ಅನ್ನ ತಿನ್ನುವವರೆಲ್ಲರೂ ಪ್ರತಿಭಟಿಸಿ- ದೇವನೂರ ಮಹಾದೇವ

(ಸರ್ವೋದಯ ಕರ್ನಾಟಕ ಪಕ್ಷದಿಂದ 2013ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಶಾಸಕರಾಗಿ ಆರಿಸಿ ಬಂದಿದ್ದ ರೈತ ಹೋರಾಟಗಾರ ಕೆ.ಎಸ್.ಪುಟ್ಟಣ್ಣಯ್ಯನವರಿಗೆ ಶಿವಮೊಗ್ಗದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರೈತಸಂಘವು ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ದೇವನೂರ ಮಹಾದೇವ ಅವರು ಆಡಿದ್ದ ಈ ಮಾತುಗಳನ್ನು ಬರಹಕ್ಕಿಳಿಸಿ ಕಳಿಸಿದ್ದವರು ಬಿ.ಎಲ್.ರಾಜು, ಸಹಾಯಕ ಪ್ರಾಧ್ಯಾಪಕರು, ಇಂದಿರಾ ಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಸಾಗರ, ಶಿವಮೊಗ್ಗ ಜಿಲ್ಲೆ. ಇದನ್ನು 17 ಜೂನ್ 2013ರ ಆಂದೋಲನ ಪತ್ರಿಕೆಯಲ್ಲಿ ವರದಿಯಾಗಿ ಪ್ರಕಟಿಸಲಾಗಿತ್ತು.)
ಎಲ್ಲಾ ಸ್ನೇಹಿತರೆ,
ನಾನು ನಿಮಗೆ ಒಂದು ಕತೆ ಹೇಳ್ತಿನಿ. ಅದು ನಿಮಗೂ ಗೊತ್ತಿರುವ ಕತೆ. ಒಂದೂರಲ್ಲಿ ಒಬ್ಬ ಒಂದು ಕೋಳಿ ಸಾಕಿದ್ದನಂತೆ, ಆ ಕೋಳಿ ವಿಶೇಷ ಏನು ಅಂದರೆ ದಿನಾಲು ಅದು ಚಿನ್ನದ ಮೊಟ್ಟೆ ಇಡ್ತಿತ್ತಂತೆ. ಆಸೆ ಮಿತಿ ಮೀರಿದ ಮಾಲೀಕ ದಿನಾಲು ಒಂದೊಂದೆ ಮೊಟ್ಟೆಗಾಗಿ ಕಾಯೊ ಬದಲು ಒಂದೇ ಸಲ ಎಲ್ಲಾ ಚಿನ್ನದ ಮೊಟ್ಟೆಗಳನ್ನೂ ತೆಗೊಂಡರೆ ಹೆಂಗೆ ಅಂತ ಯೋಚನೆ ಮಾಡಿ, ಕೋಳಿನ ಕೊಯ್ದನಂತೆ. ಕೊಯ್ದ ಮೇಲೆ ನೋಡಿದರೆ ಗೊತ್ತಾಯ್ತು, ಮೊಟ್ಟೆಯೂ ಇಲ್ಲ, ಕೋಳಿಯೂ ಇಲ್ಲ ಅಂತ.
ಇದನ್ನ ಪುರಾಣದ ಕತೆ ಅನ್ನಬೇಕಿಲ್ಲ. ಜಾನಪದ ಕತೆ ಅಂತಲೂ ಅನ್ನಬೇಕಿಲ್ಲ. ಇದು ಈ ಹೊತ್ತಿನ ವಾಸ್ತವ. ನಮ್ಮ ಮುಂದೇನೆ ನಡೀತಿರೋ ಸತ್ಯ. ಭೂ ಬ್ಯಾಂಕ್ ಹೆಸರಲ್ಲಿ ಇವತ್ತು ಕೆಐಎಡಿಬಿ ರಾಜ್ಯದಲ್ಲಿ ಬಡವರ, ಅನ್ನದಾತರ ಭೂಮಿಯನ್ನ ಕಿತ್ತುಕೊಳ್ಳುತ್ತಿದೆ. ಆ ಮೂಲಕ ಚಿನ್ನದ ಮೊಟ್ಟೆ ಇಡುವಂಥ ಕೋಳಿಯ ಕತ್ತು ಕತ್ತರಿಸೋ ಕೆಲಸ ನಡೀತಿದೆ.
ಸ್ವಾತಂತ್ರ್ಯ ಬಂದ ಮೇಲೆ ಕರ್ನಾಟಕದಲ್ಲಿ ಕೈಗಾರಿಕೆಗಳ ಹೆಸರಲ್ಲಿ ಭೂಮಿ ಸ್ವಾಧೀನ ನಡೀತಿದೆ. ಕಳೆದ ಎರಡು ವರ್ಷಗಳಲ್ಲಿ ಒಂದು ಲಕ್ಷ ಎಕರೆಗಳಿಗಿಂತಲೂ ಹೆಚ್ಚು ಭೂಮಿ ವಶಪಡಿಸಿಕೊಳ್ಳಲಾಗಿದೆ.
ಮತ್ತೊಂದು ಕಡೆ ಏನಾಗ್ತಿದೆ ನೋಡಿ, ಭೂ ಬ್ಯಾಂಕ್ನೋರು ತಮ್ಮ ಭೂಮಿಯನ್ನು ಸ್ವಾಧೀನ ಮಾಡ್ಕೊಳ್ಳೋದು ಗ್ಯಾರಂಟಿ ಅನ್ನಿಸಿದ ಕೂಡಲೆ ರೈತರು ಎಕರೆಗೆ ಐದಾರು ಲಕ್ಷ ರೂಪಾಯಿಗಳಂತೆ ಜೆಸಿಬಿಗಳ ಮೂಲಕ ಮಣ್ಣು ಬಗೆದು ಮಾರಿಕೊಳ್ಳತೊಡಗಿದ್ದಾರೆ.
ಎಂಥಾ ಸ್ಥಿತಿ ಬಂದಿದೆ ನೋಡಿ. ಹಿಂದೆ ಬರಗಾಲ ಬಂದಾಗ ಜನ ತಾವು ಹೆತ್ತ ಮಕ್ಕಳನ್ನೇ ಮಾರಿ ಭತ್ತ ಕೊಂಡುಕೊಳ್ತಿದ್ದರು ಅನ್ನೋ ಮಾತು ನೆನಪಾಗ್ತದೆ. ಹೆತ್ತ ಮಕ್ಕಳನ್ನು ಮಾರಿಕೊಳ್ಳೋದಕ್ಕೂ ಭೂಮಿಯ ಮಣ್ಣು ಬಗೆದು ಮಾರೋದಕ್ಕೂ ಏನು ವ್ಯತ್ಯಾಸ ಇದೆ ಹೇಳಿ?
ಆದ್ದರಿಂದ ಸರ್ಕಾರ ಭೂಮಿಯನ್ನು ವಶಪಡಿಸಿಕೊಳ್ಳಬಾರದು. ಯಾಕೆ ಅಂದರೆ ಇದುವರೆಗೆ ಹಾಗೆ ವಶಪಡಿಸಿಕೊಂಡ ಭೂಮಿಯನ್ನು ಸರ್ಕಾರ ಬಂಡವಾಳಶಾಹಿಗಳಿಗೆ ಲೀಸ್ಗೆ ಕೊಡ್ತಾ ಬಂದಿದೆ. ಏಕ್ ದಂ ನೂರು ವರ್ಷ ಲೀಸ್! ಆದರೆ ಇತ್ತೀಚೆಗೆ ಒಂದು ತಿದ್ದುಪಡಿ ತಂದರು. ಅದರ ಪ್ರಕಾರ ಲೀಸ್ಗೆ ಪಡೆದ ಭೂಮಿ ಈಗ ಕ್ರಯಕ್ಕೆ ಆಗ್ತಾ ಇದೆ.
ನೋಡಿ, ತಮಿಳುನಾಡಿನಲ್ಲಿ ಒಂದು ಎಕರೆ ಮಾತ್ರ ಗುಡಿ ಕೈಗಾರಿಕೆಗೆ ಕ್ರಯ ಮಾಡಿಕೊಡ್ತಾ ಇದ್ದಾರೆ. ಇನ್ನುಳಿದಂತೆ ಎಷ್ಟು ಎಕರೆ ಬೇಕಾದ್ರೂ ಲೀಸ್ಗೆ ಮಾತ್ರ. ಮಹಾರಾಷ್ಟ್ರದಲ್ಲಿ ಭೂಮಿ ಕ್ರಯಕ್ಕೇ ಇಲ್ಲ, ಲೀಸ್ಗೆ ಮಾತ್ರ. ನೀನು ಮಾಡಿದ್ರೆ ಮಾಡು, ಬಿಟ್ರೆ ಬಿಡು. ಗುಜರಾತ್ನಲ್ಲೂ ಕೂಡ ಕ್ರಯ ಇಲ್ಲ. ಲೀಸ್ ಮಾತ್ರ. ನಿನ್ನ ಉದ್ದೇಶ ಇಂಥದಕ್ಕೇ ಅಂತ ತಗೊಳ್ತಿಯಾ, ನೀನು ಉದ್ದೇಶ ತಪ್ಪಿದ್ರೆ ಆ ಭೂಮಿಯನ್ನು ಸರ್ಕಾರ ವಶಪಡಿಸಿಕೊಳ್ತದೆ. ಈ ರೀತಿ ಯೋಜನೆ ಇದೆ.
ಆದರೆ, ಕರ್ನಾಟಕದಲ್ಲಿ ಲೀಸ್ಗೆ ತಗೊಂಡ ಭೂಮಿಯನ್ನ ಕ್ರಯ ಮಾಡಿಸಿಕೊಳ್ತಿದ್ದಾರೆ. ಕ್ರಯ ಮಾಡಿಸಿಕೊಂಡರೆ ಏನು ಮಾಡಬಹುದು? ನಾಳೆ ಆ ಭೂಮಿ ಕ್ರಯ ಮಾಡಿಸಿಕೊಂಡವನ ಭೂಮಿ ಆಗ್ತದೆ. ಅವನನ್ನ ಕೇಳೊ ಹಕ್ಕು ಇರಲ್ಲ.
ಈಗ ಉದಾಹರಣೆಗೆ ಹೇಳೋದಾದರೆ, ಆ ಭೂಮೀನ ಎಕರೆಗೆ ಒಂದು ಲಕ್ಷ ರೂಪಾಯಿಯಂತೆ ತಗೋತಾನೆ, ಸರ್ಕಾರ ಅವನಿಗೆ ಭೂಮಿ ಕೊಡ್ತದೆ, ಭೂ ಬ್ಯಾಂಕ್ ಅವನಿಗೆ ಭೂಮಿ ಕೊಡ್ತದೆ.
ಕ್ರಯ ಆದ ಮೇಲೆ ಆತ ಭೂಮಿಯನ್ನ ಒಂದು ಕೋಟಿ ರೂಪಾಯಿಗೆ ಮಾರಿಕೊಳ್ತಾನೆ, ಅವನನ್ನ ಕೇಳೋ ಹಕ್ಕು ಯಾರಿಗೂ ಇಲ್ಲ. ಸರ್ಕಾರಕ್ಕೂ ಇಲ್ಲ. ಈಗ ನಡೀತಿರೋದೆ ಈ ದಂಧೆ. ಅಂದ್ರೆ ನೂರು ಪಟ್ಟು ಲಾಭ. ಅಂದ್ರೆ ಬಂಡವಾಳ ಹಾಕಿ ಬಂಡವಾಳ ಮಾಡೋದು! ಇದನ್ನ ಯಾರ್ಯಾರು ಹಂಚಿಕೊಳ್ತಾ ಇದ್ದಾರೊ ಅರ್ಥ ಆಗ್ತಾ ಇಲ್ಲ.
ಸರ್ಕಾರ ಈಗಲಾದರೂ ಈ ಭೂ ಬ್ಯಾಂಕ್ನ್ನ ಹಿಂದಕ್ಕೆ ತೆಗೋಬೇಕು. ಇಲ್ಲದೆ ಇದ್ರೆ ಇದು ಯಾರ್ಯಾರನ್ನ ಎಷ್ಟೆಷ್ಟು ವಿನಾಶ ಮಾಡುತ್ತೋ ಊಹೆಗೂ ಸಿಗೋದಿಲ್ಲ. ಇದನ್ನ ಸರ್ಕಾರ ಹಿಂದಕ್ಕೆ ತೆಗೊಳ್ಳದೇ ಇದ್ದರೆ, ಇಡೀ ಜನತೆ ತಮ್ಮ ಉಳಿವಿಗಾಗಿ ಭೂಮಿಯನ್ನ ಕಾಪಾಡಿಕೊಳ್ಳೋದಕ್ಕೆ ಮುಂದಾಗಬೇಕಾಗ್ತದೆ, ಇಲ್ಲದಿದ್ದರೆ ತುಂಬಾ ಕಷ್ಟ.
ಕ್ರಯ ಮಾಡೋದನ್ನ ಕೂಡಲೇ ನಿಲ್ಲಿಸಬೇಕಾಗಿದೆ, ಭೂಮಿ ಕೊಡೋದಾದ್ರೆ ಕೊಡಲಿ, ಆದರೆ ಲೀಸ್ಗೆ ಮಾತ್ರ ಕೊಡಲಿ, ಆ ಕಾನೂನು ಮತ್ತೆ ಜಾರಿಗೆ ಬರಬೇಕು. ಮತ್ತು ಆ ಭೂ ಬ್ಯಾಂಕ್ ಅನ್ನೋದು ಇರಬಾರದು. ಅದನ್ನ ಸರ್ಕಾರ ಹಿಂದಕ್ಕೆ ತಗೋಬೇಕು.
ಇದನ್ನ ಭೂಮಿ ಇರುವವರು ಮಾತ್ರ ಒತ್ತಾಯ ಮಾಡೋದಲ್ಲ, ಯಾರ್ ಯಾರು ಅನ್ನ ತಿನ್ನುವವರು ಇದ್ದಾರೊ, ಅವರೆಲ್ಲಾ ಪ್ರತಿಭಟಿಸಬೇಕು. ಇಲ್ಲದಿದ್ರೆ ನಾಳೆ ನಾಡಿನ ಕಷ್ಟಕ್ಕೆ ಇಡೀ ಸಮುದಾಯ ಸಿಕ್ಕಿಕೊಳ್ತದೆ. ದುರಂತಮಯ ಬದುಕಿಗೆ ಕಾರಣವಾಗ್ತದೆ. ಇದು ಒಂದು ಎಳೆ ಮಾತ್ರ. ಇನ್ನೂ ಬೇರೆ ಬೇರೆ ವಿವರಗಳು ಇದ್ದಾವೆ ನನ್ನ ಹತ್ರ. ಅದರ ಅಗತ್ಯ ಈಗ ಇಲ್ಲ. ಇಷ್ಟು ಹೇಳ್ತಿನಿ.
ಈ ಹಿನ್ನೆಲೆಯಲ್ಲಿ ನಾನು ಕೇಳ್ತಿನಿ. ಈಗ ವಿಧಾನಸಭೆ ಅಧಿವೇಶನ ಆರಂಭ ಆಗಿದೆ. ಎಷ್ಟು ಜನ ವಿರೋಧ ಪಕ್ಷದವರು ಇದ್ದಾರೆ? ಒಟ್ಟು ಎಷ್ಟು ಜನ ಸಾರ್ ಎಂಎಲ್ಎಗಳು? ಇನ್ನೂರ ಇಪ್ಪತ್ನಾಲ್ಕ? ಆಯ್ತು. 224 ಜನ ಎಂಎಲ್ಎ ಗಳ ನಡುವೆ ವಿರೋಧ ಪಕ್ಷದವರು ಎಷ್ಟು ಜನ? ನೂರಾ ಎರಡಾ?
ಅಲ್ಲಾ… ಒಂದು!
ಒಂದೆ ಅಂತ ನಾನು ಹೇಳ್ತಿನಿ. ಯಾಕೆ ಅಂದರೆ ಜಿ.ವಿ.ಶ್ರೀರಾಮರೆಡ್ಡಿ ಸಿಪಿಎಂ ನಿಂದ ಗೆದ್ದಿದ್ರೆ ಎರಡು ಆಗ್ತಾ ಇತ್ತು, ಸಾತಿ ಸುಂದರೇಶ್ ಮೂಡಿಗೆರೆಯಿಂದ ಗೆದ್ದಿದ್ರೆ ಮೂರು ಜನ ಆಗ್ತಾ ಇದ್ರು. ಈಗ ಒಂದು ಮಾತ್ರ. ಯಾಕೆ ಈ ಮಾತನ್ನ ಹೇಳ್ತಾ ಇದ್ದೀನಿ ಅಂದ್ರೆ ಇನ್ನುಳಿದವರೆಲ್ಲ ಆಡಳಿತ ಪಕ್ಷದವರೆ…!
ಯಾರು ಡಬ್ಲ್ಯುಟಿಒ… ಜಿಎಟಿಟಿ, ವಿಶ್ವ ಬ್ಯಾಂಕ್ ಇವನ್ನ ವಿರೋಧಿಸಲ್ಲವೋ ಅವರು ಅಲ್ಲಿ ಕೂತಿದ್ದರೂ ಒಂದೆ, ಇಲ್ಲಿ ಕೂತಿದ್ದರೂ ಒಂದೆ. ಎಲ್ಲರೂ ಆಡಳಿತ ಪಕ್ಷದವರೆ.
ಇವತ್ತು ರಾಜಕಾರಣ ಅಂದರೆ ಈ ಡಬ್ಲ್ಯುಟಿಒ, ಜಿಎಟಿಟಿ, ವಿಶ್ವ ಬ್ಯಾಂಕ್ ಇದ್ದಾವಲ್ಲ ಅವು ನಿಜವಾದ ಆಡಳಿತ ಮಾಡ್ತಾ ಇರೋದು! ಇದೇ ಆತಂಕ ಉಂಟು ಮಾಡುತ್ತಿರೋದು.
ಪ್ರಧಾನಮಂತ್ರಿ ಇರಬಹುದು. ಮುಖ್ಯಮಂತ್ರಿ ಇರಬಹುದು, ಪಾಕಿಸ್ತಾನ ಇರಬಹುದು. ಪಾಕಿಸ್ತಾನಕ್ಕೂ ನಮಗೂ ಅಂತ ವ್ಯತ್ಯಾಸ ಏನಿಲ್ಲ. ಯಾವುದೇ ಹಿಂದುಳಿದ ದೇಶ ಇರಬಹುದು, ಬರೀ ಹೆಬ್ಬೆಟ್ಟು ಮಾತ್ರ ಆಗಿದ್ದೀವಿ. ನಾವು ರುಜು ಒತ್ತುವವರು ಮಾತ್ರ ಆಗಿದ್ದೀವಿ. ಸ್ವಾತಂತ್ರ್ಯ ಅನ್ನೋದು ಇಲ್ಲ. ನಾವು ಈಗ ಅವರಿಂದ ಬಿಡುಗಡೆಗಾಗಿ ಹೋರಾಡಬೇಕಿದೆ.
ಅವರು ನಮ್ಮ ಕಾಲಿಗೆ ಸರಪಳಿ ಕಟ್ಟಿದ್ದಾರೆ, ಯಾರ ಕಾಲಿಗೆ..? ನಮ್ಮ ಪ್ರಧಾನಮಂತ್ರಿ ಕಾಲಿಗೆ ಸರಪಳಿ ಕಟ್ಟಿದ್ದಾರೆ. ಒಂದಿಷ್ಟುದ್ದ ಬಿಟ್ಟಿದ್ದಾರೆ. ಎಷ್ಟುದ್ದ ಬಿಟ್ಟಿದ್ದಾರೋ ಆ ಪರಿಧಿಯಲ್ಲಿ ಮಾತ್ರ ಚಲನೆ ಮಾಡಬೇಕು, ಅಷ್ಟೇನೆ.
ಈಗ ಆ ಸರಪಳಿಯನ್ನು ಕತ್ತರಿಸುವುದೆ ಪರ್ಯಾಯ ರಾಜಕಾರಣ! ಇವತ್ತು ವಿಧಾನಸಭೆಯಲ್ಲಿ ಸರ್ವೋದಯ ಕರ್ನಾಟಕ ಪಕ್ಷ ಒಂದು ಸಸಿ ನೆಟ್ಟಿದೆ. ಜೊತೆಗೆ ಕಮ್ಯುನಿಸ್ಟ್ ಪಕ್ಷಗಳು, ಸಮಾಜವಾದಿಗಳು ಕೂಡಿ ಇದನ್ನು ಹಬ್ಬಿಸಬೇಕಿದೆ. ಬೆಳೆಸಬೇಕಿದೆ. ನಾಡಿನ ಜೊತೆಗೆ, ಮುಖ್ಯವಾಗಿ ಯುವಜನತೆ ಜೊತೆಗೂಡಿ ನಾಯಕತ್ವ ವಹಿಸಿ ಇದನ್ನು ಬೆಳೆಸಬೇಕು. ಇಷ್ಟು ಹೇಳಿ ನನ್ನ ಮಾತು. ಮುಗಿಸ್ತೀನಿ,
ನಮಸ್ಕಾರ.