”ರಾಜ್ಯೋತ್ಸವ ಅನ್ನುತ್ತಾರಲ್ಲಾ ಅದು ಪಿತೃಪಕ್ಷದ ಆಚರಣೆಯ ತರಹ ಆಗಬಾರದು”-ದೇವನೂರ ಮಹಾದೇವ

                                             ನವಂಬರ್ ಒಂದರ ಸಂಭ್ರಮದ ಹೊತ್ತಲ್ಲಿ ದೇವನೂರರ ಹಿತವಾದ ಮಾತುಗಳು:


ಬರುವ ಗುರುವಾರ ಕನ್ನಡ ರಾಜ್ಯೋತ್ಸವ. ಕನ್ನಡ ನಾಡು ಮತ್ತು ನುಡಿಯ ಹಬ್ಬ. ಆಂದೋಲನ `ಹಾಡು ಪಾಡು’ ಜೊತೆಗಿನ ವಿಶೇಷ ಮಾತುಕತೆಯಲ್ಲಿ ಕನ್ನಡದ ಮಾಯಕಾರ ಬರಹಗಾರ ಮತ್ತು ಹುಟ್ಟು ಬಂಡಾಯಗಾರ ದೇವನೂರ ಮಹಾದೇವ ತಮ್ಮ ಆಲೋಚನೆಗಳನ್ನು ಡಾ.ಓ.ಎಲ್. ನಾಗಭೂಷಣಸ್ವಾಮಿಯವರೊಂದಿಗೆ ಹಂಚಿಕೊಂಡಿದ್ದಾರೆ.28.10.2018ರ ಆಂದೋಲನ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ಈ ಸಂದರ್ಶನ ನಮ್ಮ ಓದಿಗಾಗಿ…. 

ಈಗಿನ ಮಕ್ಕಳಲ್ಲಿ ಕನ್ನಡದ ಪ್ರೀತಿ ಹುಟ್ಟಬೇಕಾದರೆ ಮುಖ್ಯವಾಗಿ ಏನು ಮಾಡ್ಬೇಕು ಹೇಳ್ತೀರಾ?

ನಮ್ಮ ಮಾತೃಭಾಷೆ ನಮಗೆ ಅಗತ್ಯವಿಲ್ಲ ಅನ್ನೋ ವಾತಾವರಣ ಉಂಟುಮಾಡಿಬಿಟ್ಟಿದೇವೆ. ಪ್ರೀತಿ ಹುಟ್ಟುವುದು ಹೇಗೆ? ಭಾಷೆಯನ್ನು ಭಾವನಾತ್ಮಕವಾಗಿ ನೋಡುವುದು ಬೇಡ. ನನ್ನ ಏಳಿಗೆಗೆ, ನನ್ನ ಜೀವನಕ್ಕೆ ಈ ಭಾಷೆ ಬೇಕು ಅನ್ನುವ ವಾತಾವರಣ ಬೇಕು. ಅಂಥ ವಾತಾವರಣವನ್ನು ಕೊಂದು ಹಾಕಿದ್ದೇವೆ.
ಈ ವಿಚಾರದಲ್ಲಿ ಮೊದಲನೆ ಅಪರಾಧಿ – ಸುಪ್ರೀಂ ಕೋರ್ಟು. ಶಿಕ್ಷಣ ಮಾಧ್ಯಮ ಆಯ್ಕೇನ ತಂದೆ ತಾಯಿಗಳಿಗೆ ಬಿಟ್ಟಿದಾರೆ. ಶಿಕ್ಷಣ ತಜ್ಞರಲ್ಲವಾ ಅದನ್ನ ಮಾಡಬೇಕಾದ್ದು? ಎರಡನೆಯ ಅಪರಾಧಿ-ಜವಾಬ್ದಾರಿ ಹೀನ ಅಥವಾ ಬೇಜವಾಬ್ದಾರಿ ಸರ್ಕಾರ . ಸರ್ಕಾರ ಇವತ್ತೇನು ಮಾಡತಾ ಇದೆ ಎಲ್ಲಾನೂವೆ ಖಾಸಗಿಯವರಿಗೆ ವಹಿಸಿಕೊಟ್ಟು ಕೈ ತೊಳಕೊಳ್ಳೋಕೆ ನೋಡತಾ ಇದೆ. ಎಜುಕೇಶನ್ ಪಾಲಿಸೀನ ಕಾರ್ಪೊರೇಟ್ ಸೆಕ್ಟರ್ ಮಾಡೋದಾ? ಕಾರ್ಪೊರೇಟ್ ಸೆಕ್ಟರ್ ಗೆ ಬೇಕಾದದ್ದು ಕೋಳಿ ಫಾರಮ್ ಎಜುಕೇಷನ್. ಮೊಟ್ಟೆ ಇಕ್ಕೋ ಕೋಳಿಗಳನ್ನ ಮಾಡತಾ ಇದಾರೆ ನಮ್ಮ ಮಕ್ಕಳನ್ನ.

ಮಕ್ಕಳಿಗಿಂತ ಹೆಚ್ಚಾಗಿ ದೊಡ್ಡವರಿಗೇ ಕನ್ನಡ ಬೇಕಾಗಿಲ್ಲ, ಅಲ್ಲವಾ?

ಕನ್ನಡ ಅಂತ ಅಲ್ಲ, ಯಾವುದೇ ಭಾರತೀಯ ಭಾಷೆಗೂ ಕಷ್ಟ ಇದೆ. ಕನ್ನಡಿಗರಿಗೆ ಕನ್ನಡ ಬೇಕಾಗಿಲ್ಲ, ಮುಸ್ಲಿಂರಿಗೆ ಉರ್ದು ಬೇಕಾಗಿಲ್ಲ, ತಮಿಳರಿಗೆ ತಮಿಳು ಬೇಕಾಗಿಲ್ಲ, ಮಲೇಷಿಯಾದಲ್ಲಿ ತಮಿಳು ಮಾದ್ಯಮ ಇದೆ. ತಮಿಳುನಾಡಲ್ಲಿ ತಮಿಳು ಮಾಧ್ಯಮ ಇಲ್ಲ, ಎಲ್ಲರೂ ಶಾಸ್ತೀಯ ಭಾಷೆ ಪಟ್ಟಕ್ಕೆ ಒಡ್ದಾಡ್ತಿದಾರೆ. ಹೊಟ್ಟೆಗ್ ಹಿಟ್ಟಿಲ್ಲ ಜುಟ್ಟಿಗ್ ಮಲ್ಗೆ ಹೂವು…ಎಲ್ಲಾ ಜುಟ್ಟಿಗ್ ಮಲ್ಗೆ ಹೂನ ರಾಜಕಾರಣ. ಸ್ವಾತಂತ್ರ್ಯ ಬಂದು ಭಾಷಾವಾರು ಪ್ರಾಂತ್ಯ ರಚನೆ ಮಾಡಿದಾಗ ಒಂದು ಆತಂಕ ಇತ್ತು ಏನಂದ್ರೆ ,ಆಯಾ ರಾಜ್ಯದ ಆಯಾಯ ಪ್ರಬಲ ಭಾಷೆಗಳು ಆ ರಾಜ್ಯದೊಳಗಿನ ಸ್ಥಳೀಯ ಭಾಷೆಗಳನ್ನ ತುಳಿದು ಹಾಕಿಬಿಡುತ್ತವೆ ಅಂತ. ಅಂದರೆ ರಾಜ್ಯದ ಮೆಜಾರಿಟಿ ಭಾಷೆ ಇದಿಯಲ್ಲ ಕರ್ನಾಟಕದಲ್ಲಿ ಕನ್ನಡ, ತಮಿಳ್ನಾಡ್ನಲ್ಲಿ ತಮಿಳು ಇವು ಅಲ್ಲಿರುವ ಉಳಿದ ಭಾಷೆಗಳ್ನ ಅವು ನುಂಗ್ಹಾಗ್ಬಿಡ್ತಾವೆ, ಕಾಲ್‍ಕಸ ಮಾಡ್ತವೆ ಅನ್ನೋ ಹೆದ್ರಿಕೆಗೆ ಮೈನಾರಿಟಿ ಲಾಂಗ್ವೇಜ್ ಗಳಿಗೆ ವಿಶೇಷವಾದ ರಕ್ಷಣೆ ತಂದ್ಕೊಟ್ರು ಅನ್ಸುತ್ತೆ. ಅದನ್ನ ಸುಪ್ರೀಂಕೋರ್ಟ್ ದುರುಪಯೊಗ ಪಡ್ಸ್ಕೊಂಡು ಈಗ ಮೈನಾರಿಟಿ ಲಾಂಗ್ವೇಜ್ ಅನ್ನುವ ಹೆಸ್ರ್ನಲ್ಲಿ ಮಾತೃಭಾಷೆಗಳನ್ನ ಕೊಲ್ಲೋದಕ್ಕೆ ಅಸ್ತ್ರ ಮಾಡ್ಕೊಂಡುಬಿಟ್ಟಿತು. ಇದು ಒಂದು ದುರಂತ ಸ್ಥಿತಿ. ಇಂದು ಕರ್ಣಾಟಕದಲ್ಲಿ ಕನ್ನಡ ಅನಾಥ. ತಮಿಳು ನಾಡಲ್ಲಿ ತಮಿಳೇ ಅನಾಥ . ಇದು ಕನ್ನಡ ಅಂತಲ್ಲ ಎಲ್ಲಾ ಭಾರತೀಯ ಭಾಷೆಗುವೆ ಎದುರಾಗಿರುವ ಒಂದು ದೊಡ್ಡ ಕಂಟಕ. ಇದಕ್ಕೆ ಜನಾಂದೋಲನ ಯಾಕ್ ಮಾಡೋಕ್ ಆಗೊಲ್ಲ ಅಂದ್ರೆ ಜನಗಳ್ಗೂ ಕೂಡ ಅದು ಬೇಕಾಗಿಲ್ಲ. ಎಲ್ಲವೂ ಅನುಕರಣೆ ಮಾಡ್ತಾ ಇವೆ. ಜಾಹಿರಾತು ಇದಿಯಲ್ಲ ಅದು ಎಲ್ಲರನ್ನೂ ಎಲ್ಲವನ್ನೂ ರೂಪಿಸ್ತಾಯಿದೆ. ಕಷ್ಟ ಇದೆ ತುಂಬ.

ನೀವ್ ಹೇಳ್ತಿರೋದು ನಿಜ, ಇಂತಹದ್ರಲ್ಲಿ ಪ್ರೀತಿ ಹೆಂಗ್ ಹುಟ್ಟುತ್ತೆ? ಹೆಂಗ್ ಹುಟ್ಟಿಸ್ಬಹುದು?

ಈ ಪ್ರಶ್ನೆ ನನ್ನದೂ ಕೂಡಾ. ಭಾಷೆಯ ಪ್ರೀತಿ ಅದು ತ್ಯಾಗ ಆಗ್ಬಾರ್ದು, ಭಾವನಾತ್ಮಕ ಸಂಗತಿನೂ ಆಗ್ಬಾರ್ದು, ವ್ಯಾವಹಾರಿಕವಾಗಿ ಲಾಭದಾಯಕ ಅನ್ನೋವಂಥ ಪರಿಸ್ಥಿತಿ ಉಂಟ್ ಮಾಡ್ಬೇಕ್ ಅಷ್ಟೇ. ತೋರಿಕೆಗೆ ಕನ್ನಡ ಪ್ರೇಮ ಇದೆಯಲ್ಲ ಅದೇ ಜಾಸ್ತಿ ಆಗೊಯ್ತು. ರಾಜಕೀಯ ಇಚ್ಛಾಶಕ್ತಿನೂ ಬೇಕು. ಈ ವಿಚಾರದಲ್ಲಿ ರಾಜಕೀಯ ಇಚ್ಛಾಶಕ್ತಿ ಅನ್ನೋದು ಇಲ್ಲವೇ ಇಲ್ಲ ಅನ್ನೋ ತರ ಇದೆ.

ಕನ್ನಡ ದಿನ ನಿತ್ಯದ ಲೌಕಿಕ ಉಪಯೋಗಕ್ಕೆ ಬರಬೇಕು ಅನ್ನೋದಾದರೆ ಒಂದು ಪ್ರಶ್ನೆ ಹುಟ್ಕೊಳ್ಳುತ್ತೆ, ಸಾಹಿತ್ಯ ಅಲ್ದೆ ಬದುಕಿಗ್ ಬೇಕಾದ ಇನ್ನಿತರ ಸಂಗತಿಗಳ್ನ ಕನ್ನಡದಲ್ಲಿ ಹೇಳೊ ಶಕ್ತಿ ಕಳೆದುಕೊಂಡಿದ್ದೇವಾ?, ಅಥವಾ ಆ ಕೆಲಸ ಮಾಡತಾನೇ ಇಲ್ಲವಾ?

ಯಾವುದೇ ಒಂದ್ ಅಂಗ ಇರ್ಬಹುದು ಅದನ್ನ ಬಳಸದೆ ಇದ್ದರೆ ಅದು ನಶಿಸುತ್ತೆ ಅಂತಾರೆ. ಸರಕಾರ ದಿನೆ ದಿನೇ ಸರ್ಕಾರಿ ಶಾಲೆಗಳನ್ನ ತಾನೇ ಸಾಯೋತರ ಮಾಡ್ತಾ ಇದೆ. ಕೊಲೆ ಅಲ್ಲ ಆದರೆ ಅವೇ ಸಾಯ್ಬೇಕು ಅನ್ನೋ ಥರ! ಅನ್ನ ಆಹಾರ ಕೊಡ್ದೆ ಸಾಯಿಸ್ತಾರಲ್ಲ ಹಾಗ್ ಸಾಯಿಸ್ತಾ ಇದೆ. ಸಾಹಿತ್ಯ ಪರಿಷತ್ತು ಇದನ್ನು ಸುಮ್ಮನೆ ನೋಡಿಕೊಂಡು ಸಮ್ಮೇಳನ ಮಾಡಿಕೊಂಡಿದೆ. ಸಾಹಿತ್ಯ ಪರಿಷತ್ ನಿಜವಾಗ್ಲೂ ಇದ್ರೆ ಅದು ಸರ್ಕಾರಿ ಶಾಲೆಗಳನ್ನ ಉಳಿಸುವ ಚಳವಳಿಯನ್ನ ಆರಂಭಿಸಬೇಕಾಗಿದೆ. ಆಗ ನನ್ನಂತೋರೂ ಜೊತೆಗೆ ನಿಲ್ಲುತ್ತೇವೆ.

ಭಾಷೆಯ ಪ್ರಶ್ನೆ ಅನ್ನೋದು ಬರೀ ಭಾಷೆ ಭಾವನೆಗಳ ಪ್ರಶ್ನೆ ಅಲ್ಲ, ರಾಜಕೀಯ ಮತ್ತು ಆರ್ಥಿಕ ಪ್ರಶ್ನೆನೂ ಆಗಿರುತ್ತೆ, ಅಲ್ಲವಾ? ಯಾವ ರಾಜಕೀಯ ಪಕ್ಷವೂ ಭಾಷೆಯನ್ನು ತನ್ನ ಅಜೆಂಡಾದ ಭಾಗವಾಗಿ ಮಾಡ್ಕೊಂಡೇ ಇಲ್ವಲ್ಲ?

ಇಲ್ಲಿ ಪಾಲಿಸಿ ಮೇಕಿಂಗ್ ಇದೆಯಲ್ಲ ಅದು ಸೆಂಟ್ರಲ್ ಗೌರ್ನಮೆಂಟ್  ಮಾಡಬೇಕು, ರಾಜ್ಯದ ಕೈಯಲ್ಲಿ ಅಷ್ಟಿಲ್ಲ. ಅದೇನ್ ಮಾಡ್ತಿದಾರೆ ಅಂದ್ರೆ, ಕೆಲವ್ರು ಮಾತಾಡಕೆ ರಾಜಕೀಯ ಮಾಡ್ತಾರೆ. ಅದರ ಒಳಾಸೇನೇ ಬೇರೆ ವಾಸ್ತವವಾಗಿ. ಜೊತೆಗೆ ಎಷ್ಟೋ ಪಾಲಿಸಿಗಳು ಸಾಲ ತಕೊಂಡ್ ಬರ್ತಾರಲ್ಲ ಡಬ್ಲುಟಿಓ ಮಣ್ಣು ಮಸಿ ಅಂತ ಒಪ್ಪಂದಗಳಿದಾವಲ್ಲ, ಹೆಚ್ಚು ಕಮ್ಮಿ ಅವುಗಳು ಹೇಳ್ದಂಗೆ ಇವು ರುಜು ಹಾಕ್ತಿರ್ತಾವೆ. ಇದು ವ್ಯಾಪಾರದ ಯುಗ. ದ್ರೋಹ ವಂಚನೆ ಮತ್ತು ಜಾಹಿರಾತು ಈ ಯುಗದ ಲಕ್ಷಣ. ರಾಜಕೀಯ ಇಚ್ಛಾಶಕ್ತಿ ಅನ್ನೋದು ನನ್ ಮಾತನ್ನ ನಾನೇ ಕೇಳುವಾಗ, ನನ್ನ ನಿರ್ಧಾರ ನಾನೆ ತಕೋಳುವಾಗ ಇಚ್ಚಾಶಕ್ತಿ ಬರಬಹುದು. ಇಂದು ರಾಜಕಾರಣ ನಿರ್ಧಾರ ತಕೋಳ್ತಾನೆ ಇಲ್ಲ. ಇಂದಿನ ನಿರ್ದಾರಗಳನ್ನ ಯಾರೋ ನಿರ್ಧರಿಸ್ತಾ ಇದಾರೆ. ಹಣ ಪಾಲಿಸಿಗಳನ್ನ ನಿರ್ದರಿಸ್ತಾ ಇದೆ. ರಾಜಕಾರಣ ಗೊಂಬೆಯಾಟವಾಗಿಬಿಟ್ಟಿದೆ.

ಈಗ ಒಂದ್ ಮಾತು. ಅನಂತಮೂರ್ತಿ ಅವ್ರು ಹೇಳ್ತಿದ್ರು–ಕನ್ನಡದಂತ ಸ್ಥಳೀಯ ಭಾಷೆಗಳು ಉಳ್ಕೊಂಡಿರೋದು ಬಡವ್ರಿಂದ, ದಲಿತ ವರ್ಗದವ್ರಿಂದ ಅಂತ, ಅಂದ್ರೆ ಭಾವನಾತ್ಮಕವಾಗಿ ನೊಡೋಕ್ ಹೊಟ್ರೆ ಜನ ಬಡವ್ರಾಗಿದ್ರೆ ಮಾತ್ರ ಕನ್ನಡ ಉಳಿಯುತ್ತೆ ಅಂತ ಆಗುತ್ತೆ, ಅಲ್ಲವಾ?

[ಬಡವರಿಗೆ, ದಲಿತರಿಗೆ ತಮ್ಮ ಪರಿಸ್ಥಿತಿ] ತೃಪ್ತಿದಾಯಕವಾಗಿದೆ ಅನ್ನಸಿದ್ದರೆ, ಓಕೆ. ಆದರೆ ಅಸಹಾಯಕವಾಗಿ, ತನ್ನ ಪರಿಸ್ಥಿತಿ ಬಗ್ಗೆ ಅತೃಪ್ತಿ ಇದ್ದರೆ ಅದಕ್ಕೆ ಹೆಚ್ಚು ಉಳಿಗಾಲವಿಲ್ಲ. ತನ್ನ ದುಸ್ಥಿತಿ ಕಾರಣಕ್ಕಾಗಿ ತನಗೆ ಇಷ್ಟೇ ದಕ್ಕೋದು, ಅಥವಾ ನಾನು ಸ್ವಲ್ಪ ಅನುಕೂಲ ಆಗಿದ್ದರೆ ಆ ಥರಾ ಇರತಿದ್ದೆ ಅಂತಿದ್ರೆ… ಯೋಚನೆ ಮಾಡಬೇಕು ನಾವು. ಅಂದರೆ, ಭಾಷೆಯ ಬಾಳಿಕೆ ಅದರ ಒಳಗಡೆಯಿಂದಾನಾ ಅಥವ ಪರಿಸ್ಥಿತಿಯ ಕಾರಣದಿಂದಾನಾ ಅಂತ ನೋಡಬೇಕಾಗತ್ತೆ.

ಯಾವ ರೀತಿಯ ಕ್ರಮ ನಾವು ತಕೋಳೋದ್ರಿಂದ ಕನ್ನಡಕ್ಕೆ ಮತ್ತೆ ಒಂದು ಭದ್ರವಾದ ನೆಲೆ ಒದಗಿಸಬಹುದು?

ಕನಿಷ್ಟ ಪ್ರಾಥಮಿಕ ಶಿಕ್ಷಣ ಅಂದ್ರೆ 10ನೆ ತರಗತಿ ವರೆಗು ಕನ್ನಡ/ ಮಾತೃಭಾಷೆಯನ್ನ ಶಿಕ್ಷಣ ಮಾಧ್ಯಮ ಮಾಡ್ದೆ ಇನ್ನೇನೆ ಮಾಡುದ್ರುವೆ ಅವೆಲ್ಲವೂ ಸುತ್ತ ಮುತ್ತ ಬಳಸ್ದಂಗೆ ಅಂತ ನನಗೆ ಅನ್ಸುತೆ. ನಾವು ಕೋರ್ಟ್‍ಗೆ ಹೇಳ್ಬೇಕು – `ಶಿಕ್ಷಣ ತಜ್ಞ ನೀನಲ್ಲ’ ಅಂತ. ಸರ್ಕಾರಕ್ ಹೇಳ್ಬೇಕು, ನೀನು ಜವಾಬ್ದಾರಿ ತಂದ್ಕೋ’ ಅಂತ. ಎಲ್ಲವನ್ನೂ ಖಾಸಗಿಗೆ ಕೊಟ್ಬಿಟ್ಟು ಸರ್ಕಾರಿ ಸಂಸ್ಥೆಗಳಿಗೆ ಒಂಥರ ಎಳ್ಳು ನೀರು ಬಿಡ್ತಾ ಇದಾರಲ್ಲ- ಈ ಹೊಣೆಗೇಡಿತನಕ್ಕೆ ನಾವು ಮುಖಾಮುಖಿ ಆಗ್ಬೇಕಾಗುತ್ತೆ.

ಪ್ರಾಥಮಿಕ ಶಿಕ್ಷಣದ ಜವಾಬ್ದಾರಿ ಹೆಣ್ಣುಮಕ್ಕಳಿಗೆ ಹೆಚ್ಚು ಕೊಟ್ರೆ ಏನಾಗ್ಬಹುದು? ಒಂದೊಂದು ತಾಲ್ಲೂಕಲ್ಲು ಕೊನೆ ಪಕ್ಷ ಮಹಿಳೆಯರೇ ನಡೆಸುವ ಒಂದೊಂದು ಕನ್ನಡ ಮಾಧ್ಯಮ ಶಾಲೆಗಳಿದ್ದರೆ ಏನಾಗ್ಬಹುದು?

ಮಾಡ್ನೋಡ್ಬೇಕು, ಪ್ರಯತ್ನ ಪಡ್ಬೇಕು, ಬೇಡ ಅಂದವ್ರಾರು?
ಒಂದು ಸಂಸ್ಥೆ ಆ ಸಂಸ್ಥೆ ಕಟ್ಕೊಂಡು ನಡೆಸ್ತಿವಿ ಅಂತ ಬಂದ್ರೆ ಅದಕ್ಕಿಂತ ಒಳ್ಳೆಯ ಕೆಲಸ ಇನ್ನಾವುದು. ನಾವಿಗ ಮಾಡ್ಬೇಕಾದ್ದು ಇಷ್ಟೇನೆ, ಅಪರಾಧಿಗಳು ಕೋರ್ಟ್, ಸರ್ಕಾರ ಮತ್ತು ಕಾರ್ಪೊರೆಟ್ ಸೆಕ್ಟರ್‍ಗಳು. ಅಂತ ಪದೇ ಪದೇ ಹೇಳ್ಬೇಕಾಗುತ್ತೆ

ಬರುವ ಗುರುವಾರ ನವಂಬರ್ ಒಂದು ಕನ್ನಡ ರಾಜ್ಯೋತ್ಸವ . ಏನು ಹೇಳ್ತೀರಾ?

ರಾಜ್ಯೋತ್ಸವ ಕೇವಲ ಆಚರಣೆ ಆಗಬಾರದು. ಇದು ಒಂದು ರೀತಿಯ ಪುಣ್ಯಸ್ಮರಣೆ ಅಥವಾ ಪಿತೃ ಪಕ್ಷದ ಆಚರಣೆಯ ತರಹಾನೂ ಆಗಬಾರದು. ರಾಜ್ಯೋತ್ಸವ ಹುಟ್ಟು ಹಬ್ಬ ಆಗೋದು ಯಾವಾಗ ಕನ್ನಡ ಅಥವಾ ಮಾತೃ ಭಾಷೆ ಶಿಕ್ಷಣ ಮಾಧ್ಯಮ ಆಗುತ್ತದೋ ಆವಾಗ ಮಾತ್ರ.