗಳನ್ನು ಬೆಳೆಸಿದ್ದಾರೆ. ಈ ಎಲ್ಲರ ಉಲ್ಲೇಖ ಅಥವಾ ಅವರ ನಿಲುವುಗಳಿಗೆ ಪ್ರತಿಕ್ರಿಯೆಯೂ ಈ ಪುಸ್ತಕದ ಕೆಲವು ಭಾಗಗಳಲ್ಲಿದೆ.

ಈ ಎಲ್ಲರ ಜೊತೆಜೊತೆಗೇ ದೇವನೂರ ಮಹಾದೇವ ಬಹು ದೀರ್ಘ ಕಾಲ ಕತೆ, ಕಾದಂಬರಿ ಪ್ರಕಾರಗಳನ್ನು ತಮ್ಮ ಒಳ ವ್ಯಕ್ತಿತ್ವಕ್ಕೆ ಒಗ್ಗುವಂತೆ ಪಳಗಿಸಿಕೊಳ್ಳುತ್ತಾ, ಕವಿಯಂತೆ ಕನ್ನಡ ಭಾಷೆಯನ್ನು ಹಲವು ಸ್ತರಗಳಲ್ಲಿ ನುಡಿಯುವಂತೆ ಮಾಡುತ್ತಾ, ದಲಿತ ಚಳುವಳಿಗಳ ಜೊತೆಗೆ ಯೋಚಿಸುತ್ತಾ, ಅವನ್ನು ತಿದ್ದುತ್ತಾ, ಅವುಗಳ ಅನುಭವದಿಂದ ಕಲಿಯುತ್ತಾ ಬಂದಿದ್ದಾರೆ. ತಮ್ಮ ನಡೆ, ನುಡಿಗಳಲ್ಲಿ ಗಾಂಧಿ, ಲೋಹಿಯಾ, ಅಂಬೇಡ್ಕರ್ ಚಿಂತನೆಗಳ ಜೊತೆಗೆ ಬುದ್ಧನ ಒಳನೋಟದ ಮಾರ್ಗವನ್ನು ಬೆಸೆದಿದ್ದಾರೆ; ಈ ಚಿಂತನೆಗಳಿಗೆ ತಮ್ಮ ‘ಒಡಲಾಳ’ ನೀಳ್ಗತೆಯ ಸಾಕವ್ವನ ತಾಯ್ತನದ ಮಾದರಿಯಿಂದಲೂ ವಿಶಿಷ್ಟ ಸ್ತ್ರೀಗುಣವನ್ನು ತರಲೆತ್ನಿಸಿದ್ದಾರೆ. ಆ ಮೂಲಕ ಭಾರತೀಯ ಸಮಾಜವಾದಿ ಚಿಂತನೆಯ ಸಾಧ್ಯತೆಗಳನ್ನು ವಿಸ್ತರಿಸಲೆತ್ನಿಸಿದ್ದಾರೆ. ಇಲ್ಲಿ ಅನೇಕ ತತ್ವಗಳ ಬೆಳಕು ಹಾಗೂ ಜ್ಞಾನ ಇದ್ದರೂ ಅವು ಎದ್ದು ಕಾಣದೆ, ಈ ಬರಹಗಳೊಳಗೆ ಜೀವಂತವಾಗಿ ಹರಿಯುತ್ತಾ ಇನ್ನಷ್ಟು ಹೊಸ ನೋಟಗಳನ್ನು ಒಳಗೊಳ್ಳಲು ಸಿದ್ಧವಾಗಿರುವಂತೆ ಕಾಣುತ್ತವೆ.

ಸುಮಾರು ತೊಂಬತ್ತು ಬರಹಗಳ ಈ ಕೃತಿಯನ್ನು ದೇವನೂರು ‘ಸಮಾನತೆ ಉಸಿರಾಡುವ ಜೀವಿಗಳ ಪಾದಗಳಿಗೆ’ ಅರ್ಪಿಸಿರುವುದರ ಅರ್ಥಪೂರ್ಣತೆಯನ್ನು ಚರ್ಚಿಸುತ್ತಾ ಜಿ.ಎನ್. ಮೋಹನ್, ‘ದೇವನೂರು ನಮ್ಮೊಳಗಿನ ಕಣ್ಣು; ನಮ್ಮೊಳಗಿನ ನ್ಯಾಯವಾದಿ; ನಮ್ಮೊಳಗಿನ ಅಂತಃಸ್ಸಾಕ್ಷಿ’ ಎಂದಿದ್ದಾರೆ; ಜೊತೆಗೆ ತಮ್ಮ ಕಾಲಮಾನದ ಎಲ್ಲ ಮುಖ್ಯ ವಿದ್ಯಮಾನಗಳಿಗೆ ದೇವನೂರು ಆಳದ ಪ್ರಾಮಾಣಿಕ ಪ್ರತಿಕ್ರಿಯೆ ನೀಡುತ್ತಾ ಬಂದಿರುವುದನ್ನು ಮೋಹನ್ ಗುರುತಿಸಿದ್ದಾರೆ. ಈ ಗ್ರಹಿಕೆ ‘ಎದೆಗೆ ಬಿದ್ದ ಅಕ್ಷರ’ದ ಬರಹಗಳ ಮೂಲಕ ಈ ಕಾಲ ಪಡೆಯಬೇಕಾದ ಮುಖ್ಯ ಪ್ರೇರಣೆ, ಮಾರ್ಗದರ್ಶನ ಹಾಗೂ ಪರಿಹಾರಗಳು ಎಂಥವು ಎಂಬುದನ್ನು ಸೂಚಿಸುತ್ತದೆ.

ಬರವಣಿಗೆಯ ಹಲವು ಪ್ರಕಾರಗಳನ್ನು ಬೆಸೆದಂತಿರುವ ಈ ಪುಸ್ತಕದಲ್ಲಿ ದೇವನೂರರ ಪ್ರತಿಕ್ರಿಯೆಗಳು, ಭಾಷಣಗಳು, ಸಾಹಿತ್ಯಕ ನಿಲುವುಗಳು, ಚಳುವಳಿಗಳಿಗೆ ಸಲಹೆಗಳು, ಮಾನವವರ್ತನೆಯ ವಿಶ್ಲೇಷಣೆ, ವಿಕೇಂದ್ರೀಕರಣ, ಅಂತರ್ರಾಷ್ಟ್ರೀಯ ಘಟನೆಗಳು, ಕೃಷಿ, ಹೆಣ್ಣು, ಜಾತಿ, ಕಥಾರೂಪದ ಚಿಂತನೆಗಳು, ಈ ಕಾಲದಲ್ಲಿ ನಾವು ರೂಪಿಸಬೇಕಾದ ರಾಜಕೀಯ…ಇವೆಲ್ಲವನ್ನೂ ಒಳಗೊಂಡ ಬರಹಗಳಿವೆ. ಪ್ರಗತಿಪರ ಚಿಂತನೆಗಳು ನಿರಂತರ ತಮ್ಮನ್ನು ತಾವೇ ಪರೀಕ್ಷಿಸಿಕೊಳ್ಳುತ್ತಾ ಕಾಣಬಲ್ಲ ಹೊಸ ಸತ್ಯಗಳು ಕೂಡ ಇಲ್ಲಿವೆ. ದಮನಕ್ಕೆ ಒಳಗಾದವರ ಬಿಡುಗಡೆಯ ಹಾದಿಗಳ ಹುಡುಕಾಟದ ಜೊತೆಗೆ, ದಮನಕಾರರ ಮನಸ್ಸನ್ನು ಆಳವಾಗಿ ಗ್ರಹಿಸಿ ಅವರನ್ನೂ ಬಿಡುಗಡೆಗೊಳಿಸಲು ಬಯಸುವ ಗಾಂಧೀಮಾರ್ಗದ ಧ್ಯಾನಗಳೂ ಇಲ್ಲಿವೆ.

ವಿಚಾರವಾದಿಗಳನ್ನು ಒಪ್ಪಿಸಬೇಕೆಂಬ ಅಥವಾ ಸನಾತನಿಗಳನ್ನು ಶಾಕ್ ಮಾಡಬೇಕೆಂಬ ಒತ್ತಡವಿಲ್ಲದ ಈ ಬರಹಗಳಲ್ಲಿ ಆಳದಲ್ಲಿ ಸತ್ಯವೆಂದು ಅನಿಸಿದ್ದನ್ನು ನುಡಿದು ಕೇಳುಗರ, ಓದುಗರ ಮನಸ್ಸನ್ನು ಸರಿ ದಾರಿಗೆ ತರಬಹುದು ಎಂಬ ನಂಬಿಕೆಯಿದೆ. ಅದರ ಜೊತೆಗೇ ಕಟುವಾದ ಹಾಗೂ ದಿಟ್ಟವಾದ ನಿಲುವುಗಳೂ ಇಲ್ಲಿವೆ. ‘ಭಾರತೀಯ ಸಂವಿಧಾನಕ್ಕೆ ‘ಭೂತ’ಚೇಷ್ಟೆ’ ಎಂಬ ಬರಹ ಸಂವಿಧಾನದ ವಿಶಾಲ ಆಶಯಗಳನ್ನು ನುಂಗಲೆತ್ನಿಸುವ ಭಾರತೀಯ ಸನಾತನ ಶಕ್ತಿಗಳನ್ನು ತೀವ್ರವಾಗಿ ವಿರೋಧಿಸುತ್ತದೆ. ಕುವೆಂಪು ವೈಚಾರಿಕತೆಯನ್ನು ‘ಅರಿಯುವುದು ತನ್ನ ಆರೋಗ್ಯಕ್ಕೆ ಅಗತ್ಯ’ ಎಂದು ತಿಳಿಯದ ಸಂಪ್ರದಾಯಸ್ಥ ಬ್ರಾಹ್ಮಣರ ಚೀರಾಟವನ್ನು ಕಂಡು ಮಹಾದೇವ

ವ್ಯಗ್ರರಾಗುತ್ತಾರೆ; ‘ಇತಿಹಾಸದ ಕ್ರೌರ್ಯಕ್ಕೆ ಸಿಕ್ಕಿ ಕಣ್ಣು ಕೈಕಾಲು ಕಳೆದುಕೊಂಡು ಹೆಳವರಾಗಿರುವ ಈ ನನ್ನ ಸಹಜೀವಿಗಳಿಗೆ ಏನು ಹೇಳಲಿ? ಹೇಗೆ ಹೇಳಲಿ?’ ಎಂದು ದುಃಖಿಯಾಗುತ್ತಾರೆ; ಆದರೆ ಅವರ ನಡುವೆಯೇ ಕೃಷ್ಣಮೂರ್ತಿ ಎಂಬುವವರು ‘ಏನೋ ನಾವು ಪಾಪ ಮಾಡಿ ಇಲ್ಲಿ ಹುಟ್ಟಿ ಬಿಟ್ಟೋ’ ಎಂದಾಗ, ಆ ಸನಾತನ ಮನಸ್ಸುಗಳ ನಡುವೆಯೂ ಸಂವೇದನಾಶೀಲರು ಇರುವುದನ್ನು ಕಾಣುತ್ತಾರೆ.

ಈ ಬಗೆಯ ಸಜ್ಜನರ ಅಳುಕಿನ ಮಾತುಗಳನ್ನು ಕೇಳಿಸಿಕೊಳ್ಳದೆ ಮತ್ತೊಂದು ಕಡೆ ಜಾತಿ, ಮತೀಯತೆಯ ವಿಕಾರಗಳನ್ನು ಹಬ್ಬಿಸುತ್ತಿರುವ ಪಡೆ ತಂದೊಡ್ಡುತ್ತಿರುವ ಅಪಾಯವನ್ನು ಎದುರಿಸುವ ರೀತಿಯನ್ನೂ ದೇವನೂರು ಹುಡುಕಲೆತ್ನಿಸುತ್ತಾರೆ. ‘ಮತಾಂಧರ ಮೆದುಳೊಳಗೆ ಕೆಲವು ಕ್ಷಣ’ ಹೊಕ್ಕು ಅಲ್ಲಿ ನಡೆಯುತ್ತಿರುವುದೇನು ಎಂದು ಕಾಣಲೆತ್ನಿಸುತ್ತಾರೆ. ಅದನ್ನು ಕಾಣಿಸಿ, ಮತಾಂಧರು ತಮ್ಮನ್ನು ತಾವೇ ಪರೀಕ್ಷಿಸಿಕೊಳ್ಳುವಂತೆ ಮಾಡುತ್ತಾರೆ. ‘ಗೋಹತ್ಯೆ ನಿಷೇಧ ಕಾನೂನಿನೊಳಗೂ ದಮನಕಾರೀ, ಹಿಂಸೆ, ಕೊಲ್ಲುವ ಸಂಸ್ಕೃತಿಯ ಕೊಲೆಗಾರರು ಮರೆಮಾಚಿ ಕುಳಿತಿದ್ದಾರೆ’ ಎಂಬುದನ್ನು ಒತ್ತಿ ಹೇಳುತ್ತಾರೆ. ದಲಿತ ಚಳುವಳಿಯ ಗೆಳೆಯರು ದಾರಿ ತಪ್ಪಿದಾಗ ದೇವನೂರು ಅವರನ್ನು ತಿದ್ದಲೆತ್ನಿಸುತ್ತಾರೆ.

ದಲಿತರೊಳಗಿನ ಕಿತ್ತಾಟದ ಗಂಭೀರ ಸ್ವರೂಪವನ್ನು ಮನಗಾಣಿಸಲು ಗಂಡಭೇರುಂಡದ ಕತೆ ಬಳಸಿ, ಅರ್ಧ ಸತ್ತರೆ ಇನ್ನರ್ಧ ಹೇಗೆ ಸಾಯುತ್ತದೆ ಎಂಬುದನ್ನು ತೋರಿಸುತ್ತಾರೆ: ‘ಸ್ನೇಹಿತರೇ ಕೇಳಿ. ಅಸ್ಪೃಶ್ಯತೆಗೆ ದೇಹ ಒಂದೇ ಆದರೂ ತಲೆ ನೂರೆಂಟು. ಎಡಗೈ, ಬಲಗೈ, ಈ ಎಡಗೈ ಹೆಬ್ಬೆರಳು, ಕಿರುಬೆರಳು, ಬಲ ಹೆಬ್ಬೆರಳು, ಕಿರುಬೆರಳು ಹೀಗೆ ನೂರೆಂಟು. ಸ್ವಾರ್ಥದ ದಲಿತ ರಾಜಕಾರಣಿಗಳು, ಹೊಣೆಗೇಡಿ ದಲಿತ ನೌಕರರು ತಮ್ಮ ಅಹಂ, ಅಧಿಕಾರಕ್ಕಾಗಿ ಇರುವ ಭಿನ್ನತೆಯನ್ನು ಹೆಚ್ಚಿಸುತ್ತಿರುವರು. ಆದರೆ ನೆನಪಿರಲಿ. ಗಂಡಭೇರುಂಡ ಪಕ್ಷಿಯಂತೆ ಸಾಯುವವರು ಒಟ್ಟಿಗೆ ದೇಹವಾದ ನಾವು. ಕಾಲಾವಕಾಶವಿರುವಾಗಲೇ ಊರಾಚೆ ಬಿದ್ದಿರುವ, ಊರಾಚೆಗೆ ಎಸೆಯಲ್ಪಡುತ್ತಿರುವ ಸಣ್ಣ ಪುಟ್ಟ ಜಾತಿಗಳೊಳಗಿನ ಭಿನ್ನತೆಯನ್ನು ಕಿತ್ತೆಸೆದರೆ ಮಾತ್ರ ನಮ್ಮ ಉಳಿವು.’

ಕಾಲಕಾಲದ ಸಮಸ್ಯೆಗಳನ್ನು ವಿಶ್ಲೇಷಿಸುತ್ತಲೇ ಅದಕ್ಕೆ ಪರಿಹಾರ ಹುಡುಕುವ ಪ್ರಯತ್ನ ಕೂಡ ದೇವನೂರ ಮಹಾದೇವರ ಬರಹಗಳಲ್ಲಿದೆ. ‘ಪೌರ ಕಾರ್ಮಿಕರ ದೊಡ್ಡ ಮನಸ್ಸನ್ನ ಕೊಳಕು ಅಂತ ಸಮಾಜ ಗಣಿಸಿದೆ. ಅದು ಸಮಾಜವೇ ಕೊಳಕಾಗಿರುವುದರ ಲಕ್ಷಣ, ಅಷ್ಟೆ.’ ಎಂದು ಅವರು ನೋವಿನಿಂದ ಹೇಳುತ್ತಾರೆ; ಜೊತೆಗೆ, ಪೌರ ಕಾರ್ಮಿಕರ ಪರವಾದ ಹೋರಾಟವನ್ನು ಕೈಗೆತ್ತಿಕೊಳ್ಳುವ ಮೂಲಕ ದಲಿತ ಚಳುವಳಿಯನ್ನು ಮತ್ತೆ ಹೊಸ ರೀತಿಯಲ್ಲಿ ಆರಂಭಿಸಬೇಕೆಂದು ಯೋಚಿಸುತ್ತಾರೆ. ಚಳುವಳಿಯ ಜೊತೆಜೊತೆಗೇ ಇನ್ನಿತರ ಬದಲಾವಣೆಯ ಮಾರ್ಗಗಳನ್ನೂ ಅವರು ಸೂಚಿಸುತ್ತಾರೆ. ‘ದಲಿತ ನೌಕರರ ಒಂದು ದಿನದ ಸಂಬಳದಲ್ಲಿ ತಾವು ಹುಟ್ಟಿ ಬಂದ ಸಮುದಾಯದ ಇಡೀ ಮಕ್ಕಳ ಶಿಕ್ಷಣ ವಹಿಸಿಕೊಳ್ಳಬಹುದಿತ್ತು; ಅಥವಾ ಇಪ್ಪತ್ತೆರಡು ಸಾವಿರ ಇರುವ, ಈ ಭೂಮಿಯ ಮೇಲೆ ಅತ್ಯಂತ ಅವಮಾನಿತರಾದ, ದಕ್ಷಿಣ ಕನ್ನಡದ ಕೊರಗರನ್ನ ಇಡಿಯಾಗಿ ದತ್ತು ತೆಗೆದುಕೊಂಡು ಅವರ ಕಣ್ಣೀರು ಒರೆಸಬಹುದಿತ್ತು’ ಎಂದು ಅವರು ದಲಿತ ನೌಕರರಿಗೆ ಕಿವಿಮಾತು ಹೇಳುತ್ತಾರೆ. ಜೊತೆಗೆ ‘ಒಳ ಮೀಸಲಾತಿ ಹಾಗೂ ಜಾತಿ ಜನಗಣತಿ’ ಲೇಖನದಲ್ಲಿ ಮೀಸಲಾತಿಯನ್ನು ಈ ಕಾಲದಲ್ಲಿ ಹೊಸ ರೀತಿಯಲ್ಲಿ ವಿವರಿಸಿಕೊಳ್ಳುವ ನಿಟ್ಟಿನಲ್ಲಿ ಸಲಹೆಗಳನ್ನೂ ಕೊಡುತ್ತಾರೆ.

ಅಂಬೇಡ್ಕರ್ ಅವರಿಗೆ ಸ್ಥಾನ ಕೊಟ್ಟಿಲ್ಲವೆಂಬ ಕಾರಣಕ್ಕೆ ರಿಚರ್ಡ್ ಅಟೆನ್ಬರೋ ಅವರ ‘ಗಾಂಧಿ’ ಸಿನಿಮಾವನ್ನು ದಲಿತರು ನೋಡಬಾರದೆಂದು ದಲಿತ ಸಂಘರ್ಷ ಸಮಿತಿ ಕರೆ ಕೊಟ್ಟಾಗ, ದೇವನೂರು ‘ಕದ್ದು’ ‘ಗಾಂಧಿ’ ಸಿನಿಮಾ ನೋಡುತ್ತಾರೆ. ಆ ಸಿನಿಮಾದಿಂದ ಪಡೆದ ಅನುಭವವನ್ನು ವಿವರಿಸುತ್ತಾ, ‘ಗಾಂಧಿಯದು ಭೂಮಿಯಂತೆ ಒಂದು ಕ್ಷಣವೂ ನಿಲ್ಲದ ಚೇತನವು’ ಎಂಬ ಸುಂದರ ಒಳನೋಟ ಕೊಡುತ್ತಾರೆ. ‘ಅಹಿಂಸಾವಾದಿಯಾದ ಗಾಂಧಿಯ ಒಂದು ರೋಮದಲ್ಲೂ ಹೇಡಿತನದ ಸುಳಿವು ಇಲ್ಲದಿರುವುದು ನನ್ನನ್ನು ನಡುಗಿಸಿತು. ಹೇಡಿಯಾದವನು ಅಹಿಂಸಾವಾದಿಯಾಗುವುದು ಅಸಾಧ್ಯ ಎಂಬ ನಿಜವೂ ಅರಿವಾಗಿ ಬೆವರಿಸಿತು’ ಎನ್ನುವ ಅವರು ದಲಿತರಿಗೂ ಹಾಗೂ ದಲಿತೇತರರಿಗೂ ಹೇಳುವ ಮಾತು: ‘ನಮ್ಮ ವಿಮೋಚನೆಗಾಗಿ ಸಾವಿರಾರು ರೀತಿಗಳನ್ನು ನಾವು ತಡಕಬೇಕಾಗಿದೆ. ಇಂಥದ್ದರಲ್ಲಿ ಗಾಂಧಿಯೂ ನಮಗೆ ದಿಕ್ಕಾಗಬಹುದು.’ ಆದ್ದರಿಂದಲೇ ಮಹಾದೇವ ಯೋಚಿಸುವ, ರೂಪಿಸುವ ಅಸ್ಪೃಶ್ಯತೆಯ ವಿರುದ್ಧದ ಹೋರಾಟದಲ್ಲಿ ಗಾಂಧಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಾರೆ.

ಆದರೆ ದಿನನಿತ್ಯ ಭಾರತದ ಭೀಕರ ವಾಸ್ತವಗಳು ಹಾಗೂ ಕ್ರೌರ್ಯಗಳನ್ನು ನೋಡುತ್ತಾ, ಇಲ್ಲಿ ಗಾಂಧಿಯ ಜೊತೆಗೆ ಮತ್ತೇನನ್ನು ಬೆಸೆಯಬೇಕು ಎಂದು ದೇವನೂರು ಹುಡುಕುತ್ತಾರೆ. ಆದ್ದರಿಂದಲೇ ಈ ಕಾಲದ ಸವಾಲುಗಳನ್ನು ಎದುರಿಸಲು ಗಾಂಧಿ, ಲೋಹಿಯಾ, ಬುದ್ಧ, ಅಂಬೇಡ್ಕರ್, ಬಸವ ಎಲ್ಲರೂ ಬೆರೆಯಬೇಕಾದ ಹಾಗೂ ಆ ಮಾರ್ಗಗಳನ್ನು ಮರು ವಿವರಿಸಿಕೊಳ್ಳಬೇಕಾದ ಅನಿವಾರ್ಯತೆ ಅವರ ಕ್ರಿಯೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಎಂಬತ್ತರ ದಶಕದಲ್ಲಿ, ರೈತ ಚಳುವಳಿಯ ಆರಂಭದಲ್ಲೇ ದಲಿತ ಹಾಗೂ ರೈತ ಚಳುವಳಿಗಳು ಒಟ್ಟಿಗೆ ಹೋಗಬೇಕಾದ ಬಗ್ಗೆ ದೇವನೂರು ಎಂ. ಡಿ. ನಂಜುಂಡಸ್ವಾಮಿಯವರ ಜೊತೆ ಚರ್ಚಿಸುತ್ತಾರೆ. ಇಪ್ಪತ್ತೊಂದನೆಯ ಶತಮಾನದಲ್ಲಿ ಅವರು ಹೊಸ ರೀತಿಯ ರಾಜಕೀಯದ ಬಗ್ಗೆ ಆಳವಾಗಿ ಚಿಂತಿಸಿದಾಗ, ರೈತ ಹಾಗೂ ದಲಿತ ಚಳುವಳಿಗಳು ಬೆರೆಯಬೇಕಾದ ಸಾಮಾಜಿಕ ಹಾಗೂ ರಾಜಕೀಯ ಅನಿವಾರ್ಯತೆ ಸ್ಪಷ್ಟವಾಗಿ ಕಾಣತೊಡಗುತ್ತದೆ.

ಅವರು ‘ಸರ್ವೋದಯ ಕರ್ನಾಟಕ’ ಪಕ್ಷವನ್ನು ರೂಪಿಸುವುದು ಆ ಘಟ್ಟದಲ್ಲಿ. ಆದ್ದರಿಂದಲೇ, ‘ಸರ್ವೋದಯ ಕರ್ನಾಟಕ’ ಪಕ್ಷದ ನಡಿಗೆ ಹಾಗೂ ಆಶಯಗಳನ್ನು ನಾವು ಪರಿಚಿತ ರಾಜಕೀಯ ಪಕ್ಷಗಳ ವರಸೆಗಳಿಗೆ ಹೋಲಿಸಲಾಗದು. ಬದಲಿಗೆ, ದೇವನೂರು ತಮ್ಮ ಸಾಹಿತ್ಯ, ಚಳುವಳಿಗಳ ಸಂದರ್ಭಗಳಲ್ಲಿ ಯಶಸ್ಸಿನ ಬಗ್ಗೆ ತಲೆ ಕೆಡಿಸಿಕೊಳ್ಳದೆ, ತಮ್ಮ ಆಳದಲ್ಲಿ ಸರಿಯೆನಿಸಿದ ಮಾರ್ಗ ಹಿಡಿದಂತೆ ರಾಜಕಾರಣದಲ್ಲೂ ಅಂಥದೊಂದು ಹಾದಿ ಹಿಡಿದಿದ್ದಾರೆ ಎಂದು ತಿಳಿಯಬೇಕು.

ರಾಜಕಾರಣದ ಜೊತೆಗೆ, ದಲಿತರ ವಿಮೋಚನೆಗಷ್ಟೇ ಅಲ್ಲದೆ ಒಟ್ಟು ಭಾರತದ ವಿಮೋಚನೆಗಾಗಿ ‘ಬುದ್ಧನೆಡೆಗೆ ಮರಳಿ ಮನೆಗೆ’ ಕಾರ್ಯಕ್ರಮವನ್ನು ಚಳುವಳಿಯಾಗಿ ರೂಪಿಸಬೇಕಾದ ಅನಿವಾರ್ಯತೆಯೂ ಆ ನಂತರ ಮಹಾದೇವ ಅವರಿಗೆ ಎದುರಾಗುತ್ತದೆ. ಆದರೆ ಬುದ್ಧನ ಜೊತೆಗೆ ಕನ್ನಡದ ವಚನಯುಗವೂ ಬೆರೆಯಬೇಕೆಂದು ಅವರಿಗೆ ಮತ್ತೆ ಮತ್ತೆ ಅನ್ನಿಸುತ್ತದೆ. ‘ಬೆಳಗಾಗ ನಾವೆದ್ದು ನೆನೆಯಬೇಕಾದುದು ವಚನಯುಗವನ್ನು ಎಂಬಷ್ಟು ಅರಿವು ನಮಗೆ ಬಂದರೆ ಅಷ್ಟು ಸಾಕು. ಆಗ ಭಾರತದಲ್ಲಿ ತರಾವರಿ ಪ್ರತಿಭೆಗಳು ಚಿಗುರೊಡೆಯುತ್ತವೆ’ ಎನ್ನುವ ದೇವನೂರು, ‘ವಚನಧರ್ಮವನ್ನು ಈ ಕಾಲಕ್ಕೆ ಕಸಿ ಮಾಡುವುದು ಹೇಗೆ’ ಎಂದು ಯೋಚಿಸುತ್ತಾರೆ. ಇವೆಲ್ಲದರ ಜೊತೆಗೆ ಈ ಕಾಲದ ವರ್ಗಸಮಸ್ಯೆಗಳಿಗೂ ಅವರು ಸ್ಪಂದಿಸುತ್ತಾರೆ. ಆದ್ದರಿಂದಲೇ ಒಂದನೇ ತರಗತಿಯಿಂದ ಇಂಗ್ಲಿಷ್ ಭಾಷೆಯನ್ನು ಕಲಿಸಬೇಕೆಂದು ಒತ್ತಾಯಿಸುವ ಚಳುವಳಿಯ ಮಹತ್ವವನ್ನು ಅವರು ಗ್ರಹಿಸುತ್ತಾರೆ. ಆದರೆ, ಕನ್ನಡ ಮಾಧ್ಯಮ ಜಾರಿಗೆ ಬರದೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಕೊಡುವ ನೃಪತುಂಗ ಪ್ರಶಸ್ತಿಯನ್ನು ಪಡೆಯಲಾರೆ ಎಂದು ಬೃಹತ್ ಮೊತ್ತದ ಪ್ರಶಸ್ತಿಯನ್ನು ನಿರಾಕರಿಸುತ್ತಾರೆ; ಆ ಮೂಲಕ ಕನ್ನಡ ಭಾಷಾಮಾಧ್ಯಮದ ಬಗೆಗೆ ಖಚಿತ ನಿಲುವನ್ನು ತಳೆಯುತ್ತಾರೆ.

ಈ ಪುಸ್ತಕದ ‘ಮುಖಾಮುಖಿ’ ಭಾಗದಲ್ಲಿರುವ ಮಾತುಕತೆಗಳು ಭಾರತೀಯ ಸಮಾಜವನ್ನು ಎಲ್ಲಿ ನಿಂತು ಅರಿಯಲು ಶುರು ಮಾಡಬೇಕು ಎಂಬ ಬಗ್ಗೆ ಬರಹಗಾರರು, ರಾಜಕಾರಣಿಗಳು,ಚಳುವಳಿಗಾರರು ಹಾಗೂ ಪತ್ರಕರ್ತರಿಗೆ ಮುಖ್ಯ ಮಾದರಿಗಳನ್ನು ಒದಗಿಸುತ್ತವೆ. ಮಾಜಿ ಉಸ್ತಾದರೊಬ್ಬರ ಅಥವಾ ಯಜ್ಜೂರಯ್ಯನವರ ಜೊತೆ ದೇವನೂರು ನಡೆಸುವ ಮಾತುಕತೆಗಳು ಒಂದು ದೇಶದ ದಮನಿತರ ಚರಿತ್ರೆಯನ್ನೇ ಹೇಳುತ್ತವೆ. ಈ ದೃಷ್ಟಿಯಿಂದ ನಮ್ಮ ಸಮಾಜವಿಜ್ಞಾನಗಳ ಸಂಶೋಧಕರು ಈ ಬರಹಗಳನ್ನು ತಮ್ಮ ಅಧ್ಯಯನದ ಮುಖ್ಯ ಮಾದರಿಗಳನ್ನಾಗಿ ನೋಡಬೇಕು. ಹಾಗೆಯೇ ಸಾಹಿತ್ಯ ಕುರಿತು ದೇವನೂರು ಮಾಡುವ ಸೂಕ್ಷ್ಮಚಿಂತನೆಗಳು, ಲೇಖಕರ ಆಯ್ಕೆಗಳು, ‘ಮಲೆಗಳಲ್ಲಿ ಮದುಮಗಳು ಶತಮಾನದ ಕೃತಿ’ ಎಂಬ ನಿಲುವು -ಇವೆಲ್ಲ ಅವರ ಸಾಹಿತ್ಯಕ ಆಯ್ಕೆಗಳು ಹಾಗೂ ಆದ್ಯತೆಗಳನ್ನು ಖಚಿತವಾಗಿ ಸೂಚಿಸುತ್ತವೆ. ಅದಕ್ಕಿಂತ ಮುಖ್ಯವಾಗಿ ಅವರ ಸಾಮಾಜಿಕ, ಸಾಂಸ್ಕೃತಿಕ ಗ್ರಹಿಕೆಗಳು, ಚಳುವಳಿಗಳನ್ನು ಮುನ್ನಡೆಸುವುದನ್ನು ಕುರಿತ ಅವರ ನಿಸ್ವಾರ್ಥ ಚಿಂತನೆಗಳು ಕರ್ನಾಟಕವನ್ನು ಎಲ್ಲ ಕಾಲದಲ್ಲೂ ಎಚ್ಚರದಲ್ಲಿಡಬಲ್ಲವು.

ಈ ಬರಹಗಳಲ್ಲಿರುವ ಅನುಕಂಪ, ನಿಷ್ಠುರತೆ, ದುಃಖ, ಒಳನೋಟಗಳು ಬಹುಕಾಲ ಕೇಳುಗರ, ಓದುಗರ ನೋಟಗಳನ್ನು ತಿದ್ದಿವೆ; ಮುಂದೆಯೂ ತಿದ್ದಬಲ್ಲ ಶಕ್ತಿ ಈ ಬರಹಗಳಿಗಿದೆ. ಪುಟ್ಟ ಪುಟ್ಟ ನುಡಿಗಟ್ಟುಗಳ ಮೂಲಕ ನಮ್ಮೊಡನೆ ಆತ್ಮೀಯವಾಗಿ ಮಾತಾಡಿದಂತಿರುವ ಈ ಬರಹಗಳ ಆಶಯಗಳ ಮೂಲಕ ಈ ನಾಡಿನಲ್ಲಿ ಇನ್ನಷ್ಟು ಆರೋಗ್ಯಕರ ಚರ್ಚೆಗಳು, ಕ್ರಿಯೆಗಳು ಹುಟ್ಟಿ ಬೆಳೆಯುವಂತೆ ಮಾಡಬಹುದು. ಸುಮಾರು ನಲವತ್ತು ವರ್ಷಗಳ ಕಾಲ ಮಹಾದೇವ ರೂಪಿಸಿರುವ ಈ ಚಿಂತನೆಗಳ ಒಳನೋಟಗಳಿಂದ; ಈ ಚಿಂತನೆಗಳ ಭಿತ್ತಿಯಲ್ಲಿರುವ ಪ್ರಾಮಾಣಿಕತೆ, ಆಳವಾದ ಆಲೋಚನೆಗಳಿಂದ; ಹಾಗೂ ತಾನು ಬಳಸುವ ಶಬ್ದದಲ್ಲಿ ಹುಸಿಯನ್ನು ನಿಯಂತ್ರಿಸುವ ಲೇಖಕನ ಎಚ್ಚರದಿಂದ ನಮ್ಮ ಕಾಲದ ಬರಹಗಾರರು, ಚಿಂತಕರು ಅನೇಕ ಅಂಶಗಳನ್ನು ಕಲಿಯಬೇಕಾಗಿದೆ. ಈ ಬರಹಗಳ ಲವಲವಿಕೆ, ವ್ಯವಧಾನ ಹಾಗೂ ನಿಧಾನ ಗತಿಗೆ ಇರುವ ವಿಚಿತ್ರ ಶಕ್ತಿಯನ್ನೂ ನಾವು ಅಧ್ಯಯನ ಮಾಡಬೇಕಾಗಿದೆ.

2013ರ ಜನವರಿ ಒಂದರಂದು ಮಿತ್ರರಿಗೆ ಹೊಸ ವರ್ಷದ ಶುಭಾಶಯಗಳನ್ನು ಎಸ್ಎಂಎಸ್ ಮೂಲಕ ಕಳಿಸಲು ತರುಣ ಕವಿ ನಾಗಣ್ಣ ಕಿಲಾರಿ ‘ಎದೆಗೆ ಬಿದ್ದ ಅಕ್ಷರ’ದ ಬೆನ್ನುಡಿಯ ಈ ಸಾಲುಗಳನ್ನು ಬಳಸಿದರು: ‘ಗಾಂಧಿ-ಕಾಠಿಣ್ಯದ ತಂದೆಯಂತೆ. ಜೆಪಿ- ಅಸಹಾಯಕ ತಾಯಿ. ವಿನೋಬಾ- ಮದುವೆಯಾಗದ ವ್ರತನಿಷ್ಟ ಅಕ್ಕನಂತೆ. ಲೋಹಿಯಾ-ಊರೂರು ಅಲೆಯುವ ಮನೆ ಸೇರದ ಅಲೆಮಾರಿ ಮಗ. ಅಂಬೇಡ್ಕರ್- ತಾರತಮ್ಯಕ್ಕೆ ಒಳಗಾಗಿ ಮುನಿಸಿಕೊಂಡು ಮನೆ ಹೊರಗೆ ಇರುವ ಮಗ -ಇದು ನಮ್ಮ ಕುಟುಂಬ. ನಾವು ಇಲ್ಲಿನ ಸಂತಾನ. ಇದನ್ನು ಹೀಗಲ್ಲದೆ ಹೇಗೆ ನೋಡಬೇಕು?’ ದೇವನೂರರ ಚಿಂತನೆಯ ಆಳದಲ್ಲಿರುವ ಹೊಸ ಭಾರತದ ಆಶಯವನ್ನು ಬಿಂಬಿಸುವ ಈ ಮಾತು ಕರ್ನಾಟಕದ ವಿಭಿನ್ನ ವಲಯಗಳನ್ನು ತಲುಪುತ್ತಾ ಅಲ್ಲಿ ಹುಟ್ಟಿಸುತ್ತಿರುವ ಸ್ಪಂದನಕ್ಕೆ ಈ ಶುಭಾಶಯ ಪತ್ರದಂತೆಯೇ, ಈ ಕೃತಿಯ ಬಗೆಬಗೆಯ ಓದುಗಳು ಕೂಡ ಸಾಕ್ಷಿಯಂತಿವೆ.

‘ಎದೆಗೆ ಬಿದ್ದ ಅಕ್ಷರ’ದ ಬರಹಗಳ ಮೂಲ ಆಶಯಗಳು ದೇವನೂರು 2012ರಲ್ಲಿ ‘ಪ್ರಜಾವಾಣಿ’ಗಾಗಿ ಸಂಪಾದಿಸಿದ ಅಂಬೇಡ್ಕರ್ ವಿಶೇಷಾಂಕಕ್ಕಾಗಿ ಬರೆದ ‘ಸಮಾನತೆಯ ಕನಸನ್ನು ಮತ್ತೆ ಕಾಣುತ್ತಾ’ ಎಂಬ ಸಂಪಾದಕೀಯದಲ್ಲಿ ಗಾಢವಾಗಿ ಕಾಣಿಸಿಕೊಳ್ಳುತ್ತವೆ; ಅಸಮಾನತೆಯನ್ನು ವ್ಯವಸ್ಥಿತವಾಗಿ ಹುಟ್ಟು ಹಾಕಲೆತ್ನಿಸುತ್ತಿರುವ ಇಪ್ಪತ್ತೊಂದನೆಯ ಶತಮಾನದಲ್ಲಿ ಸಮಾನತೆಯ ಚರ್ಚೆಯನ್ನು ಮತ್ತೆ ಕೇಂದ್ರಕ್ಕೆ ತರಬೇಕಾದ ಅಗತ್ಯವನ್ನು ಮನವರಿಕೆ ಮಾಡಿಕೊಡುತ್ತವೆ. ಕರ್ನಾಟಕ ಹಾಗೂ ಒಟ್ಟಾರೆಯಾಗಿ ಭಾರತದ ವರ್ತಮಾನ ಹಾಗೂ ಚರಿತ್ರೆಯನ್ನು ಈ ಕೃತಿಯ ಮೂಲಕ ಅರಿಯುತ್ತಾ ಹಾಗೂ ಈ ಕಾಲದ ಬಿಕ್ಕಟ್ಟುಗಳಿಗೆ ಪರಿಹಾರ ಹುಡುಕುವ ಇಲ್ಲಿನ ಚರ್ಚೆಗಳನ್ನು ವ್ಯಾಪಕವಾಗಿ ಬೆಳೆಸುತ್ತಾ ನಾವು ಈ ಮಹತ್ವದ ಸಾಂಸ್ಕೃತಿಕ ಪಠ್ಯವನ್ನು ನಿರಂತರವಾಗಿ ಬೆಳೆಸುತ್ತಿರಬೇಕಾಗುತ್ತದೆ. ಆ ಮೂಲಕ ಈ ಚಿಂತನೆಗಳನ್ನು ಇನ್ನಷ್ಟು ಸಮಕಾಲೀನಗೊಳಿಸಿ ನಾಳಿನ ಕ್ರಿಯೆಗಳಿಗೆ ಕೊಂಡೊಯ್ಯಬೇಕಾಗುತ್ತದೆ.