‘ಎದೆಗೆ ಬಿದ್ದ ಅಕ್ಷರ’ ಓದು, ಕ್ರಿಯೆಗಳ ಮೂಲಕ ನಿರಂತರವಾಗಿ ಬೆಳೆಸಬೇಕಾದ ಒಂದು ಮಹತ್ವದ ಸಾಂಸ್ಕೃತಿಕ ಪಠ್ಯ-  ನಟರಾಜ ಹುಳಿಯಾರ್

[ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಕುರಿತು 30/12/2012ರ ‘ಪ್ರಜಾವಾಣಿ’ ಸಾಪ್ತಾಹಿಕ ಪುರವಣಿಯಲ್ಲಿ ಸಾಹಿತಿ, ವಿಮರ್ಶಕ ನಟರಾಜ್ ಹುಳಿಯಾರ್ ಅವರು ಬರೆದ ಲೇಖನ, 29.5.2013 ರ ‘ಅವಧಿ’ ಅಂತರ್ಜಾಲ ತಾಣದಲ್ಲಿ ಮರು ಪ್ರಕಟಿತ. ಕೃಪೆ: -‘ಯಾರ ಜಪ್ತಿಗೂ ಸಿಗದ ನವಿಲುಗಳು’ (ದೇವನೂರ ಮಹಾದೇವರ ಸಾಹಿತ್ಯ ಕುರಿತು, ಪುಟ: 299-306, 2013]

ಈಚಿನ ದಶಕಗಳಲ್ಲಿ ಲಂಕೇಶರ ಸಂಸ್ಕೃತಿ ಚಿಂತನೆಯ ಹಾಗೆ ಓದುಗರೊಡನೆ ಆತ್ಮೀಯವಾಗಿ ಮಾತಾಡುತ್ತಾ, ಅವರನ್ನು ಆರೋಗ್ಯಕರವಾಗಿ ಒಲಿಸಿಕೊಳ್ಳುತ್ತಾ, ಅವರ ಪ್ರಜ್ಞೆಯನ್ನು ಬದಲಿಸುವ ಧ್ವನಿಯುಳ್ಳ ಬಹು ಮುಖ್ಯ ಕನ್ನಡ ಪುಸ್ತಕ ದೇವನೂರ ಮಹಾದೇವರ ‘ಎದೆಗೆ ಬಿದ್ದ ಅಕ್ಷರ’. ಹಲವಾರು ಮುದ್ರಣಗಳನ್ನು ಕಂಡಿರುವ ಈ ಪುಸ್ತಕದ ಬರಹಗಳು ಕರ್ನಾಟಕದ ಉದ್ದಕ್ಕೂ ಬಗೆಬಗೆಯ ಓದುಗರಲ್ಲಿ ಹಲವು ಬಗೆಯ ಪ್ರತಿಧ್ವನಿಗಳನ್ನು ಪಡೆಯುತ್ತಿರುವ ರೀತಿ ನಾಡಿನ ವೈಚಾರಿಕ ವಾತಾವರಣದ ಬಗ್ಗೆ ಭರವಸೆ ಹುಟ್ಟಿಸುತ್ತದೆ.
ಇಪ್ಪತ್ತನೆಯ ಶತಮಾನ ಹಾಗೂ ಅದರಾಚೆಗೂ ಈ ದೇಶದ ಆರೋಗ್ಯಕರ ಪ್ರಜ್ಞೆಯನ್ನು ರೂಪಿಸುತ್ತಿರುವ ಗಾಂಧಿ, ಅಂಬೇಡ್ಕರ್, ಲೋಹಿಯಾ ಕಳೆದ ನಲವತ್ತು ವರ್ಷಗಳಲ್ಲಿ ಮಹಾದೇವರ ಮೂಲಕ ಪಡೆದ ಹೊಸ ಆಯಾಮಗಳು ಈ ‘ಮಾತು-ಬರಹ’ಗಳಲ್ಲಿವೆ. ಈ ಮೂರು ಚಿಂತಕರಿಗಿಂತ ಕೊಂಚ ಭಿನ್ನವಾಗಿ ಕತೆಯ ಚೌಕಟ್ಟನ್ನು ಕೂಡ ಬಳಸಿ ಮಹಾದೇವ ಅವರು ಸಾಧಿಸಿರುವ ಅದ್ಭುತ ಕಲಾತ್ಮಕತೆ ಹಾಗೂ ವ್ಯವಧಾನ ಚಿಂತನೆ ಕೂಡ ಇಲ್ಲಿನ ಬರಹಗಳು ನಿರಂತರ ಒಳಪರೀಕ್ಷೆಯಿಂದ ವಿಕಾಸಗೊಳ್ಳಲು ನೆರವಾದಂತಿದೆ. ಚಳವಳಿಗಳ ಜೊತೆ-ಜೊತೆಗೆ ಹಾಗೂ ಅವುಗಳ ಆಚೆಗೂ ಯೋಚಿಸುವ ಮಹಾದೇವರ ಚಿಂತನೆಗಳ ಭಿತ್ತಿಯಲ್ಲಿ ಹಲವು ತಾತ್ವಿಕರ ಸಿದ್ಧಾಂತಗಳು ಇದ್ದರೂ ಅವು ಎದ್ದು ಕಾಣದೆ ಒಳಗೇ ಹರಿಯುತ್ತವೆ. ಸಿದ್ಧಾಂತ ಹಾಗೂ ಚಾರಿತ್ರಿಕ ವಿವರಗಳ ಜ್ಞಾನದ ಬಲದಿಂದ ವಾದಿಸುವುದಕ್ಕಿಂತ ಸತ್ಯದ ಹುಡುಕಾಟದ ಬಲದಿಂದ ಮನ ಒಲಿಸಿಕೊಳ್ಳುವ ತುಡಿತವುಳ್ಳ ಈ ಬರಹಗಳಲ್ಲಿ ಗಾಂಧೀಜಿ ಹಾಗೂ ಬುದ್ಧರ ದನಿ ಹೆಚ್ಚು ಕಂಡರೆ ಆಶ್ಚರ್ಯವಲ್ಲ.
ದೇವನೂರ ಮಹಾದೇವರ ಮಾತು, ಬರಹಗಳ ತಾತ್ವಿಕ ಭಿತ್ತಿಯ ಸ್ವರೂಪವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ, ಅದು ಒಟ್ಟಾರೆಯಾಗಿ ಸಮಾಜವಾದಿ ಚಿಂತನೆಯ ಈ ಕಾಲದ ಹೊಸ ಮಾದರಿಯಂತೆ ಕಾಣುತ್ತದೆ. ಕರ್ನಾಟಕದಲ್ಲಿ ಪೂರ್ಣಚಂದ್ರ ತೇಜಸ್ವಿ, ಅನಂತಮೂರ್ತಿ, ಲಂಕೇಶ್, ಡಿ.ಎಸ್. ನಾಗಭೂಷಣ ಮೊದಲಾದವರು ಬೇರೆ ಬೇರೆ ರೀತಿಯಲ್ಲಿ ಸಮಾಜವಾದಿ ಚಿಂತನೆಯನ್ನು ಮರುವಿವರಿಸುತ್ತಾ ಬಂದಿದ್ದಾರೆ. ಹಾಗೆಯೇ ಸಮಾಜವಾದಿ ಮಾರ್ಗವನ್ನು ಕೆ. ರಾಮದಾಸ್ ತಮ್ಮ ಪ್ರತಿಭಟನೆಯ ರಾಜಕಾರಣದಲ್ಲಿ ವಿಸ್ತರಿಸಿದ್ದಾರೆ. ಶಾಂತವೇರಿ ಗೋಪಾಲಗೌಡರು ಚಳವಳಿ ಹಾಗೂ ರಾಜಕಾರಣಗಳ ಮೂಲಕ ಸಮಾಜವಾದವನ್ನು ರೂಪಿಸಿದ್ದಾರೆ. ಪ್ರೊ. ಎಂ.ಡಿ. ನಂಜುಂಡಸ್ವಾಮಿ ವ್ಯವಸ್ಥೆಯನ್ನು ವಿರೋಧಿಸುವ ಚಳವಳಿಗಳಲ್ಲಿ, ರೈತ ಚಳುವಳಿ ಹಾಗೂ ಜಾಗತೀಕರಣ ಸಂದರ್ಭದ ಪಶ್ಚಿಮದ ಮಾರುಕಟ್ಟೆಯ ನಿಯಂತ್ರಣವನ್ನು ಎದುರಿಸುವ ಮಾರ್ಗಗಳಲ್ಲಿ ಸಮಾಜವಾದಿ ಚಿಂತನೆ-ಹೋರಾಟಗಳನ್ನು ಬೆಳೆಸಿದ್ದಾರೆ. ಈ ಎಲ್ಲರ ಉಲ್ಲೇಖ ಅಥವಾ ಅವರ ನಿಲುವುಗಳಿಗೆ ಪ್ರತಿಕ್ರಿಯೆಯೂ ಈ ಪುಸ್ತಕದ ಕೆಲವು ಭಾಗಗಳಲ್ಲಿದೆ.
ಈ ಎಲ್ಲರ ಚಿಂತನೆಯ ಜೊತೆಜೊತೆಗೇ ದೇವನೂರ ಮಹಾದೇವ ದೀರ್ಘಕಾಲ ಕತೆ, ಕಾದಂಬರಿ ಪ್ರಕಾರಗಳನ್ನು ತಮ್ಮ ಒಳ ವ್ಯಕ್ತಿತ್ವಕ್ಕೆ ಒಗ್ಗುವಂತೆ ಪಳಗಿಸಿಕೊಳ್ಳುತ್ತಾ, ಉತ್ತಮ ಕವಿಯಂತೆ ಕನ್ನಡ ಭಾಷೆಯನ್ನು ಹಲವು ಸ್ತರಗಳಲ್ಲಿ ನುಡಿಯುವಂತೆ ಮಾಡುತ್ತಾ, ದಲಿತ ಚಳವಳಿ ಹಾಗೂ ಇತರ ಸಾಮಾಜಿಕ ಚಳವಳಿಗಳನ್ನು ಬೆಳೆಸುತ್ತಾ, ಅವನ್ನು ತಿದ್ದುತ್ತಾ, ಅವುಗಳ ಅನುಭವದಿಂದ ಕಲಿಯುತ್ತಾ ಬಂದಿದ್ದಾರೆ. ಇಲ್ಲಿನ ಚಿಂತನೆಗಳಿಗೆ ತಮ್ಮ ‘ಒಡಲಾಳ’ ನೀಳ್ಗತೆಯ ಸಾಕವ್ವನ ತಾಯ್ತನದ ಮಾದರಿಯಿಂದಲೂ ವಿಶಿಷ್ಟ ಸ್ತ್ರೀಗುಣವನ್ನು ತರಲೆತ್ನಿಸಿದ್ದಾರೆ. ಆ ಮೂಲಕ ಭಾರತೀಯ ಸಮಾಜವಾದಿ ಚಿಂತನೆಯ ಸಾಧ್ಯತೆಗಳನ್ನು ವಿಸ್ತರಿಸಲೆತ್ನಿಸಿದ್ದಾರೆ. ಇಲ್ಲಿ ಅನೇಕ ತತ್ವಗಳ ಬೆಳಕು ಹಾಗೂ ಜ್ಞಾನಗಳು ರೂಪಿಸಿರುವ ಈ ಬರಹಗಳು ಇದ್ದರೂ ಹೊಸ ನೋಟಗಳನ್ನು ಒಳಗೊಳ್ಳಲು ಸದಾ ಸಿದ್ಧವಾಗಿರುವಂತೆ ಕಾಣುತ್ತವೆ. ‘ಎದೆಗೆ ಬಿದ್ದ ಅಕ್ಷರ’ ಎಂಬ ನುಡಿಗಟ್ಟು ಒಟ್ಟಾರೆಯಾಗಿ ಬರವಣಿಗೆ ಹಾಗೂ ಓದುಗಳ ಮೂಲಕ ಸದಾ ನಡೆಯುವ ಬಗೆಬಗೆಯ ಬದಲಾವಣೆಗಳ ಸರಣಿಯನ್ನು ಕುರಿತಂತೆ ಮಹಾದೇವ ಅವರ ನಿರೀಕ್ಷೆಯನ್ನೂ, ಅಕ್ಷರದ ಶಕ್ತಿಯ ಬಗ್ಗೆ ಕನ್ನಡ ಸಾಹಿತ್ಯದ ನಿರಂತರ ಆಶಾವಾದವನ್ನೂ ಸೂಚಿಸುವ ರೂಪಕದಂತಿದೆ.
ಸುಮಾರು ತೊಂಬತ್ತು ಬರಹಗಳ ಈ ಕೃತಿಯನ್ನು ದೇವನೂರು ‘ಸಮಾನತೆ ಉಸಿರಾಡುವ ಜೀವಿಗಳ ಪಾದಗಳಿಗೆ’ ಅರ್ಪಿಸಿರುವುದರ ಅರ್ಥಪೂರ್ಣತೆಯನ್ನು ಚರ್ಚಿಸುತ್ತಾ ಜಿ.ಎನ್. ಮೋಹನ್, ‘ದೇವನೂರು ನಮ್ಮೊಳಗಿನ ಕಣ್ಣು; ನಮ್ಮೊಳಗಿನ ನ್ಯಾಯವಾದಿ; ನಮ್ಮೊಳಗಿನ ಅಂತಃಸ್ಸಾಕ್ಷಿ’ ಎಂದಿದ್ದಾರೆ; ಜೊತೆಗೆ ತಮ್ಮ ಕಾಲಮಾನದ ಎಲ್ಲ ಮುಖ್ಯ ವಿದ್ಯಮಾನಗಳಿಗೆ ಮಹಾದೇವ ಆಳದ ಪ್ರಾಮಾಣಿಕ ಪ್ರತಿಕ್ರಿಯೆ ನೀಡುತ್ತಾ ಬಂದಿರುವುದನ್ನು ಮೋಹನ್ ಗುರುತಿಸಿದ್ದಾರೆ. ಈ ಗ್ರಹಿಕೆ ‘ಎದೆಗೆ ಬಿದ್ದ ಅಕ್ಷರ’ದಿಂದ ಈ ಕಾಲ ಪಡೆಯಬೇಕಾದ ಮುಖ್ಯ ಪ್ರೇರಣೆ, ಮಾರ್ಗದರ್ಶನ ಹಾಗೂ ಪರಿಹಾರಗಳ ಬಗ್ಗೆ ಮುಖ್ಯ ಸೂಚನೆಯೊಂದನ್ನು ನೀಡುತ್ತದೆ. ಈ ಪುಸ್ತಕದಲ್ಲಿ ಹಬ್ಬಿರುವ ಸಮಾನತೆಯ ಆಶಯಗಳು ಮಹಾದೇವ ಅವರು 2012 ಏಪ್ರಿಲ್ 14ರಂದು‌ ‘ಪ್ರಜಾವಾಣಿ’ಗಾಗಿ ಸಂಪಾದಿಸಿದ ಅಂಬೇಡ್ಕರ್ ವಿಶೇಷಾಂಕದ ಬರಹಗಳಲ್ಲೂ ‘ಸಮಾನತೆಯ ಕನಸನ್ನು ಮತ್ತೆ ಕಾಣುತ್ತಾ’ ಎಂಬ ಸಂಪಾದಕೀಯದಲ್ಲೂ ಗಾಢವಾಗಿ ಕಾಣಿಸಿಕೊಂಡಿವೆ.
ಬರವಣಿಗೆಯ ಹಲವು ಪ್ರಕಾರಗಳನ್ನು ಬೆಸೆದಂತಿರುವ ಈ ಪುಸ್ತಕದಲ್ಲಿ ಮಹಾದೇವರ ಪ್ರತಿಕ್ರಿಯೆಗಳು, ಭಾಷಣಗಳು, ಸಾಹಿತ್ಯಕ ನಿಲುವುಗಳು, ಚಳವಳಿಗಳಿಗೆ ಸಲಹೆಗಳು, ಮಾನವವರ್ತನೆಯ ವಿಶ್ಲೇಷಣೆ, ವಿಕೇಂದ್ರೀಕರಣ, ಅಂತರರಾಷ್ಟ್ರೀಯ ಘಟನೆಗಳು, ಕೃಷಿ, ಹೆಣ್ಣು, ಜಾತಿ, ಕಥಾರೂಪದ ಚಿಂತನೆಗಳು, ಈ ಕಾಲದಲ್ಲಿ ನಾವು ರೂಪಿಸಬೇಕಾದ ರಾಜಕೀಯ…ಇವೆಲ್ಲವನ್ನೂ ಒಳಗೊಂಡ ಬರಹಗಳಿವೆ. ಪ್ರಗತಿಪರ ಚಿಂತನೆಗಳು ನಿರಂತರ ತಮ್ಮನ್ನು ತಾವೇ ಪರೀಕ್ಷಿಸಿಕೊಳ್ಳುತ್ತಾ ಕಾಣಬಲ್ಲ ಹೊಸ ಸತ್ಯಗಳು ಕೂಡ ಇಲ್ಲಿವೆ. ದಮನಕ್ಕೆ ಒಳಗಾದವರ ಬಿಡುಗಡೆಯ ಹಾದಿಗಳ ಹುಡುಕಾಟದ ಜೊತೆಗೆ, ದಮನಕಾರರ ಮನಸ್ಸನ್ನು ಆಳವಾಗಿ ಗ್ರಹಿಸಿ ಅವರನ್ನೂ ಬಿಡುಗಡೆಗೊಳಿಸಲು ಬಯಸುವ ಗಾಂಧೀಮಾರ್ಗದ ಧ್ಯಾನಗಳೂ ಇಲ್ಲಿವೆ.
ವಿಚಾರವಾದಿಗಳನ್ನು ಒಪ್ಪಿಸಬೇಕೆಂಬ ಅಥವಾ ಸನಾತನಿಗಳನ್ನು ಶಾಕ್ ಮಾಡಬೇಕೆಂಬ ಒತ್ತಡವಿಲ್ಲದ ಈ ಬರಹಗಳಲ್ಲಿ ಆಳದಲ್ಲಿ ಸತ್ಯವೆಂದು ಅನಿಸಿದ್ದನ್ನು ನುಡಿದು ಕೇಳುಗರ, ಓದುಗರ ಮನಸ್ಸನ್ನು ಸರಿ ದಾರಿಗೆ ತರಬಹುದು ಎಂಬ ನಂಬಿಕೆಯಿದೆ. ಅದರ ಜೊತೆಗೇ ಕಟುವಾದ ಹಾಗೂ ದಿಟ್ಟವಾದ ನಿಲುವುಗಳೂ ಇಲ್ಲಿವೆ. ‘ಭಾರತೀಯ ಸಂವಿಧಾನಕ್ಕೆ ಭೂತಚೇಷ್ಟೆ’ ಎಂಬ ಬರಹ ಸಂವಿಧಾನದ ವಿಶಾಲ ಆಶಯಗಳನ್ನು ನುಂಗಲೆತ್ನಿಸುವ ಭಾರತೀಯ ಸನಾತನ ಶಕ್ತಿಗಳನ್ನು ತೀವ್ರವಾಗಿ ವಿರೋಧಿಸುತ್ತದೆ. ಮೈಸೂರಿನ ಸಭೆಯೊಂದರಲ್ಲಿ ಕುವೆಂಪು ವೈಚಾರಿಕತೆಯನ್ನು ‘ಅರಿಯುವುದು ತನ್ನ ಆರೋಗ್ಯಕ್ಕೆ ಅಗತ್ಯ’ ಎಂದು ತಿಳಿಯದ ಸಂಪ್ರದಾಯಸ್ಥ ಬ್ರಾಹ್ಮಣರ ಚೀರಾಟವನ್ನು ಕಂಡು ಮಹಾದೇವ ವ್ಯಗ್ರರಾಗುತ್ತಾರೆ: ‘ಇತಿಹಾಸದ ಕ್ರೌರ್ಯಕ್ಕೆ ಸಿಕ್ಕಿ ಕಣ್ಣು ಕೈಕಾಲು ಕಳೆದುಕೊಂಡು ಹೆಳವರಾಗಿರುವ ಈ ನನ್ನ ಸಹಜೀವಿಗಳಿಗೆ ಏನು ಹೇಳಲಿ? ಹೇಗೆ ಹೇಳಲಿ?’ ಎಂದು ದುಃಖಿಯಾಗುತ್ತಾರೆ; ಆದರೆ ಅವರ ನಡುವೆಯೇ ಕೃಷ್ಣಮೂರ್ತಿ ಎಂಬುವವರು ‘ಏನೋ, ನಾವು ಪಾಪ ಮಾಡಿ ಇಲ್ಲಿ ಹುಟ್ಟಿಬಿಟ್ಟೋ’ ಎಂದಾಗ, ಆ ಸನಾತನಿಗಳ ನಡುವೆಯೂ ಸಂವೇದನಾಶೀಲರು ಇರುವುದನ್ನು ಕಾಣುತ್ತಾರೆ. ಈ ಬಗೆಯ ಸಜ್ಜನರ ಅಳುಕಿನ ಮಾತುಗಳನ್ನು ಕೇಳಿಸಿಕೊಳ್ಳದೆ ಮತ್ತೊಂದು ಕಡೆ ಜಾತಿ, ಮತೀಯತೆಯ ವಿಕಾರಗಳನ್ನು ಮತೀಯವಾದಿ ಗುಂಪುಗಳು ತಂದೊಡ್ಡುತ್ತಿರುವ ಅಪಾಯವನ್ನು ಎದುರಿಸುವ ರೀತಿಯನ್ನೂ ಅವರು ಹುಡುಕಲೆತ್ನಿಸುತ್ತಾರೆ. ‘ಮತಾಂಧರ ಮೆದುಳೊಳಗೆ ಕೆಲವು ಕ್ಷಣ’ ಹೊಕ್ಕು ಅಲ್ಲಿ ನಡೆಯುತ್ತಿರುವುದೇನು ಎಂದು ಕಾಣಲೆತ್ನಿಸುತ್ತಾರೆ. ಅದನ್ನು ಕಾಣಿಸಿ, ಮತಾಂಧರು ತಮ್ಮನ್ನು ತಾವೇ ಪರೀಕ್ಷಿಸಿಕೊಳ್ಳುವಂತೆ ಮಾಡುತ್ತಾರೆ. ‘ಗೋಹತ್ಯೆ ನಿಷೇಧ ಕಾನೂನಿನೊಳಗೂ ದಮನಕಾರಿ ಹಿಂಸೆ, ಕೊಲ್ಲುವ ಸಂಸ್ಕೃತಿಯ ಕೊಲೆಗಾರರು ಮರೆಮಾಚಿ ಕುಳಿತಿದ್ದಾರೆ’ ಎಂಬುದನ್ನು ಒತ್ತಿ ಹೇಳುತ್ತಾರೆ.
ದಲಿತ ಚಳವಳಿಯ ಗೆಳೆಯರು ದಾರಿ ತಪ್ಪಿದಾಗ ಮಹಾದೇವ ಅವರನ್ನು ತಿದ್ದಲೆತ್ನಿಸುತ್ತಾರೆ. ದಲಿತರೊಳಗಿನ ಕಿತ್ತಾಟದ ಗಂಭೀರ ಸ್ವರೂಪವನ್ನು ಮನಗಾಣಿಸಲು ಗಂಡಭೇರುಂಡದ ಕತೆ ಬಳಸಿ, ಅರ್ಧ ಸತ್ತರೆ ಇನ್ನರ್ಧ ಹೇಗೆ ಸಾಯುತ್ತದೆ ಎಂಬುದನ್ನು ತೋರಿಸುತ್ತಾರೆ: ‘ಸ್ನೇಹಿತರೇ ಕೇಳಿ. ಅಸ್ಪೃಶ್ಯತೆಗೆ ದೇಹ ಒಂದೇ ಆದರೂ ತಲೆ ನೂರೆಂಟು. ಎಡಗೈ, ಬಲಗೈ, ಈ ಎಡಗೈ ಹೆಬ್ಬೆರಳು, ಕಿರುಬೆರಳು, ಬಲ ಹೆಬ್ಬೆರಳು, ಕಿರುಬೆರಳು ಹೀಗೆ ನೂರೆಂಟು ಸ್ವಾರ್ಥದ ದಲಿತ ರಾಜಕಾರಣಿಗಳು, ಹೊಣೆಗೇಡಿ ದಲಿತ ನೌಕರರು ತಮ್ಮ ಅಹಂ, ಅಧಿಕಾರಕ್ಕಾಗಿ ಇರುವ ಭಿನ್ನತೆಯನ್ನು ಹೆಚ್ಚಿಸುತ್ತಿರುವರು. ಆದರೆ ನೆನಪಿರಲಿ. ಗಂಡಭೇರುಂಡ ಪಕ್ಷಿಯಂತೆ ಸಾಯುವವರು ಒಟ್ಟಿಗೆ ದೇಹವಾದ ನಾವು. ಕಾಲಾವಕಾಶವಿರುವಾಗಲೇ ಊರಾಚೆ ಬಿದ್ದಿರುವ, ಊರಾಚೆಗೆ ಎಸೆಯಲ್ಪಡುತ್ತಿರುವ ಸಣ್ಣ ಪುಟ್ಟ ಜಾತಿಗಳೊಳಗಿನ ಭಿನ್ನತೆಯನ್ನು ಕಿತ್ತೆಸೆದರೆ ಮಾತ್ರ ನಮ್ಮ ಉಳಿವು.’
ಕಾಲಕಾಲದ ಸಮಸ್ಯೆಗಳನ್ನು ವಿಶ್ಲೇಷಿಸುತ್ತಲೇ ಅದಕ್ಕೆ ಪರಿಹಾರ ಹುಡುಕುವ ಪ್ರಯತ್ನ ಕೂಡ ದೇವನೂರ ಮಹಾದೇವರ ಬರಹಗಳಲ್ಲಿದೆ. ‘ಪೌರ ಕಾರ್ಮಿಕರ ದೊಡ್ಡ ಮನಸ್ಸನ್ನ ಕೊಳಕು ಅಂತ ಸಮಾಜ ಗಣಿಸಿದೆ. ಅದು ಸಮಾಜವೇ ಕೊಳಕಾಗಿರುವುದರ ಲಕ್ಷಣ, ಅಷ್ಟೆ.’ ಎಂದು ಅವರು ನೋವಿನಿಂದ ಹೇಳುತ್ತಾರೆ; ಮುಂದೊಮ್ಮೆ ಪೌರಕಾರ್ಮಿಕ ಹೋರಾಟವನ್ನು ಕೈಗೆತ್ತಿಕೊಳ್ಳುವ ಮೂಲಕ ದಲಿತ ಚಳುವಳಿಯನ್ನು ಮತ್ತೆ ಹೊಸ ರೀತಿಯಲ್ಲಿ ಆರಂಭಿಸಬೇಕೆಂದು ಯೋಚಿಸುತ್ತಾರೆ. ಚಳವಳಿಯ ಜೊತೆಜೊತೆಗೇ ಇನ್ನಿತರ ಬದಲಾವಣೆಯ ಮಾರ್ಗಗಳನ್ನೂ ಅವರು ಸೂಚಿಸುತ್ತಾರೆ. ‘ದಲಿತ ನೌಕರರ ಒಂದು ದಿನದ ಸಂಬಳದಲ್ಲಿ ತಾವು ಹುಟ್ಟಿ ಬಂದ ಸಮುದಾಯದ ಇಡೀ ಮಕ್ಕಳ ಶಿಕ್ಷಣ ವಹಿಸಿಕೊಳ್ಳಬಹುದಿತ್ತು; ಅಥವಾ ಇಪ್ಪತ್ತೆರಡು ಸಾವಿರ ಇರುವ, ಈ ಭೂಮಿಯ ಮೇಲೆ ಅತ್ಯಂತ ಅವಮಾನಿತರಾದ, ದಕ್ಷಿಣ ಕನ್ನಡದ ಕೊರಗರನ್ನ ಇಡಿಯಾಗಿ ದತ್ತು ತೆಗೆದುಕೊಂಡು ಅವರ ಕಣ್ಣೀರು ಒರೆಸಬಹುದಿತ್ತು’ ಎಂದು ಅವರು ದಲಿತ ನೌಕರರಿಗೆ ಕಿವಿಮಾತು ಹೇಳುತ್ತಾರೆ. ಜೊತೆಗೆ ‘ಒಳ ಮೀಸಲಾತಿ ಹಾಗೂ ಜಾತಿ ಜನಗಣತಿ’ ಲೇಖನದಲ್ಲಿ ಮೀಸಲಾತಿಯನ್ನು ಈ ಕಾಲದಲ್ಲಿ ಹೊಸ ರೀತಿಯಲ್ಲಿ ವಿವರಿಸಿಕೊಳ್ಳುವ ನಿಟ್ಟಿನಲ್ಲಿ ಸಲಹೆಗಳನ್ನೂ ಕೊಡುತ್ತಾರೆ. ಈ ಸಲಹೆಗಳನ್ನು ಸಾಮಾಜಿಕನ್ಯಾಯ ಕುರಿತ ಯೋಜನೆಗಳನ್ನು ರೂಪಿಸುವವರು ಗಂಭೀರವಾಗಿ ಚರ್ಚಿಸಬೇಕಾಗಿದೆ. ಹಾಗೆಯೇ, ‘ಹೆಣ್ಣು ಜಾತಿ ಮತ್ತು ದಲಿತ ಜಾತಿ’ ಲೇಖನದಲ್ಲಿ ದಲಿತರು ಮತ್ತು ಹೆಂಗಸರು ಅನುಭವಿಸುವ ಒಂದೇ ಬಗೆಯ ಅವಮಾನವನ್ನು ಚರ್ಚಿಸುತ್ತಾ, ದಲಿತವಾದ ಮತ್ತು ಸ್ತ್ರೀವಾದಗಳು ಬೆರೆಯಬೇಕಾದ ಅನಿವಾರ್ಯತೆಯ ಬಗ್ಗೆ ಮಹಾದೇವ ಅವರು ಕೊಡುವ ಸೂಚನೆ ಕೂಡ ಮುಖ್ಯವಾಗಿದೆ.
ಅಂಬೇಡ್ಕರ್ ಅವರಿಗೆ ಸ್ಥಾನ ಕೊಟ್ಟಿಲ್ಲವೆಂಬ ಕಾರಣಕ್ಕೆ ರಿಚರ್ಡ್ ಅಟೆನ್ ಬರೋ ಅವರ ‘ಗಾಂಧಿ’ ಸಿನಿಮಾವನ್ನು ದಲಿತರು ನೋಡಬಾರದೆಂದು ದಲಿತ ಸಂಘರ್ಷ ಸಮಿತಿ ಕರೆ ಕೊಟ್ಟಾಗ, ಮಹಾದೇವ ‘ಕದ್ದು’ ಈ ಸಿನಿಮಾ ನೋಡುತ್ತಾರೆ. ಈ ಸಿನಿಮಾದಿಂದ ಪಡೆದ ಅನುಭವವನ್ನು ವಿವರಿಸುತ್ತಾ, ‘ಗಾಂಧಿಯದು ಭೂಮಿಯಂತೆ ಒಂದು ಕ್ಷಣವೂ ನಿಲ್ಲದ ಚೇತನವು’ ಎಂಬ ಸುಂದರ ಒಳನೋಟ ಕೊಡುತ್ತಾರೆ. ‘ಅಹಿಂಸಾವಾದಿಯಾದ ಗಾಂಧಿಯ ಒಂದು ರೋಮದಲ್ಲೂ ಹೇಡಿತನದ ಸುಳಿವು ಇಲ್ಲದಿರುವುದು ನನ್ನನ್ನು ನಡುಗಿಸಿತು. ಹೇಡಿಯಾದವನು ಅಹಿಂಸಾವಾದಿಯಾಗುವುದು ಅಸಾಧ್ಯ ಎಂಬ ನಿಜವೂ ಅರಿವಾಗಿ ಬೆವರಿಸಿತು’ ಎನ್ನುವ ಅವರು ದಲಿತರಿಗೂ ಹಾಗೂ ದಲಿತೇತರರಿಗೂ ಹೇಳುವ ಮಾತು: ‘ನಮ್ಮ ವಿಮೋಚನೆಗಾಗಿ ಸಾವಿರಾರು ರೀತಿಗಳನ್ನು ನಾವು ತಡಕಬೇಕಾಗಿದೆ. ಇಂಥದ್ದರಲ್ಲಿ ಗಾಂಧಿಯೂ ನಮಗೆ ದಿಕ್ಕಾಗಬಹುದು.’ ಆದ್ದರಿಂದಲೇ ಮಹಾದೇವ ಯೋಚಿಸುವ, ರೂಪಿಸುವ ಅಸ್ಪೃಶ್ಯತೆಯ ವಿರುದ್ಧದ ಹೋರಾಟದಲ್ಲಿ ಗಾಂಧಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಾರೆ.
ಆದರೆ ದಿನನಿತ್ಯ ಎದುರಾಗುವ ಭಾರತದ ಭೀಕರ ವಾಸ್ತವಗಳು ಹಾಗೂ ಕ್ರೌರ್ಯಗಳನ್ನು ನೋಡುತ್ತಾ, ಈ ಕಾಲದ ಸವಾಲುಗಳನ್ನು ಎದುರಿಸಲು ಗಾಂಧಿ, ಲೋಹಿಯಾ, ಬುದ್ಧ, ಅಂಬೇಡ್ಕರ್, ಬಸವ ಎಲ್ಲರೂ ಬೆರೆಯಬೇಕಾದ ಹಾಗೂ ಆ ಮಾರ್ಗಗಳನ್ನು ಮರು ವಿವರಿಸಿಕೊಳ್ಳಬೇಕಾದ ಅನಿವಾರ್ಯತೆ ಅವರ ಕ್ರಿಯೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಎಂಬತ್ತರ ದಶಕದಲ್ಲಿ, ರೈತ ಚಳವಳಿಯ ಆರಂಭದಲ್ಲೇ ‘ದ+ರೈ’ (ದಲಿತ ಹಾಗೂ ರೈತ ಚಳವಳಿಗಳು) ಒಟ್ಟಿಗೆ ಹೋಗಬೇಕಾದ ಬಗ್ಗೆ ಅವರು ಎಂ.ಡಿ. ನಂಜುಂಡಸ್ವಾಮಿಯವರ ಜೊತೆ ಚರ್ಚಿಸುತ್ತಾರೆ. ಇಪ್ಪತ್ತೊಂದನೆಯ ಶತಮಾನದಲ್ಲಿ ಅವರು ಹೊಸ ರೀತಿಯ ರಾಜಕೀಯದ ಬಗ್ಗೆ ಆಳವಾಗಿ ಚಿಂತಿಸಿದಾಗ, ರೈತ ಹಾಗೂ ದಲಿತ ಚಳವಳಿಗಳು ಬೆರೆಯಬೇಕಾದ ಸಾಮಾಜಿಕ ಹಾಗೂ ರಾಜಕೀಯ ಅನಿವಾರ್ಯತೆ ಸ್ಪಷ್ಟವಾಗಿ ಕಾಣತೊಡಗುತ್ತದೆ. ಅವರು ‘ಸರ್ವೋದಯ ಕರ್ನಾಟಕ’ ಪಕ್ಷವನ್ನು ರೂಪಿಸುವುದು ಆ ಘಟ್ಟದಲ್ಲಿ. ಆದ್ದರಿಂದಲೇ, ‘ಸರ್ವೋದಯ ಕರ್ನಾಟಕ’ ಪಕ್ಷದ ನಡಿಗೆ ಹಾಗೂ ಆಶಯಗಳನ್ನು ನಾವು ಪರಿಚಿತ ರಾಜಕೀಯ ಪಕ್ಷಗಳ ವರಸೆಗಳಿಗೆ ಹೋಲಿಸಲಾಗದು. ಬದಲಿಗೆ, ದೇವನೂರ ಮಹಾದೇವ ರೂಪಿಸಿಕೊಂಡ ಬರವಣಿಗೆ ಹಾಗೂ ಅವರು ಭಾಗಿಯಾದ ಚಳವಳಿಗಳ ಸಂದರ್ಭಗಳಲ್ಲಿ ಯಶಸ್ಸಿನ ಬಗ್ಗೆ ತಲೆ ಕೆಡಿಸಿಕೊಳ್ಳದೆ, ತಮ್ಮ ಆಳದಲ್ಲಿ ಸರಿಯೆನಿಸಿದ ಮಾರ್ಗ ಹಿಡಿದಂತೆ ರಾಜಕಾರಣದಲ್ಲೂ ಅಂಥದೊಂದು ಹಾದಿ ಹಿಡಿದಿದ್ದಾರೆ ಎಂದು ತಿಳಿಯಬೇಕು.
ರಾಜಕಾರಣದ ಜೊತೆಗೆ, ದಲಿತರ ವಿಮೋಚನೆಗಷ್ಟೇ ಅಲ್ಲದೆ ಒಟ್ಟು ಭಾರತದ ವಿಮೋಚನೆಗಾಗಿ ‘ಬುದ್ಧನೆಡೆಗೆ ಮರಳಿ ಮನೆಗೆ’ ಕಾರ್ಯಕ್ರಮವನ್ನು ಚಳುವಳಿಯಾಗಿ ರೂಪಿಸಬೇಕಾದ ಅನಿವಾರ್ಯತೆಯೂ ಇಪ್ಪತ್ತೊಂದನೆಯ ಶತಮಾನದಲ್ಲಿ ಮಹಾದೇವ ಅವರಿಗೆ ಎದುರಾಗುತ್ತದೆ. ಆದರೆ ಬುದ್ಧನ ಜೊತೆಗೆ ಕನ್ನಡದ ವಚನಯುಗವೂ ಬೆರೆಯಬೇಕೆಂದು ಅವರಿಗೆ ಮತ್ತೆ ಮತ್ತೆ ಅನ್ನಿಸುತ್ತದೆ. ‘ಬೆಳಗಾಗ ನಾವೆದ್ದು ನೆನೆಯಬೇಕಾದುದು ವಚನಯುಗವನ್ನು ಎಂಬಷ್ಟು ಅರಿವು ನಮಗೆ ಬಂದರೆ ಅಷ್ಟು ಸಾಕು. ಆಗ ಭಾರತದಲ್ಲಿ ತರಾವರಿ ಪ್ರತಿಭೆಗಳು ಚಿಗುರೊಡೆಯುತ್ತವೆ’ ಎನ್ನುವ ಅವರು, ‘ವಚನಧರ್ಮವನ್ನು ಈ ಕಾಲಕ್ಕೆ ಕಸಿ ಮಾಡುವುದು ಹೇಗೆ’ ಎಂದು ಯೋಚಿಸುತ್ತಾರೆ. ಇವೆಲ್ಲದರ ಜೊತೆಗೆ ಈ ಕಾಲದ ವರ್ಗಸಮಸ್ಯೆಗಳಿಗೂ ಅವರು ಸ್ಪಂದಿಸುತ್ತಾರೆ. ಆದ್ದರಿಂದಲೇ ಒಂದನೇ ತರಗತಿಯಿಂದ ಇಂಗ್ಲಿಷ್ ಭಾಷೆಯನ್ನು ಕಲಿಸಬೇಕೆಂದು ಒತ್ತಾಯಿಸುವ ಚಳುವಳಿಯ ಮಹತ್ವವನ್ನು ಅವರು ಗ್ರಹಿಸುತ್ತಾರೆ. ಆದರೆ, ಕನ್ನಡ ಮಾಧ್ಯಮ ಜಾರಿಗೆ ಬರದೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಕೊಡುವ ನೃಪತುಂಗ ಪ್ರಶಸ್ತಿಯನ್ನು ಪಡೆಯಲಾರೆ ಎಂದು ಬೃಹತ್ ಮೊತ್ತದ ಪ್ರಶಸ್ತಿಯನ್ನು ನಿರಾಕರಿಸುತ್ತಾರೆ; ಆ ಮೂಲಕ ಕನ್ನಡ ಭಾಷಾಮಾಧ್ಯಮದ ಬಗೆಗೆ ಖಚಿತ ನಿಲುವನ್ನು ತಳೆಯುತ್ತಾರೆ.
ಈ ಪುಸ್ತಕದ ‘ಮುಖಾಮುಖಿ’ ಭಾಗದಲ್ಲಿರುವ ಮಾತುಕತೆಗಳು ಭಾರತೀಯ ಸಮಾಜವನ್ನು ಎಲ್ಲಿ ನಿಂತು ಅರಿಯಲು ಶುರು ಮಾಡಬೇಕು ಎಂಬ ಬಗ್ಗೆ ಬರಹಗಾರರು, ರಾಜಕಾರಣಿಗಳು,ಚಳವಳಿಗಾರರು ಹಾಗೂ ಪತ್ರಕರ್ತರಿಗೆ ಮುಖ್ಯ ಮಾದರಿಗಳನ್ನು ಒದಗಿಸುತ್ತವೆ. ಮಾಜಿ ಉಸ್ತಾದರೊಬ್ಬರ ಅಥವಾ ಯಜ್ಜೂರಯ್ಯನವರ ಜೊತೆ ಮಹಾದೇವ ನಡೆಸುವ ಮಾತುಕತೆಗಳು ಒಂದು ದೇಶದ ದಮನಿತರ ಚರಿತ್ರೆಯನ್ನೇ ಹೇಳುತ್ತವೆ. ಈ ದೃಷ್ಟಿಯಿಂದ, ಭಾರತದ ಸಮಾಜವಿಜ್ಞಾನ ಹಾಗೂ ಸಾಹಿತ್ಯ ವಲಯಗಳಲ್ಲಿ ಸಂಶೋಧನೆ ಮಾಡುವವರು ಈ ಬರಹಗಳನ್ನು ತಮ್ಮ ಅಧ್ಯಯನದ ಮುಖ್ಯ ಮಾದರಿಗಳನ್ನಾಗಿ ಅಭ್ಯಾಸ ಮಾಡಬೇಕು. ಹಾಗೆಯೇ ಸಾಹಿತ್ಯ ಕುರಿತು ಮಹಾದೇವ ಮಾಡುವ ಸೂಕ್ಷ್ಮಚಿಂತನೆಗಳು, ಅವರು ಆಯ್ಕೆ ಮಾಡಿಕೊಳ್ಳುವ ಲೇಖಕರು, ‘ಮಲೆಗಳಲ್ಲಿ ಮದುಮಗಳು ಶತಮಾನದ ಕೃತಿ’ ಎಂಬ ನಿಲುವು -ಇವೆಲ್ಲ ಅವರ ಸಾಹಿತ್ಯಕ ಆಯ್ಕೆಗಳು ಹಾಗೂ ಆದ್ಯತೆಗಳನ್ನು ಖಚಿತವಾಗಿ ಸೂಚಿಸುತ್ತವೆ. ಅದರ ಜೊತೆಗೇ, ಅವರ ಸಾಮಾಜಿಕ, ಸಾಂಸ್ಕೃತಿಕ ಗ್ರಹಿಕೆಗಳು, ಚಳವಳಿಗಳನ್ನು ಕುರಿತ ಅವರ ನಿಸ್ವಾರ್ಥ ಚಿಂತನೆಗಳು ಕರ್ನಾಟಕವನ್ನು ಎಲ್ಲ ಕಾಲದಲ್ಲೂ ಎಚ್ಚರದಲ್ಲಿಡಬಲ್ಲವು. ಎಲ್ಲಕ್ಕಿಂತ ಮುಖ್ಯವಾಗಿ, ಎಪ್ಪತ್ತರ ದಶಕದಿಂದೀಚೆಗೆ ಕರ್ನಾಟಕವು ಅನೇಕ ಸಾಮಾಜಿಕ ಚಳುವಳಿಗಳು ಯಾವ ವಿಶಾಲ ಉದ್ದೇಶದಿಂದ ಹೊರಟವೋ ಅವುಗಳ ಮೂಲಸತ್ವಕ್ಕೆ ಬರಹಗಾರರು, ಹೋರಾಟಗಾರರು ಮರಳಿ ಹೋಗುವಂತೆ ಆತ್ಮಪರೀಕ್ಷೆ ಮಾಡಿಕೊಳ್ಳಲು ಪ್ರೇರೇಪಿಸುವ ಬರಹಗಳು ಇವು. ಈ ಬರಹಗಳಲ್ಲಿರುವ ಅನುಕಂಪ, ನಿಷ್ಠುರತೆ, ದುಃಖ, ಒಳನೋಟಗಳು ಬಹುಕಾಲ ಕೇಳುಗರ, ಓದುಗರ ನೋಟಗಳನ್ನು ತಿದ್ದಿವೆ; ಮುಂದೆಯೂ ತಿದ್ದಬಲ್ಲ ಶಕ್ತಿ ಈ ಬರಹಗಳಿಗಿದೆ. ಪುಟ್ಟ ಪುಟ್ಟ ನುಡಿಗಟ್ಟುಗಳ ಮೂಲಕ ನಮ್ಮೊಡನೆ ಆತ್ಮೀಯವಾಗಿ ಮಾತಾಡಿದಂತಿರುವ ಈ ಚಿಂತನೆಗಳ ಒಳನೋಟಗಳಿಂದ; ಈ ಚಿಂತನೆಗಳ ಭಿತ್ತಿಯಲ್ಲಿರುವ ಪ್ರಾಮಾಣಿಕತೆ, ಆಳವಾದ ಆಲೋಚನೆಗಳಿಂದ; ಹಾಗೂ ತಾನು ಬಳಸುವ ಶಬ್ದದಲ್ಲಿ ಹುಸಿಯನ್ನು ನಿಯಂತ್ರಿಸುವ ಲೇಖಕನ ಎಚ್ಚರದಿಂದ ನಮ್ಮ ಕಾಲದ ಬರಹಗಾರರು, ಚಿಂತಕರು ಅನೇಕ ಅಂಶಗಳನ್ನು ಕಲಿಯಬೇಕಾಗಿದೆ. ಮಹಾದೇವರ ಗದ್ಯಬರಹಗಳ ಶೈಲಿ ಅವರ ನಿರೂಪಣಾ ಶೈಲಿಗಿಂತ ತೀರಾ ಭಿನ್ನವಲ್ಲ ಎಂಬ ಅಂಶ ಅವರ ಬಟ್ಟು ಬರವಣಿಗೆಯ ಶೈಲಿಯ ಸಹಜ ಐಕ್ಯತೆಯನ್ನು ಕೂಡ ಸೂಚಿಸುತ್ತದೆ. ಈ ಬರಹಗಳ ನಿಧಾನ ನಡೆಗೆ ಇರುವ ವಿಚಿತ್ರ ಶಕ್ತಿಯನ್ನೂ ನಾವು ಅಧ್ಯಯನ ಮಾಡಬೇಕಾಗಿದೆ. ಕಾರಣ, ಇಲ್ಲಿರುವ ನಿಜಘಟನೆಗಳು, ವಿಶ್ಲೇಷಣೆಗಳು ಹಾಗೂ ರೂಪಕಗಳು ಒಂದು ಗಂಭೀರ ಕತೆ ಅಥವಾ ಪದ್ಯದಂತೆ ನಿಧಾನವಾಗಿ ನಮ್ಮನ್ನು ಆವರಿಸುತ್ತಾ, ಅವು ಹೊರಡಿಸುವ ಸತ್ಯವನ್ನು ತಾಳ್ಮೆಯಿಂದ ಗ್ರಹಿಸುವಂತೆ ನಮ್ಮನ್ನು ಪ್ರೇರೇಪಿಸುತ್ತದೆ.
‘ಎದೆಗೆ ಬಿದ್ದ ಅಕ್ಷರ’ದ ರೂಪಕ ರೂಪದ ಚಿಂತನೆಗಳು ಓದುಗರೊಡನೆ ಹುಟ್ಟಿಸಿದ ಸ್ಪಂದನವನ್ನು 2013ರ ಜನವರಿ ಒಂದರಂದು ತರುಣ ಕವಿ ನಾಗಣ್ಣ ಕಿಲಾರಿ ಕಳಿಸಿದ ಎಸ್.ಎಂ.ಎಸ್. ಸೂಚಿಸುತ್ತದೆ. ಹೊಸವರ್ಷದ ಶುಭಾಶಯಗಳನ್ನು ಕಳಿಸಲು ಕಿಲಾರಿ ಈ ಪುಸ್ತಕದ ಬೆನ್ನುಡಿಯ ಈ ಸಾಲುಗಳನ್ನು ಬಳಸಿದರು: ‘ಗಾಂಧಿ-ಕಾಠಿಣ್ಯದ ತಂದೆಯಂತೆ, ಜೆಪಿ- ಅಸಹಾಯಕ ತಾಯಿ. ವಿನೋಬಾ- ಮದುವೆಯಾಗದ ವ್ರತನಿಷ್ಟ ಅಕ್ಕನಂತೆ. ಲೋಹಿಯಾ-ಊರೂರು ಅಲೆಯುವ, ಮನೆ ಸೇರದ ಅಲೆಮಾರಿ ಮಗ. ಅಂಬೇಡ್ಕರ್- ತಾರತಮ್ಯಕ್ಕೆ ಒಳಗಾಗಿ ಮುನಿಸಿಕೊಂಡು ಮನೆ ಹೊರಗೆ ಇರುವ ಮಗ -ಇದು ನಮ್ಮ ಕುಟುಂಬ. ನಾವು ಇಲ್ಲಿನ ಸಂತಾನ. ಇದನ್ನು ಹೀಗಲ್ಲದೆ ಹೇಗೆ ನೋಡಬೇಕು?’ ದೇವನೂರ ಮಹಾದೇವರ ಚಿಂತನೆಯ ಆಳದಲ್ಲಿರುವ ಹೊಸ ಭಾರತದ ಆಶಯವನ್ನು ಬಿಂಬಿಸುವ ಈ ಮಾತು ಕರ್ನಾಟಕದ ವಿಭಿನ್ನ ವಲಯಗಳಲ್ಲಿ ಹುಟ್ಟಿಸುತ್ತಿರುವ ಸ್ಪಂದನಕ್ಕೆ ಈ ಕೃತಿಯ ಬಗೆಬಗೆಯ ಓದುಗಳು ಕೂಡ ಸಾಕ್ಷಿಯಂತಿವೆ. ಈ ಪುಸ್ತಕ ಓದಿದ ನಂತರ ಆದ ಅನುಭವದ ಬಗ್ಗೆ ಸಂಸ್ಕೃತಿ ಚಿಂತಕ ಪಟ್ಟಾಭಿರಾಮ ಸೋಮಯಾಜಿ ಬರೆದ ಪದ್ಯರೂಪದ ಪ್ರತಿಕ್ರಿಯೆ ಈ ಬರವಣಿಗೆಯ ಇನ್ನೊಂದು ಬಗೆಯ ಪರಿಣಾಮವನ್ನು ಸೂಚಿಸುವಂತಿದೆ:
ಮೊನ್ನೆ
ಪಿರಿಯಾಪಟ್ಟಣ ಗೌರ್ನಮೆಂಟ್ ಕಾಲೇಜಿನಲ್ಲಿ
ವಾರ್ಷಿಕೋತ್ಸವ
ನಾನು ಗೆಸ್ಟ್
ಎದೆಗೆ ಬಿದ್ದ ಅಕ್ಷರದ
ಶ್ರುತಿ ಹಿಡಿದು
ಮಾತನಾಡಲು ಪ್ರಯತ್ನ
ಮಾಡಿದೆ
ಆ ತುಂಟ ಪೋಕರಿಗಳು
ಸಣ್ಣ ಮುಗ್ಧ
ಮಕ್ಕಳಂತೆ ಆಲಿಸಿದವು
ಈ ಪುಸ್ತಕ
ನನ್ನನ್ನು
ಮನುಷ್ಯನನ್ನಾಗಿ
ಮತಾಂತರ ಮಾಡಿದೆ.
ಕರ್ನಾಟಕ ಹಾಗೂ ಒಟ್ಟಾರೆಯಾಗಿ ಭಾರತದ ವರ್ತಮಾನ ಹಾಗೂ ಚರಿತ್ರೆಯನ್ನು ಈ ಕೃತಿಯ ಮೂಲಕ ಅರಿಯುತ್ತಾ ಹಾಗೂ ಈ ಕಾಲದ ಬಿಕ್ಕಟ್ಟುಗಳಿಗೆ ಪರಿಹಾರ ಹುಡುಕುವ ಇಲ್ಲಿನ ಚರ್ಚೆಗಳನ್ನು ವ್ಯಾಪಕವಾಗಿ ಬೆಳೆಸುತ್ತಾ ನಾವು ಈ ಮಹತ್ವದ ಸಾಂಸ್ಕೃತಿಕ ಪಠ್ಯವನ್ನು ನಿರಂತರವಾಗಿ ಬೆಳೆಸುತ್ತಿರಬೇಕಾಗುತ್ತದೆ ಅಂದರೆ, ‘ಎದೆಗೆ ಬಿದ್ದ ಅಕ್ಷರ’ದಲ್ಲಿ ಭಾರತೀಯ ಸಮಾಜದ ಹಲವು ಪ್ರಶ್ನೆಗಳಿಗೆ ಕನ್ನಡದ ದೊಡ್ಡ ಲೇಖಕನೊಬ್ಬ ಕಾಲಕಾಲಕ್ಕೆ ಕಂಡುಕೊಂಡಿರುವ ಉತ್ತರಗಳನ್ನು ಒಂದು ವ್ಯಾಪಕ ಸಿದ್ಧಾಂತದ ಚೌಕಟ್ಟಿಗೆ ತಂದು ಓದುಗರ ಎದೆಗೆ ಮತ್ತೆ ಮತ್ತೆ ದಾಟಿಸುವ ಅಗತ್ಯವೂ ಇದೆ. ಗಾಂಧೀಜಿಯವರ ‘ಹಿಂದ್ ಸ್ವರಾಜ್’ ಅಂಬೇಡ್ಕರ್ ಅವರ ‘ಜಾತಿವಿನಾಶ’ ಲೋಹಿಯಾ ಅವರ ‘ಜಾತಿಪದ್ಧತಿ’ ಥರದ ಪುಸ್ತಕಗಳ ಮೂಲ ಚಿಂತನೆಗಳನ್ನು ಚಿಂತಕರು, ಹೋರಾಟಗಾರರು ಕಾಲ-ಕಾಲಕ್ಕೆ ವಿವರಿಸಿಕೊಂಡಂತೆ, ‘ಎದೆಗೆ ಬಿದ್ದ ಅಕ್ಷರ’ದ ಮೂಲ ಆಶಯಗಳನ್ನೂ ಜವಾಬ್ದಾರಿಯುತ ಓದುಗರು ವಿಸ್ತರಿಸಿಕೊಳ್ಳಬೇಕಾಗುತ್ತದೆ. ಕೇವಲ ಈ ಪುಸ್ತಕವನ್ನಷ್ಟೇ ಅಲ್ಲ, ಕುವೆಂಪು ಅವರ ‘ವಿಚಾರ ಕ್ರಾಂತಿಗೆ ಆಹ್ವಾನ’ ಲಂಕೇಶರ ‘ಟೀಕೆ ಟಿಪ್ಪಣಿ’ ಮುಂತಾದ ಅನೇಕ ಕನ್ನಡ ಸಾಂಸ್ಕೃತಿಕ ಪಠ್ಯಗಳನ್ನು ಕೂಡ ಹೀಗೆ ನಾವು ಕಾಲ-ಕಾಲಕ್ಕೆ ವಿಸ್ತರಿಸಿಕೊಳ್ಳುತ್ತಾ ವಿವರಿಸುತ್ತಿರಬೇಕಾಗುತ್ತದೆ. ಆ ಮೂಲಕ ಈ ಚಿಂತನೆಗಳನ್ನು ಇನ್ನಷ್ಟು ಸಮಕಾಲೀನಗೊಳಿಸಿ ನಾಳಿನ ಕ್ರಿಯೆಗಳಿಗೆ ಕೊಂಡೊಯ್ಯಬೇಕಾಗುತ್ತದೆ.”