ಇನ್ನಿಲ್ಲವಾದ ಹರವೆ: ಇರುವ ಅವರ ಪ್ರೀತಿಯ ಚೇತನ–ದೇವನೂರ ಮಹಾದೇವ

[ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾಗಿದ್ದ, ದಲಿತ ಸಂಘರ್ಷ ಸಮಿತಿಯಲ್ಲಿ ಸಕ್ರಿಯ ಹೋರಾಟಗಾರರಾಗಿದ್ದ, ಲೇಖಕ, ವಿಮರ್ಶಕ ದೇವಯ್ಯ ಹರವೆ ಅವರು ಜೂನ್ 18, 1983 ರಂದು ಅಕಾಲ ಮರಣವನ್ನು ಹೊಂದಿದ ಸಂದರ್ಭದಲ್ಲಿ, ದೇವಯ್ಯ ಹರವೆ ಅವರ ಆತ್ಮೀಯ ಒಡನಾಡಿಯಾದ ದೇವನೂರ ಮಹಾದೇವ ಅವರು ಬರೆದ ಸಂತಾಪದ ನುಡಿಗಳು. ‘ಪಂಚಮ’ ಪತ್ರಿಕೆಯ ‘ದಲಿತರು ಮತ್ತು ರೈತ ಚಳವಳಿ’ (ನವೆಂಬರ್, 1983) ವಿಶೇಷಾಂಕವನ್ನು ದೇವಯ್ಯ ಹರವೆ ಅವರಿಗೆ ಅರ್ಪಿಸಲಾಗಿದ್ದು, ‘ಪಂಚಮ’ ಸಂಪುಟ: 07, ಜುಲೈ-05, 1983, ಸಂಚಿಕೆ: 113-114ರಲ್ಲಿ ಈ ಬರಹ ದಾಖಲಾಗಿದೆ. ] 
ನಮ್ಮೆಲ್ಲರ ಹರವೆ ಈಗ ನಮ್ಮ ನಡುವೆ ಇಲ್ಲ! ಹಸಿವು, ಅಸ್ಪೃಶ್ಯತೆಗಳಿಂದ ನೊಂದ ಜನರನ್ನು ತಮ್ಮ ಮೃದು ಮಾತುಗಳಿಂದ ಸಂತೈಸುತ್ತಾ, ಎಚ್ಚರಿಸುತ್ತಾ, ಸಂಘಟಿಸುತ್ತಾ ಕರ್ನಾಟಕದ ತುಂಬಾ ತಿರುಗಾಡುತ್ತಿದ್ದ ಹರವೆಯವರನ್ನು ಸಾವು ಇಲ್ಲವಾಗಿಸಿದೆ. ಆದರೆ, ಸಾವನ್ನು ಮೀರಿದ ಅವರ ಪ್ರೀತಿ ಉತ್ಸಾಹಗಳು ಕರ್ನಾಟಕದ ತುಂಬಾ ತಿರುಗಾಡುತ್ತಲೇ ಇವೆ. ಹಾಗೆ ನೋಡಿದರೆ ಹರವೆ ನಮ್ಮ ನಡುವೆ ಇನ್ನೂ ಬದುಕಿದ್ದಾರೆ.
ನಮ್ಮ ದೇವಯ್ಯ ಹರವೆ ಕಾಲವಶವಾದರು ಎಂದು ಹೇಳಬೇಕಾಗಿ ಬಂದಿರುವ ಬದುಕಿನ ಕ್ರೌರ್ಯಕ್ಕೆ ನಾವು ತುತ್ತಾಗಿದ್ದೇವೆ. 1983ರ ಜೂನ್ 18’ನೇ ದಿನವು, 32 ವಯಸ್ಸನ್ನು ಪೂರ್ಣಗೊಳಿಸದ ದೇವಯ್ಯ ಹರವೆಯನ್ನು ಸಾವು ಎನ್ನುವುದು ಕಿತ್ತುಕೊಂಡಿತು.
ಈ ಸಾವು ನಮ್ಮ ಯಾರದೂ ಸಾವಿನಂತಿದ್ದು, ನಮ್ಮ ದೇವಯ್ಯ ಪುಣ್ಯ ಮಾಡಿದ ಹರವೆ ಮಣ್ಣಿನಲ್ಲಿ ಒಂದಾಗುವಾಗ ನಮ್ಮ ದೇಹದ ಸಾವನ್ನೇ ನಮ್ಮ ಆತ್ಮ ನೋಡುತ್ತಿರುವಂಥ ಏಕತೆಯದಾಗಿತ್ತು.
ನಮ್ಮ ಹರವೆ ಸ್ವಂತದ ಕಷ್ಟ, ನೋವು, ಅವಮಾನಗಳನ್ನು ನುಂಗಿ ಅದನ್ನು ಚೆಲುವು, ಸಂತೋಷವನ್ನಾಗಿಸುವ ಮಾಯಕಾರರಾಗಿದ್ದರು. ನಮ್ಮ ಸಮಾಜದ ಅಸಮತೆ, ಅಮಾನವೀಯ ಯಾತನೆಗಳನ್ನು ಸಮತೆ, ಮಾನವೀಯತೆಯನ್ನಾಗಿ ರೂಪಾಂತರ ಮಾಡಲು ಹೊರಟ ಕನಸುಗಾರರಾಗಿದ್ದರು. ಆದರೀಗ, ಅವರ ಕನಸು ಮಾತ್ರ ಉಳಿದಿದೆ. ಅವರನ್ನು ಈ ಭೂಮಿ ತನ್ನೊಳಕ್ಕೆ ಸೇರಿಸಿಕೊಂಡಿದೆ. ಈ ಕಠೋರ ವಾಸ್ತವವು ನಮ್ಮನ್ನು ತಬ್ಬಲಿ ಮಾಡಿದೆ.
ಯಾಕೆಂದರೆ, ದೇವಯ್ಯ ಹರವೆ ತಾಯಿಯಂಥ ಹೃದಯ ಉಳ್ಳರಾಗಿದ್ದರು. ಆ ತಾಯಿ ಹೃದಯಕ್ಕೆ, ದಲಿತ ಸಂಘದ ತಾಯಿ ಹೃದಯಕ್ಕೆ ಹೃದಯಾಘಾತವಾಗಿದೆ. ನಾವು ತಬ್ಬಲಿಗಳಾಗಿದ್ದೇವೆ. ಹರವೆ ತಮ್ಮ ಕನಸನ್ನು ನಮ್ಮೊಡನೆ ಉಳಿಸಿ ಹೋಗಿದ್ದಾರೆ. ನಾವು ತಬ್ಬಲಿಗಳಾದರೂ ಹರವೆ ಕನಸಿನೊಡನೆ ಇದ್ದೇವೆ. ನಾವು ಉಳಿದಿರುವವರೆಗೂ.