ವಿವೇಕಾನಂದರ ತುಡಿತ ಮರೆತ ಆಶ್ರಮ: ದೇಮ

[ಮೈಸೂರಿನ ನಾರಾಯಣಶಾಸ್ತ್ರೀ ರಸ್ತೆಯಲ್ಲಿರುವ ಶತಮಾನಕ್ಕಿಂತಾ ಹಳೆಯದಾದ ಮಹಾರಾಣಿ ಸರಕಾರಿ ಪ್ರಾಥಮಿಕ ಶಾಲೆಯನ್ನು ರಾಮಕೃಷ್ಣಾಶ್ರಮದ ವಶಕ್ಕೆ ಒಪ್ಪಿಸಲು 12.10.2019ರಂದು ಶಿಕ್ಷಣಾಧಿಕಾರಿಗಳು, ಪೊಲೀಸರೊಂದಿಗೆ ಆಗಮಿಸಿದ್ದ ಸಂದರ್ಭದಲ್ಲಿ ಪೋಷಕರು ಹಾಗೂ ಕನ್ನಡಪರ ಹೋರಾಟಗಾರರು ಇದನ್ನು ಪ್ರತಿಭಟಿಸಿದರು. ಆ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಅಕ್ಷರ ರೂಪ ಇಲ್ಲಿದೆ.]

        

 

ಮೈಸೂರು,ಅ.೧೨- ನಗರದ ರಾಮಕೃಷ್ಣ ಆಶ್ರಮದವರು ಸ್ವಾಮಿ ವಿವೇಕಾನಂದರ ಮೃತದೇಹವನ್ನು ಇಟ್ಟುಕೊಂಡು ಪೂಜೆ ಮಾಡುತ್ತಿದ್ದಾರೆ. ಆದರೆ, ವಿವೇಕಾನಂದರ ಜೀವ ಇದೆಯಲ್ಲ; ಅದರ ತುಡಿತದ ಆಶಯ ಇದೆಯಲ್ಲ ಅದನ್ನು ಮರೆತಿದ್ದಾರೆ ಎಂದು ಸಾಹಿತಿ ದೇವನೂರ ಮಹಾದೇವ ವಿಷಾದ ವ್ಯಕ್ತಪಡಿಸಿದರು.

ನಗರದ ಎನ್‌ಟಿಎಂ ಶಾಲೆಯನ್ನು ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರಿಸಲು ಮುಂದಾಗಿರುವ ಶಿಕ್ಷಣ ಇಲಾಖೆಯ ನಿಲುವನ್ನು ವಿರೋಧಿಸಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೂರು ವರ್ಷಗಳಿಗೂ ಹೆಚ್ಚು ಇತಿಹಾಸದ ಈ ಶಾಲೆಯ ಮೇಲೆ ರಾಮಕೃಷ್ಣ ಆಶ್ರಮ ತನ್ನ ಹದ್ದಿನ ಕಣ್ಣು ಹಾಕಿದೆ. ಆಶ್ರಮದವರಿಗೆ ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರ ಆಶಯಗಳ ಬಗ್ಗೆ ಗೊತ್ತಿದ್ದಿದ್ದರೆ, ಖಂಡಿತ ಅವರು ಇಂತಹ ಕೆಲಸ ಮಾಡುತ್ತಿರಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸ್ವಾಮಿ ವಿವೇಕಾನಂದರು ದೇವರೆಂದರೆ ‘ದರಿದ್ರ ನಾರಾಯಣ’ ಅಂತ ಪದ ಬಳಸುತ್ತಾರೆ. ದೀನ ದಲಿತರು, ದರಿದ್ರರು, ನಿರ್ಲಕ್ಷಿತರನ್ನೇ ದೇವರು ಅಂತ ಪರಿಭಾವಿಸಿ, ಗರ ಗರ ಅಂತ ಭಾರತ ಸುತ್ತಿದ ಒಬ್ಬ ಅತ್ಯಂತ ಅಂತಃಕರಣದ ಜೀವಿ ವಿವೇಕಾನಂದ. ಹಾಗೆಯೇ ಗಾಂಧಿ ಅವರು ಕೂಡ ಸಕಲ ಜೀವಿಗಳಲ್ಲೂ ಪರಮಾತ್ಮನನ್ನೇ ಕಾಣುತ್ತೇನೆ ಎಂದರು. ಅಂಬೇಡ್ಕರ್ ಕೂಡ ಯಾರು ಅಸಹಾಯಕರು, ಯಾರು ನಿರ್ಗತಿಕರು, ಯಾರು ತುಳಿತಕ್ಕೊಳಗಾದರೋ ಅವರ ಪರವಾಗಿ ನಿಲ್ಲುತ್ತಾರೆ. ಈ ಥರದ ಇತಿಹಾಸವನ್ನು ಅಂತಹವರ ಸ್ಫೂರ್ತಿ ಸಾರವನ್ನು ಸೂಕ್ಷ್ಮವಾಗಿ ಗಮನಿಸಿದರೆ ನಾವೇನು ಮಾಡಬೇಕೆಂದು ಗೊತ್ತಾಗುತ್ತದೆ ಎಂದು ಮಹಾದೇವ ಅಭಿಪ್ರಾಯಪಟ್ಟರು.

ಸ್ವಾಮಿ ವಿವೇಕಾನಂದರ ದೇಹವನ್ನು ಇಟ್ಟುಕೊಂಡು ಆಶ್ರಮದವರು ಪೂಜೆ ಮಾಡುತ್ತಿದ್ದಾರೆ. ಆದರೆ, ವಿವೇಕಾನಂದರ  ಜೀವ ಇದೆಯಲ್ಲ, ಅದರ ತುಡಿತ ಇದೆಯಲ್ಲ ಅದನ್ನು ನಿರ್ಲಕ್ಷಿಸಿದ್ದಾರೆ. ವಿವೇಕಾನಂದರ ಜೀವ ದುಃಖಿತರ ಕಣ್ಣೀರು ತೊಡೆಯುತ್ತಾ ಬೀದಿ ಬೀದಿ ಅಲೆಯುತ್ತಿದೆ ಎಂದರು.

ಉದಾಹರಣೆಗೆ ಈ ಶಾಲೆಯಲ್ಲಿರುವ ವಿದ್ಯಾರ್ಥಿಗಳು ಬಡ ಮಕ್ಕಳು. ವಿವೇಕಾನಂದರು  ಬದುಕಿದ್ದರೆ ಈ ಮಕ್ಕಳ ಹೃದಯದಲ್ಲಿ ಪರಮಾತ್ಮನನ್ನು ಕಾಣುತ್ತಿದ್ದರು. ಮಕ್ಕಳ ಏಳಿಗೆಯಲ್ಲಿ ದೇವರನ್ನು ಕಾಣುತ್ತಿದ್ದರು. ಈ ಥರ ಕಾಣುವಿಕೆ ಭೌತಿಕವಾದ ಮಠಗಳಲ್ಲಿ ಇರುವವರಿಗಿಲ್ಲ. ಅವರಿಗೆ ವಿವೇಕಾನಂದರ ಭೌತಿಕವಾದ ದೇಹ ಕಾಣುತ್ತಿದೆ. ಅವರ ಚೈತನ್ಯ (ಸ್ಪಿರಿಟ್) ಕಾಣುತ್ತಿಲ್ಲ. ಅವರ ಜೀವ ಕಾಣುತ್ತಿಲ್ಲ. ಇದು ಅತ್ಯಂತ ದುಃಖದ ಸಂಗತಿ. ಇಡೀ ಭಾರತದ ಚೈತನ್ಯವು ಪೂರ್ತಿ ಸಾಂಸ್ಥಿಕಗೊಂಡು ಹಾಳಾಗಿ ಕುಸಿದುಹೋಗುತ್ತಿದೆ ಎಂದು ಖೇದದಿಂದ ನುಡಿದರು.

 

ಸುಗ್ರಾಸ ಭೋಜನಕ್ಕಾಗಿ ಆಶ್ರಮ: ಪ್ರೊ.ಪ್ರಭುಶಂಕರ್ ಅವರು ಒಮ್ಮೆ ಕೊಲ್ಕತ್ತಾದಲ್ಲಿರುವ ರಾಮಕೃಷ್ಣ ಆಶ್ರಮಕ್ಕೆ ಭೇಟಿಕೊಟ್ಟು ಬಂದಿದ್ದರು. ಕೆಲ ದಿನಗಳ ನಂತರ ಪ್ರಗತಿಪರ ಚಿಂತಕ ಪ್ರೊ.ಕೆ.ರಾಮದಾಸ್ ಅವರನ್ನು ಸಂಧಿಸಿದಾಗ, ರಾಮದಾಸ, ಕೊಲ್ಕತ್ತಾ ರಾಮಕೃಷ್ಣಾಶ್ರಮದಲ್ಲಿ ಎಂತಹ ಸಮೃದ್ಧಿ ಅಂತಿಯಾ? ಎಂದರು. ಅಂದರೆ, ಆಶ್ರಮದ ಹೋಳಿಗೆ, ತಿಳಿಸಾರು ಇತ್ಯಾದಿಯ ಸುಗ್ರಾಸ ಭೋಜನ ಕುರಿತು ವರ್ಣಿಸಿದ್ದರು. ಆಗ ರಾಮದಾಸ್, ಏನ್ ಸಾರ್ ಸಮೃದ್ಧಿ ಅಂತೀರಿ? ಹೋಗಿ ಬಂದಿರುವುದು ಆಶ್ರಮಕ್ಕೆ! ಎಂದಿದ್ದರು. ಇಂದಿನ ಬಹುತೇಕ ಆಶ್ರಮಗಳು ಸುಗ್ರಾಸ ಭೋಜನಕ್ಕಾಗಿ ರಾಮಕೃಷ್ಣ ಆಶ್ರಮ, ಪರಮಹಂಸರು, ಸಾಧು ಸಂತರ ಹೆಸರುಗಳನ್ನು ಶರಣರ ಹೆಸರುಗಳನ್ನು ಬಳಸಿಕೊಳ್ಳುತ್ತಿದೆಯೇ ಹೊರತು, ಯಾರು ದೀನ ದಲಿತರೋ, ಯಾರು ಸಂಕಷ್ಟದಲ್ಲಿದ್ದಾರೋ, ಯಾರು ನೋವಿನಲ್ಲಿದ್ದಾರೋ, ಯಾರು ನೊಂದ ಜೀವಿಗಳೋ ಅವರ ಕಣ್ಣೀರು ಒರೆಸುತ್ತಿಲ್ಲ. ಅವರಿಗೆ ಪರಮಹಂಸರು, ವಿವೇಕಾನಂದರು ಗೊತ್ತಿಲ್ಲ. ಅವರಿಗೆ ಊಟ ಮಾತ್ರ ಗೊತ್ತು ಎಂದು ಮಹಾದೇವ ಆಕ್ರೋಶ ವ್ಯಕ್ತಪಡಿಸಿದರು.

ಆಶ್ರಮದವರು ಈಗಲಾದರೂ ವಿವೇಕಾನಂದರ ಭೌತಿಕ ದೇಹ ಬಿಟ್ಟು, ಅವರ ಸ್ಫೂರ್ತಿದಾಯಕ ತತ್ವಗಳತ್ತ ಇಣುಕು ನೋಟ ಹರಿಸಿ, ನೊಂದವರ ಕಣ್ಣೀರು ಒರೆಸುವ ಕೆಲಸ ಮಾಡಲಿ, ಬಡಮಕ್ಕಳು ಓದುತ್ತಿರುವ ಶಾಲೆ ಮೇಲೆ ತಮ್ಮ ಕಣ್ಣು ಹಾಕುವುದು ಬಿಡಲಿ ಎಂದು ಮಹಾದೇವ ಸಲಹೆ ನೀಡಿದರು.