“ಸಕಲಜೀವ ಪರವಾದ ಸಂವಿಧಾನವೇ ನನ್ನ ಧರ್ಮ”…. ರೂಪ ಹಾಸನ

[ 23.1.2021ರಂದು,  THEPOLITIC.IN ವೆಬ್ ಪೋರ್ಟಲ್ ನಲ್ಲಿ ರೂಪ ಹಾಸನ ಅವರ ಸುದೀರ್ಘ, ವಿವರಣಾತ್ಮಕ ಸಂದರ್ಶನವನ್ನು ಮಾಡಿದ್ದಾರೆ ನಂದಿನಿ ಅನಿಲ್. ಬಿಡುವಿನ ಓದಿಗಾಗಿ ಇಲ್ಲಿ ದಾಖಲಾಗಿದೆ….]

“ಸಕಲಜೀವ ಪರವಾದ ಸಂವಿಧಾನವೇ ನನ್ನ ಧರ್ಮ” – ರೂಪ ಹಾಸನ

 

 

ರೂಪ ಹಾಸನ ಇವರು ಒಬ್ಬ ವ್ಯಕ್ತಿಯಲ್ಲ, ಒಂದು ಶಕ್ತಿ ಎನಿಸುತ್ತದೆ. ಮೂಲತಃ ಮೈಸೂರಿನವರಾದ ಇವರು ಹಾಸನದ ಸೊಸೆಯಾಗಿ, ಹಾಸನವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದಾರೆ. ಸಾಹಿತಿ, ಸಾಮಾಜಿಕ ಕಾರ್ಯಕರ್ತರು, ಪರಿಸರವಾದಿ ಮತ್ತು ದನಿಯಿಲ್ಲದವರ ದನಿಯಾಗಿ, ದಮನಿತರ ಬದುಕು ಹಸನುಗೊಳಿಸಲು ತಮ್ಮನ್ನು ತಾವು ಕ್ರಿಯಾತ್ಮಕವಾಗಿ ತೊಡಗಿಸಿಕೊಂಡಿದ್ದಾರೆ. ಲೈಂಗಿಕ ದಮನಿತರ ಪುನರ್ವಸತಿಗೆ ಸರ್ಕಾರದ ಮೇಲೆ ಅವಿರತ ಒತ್ತಡ ತರುವ ಕೆಲಸವನ್ನು ಮಾಡುತ್ತಿದ್ದಾರೆ. ಮಹಿಳೆ, ಮಕ್ಕಳು, ಶೈಕ್ಷಣಿಕ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತಹ ಕಾರ್ಯಗಳನ್ನು ಮಾಡಲು, ಅವರದೇ ಪ್ರೇರಣಾ ವಿಕಾಸ ವೇದಿಕೆ ಸ್ಥಾಪಿಸಿಕೊಂಡು ಈಗ ಇಪ್ಪತ್ತು ವರ್ಷವಾಯ್ತು. ನಾಲ್ಕು ವರ್ಷಗಳ ಹಿಂದೆ ಹಲವರ ಪರಿಶ್ರಮದಿಂದ ಹುಟ್ಟಿಕೊಂಡ ಸಾಮುದಾಯಿಕ ಸಂಘಟನೆ ಹಸಿರುಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಸಂಘಟನಾ ಕಾರ್ಯದರ್ಶಿಯಲ್ಲಿ ಒಬ್ಬರಾಗಿರುವ ಇವರು, ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿಯೂ ಹತ್ತು ಹಲವು ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ನಮ್ಮ ಸಮಾಜದಲ್ಲಿರುವ ದನಿಯಿಲ್ಲದವರ ರಕ್ಷಣೆಗಾಗಿ ಅವಿರತವಾಗಿ ದುಡಿಯುತ್ತಿರುವ ಇವರು ಮಾತೃಹೃದಯಿಗಳಾಗಿದ್ದಾರೆ.

                                                                   

  • “ಮಹಿಳೆಗೆ ಹಕ್ಕುಗಳೇನೋ ಇವೆ. ಆದರೆ?” ಏನು ನಿಮ್ಮೀ ಪುಸ್ತಕದ ತಾತ್ಪರ್ಯ?

ಮಹಿಳೆಗೆ ಸಂಬಂಧಿಸಿದಂತೆ ಅನೇಕ ಹಕ್ಕುಗಳಿವೆ. ಆದರೆ? ಅವುಗಳ ಅನುಷ್ಠಾನ ಎಷ್ಟರಮಟ್ಟಿಗೆ ಆಗುತ್ತಿದೆ? ಯಾಕೆ ಆಗುತ್ತಿಲ್ಲ? ಕಾರಣಗಳೇನು? ಎಂಬುದನ್ನು ಈ ಪುಸ್ತಕದಲ್ಲಿ ಚರ್ಚಿಸಿರುವೆ. ವೇಶ್ಯಾವಾಟಿಕೆ, ಕಳ್ಳಸಾಗಣೆ, ಮಾರಾಟ, ಅತ್ಯಾಚಾರ, ಬಾಲ್ಯವಿವಾಹ… ಹೀಗೆ ವಿಭಿನ್ನ ವಿಷಯಗಳಲ್ಲಿ ಹೆಣ್ಣುಮಕ್ಕಳ ಹಕ್ಕುಗಳು ಹೇಗೆ ಉಲ್ಲಂಘನೆಯಾಗುತ್ತಿವೆ ಎಂಬುದನ್ನು ವಿವರಿಸಲಾಗಿದೆ. ಸಮಾನತೆ, ಶಿಕ್ಷಣದ ಹಕ್ಕು, ಆಸ್ತಿಯ ಹಕ್ಕು… ಮಹಿಳೆಗೂ ಕಾನೂನುಬದ್ಧವಾದ ಎಲ್ಲ ಹಕ್ಕುಗಳಿವೆ. ಆದರೆ ಇದನ್ನು ಮಹಿಳೆ ಪಡೆಯಲಾಗದಿರುವ ಕಾರಣಗಳನ್ನು ವಿವರವಾಗಿ ವಿಭಿನ್ನ ಆಯಾಮಗಳಲ್ಲಿ ಇಲ್ಲಿ ಚರ್ಚಿಸಿದ್ದೇನೆ.

  • ಬಾಲ್ಯವಿವಾಹವನ್ನು ತಡೆಯಲು ಗಲ್ಲಿಗೊಂದರಂತೆ ಇರುವ ಅಂಗನವಾಡಿಗಳು ಪರಿಣಾಮಕಾರಿಯಾಗಿಲ್ಲವೆ?

ಬಾಲ್ಯವಿವಾಹಗಳು ರಾತ್ರೋರಾತ್ರಿ ನಡೆಯುತ್ತಿವೆ. ಕೊರೋನಾ ಬಂದ ನಂತರವಂತೂ ಬಾಲ್ಯವಿವಾಹಗಳು ಇನ್ನೂ ಹೆಚ್ಚಾಗುತ್ತಿವೆ. ಕಾರಣವೆಂದರೆ ಶಾಲೆ ಇಲ್ಲದೆ ಇರುವುದು. ಶಾಲೆ ಇದ್ದಿದ್ದರೆ ಶಿಕ್ಷಕರಿಗೆ, ಗೆಳೆಯರಿಗೆ ತನ್ಮೂಲಕ ಸಂಬಂಧಿಸಿದ ಅಧಿಕಾರಿಗಳಿಗೆ ವಿವಾಹವಾಗುತ್ತಿರುವ ಮಾಹಿತಿ ದೊರಕುವ ಸಾಧ್ಯತೆ ಇರುತ್ತಿತ್ತು. ಮೊಬೈಲ್ ಬಳಕೆಯಿಂದ ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳು ಪ್ರೀತಿ-ಪ್ರೇಮದ ಬಲೆಗೆ ಬಿದ್ದು ಮನೆಯಿಂದ ಓಡಿಹೋಗಿ  ಮಿಸ್ಯೂಸ್ ಆಗಿ ಬಸಿರಾಗುವುದು, ಮಕ್ಕಳನ್ನು ಹೆರುವುದು ಕೂಡ ಇಂದು ಹೆಚ್ಚಾಗಿ ನಡೆಯುತ್ತಿದೆ. ಮನುಷ್ಯನ ಮೂಲಭೂತ ಸ್ವಭಾವ, ಸಾಮಾಜಿಕ ವ್ಯವಸ್ಥೆ, ಮಾಧ್ಯಮಗಳು, ತಂತ್ರಜ್ಞಾನದ ದುಷ್ಪರಿಣಾಮ ಪ್ರಬಲವಾಗಿರುವುದು, ಬಡತನ, ಪೋಷಕರಿಗೆ ತಿಳಿವಳಿಕೆ ಇಲ್ಲದಿರುವುದು…  ಹೀಗೆ ಸಮಸ್ಯೆಗೆ ಅನೇಕ ಕಾರಣಗಳಿವೆ. ಸಾಮಾಜಿಕ ವ್ಯವಸ್ಥೆ ತುಂಬಾ ಕ್ಲಿಷ್ಟ ಮತ್ತು ಭೀಕರವಾಗಿದೆ. ಉತ್ತರ ಕರ್ನಾಟಕದಲ್ಲಿ ರಾತ್ರೋರಾತ್ರಿ ಬಾಲೆಯರ ಗುಜ್ಜರ್ ಮದುವೆಗಳಾಗುತ್ತವೆ. ರಾಜಸ್ಥಾನ ಹರಿಯಾಣ ಪಂಜಾಬ್ ಮುಂತಾದ ರಾಜ್ಯಗಳಲ್ಲಿ ಲಿಂಗಾನುಪಾತ ಹೆಚ್ಚಿದೆ. ಹೆಣ್ಣಿನ ಪ್ರಮಾಣ ಕಡಿಮೆ ಇರುವುದರಿಂದ ದಕ್ಷಿಣದ ರಾಜ್ಯಗಳಿಂದ ಹೆಣ್ಣುಮಕ್ಕಳನ್ನು ಕಿಡ್ನಾಪ್ ಮಾಡಿ, ಇಲ್ಲವೇ ವಿವಾಹ ಮಾಡಿಕೊಂಡೆ ಕರೆದೊಯ್ಯಲಾಗುತ್ತಿದೆ. ಕೇವಲ 20- 30- 50 ಸಾವಿರಗಳಿಗೆ ಸಂಬಂಧಿಕರೇ ತಮ್ಮ ಹೆಣ್ಣುಮಕ್ಕಳನ್ನು ಮಾರಾಟ ಮಾಡುತ್ತಾರೆ. ಹೀಗೆ ಕರೆದುಕೊಂಡು ಹೋಗುವ ಹೆಣ್ಣುಮಕ್ಕಳು, ಹೋದವರ ಮನೆಯಲ್ಲಿರುವ ಎಲ್ಲಾ ಗಂಡಸರ ಕಾಮತೃಷೆ ತೀರಿಸಲು ಬಳಕೆಯಾಗುತ್ತಾರೆ. ಸಾಕೆನಿಸಿದಾಗ ಮರು ಮಾರಾಟವೂ ಆಗುತ್ತಾರೆ. ಬಾಲ್ಯವಿವಾಹ ಒಂದು ಸಂಕೀರ್ಣ ಸಮಸ್ಯೆ. ಇದನ್ನು ಬಗೆಹರಿಸಲು ಸೂಕ್ಷ್ಮ ಕಾರ್ಯಯೋಜನೆಗಳು ಇನ್ನೂ ರೂಪುಗೊಂಡಿಲ್ಲ.

  • ನಾವು ಇಂದು ಡಿಜಿಟಲ್ ಯುಗ, ನ್ಯಾನೋ ಯುಗದ ಕಾಲದಲ್ಲಿದ್ದೇವೆ. ಈ ಸಂದರ್ಭದಲ್ಲಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು ಏನು? ಅವುಗಳಿಗೆ ಪರಿಹಾರೋಪಾಯಗಳು ಏನು?

ಪೋಷಕರಿಬ್ಬರೂ ದುಡಿಯುತ್ತಿರುವುದರಿಂದ ತಮ್ಮ ಮಕ್ಕಳಿಗೆ ಯಾವ ವಿಷಯಕ್ಕೆ ಕ್ವಾಲಿಟಿ ಟೈಮ್, ಗಮನ ಕೊಡಬೇಕಿತ್ತೋ ಅದನ್ನು ಕೊಡಲಾಗುತ್ತಿಲ್ಲ. ಎಜುಕೇಶನ್ ಎಂದರೆ ಪಠ್ಯ ಮಾತ್ರವಲ್ಲ. ನಾವು ಕನಿಷ್ಠ 5 ವರ್ಷದವರೆಗಿನ ಮಕ್ಕಳಿಗೆ ಪೂರ್ಣವಾಗಿ ನಡವಳಿಕೆ ಶಿಕ್ಷಣ, ವರ್ತನಾ ಶಿಕ್ಷಣ ಕೊಡಬೇಕು. ಮಕ್ಕಳಿಗೆ ಮಾನಸಿಕ ದೌರ್ಬಲ್ಯಗಳಿದ್ದರೆ, ಸಮಾಜ ಒಪ್ಪಿತವಲ್ಲದ ವ್ಯತಿರಿಕ್ತ ಸ್ವಭಾವಗಳಿದ್ದರೆ ಅರಿತು, ಹಂತಹಂತವಾಗಿ ಅದನ್ನು ಅಕ್ಕರೆಯಿಂದ, ಸರಿಯಾದ ಮಾರ್ಗದರ್ಶನದ ಮೂಲಕ ತಿದ್ದಬೇಕು. ಆದರೆ ಇದಕ್ಕೆ ಬೇಕಾದಂತಹ ತರಬೇತಿ ಬಹಳಷ್ಟು ಪೋಷಕರಿಗೇ ಇಲ್ಲ! ಇಡೀ ನಮ್ಮ ವ್ಯವಸ್ಥೆಯನ್ನು ಈ ಹಿನ್ನಲೆಯಲ್ಲಿ  ಪುನರ್ ನಿರ್ಮಾಣ ಮಾಡುವ ಕಡೆಗೆ ನಾವು ಯೋಚನೆಯನ್ನೇ ಮಾಡಿಲ್ಲ. ಸಮಾಜಪೀಡಕರೆಂದು ಕರೆಯುವ ಜನ, ಈ ಎಲ್ಲದರ  ಕೊರತೆಯ ಫಲ. ಇಂದು ಆಡಳಿತ ವ್ಯವಸ್ಥೆಯಾಗಲಿ, ಶಿಕ್ಷಣ ವ್ಯವಸ್ಥೆಯಾಗಲಿ ಮಗುವನ್ನು ಕೇಂದ್ರದಲ್ಲಿರಿಸಿಕೊಂಡು ರೂಪಿತವಾಗಿಲ್ಲ. ಹಾಗಿದ್ದಾಗ ಪ್ರತಿಯೊಂದು ಮಗುವೂ ಶಾಲೆಯಲ್ಲಿ ಇರುತ್ತಿತ್ತು. ಒಂದು ಬಾಲ್ಯವಿವಾಹವೂ ನಡೆಯುತ್ತಿರಲಿಲ್ಲ. ಯಾರೂ ಬಾಲಕಾರ್ಮಿಕರಾಗುತ್ತಿರಲಿಲ್ಲ. ಒಂದು ಭೀತಿ ಇಲ್ಲದ, ಉತ್ತಮ ಪೋಷಣೆಯುಳ್ಳ ಸಮೃದ್ಧವಾದ ಬಾಲ್ಯವನ್ನು ಅನುಭವಿಸುವ ಅವಕಾಶ ಪ್ರತಿಯೊಂದು ಮಗುವಿಗೂ ದೊರೆಯುತ್ತಿತ್ತು. ಮಕ್ಕಳೇ ನಮ್ಮ  ಅಭಿವೃದ್ಧಿಯ ಮಾನದಂಡವಾಗಬೇಕು. ರಚನಾತ್ಮಕ, ಕೌಶಲ್ಯಾಧಾರಿತ ಶಿಕ್ಷಣ ವ್ಯವಸ್ಥೆ,  ತಳಹಂತದಲ್ಲಿ ಎಲ್ಲರಿಗೂ ಮಾತೃಭಾಷೆಯ ಶಿಕ್ಷಣ ದೊರಕಬೇಕು. ಜೊತೆಗೆ ಶಿಕ್ಷಣವನ್ನು ಮಾನವೀಯಗೊಳಿಸುವ ಕಡೆಗೆ ನಾವು ಗಮನವನ್ನೇ ಕೊಟ್ಟಿಲ್ಲ. ಎಲ್ಲಕ್ಕಿಂಥ ಮುಖ್ಯವಾಗಿ ನಮ್ಮಲ್ಲಿ ಸಮಾನ ಶಿಕ್ಷಣ ವ್ಯವಸ್ಥೆ ಇಲ್ಲದಿರುವುದರಿಂದ ಸಮಾಜದಲ್ಲಿ ಅನೇಕ ಬಗೆಯ ತಾರತಮ್ಯ ಹೆಚ್ಚುತ್ತಿದೆ. ಹಳ್ಳಿಗಾಡು ನಗರಗಳ ಶಿಕ್ಷಣದಲ್ಲಿ, ಶಿಕ್ಷಣ ಮಾಧ್ಯಮದ ವಿಷಯದಲ್ಲಿ,  ರಾಜ್ಯ, ಕೇಂದ್ರೀಯ, ಅಂತರಾಷ್ಟ್ರೀಯ ಪಠ್ಯಕ್ರಮದಲ್ಲಿ, ಸರ್ಕಾರಿ, ಖಾಸಗಿ ಶಾಲಾ ಶಿಕ್ಷಣದಲ್ಲಿ… ಹೀಗೆ ಗುರುತರ ವ್ಯತ್ಯಾಸಗಳಿವೆ. ತಾರತಮ್ಯ ಮತ್ತು ಅಸಮಾನ ಸಾಮಾಜಿಕ ವ್ಯವಸ್ಥೆಯಿಂದ ನರಳುತ್ತಿದ್ದ ಭಾರತ, ಸ್ವಾತಂತ್ರ್ಯ ಪಡೆದ ನಂತರವಾದರೂ ಸಮಾನ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿಕೊಳ್ಳಲೇಬೇಕಿತ್ತು. ಆಗ ಕೊಂಚವಾದರೂ ಸಮಾಜದಲ್ಲಿ ಬದಲಾವಣೆ ಕಾಣಬಹುದಿತ್ತೇನೋ? 1990 ರಿಂದ ಇಂದಿನವರೆಗೆ ಪ್ರತಿವರ್ಷ ಸಾವಿರ ಸಾವಿರ ಸಂಖ್ಯೆಯಲ್ಲಿ ಹೊಸ ಖಾಸಗಿ ಶಾಲೆಗಳು ಪ್ರಾರಂಭವಾಗುವುದಕ್ಕೆ ಅನುಮತಿ ನೀಡಲಾಗುತ್ತಿದೆ. ಇದೇ ಕಾರಣದಿಂದ ಸಮರ್ಪಕವಾದ ವ್ಯವಸ್ಥೆಯಿಲ್ಲದ ಬಡ ಸರ್ಕಾರಿ ಶಾಲೆಗಳು ಮುಚ್ಚಲ್ಪಡುತ್ತಿವೆ. ಸರ್ಕಾರಿ ವ್ಯವಸ್ಥೆಯಲ್ಲಿ ಇದ್ದ ಸಂಸ್ಥೆಗಳನ್ನು ಕೂಡ ನಿಧಾನಕ್ಕೆ ಸರ್ಕಾರ ಖಾಸಗಿಯವರಿಗೆ ಮಾರುತ್ತಲಿದೆ. ಸರ್ಕಾರವಿರುವುದೇ ಇಂತಹ ದಲ್ಲಾಳಿತನ ಮಾಡಲು ಎನ್ನುವಂತಾಗಿಬಿಟ್ಟಿದೆ! ರೈಲ್ವೆ, ಬಿಎಸ್ಎನ್ಎಲ್ ಹಾಗೆ ಇಂದು ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯನ್ನೂ ವ್ಯಾಪಕವಾಗಿ ಖಾಸಗೀಕರಣಗೊಳಿಸಲಾಗುತ್ತಿದೆ. ಎಷ್ಟೇ ಕಷ್ಟವಾದರೂ ಸರಿ, ಅಂಚಿನಲ್ಲಿರುವ ಮಕ್ಕಳನ್ನು ಅಭಿವೃದ್ಧಿಯ ಕೇಂದ್ರದಲ್ಲಿಟ್ಟು ಅವರ ಸುತ್ತ ಸರ್ಕಾರದ ಯೋಜನೆಗಳನ್ನು ನಿರೂಪಿಸಬೇಕು. ಆಗ ಮಾತ್ರ ತಳಹಂತದಿಂದ ಬದಲಾವಣೆ ಸಾಧ್ಯ.

  • ಇತ್ತೀಚಿಗೆ ಮಹಿಳಾ ಪರವಾದ ಚಳವಳಿಗಳು ಪ್ರಬಲವಾಗಿ, ಪ್ರಭಾವಕಾರಿಯಾಗಿ ರೂಪುಗೊಳ್ಳುತ್ತಿಲ್ಲ ಏಕೆ?

ಹಲವಾರು ಕಾರಣಗಳಿವೆ. ಮಹಿಳೆಯರಿಗಿರುವ ಖಾಸಗಿ ಮತ್ತು ಕೌಟುಂಬಿಕ ಸಮಸ್ಯೆಗಳು ಮುಖ್ಯವಾದುವು. ಮೂಲಭೂತವಾದ ಸಮಸ್ಯೆಗಳಿಗೆ ತಳಮಟ್ಟದಿಂದ, ನಿರಂತರವಾಗಿ ಕೆಲಸ ಮಾಡುವ ಅನುಕೂಲತೆಗಳು ಇಂದಿನ ಹೆಚ್ಚಿನ ಹೋರಾಟಗಾರರಿಗಿಲ್ಲ. ಹಾಗೇ ವಿಕೇಂದ್ರಿತ ಹೋರಾಟದ ಸಾಧ್ಯತೆಗಳೂ ಕಡಿಮೆ ಇವೆ. ಜೊತೆಗೆ ಚಳವಳಿ ರೂಪಿಸಲು ಬೇಕಾಗುವ ಹಣ, ಶ್ರಮ ಸಮಯವನ್ನು ನೀಡಲು ಕಷ್ಟ ಸಾದ್ಯವಿರಬಹುದು. ಇತ್ತೀಚಿನ ಕೆಲ ಹೋರಾಟಗಳು, ಸಾಂದರ್ಭಿಕ ಕಾರಣಗಳಿಗಾಗಿ ಹುಟ್ಟುತ್ತಿವೆ. ಕೆಲವು ಮಹಿಳಾ ಸಂಘಟನೆಗಳು ಪ್ರತಿವರ್ಷ ಮಹಿಳಾ ಪರ ಕಾರ್ಯಕ್ರಮಗಳನ್ನು ನಿಯಮಿತವಾಗಿ ಮಾಡುತ್ತಾ ಬಂದಿವೆ. ಲಕ್ಷ ಲಕ್ಷದವರೆಗೆ ಹಣವನ್ನು ಖರ್ಚು ಮಾಡುತ್ತಾರೆ. ಸಾವಿರಾರು ಜನರನ್ನು ಸೇರಿಸುತ್ತಾರೆ. ಆದರೆ ತೀವ್ರವಾದ ಸಮಸ್ಯೆ ಕ್ರಿಯೇಟ್ ಆದಾಗ ಪ್ರತಿಕ್ರಿಯೆ, ಹೋರಾಟಗಳು ತೀರಾ ಕಡಿಮೆ. ನಮ್ಮಷ್ಟಕ್ಕೆ ನಾವು ಕಾರ್ಯಕ್ರಮಗಳನ್ನು ಮಾಡಿಕೊಂಡರೆ ಪ್ರಯೋಜನವೇನು? ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರಗಳು, ನಾಪತ್ತೆ ಪ್ರಕರಣಗಳು ಹೆಚ್ಚುತ್ತಿರುವಾಗ, ದಮನಿತ ಹೆಣ್ಣುಮಕ್ಕಳ ಪುನರ್ವಸತಿ ಉದ್ದೇಶಗಳಿಗಾಗಿ, ಮದ್ಯವಿರೋಧಿ ಆಂದೋಲನದ ಬೆಂಬಲವಾಗಿ… ಹೀಗೆ ಅನೇಕ ಸಂದರ್ಭದಲ್ಲಿ ಗಟ್ಟಿಧ್ವನಿ ಕೇಳುತ್ತಿಲ್ಲ. ಹೋರಾಟಗಳು ರೂಪುಗೊಳ್ಳುತ್ತಿಲ್ಲ. ಸರ್ಕಾರ ಅನುಸರಿಸಬೇಕಾದ ಸ್ಟ್ರಾಟರ್ಜಿಗಳನ್ನು, ಕಾನೂನು ರೂಪಿಸಲು, ನೀತಿ ನಿರೂಪಣೆಯ ಮೇಲೆ ಪ್ರಭಾವ ಬೀರಲು, ಸರ್ಕಾರದ ಪಾಲಿಸಿ ಮೇಕಿಂಗ್ ಮೇಲೆ ಪ್ರಭಾವ ಬೀರುವಂತಹ ಕಾರ್ಯಗಳು ಆಗಲೇಬೇಕು.  ರಾಜ್ಯ ಬಜೆಟ್ ನಲ್ಲಿ ಮಹಿಳೆಯರ ಪರವಾಗಿ ಏನು? ಎಷ್ಟು? ಬೇಕೆಂಬುದನ್ನು ಅನುಷ್ಠಾನಗೊಳಿಸಲು ಪ್ರಯತ್ನಗಳಾಗಬೇಕು. ಬಹುಶಃ ಇವು ಮಹಿಳಾ ಚಳವಳಿಯನ್ನು ತಳಹಂತದಿಂದ ರೂಪಿಸಬೇಕಾದ ವಿಧಾನ. ಸರ್ಕಾರದ ನೀತಿ ನಿರೂಪಣೆ ಮಾಡಲಿಕ್ಕೆ ಮಹಿಳೆಯರನ್ನು ಒಳಗೊಳ್ಳುವಂತೆ ಮಹಿಳಾ ಚಳವಳಿ ಮುಖ್ಯವಾಗಿ ಒತ್ತಡ ಹಾಕಬೇಕಿದೆ.

  • ಮಕ್ಕಳ ಹಕ್ಕುಗಳ ಉಲ್ಲಂಘನೆ ಅವ್ಯಾಹತವಾಗಿ ಮುಂದುವರೆಯುತ್ತಲೇ ಇದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಧೋರಣೆ ಹೇಗಿದೆ?

ಸರ್ಕಾರದ ಯೋಜನೆಗಳು ಅನುಷ್ಠಾನದ ಹಂತದಲ್ಲಿ ಸೋಲುತ್ತಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅಗತ್ಯವಿರುವಷ್ಟು ಸಿಬ್ಬಂದಿ ಕೂಡ ಇಲ್ಲ. ಅದರಲ್ಲೂ ಪರ್ಮನೆಂಟ್ ಸ್ಟಾಫ್ ತುಂಬಾ ಕಡಿಮೆ. ಯೋಜನೆಗಳು ಎಲ್ಲಾ ಫಲಾನುಭವಿಗಳಿಗೂ ವಿಥೌಟ್ ಡಿಸ್ಕ್ರಿಮಿನೇಶನ್ ಮುಟ್ಟುತ್ತಿಲ್ಲ. ಫಲಾನುಭವಿಗಳನ್ನು ಕಡಿಮೆ ಸಂಖ್ಯೆಯಲ್ಲಿ ಗುರುತಿಸುತ್ತಾರೆ, ನಿಜವಾದ ಬಡ ಫಲಾನುಭವಿಗಳನ್ನು ತಲುಪದೆ ಹೊಟ್ಟೆ ತುಂಬಿರುವಂತಹವರಿಗೆ ಕೂಡ ತಲುಪುತ್ತಿವೆ. ಇವೆಲ್ಲ ವ್ಯವಸ್ಥೆಯಲ್ಲಿರುವ ಲೋಪ. ಭ್ರಷ್ಟಾಚಾರ ಎಂಬುದು ಇತರ ಇಲಾಖೆಯಲ್ಲಿ ನಡೆದಂತೆ ಮಕ್ಕಳನ್ನು ರಕ್ಷಿಸಬೇಕಿರುವ ಇಲಾಖೆಗಳಲ್ಲೇ ನಡೆದರೆ ಹೇಗೆ? ಕೇಂದ್ರದಿಂದ ಮಗುವಿನವರೆಗೆ ಸಂಬಂಧಿಸಿದಂತಹ ಯೋಜನೆ ತಲುಪಲಿಕ್ಕೆ ನೂರಾರು ಲೂಪ್ಹೋಲ್ಸ್ಗಳನ್ನು ದಾಟಿಕೊಂಡು ಮಗುವಿಗೆ ತಲುಪುವುದೇ ಅತ್ಯಲ್ಪ. ಮಕ್ಕಳ ರಕ್ಷಣೆ, ಕಾನೂನಾತ್ಮಕ ಬೆಂಬಲ ಮುಂತಾದ ವಿಚಾರಗಳಿಗೆ ಸಂಬಂಧಿಸಿದಂತೆ ಕಾನೂನುಗಳ ಬಗ್ಗೆ ತಳಹಂತದ ಸಿಬ್ಬಂದಿಗೆ ಮಾಹಿತಿಯೇ ಇರುವುದಿಲ್ಲ. ಒಂದು ನೈಜ ಘಟನೆಯನ್ನು ಉದಾಹರಿಸಬಹುದು- ಅಪ್ಪನಿಂದ ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತ ಬಾಲಕಿ ಗರ್ಭ ಧರಿಸಿ 4 ತಿಂಗಳುಗಳಾಗಿದ್ದವು. ತಂದೆಯನ್ನು ಜೈಲಿಗೆ ಹಾಕಿದ ಮೇಲೆ, ಸಂಬಂಧಿಸಿದ ಇಲಾಖೆಯ ತಳಹಂತದ ಸಿಬ್ಬಂದಿಗಳು ಭ್ರೂಣವನ್ನು ತೆಗೆಯುವ ಸಂಬಂಧ ತಪ್ಪು ಮಾಹಿತಿ ನೀಡಿ ಮಗುವನ್ನು ಹಡೆಯುವುದು ಅನಿವಾರ್ಯವೆಂಬ ಒತ್ತಡ ಹಾಕಿದ್ದರು! ವ್ಯವಸ್ಥೆ ಎಷ್ಟು ಅಸೂಕ್ಷ್ಮವಾಗಿದೆ ನೋಡಿ. ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿಯರಿಗೆ ಗರ್ಭಪಾತ ಮಾಡಿಸುವ, ಭ್ರೂಣ ಸಂಗ್ರಹಿಸುವ ಬಗ್ಗೆ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಗಳಿಗೆ ಸ್ಪಷ್ಟ ನಿರ್ದೇಶನಗಳೇ ಇಲ್ಲ! ಇರುವ ನಿಯಮಗಳೂ ಹಲ ಬಾರಿ ಪಾಲನೆಯಾಗಲ್ಲ.

  • ಪ್ರೌಢಶಾಲಾ ಶಿಕ್ಷಣ ಹಂತದಲ್ಲಿ ಲೈಂಗಿಕ ಶಿಕ್ಷಣ ಕೊಡಬೇಕೆಂಬ ಅಭಿಪ್ರಾಯ ಆಗ್ಗಾಗ್ಗೆ ಕೇಳಿಬರುತ್ತದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮಡಿವಂತಿಕೆ ಇಲ್ಲದೇ ಖಂಡಿತ ಕೊಡಬೇಕು. ಲೈಂಗಿಕ ಶಿಕ್ಷಣ ಎಂಬುದು ದೇಹದ ಪರ್ಪಸ್ ಕುರಿತು, ಲೈಂಗಿಕತೆಯ ನೈತಿಕ ಜವಾಬ್ದಾರಿಯನ್ನು, ಲೈಂಗಿಕ ಅಂಗಾಂಗಗಳ ಕಾರ್ಯವೇನು? ಲೈಂಗಿಕ ಸಂಪರ್ಕದಿಂದ ಆಗುವ ಪರಿಣಾಮ, ಲೈಂಗಿಕ  ಅಪರಾಧಕ್ಕೆ ಶಿಕ್ಷೆ ಏನು? ಕಾನೂನುಗಳು ಯಾವ ರೀತಿ ಇವೆ? ಇವುಗಳ ಕುರಿತು ಮಾಹಿತಿ ನೀಡಬೇಕು. ಲೈಂಗಿಕ ಶಿಕ್ಷಣದ ಪಠ್ಯಕ್ರಮವನ್ನು ತುಂಬಾ ನಾಜೂಕಾಗಿ, ಸೂಕ್ಷ್ಮವಾಗಿ ಯೋಜಿಸಿ ಹಂತಹಂತವಾಗಿ ನೀಡಬೇಕು. ಲೈಂಗಿಕ ತಜ್ಞರು, ಲೈಂಗಿಕ ಮನಃಶಾಸ್ತ್ರಜ್ಞರು, ಮಕ್ಕಳೊಂದಿಗೆ ಕೆಲಸ ಮಾಡುವ ಕಾರ್ಯಕರ್ತರು, ಶಿಕ್ಷಣ ತಜ್ಞರು,.. ಇವರೆಲ್ಲ ಸೇರಿ ವ್ಯವಸ್ಥಿತವಾಗಿ ಪಠ್ಯಕ್ರಮ ರೂಪಿಸಬೇಕು. ಲೈಂಗಿಕ ಶಿಕ್ಷಣವನ್ನು ಮಕ್ಕಳಿಗೆ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಶಿಕ್ಷಕರಿಗೂ ಪರಿಣಾಮಕಾರಿ ತರಬೇತಿ ಅಗತ್ಯವಾಗುತ್ತದೆ.

  • ಬಾಲಮಂದಿರಗಳಿಂದಲೇ ಮಕ್ಕಳ ಅಪಹರಣ, ಲೈಂಗಿಕ ದೌರ್ಜನ್ಯದ ಪ್ರಕರಣಗಳು ಬೆಳಕಿಗೆ ಬಂದಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಅಪರಾಧ ಮಾಡಿರುವ ಪೋಷಕರ ಮಕ್ಕಳು, ಅತ್ಯಾಚಾರಕ್ಕೆ ಈಡಾದವರು, ಬಾಲ್ಯವಿವಾಹಕ್ಕೊಳಗಾದವರು, ಸಿಂಗಲ್ ಪೇರೆಂಟ್ ಗಳ ಮಕ್ಕಳು, ಅನಾಥ ಮಕ್ಕಳು ಇವರ ರಕ್ಷಣೆಗಾಗಿ ಸರ್ಕಾರ ರಚಿಸಿರುವ ಸಂಸ್ಥೆಗಳೇ ಬಾಲಮಂದಿರಗಳು. ಆದರೆ ಇವುಗಳಲ್ಲಿ ಕೂಡ ರೆಗ್ಯುಲರ್ ಸ್ಟಾಫ್ ಕೊರತೆ ಬಹುಮುಖ್ಯವಾಗಿ ಕಾಡುತ್ತಿದೆ. ಹೆಣ್ಣುಮಕ್ಕಳು ಹಾಗೂ ಅಂಗವಿಕಲ ಮಕ್ಕಳಿರುವ ಬಾಲಮಂದಿರಗಳಲ್ಲಿ,  ಮಹಿಳೆಯರೇ ಸಿಬ್ಬಂದಿ ಇರಬೇಕು. ಆದರೆ ಇದು ಇನ್ನೂ ಜಾರಿಯಾಗಿಲ್ಲ.  ಹೀಗಾಗಿ ದೌರ್ಜನ್ಯದ ಸಾಧ್ಯತೆ ಇರುತ್ತದೆ. ಮಕ್ಕಳಿಗೆ ಎಲ್ಲ ರೀತಿಯಲ್ಲೂ ಅನುಕೂಲಕರ ವಾತಾವರಣ ದೊರೆಯುತ್ತಿಲ್ಲ. ಸಿಬ್ಬಂದಿಗಳಿಗೆ ಬೇಕಾಗಿರುವ ಸೌಲಭ್ಯ, ಸಂಬಳ ಕೂಡ ತೃಪ್ತಿಕರವಾಗಿಲ್ಲ. ಸಿಬ್ಬಂದಿ ಆಯ್ಕೆ ಪ್ರಕ್ರಿಯೆಯಲ್ಲಿಯೇ ಮಕ್ಕಳ ಪಾಲನೆಗಾಗಿಯೇ ವಿಶೇಷವಾದ ತರಬೇತಿ ಪಡೆದವರನ್ನು ತೆಗೆದುಕೊಳ್ಳಬೇಕು. ಇದೂ ಆಗುತ್ತಿಲ್ಲ. ಪ್ರತಿಯೊಂದು ಮಗುವಿನ ಆಸಕ್ತಿ,  ಪ್ರತಿಭೆ,  ಕೌಶಲ್ಯಗಳಿಗನುಗುಣವಾಗಿ ಗುರುತಿಸಿ, ಶಿಕ್ಷಣ, ಓರಿಯೆಂಟೇಷನ್ ಕೊಟ್ಟು ಬೆಳೆಸಬೇಕು. ಮಕ್ಕಳ ಸಂಖ್ಯೆಗನುಗುಣವಾಗಿ ಸಿಬ್ಬಂದಿ, ಕೌನ್ಸಲರ್ ಗಳು ಇರಬೇಕು. ಕಾನೂನಿನೊಡನೆ ಸಂಘರ್ಷದಲ್ಲಿರುವ ಮಕ್ಕಳನ್ನು ರಕ್ಷಿಸಲು ಕೂಡ ರಕ್ಷಣಾ ಮಂದಿರಗಳಿವೆ. ಅಲ್ಲಿಯೂ ಮುಖ್ಯವಾಗಿ ಅಪರಾಧದಲ್ಲಿ ಭಾಗಿಯಾಗಿದ್ದ ಮಕ್ಕಳ ಮನಃಪರಿವರ್ತನೆಯನ್ನು ಮಾಡಿ, ಉತ್ತಮ ವ್ಯಕ್ತಿಯಾಗಿ ರೂಪಿಸಬಲ್ಲ ನುರಿತ ಸಿಬ್ಬಂದಿಬೇಕು. ಉಸಿರುಗಟ್ಟುವ ವಾತಾವರಣ, ಪ್ರೀತಿಯ ಕೊರತೆ, ಅವಮಾನ/ಅನುಮಾನಕರ ಮಾತು, ಕೆಲವು ಬಾರಿ ಕಠಿಣ ಶಿಕ್ಷೆ,, ಇದನ್ನೆಲ್ಲಾ ಸಹಿಸಲಾರದೆ ಮಕ್ಕಳು ಇಲ್ಲಿಂದ ಕದ್ದು ಓಡಿಹೋಗುತ್ತಾರೆ. ಸರಿಯಾದ ಮೇಲ್ವಿಚಾರಕರು, ಭದ್ರತಾ ವ್ಯವಸ್ಥೆ  ಕೂಡ ಕೆಲ ಬಾಲಮಂದಿರಗಳಲ್ಲಿ ಇಲ್ಲ. ಆದರೆ ಬಾಲಮಂದಿರಗಳನ್ನು ಜೈಲಿನಂತಾಗಿಸದೇ ಯುದ್ಧೋಪಾದಿಯಲ್ಲಿ ಮಗುವಿನ ಮನಃಪರಿವರ್ತನೆಗೆ ಬೇಕಾದ ಕಾರ್ಯಗಳನ್ನು ಕೈಗೊಳ್ಳಬೇಕು. ಇದು ಮಗುವಿನ ಮತ್ತು ದೇಶದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಅವಶ್ಯವಾದುದು. ಆದರೆ ನಮ್ಮ ದೇಶದಲ್ಲಿ ಇದಕ್ಕೆ ಬೇಕಾದ ಸಮರ್ಪಕವಾದ  ಅನುಕೂಲತೆಗಳೇ ಇಲ್ಲ.

  • ಇಂದಿನ ಯುವಜನತೆ ಸಾಮಾಜಿಕ ವೈಚಾರಿಕತೆಯಿಂದ ದೂರ ಉಳಿಯುತ್ತಿದ್ದಾರೆ ಎಂದು ನಿಮಗೆ ಅನಿಸುತ್ತದೆಯೇ?

ಒಂದು ಮಗು ಡಿಗ್ರಿಯವರೆಗೆ ವಿದ್ಯಾಭ್ಯಾಸ ಮಾಡುತ್ತದೆ ಎಂದುಕೊಂಡರೆ, ಅದಕ್ಕೆ ಹೊರ ಪ್ರಪಂಚದೊಂದಿಗೆ ಸಂಬಂಧವೇ ಇರದಂತೆ ಸುಮಾರು 18 ವರ್ಷ ಪಠ್ಯದ ಮೂಲಕವೇ ಕಲಿಸಲಾಗುತ್ತದೆ. ಅವರು ಸಮಾಜದಿಂದ ಬೇರ್ಪಟ್ಟು ದ್ವೀಪದಂತಾಗುತ್ತಾರೆ. ಭವಿಷ್ಯದ ಉತ್ತಮ ನಾಗರಿಕರನ್ನು ರೂಪಿಸಲು ನಾವು ಮುಖ್ಯವಾಗಿ ಕಲಿಸಬೇಕಾಗಿದ್ದು ನಡವಳಿಕೆ ಶಿಕ್ಷಣ, ಸ್ವಭಾವ ಶಿಕ್ಷಣ. ವ್ಯವಹರಿಸುವ ಶಿಕ್ಷಣ, ಸಾಮಾಜಿಕವಾಗಿ ಒಗ್ಗೂಡಿ ಬದುಕಬೇಕಾದ ಶಿಕ್ಷಣ, ತಾರತಮ್ಯರಹಿತ, ಗುಣಗ್ರಾಹಿ   ಶಿಕ್ಷಣ … ಆದರಿವನ್ನು ಕೊಡುತ್ತಿರುವುದು ಅತ್ಯಂತ ಕಡಿಮೆ. ಮಗುವಿನ ಶಿಕ್ಷಣ ಮನೆಯಿಂದ, ತಂದೆ/ತಾಯಂದಿರಿಂದ ಮೊದಲು ಮತ್ತು  ಸೂಕ್ಷ್ಮವಾಗಿ ಪ್ರಾರಂಭವಾಗಬೇಕು. ಇದಕ್ಕೆ ಬೇಕಾದಂತಹ ಮಾನಸಿಕ ಸಿದ್ಧತೆ ಪೋಷಕರಿಗೆ ಇದೆಯೇ? ಪ್ರತಿಯೊಂದು ಮಗುವಿಗೂ ಎಲ್ಲರೊಂದಿಗೂ ಬೆರೆತು ಬದುಕುವ ಸಹಕಾರ ಮತ್ತು ಹೊಂದಾಣಿಕೆಯ ಮನೋಭಾವ ಕಲಿಯುವಂತೆ ಮನೆಯಲ್ಲಿ ಶಿಕ್ಷಣ ನೀಡಬೇಕು. ಆದರೆ ಇಂದು ವ್ಯಕ್ತಿಗತವಾದ ಅಹಂಭಾವ ಮತ್ತು ಸ್ವಾರ್ಥ ಕೇಂದ್ರಿತವಾದ ನೋಟ ಕ್ರಮವನ್ನು ಕಲಿಸುತ್ತಿದ್ದೇವೆ. ಶಿಕ್ಷಣ ವ್ಯವಸ್ಥೆಯಲ್ಲಿ ರ್ಯಾಂಕಿಂಗ್ ಸಿಸ್ಟಮ್ ನಿಂದ ಕೂಡ ಮಕ್ಕಳಲ್ಲಿ ಸುಪೀರಿಯಾರಿಟಿ ಕಾಂಪ್ಲೆಕ್ಸ್ ಬೆಳೆಯುತ್ತಾ ಹೋಗುತ್ತಿದೆ. ಇವೆಲ್ಲದರಿಂದ ಮಕ್ಕಳು ಸಾಮಾಜಿಕ ವೈಚಾರಿಕತೆಯಿಂದ ದೂರವಾಗುತ್ತಿದ್ದಾರೆ. ಸಮಾಜದ ಎಲ್ಲರನ್ನೂ ಒಳಗೊಳ್ಳುವಂತಹ ಪಠ್ಯಕ್ರಮ ರೂಪಿಸುವುದು ಅವಶ್ಯಕ. ಕುಟುಂಬ, ಪ್ರಭುತ್ವ, ವ್ಯವಸ್ಥೆಗಳೆಲ್ಲವೂ ಮಕ್ಕಳ ಸರ್ವತೋಮುಖ ಸಮಗ್ರ ವ್ಯಕ್ತಿತ್ವ ನಿರ್ಮಾಣವನ್ನು ಕೇಂದ್ರವಾಗಿರಿಸಿಕೊಂಡು ಯೋಜನೆ ರೂಪಿಸುವಂತಾದಾಗ ಮಾತ್ರ ಈ ಬದಲಾವಣೆ ಸಾಧ್ಯ.

  • ನಮ್ಮ ಸರ್ಕಾರ, ಆರೋಗ್ಯ ಇಲಾಖೆ ಏಡ್ಸ್ ಪ್ರಿವೆನ್ಷನ್ ಹೆಸರಿನಲ್ಲಿ ಕಾಂಡೋಮ್ ವಿತರಿಸಲು ಲೈಂಗಿಕ ಕಾರ್ಯಕರ್ತರಾಗಿರುವ ಹೆಣ್ಣುಮಕ್ಕಳನ್ನು ಬಳಸಿಕೊಳ್ಳುತ್ತಿದೆ. ಇದನ್ನು ಹೇಗೆ ಅರ್ಥೈಸುವಿರಿ?

ಇದರಿಂದಲೇ ನಾನು ‘ಸರ್ಕಾರಿ ಪ್ರಾಯೋಜಿತ ವೇಶ್ಯಾವಾಟಿಕೆ’ ಎಂದು ಹೇಳುತ್ತೇನೆ. ಕಾಂಡೋಮ್ ಡಿಸ್ಟ್ರಿಬ್ಯೂಷನ್ ಎಂಬುದು ಕೋಟ್ಯಂತರ ರೂಪಾಯಿ ವ್ಯವಹಾರ. ವೇಶ್ಯಾವಾಟಿಕೆ ಜಾಲಕ್ಕೆ ಬಿದ್ದ ಹೆಚ್ಚಿನವರು ಬಡತನ, ಅನಕ್ಷರತೆ, ನಿರುದ್ಯೋಗ, ಬಾಲ್ಯವಿವಾಹ, ವೈಧವ್ಯ, ಕುಡುಕ ಗಂಡ… ಮೊದಲಾದ ವಿಷಮ ಕಾರಣಗಳಿಂದಾಗಿ ಕುಟುಂಬದ ಜವಾಬ್ದಾರಿ ಹೊರಬೇಕಾದ ಅನಿವಾರ್ಯತೆಯಿಂದ ಇಲ್ಲಿಗೆ ಬಂದಿದ್ದಾರೆ. ಹೀಗಾಗಿ ಇವರನ್ನು ಲೈಂಗಿಕ ಕಾರ್ಯಕರ್ತೆಯರು ಎಂದು ಸಂಬೋಧಿಸದೇ, ‘ಲೈಂಗಿಕ ದಮನಿತರು’ ಎಂದು ಕರೆಯಬೇಕೆಂಬುದು, ನಾನೂ ಸದಸ್ಯೆಯಾಗಿದ್ದ ‘ಕರ್ನಾಟಕ ರಾಜ್ಯ ಲೈಂಗಿಕಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ಸಮಿತಿಯ ವರದಿ’ಯ ಮುಖ್ಯ ಅಂಶದಲ್ಲಿ ಒಂದು. NACO  ಎಂಬುದು ಏಡ್ಸ್ ನಿಯಂತ್ರಣಕ್ಕಾಗಿ ರಾಷ್ಟ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುವ NGO. ಇದು ತನ್ನ ಉದ್ದೇಶಕ್ಕಾಗಿ ನಮ್ಮ ವ್ಯವಸ್ಥೆಯ ಎಲ್ಲ structuresಗಳನ್ನು ಬಳಸಿಕೊಂಡು ತನ್ನದೇ ಕಾನೂನುಗಳನ್ನು ರೂಪಿಸಿಕೊಂಡಿದೆ. ಪ್ರತಿಯೊಂದು ರಾಜ್ಯದಲ್ಲಿಯೂ ಶಾಖೆಯನ್ನು ಹೊಂದಿದ್ದು, ಆಯಾ ರಾಜ್ಯದ ಮುಖ್ಯಮಂತ್ರಿಗಳೇ ರಾಜ್ಯ ಶಾಖೆಗಳ ಅಧ್ಯಕ್ಷರಾಗಿರುತ್ತಾರೆ! ಆರೋಗ್ಯಮಂತ್ರಿಯೇ ಮುಖ್ಯ ಕಾರ್ಯದರ್ಶಿಯಾಗಿರುತ್ತಾರೆ. ಸರ್ಕಾರ ಮತ್ತು ವಿದೇಶಗಳಿಂದ ಕೋಟ್ಯಾಂತರ ರೂಪಾಯಿಗಳ ಅನುದಾನಗಳು ಹರಿದುಬರುತ್ತವೆ. ಸಂಸ್ಥೆ, ಸಾವಿರಾರು ಜನರನ್ನು ತನ್ನ ನೆಟ್ವರ್ಕ್ಗಾಗಿ ಕೆಲಸಕ್ಕೆ ನೇಮಿಸಿಕೊಂಡಿದೆ. ದೇಶದಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಲಕ್ಷಾಂತರ ಮಹಿಳೆಯರನ್ನು ಕಾಂಡೋಮ್ ವಿತರಣೆಯ ಜಾಲದಲ್ಲಿ ನೊಂದಣಿ ಮಾಡಿಕೊಳ್ಳಲಾಗಿದೆ. ಕರ್ನಾಟಕದಲ್ಲಿ ಲಕ್ಷದಷ್ಟಿದ್ದಾರೆ. ಈ ಮೂಲಕ ವೇಶ್ಯಾವಾಟಿಕೆ ಒಂದು ರೀತಿಯಲ್ಲಿ ಕಾನೂನುಬದ್ಧವೇ ಆಗಿಹೋಗಿದೆ! ಇದು ದುರಂತ. ಇವರಲ್ಲಿ ನಾಯಕತ್ವ ಇರುವವರನ್ನು ಗುರುತಿಸಿ ಪೀರ್ ವರ್ಕರ್ಸ್ಗಳೆಂದು ನೇಮಿಸಿ, ಕಾಂಡೋಂ ಹಂಚಲು ಮೂರು ಸಾವಿರ ರೂಗಳವರೆಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ಈ ಸಂಬಂಧವಾಗಿ ಅವರಿಗೆ ಟಾರ್ಗೆಟ್ ಫಿಕ್ಸ್ ಮಾಡಲಾಗುತ್ತದೆ. ಈ ಸಂಸ್ಥೆಯ ಉನ್ನತಮಟ್ಟದಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಲಕ್ಷಾಂತರ ಸಂಬಳ! ಈ ಕಾಂಡೋಂ ಹಂಚಿಕೆಯ ನೆಟ್ವರ್ಕ್ ಒಳಗೆ ಅಪ್ರಾಪ್ತ ಬಾಲಕಿಯರು ಇದ್ದಾರೆ. ಅಂಗವಿಕಲೆಯರು, ಸ್ವತಃ ಹೆಚ್ಐವಿ ಸೋಂಕಿತರೂ ಇದ್ದಾರೆ! ಸರಕಾರ ಮತ್ತು NGOಗಳಿಗೆ ಈ ವಿಷಯ ತಿಳಿದಿದ್ದರೂ ಇವರನ್ನು ಜಾಲದಿಂದ ಹೊರತೆಗೆಯಲು ಮುಂದಾಗುತ್ತಿಲ್ಲ. ಟಾರ್ಗೆಟ್ ರೀಚ್ ಮಾಡಿದಂತೆಲ್ಲಾ ಹೆಚ್ಚು ಹಣ ಗಳಿಸುವ ಆಮಿಷವನ್ನೊಡ್ಡಲಾಗುತ್ತದೆ. ಇದಕ್ಕೆ ವೇಶ್ಯಾವಾಟಿಕೆಯೊಳಗೆ ಹೆಚ್ಚೆಚ್ಚು ಹೆಣ್ಣುಮಕ್ಕಳು ಮತ್ತು ಗ್ರಾಹಕರು ಬರಬೇಕಾಗುತ್ತದೆ. ಬರುತ್ತಿದ್ದಾರೆ! ಇದೊಂದು ರೀತಿ ಹಿಂಬದಿಯಿಂದ ವೇಶ್ಯಾವಾಟಿಕೆಗೆ ಪ್ರೋತ್ಸಾಹ ನೀಡಿದಂತೆ! ಏಡ್ಸ್ ನಿಯಂತ್ರಣ ಮಂಡಳಿ ಈ ವ್ಯವಸ್ಥೆ ನಿರಂತರವಾಗಿ ಕಾರ್ಯನಿರ್ವಹಿಸುವಂತೆ ಜಾಲ ಹೆಣೆದಿದೆ. ಅಸಹಾಯಕ, ರೋಗಿಷ್ಠ, ವಯಸ್ಸಾದ ಲೈಂಗಿಕ ದಮನಿತರ ಪರಿಸ್ಥಿತಿ ಶೋಚನೀಯವಾಗಿ, ಕೊನೆಗೆ ಬೀದಿಗೆ ಬೀಳುತ್ತಾರೆ.

  • ಪ್ರತಿವರ್ಷ ಸಾವಿರಾರು ಹೆಣ್ಣುಮಕ್ಕಳು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ನಿಮಗನಿಸುತ್ತಿದೆಯೇ?

ಇಲ್ಲ. ಪೊಲೀಸ್ ಇಲಾಖೆಗೆ ಇದು ಮುಖ್ಯ ವಿಷಯವೇ ಅಲ್ಲ! ಹಾಗಿದ್ದರೆ ಇಷ್ಟು ಪ್ರಮಾಣದಲ್ಲಿ ನಾಪತ್ತೆ ಪ್ರಕರಣಗಳು ಆಗುತ್ತಿರಲಿಲ್ಲ. ಅರ್ಧದಷ್ಟು ಪ್ರಕರಣಗಳೂ ಶೋಧನೆಯಾಗದೇ ಉಳಿಯುತ್ತಿರಲಿಲ್ಲ. ಜೊತೆಗೆ  ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೂಡ ತುಂಬಾ ಕಡಿಮೆ ಇದ್ದಾರೆ. ಇವರೂ ಬೇರೆ ಬೇರೆ ಗಂಭೀರ ಅಪರಾಧ ಪತ್ತೆ ಕೆಲಸಗಳಿಗೆ ನಿಯೋಜನೆಯಾಗಿರುತ್ತಾರೆ. ಈ ಕಳೆದಿರುವ ಹೆಣ್ಣುಮಕ್ಕಳನ್ನು, ಅದರಲ್ಲೂ ಹೆಚ್ಚಿನವರು ಬಡ ಹೆಣ್ಮಕ್ಕಳು! ಅವರನ್ನು ಆಸ್ಥೆಯಿಂದ ಹುಡುಕುವ ಪ್ರಯತ್ನವೇ ಕಡಿಮೆ. ಅರ್ಧದಷ್ಟು ಕಣ್ಮರೆ ಪ್ರಕರಣಗಳು 18 ವರ್ಷದೊಳಗಿನ ಹೆಣ್ಣುಮಕ್ಕಳದ್ದಾಗಿರುತ್ತೆ. ಮನೆಗೆ ವಾಪಸ್ಸು ಬರದವರು, ಸಾವಿಗೂ ಈಡಾಗದವರು, ಮತ್ತೆ ಸಿಗದವರು… ಶಾಶ್ವತವಾಗಿ ಎಲ್ಲಿಗೆ ಹೋಗುತ್ತಾರೆ?  FF ಎಂಬುದು ಒಂದು ಕೋಡ್ ವರ್ಡ್. ಹೀಗೆಂದರೆ FRESH FLESH ಎಂದರ್ಥ. ಪ್ರತೀ ದಿನಾ ಹೊಸ ಮಾಂಸ! ಅಂದರೆ ಹೊಸ ಹೆಣ್ಣುಮಕ್ಕಳು ವೇಶ್ಯಾವಾಟಿಕೆಯ ಜಾಲದೊಳಗೆ ಬರುವ ವ್ಯವಸ್ಥೆ ರೂಪುಗೊಂಡಿದೆ. ಹೆಣ್ಣುಮಕ್ಕಳ ಅಪಹರಣವನ್ನು ಪತ್ತೆಹಚ್ಚಲು, ಒಟ್ಟಾರೆ ಮಾನವ ಕಳ್ಳಸಾಗಾಣಿಕೆ ತಡೆಯಲು ಎಲ್ಲಾ ಪೊಲೀಸ್ ಠಾಣೆಯಲ್ಲೂ ANTI HUMAN TRAFFICING CELLಗಳನ್ನು ರಚಿಸಲಾಗಿದ್ದು, ಇವು active ಆಗಿ ಕಾರ್ಯವನ್ನೇ ನಿರ್ವಹಿಸುತ್ತಿಲ್ಲ! ಹಿಂದೆ ಜಿಲ್ಲೆಯೊಂದರಲ್ಲಿ ಜಿಲ್ಲಾಧಿಕಾರಿಯೊಬ್ಬರು ಲೈಂಗಿಕ ಕಾರ್ಯಕರ್ತ ಹೆಣ್ಣುಮಕ್ಕಳಿಗಾಗಿ  ಕನಿಕರದಿಂದ ಒಂದು ಕಾಲೋನಿ ನಿರ್ಮಿಸಿಕೊಟ್ಟರು. ಪ್ರಾರಂಭದಲ್ಲಿ ವೇಶ್ಯಾವಾಟಿಕೆಯೂ ಇಲ್ಲಿ ಸಭ್ಯವಾಗಿ ನಡೆಯುತ್ತಿತ್ತು. ದಿನಕಳೆದಂತೆ ಬೇರೆ ಬೇರೆ ಜಿಲ್ಲೆ ರಾಜ್ಯಗಳಿಂದ ಹೆಣ್ಣುಮಕ್ಕಳನ್ನು ಅಪಹರಿಸಿ ತಂದು ವೇಶ್ಯಾವಾಟಿಕೆಗೆ ನೂಕುವ ವ್ಯವಹಾರ ಶುರುವಾಯಿತು. ಹೀಗಿರುವಾಗ ಒಬ್ಬ ಉನ್ನತ ಅಧಿಕಾರಿಯ ಮಗಳು ಕಾಣೆಯಾದ ಸಂಬಂಧವಾಗಿ ಎಲ್ಲೆಡೆ ಹುಡುಕಿ, ಸಿಗದೇ ಕೊನೆಗೆ, ಕಾಲೋನಿಯ ಮೇಲೆ ರೇಡ್ ಮಾಡಿದಾಗ ಆ ಹುಡುಗಿ, ಅಲ್ಲಿ ಪತ್ತೆಯಾದಳು! ಆಗ ಇಡೀ ಕಾಲೋನಿಯಲ್ಲಿದ್ದವರ ಮೇಲೆಲ್ಲಾ ಕೇಸು ದಾಖಲಿಸಿ, ಕಾಲೋನಿಯನ್ನು ನೆಲಸಮ ಮಾಡಲಾಯಿತು! ಬಲಾಢ್ಯರ ಮಗಳು ಅಪಹರಣವಾದಾಗ ಚುರುಕಾಗಿ ಕಾರ್ಯ ನಿರ್ವಹಿಸುವ ವ್ಯವಸ್ಥೆ, ಬಡವರ ಹೆಣ್ಣುಮಕ್ಕಳು ಅಪಹರಣವಾದಾಗ ತಲೆಕೆಡಿಸಿಕೊಳ್ಳುವುದೇ ಕಡಿಮೆ. ತಳಜಾತಿ ವರ್ಗದ ಯಾರ, ಯಾವ ರೀತಿಯ ಬೆಂಬಲವೂ ಇಲ್ಲದ ಅಸಹಾಯಕ ಹೆಣ್ಣುಮಕ್ಕಳೇ ಹೆಚ್ಚಾಗಿ ಶಾಶ್ವತವಾಗಿ ನಾಪತ್ತೆಯಾಗುವುದು ಹೇಗೆ? ಮತ್ತು ಯಾಕೆ? ಎಂಬುದನ್ನರಿಯಲು ವಿಶೇಷ ಜ್ಞಾನಬೇಕಿಲ್ಲ. ಇದುವರೆಗೆ ದೇಶ-ವಿದೇಶಗಳಿಗೆ ಭಾರತದ 25ಲಕ್ಷಕ್ಕೂ ಹೆಚ್ಚು ಹೆಣ್ಣುಮಕ್ಕಳು ಕಳ್ಳಸಾಗಾಣಿಕೆ ಮತ್ತು ಮಾರಾಟಕ್ಕೆ ಒಳಗಾಗಿ ವೇಶ್ಯಾವಾಟಿಕೆಯ ದಂಧೆಯೊಳಗೆ ನೂಕಲ್ಪಟ್ಟಿದ್ದಾರೆ ಎಂದು ಸರ್ಕಾರಿ ವರದಿಗಳೇ ದಾಖಲು ಮಾಡಿಟ್ಟಿವೆ! ಆದರೆ ಪೊಲೀಸಿನವರು ಇದನ್ನು ‘ಶಾಶ್ವತ ಕಣ್ಮರೆ’ ಎಂದು ಷರಾ ಬರೆದಿಟ್ಟು ಸುಮ್ಮನಾಗುತ್ತಾರೆ! ಒಂದು ದೊಡ್ಡ ಮಾಫಿಯಾವೇ ಇಂತಹ ನಾಪತ್ತೆಗಳ ಹಿಂದೆ ಕೆಲಸ ಮಾಡುತ್ತಿದೆ. ಇಡೀ ವ್ಯವಸ್ಥೆ ಅಸಹಾಯಕ ಹೆಣ್ಣುಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಯಾರೂ ಗಮನಹರಿಸುತ್ತಿಲ್ಲವೆಂದು ನೋವಾಗುತ್ತದೆ.

  • ಸ್ತ್ರೀಪರ ಚಿಂತನೆಗಳಿರುವ ಕಾಲಘಟ್ಟದಲ್ಲಿಯೂ ವೇಶ್ಯಾವಾಟಿಕೆ ಮುಂದುವರಿಯಲು ಕಾರಣಗಳೇನು?

ಈ ಹಿಂದೆ ವೇಶ್ಯಾವಾಟಿಕೆ ತನ್ನದೇ ನೀತಿ ನಿಯಮಗಳನ್ನು ಹಾಕಿಕೊಂಡು, ಸೀಮಿತ ವಲಯದಲ್ಲಿ ಗೌಪ್ಯವಾಗಿತ್ತು.  ಸಮಾಜ ಬದಲಾಗುತ್ತಾ ಆಧುನಿಕತೆಗೆ ತೆರೆದುಕೊಳ್ಳುತ್ತಾ, ಹೆಣ್ಣನ್ನು ಭೋಗದ ವಸ್ತುವಿನಂತೆ ಕಾಣುವ ಪ್ರವೃತ್ತಿ ಹೆಚ್ಚುತ್ತಾ ಹೋದಂತೆ ಮಾರುಕಟ್ಟೆ ಕೇಂದ್ರಿತವಾದ ವ್ಯವಸ್ಥೆಯು ರೂಪ ಪಡೆಯುತ್ತಾ, ಹೆಣ್ಣು ಮಾರಾಟದ ವಸ್ತುವಾಗಿ ಪರಿವರ್ತನೆಯಾದಳು! ಇಂದು ಆಧುನಿಕತೆಯ ಹೆಸರಿನಲ್ಲಿಯೂ ಕಾಮುಕ ಭಾವನೆಗಳನ್ನು ಪ್ರಚೋದಿಸಲಾಗುತ್ತಿದೆ. ನಿರ್ಬಂಧವಿರದ ಸಮೂಹ ಮಾಧ್ಯಮಗಳು, ಅಂತರ್ಜಾಲ, ಜಾಹೀರಾತು, ಚಿತ್ರಗಳು, ಸಿನಿಮಾ, ಅರೆನಗ್ನ ನೃತ್ಯಗಳ ಮೂಲಕ ಕಾಮವನ್ನು ಉದ್ದೀಪನೆಗೊಳಿಸಿ, ಪ್ರಚೋದಿಸುವ ವೈಭವೀಕರಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಜಾಗತೀಕರಣವು ಎಲ್ಲವನ್ನೂ ಬಿಕರಿಗಿಡುತ್ತಿದೆ. ರೈತರು, ಕಾರ್ಮಿಕರು, ಮಹಿಳೆ, ಮಕ್ಕಳು ಹೀಗೆ ಎಲ್ಲರೂ ಸರಕಾಗಿ ಹೋಗಿದ್ದಾರೆ. ಕಾನೂನು ವ್ಯವಸ್ಥೆಯಲ್ಲಿ ಕೂಡ ಬಹಳಷ್ಟು loop holes ಇವೆ. ಹೆಣ್ಣುಮಕ್ಕಳ ವ್ಯಾಪಕ ಅಪಹರಣ, ದೇಶವಿದೇಶಗಳಿಗೆ ಮಾರಾಟ, ಕಳ್ಳಸಾಗಣೆಯಾಗುವುದು… ಇವೆಲ್ಲವೂ ಜಾಗತೀಕರಣದ ಪರಿಣಾಮದಿಂದ ಹೆಚ್ಚಾಯ್ತು. ಮತ್ತು ಕೆಲ NGOಗಳ ಮಧ್ಯಪ್ರವೇಶದಿಂದಾಗಿ ಕೂಡ ವೇಶ್ಯಾವಾಟಿಕೆ ವ್ಯಾಪಕವಾಗುತ್ತಿದೆ. ’ನನ್ನ ದೇಹ ನನ್ನ ಹಕ್ಕು’ ಎಂಬ ಪರಿಕಲ್ಪನೆ  NGOಗಳದ್ದಾಗಿದೆ. ಕೆಲ NGOಗಳು  ಕೇಂದ್ರ ಸಮಸ್ಯೆಯನ್ನು ಜೀವಂತವಾಗಿ ಇಟ್ಟುಕೊಂಡು ಅದರ ನೆಪದಲ್ಲಿ ತಮ್ಮ ಉದರಪೋಷಣೆ ಮಾಡುವಂತಹ ದೊಡ್ಡವ್ಯವಸ್ಥೆಯನ್ನೇ ಬೆಳೆಸುತ್ತಿವೆ. ಸರ್ಕಾರ ಮತ್ತು ವ್ಯವಸ್ಥೆಯೂ ವೇಶ್ಯಾವಾಟಿಕೆಯಿಂದ ಹೊರಬರಲು ಬಯಸುತ್ತಿರುವ ಲೈಂಗಿಕ ದಮನಿತರಿಗೆ ಬದುಕಲು ಬೇಕಾದ ಪರ್ಯಾಯ ಪೂರಕ ವ್ಯವಸ್ಥೆ ರೂಪಿಸದೇ ವೇಶ್ಯಾವಾಟಿಕೆ ಜೀವಂತವಿರಲು ಬೇಕಾದ ವ್ಯವಸ್ಥೆಯನ್ನು ನಿರ್ಮಾಣ ಮಾಡುತ್ತಿರುವುದು ವಿಪರ್ಯಾಸ. ಏಡ್ಸ್ ನಿಯಂತ್ರಣಕ್ಕೆ ಹೆಣ್ಣುಮಕ್ಕಳನ್ನು ಕಾಂಡೋಮ್ ಡಿಸ್ಟ್ರಿಬ್ಯೂಷನ್ ಗಾಗಿ ಬಳಸಿಕೊಳ್ಳುವುದನ್ನು ನಿಲ್ಲಿಸಿ, ವೆಂಡಿಂಗ್ ಮಿಷಿನ್ ಗಳ ಮೂಲಕ ಕಾಂಡೋಮ್ ಅವಶ್ಯಕತೆ ಇರುವವರಿಗೆ ಉಚಿತವಾಗಿಯೇ ವಿತರಿಸಬಹುದು. ಕೆಲ NGOಗಳ ಪ್ರೇರಣೆಯಿಂದ ತಮ್ಮನ್ನು ಕಾರ್ಮಿಕರೆಂದು ಪರಿಗಣಿಸುವಂತೆ ಕೂಡ ಕೆಲ ಸಂಘಟನೆಯ ಲೈಂಗಿಕ ಕಾರ್ಯಕರ್ತೆಯರು ಬೇಡಿಕೆ ಇಡುತ್ತಿದ್ದಾರೆ. ಇದು ಅದರಲ್ಲೇ ಇರಬಯಸುವವರ ಸಮಸ್ಯೆಯ ಇನ್ನೊಂದೇ ಮುಖ. ಇದು ನನ್ನ ಕಾಳಜಿಯ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಈ ಪ್ರಯತ್ನಗಳ ಮೂಲಕ ವೇಶ್ಯಾವಾಟಿಕೆಯನ್ನು ವಿಸ್ತರಿಸಲಾಗುತ್ತಿದೆ. ಇಂದಿನ ವೇಶ್ಯಾವಾಟಿಕೆಯ ಸ್ವರೂಪ ಮೂಲದಿಂದ ಬೇರೆಯಾಗಿ ಎರಡು ಬಗೆಯದಾಗಿದೆ. ಅಲ್ಲೇ ಇರಬಯಸುವವರು ಮತ್ತು ಹೊರಬರಲು ಹಾತೊರೆಯುತ್ತಿರುವವರು… ಇದ್ದಾರೆ.

  • ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿಗಳಲ್ಲಿ ಬದಲಾವಣೆ ತರಲು ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳೇನು?

ಈಗ್ಗೆ 5-6 ವರ್ಷಗಳ ಹಿಂದೆ ಕರ್ನಾಟಕದಲ್ಲಿ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಬೇಕೆಂಬ ಕೂಗು ಎದ್ದಿತು. ಆದರೆ ತಳಹಂತದ ವೇಶ್ಯಾವಾಟಿಕೆಯಲ್ಲಿನ ದಮನಿತ ಹೆಣ್ಣುಮಕ್ಕಳ ಸಂಕಟವನ್ನು ಹತ್ತಿರದಿಂದ ಕಂಡಿದ್ದ ನನ್ನನ್ನೂ ಒಳಗೊಂಡಂತೆ ಹಲವು ಸಮಾನಮನಸ್ಕರು ಇದಾಗ ಕೂಡದೆಂದು ಸರ್ಕಾರದ ಮೇಲೆ ಒತ್ತಡ ತಂದೆವು. ಇದಾದರೆ, ವೇಶ್ಯಾವಾಟಿಕೆಯಿಂದ ಹೊರಬರಲು ಬಯಸಿದ್ದ ದಮನಿತರು, ಇಷ್ಟವಿಲ್ಲದಿದ್ದರೂ ಶಾಶ್ವತವಾಗಿ ಅದರಲ್ಲೇ ಉಳಿದುಬಿಡುತ್ತಾರೆ!  ಈ ಕುರಿತು ಪತ್ರಿಕೆಗಳಿಗೆ ನಿರಂತರವಾಗಿ ಲೇಖನ, ಸರ್ಕಾರಕ್ಕೆ ಪತ್ರಗಳನ್ನೂ ಬರೆಯಲಾಯ್ತು. ಆಗ ಸರ್ಕಾರ, ವಿಧಾನ ಪರಿಷತ್ ಸದಸ್ಯೆಯಾಗಿದ್ದ ಡಾ.ಜಯಮಾಲ ಅವರ ಅಧ್ಯಕ್ಷತೆಯಲ್ಲಿ ಇಡೀ ದೇಶದಲ್ಲೇ ಮಾದರಿಯಾಗುವಂತೆ ಮೊದಲ ಬಾರಿಗೆ “ಕರ್ನಾಟಕ ರಾಜ್ಯ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ಸಮಿತಿ”ಯನ್ನು ರಚಿಸಿ, ಸದಸ್ಯರನ್ನು ನೇಮಿಸಿತು. ದಶಕದಿಂದ ಹಾಸನದಲ್ಲಿ ಇವರ ಪುನರ್ವಸತಿಯಲ್ಲಿ ತೊಡಗಿದ್ದ ನಾನೂ ಇದರ ಸದಸ್ಯೆಯಾಗಿದ್ದೆ. ರಾಜ್ಯಾದ್ಯಂತ ಅಧ್ಯಯನ ನಡೆಸಿದ ಸಮಿತಿ 2017ರ ಫೆಬ್ರವರಿಯಲ್ಲಿ ವಿಸ್ತೃತ ವರದಿ ನೀಡಿತು. ಇವರೆಲ್ಲರೂ ದನಿತರಲ್ಲಿ ದಮನಿತರು, ಅಸಹಾಯಕರಲ್ಲಿ ಅಸಹಾಯಕರು ಎನ್ನೋದನ್ನ ಪ್ರತಿ ಪುಟವೂ ವಿವರಿಸಿತ್ತು. ತಳ ಹಾಗೂ ಹಿಂದುಳಿದ ಜಾತಿ, ವರ್ಗಗಳಿಗೆ ಸೇರಿದವರೆ ಇದರಲ್ಲಿ ಹೆಚ್ಚಾಗಿದ್ದರು. ನೋಂದಾವಣೆಯಾದ ಒಂದು ಲಕ್ಷ ದಮನಿತರಲ್ಲಿ 72% ‘ಇದರಿಂದ ಹೊರ ಬರುತ್ತೇವೆ, ಪುನರ್ವಸತಿ ನೀಡಿ’ ಅಂತ ಬೇಡಿಕೊಂಡಿದ್ದರು. ಮಹಿಳಾ ಅಭಿವೃದ್ಧಿ ನಿಗಮದಡಿ ‘ಚೇತನ’ ಎಂಬ ಯೋಜನೆ  2012- 13ರಲ್ಲಿಯೇ ಲೈಂಗಿಕ ದಮನಿತರನ್ನು ಪುನರ್ವಸತಿಗೊಳಿಸಲು ಜಾರಿಯಾಗಿದೆ. ಪ್ರತಿವರ್ಷ ರಾಜ್ಯಾದ್ಯಂತದ ಸಾವಿರ ಜನರಿಗೆ 25000 ರೂಪಾಯಿಗಳ ಅನುದಾನವನ್ನು ನೀಡಲಾಗುತ್ತಿತ್ತು. ನಾವು ವರದಿ ನೀಡಿದ ನಂತರ ಈಗ ಸಹಾಯಧನವನ್ನು 50000ಕ್ಕೇರಿಸಿ, ವಾರ್ಷಿಕ ಕೇವಲ 395 ಜನ ಫಲಾನುಭವಿಗಳಿಗೆ ನೀಡಲಾಗುತ್ತಿದೆ! ಪುನರ್ವಸತಿ ಬಯಸುವವರು ಸಾವಿರಾರು ಸಂಖ್ಯೆಯಲ್ಲಿದ್ದು, ಎಲ್ಲ ಲೈಂಗಿಕ ದಮನಿತರನ್ನು ಇದು ತಲುಪುವುದು ಯಾವಾಗ? ಸಹಾಯಧನ ನೀಡಿದವರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ಆದರೆ ಈ ಹೆಣ್ಣುಮಕ್ಕಳು ತಮ್ಮ ಉತ್ಪನ್ನಗಳನ್ನ ಮಾರ್ಕೆಟಿಂಗ್ ಮಾಡುವಲ್ಲಿ ಸೋಲುತ್ತಾರೆ. ಅವರಿಗೆ ಮಾರ್ಕೆಟಿಂಗ್ ಟೆಕ್ನಿಕ್ ಕಲಿಸುವುದು ಕಷ್ಟ ಹೀಗಾಗಿ ಮಾರ್ಕೆಟಿಂಗ್ ವ್ಯವಸ್ಥೆ ಸರ್ಕಾರವೇ ಮಾಡಬೇಕು. ಉಮಾಶ್ರೀಯವರು ಸಚಿವೆಯಾಗಿದ್ದಾಗ ಹೋಬಳಿ ಮಟ್ಟದಲ್ಲಿ ಲೈಂಗಿಕ ದಮನಿತರಿಗೆ ಅಥವಾ ಯಾವುದೇ ಆರ್ಥಿಕ ಸಂಕಷ್ಟ ಉಳ್ಳ ಮಹಿಳೆಯರಿಗಾಗಿ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡಲು ಗುಡಿ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಿ ಎಂದು, ರೂಪುರೇಷೆಯುಳ್ಳ ವಿವರವಾದ ಮನವಿ ಸಲ್ಲಿಸಿದ್ದೆ. ಅದು ಈಡೇರಲಿಲ್ಲ. ಸರ್ಕಾರ ಈ ವಿಷಯದಲ್ಲಿ ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧವಿಲ್ಲ. ಈ ಸಮಿತಿಯ ವರದಿಯನ್ನು ಅನುಷ್ಠಾನಗೊಳಿಸುವ ಪ್ರಾಮಾಣಿಕ ಪ್ರಯತ್ನವನ್ನು ಅಂದಿನ ಹಿಂದಿನ ಇಂದಿನ ಮೂರೂ ಸರ್ಕಾರವೂ ಮಾಡಲಿಲ್ಲ! ಸಮಿತಿ ಅಧ್ಯಕ್ಷರಾದ ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಜಯಮಾಲ ಅವರನ್ನು ಒಳಗೊಡು ಪ್ರಭಾವಿಗಳೇ ಈ ಸಮಿತಿಯಲ್ಲಿದ್ದರು. ಆದರೆ ಇವರ್ಯಾರು ಸರ್ಕಾರಕ್ಕೆ ಸಲ್ಲಿಸಲಾಗಿರುವ ವರದಿಯನ್ನು ಅನುಷ್ಠಾನಕ್ಕೆ ತರಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನವನ್ನು ಮಾಡುತ್ತಿಲ್ಲ. ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದ  ಉಮಾಶ್ರೀ, ಆರೋಗ್ಯ ಸಚಿವರಾಗಿದ್ದ ಶ್ರೀರಾಮುಲು  ಎಲ್ಲರಿಗೂ ಮತ್ತೆ ಮತ್ತೆ ದಮನಿತರ ಪುನರ್ವಸತಿಗಾಗಿ ಮನವಿ ಮಾಡಿಕೊಂಡಿದ್ದೇನೆ.  ಆದರೆ ಎಲ್ಲವೂ ವ್ಯರ್ಥವಾಗಿದೆ. ದಮನಿತರ ಸ್ಥಿತಿ ನೆನೆದು ತುಂಬಾ ನೋವಾಗುತ್ತದೆ.

  • ಪುನರ್ವಸತಿ ಪಡೆದಿರುವ ಹೆಣ್ಣುಮಕ್ಕಳ ಸ್ಥಿತಿಗತಿಗಳಲ್ಲಿ ಬದಲಾವಣೆಯಾಗಿದೆಯೆ?

ಕೆಲವರು ಸಹಾಯಧನವನ್ನು ಸರಿಯಾಗಿ ಬಳಕೆ ಮಾಡಿಕೊಂಡು  ಸ್ವಉದ್ಯೋಗ ಕೈಗೊಂಡಿದ್ದು ಯಶಸ್ಸು ಕಂಡಿದ್ದಾರೆ. ಇನ್ನು ಹಲವರು ಸೋತಿದ್ದಾರೆ. ಟೈಲರಿಂಗ್, ಬ್ಯೂಟಿಷಿಯನ್ ಹೀಗೆ ಅನೇಕ ಸ್ವ-ಉದ್ಯೋಗ ಕೈಗೊಂಡಿದ್ದಾರೆ. ಆದರೆ ಪ್ರಮುಖ ಸಮಸ್ಯೆಯೆಂದರೆ ಇವರಿಗೆ ಕೌಶಲ್ಯಗಳು ಗೊತ್ತಿರುವುದಿಲ್ಲ. ನಾಲ್ಕು ದಿನದ, ವಾರದ ತರಬೇತಿಗಳಿಂದ ಯಾವುದೇ ಪ್ರಯೋಜನವಿಲ್ಲ. ಪೂರ್ಣ ಸಪೋರ್ಟಿಂಗ್ ಸಿಸ್ಟಮ್ ಬೇಕಾಗುತ್ತದೆ. ನಿಯಮಿತ ಮಾರ್ಕೆಟಿಂಗ್ ಗೆ ಬೇಕಾದ ವ್ಯವಸ್ಥೆ ಇಲ್ಲದೇ ಈ ಹಂತದಲ್ಲಿ ವಿಫಲವಾಗುತ್ತಾರೆ. ಕಳೆದ ಹತ್ತು ವರ್ಷಗಳಲ್ಲಿ ನನ್ನ ಮಿತಿಯಲ್ಲಿ ಮಾಡಿರುವ ಪ್ರಯತ್ನಗಳಿಂದಾಗಿ 34 ಅಪ್ರಾಪ್ತ ಬಾಲಕಿಯರು ಸೇರಿ 150ಕ್ಕೂ ಹೆಚ್ಚು ಮಹಿಳೆಯರು ವೇಶ್ಯಾವಾಟಿಕೆಯಿಂದ ಹೊರಬಂದು, ಒಳ್ಳೆಯ ಜೀವನ ನಡೆಸುತ್ತಿದ್ದಾರೆ. ಸಂಗೀತ, ನೃತ್ಯ, ಕಲೆ ಮುಂತಾದ ಕ್ಷೇತ್ರಗಳಲ್ಲಿ ಕೂಡ ಕೆಲವರು ಸಾಧನೆ ಮಾಡುತ್ತಿದ್ದಾರೆ. ಸರ್ಕಾರವಾಗಲಿ, ಸಂಘಸಂಸ್ಥೆಗಳಾಗಲಿ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಯ ಜಾಲದಿಂದ ಹೊರತರಲು ಬೆಂಬಲ ನೀಡಿ, ಬದ್ಧತೆಯಿಂದ ಕೆಲಸ ಮಾಡಿದರೆ ಈ ಹೆಣ್ಣುಮಕ್ಕಳು ಸಹ ಸಮಾಜದ ಪ್ರಮುಖವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಆದರೆ ಪ್ರಸ್ತುತ ಸರ್ಕಾರವಾಗಲಿ, ಹೆಚ್ಚಿನ ಸಂಘ-ಸಂಸ್ಥೆಗಳಾಗಲೀ ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿಲ್ಲ. ಯಾಲೆ ಯುನಿವರ್ಸಿಟಿ ಸಂಶೋಧಕರು ವೇಶ್ಯಾವಾಟಿಕೆಯು 70% ಕೋವಿಡ್ ಪ್ರಸರಣಕ್ಕೆ ಕಾರಣವಾಗುತ್ತದೆ ಎಂದು ಕಳೆದ ವರ್ಷ ಭಾರತ ಸರ್ಕಾರಕ್ಕೆ ವರದಿ ಮಾಡಿದ್ದರು. ಈ ವರದಿ ಬರುವ ಮುಂಚೆಯೇ ಆರೋಗ್ಯ ಸಚಿವರಾಗಿದ್ದ ಶ್ರೀರಾಮುಲು ಅವರಿಗೆ ವಿವರಿಸಿ ಕೊರೋನಾ ಕಾರಣಕ್ಕೆ ವೇಶ್ಯಾವಾಟಿಕೆಯನ್ನು ನಿಯಂತ್ರಿಸಿ, ಹೆಣ್ಣುಮಕ್ಕಳಿಗೆ ಸೂಕ್ತ ಆರ್ಥಿಕ ಸೌಲಭ್ಯ, ಶಾಶ್ವತ ಪುನರ್ವಸತಿ ನೀಡುವಂತೆ ಪ್ರಯತ್ನ ನಡೆಸಿದ್ದೆ. ಶ್ರೀರಾಮುಲು ಅವರು ಇದಕ್ಕೆ ಸಂಬಂಧಿಸಿ ಪ್ರಸ್ತಾವನೆ ಸಲ್ಲಿಸುವಂತೆ ಇಲಾಖೆಗಳಿಗೆ ಆದೇಶ ಕೂಡ ಮಾಡಿದರು. ಆದರೆ ಇವತ್ತಿನವರೆಗೆ ಆರೋಗ್ಯ ಇಲಾಖೆ, ಕರ್ನಾಟಕ ಏಡ್ಸ್ ನಿಯಂತ್ರಣ ಮಂಡಳಿ, ಪೊಲೀಸ್ ಇಲಾಖೆ  ಯಾವ ಕ್ರಮವನ್ನು ತೆಗೆದುಕೊಂಡಿಲ್ಲ!

  • ನಿಮಗೆ ರಾಜಕೀಯ ಸೇರುವ ಬಯಕೆ ಇದೆಯೇ?

ಖಂಡಿತಾ ಇಲ್ಲ. ಸಾಮಾಜಿಕವಾಗಿ ವೈಯುಕ್ತಿಕ ನೆಲೆಯಲ್ಲಿ ಕೆಲಸ ಮಾಡುವ ಇಷ್ಟವಿದೆಯಷ್ಟೇ. ರಾಜಕೀಯಕ್ಕೆ, ಈಗಿರುವ ಯಾವುದೇ ಪ್ರಮುಖ ಪಕ್ಷಕ್ಕೆ ಸೇರುವ ಮನಸಿಲ್ಲ. ಪಕ್ಷದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬೆರಳೆಣಿಕೆಯಷ್ಟು ಮಹಿಳೆಯರು, ಹೆಣ್ಣುಮಕ್ಕಳ ಪರವಾಗಿ ಬದಲಾವಣೆ ತರಲು ಸಾಧ್ಯವಾಗಿದೆಯೆ? ಯಾಕೆ ಸಾಧ್ಯವಾಗಿಲ್ಲ? ಗಮನಿಸಿ. ಪುರುಷಪ್ರಧಾನ ವ್ಯವಸ್ಥೆಯೊಳಗೆ ಹೆಣ್ಣುಮಕ್ಕಳು ತಮ್ಮ ಆಶಯಗಳನ್ನು ಗಾಳಿಗೆ ತೂರಿ ಹೊಂದಿಕೊಂಡು ಬಿಡಬೇಕಾಗುತ್ತದೆ ಎಂದೆನಿಸುತ್ತದೆ. ರಾಜಕೀಯ ಎಂಬುದು ಇವತ್ತು ಹಣ, ಜಾತಿ, ಕೌಟುಂಬಿಕ ಬೆಂಬಲ, ವಶೀಲಿಬಾಜಿ, ಪ್ರಭಾವಗಳ ವಲಯ. ಇದ್ಯಾವುದೂ ನನಗೆ ಇಲ್ಲ. ನನಗದು ಬೇಕೂ ಇಲ್ಲ. ಪರ್ಯಾಯ ರಾಜಕಾರಣದ ಪ್ರಯೋಗ, ಹೋರಾಟದ ಬಗ್ಗೆ ಆಸಕ್ತಿ ಇತ್ತು. ಹೀಗಾಗಿಯೇ ‘ಜನಾಂದೋಲನಗಳ ಮಹಾಮೈತ್ರಿ’ಯು ಹುಟ್ಟಿನ ಮತ್ತು ಬೆಳವಣಿಗೆಯ ಸಂದರ್ಭದಲ್ಲಿ ನಾನೂ ಇದ್ದೆ. ಎಸ್.ಆರ್.ಹಿರೇಮಠ, ದೇವನೂರ ಮಹಾದೇವ, ಪುಟ್ಟಣ್ಣಯ್ಯ ಮುಂತಾದವರೊಂದಿಗೆ ನಾನೂ ಪರ್ಯಾಯ ರಾಜಕೀಯ ಸಾಧ್ಯತೆಯ ಪ್ರಯತ್ನದಲ್ಲಿ ಪಾಲ್ಗೊಂಡಿದ್ದೆ. ಪರ್ಯಾಯ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಗೆ ಬೇಕಾದ ಬೆಂಬಲವನ್ನು ನನ್ನ ಮಿತಿಯಲ್ಲಿ ಮೊದಲಿನಿಂದ ನೀಡುತ್ತಾ ಬಂದಿದ್ದೇನೆ. ಯಾವುದೇ ರಾಜಕೀಯ ಚಟುವಟಿಕೆ, ಚಿಂತನೆ, ವ್ಯವಸ್ಥೆಯಲ್ಲಿ ಹೆಣ್ಣುಮಕ್ಕಳ ಒಳನೋಟವನ್ನೂ ‘ಡಿಸಿಷನ್ ಮೇಕಿಂಗ್’ ಪ್ರಕ್ರಿಯೆಯಲ್ಲಿ ಒಳಗುಮಾಡಿಕೊಳ್ಳಬೇಕೆಂಬ ಅರಿವು, ಪಕ್ವತೆ ಇನ್ನೂ ಕೊಂಚವೂ ಬಂದಿಲ್ಲ. ಪ್ರಗತಿಪರರೆಂದು ಕರೆಸಿಕೊಳ್ಳುವವರಲ್ಲೇ ಈ ಸೂಕ್ಷ್ಮತೆ ಕಡಿಮೆ ಇದೆ. ಅದರಿಂದಲೇ ‘ಜನಾಂದೋಲನಗಳ ಮಹಾಮೈತ್ರಿ’ಯಿಂದಲೂ ಹೊರಗೆ ಬಂದೆ. ರಾಜಕೀಯ ಚಟುವಟಿಕೆಯ ಒಳಗೆ ಹೆಣ್ಣುಮಕ್ಕಳು ಬರುವುದು ಕಡಿಮೆ ಎಂಬ ಆರೋಪ ಇದೆ. ಆದರೆ ಹಾಗೆ ವ್ಯವಸ್ಥೆಯ ಬದಲಾವಣೆಯ ಆಸ್ಥೆಯಿಂದ ಹೋದಾಗಲೂ ಹೆಣ್ಣುಮಕ್ಕಳನ್ನು ಪ್ರಮುಖ ನಿರ್ಧಾರ ಕೈಗೊಳ್ಳುವ ಹಂತದಲ್ಲಿ ಒಳಗೊಳ್ಳುವ ಮನಸ್ಥಿತಿಯೇ ಬಂದಿಲ್ಲದಿರುವುದು ವಿಪರ್ಯಾಸ.

  • ಕಲ್ಯಾಣಿ ಕೆರೆಗಳ ಪುನಶ್ಚೇತನದ ಬಗ್ಗೆ ಸಾಮುದಾಯಿಕವಾಗಿ ಕೆಲಸ ಮಾಡಿದ್ದೀರಿ. ಇದು ನಿಮಗೆ ಯಾಕೆ ಮುಖ್ಯ ಅನಿಸುತ್ತದೆ?

ನನಗೆ ಪರಿಸರದ ಬಗ್ಗೆ ಯಾವಾಗಲೂ ಆಸಕ್ತಿ. ಪ್ರಕೃತಿಯ ದೌರ್ಜನ್ಯದ ವಿರುದ್ಧ ಹೋರಾಟಗಳಲ್ಲಿಯೂ ಇನ್ವಾಲ್ ಆಗಿದ್ದೆ. ಲೇಖನಗಳನ್ನು ಬರೆಯುತ್ತಾ ಬಂದಿದ್ದೆ. ನಾನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯಳಾಗಿದ್ದಾಗ ಪರಿಸರ ಜ್ಞಾನಸಂವಹನ ಕಮ್ಮಟವನ್ನು ನಾಗೇಶ್ ಹೆಗಡೆಯವರ ನೇತೃತ್ವದಲ್ಲಿ ಏರ್ಪಡಿಸಿದ್ದೆ. ಜಾಗತೀಕರಣದ ಸಂದರ್ಭದಲ್ಲಿ ಪ್ರಕೃತಿಯು ಒಂದು commodityಯಾಗಿ ಮಾರ್ಪಟ್ಟು ಪ್ರಕೃತಿಯ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ. ನೈಸರ್ಗಿಕ ಸಂಪನ್ಮೂಲಗಳು ನಾಶವಾಗುತ್ತಾ ಹೋಗುತ್ತಿವೆ. ಅನೈಸರ್ಗಿಕ ಯೋಜನೆಗಳಿಂದಾಗಿ ಜಲಮೂಲ, ಕಾಡು ನಾಶವಾಗುತ್ತಿದೆ. ಪರಿಸರದಲ್ಲಿ ವ್ಯತಿರಿಕ್ತ ಸಮಸ್ಯೆಗಳು ಕಾಣುತ್ತಿವೆ. ಹಾಸನ ಜಿಲ್ಲೆಯಲ್ಲಿ ಬರದ ಕಾರಣದಿಂದ 5-6 ವರುಷದಿಂದ ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕಾಗಿ ಕಳವಳಿಸಿದ ನಮ್ಮಲ್ಲಿ ಹಲವು ಪರಿಸರ ಪರವಾಗಿ ಯೋಚಿಸುವ, ಕೆಲಸ ಮಾಡುವವರು ಒಟ್ಟಾಗಿ ಸೇರಿ ಮೇ 2017ರಲ್ಲಿ ‘ಹಸಿರುಭೂಮಿ ಪ್ರತಿಷ್ಠಾನ’ ರೂಪಿಸಿಕೊಂಡೆವು. ಮಳೆನೀರಿನ ಸಂಗ್ರಹದ ಬಗ್ಗೆ ತಿಳಿವಿನ ಕೊರತೆಯಿಂದ ಸಂಕಷ್ಟ ಎದುರಾಗಿದೆ ಎಂದು ಅರಿವಾಯ್ತು. ಹಾಸನ ಅರೆಮಲೆನಾಡು ಪ್ರದೇಶವೆಂದು ಹೆಸರುವಾಸಿಯಾಗಿದ್ದರೂ ಆ ದಿನಗಳಲ್ಲಿ ಶಾಶ್ವತ ಬರಪೀಡಿತ ಜಿಲ್ಲೆ ಎಂದು ಕೇಂದ್ರದ ಬರ ಅಧ್ಯಯನ ತಂಡ ವರದಿ ನೀಡಿತ್ತು. ಇದಕ್ಕೆ ಕಾರಣ, ಮಳೆನೀರನ್ನು ಸರಿಯಾಗಿ ಸಂರಕ್ಷಣೆ ಮಾಡದಿರುವುದೇ ಎಂಬ ಅರಿವಾಗಿ, ತಜ್ಞರೊಂದಿಗೆ ಸಮಾಲೋಚಿಸಿದಾಗ ‘ಕೆರೆಗಳಲ್ಲಿ ಹೂಳು ತುಂಬಿರುವುದರಿಂದ ಅಂತರ್ಜಲದ ಕೊರತೆಯಾಗುತ್ತಿದೆ, ಜಲದ ಕಣ್ಣನ್ನು ತೆರೆದು, ನೀರು ಸಂಗ್ರಹಕ್ಕೆ ಅನುವು ಮಾಡಿದರೆ ಅಂತರ್ಜಲ ವೃದ್ಧಿಯಾಗುತ್ತದೆ’ ಎಂದು ತಿಳಿಯಿತು. ಆನಂತರ ನಾವು ನೂರಾರು ಜನರು ಸಂಘಟಿತರಾಗಿ, ದಾನಿಗಳ ನೆರವೂ ಪಡೆದು, ಸಾಮುದಾಯಿಕವಾಗಿ ಮಳೆನೀರು ಸಂಗ್ರಹಕ್ಕಾಗಿ ಕಲ್ಯಾಣಿ ಕೆರೆಗಳ ಹೂಳು ತೆಗೆದು, ನೀರು ಸಂಗ್ರಹಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಇಂದಿನವರೆಗೆ 70ಕ್ಕೂ ಹೆಚ್ಚು ಕಲ್ಯಾಣಿಗಳನ್ನು 12 ಕೆರೆಗಳನ್ನು ಪುನಶ್ಚೇತನ ಮಾಡಿದ್ದೇವೆ. ಇದರೊಂದಿಗೆ ಮಳೆನೀರುಕೊಯ್ಲು ಜಾಥಾ ಮಾಡಿ ಜಾಗೃತಿ ಮೂಡಿಸಿದ್ದೇವೆ. ‘ಗಿಡ ನೆಡೋಣ, ಹಸಿರು ಉಳಿಸೋಣ’ ಎಂಬ ಆಂದೋಲನ ನಾಲ್ಕು ವರ್ಷಗಳಿಂದ ಮಾಡುತ್ತಾ ಬಂದಿದ್ದೇವೆ. ಹಸಿರುಭೂಮಿ ಪ್ರತಿಷ್ಠಾನದಿಂದ 25 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದೇವೆ. ಹಲವು ಕಡೆಗಳಲ್ಲಿ ಪ್ರತಿಷ್ಠಾನದಿಂದಲೇ ಗಿಡಗಳನ್ನು ಸಂರಕ್ಷಿಸಲಾಗುತ್ತಿದೆ. ಗ್ರಾಮಗಳಲ್ಲಿ ಬಯಲುಶೌಚದ ವಿರುದ್ಧದ ಜಾಗೃತಿ, ಸ್ವಯಂ ಉದ್ಯೋಗ ತರಬೇತಿಯನ್ನೂ ನೀಡಿದ್ದೇವೆ. ಇವೆಲ್ಲದರಿಂದ ಕಲ್ಯಾಣಿ ಕೆರೆಗಳ ಪುನಶ್ಚೇತನದೊಂದಿಗೆ, ಅಂತರ್ಜಲ ಹೆಚ್ಚುತ್ತಿದೆ. ಪ್ರಕೃತಿ ನವೀಕರಣಗೊಳ್ಳಲು ಕೊಂಚವಾದರೂ ಸಾಧ್ಯವಾಗುತ್ತಿದೆ.

  • ಮಹಿಳೆ ನೀರು ಸಮಾಜ ಏನಿದರ ಪರಿಕಲ್ಪನೆ?

ಇವೆಲ್ಲವೂ ಒಂದಕ್ಕೊಂದು ಪೂರಕ. ಭಾರತದ ಕೌಟುಂಬಿಕ ವ್ಯವಸ್ಥೆಯಲ್ಲಿ ಹೆಚ್ಚಿನ ಹೊರೆಯನ್ನು ಹೊರುತ್ತಿರುವುದು ನಮ್ಮ ಹೆಣ್ಣುಮಕ್ಕಳು. ಅದರಲ್ಲಿಯೂ ಹಳ್ಳಿಗಳಲ್ಲಿ ನೀರನ್ನು ಹೊಂದಿಸುವಲ್ಲಿ ಹೆಣ್ಣುಮಕ್ಕಳ ಪಾತ್ರ ದೊಡ್ಡದು. ಸ್ವಾತಂತ್ರ್ಯ ಪಡೆದು 73 ವರ್ಷಗಳೇ ಕಳೆದರೂ ಇಂದಿಗೂ ನಮ್ಮ ಬಹಳಷ್ಟು ಹಳ್ಳಿಗಳಿಗೆ ಕನಿಷ್ಠ ಮೂಲಭೂತ ಅವಶ್ಯಕತೆಯಾದ ಕುಡಿಯುವ ನೀರನ್ನು ಕೂಡ ಸರಿಯಾಗಿ ಪೂರೈಕೆ ಮಾಡಲಾಗುತ್ತಿಲ್ಲ! ರಾಜಸ್ಥಾನ ಗುಜರಾತ್ ಹರಿಯಾಣ ರಾಜ್ಯಗಳ ಹಳ್ಳಿಗಳಲ್ಲಿ ನೀರಿಗಾಗಿ ಭೀಕರ ಪರಿಸ್ಥಿತಿ ಇದೆ. ’water wives’ ಎಂಬ ಸಾಕ್ಷ್ಯಚಿತ್ರದಲ್ಲಿ, ನೀರಿಗಾಗಿ ಹೊಸ ಹೆಣ್ಣುಮಕ್ಕಳನ್ನು ಮದುವೆಯಾಗುತ್ತಾ ಹೋಗುವ ಪರಿಸ್ಥಿತಿಯ ದಾರುಣ ವಾಸ್ತವ ಚಿತ್ರವಿದೆ. WHO ತಜ್ಞನೊಬ್ಬ ಭಾರತದಲ್ಲಿ ನೀರಿನ ಬವಣೆ ಹೇಗಿದೆ ಎಂಬುದರ ಬಗ್ಗೆ ‘ಭಾರತದ ಹೆಣ್ಣುಮಗಳೊಬ್ಬಳು ಕ್ರಿಸ್ತಪೂರ್ವದಲ್ಲಿ ಒಂದು ಕೊಡ ನೀರು ತರಲು ಹೋದವಳು ಇಂದಿನವರೆಗೂ ಹಿಂದಿರುಗಿಲ್ಲ’ ಎಂದು ಹೇಳುತ್ತಾನೆ. ಭಾರತದ ಮಹಿಳೆ ಅಷ್ಟು ಗಂಟೆಗಳು ನೀರಿಗಾಗಿ ವ್ಯರ್ಥ ಮಾಡುತ್ತಾಳೆ! ನೀರಿನ ಲಭ್ಯತೆಯ ಪ್ರಮಾಣದಲ್ಲಿ ಕೂಡ ಉಳಿದೆಲ್ಲ ದೇಶಗಳಿಗಿಂತ ಭಾರತವು ಹಿಂದುಳಿದಿದೆ. ಇಂದು ಸಾರಾಯಿಯನ್ನು ಎಲ್ಲಾ ಗಲ್ಲಿ, ಹಳ್ಳಿಗಳಲ್ಲಿಯೂ ದೊರಕುವಂತಹ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ. ಆದರೆ ಕುಡಿಯುವ ನೀರನ್ನು ತರಲು ಹತ್ತಾರು ಮೈಲಿ, ಹೆಣ್ಣುಮಕ್ಕಳು ನಡೆಯಬೇಕಾದ ಪರಿಸ್ಥಿತಿ ಇದೆ. ಅಂದರೆ ಸರ್ಕಾರದ ಆದ್ಯತೆ, ಅಭಿವೃದ್ಧಿಯ ಮಾನದಂಡ ಯಾವುದು? ಸರ್ಕಾರಕ್ಕೆ ಹೆಣ್ಣುಮಕ್ಕಳ ಅವಶ್ಯಕತೆ ಮತ್ತು ಅಭಿವೃದ್ಧಿ ಆದ್ಯತೆಯ ವಿಷಯವಾಗಿಲ್ಲ. ಗಂಡಾಳ್ವಿಕೆಯಲ್ಲಿ ಮದ್ಯ ಮಾರಾಟದ ಹಣ ಮಾತ್ರ ಸರ್ಕಾರಕ್ಕೆ ಮುಖ್ಯವಾಗಿದೆ. ಭಾರತೀಯ ಹಳ್ಳಿಗಾಡಿನ ಹೆಣ್ಣುಮಕ್ಕಳು ತಮ್ಮ ಅಮೂಲ್ಯ 8-10 ಗಂಟೆಗಳನ್ನು ದೂರದಿಂದ ನೀರು ತರಲು ಕಳೆಯುತ್ತಾರೆ. ಇದರಿಂದ ಹೆಣ್ಣುಮಕ್ಕಳು ಶಿಕ್ಷಣ, ಬಾಲ್ಯ, ಆರ್ಥಿಕ ಸ್ವಾವಲಂಬನೆ ಪಡೆಯಲಾಗುತ್ತಿಲ್ಲ. ಸರ್ಕಾರ ಮತ್ತು ಸಮಾಜ ಇಂಥಹ ನಿಕೃಷ್ಟ ಸ್ಥಿತಿಗೆ ಹೆಣ್ಣನ್ನು ತಳ್ಳಿ, ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ, ಅಸ್ಮಿತೆಯನ್ನು, ಕಂಡುಕೊಳ್ಳುವ ಅವಕಾಶಗಳಿಂದ, ಸಮಾನತೆಯ ಅವಕಾಶದಿಂದ ಅವಳನ್ನು ವಂಚಿತಳನ್ನಾಗಿ ಮಾಡುತ್ತಿದೆ.

  • ‘ಗೋಮಾಂಸ ಬಳಕೆ’ ಇದಕ್ಕೆ ಸಂಬಂಧಿಸಿದಂತೆ ನಿಮ್ಮ ಧೋರಣೆ ಏನು?

ನಾನು ಸಸ್ಯಾಹಾರಿ. ಆದರೆ ಮಾಂಸಾಹಾರಿಗಳ ಆಹಾರದ ಹಕ್ಕನ್ನು ಗೌರವಿಸುತ್ತೇನೆ. ಆಹಾರದ ಕಾರಣಕ್ಕೇ ಯಾರನ್ನೂ ಕೀಳಾಗಿ ಕಾಣುವುದನ್ನು ವಿರೋಧಿಸುತ್ತೇನೆ. ‘ಊಟ ತನ್ನಿಚ್ಚೆ ನೋಟ ಪರರಿಚ್ಚೆ’ ಎಂಬುದು ಪಶುವೈದ್ಯಾಧಿಕಾರಿಯಾಗಿದ್ದ ನನ್ನ ಅಪ್ಪ ಹೇಳುವ ಗಾದೆಯ ಮಾತು. ವಾಸ್ತವದಲ್ಲಿ ಅವರವರ ಆರೋಗ್ಯ, ರೂಢಿ, ಅಭಿರುಚಿಗಳ ಆಧಾರದ ಮೇಲೆ ಆಹಾರದ ಆಯ್ಕೆ ನಿರ್ಧಾರವಾಗುವಂತದ್ದು. ಜಾತಿ, ಧರ್ಮ ಜನಾಂಗಗಳ ಆಧಾರವಾಗಿಯಲ್ಲ. ಬಲವಂತವಾಗಿ ಯಾರಿಗೂ ಯಾವುದನ್ನೂ ಹೇರುವುದು ತಪ್ಪು. ಅಂದರೆ ಆಹಾರ ವ್ಯಕ್ತಿಯ ವೈಯಕ್ತಿಕ ಹಕ್ಕು ಮತ್ತು ಆಯ್ಕೆಗೆ ಸಂಬಂಧಿಸಿದ್ದು. ಮಾಂಸಾಹಾರ ಜೀವನದ ಒಂದು ಭಾಗವಾಗಿ ಈ ಮೊದಲಿನಿಂದಲೂ ರೂಢಿಯಲ್ಲಿ ಇದೆ. ಅದಕ್ಕೆ ಸಂವಿಧಾನಾತ್ಮಕವಾಗಿಯೂ ಮಾನ್ಯತೆ ಇದೆ. ಹೀಗಾಗಿ ಯಾವುದೇ ರೀತಿಯ ಮಾಂಸಹಾರ ಸೇವಿಸುವುದನ್ನು ಅವರವರ ಇಷ್ಟಾನಿಷ್ಟಗಳಿಗೆ ಬಿಡಬೇಕು.

  • ಮೂಲತಃ ಜೈನ ಧರ್ಮಿಯರಾದ ನೀವು, ಮಾಂಸಾಹಾರವನ್ನು ವಿರೋಧಿಸದ ನಿಮ್ಮ ನಿಲುವು, ಕೇವಲ ಜನಪ್ರಿಯತೆಗಾಗಿ ನೀಡಿದ ಹೇಳಿಕೆ ಎಂಬ ಆರೋಪವಿದೆ.

ನನಗೆ ನನ್ನ ಇಂಟಿಗ್ರಿಟಿ ಮತ್ತು ಪ್ರಾಮಾಣಿಕತೆಯನ್ನು ಎಲ್ಲಿಯೂ ಸಾಬೀತುಪಡಿಸುವ ಅವಶ್ಯಕತೆ ಇಲ್ಲ. ವಿವಾದಗಳ ಮೂಲಕ ಜನಪ್ರಿಯತೆ ಗಳಿಸುವ ಕೀಳು ಅಭಿರುಚಿಯೂ ನನಗಿಲ್ಲ. ಆದರೆ ನಾನು ಹುಟ್ಟಿದ ಧರ್ಮಕ್ಕೆ ನನ್ನನ್ನು ಕಟ್ಟಿಹಾಕಿ, ಈ ದೇಶ ನಂಬಿರುವ ಸಂವಿಧಾನಾತ್ಮಕ ಮೌಲ್ಯಗಳನ್ನು ಅಪಮಾನಿಸುವುದು, ಯಾರದೋ ನಂಬಿಕೆಯನ್ನೂ ಹೇರುವುದು ಯಾವ ರೀತಿ ಸರಿ? ಇಲ್ಲಿ ಎಲ್ಲರಿಗೂ ಅವರಿಚ್ಛೆಯ ಆಹಾರ ಸೇವಿಸುವ ಹಕ್ಕಿದೆ. ಅದನ್ನು ನಾನು ಗೌರವಿಸುತ್ತೇನೆ. ನಾವೊಂದು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ ಮತ್ತು ಪ್ರತಿಯೊಬ್ಬರ ವೈಯಕ್ತಿಕತೆಯನ್ನು ಗೌರವಿಸುವುದೂ ಎಲ್ಲರ ಕರ್ತವ್ಯ. ಭಾರತೀಯ ಸಮಾಜದಲ್ಲಿ ಸಂಕೀರ್ಣವಾದ ಬಹು ಜಾತಿ, ಧರ್ಮ, ಜನಾಂಗಗಳಿವೆ. ಎಲ್ಲರೂ ಒಗ್ಗೂಡಿ ಸಮಾನತೆ, ಸಹೋದರತೆಯಿಂದ ಶಾಂತಿಯಿಂದ ಸಹಬಾಳ್ವೆ ಮಾಡಬೇಕಾದರೆ ಪರಸ್ಪರರ ಇಷ್ಟಾನಿಷ್ಟಗಳನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕೆಂದು ನಂಬಿದ್ದೇನೆ. ನಾನು ಎಂದಿಗೂ ಯಾವುದೇ ಧರ್ಮದ ಅಂಧ ಅನುಯಾಯಿ ಅಲ್ಲ. ಧಾರ್ಮಿಕತೆಯಿಂದ ಗುರುತಿಸಿಕೊಳ್ಳುವ ಪ್ರಯತ್ನವನ್ನೂ ಮಾಡಿಲ್ಲ. ಸಕಲ ಜೀವಪರವಾದ ಮಾನವೀಯತೆಯ ಸಾಕಾರವಾದ ಸಂವಿಧಾನವೇ ನನ್ನ ಧರ್ಮ ಎಂದು ನಂಬಿದ್ದೇನೆ. ಹುಸಿ ಪ್ರಗತಿಪರತೆಯಲ್ಲೂ ನನಗೆ ನಂಬಿಕೆ ಇಲ್ಲ. ಪ್ರಗತಿಪರತೆ ಎಂಬುದು ಜೀವನದುದ್ದಕ್ಕೂ ನಮ್ಮನ್ನು ನಾವು ನಿಕಷಕ್ಕೆ ಒಡ್ಡಿಕೊಂಡು ಹಂತಹಂತವಾಗಿ ರೂಪಿಸಿಕೊಳ್ಳುವ ಮನೋಧರ್ಮವೇ ಹೊರತು ಜನ್ಮದತ್ತವಾಗಿ ಯಾವುದೂ ಬಂದಿರುವುದಿಲ್ಲ. ನನಗೆ ಯಾವುದೇ ಧಾರ್ಮಿಕ ವಿಧಿವಿಧಾನಗಳಲ್ಲಿ ನಂಬಿಕೆ ಇಲ್ಲದೆ ಹೋದರೂ ಇತರರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತೇನೆ. ಹೆಣ್ಣನ್ನು, ಅವಳು ಹುಟ್ಟಿದ ಜಾತಿ, ಧರ್ಮ, ಖಾಸಗಿ ಅಥವಾ ಕೌಟುಂಬಿಕ ನೆಲೆಗೆ ಕಟ್ಟಿಹಾಕಿ, ಪ್ರಗತಿಪರ ಚಿಂತನೆಗಳಿಗೆ ಸಮೀಕರಿಸಿ ನೋಡುವುದೇ ತಪ್ಪಲ್ಲವೇ? ಪ್ರಗತಿಪರ ಪುರುಷರಿಗಾದರೆ ಈ ಯಾವ ಪರೀಕ್ಷೆಗಳೂ ಇರುವುದಿಲ್ಲ! ಆದರೆ ಹೆಣ್ಣನ್ನು ಇಡೀ ಕುಟುಂಬದ ನೀತಿ ನಿಯಮಗಳ ಚೌಕಟ್ಟಿನ ಹಿನ್ನೆಲೆಯಲ್ಲಿ ಕಟಕಟೆಯಲ್ಲಿ ಇರಿಸಿ ಆರೋಪಿಸುತ್ತಾರೆ, ಪ್ರಶ್ನಿಸುತ್ತಾರೆ. ಸಂವಿಧಾನದ ಆಶಯದ ಮುಂದೆ ಜಾತಿ, ಧರ್ಮ, ಸಿದ್ಧಾಂತ ಯಾವುದೂ ದೊಡ್ಡವಲ್ಲ. ನನ್ನ ಸೊಸೆ ಬೌದ್ಧ ಧರ್ಮಕ್ಕೆ ಸೇರಿದವಳು. ಅವಳ ಯಾವುದೇ ಆಚರಣೆ, ಆಚಾರ ವಿಚಾರಗಳಿಗೆ ನಮ್ಮ ಕುಟುಂಬದ ವಿರೋಧವಿಲ್ಲ. ಹಾಗಾದರೆ ಇದನ್ನು ತಪ್ಪೆನ್ನುತ್ತೀರೋ? ಸರಿ ಎನ್ನುತ್ತೀರೋ?

  • ನೀವು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ನಿರಾಕರಣೆ, ಕೇಂದ್ರ ಸಾಹಿತ್ಯ ಪರಿಷತ್ತಿನ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಂತಹವರು ಮತ್ತು ಸರ್ಕಾರದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ನಿರಾಕರಿಸಿದವರು. ಇದರ ಹಿಂದಿನ ತಾತ್ವಿಕ ಕಾರಣಗಳೇನು?

ಸಾಹಿತ್ಯ ಪರಿಷತ್ತಿನ ಕಾರ್ಯ ಸ್ವರೂಪದ ಬಗೆಗೆ ನನಗೆ ಹಲವಾರು ವರ್ಷಗಳಿಂದ ತಕರಾರುಗಳಿವೆ. ಮಾಧ್ಯಮವಾಗಿ ಶಿಕ್ಷಣದಲ್ಲಿ ಕನ್ನಡಕ್ಕೆ ಮಾನ್ಯತೆ ಇಲ್ಲವೆಂಬ ತೀರ್ಪು ಬಂದಾಗಲೂ ಕಸಾಪ ಮೌನವಾಗಿದ್ದು, ತನ್ನಷ್ಟಕ್ಕೆ ಸಂಭ್ರಮದ ಅದ್ಧೂರಿ ಸಮ್ಮೇಳನ ಮಾಡಿಕೊಳ್ಳುತ್ತದೆಂದರೆ… ಏನೆನ್ನಬೇಕು? ಸಾಹಿತ್ಯ ಪರಿಷತ್ತಿನ ಬೈಲಾದಲ್ಲಿ ಕನ್ನಡ ಶಾಲೆಗಳನ್ನು ಪ್ರಾರಂಭಿಸಿ ಕನ್ನಡ ಭಾಷೆಯನ್ನು ಅಭಿವೃದ್ಧಿಪಡಿಸಬೇಕು ಎಂಬ ಆಶಯ, ಗುರಿಗಳಿವೆ. ಅದಕ್ಕೆ ಪೂರಕವಾಗಿ ಸಮ್ಮೇಳನಗಳನ್ನು ಮಾಡಬಹುದೇ ಹೊರತು ಸಮ್ಮೇಳನಗಳನ್ನು ಮಾಡುವುದೊಂದೇ ಸಾಹಿತ್ಯ ಪರಿಷತ್ತಿನ ಪ್ರಮುಖ ಕೆಲಸವಲ್ಲ. ಆದರೆ ಇತ್ತೀಚೆಗೆ ನಿರಂತರವಾಗಿ ಎಲ್ಲ ಹಂತಗಳಲ್ಲೂ ಸಮ್ಮೇಳನಗಳನ್ನು ಮಾಡುವುದೇ ಕಸಾಪದ ಬಹುದೊಡ್ಡ ಕೆಲಸವಾಗಿದೆ! ಈ ಸಮ್ಮೇಳನಗಳಿಗೆ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತಹ ಖರ್ಚುಗಳಿಗೆ ಸಮಾಜಕ್ಕೆ ಲೆಕ್ಕಪತ್ರಗಳನ್ನು ಒಪ್ಪಿಸುತ್ತಿಲ್ಲ. ಇದು ಜನರ ತೆರಿಗೆಯ, ದೇಣಿಗೆಯ ಹಣವಾದ್ದರಿಂದ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ತಾನು ಖರ್ಚು ಮಾಡುವ ಹಣಕ್ಕೆ ಜನರಿಗೆ ಜವಾಬ್ದಾರವಾಗಿರಬೇಕು. ಈ ಎಲ್ಲಾ ತಾತ್ವಿಕ ಕಾರಣಗಳಿಗಾಗಿ ನಾನು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ನಿರಾಕರಿಸಿದೆ. ಇದೇ ಕಾರಣಗಳಿಗಾಗಿಯೇ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವಕ್ಕೆ ಕೂಡ ರಾಜೀನಾಮೆ ಕೊಟ್ಟೆ. ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಕೊಡಲಾಗುವ ಪ್ರಶಸ್ತಿಯಾಗಿದೆ. ಈ ಇಲಾಖೆ ರಚಿಸಿದ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿಗಳ ಅಧ್ಯಯನ ಸಮಿತಿಯ ಸದಸ್ಯೆಯಾಗಿದ್ದೆ. ನಾವು 30 ಜಿಲ್ಲೆಗೆ ಹೋಗಿ ಅಧ್ಯಯನ ನಡೆಸಿ, ಶ್ರಮಿಸಿ, ತಯಾರಿಸಿ ಕೊಟ್ಟಿರುವ ವರದಿಯ 5% ಕೂಡ ಅನುಷ್ಠಾನವಾಗಿಲ್ಲ! ಹೀಗಿರುವಾಗ ನಾನು ಯಾವ ನೈತಿಕತೆಯಿಂದ ಪ್ರಶಸ್ತಿಯನ್ನು ಸ್ವೀಕರಿಸಲು ಸಾಧ್ಯ?

  • ‘ಮಹಿಳಾ ಸಬಲೀಕರಣ’ ಇದರ ನಿಜವಾದ ಪರಿಕಲ್ಪನೆಯನ್ನು ಹೇಗೆ ವ್ಯಾಖ್ಯಾನಿಸುತ್ತೀರಿ?

ಪ್ರತಿಯೊಂದು ಹೆಣ್ಣು ಮಗುವೂ ಶಾಲೆಯಿಂದ ಹೊರಗುಳಿಯದಂತೆ ಶಿಕ್ಷಣ ದೊರಕಬೇಕು. ಪ್ರೌಢಶಿಕ್ಷಣ ಹಂತದಲ್ಲಿ ವೃತ್ತಿಶಿಕ್ಷಣ ನೀಡಬೇಕು. ಇವರಿಗಾಗಿ ಹೋಬಳಿ ಮಟ್ಟದಲ್ಲಿ ಹಾಸ್ಟೆಲ್ ಸೌಲಭ್ಯಗಳಿರುವ ಶಾಲೆಗಳನ್ನು ನಿರ್ಮಿಸಬೇಕು. ಕಂಪ್ಯೂಟರ್ ಶಿಕ್ಷಣದಂತಹ ಅತ್ಯಾಧುನಿಕ ಶಿಕ್ಷಣ ವ್ಯವಸ್ಥೆ ಪ್ರತಿ ಹೆಣ್ಣುಮಗುವಿಗೆ ಸಿಗುವಂತಾಗಬೇಕು. ಅಭಿವೃದ್ಧಿಯ ಕೇಂದ್ರದಲ್ಲಿ ಮಕ್ಕಳು ಮತ್ತು ಅಂಚಿಗೊತ್ತರಿಸಲ್ಪಟ್ಟವರು ಬರಬೇಕು. ಸರ್ಕಾರ ತಾಯಿಯಂತೆ, ದುರ್ಬಲ ಜನರ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ಸಬಲೀಕರಣ ಎಂಬುದು ಕೇವಲ ವೈಯಕ್ತಿಕ ನೆಲೆಯದ್ದಾಗಿರದೆ ಸಾಮುದಾಯಿಕವಾದದ್ದು. ಅದು ಸಮಾಜದ ನೀತಿ ನಿಯಮಾವಳಿಗಳ ಸಮಗ್ರ ಪರಿಕಲ್ಪನೆಯಾಗಿದೆ. ಹೀಗಾಗಿ ಯೋಜನೆಗಳು ಸರಿಯಾಗಿ ಅನುಷ್ಠಾನ ಆಗಬೇಕು. ಹೆಣ್ಣಿನ ಸಬಲೀಕರಣ ಎಂಬುದು ಅವಳ ರಕ್ಷಣೆ, ಪೋಷಣೆ, ಶಿಕ್ಷಣ, ಆರ್ಥಿಕತೆ ಎಲ್ಲವನ್ನೂ ಒಳಗೊಂಡಿರುವ ಸಮಗ್ರ ಪರಿಕಲ್ಪನೆ. ಕುಟುಂಬ, ಸಮಾಜ, ಸರ್ಕಾರ, ವ್ಯವಸ್ಥೆ ಎಲ್ಲವೂ ಒಟ್ಟಿಗೆ ಕೆಲಸ ಮಾಡಿದರೆ ಮಾತ್ರ ನಿರೀಕ್ಷಿತ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದಷ್ಟೇ. ಗ್ರಾಮಪಂಚಾಯಿತಿ ಹಂತದಲ್ಲಿಯೇ ಮಹಿಳೆ ಮತ್ತು ಮಕ್ಕಳ ಕಳ್ಳಸಾಗಣೆಯನ್ನು ತಡೆಗಟ್ಟಲು ಸಮಿತಿ ರಚಿಸಲಾಗಿದೆ. ಆದರೆ ಅನುಷ್ಠಾನವೇ ಆಗುತ್ತಿಲ್ಲ! ಹೀಗಾಗಿ ಸಬಲೀಕರಣ ಎಂಬುದು ತುಂಬಾ ಸಂಕೀರ್ಣವಾದ ಮತ್ತು ಬಹು ಆಯಾಮಗಳ ಪರಿಕಲ್ಪನೆ. ಬೇಕಾದಂತಹ ಪೂರಕ ವ್ಯವಸ್ಥೆಯನ್ನು ಯುದ್ಧೋಪಾದಿಯಲ್ಲಿ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಮಾಡಬೇಕು. ರಕ್ಷಣೆ, ನೀರು, ಬೀದಿದೀಪ, ವೈಯಕ್ತಿಕ ಶೌಚಾಲಯಗಳಂತಹ ತಳಹಂತದ ಮೂಲಭೂತ ಸೌಕರ್ಯಗಳನ್ನು ಕೂಡ ಕಲ್ಪಿಸದಿದ್ದರೆ ಮಹಿಳಾ ಸಬಲೀಕರಣ ಹೇಗೆ ಸಾಧ್ಯವಾಗುತ್ತದೆ? ಮಹಿಳಾ ಸಬಲೀಕರಣವೆಂಬುದನ್ನು ನಗರಕೇಂದ್ರಿತವಾಗಿಯಲ್ಲ, ಗ್ರಾಮಕೇಂದ್ರಿತವಾಗಿ ಲೆಕ್ಕ ಹಾಕಬೇಕು. ರಾಜ್ಯದಲ್ಲಿ ಲಕ್ಷಕ್ಕೂ ಅಧಿಕ ಮಕ್ಕಳು ಇಂದಿಗೂ ಶಾಲೆಯಿಂದ ಹೊರಗುಳಿದಿದ್ದಾರೆ. ಅದರಲ್ಲಿ ಹೆಣ್ಮಕ್ಕಳೇ ಹೆಚ್ಚು. ತಮ್ಮ ಯಾವುದೇ ತಪ್ಪಿಲ್ಲದೆ, ಬಡತನ, ನಿರುದ್ಯೋಗ, ಅನಕ್ಷರತೆಯ ಕಾರಣಕ್ಕೆ ಲಕ್ಷಾಂತರ ಹೆಣ್ಣುಮಕ್ಕಳು ವೇಶ್ಯಾವಾಟಿಕೆಯ ಜಾಲದೊಳಗೆ ಸಿಲುಕಿ, ಹೊರ ಬರಲಾಗದೇ ಒದ್ದಾಡುತ್ತಿದ್ದಾರೆ. ಹಾಗಾದರೆ ಯಾವುದು ಸಬಲೀಕರಣ? ಹೀಗೆ ಬೇರೆ ಬೇರೆ, ಬಹು ಆಯಾಮಗಳಲ್ಲಿ ಮಹಿಳಾ ಸಬಲೀಕರಣವನ್ನು ನೋಡಬೇಕಾಗುತ್ತದೆ ಮತ್ತು ಪರಿಹಾರ ಕಾರ್ಯವನ್ನು ತಳಹಂತದಿಂದ ರೂಪಿಸಬೇಕಾಗುತ್ತದೆ.