ಆದಿವಾಸಿ ದೈವಗಳ ಮೌಲ್ಯಮಾಪನ ಹಾಗೂ ಶ್ರೀರಾಮನ ನ್ಯಾಯದ ಗಂಟೆ -ದೇವನೂರ ಮಹಾದೇವ

[ಪ್ರಜಾವಾಣಿ ಪತ್ರಿಕೆಯ ವಿಶ್ಲೇಷಣೆ ವಿಭಾಗದಲ್ಲಿ 20.1.2024ರಂದು ಪ್ರಕಟವಾದ ದೇವನೂರ ಮಹಾದೇವ ಅವರ ಲೇಖನದ ವಿಸ್ತೃತ ರೂಪ ]

ಪಂಜು ಗಂಗೊಳ್ಳಿಯವರ `ದೇವರುಗಳ ಮೌಲ್ಯಮಾಪನ ಮತ್ತು ಡಾ.ಖಾನ್ ಎಂಬ ಮುಸ್ಲಿಂ ದೇವತೆ’ ಎಂಬ ಹೃದಯಸ್ಪರ್ಶಿ ಬರಹ ನನ್ನನ್ನು ವಶ ಪಡಿಸಿಕೊಂಡುಬಿಟ್ಟಿತು. ಛತ್ತೀಸ್‌ಘಡದ ಬಸ್ತಾರ್ ಜಿಲ್ಲೆಯ ನೂರಾರು ಬುಡಕಟ್ಟು ಸಮುದಾಯಗಳಲ್ಲಿರುವ, ಜಾತಿಧರ್ಮಗಳನ್ನು ಮೀರಿದ ಧಾರ್ಮಿಕತೆ ಹಾಗೂ ದೇವರುಗಳನ್ನು ಮೌಲ್ಯಮಾಪನ ಮಾಡುವ ಪ್ರಜ್ಞಾವಂತಿಕೆಯು ನನಗೆ ಈ ಭೂಮಿಗೆ ಬೆಳಕು ಎಂಬಂತೆ ಕಾಣಿಸತೊಡಗಿತು.

ಆ ಪ್ರಸಂಗ ಹೀಗಿದೆ: ಬಸ್ತಾರ್ ಜಿಲ್ಲೆಯ ಬುಡಕಟ್ಟು ಜನಾಂಗಗಳ ಪ್ರಮುಖ ದೇವತೆ-   ಬಂಗಾರಾಂದೇವಿ. ವರ್ಷಕ್ಕೊಮ್ಮೆ ಇಲ್ಲಿ `ಭಡೋ ಜಾತ್ರಾ’ ನಡೆಯುತ್ತದೆ. ಅಂದು ೨೪೦ ಹಳ್ಳಿಗಳ ಬುಡಕಟ್ಟು ಸಮುದಾಯಗಳು ತಂತಮ್ಮ ದೇವತಾಮೂರ್ತಿಗಳನ್ನು ಹೊತ್ತು ತಂದು ಅವನ್ನು   ಬಂಗಾರಾಂದೇವಿಯ ಪದತಲದಲ್ಲಿರಿಸುತ್ತಾರೆ.   ಬಂಗಾರಾಂದೇವಿಯ ಸಮ್ಮುಖದಲ್ಲಿ ಪೂಜಾರಿಗಳು ಅಲ್ಲಿಗೆ ತಂದಿಟ್ಟ ದೇವತೆಗಳ ವಿಚಾರಣೆ ನಡೆಸುತ್ತಾರೆ. ಯಾವ ದೇವರು ತಮ್ಮ ಭಕ್ತರ ಸಂಕಟಗಳನ್ನು ನಿವಾರಿಸಲಿಲ್ಲವೊ ಅಂತಹ ದೇವರುಗಳ ದೈವತ್ವವನ್ನು ಅಳಿಸಿ ಹಾಕಿ ಆ ದೇವರುಗಳ ಮೂರ್ತರೂಪವಾದ ಮರದ ಆಕೃತಿ, ಕಲ್ಲಿನ ಆಕೃತಿ, ಪೆಟ್ಟಿಗೆ ಮುಂತಾದವುಗಳನ್ನು ಬಂಗಾರಾಂದೇವಿ ಗುಡಿಯ ಹಿಂಬದಿಯ ಆವರಣದಲ್ಲಿರುವ ಮೂಲೆಯೊಂದರಲ್ಲಿ ಗುಡ್ಡೆ ಹಾಕುತ್ತಾರೆ. ಈ ಮಾಜಿ ದೇವರುಗಳ ಆಕೃತಿಗಳು ಬಿಸಿಲಲ್ಲಿ ಒಣಗುತ್ತ, ಮಳೆಗೆ ತತ್ತರಿಸುತ್ತ, ಚಳಿಗೆ ನಡುಗುತ್ತ, ಮರಗಳ ಬುಡಕ್ಕೆ ಒರಗಿಕೊಂಡೊ, ಪೊದೆಗಳಲ್ಲಿ ಸಿಕ್ಕಿಹಾಕಿಕೊಂಡೊ ಬಿದ್ದಿರುತ್ತವೆ.

ಇಲ್ಲೊಂದು ಸೋಜಿಗವಿದೆ: ಬಸ್ತಾರ್‌ನ ಕೇಶಕಾಲ್ ಪರ್ವತದ ತುದಿಯಲ್ಲಿರುವ ಗುಡಿಯ ಮಣ್ಣಿನ ವೇದಿಕೆಯ ಮೇಲೆ ಶಿವಲಿಂಗಾಕೃತಿಯ ಕಪ್ಪುಮರದ ತುಂಡನ್ನು ಪ್ರತಿಷ್ಠಾಪಿಸಲಾಗಿದೆ. ಅಲ್ಲೊಂದು ಹಣತೆ ಬೆಳಗುತ್ತಿರುತ್ತದೆ. `ಸರ‍್ದೊಂಗಾರ್’ ಜಾತ್ರೆ ಸಮಯದಲ್ಲಿ ಗುಡಿಯ ಬಾಗಿಲು ತೆರೆದಾಗ ಸುತ್ತಲಿನ ಬುಡಕಟ್ಟು ಸಮುದಾಯಗಳ ಸಹಸ್ರಾರು ಜನರು ಆ ದೇವರ ದರ್ಶನ ಪಡೆಯುತ್ತಾರೆ. ಇತರ ದೇವತೆಗಳೂ ಕೂಡ ಈ ದೇವರ ದರ್ಶನಕ್ಕೆ ಆಗಮಿಸುತ್ತಾರೆ ಎಂಬ ಪ್ರತೀತಿ ಇದೆ. ಆ ದೇವತೆಯ ಹೆಸರು ಡಾ.ಖಾನ್.

ಇನ್ನೂರು ವರ್ಷಗಳ ಹಿಂದೆ ಬಸ್ತಾರ್‌ನಲ್ಲಿ ಸಂಭವಿಸಿದ ಕಾಲರಾ, ಸಿಡುಬು ಪಿಡುಗುಗಳು ಜನರನ್ನು ಬಲಿ ತೆಗೆದುಕೊಳ್ಳತೊಡಗಿದ್ದಾಗ, ಅಲ್ಲಿಗೆ ಆಗಮಿಸಿದಾತ ಇಸ್ಲಾಂ ಧರ್ಮದ ಡಾ.ಖಾನ್. ಜನರನ್ನು ಸಾವಿನ ದವಡೆಯಿಂದ ಪಾರು ಮಾಡಿದಾತ. ಅಲ್ಲೆ ನೆಲೆ ನಿಂತು ಜನಸೇವೆಯನ್ನು ಮುಂದುವರಿಸಿದಾತ. ಡಾ.ಖಾನ್ ಕಾಲವಶವಾದ ಮೇಲೆ ಬುಡಕಟ್ಟು ಸಮುದಾಯ ಡಾ.ಖಾನ್‌ಸಾಹೇಬರನ್ನು ದೇವತೆಯನ್ನಾಗಿಸಿ ಪೂಜಿಸುತ್ತಿದ್ದಾರೆ. ಹೀಗೆಲ್ಲಾ ಇದೆ, ಈ ನೆಲದಲ್ಲೆ, ನಮ್ಮಲ್ಲೆ.

ಆದರೆ ನಮ್ಮೊಳಗೆ ದೈವಗಳ ಮೌಲ್ಯಮಾಪನ ಮಾಡುವ ಪ್ರಜ್ಞಾವಂತಿಕೆ ಇದೆಯೆ? ದೇವರುಗಳು ಇರಲಿ, ನಾವೇ ಆಯ್ಕೆ ಮಾಡಿದ ಜನಪ್ರತಿನಿಧಿಗಳ ಮೌಲ್ಯಮಾಪನವನ್ನೂ ನಾವು ಮಾಡುತ್ತಿಲ್ಲ. ಹೀಗಿರುವಾಗ ನಮ್ಮ ಸಂಕಟಗಳು ಪರಿಹಾರ ಕಾಣುವುದಾದರೂ ಹೇಗೆ? ಈ ಭೂಮಿಗೆ ತಂದೆತಾಯಿಗಳಾದ ಬುಡಕಟ್ಟು ಸಮುದಾಯಗಳು ತಮ್ಮ ದೈವವನ್ನು ವಿಚಾರಣೆ ಮಾಡಿ ಅನುಪಯುಕ್ತ ದೈವವನ್ನು ಆಚೆ ಬಿಸಾಡುವಷ್ಟು ಪ್ರಜ್ಞಾವಂತರಾಗಿರುವಾಗ ಆ ಆದಿವಾಸಿಗಳ ಸಂತಾನವಾದ ನಾವು ಮೂಢಾತ್ಮರಾಗಿ ಬಿಟ್ಟಿದ್ದೇವೆ. ಆದಿವಾಸಿ ಮೂಲಗಳಿಂದ ಬೇರ್ಪಟ್ಟ ನಾವು, ನಮ್ಮ ಪೂರ್ವಿಕರ ಇಂದಿಗೂ ಸಲ್ಲಬಹುದಾದ ಒಳಿತಿನ ಅಂಶಗಳನ್ನು ಆಯ್ದುಕೊಂಡು ಮುಂದುವರಿಸಲಾಗದ, ಎಚ್ಚರತಪ್ಪಿದ ಜನಸ್ತೋಮವಾಗಿಬಿಟ್ಟಿದ್ದೇವೆ. ಈಗಲಾದರೂ ನಾವು ಪ್ರಜ್ಞೆ ಪಡೆದುಕೊಂಡು, ನಮ್ಮ ಭವಿಷ್ಯ ರೂಪಿಸಲು ನಾವೇ ಆಯ್ಕೆ ಮಾಡಿಕೊಂಡ ಹಾಲಿ ಇರುವ ನಮ್ಮ ಸಂಸತ್ ಸದಸ್ಯರನ್ನು ಮತದಾರ ಪ್ರಭುವಿನ ಪದತಲದಲ್ಲಿಟ್ಟು ಮೌಲ್ಯಮಾಪನ ಮಾಡಬೇಕಿದೆ. ನನಗನ್ನಿಸುತ್ತದೆ, ಆಗ ಶೇಕಡ ೯೦ರಷ್ಟು ಸಂಸತ್ ಸದಸ್ಯರನ್ನು, ಸಂಸತ್‌ಭವನದ ಆಚೆಗೆ ಬಿಸಾಕಬೇಕಾಗಿ ಬರಬಹುದು.

ಈಗಲೇ ಎಚ್ಚರ ವಹಿಸೋಣ- ಮುಂದೆ ಕೆಲವೇ ತಿಂಗಳಲ್ಲಿ ೨೦೨೪ರ ಲೋಕಸಭೆ ಚುನಾವಣೆ ಬರುತ್ತಿದೆ. ಮುಂಬರುವ ಚುನಾವಣೆಯಲ್ಲಾದರೂ ಮೌಲ್ಯಮಾಪನ ಪ್ರಜ್ಞೆಗಳಿಸಿಕೊಂಡು ನಾವು- “ನಮ್ಮ ಪ್ರಜಾಪ್ರಭುತ್ವದ ಯೋಗಕ್ಷೇಮ, ನ್ಯಾಯಾಂಗ ಹಾಗೂ ಸ್ವಾಯತ್ತಸಂಸ್ಥೆಗಳ ಸ್ವಾಯತ್ತತೆಯ ಸ್ಥಿತಿಗತಿ, ಆಳುವವರ ಕಾಲ್ತುಳಿತಕ್ಕೆ ಸಿಲುಕಿದ- ರಾಜ್ಯಗಳ ಒಕ್ಕೂಟ ವ್ಯವಸ್ಥೆ, ಸಾಮಾಜಿಕ ನ್ಯಾಯ, ಮಹಿಳಾ ಮೀಸಲಾತಿ, ಸ್ವಾಮಿನಾಥನ್ ವರದಿ ಹಾಗೂ ಶಿಕ್ಷಣ, ಆರೋಗ್ಯ, ಉದ್ಯೋಗಗಳ ಅಧೋಗತಿಯ ಮೌಲ್ಯಮಾಪನ ಮಾಡಬೇಕಾಗಿದೆ. ನಾವು ಕಣ್ತೆರೆದು- ಕರೋನಾ ಕಾಲದಲ್ಲೂ ಹೆಚ್ಚಳವಾದ ಪ್ರಧಾನಿ ಪರಮಾಪ್ತ ಬಂಡವಾಳಿಗರ ಸಂಪತ್ತಿನ ಒಳಹೊಕ್ಕು ನೋಡಬೇಕಾಗಿದೆ. ಹಣದುಬ್ಬರ, ಬೆಲೆ ಏರಿಕೆಗೆ ಜನಸಾಮಾನ್ಯರು ಹೊರುವ ತೆರಿಗೆ ಮತ್ತು ಪ್ರಾಕೃತಿಕ ಸಂಪತ್ತು- ಸರ್ವವೂ ಪ್ರಧಾನಿ ಪರಮಾಪ್ತ ಬಂಡವಾಳಿಗರ ಸಂಪತ್ತಿಗೆ ಜಮಾ ಆಗುತ್ತಿದೆ. ಈ ಗೋಲ್‌ಮಾಲ್ ತಡೆಗಟ್ಟಿದರೆ ಮಾತ್ರ ಭಾರತವು ಉಳಿಯುತ್ತದೆ.

ಈಗ ನಾವು ಮಾಡಬೇಕಾಗಿರುವುದು ಇಷ್ಟೆ. ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷಗಳು, ಅಭ್ಯರ್ಥಿಗಳು ಮತ ಯಾಚಿಸಲು ಬಂದಾಗ ನಾವು ಕೇಳಬೇಕು- `ನಿಮ್ಮ ನುಡಿ ಮತ್ತು ನಡೆಯನ್ನು ನಾವು ಮೌಲ್ಯಮಾಪನ ಮಾಡುತ್ತೇವೆ, ಮುಂದೆ ನಿಮ್ಮ ಚುನಾವಣಾ ಜುಮ್ಲಾ(ಸುಳ್ಳು) ಸಹಿಸೆವು’ ಎಂದು ಖಡಕ್ಕಾಗಿ ಎಚ್ಚರಿಸಿದರೆ ಈ ದೇಶ ಅಷ್ಟೊ ಇಷ್ಟೊ ಮುನ್ನಡೆಯಬಹುದು. ಜನಸಾಮಾನ್ಯರ ಸಂಕಷ್ಟಗಳು ಅನುಭವಿಸುವವರಿಗೇ ತಟ್ಟದಂತೆ ಮಾಡಿರುವ ಆಳ್ವಿಕೆಯ ವಂಚನೆಯ  ಸಮ್ಮೋಹನಾಸ್ತ್ರ, ದ್ವೇಷಾಸ್ತ್ರ ಅಸಹನಾಸ್ತ್ರ ಭ್ರಮಾಸ್ತ್ರಗಳ ಪ್ರಭಾವಗಳಿಂದ ಹೊರ ಬಂದಾಗ ಮಾತ್ರ ನಮಗೆ ಜನಪ್ರತಿನಿಧಿಗಳ ಮೌಲ್ಯಮಾಪನ ಮಾಡಲು ಸಾಧ್ಯವಾಗುತ್ತದೆ.

ಮೊದಲು ಜನಸ್ತೋಮದ ಮೇಲೆ ಎಸೆದಿರುವ ಮಾಯಾಬಲೆಯ ಚಹರೆ ಗುರುತಿಸಬೇಕಾಗಿದೆ. ಇತ್ತೀಚೆಗೆ ತುಂಬಾ ವ್ಯವಸ್ಥಿತವಾಗಿ `ಹಿಂದುತ್ವ’ದ ಕಹಳೆ ಊದಲಾಗುತ್ತಿದೆ. ಈಗ, ‘ಹಿಂದೂ’ ಮೇಲೆ `ಹಿಂದುತ್ವ’ ಸವಾರಿ ಮಾಡುತ್ತಿದೆ. ಸ್ಪಷ್ಟತೆಗಾಗಿ ಉದಾಹರಣೆಗೆ- `ನಾನು’ ಎಂಬ ಪದವನ್ನು ನಾವು ಬಳಸುತ್ತೇವೆ. ಇದು ನಂನಮ್ಮ ಗುರುತಿಗಿರುವ ಪದ. ಆದರೆ ನಾನತ್ವ? ಇದು ಬೇರೆಯವರ ಮೇಲೆ ಸವಾರಿ ಮಾಡುವ ಅತಿರೇಕ. ಹೀಗೆಯೇ ಹಿಂದೂ, ಹಿಂದೂಸ್ಥಾನ ಕೂಡ ಗುರುತಿಸುವ ಪದಗಳೇ. ಆದರೆ ಚಾತುರ‍್ವರ್ಣದ ಹಿಂದುತ್ವ? ಇದು ನಾನತ್ವದಂತೆಯೇ ಅತಿರೇಕ, ಜೊತೆಗೆ ವಿನಾಶಕಾರಿ. ನಾನು, ನನ್ನದು ಮಾತ್ರ ಮುಖ್ಯ ಎಂಬಲ್ಲಿಗೆ ಇದು ಕರೆದೊಯ್ಯುತ್ತದೆ. ಆದರೆ ನಮ್ಮ ಪುರಾಣ, ಚರಿತ್ರೆ, ಮಹಾಕಾವ್ಯಗಳಲ್ಲಿ- ನಾನತ್ವ ಹೆಚ್ಚಾದಾಗ ಅದರ ಗರ್ವಭಂಗವೂ ನಡೆಯುತ್ತಾ ಬಂದಿದೆ. ಭೀಮನಿಗೆ ತನ್ನ ಬಲದ ಅಹಂ ಅತಿಯಾದಾಗ, ಅವನಿಗೆ ಹನುಮನ ಬಾಲವನ್ನು ಅಲುಗಾಡಿಸಲಾಗಲಿಲ್ಲ. ಯಾವುದೇ ಅತಿಯಾದಾಗ ಅದು ಇಳಿಯಲೇಬೇಕಾಗುತ್ತದೆ. ಇದು ಭಾರತದ ಸಮಷ್ಟಿ ಪ್ರಜ್ಞೆಯಲ್ಲೇ ಇದೆ.

ಈಗ `ಸನಾತನ’ವನ್ನೂ ಹಬ್ಬಿಸಲಾಗುತ್ತಿದೆ. ಸಮಾಜವನ್ನು ಕದಡಿ ಬಗ್ಗಡ ಮಾಡಲಾಗಿದೆ. ತಿಳಿಯಾಗಲು ಯಾರೂ ಬಿಡುತ್ತಿಲ್ಲ. ಅಷ್ಟಕ್ಕೂ ಸನಾತನ ಅಂದರೆ ಏನು? ಪುರಾತನ ಕಾಲದಿಂದಲೂ ಸಾಗುತ್ತ ವರ್ತಮಾನದಲ್ಲೂ ಇರುವ ಸಂಗತಿಗಳು. ಇವುಗಳಲ್ಲಿ ಇಂದಿಗೂ ಒಳಿತೆನ್ನಿಸುವ ಮೌಲ್ಯಗಳು ಇರುತ್ತವೆ. ಹಾಗೆಯೇ ಕೆಡುಕಿನ ಅಪಮೌಲ್ಯಗಳೂ ಇರುತ್ತವೆ. ಬಸ್ತಾರ್‌ನ ನಮ್ಮ ಆದಿವಾಸಿಗಳಲ್ಲಿ ದೇವರುಗಳ ಮೌಲ್ಯಮಾಪನದಂತಹ ಇಂದಿಗೆ ಅತ್ಯಗತ್ಯವಾದ ಮೌಲ್ಯವಿರುವಂತೆ, ಇಂದಿಗೆ ಸಲ್ಲದ ಅಪಮೌಲ್ಯಗಳು ಬಹಳಷ್ಟು ಇರಬಹುದು. ಹೀಗಿರುವಾಗ ಯಾರಾದರೂ ‘ನನ್ನದು ಸನಾತನ ಧರ್ಮ, ಸನಾತನ ಸಮುದಾಯ’ ಅಂದರೆ- ‘ನನ್ನಲ್ಲಿರುವ ಕೆಡುಕು ಅಪಮೌಲ್ಯಗಳನ್ನೂ ಒಪ್ಪಿಕೋ’ ಅಂತಲೇ ಇದರ ಅರ್ಥ. ಇದು ಸಲ್ಲದು. ಈ ಭೂಮಿ ಮೇಲೆ ಇರುವ ಮಾನವೀಯ, ಆರೋಗ್ಯಕರವಾದ, ಸನಾತನ ಮೌಲ್ಯಗಳನ್ನು ಕೂಡಿಸಿಕೊಳ್ಳುತ್ತಾ ಹಾಗೂ ಅನಾಗರೀಕ ಅನಾರೋಗ್ಯಕರವಾದ ಅಪಮೌಲ್ಯಗಳನ್ನು ವಿಸರ್ಜಿಸುತ್ತಾ ಸಾಗಬೇಕಾಗಿದೆ. ಉದಾಹರಣೆಗೆ- ಕಾರುಣ್ಯ, ಸಹನೆ, ಪ್ರೀತಿ, ಸಹಬಾಳ್ವೆ, ಎಲ್ಲರಿಗೂ ಒಂದೇ ನ್ಯಾಯ, ತನ್ನಂತೆ ಪರರ ಬಗೆಯುವುದು ಇತ್ಯಾದಿ ಪುರಾತನ ಕಾಲದ ಮೌಲ್ಯಗಳು ಇಂದಿಗೂ ಹಣತೆಯ ಬೆಳಕಿನಂತೆ ಉಳಿದು ಬಂದಿವೆ. ಇವು ಸನಾತನ ಮೌಲ್ಯಗಳು. ಜೊತೆಗೇ- ಚಾತರ‍್ವರ್ಣ, ಜಾತಿಭೇದ, ಅಸಹನೆ, ದ್ವೇಷ ಇತ್ಯಾದಿಗಳೂ ಪುರಾತನ ಕಾಲದಿಂದ ಇಂದಿಗೂ ಉಳಿದು ಬಂದಿವೆ. ಇವೂ ಸನಾತನವೆ. ಆದರೆ ಇವು ಅಪಮೌಲ್ಯಗಳು. ಇವು ಪಂಜಿನಂತೆ ಧಗಧಗಿಸಿ ಉರಿಯುತ್ತಿರುತ್ತವೆ. ಇಂದು, ಸನಾತನ ಮೌಲ್ಯಗಳು ಹಾಗೂ ಸನಾತನ ಅಪಮೌಲ್ಯಗಳ ನಡುವೆ ಘರ್ಷಣೆ ನಡೆಯುತ್ತಿದೆ. ಈ ಘರ್ಷಣೆಯಲ್ಲಿ ಮುಳುಗಿದವರು, ಜನಪ್ರತಿನಿಧಿಗಳ ಮೌಲ್ಯಮಾಪನ ಮಾಡಲು ಅಗತ್ಯವಾದ ಪ್ರಜ್ಞೆ ಇಲ್ಲದವರಾಗಿರುತ್ತಾರೆ. ಇಷ್ಟೆಲ್ಲಾ ಇದ್ದೂ ಭಾರತದ ಸಮಷ್ಠಿ ಪ್ರಜ್ಞೆಗೆ, ಮುಳುಗುವ ಕಾಲದಲ್ಲಿ ಕೈ ಹಿಡಿದು ಮೇಲೆತ್ತುವ ಸತ್ವವಿದೆ. ಇದಕ್ಕೆ ಪೂರಕವಾಗಿ ರೈತ ಕಳೆಕಿತ್ತು ಬೆಳೆ ಬೆಳೆಯುವ ವಿವೇಕ ನಮಗೂ ಇರಬೇಕಾಗುತ್ತದೆ.

ಈಗ, ಭಾರತವನ್ನು ಅಯೋಧ್ಯೆಯ ರಾಮಮಂದಿರದ ಸಂಭ್ರಮ ಆವರಿಸಿಕೊಂಡಿದೆ. ಇಂದು ಶ್ರೀರಾಮನ ವಚನಪಾಲನೆಯ ಮೌಲ್ಯವನ್ನು ಭಾರತ ಸಂಭ್ರಮಿಸಬೇಕಿತ್ತು. ಇದು ಕಾಣುತ್ತಿಲ್ಲ. ಹಳ್ಳಿಗಾಡಲ್ಲಿರುವ ಕೆಲವು ರಾಮಮಂದಿರಗಳು ಜೂಜಿನ ತಾಣಗಳೂ ಆಗಿವೆ. ಅಯೋಧ್ಯೆಯ ರಾಮಮಂದಿರಕ್ಕೆ ರಾಜಕೀಯದ ಜೂಜಿನ ಸೋಂಕು ತಗುಲಬಾರದಿತ್ತು.

ಶ್ರೀರಾಮನ ಅರಮನೆ ಮುಂದೆ ಒಂದು ನ್ಯಾಯದ ಗಂಟೆ ಇತ್ತಂತೆ. ಒಂದಿನ ಒಂದು ಕುದುರೆಯು ನ್ಯಾಯದ ಗಂಟೆ ಎಳೆದಾಗ ಶಬ್ದ ಕೇಳಿ ಹೊರಬಂದ ಶ್ರೀರಾಮ ಆ ಹಸಿವಿನಿಂದ ಬಳಲುತ್ತಿದ್ದ ಕುದುರೆಗೆ ನ್ಯಾಯ ಕೊಡಿಸುತ್ತಾನಂತೆ. ಭಾರತಕ್ಕೂ ಇಂತಹ ಕಣ್ಣು, ಕಿವಿ, ಹೃದಯ ಇರುವ ನ್ಯಾಯವಂತ ಮನುಷ್ಯ ಆಳ್ವಿಕೆ ನಡೆಸುವುದು ತುರ್ತಾಗಿ ಬೇಕಾಗಿದೆ. ಅಯೋಧ್ಯೆಯ ರಾಮಮಂದಿರದಲ್ಲೂ ಒಂದು ನ್ಯಾಯದ ಗಂಟೆ ಕಟ್ಟಿಸುವಂತಾಗಲಿ, ನೊಂದುಬೆಂದ ಸಕಲಜೀವಿಗಳೂ ನ್ಯಾಯದ ಗಂಟೆ ಬಾರಿಸುವಂತಾಗಲಿ. ಅದು ಡೆಲ್ಲಿ ದರ್ಬಾರಿಗೂ ಕೇಳಿಸಬಹುದೆ?