ಪದ ಬಿಕ್ಕು…ಸಿದ್ದು ಜನ್ನೂರ್

[ಸಿದ್ದು ಜನ್ನೂರ್ ಅವರು ದೇವನೂರ ಮಹಾದೇವ ಅವರ ಕುರಿತು 8.4.2025ರಂದು ಬರೆದ ಈ ಕವಿತೆಯನ್ನು ನಮ್ಮ ಬನವಾಸಿ ಪ್ರಕಟಣೆಗಾಗಿ ಕಳಿಸಿದ್ದಾರೆ. ]
ಪ್ರೀತಿಯ ಹೂ ಕಟ್ಟುತ್ತ ಕಟ್ಟುತ್ತ
ಕಣ್ಣೆದುರಿಗೆ ಸಿಕ್ಕ ಬುದ್ಧನಿಗೆ ಶರಣಾಗುವುದು
ಮಾದೇವಣ್ಣನಿಗೂ ಸುಮಿತ್ರಮ್ಮನಿಗೂ ಒಲಿದ ಅದೃಷ್ಟ…
ಎದೆಗೆ ಬಿದ್ದ ಅಕ್ಷರದ ಯಾತ್ರೆಗೆ
ಒಡಲಾಳದ ಸಾಕವ್ವನೆ ಸಾಕ್ಷಿ
ಯಾವ ಆಡಂಬರವಿಲ್ಲದ ಆಡುಭಾಷೆಗೆ
ಪರಿಶುದ್ಧ ಉಡುಗೆಯನಿಟ್ಟ ಪದ ಬಿಕ್ಕು
ಅಳುವವರ ಕಣ್ಣಂಚಿನ ನೀರಿಗೆ
ಅಳುಕದೆ ಬದುಕುವ ಬುದ್ಧನ ದಾರಿಗೆ
ಬೆಳಕಿಡಿದ ಕತೆಗೆ ಭೋಧಿಯ ನೆರಳು…
ನಿಶ್ಚಿತನಾಗಿರಬಹುದು
ಆದರೆ ಇದು ಅಸಮತೆಯ ನೆಲ
ಸಮತೆಯ ಶಿಸ್ತಿಗೆ ಭೀಮನೇ ಕೈ ಹಿಡಿದ ಬುದ್ಧ
ಮನಕ್ಕಷ್ಟೆ ಅಲ್ಲ, ಮನಸಿಗೂ ಬೇಕು
ಹಾಗೆಂದು ನಡೆವ ದಾರಿ ದುರ್ಗಮವಲ್ಲ
ಕಣ್ಣು ಹಾಯ್ದಷ್ಟೆ ಅಂಚಿನಲ್ಲಿ ಬುದ್ಧನಿದ್ದಾನೆ
ಹುಳ ಉಪ್ಪರಿಗೆಯಂತ ನಾಯಿಪಾಡು ಬದುಕಿಗೆ
ದೇವರಿಗಿಂತ ಬುದ್ಧಬೇಕೆಂಬುದೆ ಭೀಮವಾದ…
ಹಾಗೆ ಬದುಕ ಬೇಕು
ಯಾರಿಗೂ ಕೇಡು ಬಯಸದೆ
ಸನಿಹದಲ್ಲೆ ಇರುವ ಬುದ್ಧನಿಗೆ ಆಪ್ತನಾಗಿ
ಒಡಲಾಳದ ಸಂಕಟಗಳಿಗೆ ದಾರಿ ತೋರಿ
ಎಲ್ಲವನ್ನು ಮುರಿದು ಕಟ್ಟಿ ಬೆಸೆಯಬೇಕು
ಬುದ್ಧನಿಗೆ ಮತ್ತೆ ಕೈಚಾಚಿ ನಡೆಯಬೇಕು
ಮಾದೇನವನೆಂಬ ಮನಃಸಾಕ್ಷಿ ಬದುಕಿದಂತೆ
ಬದುಕಬೇಕು ಎಲ್ಲವನ್ನು ತೊರೆದ ಸಾಮಾನ್ಯನಂತೆ…