ಸಾರಾಯಿ ಬಿಡಿ ಎಂದ ಬೀಡಿ!- ಶಾರದಾ ಗೋಪಾಲ

 

    ಮದ್ಯದಂಗಡಿಗೆ ಲೈಸೆನ್ಸ್ ಕೊಡುವುದನ್ನು ನಿಲ್ಲಿಸಿ ಅಥವಾ ಗೋಡೆಗೆ ಹಾಕಿರುವ ಗಾಂಧಿ ಫೋಟೊ ನಮಗೆ ಕೊಡಿ’ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಬೀಡಿ ಗ್ರಾಮದ ಜನ ಜಿಲ್ಲಾ ಅಬಕಾರಿ ಕಚೇರಿಗೇ ಹೋಗಿ ಮಾಡಿದ ಒತ್ತಾಯ ಇದು. ಪೊಲೀಸರು ಹೊತ್ತೊಯ್ಯುವ ತನಕ ಬಿಡದೆ ಅವರೆಲ್ಲ ಪಟ್ಟು ಹಿಡಿದು ಅಲ್ಲೇ ಕುಳಿತಿದ್ದರು. ಈ ಹೋರಾಟದಿಂದ ಬೇಡಿಕೆ ಈಡೇರದಿದ್ದಾಗ ‘ಮದ್ಯದಂಗಡಿಗಳನ್ನು ತೆಗೆಸಿ’ ಎಂದು ತಮ್ಮೂರಿನಲ್ಲಿ ರಸ್ತೆಯುದ್ದಕ್ಕೂ ಕಿಲೋಮೀಟರ್ ಗಟ್ಟಲೆ ಉರಿಬಿಸಿಲಲ್ಲಿ ನಿಂತು ಒಕ್ಕೊರಲ ಅಹವಾಲನ್ನು ಸರಕಾರಕ್ಕೆ ಸಲ್ಲಿಸಿದ್ದರು.

ಇತ್ತ ಜನರ ಒತ್ತಡದ ಜತೆಗೆ ಅತ್ತ ಸುಪ್ರೀಂ ಕೋರ್ಟಿನ ಆಜ್ಞೆಯೂ ಸೇರಿದ್ದರ ಪರಿಣಾಮವಾಗಿ ಬೀಡಿಯಲ್ಲಿ ಶಿರಸಿ-ಬೆಳಗಾವಿ ರಾಜ್ಯ ಹೆದ್ದಾರಿಯ ಮೇಲಿರುವ ಅಂಗಡಿಗಳನ್ನು ಜುಲೈ ತಿಂಗಳಲ್ಲಿ ಮುಚ್ಚಲಾಯಿತು. ಕೆಲವೇ ದಿನಗಳಲ್ಲಿ ಒಂದು ಮದ್ಯದಂಗಡಿ ಪಕ್ಕದ ಹಳ್ಳಿಗೆ ಹೋಗುವ ರಸ್ತೆ ಯಲ್ಲಿ ಶಾಲೆ, ಅಂಬೇಡ್ಕರ್ ವಸತಿಗೃಹದ ಪಕ್ಕವೇ ತೆರೆದಾಗ ಆ ಹಳ್ಳಿಯ ಜನ ದಂಗೆ ಎದ್ದರು.

ಅಲ್ಲಿ ಮದ್ಯದಂಗಡಿ ಇರಲೇ ಕೂಡದು ಎಂದು ಅದನ್ನು ಮುಚ್ಚಿಸಿದ್ದಲ್ಲದೆ ಸ್ಥಳೀಯ ಸಂಘಟನೆಗಳಾದ ಜಾಗೃತ ಮಹಿಳಾ ಒಕ್ಕೂಟ, ‘ಗ್ರಾಕೂಸ’ (ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ) ಮತ್ತು ಕರ್ನಾಟಕ ಪರ ಸಂಘಟನೆಯೊಡನೆ ಸೇರಿ ಆಗಸ್ಟ್ 7ನೇ ತಾರೀಕು ರಾಸ್ತಾ ರೋಕೋ ಮಾಡಿ ತಹಶೀಲ್ದಾರರು, ಅಬಕಾರಿ ಅಧಿಕಾರಿಗಳಿಗೆ ಈ ಮದ್ಯದಂಗಡಿಗಳನ್ನು ಶಾಶ್ವತವಾಗಿ ಮುಚ್ಚಬೇಕೆಂದು ಮನವಿ ಕೊಟ್ಟರು.

ಶೆರೆಯಂಗಡಿಗಳು ತಾತ್ಕಾಲಿಕವಾಗಿ ಬಂದ್ ಆದವು. ಅಷ್ಟಕ್ಕೇ ನಿಲ್ಲದೆ ಮಹಿಳೆಯರು ಬೀಡಿ ಪಂಚಾಯತಿಗೆ ಮದ್ಯದಂಗಡಿಗಳನ್ನು ಮುಚ್ಚುವ ಕುರಿತು ನಿರ್ಧರಿಸಲು ‌ವಿಶೇಷ ಗ್ರಾಮಸಭೆ ಕರೆಯಲು ನೂರಾರು ಜನರ ಸಹಿಯೊಂದಿಗೆ ಮನವಿ ಕೊಟ್ಟರು. ಪಂಚಾಯತ್ ರಾಜ್ ಕಾಯಿದೆ ಪ್ರಕಾರ ಪಂಚಾಯತಿ ವ್ಯಾಪ್ತಿಯಲ್ಲಿನ ಜನಸಂಖ್ಯೆಯ ಹತ್ತನೇ ಒಂದಂಶದಷ್ಟು ಭಾಗ ಅಥವಾ ನೂರಕ್ಕೆ ಕಡಿಮೆಯಿಲ್ಲದಷ್ಟು ಜನ ಅರ್ಜಿ ಕೊಟ್ಟು ವಿಶೇಷ ಗ್ರಾಮಸಭೆ ಕರೆಯಲು ವಿನಂತಿಸಿದರೆ 15 ದಿನದೊಳಗಾಗಿ ಆ ಸಭೆ ಕರೆಯಬೇಕು.

ಜನರ ಒತ್ತಡಕ್ಕೆ ಗ್ರಾಮ ಸಭೆಯನ್ನು ನಿಗದಿ ಮಾಡಿದ್ದರೂ ಅದು ನಡೆಯದಂತೆ ಪಟ್ಟಭದ್ರರ ಸತತ ಪ್ರಯತ್ನ. ಗ್ರಾಮ ಸಭೆಯಲ್ಲಿ ಭಾಗವಹಿಸದಂತೆ ಮಹಿಳೆಯರಿಗೆ, ಕೂಲಿಕಾರರಿಗೆ ಬೆದರಿಕೆಗಳು. ಅದೇ ಪಂಚಾಯತಿಯವರ ಹೊರತಾಗಿ ಬೇರೆ ಯಾರೂ ಬರಬಾರದು ಎಂದು, ಕನಿಷ್ಠ ಸಾವಿರ ಜನ ಬಾರದಿದ್ದರೆ ಗ್ರಾಮ ಸಭೆಯನ್ನು ನಡೆಸುವುದಿಲ್ಲ ಎಂದು ಪ್ರತಿನಿತ್ಯ ಹೊಸದೊಂದು ಹೇಳಿಕೆ, ಬೆದರಿಕೆಗಳು ಬರುತ್ತಲೆ ಇದ್ದವು.

ಆದರೆ ಪ್ರತಿದಿನ ಗಂಡ ಅಥವಾ ಮಗನ ಕುಡಿತದಿಂದ ಹಿಂಸೆ, ಅನ್ಯಾಯಗಳನ್ನು ಸಹಿಸುತ್ತಲೇ ಇರುವ ಮಹಿಳೆಯರಿಗೆ ಈ ಮದ್ಯದಂಗಡಿಗಳನ್ನು ಮುಚ್ಚಿಸಲೇಬೇಕಾಗಿತ್ತು. ಅವರು ಪಟ್ಟಭದ್ರರ ಬೆದರಿಕೆಗಳನ್ನು ಸವಾಲಾಗಿ ತೆಗೆದುಕೊಂಡು ಮನೆ ಮನೆಗೆ ಹೋಗಿ ಗ್ರಾಮ ಸಭೆಗೆ ಬರಲೇಬೇಕು, ಮದ್ಯದಂಗಡಿಗಳು ಬಂದಾಗಬೇಕೆಂದರೆ, ನಿಮ್ಮ ಮನೆಗಳು ನಾಶವಾಗಬಾರದೆಂದರೆ ಗ್ರಾಮಸಭೆಯಲ್ಲಿ ಮಾತಾಡಬೇಕೆಂದು ಕೇಳಿಕೊಂಡರು.

ಎಲ್ಲಾ ಶಾಲೆ, ಕಾಲೇಜುಗಳಿಗೆ ಹೋಗಿ ಮದ್ಯಪಾನ ದಿಂದ ಮಕ್ಕಳ ಶಿಕ್ಷಣ, ವಿದ್ಯಾಭ್ಯಾಸಕ್ಕೆ ಎಷ್ಟು ತೊಂದರೆ ಆಗುತ್ತಿದೆ ಎಂದು ವಿವರಿಸಬೇಕೆಂದು ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಕೇಳಿಕೊಂಡರು. ಶ್ರಾವಣದ ಪ್ರವಚನ ಓದುವವರಿಗೆ ಗ್ರಾಮಸಭೆಯ ಬಗ್ಗೆ ಹೇಳಬೇಕೆಂದು ವಿನಂತಿ ಮಾಡಿಕೊಂಡಿದ್ದರಿಂದ ಅವರು ಅದನ್ನು ಸಭಿಕರಿಗೆ ಹೇಳಿದ್ದಲ್ಲದೆ ತಾವೂ ಬರುವುದಾಗಿ ತಿಳಿಸಿದ್ದರು. ರೈತ ಸಂಘದವರಿಗೆ ಹೇಳಲಾಯಿತು. ಊರ ಹಿರಿಯರನ್ನೂ ಭೇಟಿ ಮಾಡಿ ಗ್ರಾಮಸಭೆಗೆ ಬರಲು ಕೇಳಿಕೊಳ್ಳಲಾಯಿತು.


ನಮ್ಮುರಾಗ ಹೆಂಡದ ಮಾರಾಟ ಬ್ಯಾಡ್‌ ನೋಡ್ರೀ…

ಶೆರೆದಂಗಡಿ ಮುಚ್ಚಬೇಡಿ ಎಂದು 272 ಸಹಿಗಳ ಪತ್ರ ಪಂಚಾಯತಿಗೆ, ತಹಶೀಲ್ದಾರರ ಕಚೇರಿಗೆ ಹೋಗಿದ್ದವಂತೆ. ಗ್ರಾಮಸಭೆ ಆರಂಭವಾದರೂ ಸರಿಯಾಗಿ ನಡೆಯುವುದೆಂಬ ಖಾತರಿ ಇಲ್ಲ. ಅನವಶ್ಯಕ ಜಗಳ ದೊಂಬಿಯಲ್ಲಿ ಮುಗಿದು ಹೋಗಬಹುದು. ಗಂಭೀರವಾಗಿ ಚರ್ಚೆ ನಡೆಯಲು ಅವಕಾಶ ಕೊಟ್ಟರೆ ಜನರು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಚರ್ಚೆಗೆ ಇಳಿಯುತ್ತಾರೆ. ಆದರೆ ಸರಿಯಾದ ಚರ್ಚೆಗೇ ಅವಕಾಶವಾಗದಂತೆ ಜಗಳ, ಹೊಲಸು ಬಯ್ಗಳು ಇವೇ ಹೆಚ್ಚಾಗಿ ಗ್ರಾಮಸಭೆ ರದ್ದಾಗಿ ಹೋದರೆ? ಎಲ್ಲಾ ಮಹಿಳೆಯರಿಗೂ ಇದೇ ಆತಂಕ.

ದಿನದಿಂದ ದಿನಕ್ಕೆ ಗ್ರಾಮಸಭೆಯ ಕಾವು ಏರುತ್ತಿದ್ದಂತೆಯೇ ಆತಂಕವೂ ಹೆಚ್ಚಾಗುತ್ತಿತ್ತು. ಅತ್ತ ಗಣಪನನ್ನು ಇಡುವ ತಯಾರಿ ಜೋರು. ಮಂಟಪ ಕಟ್ಟುವುದು, ಧ್ವನಿವರ್ಧಕ ಜೋಡಿಸುವುದು ಮುಂತಾದ ಕೆಲಸಗಳಲ್ಲಿ ಯುವಜನತೆ ಮಗ್ನ. ಒಬ್ಬ ಹಿರಿಯರ ಮನೆಗೆ ಕರೆಯಲು ಹೋಗಿದ್ದಾಗ ಆ ಹಿರಿಯರಿಗೆ ಫೋನು ಬಂತು.

ಗಣಪತಿಗೆ ಮಂಟಪ ಮಾಡುವ ಯುವಕರಿಗಾಗಿ ಕುಡಿಯಲು ಏರ್ಪಾಡು ಮಾಡಬೇಕೆಂದು. ಊರ ಮದ್ಯದಂಗಡಿಗಳು ಮುಚ್ಚಿವೆ, ಎಲ್ಲಿಂದಾದರೂ ತರಿಸಿ, ಹೇಗಾದ್ರೂ ತರಿಸಿ, ಒಟ್ಟು ಕುಡಿಯಲು ಕೊಡಿಸಿ ಎಂದು. ‘ನೋಡ್ರಿ, ಶೆರೆ ಬಂದ್ ಮಾಡ್ರಿ ಅಂತೀರಿ ನೀವು, ಇಲ್ಲಿ ಶೆರೆ ಇಲ್ಲದೆ ದೇವರ ಪೂಜೆ ಸಹ ಆಗದ ಪರಿಸ್ಥಿತಿ ಇದೆ’ ಎಂದು ಅವರು ಅಲವತ್ತುಕೊಂಡರು.

ಗ್ರಾಮಸಭೆಯ ದಿನ ಬಂದೇ ಬಿಟ್ಟಿತು. ‘ನಾವೆಲ್ಲ ಹೋಗಿಯೇ ಬಿಡೋಣ, ಶೆರೆದಂಗಡಿ ಬೇಕೆಂದು ಠರಾವು ಹಾಕಿಸೋಣ’ ಎಂದು ಕುಡುಕಪಡೆ. ಒಂದು ದಿನ ಕೂಲಿ ತಪ್ಪಿದರೂ ಅಡ್ಡಿಯಿಲ್ಲ, ಗ್ರಾಮಸಭೆಗೆ ಬಂದೇಬರ್ತೀವಿ, ಭಾಗವಹಿಸ್ತೀವಿ ಎಂಬುದು ಮಹಿಳೆಯರ ಗಟ್ಟಿ ನಿರ್ಧಾರ. ನಾವೂ ತಪ್ಸೋದಿಲ್ಲ, ಬರ್ತೀವ್ರೀ ಎಂದು ಕುಡಿಯದ ಗಂಡಸರ ಮಾತುಗಳು. ಮಧ್ಯಾಹ್ನ ಮೂರಾಗುತ್ತಿದ್ದಂತೆಯೇ ಹೆಂಗಸರು, ಮನೆ ಮನೆಗೆ ತೆರಳಿ ಎಲ್ಲರನ್ನೂ ಕರೆಯುತ್ತ ಜೊತೆಯಲ್ಲಿ ಸೇರಿಸಿಕೊಳ್ಳುತ್ತ ಬಂದರು. ಒಂದೊಂದು ಓಣಿಯಲ್ಲೂ ಹೆಣ್ಣುಮಕ್ಕಳು ತಂಡೋಪತಂಡವಾಗಿ ಹೊರಟಿದ್ದುದು ನೋಡಿದರೆ ಇದೇನು ಗ್ರಾಮಸಭೆಯೋ, ಜಾತ್ರೆಯೋ ಎಂಬಂತೆ ಇತ್ತು.

ಹಾಗೆಯೇ ಶೆರೆ ಬೇಕೆಂದು ಹೇಳಲು ಬಂದ ಪಡ್ಡೆ ಹುಡುಗರ ಗುಂಪು. ಶಾಲಾ ಮಕ್ಕಳು, ಶಿಕ್ಷಕರು ಬಂದರೂ ಮಕ್ಕಳನ್ನು ವಾಪಸು ಕಳಿಸಲಾಯ್ತು. ಪಂಚಾಯತಿ ಆ ವಾರದ ಸುತ್ತ ತಮಾಷೆ ನೋಡಲು ನೆರೆದ ಜನಸಂದಣಿ. ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಅಬಕಾರಿ ಇಲಾಖೆಯ ಅಧಿಕಾರಿಗಳು, ಎಲ್ಲಾ ಸದಸ್ಯರು, ಆಸನಗಳನ್ನು ಸಿಂಗರಿಸಿದರು. ಮಹಿಳೆಯರು ಯಾವುದೇ ಸಂಕೋಚವಿಲ್ಲದೆ ನೆಲದಲ್ಲೇ ಕುಳಿತುಕೊಂಡರೆ ಗಂಡಸರು ಕೂಡ್ರಲಾರದೆ ಸುತ್ತ ನಿಂತು ನೆರೆದರು.

ಮಳೆಗೂ ಈ ಗ್ರಾಮ ಸಭೆಯನ್ನು ನೋಡಬೇಕೆಂದಿತ್ತೇನೋ, ಭರ್‍ರೆಂದು ಬಂತು. ತನ್ನಿಂದ ಗ್ರಾಮಸಭೆಗೆ ಅಡ್ಡಿಯಾಗುತ್ತದೆಯೆನಿಸಿತೇನೋ, ಐದೇ ನಿಮಿಷಗಳಲ್ಲಿ, ‘ನಿಮ್ಮ ಗ್ರಾಮಸಭೆ ಮುಂದುವರೆಸಿ’ ಎಂಬಂತೆ ಬದಿಗೆ ಸರಿದುಕೊಂಡಿತು. ನಿರಾಶೆಯಿಂದ ಎದ್ದು ಹೊರಟಿದ್ದ ಮಹಿಳೆಯರು ಮತ್ತೆ ನೀರು ನಿಂತಲ್ಲಿಯೇ ಬಂದು ಕುಳಿತಿದ್ದು ನೋಡಿದರೆ ಅಂದಿನ ಸಭೆಯ ಮಹತ್ವ ಅವರ ಪಾಲಿಗೆ ಅದೆಷ್ಟಿತ್ತು ಎಂಬುದು ಅರ್ಥವಾಗುತ್ತಿತ್ತು. ಕೆಲವೇ ಕ್ಷಣಗಳಲ್ಲಿ ಗ್ರಾಮಸಭೆ ಮತ್ತೆ ಆರಂಭವಾಯಿತು.


ಸಾರಾಯಿ ಮಾರಾಟ ಬ್ಯಾಡಂತ ಹೆಬ್ಬೆಟ್ಟು ಒತ್ತೀನಿ…

ಒಬ್ಬೊಬ್ಬ ಮಹಿಳೆಯೂ ಸಾರಾಯಿಯಿಂದ ತಮ್ಮ ಸಂಸಾರ ಕ್ಕಾಗುತ್ತಿರುವ ಅನ್ಯಾಯ, ವಂಚನೆಯನ್ನು ವಿವರಿಸಿದರು. ಕುಡಿದ ಯುವಕರು ತನ್ನ ಮಗಳನ್ನು ಹಿಂಬಾಲಿಸಿ ಬಂದ ಬಗ್ಗೆ ಒಬ್ಬಳು ಹೇಳಿದರೆ, ಇನ್ನೊಬ್ಬಳು ತನ್ನ ಮಕ್ಕಳು ಕುಡಿದು ಮನೆಯ ಹಿಂಬಾಗಿಲು, ಮುಂಬಾಗಿಲ ಸಮೇತ ಎಲ್ಲಾ ಸಾಮಾನುಗಳನ್ನೂ ಮಾರಾಟ ಮಾಡಿರುವುದನ್ನು ವಿವರಿಸಿ ಶೆರೆದಂಗಡಿಗಳೇನಾದರೂ ಮತ್ತೆ ಚಾಲೂ ಆದುವೆಂದರೆ ತಾನು ಆ ಅಂಗಡಿಯೆದುರೇ ನೇಣು ಹಾಕಿಕೊಳ್ಳುವೆನೆಂದು ಘೋಷಿಸಿದಳು. ಓಣಿ, ಹಳ್ಳಿ, ಪಂಚಾಯತಿಗಳ ಮರ್ಯಾದೆಯನ್ನು ಬೀದಿಪಾಲು ಮಾಡುವ ಶೆರೆದಂಗಡಿಗಳು ತಮಗೆ ಬೇಡವೇ ಬೇಡ ಎಂದು ಹಲವಾರು ಗಂಡಸರು ಖಚಿತವಾಗಿ ಹೇಳಿದರು.

ಶೆರೆಯಂಗಡಿಗಳು ಬೇಕೆನ್ನುವವರು ತಮ್ಮ ವಾದವನ್ನೂ ಮಂಡಿಸಬಹುದು ಎಂದು ಮತ್ತೆ ಮತ್ತೆ ಕರೆದರೂ ಯಾರೊಬ್ಬರೂ ಮಾತಾಡಲು ಮುಂದೆ ಬರಲಿಲ್ಲ. ಕೊನೆಯಲ್ಲಿ ಬೇಕೆನ್ನುವವರು ಕೈಯನ್ನಾದರೂ ಎತ್ತಿ ಎಂದಾಗ ಒಂದೂ ಕೈ ಮೇಲೇಳಲಿಲ್ಲ. ಶೆರೆ ಅಂಗಡಿಗಳು ಬೇಡೆನ್ನುವವರು ಕೈಯೆತ್ತಿ ಎಂದಾಗ ಎಲ್ಲಾ ಕೈಗಳೂ ಮೇಲೆದ್ದವು.

ಬಿಗಿ ಹಿಡಿದಿದ್ದ ಉಸಿರು ಒಮ್ಮೆಗೇ ಬಿಟ್ಟಂತಾಯಿತು. ಅಷ್ಟೊತ್ತು ಒತ್ತಡದಿಂದ ಕೂಡಿದ್ದ ವಾತಾವರಣ ಎಲ್ಲರ ಮುಖದ ಮಂದಹಾಸದಿಂದ ತಿಳುವಾಯಿತು. 272 ಸಹಿಗಳ ಪತ್ರವೂ ಮೂಲೆಗುಂಪಾಗಿತ್ತು. ಮಹಿಳೆಯರ ಗಟ್ಟಿಯಾದ ದನಿ, ಕೈಗೂಡಿಸಿದ್ದ ಗಂಡಸರ ಧ್ವನಿ ಜೊತೆ ಸೇರಿ ಶೆರೆದಂಗಡಿಗಳಿಗೆ ಕೊಟ್ಟಿದ್ದ ಪರವಾನಗಿಯನ್ನು ರದ್ದು ಮಾಡಬೇಕೆಂದು ಸರ್ವಾನುಮತದ ಠರಾವು ಪಾಸಾಯಿತು, ಇನ್ನು ಎಲ್ಲರೂ ಸಹಿ ಮಾಡಿ ಮನೆಗೆ ಹೋಗಬಹುದು, ಗ್ರಾಮ ಸಭೆ ಮುಕ್ತಾಯವಾಯಿತು ಎಂದು ಅಧಿಕಾರಿ ಘೋಷಿಸಿದಾಗ ಗುಂಪಿನಿಂದ ಎದ್ದು ಬಂದ ಒಬ್ಬ ಮಹಿಳೆ, ‘ಸರ್ ಸ್ವಲ್ಪ ತಡವಾದರೂ ಪರವಾಗಿಲ್ಲ. ತಾವು ಠರಾವನ್ನು ಬರೆಯಿರಿ, ಆ ನಂತರವೇ ನಾವೆಲ್ಲ ಸಹಿ ಮಾಡುತ್ತೇವೆ’ ಎಂದು ಸ್ಪಷ್ಟವಾಗಿ ಹೇಳಿದಾಗ ಅವಾಕ್ಕಾದ ಅಧಿಕಾರಿಗಳು ಠರಾವು ಬರೆದರು, ಜನರ ಮುಂದೆ ಓದಿದರು. ಆಗಲೇ ಜನರು ಒಬ್ಬೊಬ್ಬರಾಗಿ ಎದ್ದು ಸಹಿ ಮಾಡಿದರು, ಹೆಬ್ಬೆಟ್ಟೊತ್ತಿದರು. ಕೊನೆಗೂ ಯುದ್ಧವನ್ನು ಅರ್ಧ ಗೆದ್ದಂತಾಯ್ತು.

ಹೌದು, ಅರ್ಧ ಗೆದ್ದ ಯುದ್ಧವದು. ‘ಗ್ರಾಮಸಭೆಯಲ್ಲಿ ನಿರ್ಧಾರವಾಯಿತೆಂದರೆ ಅದು ಅಂತಿಮ ಆದೇಶ’ ಎನ್ನುತ್ತಾರೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳೆಂದಷ್ಟೇ ಸತ್ಯವದು. ಪ್ರಭುತ್ವಕ್ಕೆ ಹಿತವಾಗದ ಪ್ರಜೆಗಳ ಯಾವುದೇ ಆದೇಶದ ಪಾಲನೆಯಾಗದು, ಅಷ್ಟೇ ಏನು, ಅದನ್ನು ಹೊಸಕಿಹಾಕುವ ಪ್ರಯತ್ನಗಳು ಸದಾ ಜೀವಂತ.

ಪ್ರಜೆಗಳ ಅಧಿಕಾರದ ಮೇಲೆ ಪ್ರಭುತ್ವದ ಪರಮಾಧಿಕಾರ ಹೇರುವ ಪ್ರಯತ್ನ ಕೂಡ ಇಂದು ನಿನ್ನೆಯದಲ್ಲ. ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಮದ್ಯದಂಗಡಿಗಳಿಗೆ ಪರವಾನಗಿ ಕೊಡುವ ಅಧಿಕಾರವನ್ನು ಗ್ರಾಮ ಪಂಚಾಯತಿಯಿಂದ ಕಿತ್ತು ಅಬಕಾರಿ ಇಲಾಖೆಗಳಿಗೆ ನೀಡಿದ್ದಾರೆ. ಸ್ಥಳೀಯರಿಗೆ ಮನೆಗಳನ್ನು ಹಂಚುವ ನಿರ್ಧಾರವನ್ನೂ ಗ್ರಾಮ ಸಭೆಯಿಂದ ಶಾಸಕರಿಗೆ ಕೊಡುವ ಪ್ರಯತ್ನ ನಡೆದಿತ್ತು, ಗ್ರಾಮ ಪಂಚಾಯತಿ ಹಕ್ಕೊತ್ತಾಯ ಆಂದೋಲನದ ಸತತ ಪರಿಶ್ರಮದಿಂದ ಆ ಅಧಿಕಾರ ಇನ್ನೂ ಗ್ರಾಮ ಪಂಚಾಯತಿಗೆ ಉಳಿದುಕೊಂಡಿದೆ.

ದೇಶ, ರಾಜ್ಯವನ್ನಾಳುವವರಿಗೆ ಮದ್ಯದಂಗಡಿಗಳು ಬೇಕು. ಆದರೆ ಸುಭದ್ರ ಸಮಾಜ ಬೇಕನ್ನುವವರಿಗೆ, ಹೆಣ್ಣುಮಕ್ಕಳ ಮೇಲೆ ಹಿಂಸೆ ನಿಲ್ಲಲಿ, ಮಕ್ಕಳು ಹೊಟ್ಟೆತುಂಬ ಉಣ್ಣಲಿ, ಅವರಿಗೆ ಒಳ್ಳೆಯ ಶಿಕ್ಷಣ ಸಿಗಲಿ, ಮನೆಯ ಮಕ್ಕಳು ಹಾಳಾಗದಿರಲಿ ಎನ್ನುವವರಿಗೆ, ಮುಖ್ಯವಾಗಿ ಜನಸಂಖ್ಯೆಯ ಶೇ 50ರಷ್ಟಿರುವ ಹೆಣ್ಣುಮಕ್ಕಳಿಗೆ ಮದ್ಯದಂಗಡಿಗಳು ಬೇಡ. ದೂರದ ಸರಕಾರಗಳಿಗೇನೋ ಪ್ರಜೆಗಳ ಕೂಗು ಕೇಳ್ತಿರಲಿಕ್ಕಿಲ್ಲ. ಸ್ಥಳೀಯ ಸರಕಾರಕ್ಕೆ ಕೇಳುತ್ತಿರಬಹುದಲ್ಲವೇ? ನೋಡೋಣ, ಗ್ರಾಮಸಭೆಯ ಆದೇಶವನ್ನು ಸ್ಥಳೀಯ ಸರಕಾರ ತನ್ನ ಜವಾಬ್ದಾರಿಯೆಂದು ಹೆಗಲ ಮೇಲೆ ಹೊರುವುದೋ ಎಂದು. ಸ್ಥಳೀಯ ಸರಕಾರ ಎತ್ತಿ ಹಿಡಿಯಲಿ, ಗ್ರಾಮ ಸಭೆಯ ಪರಮಾಧಿಕಾರವನ್ನು!

ಕಾಲಾಂತರದ ಮೊರೆ
ಕುಡುಕ ಗಂಡಂದಿರ ಹಿಂಸೆಯಿಂದ ಮುಕ್ತಿ ಹೊಂದಲು ಮದ್ಯಪಾನ ನಿಷೇಧವೇ ದಾರಿ ಎಂದು ಮಹಿಳೆಯರು ಮತ್ತೆ ಮತ್ತೆ ಸರಕಾರಕ್ಕೆ ಮದ್ಯ ನಿಷೇಧ ಮಾಡಿ ಎಂದು ಮೊರೆಯಿಡುತ್ತಲೇ ಇದ್ದಾರೆ. ಹೆಂಗಳೆಯರದ್ದು ಕಾಲಾಂತರದ ಮೊರೆ.

‘ತಮ್ಮ ಕೈಯಲ್ಲೇನಾದರೂ ಸರ್ವಾಧಿಕಾರ ಸಿಕ್ಕಿತೆಂದರೆ ಮೊಟ್ಟಮೊದಲು ಇದ್ದ ಎಲ್ಲಾ ಮದ್ಯದಂಗಡಿಗಳನ್ನು ಯಾವೊಂದು ಪರಿಹಾರವನ್ನೂ ಕೊಡದೆ ಮುಚ್ಚುವ ಕೆಲಸ ಮಾಡುತ್ತೇನೆ’ ಎಂದಿದ್ದರು ಮಹಾತ್ಮಾ ಗಾಂಧೀಜಿ. ಏಳೆಂಟು ದಶಕಗಳ ಹಿಂದೆ ಆಡಿದ ಮಾತಿದು. ಈ ಹಲವಾರು ದಶಕಗಳಲ್ಲಿ ಮದ್ಯದಂಗಡಿಗಳು ಹತ್ತುಪಟ್ಟು ಹೆಚ್ಚಿವೆ.

ಕುಡಿತ ನೂರು ಪಟ್ಟು ಹೆಚ್ಚಿದೆ. ಕುಡಿತದಿಂದ ಮಹಿಳೆಯರ ಮೇಲಿನ ದೌರ್ಜನ್ಯ ಸಾವಿರಪಟ್ಟು ಹೆಚ್ಚಿದೆ. ಮನೆ ಮನೆಗಳಲ್ಲಿ ಗಂಡಸರು ದುಡಿದದ್ದರಲ್ಲಿ ಇಂದು 90 ಭಾಗದಷ್ಟು ಕುಡಿತಕ್ಕೇ ಖರ್ಚಾಗುತ್ತಿದ್ದು, ಹೆಂಗಸರ ಗಳಿಕೆಗೂ ಮದ್ಯದಂಗಡಿಗಳು ಕೈ ಹಾಕಿವೆ. ಪ್ರತಿಭಟಿಸಿದರೆ ಮನೆಯೊಳಗೆ ಬಡಿದಾಟ, ಅಂಗಳದಲ್ಲಿ ಎಳೆದಾಟ, ಬೀದಿಯಲ್ಲಿ ರಂಪಾಟ. ಅಂದಿನ ಗಾಂಧಿವಾದಿಗಳಿಂದ ಹಿಡಿದು ಇಂದಿನ ಮೋದಿವಾದಿಗಳವರೆಗೆ ಮದ್ಯಪಾನದ ವಿರುದ್ಧ ಕೆಲಸ ಮಾಡಿದ ಜನ ಸಾವಿರ ಸಾವಿರ ಸಂಖ್ಯೆಯಲ್ಲಿ ಸಿಗುತ್ತಾರೆ.

ಆದರೇನು, ಮದ್ಯ ಮಾಫಿಯಾ ಅದೆಷ್ಟು ಬಲಿಷ್ಠ ಎಂದರೆ ಅದರ ವಿರುದ್ಧ ಕೆಲಸ ಮಾಡಿದವರೆಲ್ಲ ಇಂದು ಸಮಾಜ ಕಾರ್ಯ ಮಾಡಲು ಬೇರೆ ಹಾದಿ ನೋಡಿಕೊಂಡಿದ್ದಾರೆ ಹೊರತು ಆ ಹೋರಾಟವನ್ನು ಮುಂದುವರಿಸಿಲ್ಲ. ಅಥವಾ ದಣಿದು ಕುಳಿತಿದ್ದಾರೆ. ಮದ್ಯ ನಿಷೇಧ ಹೋರಾಟಕ್ಕೆ ಕೈ ಜೋಡಿಸೋಣ ಬನ್ನಿ ಎಂದು ಕರೆದರೂ ಬರಲಾಗದಷ್ಟು ದಣಿವು, ನಿರಾಶೆ ಅವರದ್ದು.