ಆತ್ಮಸಾಕ್ಷಿ ಎಂಬುದೊಂದು ಇದೆಯೆ?

[ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಪ್ರತಿಷ್ಠಾನದ ವಿ.ಎಮ್.ಇನಾಂದಾರ್ ಪ್ರಶಸ್ತಿ-2013 ಸ್ವೀಕಾರ ಸಮಾರಂಭದಲ್ಲಿ ಮಹಾದೇವ ಅವರು ಆಡಿದ ಮಾತುಗಳು.]

 

ಇತ್ತೀಚೆಗೆ ’ವರದಿಗಾರ’ ಅನ್ನೋ ಬ್ಲಾಗಲ್ಲಿ ‘ಎದೆಗೆ ಬಿದ್ದ ಅಕ್ಷರ ಮತ್ತು ಜಾತಿ ಆತಂಕ’ ವಿಷಯದ ಕುರಿತು ಒಂದು ಚರ್ಚೆ ನಡೆಯಿತು. ಚರ್ಚೆ ತೆರೆದುಕೊಳ್ಳುವುದು ಹೀಗೆ: ‘ಮೇಲ್ಜಾತಿಯವರು ಕೆಳ ಜಾತಿಯವರನ್ನು ಹೀಗೆ ಕೆಟ್ಟದಾಗಿ ನಡೆಸಿಕೊಂಡಿದ್ದು ನಿಜ. ಈಗ ಈ ಜಾತಿ, ಮೈಲಿಗೆ ಎಲ್ಲ ಯಾರೂ ಮಾಡೋದಿಲ್ಲ. ಈಗೆಲ್ಲಾ ಅಸ್ಪಶ್ಯತೆ ಇಲ್ಲ ಅಂತಿದ್ದರೂ, ‘ಎದೆಗೆ ಬಿದ್ದ ಅಕ್ಷರ’ ಪುಸ್ತಕ ಓದಿದ ಬಳಿಕ, ನಮ್ಮವರು ಹಿಂದಿನವರಿಗೆ ಹೀಗೆಲ್ಲ ಮಾಡಿದ್ದರಲ್ಲಾ ಎಂಬ ಅಳುಕು ನಮ್ಮೊಳಗೆ ಹುಟ್ಟಿ, ಬೇಸರ ಉಂಟು ಮಾಡುತ್ತದೆ’ ಎಂದು ಒಬ್ಬರು ತಮ್ಮ ದುಗುಡ ಹಂಚಿಕೊಳ್ಳುತ್ತಾರೆ. ಅವರೇ ಮುಂದುವರಿದು, ಇನ್ನೊಂದೆಡೆ ಹೀಗೆ ಪ್ರತಿಕ್ರಿಯಿಸುತ್ತಾರೆ -ಕಾಂಬೋಡಿಯಾಕ್ಕೆ ಪ್ರವಾಸ ಹೋಗಿದ್ದಾಗ ಅಲ್ಲಿ, ಮೈನಿಂಗ್ ಬ್ಲಾಸ್ಟ್‌ನಿಂದ ಕೈ ಕಾಲು ಕಳೆದುಕೊಂಡಿರುವ ವ್ಯಕ್ತಿಯೊಬ್ಬನನ್ನು ನಾನು ನೋಡಿದೆ. ಬ್ಲಾಸ್ಟಿಂಗ್‌ನಲ್ಲಿ ಅವನಂತೆ ಅಂಗವಿಕಲರಾದವರೆಲ್ಲ ಜೊತೆ ಸೇರಿ ಮ್ಯೂಸಿಕ್ ತಂಡ ಕಟ್ಕೊಂಡಿರ್‍ತಾರೆ. ‘ನಮಗೆ ಅಂಗವೈಕಲ್ಯತೆ ಇದೆ. ನಮ್ಮ ಮಕ್ಕಳನ್ನು ಸಾಕೋಕೆ ನಿಮ್ಮ ಸಹಾಯ ಬೇಕು’ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡುತ್ತಿರುತ್ತಾರೆ. ಜೊತೆಗೆ ‘ನಮ್ಮ ಮುಂದಿನ ತಲೆಮಾರು ನಿಮ್ಮಿಂದ ಯಾವ ಸಹಾಯವನ್ನೂ ಪಡೆಯುವುದಿಲ್ಲ. ಅವರು ತಮ್ಮ ಬದುಕನ್ನು ಅವರೆ ಕಟ್ಟಿಕೊಳ್ಳುವ ಪ್ರಯತ್ನ ಮಾಡ್ಕೋತಾರೆ’ ಎಂದು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ. ಆ ಗುಂಪು ತಮ್ಮ ಆ ಮನವಿಯ ಜೊತೆಗೆ ಅವರು ಮ್ಯೂಸಿಕ್ ಕಚೇರಿ ನಡೆಸುತ್ತಾ ಹಣ ಸಂಗ್ರಹಿಸುತ್ತಿರುತ್ತಾರಂತೆ. ಸರಳಾ ಎನ್ನುವ ಲೇಖಕಿ, ಈ ಘಟನೆಯನ್ನು ಉಲ್ಲೇಖಿಸಿ, ಮೀಸಲಾತಿಯ ಜೊತೆಗೆ ಇದನ್ನು ಜೋಡಿಸುತ್ತಾರೆ. ‘ಮೀಸಲಾತಿಯ ಅವಕಾಶ ಒಂದು ಹಂತದವರೆಗೆ ಮಾತ್ರ ಸೂಕ್ತ, ಅವರ ಮಗ, ಮೊಮ್ಮಗ, ಮುಮ್ಮಗ ಎಲ್ಲರಿಗೂ ಮೀಸಲಾತಿ ಅವಶ್ಯಕತೆ ಇರುತ್ತದೆಯೆ? ಉತ್ತಮ ಸ್ಥಿತಿಯಲ್ಲಿರುವ ದಲಿತ ಮಕ್ಕಳಿಗೆ ಮೀಸಲಾತಿಯನ್ನು ಕೊಡುವುದು ಸಲ್ಲ. ಅತೀ ಕೆಳಮಟ್ಟದಲ್ಲಿರುವ, ಅತ್ಯಗತ್ಯವಿರುವ, ಬೀದಿಯಲ್ಲಿ ಕಸ ಗುಡಿಸುವ, ಕಡು ಬಡತನದಿಂದ ಓದಲಾಗದೇ ಇರುವವರಿಗೆ ಮಾತ್ರ ಈ ಮೀಸಲಾತಿ ಸೂಕ್ತ’ ಎಂದು ಅಭಿಪ್ರಾಯಪಡುತ್ತಾರೆ.

ನಿಜ. ಕಡು ಬಡವರಿಗೆ ಮೀಸಲಾತಿ ಸಿಗುವುದರ ಬಗ್ಗೆ ನನ್ನ ಯಾವುದೇ ಆಕ್ಷೇಪವಿಲ್ಲ. ಆದರೆ ಮೈನಿಂಗ್ ಬ್ಲಾಸ್ಟ್ ಸಂತ್ರಸ್ತರ ಉದಾಹರಣೆಯೊಂದಿಗೆ ಜಾತಿಯಿಂದ ಊನಗೊಂಡ ಭಾರತದ ಸಾಮಾಜಿಕ ಸಂಕಷ್ಟದ ಮೀಸಲಾತಿಗೆ ಕೂಡಿಸಿ ವಿವರಿಸುವುದಕ್ಕೆ ಮಾತ್ರ ನನ್ನ ಆಕ್ಷೇಪವಿದೆ. ಅಲ್ಲಿ ಏನೋ ಒಂದು ಎಳೆ ತಪ್ಪುತ್ತಿದೆ ಎಂದು ನನಗೆ ಅನ್ನಿಸುತ್ತಿದೆ. ಅದೇ ಬ್ಲಾಗ್‌ನಲ್ಲಿ ಮತ್ತೂ ಒಬ್ಬರು ಇತ್ತೀಚೆಗೆ ಹಣ ಚೆಲ್ಲಿ ಪ್ರವೇಶ ಪಡೆಯುವ ಪೇಮೆಂಟ್ ಸೀಟ್, ಡೊನೇಷನ್‌ಸೀಟ್ ಪರಿಪಾಟ ಹೆಚ್ಚುತ್ತಿರುವುದಕ್ಕೆ ಆತಂಕಗೊಳ್ಳದೆ ಹೀಗೆ ವಾದ ಮಾಡುತ್ತಾರೆ- ‘ಇಂದು ಕಾಲ ಸಾಕಷ್ಟು ಬದಲಾಗಿದೆ. ಇಂದು ಈ ಮೀಸಲಾತಿಯ ದೆಸೆಯಿಂದಾಗಿ, ನಿಜವಾಗಿ ಕಷ್ಟಪಟ್ಟು ಓದಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅನ್ಯಾಯ ಆಗ್ತಾಯಿದೆ’. -ಈ ಅಭಿಪ್ರಾಯ ಮಂಡಿಸುವವರೆಲ್ಲಾ ಇದ್ದುದರಲ್ಲೇ ಸಜ್ಜನರು. ಸಮಾಜಕ್ಕೆ ಒಳ್ಳೇದಾಗಬೇಕು ಅನ್ನೋ ದೃಷ್ಟಿಕೋನ ಇಟ್ಟುಕೊಂಡೋರು. ಇಂದು ನಮ್ಮ ಆಲೋಚನೆಗಳು ಹೇಗಿವೆ ಎನ್ನುವುದಕ್ಕೆ ಇವುಗಳು ಉದಾಹರಣೆ. ಈ ಆಲೋಚನೆಗಳು ಮೇಲ್ನೋಟದವು. ಒಳಹೊಕ್ಕು ನೋಡಿದರೆ ಕಾಣುವುದೇ ಬೇರೆ. ಮುಂದೆ ಪ್ರಸ್ತಾಪಿಸುವ ಎರಡು ಸಂಗತಿಗಳು -ಒಂದು: ಯುಪಿಎಸ್‌ಸಿ ಛೇರ್ಮೆನ್‌ರ ಕುಟುಕು ಕಾರ್‍ಯಾಚರಣೆ, ಎರಡು: ಜಾತಿ ಟೌನ್‌ಶಿಪ್‌ನ ಯೋಜನೆ ಇವು ಭಾರತದೊಳಗೆ ಅಂತರ್ಗತವಾಗಿರುವ ಜಾತಿಯನ್ನು ನಮ್ಮ ಮುಂದೆ ಬೆತ್ತಲೆ ಮಾಡಿ ನಿಲ್ಲಿಸುತ್ತದೆ.

ಇಂಥವುಗಳನ್ನೆಲ್ಲಾ ಪರೀಕ್ಷೆ ಮಾಡೋದಕ್ಕಾಗಿಯೇ ಮಾಡಿದರೇನೋ ಎಂಬಂತೆ, ಐದಾರು ವರ್ಷಗಳ ಹಿಂದೆ, ಯುಪಿಎಸ್‌ಸಿಯ ಅಂದಿನ ಚೇರ್‌ಮೆನ್ ಸುಖದೇವ್ ತೋರಟ್ ಅವರು ಒಂದು ಸ್ಟಿಂಗ್ ಆಪರೇಷನ್ ಅಂದ್ರೆ ‘ಕುಟುಕು ಕಾರ್ಯಾಚರಣೆ’ ನಡೆಸುತ್ತಾರೆ. ಅದಕ್ಕಾಗಿ ಅವರು ‘ನಾವು ಜಾಗತಿಕ ಮಟ್ಟದಲ್ಲಿ ಯೋಚನೆ ಮಾಡಬೇಕು, ಪ್ರತಿಭೆಗೆ, ಕೆಲ್ಸಕ್ಕೆ ಮನ್ನಣೆ ಕೊಡಬೇಕು’ ಅಂತ ಸಾರುವ ವಿಪ್ರೋ, ಇನ್ಫೋಸಿಸ್, ರಿಲಯನ್ಸ್‌ ಥರದ ದೊಡ್ಡ ದೊಡ್ಡ ಸಂಸ್ಥೆಗಳು, ಮಲ್ಟಿ ನ್ಯಾಶನಲ್ ಕಂಪೆನಿಗಳು ಇವೆಯಲ್ಲಾ ಅಂಥವುಗಳಲ್ಲಿ ಒಂದಿಷ್ಟು ಕಂಪೆನಿಗಳ ಪಟ್ಟಿ ಮಾಡಿಕೊಂಡು ಅಲ್ಲಿಗೆ ಸಿದ್ಧಪಡಿಸಿದ ನಕಲಿ ಅರ್ಜಿಗಳನ್ನು ಸಲ್ಲಿಸುತ್ತಾರೆ. ಆ ಅರ್ಜಿಗಳಲ್ಲಿ ಹೆಸರು ನೋಡಿದರೇ ಜಾತಿ ತಿಳಿಯುವಂತೆ ಅಂದರೆ ಬ್ರಾಹ್ಮಣರ ಹೆಸರಿಗೆ ಭಟ್, ಶರ್ಮಾ, ಪುರೋಹಿತ್, ಕಾಮತ್, ದ್ವಿವೇದಿ, ತ್ರಿವೇದಿ, ಚತುರ್ವೇದಿ, ಚಟರ್ಜಿ…ಈ ಥರಾ. ಹಾಗೆಯೇ ಹಿಂದುಳಿದ ವರ್ಗಗಳೆಂದು ಮೇಲ್ನೋಟಕ್ಕೆ ಗುರುತಿಸುವಂತಹ ನಾಯಕ್, ಶೆಟ್ಟಿ, ಗೌಡ ಹೀಗೆ, ಜೊತೆಗೇ ಹೆಸರು ನೋಡಿದರೆ ದಲಿತರು, ಮುಸ್ಲಿಮರು ಎಂದು ಗೊತ್ತಾಗುವಂತೆ ಆ ಅರ್ಜಿಗಳು ಇರುವಂತೆ ನೋಡಿಕೊಳ್ಳುತ್ತಾರೆ. ಆ ಅರ್ಜಿಯ ಎಲ್ಲರೂ ಎಂಟೆಕ್ ಓದಿದೋರು. ಒಂದೇ ಕ್ವಾಲಿಫಿಕೇಶನ್, ಎಲ್ಲಾ ಪ್ರತಿಷ್ಠಿತ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಬೇರೆ. ಹೀಗೆ ಸಿದ್ಧ ಪಡಿಸಿದ ಅರ್ಜಿಗಳನ್ನು ವಿಪ್ರೋ, ಇನ್ಫೋಸಿಸ್, ರಿಲಾಯನ್ಸ್ ಮೊದಲಾದ ಬೃಹತ್ ಮಲ್ಟಿ ನ್ಯಾಶನಲ್ ಕಂಪೆನಿಗಳಿಗೆ ಕಳಿಸುತ್ತಾರೆ. ‘ಇದು ನಮ್ಮ ಕ್ವಾಲಿಫಿಕೇಶನ್. ನಿಮ್ಮ ಸಂಸ್ಥೆಯಲ್ಲಿ ಕೆಲಸ ಮಾಡಲು ನಮಗೆ ಆಸಕ್ತಿಯಿದೆ. ದಯವಿಟ್ಟು ಉದ್ಯೋಗಾವಕಾಶವಿದ್ದರೆ ತಿಳಿಸಿ’ ಎಂದು ಅರ್ಜಿಗಳಲ್ಲಿ ಅವರು ಮನವಿ ಮಾಡಿರುತ್ತಾರೆ. ಕೆಲವೇ ದಿನಗಳಲ್ಲಿ ಖಾಸಗಿ ಸಂಸ್ಥೆಗಳಿಂದ ಪ್ರತಿಕ್ರಿಯೆ ಬರುತ್ತದೆ. ಬ್ರಾಹ್ಮಣರ ಅರ್ಜಿಗಳೆಲ್ಲವೂ ಸಂದರ್ಶನಕ್ಕೆ ಆಯ್ಕೆಯಾದರೆ, ಹಿಂದುಳಿದ ವರ್ಗಗಳ ಅರ್ಜಿಗಳಲ್ಲಿ ಶೇ.7೦ರಷ್ಟಕ್ಕೆ ಸಂದರ್ಶನಕ್ಕೆ ಕರೆ ಬರುತ್ತದೆ. ಆದರೆ ದಲಿತರಿಗೆ ಸಂದರ್ಶನಕ್ಕೆ ಕರೆ ಬರುವುದು ಶೇ.2೦ರಷ್ಟು, ಮುಸ್ಲಿಮರಿಗೆ ಶೇ. 1೦ ರಷ್ಟು ಮಾತ್ರ.

ಪ್ರತಿಭೆ ಪ್ರತಿಭೆ ಎಂದು ಬೊಬ್ಬೆ ಹೊಡೆಯುವವರ ನಡುವೆ ಇದು ಜರುಗಿದೆ. ಇಲ್ಲಿ ಪ್ರತಿಭೆಯ ಕವಚದಲ್ಲಿ ಜಾತಿ ಬಚ್ಚಿಟ್ಟುಕೊಂಡಿದೆ. ದಲಿತರ ಕೆನೆಪದರಕ್ಕೇನೆ ಈ ರೀತಿಯಾಗುವುದಾದರೆ ಇನ್ನುಳಿದವರಿಗೆ ಯಾವ ಯಾವ ರೀತಿ ವಂಚನೆಗಳು ಜರುಗುತ್ತವೋ! ಇದು ಕಾಣುವುದು ನಮ್ಮ ಆಂತರ್ಯವನ್ನು ಸಾಯಿಸಿಕೊಳ್ಳದಿದ್ದರೆ ಮಾತ್ರ. ಅದಕ್ಕೂ ಇದಕ್ಕೂ ಗಾಂಧಿ ಗಾಂಧಿ ಎನ್ನುವ ನಾವು ‘ಮನುಷ್ಯ ತನ್ನನ್ನು ವಂಚಿಸಿಕೊಂಡಷ್ಟು ಬೇರೆ ಯಾರನ್ನೂ ವಂಚಿಸಿರಲಾರ’ -ಎಂಬ ಗಾಂಧಿಯ ಈ ಮಾತನ್ನು ಆಗೊಮ್ಮೆ ಈಗೊಮ್ಮೆಯಾದರೂ ನೆನಸಿಕೊಳ್ಳಬೇಕಾಗಿದೆ.

ಮೇಲಿನ ಉದಾಹರಣೆಯನ್ನು ಲಜ್ಜಾಜಾತಿ ಎನ್ನಬಹುದು. ಈ ಲಜ್ಜಾಜಾತಿಯಲ್ಲಿ ಆತ್ಮವಂಚನೆ ಇರುತ್ತದೆ. ಯಾಕೆಂದರೆ ಅದರಲ್ಲಿ ಸ್ವಲ್ಪ ಮಟ್ಟಿಗೆ ಆತ್ಮ ಇರುತ್ತದೆ. ಆದರೆ ನಿರ್ಲಜ್ಜಾಜಾತಿಗೆ ಆತ್ಮವಂಚನೆಯೇ ಇರುವುದಿಲ್ಲ ಯಾಕೆಂದರೆ ಅದರೊಳಗೆ ಆತ್ಮವೇ ಇರುವುದಿಲ್ಲ. ಅದಕ್ಕೆ ಈ ಉದಾಹರಣೆ ನೋಡಿ: ಪ್ರಜಾವಾಣಿ ದಿನಪತ್ರಿಕೆಯಲ್ಲಿ ಎಪ್ರಿಲ್ 27ರಂದು ಒಂದು ವರದಿ ಬಂದಿತ್ತು. ಆ ವರದಿ ಪ್ರಕಾರ, ನಿರ್ದಿಷ್ಟ ಜಾತಿಗೇ ಸೀಮಿತಗೊಂಡಿರುವ ಎರಡು ಟೌನ್‌ಶಿಪ್‌ಗಳು ಬೆಂಗಳೂರು ಸಮೀಪ ಈಗಾಗಲೇ ಸಿದ್ಧಗೊಳ್ಳುತ್ತಿವೆ. ಒಂದು ಲಿಂಗಾಯತ ಟೌನ್‌ಶಿಪ್ ಆದರೆ, ಇನ್ನೊಂದು ಬ್ರಾಹ್ಮಣರಿಗೆ ಮೀಸಲಾಗಿರುವ ಟೌನ್‌ಶಿಪ್. ಒಂದು ವಿಶ್ವಗುರು ಬಸವೇಶ್ವರ ಸಂಸ್ಥೆಗೆ ಸಂಬಂಧ ಪಟ್ಟದ್ದಾದರೆ, ಇನ್ನೊಂದು ಸನಾತನ ಧರ್ಮ ಪರಿಚಾರಕ ಟ್ರಸ್ಟ್ ಬೆಂಗಳೂರು ಇವರ ಒಡೆತನಕ್ಕೆ ಸಂಬಂಧ ಪಟ್ಟದ್ದು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 5೦ ಕಿಲೋಮೀಟರ್ ದೂರದಲ್ಲಿರೋ ಗುಡಿಬಂಡೆ ತಾಲೂಕಿನ ಹತ್ತಿರ ಈ ಟೌನ್‌ಶಿಪ್ ನಿರ್ಮಾಣವಾಗುತ್ತಿದೆ. ಈ ಯೋಜನೆಗೆ ಅವರದೇ ಆದ ವೆಬ್‌ಸೈಟ್ ಕೂಡ ಇದೆ.

ಈ ಟೌನ್‌ಶಿಪ್‌ನಲ್ಲಿ ವಾಸಿಸಬೇಕಾದರೆ ಅವರವರ ಜಾತಿಯ ಅರ್ಹತೆ ಕಡ್ಡಾಯ. ನೂರಾರು ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಂಡು ಈ ಟೌನ್‌ಶಿಪ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಜೊತೆಗೆ ಈ ಕುರಿತಂತೆ ಇದರ ಕಾರ್ಯನಿರ್ವಹಣಾಧಿಕಾರಿ ಸಮರ್ಥನೆಯನ್ನೂ ನೀಡುತ್ತಾರೆ. “ಒಂದೇ ಜಾತಿ ಸಮುದಾಯದವರ ಟೌನ್‌ಷಿಪ್ ನಿರ್ಮಾಣ ಮಾಡೋದರಿಂದ ನಾವು ಯಾವ ಅಪರಾಧವನ್ನೂ ಮಾಡಿಲ್ಲ ಅಥವಾ ಮಾಡಿದಂತಲ್ಲ. ಒಂದೇ ಜಾತಿಯವರು ಒಂದೇ ಕಡೆ ಇರೋದ್ರಲ್ಲಿ ತಪ್ಪೇನಿದೆ?” ಎಂದು ಕೇಳುತ್ತಾರೆ.

ಬೇರೆ ಯಾವ ಜಾತಿಯವರಿಗೂ ಈ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ಅವಕಾಶವಿಲ್ಲ. ಕುಟುಂಬಗಳ ಉದ್ಯೋಗ, ಜೀವನಪದ್ಧತಿ ಮುಂತಾದವುಗಳ ಸಮಗ್ರ ಮಾಹಿತಿ ಪಡೆದು ಅವಕಾಶ ನೀಡಲಾಗುತ್ತದೆ. ಇಲ್ಲಿ ಅರ್ಹತೆ ಜಾತಿ ಮಾತ್ರ. ಒಂದು ವೇಳೆ ಅನ್ಯ ಜಾತಿಯವರು ಕಣ್ತಪ್ಪಿಸಿ ನಿವೇಶನ ಪಡೆದುಬಿಟ್ಟಿದ್ದರೆ ಆ ವಿಷಯವನ್ನು ಟ್ರಸ್ಟ್‌ನ ಗಮನಕ್ಕೆ ತರಲಾಗುತ್ತೆ, ಆ ಟ್ರಸ್ಟ್‌ನ ಸದಸ್ಯರು ಅಗತ್ಯ ಪರಿಶೀಲನೆ ಮಾಡುತ್ತಾರೆ. ಅವರ ವಿರುದ್ಧ ಕ್ರಮ ಕೈಗೊಳ್ತಾರೆ. ಅವರನ್ನು ಟೌನ್‌ಷಿಪ್‌ನಿಂದ ಹೊರ ಹಾಕ್ಲೂಬಹುದು. ಅವರ ಸೈಟನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಮತ್ತು ಬೇರೆ ರೀತಿಯ ಕ್ರಮಗಳನ್ನೂ ತೆಗೆದುಕೊಳ್ಳಬಹುದು ಅಂತ ಕಾರ್ಯನಿರ್ವಹಣಾಧಿಕಾರಿ ಪತ್ರಿಕೆಗೆ ತಮ್ಮ ನಿಯಮಗಳನ್ನು ಸ್ಪಷ್ಟಪಡಿಸುತ್ತಾರೆ. ಇಷ್ಟಕ್ಕೇ ನಿಲ್ಲುವುದಿಲ್ಲ. ಸರಕಾರಕ್ಕೂ ಇವರು ಸವಾಲು ಹಾಕಿದ್ದಾರೆ. ಕೇಂದ್ರ ಅಥವಾ ರಾಜ್ಯ ಸರಕಾರ ಎಷ್ಟೇ ಅಡಚಣೆ ಮಾಡಿದ್ರೂ ಟೌನ್‌ಶಿಪ್ ನಿರ್ಮಾಣದಿಂದ ನಾವು ಹಿಂದೆ ಸರಿಯೋದಿಲ್ಲ ಎಂದು ಸವಾಲು ಹಾಕಿದ್ದಾರೆ. ಇವರು ಯಾವ ಕಾಲದಲ್ಲಿದ್ದಾರೆ? ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು? ಇದನ್ನು ಓದಿ, ಕೇಳಿಕೊಂಡೂ ನಾವು ಸಹನೆಯಿಂದ ಕೂತಿದ್ದೀವಲ್ಲ, ನಮಗೇನು ಮಾಡಬೇಕು?

ನನಗನ್ನಿಸುತ್ತದೆ- ಯಾವ ಜೀವಗಳಿಗೂ ಅಪಾಯವಾಗದಂತೆ, ಆ ಜಾತಿ ಟೌನ್‌ಶಿಪ್ ನಿರ್ಮಾಣಕ್ಕೆ ಬಾಂಬ್ ಹಾಕಬೇಕು. ಯಾಕೆಂದರೆ ನಾವು ಹೊಸ ಭಾರತವನ್ನು ಕಟ್ಟಬೇಕಾಗಿದೆ. ಕಷ್ಟ. ತುಂಬಾನೇ ಕಷ್ಟ.. ಆದರೂ ಕಟ್ಟಬೇಕಾಗಿದೆ.