ಸಮಾಜಕ್ಕೆ ಸತ್ಯದ ಅರಿವು ಮೂಡಿಸಲಿರುವ “ಎದೆಗೆ ಬಿದ್ದ ಅಕ್ಷರ”

[24.5.2025ರ‘ಆಂದೋಲನ’ಕ್ಕೆ ನೀಡಿದ ಸಂದರ್ಶನದಲ್ಲಿ ನಾಟಕ ನಿರ್ದೇಶಕ ಸಿ.ಬಸವಲಿಂಗಯ್ಯ… ಸಂದರ್ಶನ: ಚಿರಂಜೀವಿ ಸಿ.ಹುಲ್ಲಹಳ್ಳಿ]
ಮೈಸೂರು: ಹಿರಿಯ ಸಾಹಿತಿ ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ವನ್ನು ರಂಗರೂಪಕ್ಕಿಳಿಸಿರುವುದು ಒಂದು ಸವಾಲು. ದೇವನೂರರ ಬರವಣಿಗೆಯಲ್ಲಿ ಇರುವ ಕಾವ್ಯಾತ್ಮಕ ಅಂಶಗಳು ಇದನ್ನು ರಂಗರೂಪಕ್ಕೆ ಇಳಿಸುವುದಕ್ಕೆ ಪ್ರೇರಣೆ ನೀಡಿದವು ಎಂದು ಎದೆಗೆ ಬಿದ್ದ ಅಕ್ಷರ ನಾಟಕದ ನಿರ್ದೇಶಕ ಸಿ.ಬಸವಲಿಂಗಯ್ಯ ಹೇಳಿದ್ದಾರೆ.
“ಎದೆಗೆ ಬಿದ್ದ ಅಕ್ಷರ” ಕೃತಿಯನ್ನು ಓದುವಾಗ ಬೀರಿದ ಪರಿಣಾಮ ಹಾಗೂ ಹೊಸ ಕಲಾವಿದರಿಗೆ ತರಬೇತಿ ನೀಡಿ ಅಭಿನಯಕ್ಕೆ ರೂಢಿಸಿರುವುದು, ಈ ಕೃತಿ ನಾಟಕವಾದ ಉದ್ದೇಶಗಳನ್ನು ಅವರು ‘ಆಂದೋಲನ’ ದಿನಪತ್ರಿಕೆಗೆ ನೀಡಿದ ಕಿರು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಆಂದೋಲನ: ಎದೆಗೆ ಬಿದ್ದ ಅಕ್ಷರ ಕೃತಿ ನಾಟಕ ರೂಪುಗೊಳ್ಳಲು ಪ್ರೇರಣೆ ಏನು?
ಬಸವಲಿಂಗಯ್ಯ: ‘ಎದೆಗೆ ಬಿದ್ದ ಅಕ್ಷರ’ ಪುಸ್ತಕ ಬಿಡುಗಡೆಯಾದ ನಂತರ ದೇವನೂರ ಮಹಾದೇವ ಅವರು ನಮ್ಮ ಮನೆಗೆ ಬಂದು ಅದರ ಒಂದು ಪ್ರತಿಯನ್ನು ಕೊಟ್ಟರು. ಆದರೆ, ಇದನ್ನು ನಾಟಕ ಮಾಡಿ ಎಂದು ಹೇಳಿರಲಿಲ್ಲ. ನಾನೊಬ್ಬ ಕಲಾವಿದನಾಗಿ ಕೃತಿಯನ್ನು ರಂಗರೂಪಕ್ಕೆ ಪರಿವರ್ತಿಸಬಹುದು ಅನಿಸಿತು. ಪುರಾಣದ ಕಥೆಗಳನ್ನು ಹೇಳುವ ಬದಲು ವರ್ತಮಾನಕ್ಕೆ ಹತ್ತಿರವಾದ ವಿಷಯಗಳನ್ನು ನಾಟಕವಾಗಿಸಬೇಕು. ಇದರಲ್ಲಿ ಧರ್ಮ ರಾಜಕಾರಣ, ಅಸ್ಪೃಶ್ಯತೆ, ಅಸಮಾನತೆ, ಸಾಂಸ್ಕೃತಿಕ ರಾಜಕಾರಣದ ಒಳನೋಟಗಳಿವೆ. ಈ ಎಲ್ಲ ವಿಷಯಗಳೂ ನನಗೆ ಪ್ರೇರಣೆ ನೀಡಿದವು. ಭಾರತೀಯ ಸಂಸ್ಕೃತಿ, ಪರಂಪರೆಗಳು ಸಾಂಸ್ಕೃತಿಕ ರಾಜಕಾರಣದಲ್ಲಿವೆ. ಈ ಅಂಶ ದೇವನೂರ ಮಹಾದೇವ ಅವರ ಪುಸ್ತಕಗಳಲ್ಲಿ ಕಂಡು ಬರಲಿದೆ.
ಆಂದೋಲನ: ‘ಎದೆಗೆ ಬಿದ್ದ ಅಕ್ಷರ’ ಕೃತಿಯನ್ನು ನಾಟಕವಾಗಿ ರೂಪಿಸುವಾಗ ಎದುರಿಸಿದ ಸವಾಲುಗಳೇನು?
ಬಸವಲಿಂಗಯ್ಯ: ಲೇಖನಗಳನ್ನು ರಂಗರೂಪವಾಗಿಸುವುದೇ ಒಂದು ದೊಡ್ಡ ಸವಾಲು. ಏಕೆಂದರೆ ಇಲ್ಲಿ ಒಂದು ಕಥೆ ಇಲ್ಲ. ಜೊತೆಗೆ ಈಗ ಅಭಿನಯಿಸುವ ಕಲಾವಿದರು ರಂಗಭೂಮಿಯ ಹಿನ್ನೆಲೆಯವರಲ್ಲ. ಗೃಹಿಣಿಯರು, ಬ್ಯೂಟಿಷಿಯನ್, ಗಂಜಿ- ಕಲಾವಿದ, ನಿವೃತ್ತ ಪ್ರಾಧ್ಯಾಪಕರು, ಎನ್ಎಸ್ಡಿ ಕಲಾವಿದರು. ನಾಟಕ ತಯಾರಿಗೂ ಮುನ್ನ ಕಲಾವಿದರಿಗೆ ಎದೆಗೆ ಬಿದ್ದ ಅಕ್ಷರ ಪುಸ್ತಕವನ್ನು ಕೊಟ್ಟು ಓದಿಸಿ ನಿಮಗೆ ಯಾವ ಚಾಪ್ಟರ್ ಇಷ್ಟ ಆಯ್ತು ಎಂಬ ಅಭಿಪ್ರಾಯವನ್ನು ಕೇಳಿದ್ದೇನೆ. ಎಲ್ಲರೂ ಅಚ್ಚುಕಟ್ಟಾಗಿ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಆಂದೋಲನ: ಪ್ರಸ್ತುತ ನಾಟಕಕ್ಕೆ ಸಾರ್ವಜನಿಕರ ಪ್ರತಿಕ್ರಿಯೆ ಹೇಗಿದೆ?
ಬಸವಲಿಂಗಯ್ಯ: ನಾಟಕಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಿರುರಂಗ ಮಂದಿರದಲ್ಲಿ ಸತತ ಪ್ರದರ್ಶನಗಳನ್ನು ಕಾಣುತ್ತಿರುವ ಮೊದಲ ನಾಟಕ ಇದಾಗಿದೆ. ಬೆಂಗಳೂರಿನಲ್ಲಿ ನಡೆದ ಪ್ರದರ್ಶನವೂ ಹೌಸ್-ಫುಲ್ ಆಗಿತ್ತು.
ಆಂದೋಲನ: ಇದೇ ಕೃತಿಯನ್ನು ಆಯ್ಕೆ ಮಾಡಿಕೊಳ್ಳಲು ಕಾರಣವೇನು?
ಬಸವಲಿಂಗಯ್ಯ: ಪ್ರಜಾಪ್ರಭುತ್ವದಲ್ಲಿ ಕಲಾವಿದರು, ಸಾಹಿತಿಗಳ ಕೆಲಸವೂ ಇದೆ. ಸಮಾಜದಲ್ಲಿ ತೊಡಕುಗಳ ಬಗ್ಗೆ ಪ್ರಶ್ನೆ ಮಾಡಬೇಕು. ನಾಟಕ ಕೇವಲ ರಂಜನೆಗಷ್ಟೇ ಸಿಮೀತವಾಗಬಾರದು. ರಂಜನೆಯೊಂದಿಗೆ ಬುದ್ಧಿ ಶಕ್ತಿ ವಿಕಸನಕ್ಕೂ ಆದ್ಯತೆ ನೀಡಬೇಕು. ದೇಶದಲ್ಲಿ ನಡೆಯುತ್ತಿರುವ ಘಟನೆಗಳಿಗೆ ರಂಗ ರೂಪ ಪ್ರಸ್ತುತವಾಗಿ ಉತ್ತರವನ್ನು ನೀಡುತ್ತದೆ. ಮತಾಂಧತೆ, ಧರ್ಮ ರಾಜಕಾರಣ, ಅಸ್ಪೃಶ್ಯತೆ, ಮಹಿಳಾ ಸಮಾನತೆ, ರೈತರ ಸಮಸ್ಯೆಗಳು, ಸಾಂಸ್ಕೃತಿಕ ಪ್ರತಿರೋಧ, ಒಳ ಮೀಸಲಾತಿಯ ಸೂಕ್ಷ್ಮ ವಿಚಾರಗಳು ನಾಟಕದಲ್ಲಿವೆ. ಹೃದಯ ಹೀನವಾಗುತ್ತಿರುವ ಸಮಾಜಕ್ಕೆ ಮಾನವೀಯತೆಯ ಅರಿವನ್ನು ಬಿತ್ತಬೇಕಿದೆ. ಈ ಕೆಲಸವನ್ನು ಕಾವ್ಯಾತ್ಮಕವಾಗಿ ದೇವನೂರ ಮಹಾದೇವ ಹೇಳಿದ್ದಾರೆ. ಹೀಗಾಗಿ ಈ ಕೃತಿಯನ್ನು ರಂಗರೂಪಕ್ಕಿಳಿಸಲಾಗಿದೆ.
ಆಂದೋಲನ: ಬಿಡಿ ಲೇಖನಗಳ ಸಂಗ್ರಹವಾದ ಕೃತಿಯನ್ನು ರಂಗರೂಪಕ್ಕೆ ಇಳಿಸಿದ ಬೇರೆ ಉದಾಹರಣೆಗಳು ಇವೆಯೇ?
ಬಸವಲಿಂಗಯ್ಯ: ಬಿಡಿ ಲೇಖನಗಳ ಕೃತಿಯು ರಂಗರೂಪಗೊಂಡಿರುವುದು ಬೀಚಿ ಅವರದ್ದು ಮಾತ್ರ. ಆದರೆ, ಎದೆಗೆ ಬಿದ್ದ ಅಕ್ಷರ ಮಾತ್ರ ಸಮಾಜಕ್ಕೆ ಸತ್ಯದ ಅರಿವನ್ನು ಮೂಡಿಸಲಿದೆ. ನೇರಾನೇರ ಪ್ರಶ್ನೆಗಳನ್ನು ಒಡ್ಡಲಿದೆ. ಕುಸುಮಬಾಲೆ, ದ್ಯಾವನೂರು, ಒಡಲಾಳ, ಕಲ್ಯಾಣದ ಬಾಗಿಲು, ಗೋರ್ಮ್ಮಟ್ಟಿ ನಾಟಕಗಳನ್ನು ಈ ಹಿಂದೆ ಮಾಡಿದ್ದೇನೆ
ಆಂದೋಲನ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಟಕ ನೋಡಲು ವೀಕ್ಷಣೆಗೆ ಬರುತ್ತಿದ್ದಾರೆ. ಏನನಿಸುತ್ತಿದೆ?
ಬಸವಲಿಂಗಯ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಟಕ ವೀಕ್ಷಣೆಗೆ ಬರುವ ಸುದ್ದಿ ತಿಳಿದು ನನಗೆ ಆಶ್ಚರ್ಯ ಆಯ್ತು. ಅದಕ್ಕಿಂತ ಹೆಚ್ಚಾಗಿ ಅವರು ದೇವನೂರರ ಬಗ್ಗೆ ಅಪಾರ ಪ್ರೀತಿ, ಗೌರವ ಹೊಂದಿದ್ದಾರೆ. ನಾನು ನಿರ್ದೇಶಿಸಿದ್ದ ಶೂದ್ರ ತಪಸ್ವಿ, ಗಾಂಧಿ ವರ್ಸಸ್ ಗಾಂಧಿ ನಾಟಕಗಳನ್ನೂ ನೋಡಲು ಸಿದ್ದರಾಮಯ್ಯ ಬಂದಿದ್ದರು.