ರಾಜಕಾರಣಕ್ಕೆ ಹೊಸ ನಡಿಗೆ -ದೇವನೂರ ಮಹಾದೇವ

 [ಸರ್ವೋದಯ ಕರ್ನಾಟಕ ಪಕ್ಷವು ಸ್ವರಾಜ್ ಇಂಡಿಯಾ ಜೊತೆ ವಿಲೀನವಾದ 25.3.2017ರಂದು ದೇವನೂರ ಮಹಾದೇವ ಅವರು ಆಡಿದ ಆಶಯ ನುಡಿ. ]

 

                                                   sammilana                                                                               swaraj

ಇಂದು, ಸರ್ವೋದಯ ಕರ್ನಾಟಕ ಪಕ್ಷವು ಸ್ವರಾಜ್ ಇಂಡಿಯಾ ಜೊತೆ ವಿಲೀನವಾಗುತ್ತಿದೆ. ಇದರಲ್ಲಿ ನನಗೆ ಹೊಸತೇನೂ ಕಾಣುತ್ತಿಲ್ಲ; ಆಶ್ಚರ್ಯವೂ ಆಗುತ್ತಿಲ್ಲ. ಯಾಕೆಂದರೆ, ಸರ್ವೋದಯ ಕರ್ನಾಟಕ ಹುಟ್ಟುಹಾಕಿದ ನಾವು ಹಾಗೂ ಸ್ವರಾಜ್ ಇಂಡಿಯಾ ಹುಟ್ಟುಹಾಕಿರುವ ಯೋಗೇಂದ್ರಯಾದವ್ ಮತ್ತವರ ಸಂಗಾತಿಗಳು, ಸರ್ವೋದಯ ಕರ್ನಾಟಕ ಸ್ವರಾಜ್ ಇಂಡಿಯಾ ಹುಟ್ಟುವುದಕ್ಕೆ ಮೊದಲಿನಿಂದಲೂ ಆರೋಗ್ಯಕರ ಭಾರತವನ್ನು ಕಟ್ಟುವ ಕನಸನ್ನು ಇಟ್ಟುಕೊಂಡು ಜೊತೆಜೊತೆಗೆ ಒಡನಾಡುತ್ತಿದ್ದವರು. ಹಾಗಾಗೇ ಇದೊಂದು ಸಹಜ ಪ್ರಕ್ರಿಯೆಯಾಗಿ ನನಗೆ ಕಾಣಿಸುತ್ತಿದೆ.

ಈಗ, ಸ್ವರಾಜ್ ಇಂಡಿಯಾ ಮೂಲಕ ನಾವು ರಾಜಕಾರಣ ಮಾಡಲು ಹೊರಟಿದ್ದೇವೆ. ನಮ್ಮ ಎದುರಿಗೆ ಭಾರತದ ದುರಂತ ರಾಜಕಾರಣವಿದೆ. ಇದನ್ನು ಸರಿಯಾಗಿ ಗ್ರಹಿಸಿದರೆ ಮಾತ್ರ ನಾವು ಮಾಡಬೇಕಾದ ರಾಜಕಾರಣ ಹೇಗೆ ಎತ್ತ ಒಂದಿಷ್ಟು ಸುಳಿವು ಸಿಗಬಹುದು.

ಇಂದಿನ ರಾಜಕಾರಣದ ದುರಂತವನ್ನು ಸ್ವರಾಜ್ ಇಂಡಿಯಾ ಪಕ್ಷದ ‘ಸ್ವರಾಜ್ ಒಳನೋಟ’ (Swaraj Vision) ಕಣ್ಣಿಗೆ ಕಟ್ಟುವಂತೆ ಕಾಣಿಸಿಕೊಡುತ್ತದೆ :

1. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಜನರಲ್ಲೇ ಇರಬೇಕು. ಆದರೆ ನಮ್ಮ ದೇಶದ ಪ್ರಜಾಪ್ರಭುತ್ವದ ಕಾರ್ಯವೈಖರಿಯು ಜನರಿಂದಲೇ ಅಧಿಕಾರವನ್ನು ಕಿತ್ತುಕೊಳ್ಳುವುದಕ್ಕಾಗಿ ಶ್ರಮಿಸುತ್ತಿದೆ.

2. ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಕುಬ್ಜಗೊಳಿಸಲಾಗಿದೆ. ಇದು ಐದು ವರ್ಷಕ್ಕೊಮ್ಮೆ ಆಳುವವರನ್ನು ಚುನಾಯಿಸುವ ಒಂದು ಪ್ರಯಾಸದ ರೂಢಿಯಾಗಿಬಿಟ್ಟಿದೆ. ಹಾಗೂ ರಾಜಕೀಯ ಪಕ್ಷಗಳು, ಚುನಾಯಿತ ಪ್ರತಿನಿಧಿಗಳು ಜನದನಿಯನ್ನು ಅಭಿವ್ಯಕ್ತಿಸುವ ಮಾಧ್ಯಮವಾಗಿ ಉಳಿದಿಲ್ಲ.

3. ನಾವು ಮೌಲ್ಯಯುತ ಮತ ಅಂದುಕೊಂಡಿರುವ ಓಟುಗಳನ್ನು ಅದೊಂದು ಕಚ್ಛಾವಸ್ತು ಎಂಬಂತೆ ಪರಿಗಣಿಸಿ, ಅದರ ಮೇಲೆ ಹೂಡಿಕೆ ಮಾಡಿ ಅಧಿಕಾರ ಪಡೆದು, ಆ ಅಧಿಕಾರದ ಬಲದಿಂದ ಮತ್ತೆ ಹಣ ಮಾಡುವ ಯಂತ್ರವನ್ನಾಗಿ ಭಾರತ ಚುನಾವಣಾ ವ್ಯವಸ್ಥೆಯನ್ನು ವಿನ್ಯಾಸ ಮಾಡಲಾಗಿದೆ. (These machines are designed to gather votes and use them as fodder to convert money into power, and power back into money.)

4. ಹಾಗಾಗಿ ಇದು ಕೇವಲ ವ್ಯಾಪಕ ಭ್ರಷ್ಟಾಚಾರದಿಂದ ಕೂಡಿದ ಒಂದು ವ್ಯವಸ್ಥೆಯಲ್ಲ, ಬದಲಾಗಿ ಭ್ರಷ್ಟಾಚಾರವೇ ಸಾಂಸ್ಥೀಕರಣಗೊಂಡು ತಾನೇ ಒಂದು ವ್ಯವಸ್ಥೆಯಾಗಿಬಿಟ್ಟಿದೆ. ಹಾಗಾಗೇ ಈಗಿರುವ ಆಡಳಿತ ವ್ಯವಸ್ಥೆಯಲ್ಲಿ ನಿಷ್ಠಾವಂತ ಹಾಗು ದಕ್ಷತೆ ಇರುವವರು ಆಳ್ವಿಕೆ ನಡೆಸಿದರೂ ಕೂಡ ಸ್ವರಾಜ್ ಕನಸು ಈಡೇರದು.

ಈ ನಮ್ಮ ರಾಜಕಾರಣದ ದುರಂತ ವ್ಯವಸ್ಥೆಯನ್ನು ಕಣ್ಮುಂದೆ ತಂದುಕೊಂಡರೆ ಅದು ಹುಲಿಗೆ ಹುಣ್ಣು ಬಂದಂತೆ ಇದೆ. ‘ಹುಲಿಗೆ ಹುಣ್ಣು’- ಇದೊಂದು ಗಾದೆ ಮಾತು. ಹುಲಿಗೆ ಹುಣ್ಣು ಆದಾಗ ಆ ಹುಲಿ ತನ್ನ ಗಾಯದ ನೋವನ್ನು ಶಮನಮಾಡಿಕೊಳ್ಳಲು, ತನ್ನ ದೇಹದ ಇನ್ನೊಂದು ಭಾಗದಿಂದ ಚರ್ಮವನ್ನು ಕಿತ್ತು ಹುಣ್ಣಾದ ಜಾಗಕ್ಕೆ ಅಂಟಿಸುತ್ತದಂತೆ. ಹೀಗೆ – ಒಂದು ಗಾಯಕ್ಕೆ ಮದ್ದಾಗಿ ಇನ್ನೊಂದು ಗಾಯ – ಹೀಗೆ ವ್ರಣ ಉಲ್ಭಣವಾಗಿಸಿಕೊಳ್ಳುತ್ತ ಭಾರತದ ರಾಜಕಾರಣ ನರಳುತ್ತಿದೆ. ಇದನ್ನು ಗುಣಪಡಿಸುವುದು ಕಡುಕಷ್ಟ ಅನ್ನಿಸುತ್ತದೆ. ಎಲ್ಲರೂ ಭ್ರಷ್ಟತೆಯೇ ವ್ಯವಸ್ಥೆಯಾಗಿರುವುದನ್ನು ಗಮನಿಸದೆ ಅಡ್ಜೆಸ್ಟ್ ಮಾಡಿಕೊಂಡು ಸಾಗುತ್ತಿರುವುದು ಇದಕ್ಕೆ ಕಾರಣವಿರಬಹುದು.

ಮೊನ್ನೆ, ನಮ್ಮಂತೆಯೇ ಆಲೋಚಿಸುವ ಕ್ರಿಯಾಶೀಲರಾದ ನನ್ನ ಗೆಳೆಯ ಶಾಸಕರೊಬ್ಬರನ್ನು ಸ್ವರಾಜ್ ಇಂಡಿಯಾಕ್ಕೆ ಆಹ್ವಾನಿಸಿದೆ. ಅವರಿಗೆ ನಮ್ಮಗಳ ಬಗ್ಗೆ ತುಂಬಾ ಪ್ರೀತಿ ಗೌರವ ನಂಬಿಕೆಗಳಿವೆ. ನಮ್ಮ ಬಗ್ಗೆ ವಿಶ್ವಾಸ ಇಟ್ಟುಕೊಂಡೇ – ‘ಪ್ರವಾಹದ ವಿರುದ್ಧ ಈಜುವುದು ಕಷ್ಟ’ ಅಂದರು. ನಾನು ಮುಂದಕ್ಕೆ ಮಾತಾಡಲಿಲ್ಲ. ಆದರೆ ಅವರು ಈಜುತ್ತಿಲ್ಲ ಅನ್ನಿಸಿತು. ಈಜುತ್ತಿದ್ದೇನೆಂದು ಕೈಕಾಲು ಆಡಿಸುತ್ತ ಪ್ರವಾಹ ಕೊಂಡೊಯ್ದ ಕಡೆ ಹೋಗುವುದು ಇದು ಅನ್ನಿಸಿತು. ಈ ಈಜಿನಲ್ಲಿ ಸುಳಿಗೆ ಸಿಲುಕಿ ಕಳೆದು ಹೋಗಬೇಕಾಗುತ್ತದೆ.

ಹಾಗಾದರೆ ಅನೇಕರು ಅಂದುಕೊಂಡಿರುವಂತೆ, ನಮ್ಮ ಜನಾಂದೋಲನಗಳ ಹಿನ್ನೆಲೆಯ ತಳಪಾಯದ ರಾಜಕಾರಣ ಪ್ರವಾಹದ ವಿರುದ್ಧ ಈಜೆ? – ಖಂಡಿತ ಅಲ್ಲ. ಮೊದಲು ಈ ಅಪಕಲ್ಪನೆಯನ್ನು ತೊಡೆದುಹಾಕಬೇಕಾಗಿದೆ. ಪ್ರವಾಹ ಕೊಂಡೊಯ್ದ ಕಡೆ ಕಣ್ಮುಚ್ಚಿಕೊಂಡು ತೇಲಿ ಸುಳಿಗೆ ಬಲಿಯಾಗುವ ರಾಜಕಾರಣವಲ್ಲ ಇದು. ಇದನ್ನು ಮೊದಲು ಮನದಟ್ಟು ಮಾಡಬೇಕಿದೆ. ಆದರಿದು ಹೆಚ್ಚು ಶ್ರಮ ಕೇಳುತ್ತದೆ.

ರಾಜಕಾರಣದಲ್ಲಿ ಶ್ರಮಕ್ಕೆ ಉದಾಹರಣೆಯಾಗಿ ಈಗಷ್ಟೇ ಜರುಗಿದ ಉತ್ತರ ಪ್ರದೇಶದ ಚುಣಾವಣೆಯಲ್ಲಿನ ಬಿಜೆಪಿಯ ಗೆಲುವನ್ನೇ ಕೊಡುವೆ. ಬಿಹಾರದ ಚುನಾವಣೆಯಲ್ಲಿ ಬಿಜೆಪಿ ಸೋತು ಮುಖಭಂಗವಾಗಿ ಇದು ಪ್ರಧಾನಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಷಾ ಅವರಿಗೆ ಪಕ್ಷದ ಹೊರಗೂ ಒಳಗೂ ಜೀವನ್ಮರಣದ ಪ್ರಶ್ನೆಯಾದಾಗ ಆ ಸೋತ ಗಳಿಗೆಯಿಂದಲೇ ಇವರು ಉತ್ತರ ಪ್ರದೇಶದ ಮುಂಬರುವ ಚುನಾವಣೆಗೆ ಶ್ರಮ ಹಾಕುತ್ತಾರೆ. ಅಳಿವು ಉಳಿವಿನ ಪ್ರಶ್ನೆ ಎಂಬಂತೆ. ನೆನಪಿರಲಿ, ಚುನಾವಣೆಗೆ ಇನ್ನೂ ವರ್ಷ ಇರುವಾಗಲೇ ಒಂದು ಸಣ್ಣ ಬೂತ್ ಮಟ್ಟದಲ್ಲೂ ಸಾಮ, ದಾನ, ಭೇದ, ದಂಡ- ಹೀಗೆಲ್ಲಾ ಅವರು ಕುತಂತ್ರಗಳ ಶ್ರಮ ಹಾಕದಿದ್ದರೆ ಬಿಜೆಪಿ ಇಷ್ಟೊಂದು ಗೆಲ್ಲುತ್ತಿತ್ತೆ? ಅಥವಾ ಬಿಜೆಪಿ ಕಾರ್ಯಪ್ರವೃತ್ತವಾದ ಗಳಿಗೆಯಿಂದಲೇ ಎಸ್‍ಪಿ, ಬಿಎಸ್‍ಪಿ, ಕಾಂಗ್ರೆಸ್‍ಗಳೂ ಕೂಡ ಚುನಾವಣೆಗಾಗಿ ಅವರಂತೆಯೇ ಶ್ರಮ ಹಾಕಿದ್ದರೆ ಇವರಿಗೆ ಈ ಬಗೆಯ ಸೋಲು ಆಗುತ್ತಿತ್ತೆ? ಬಿಜೆಪಿ ತನ್ನ ಶ್ರಮಕ್ಕೆ ಫಲ ಪಡೆದಿದೆ. ಇದು ಒಳ್ಳೆಯದೋ ಕೆಟ್ಟದೋ ಆಮೇಲಿನ ಮಾತು. ಒಟ್ಟಿನಲ್ಲಿ ಶ್ರಮ ಹಾಕಿದೆ. ನಾವು ಈ ಶ್ರಮವನ್ನು ನೋಡುತ್ತಿಲ್ಲ. ಬದಲಾಗಿ ಆಕಾಶದಲ್ಲಿ ಮೋದಿವೇಷದ ಗಾಳಿಪಟ ಹಾರಿಸಿ ಗೆಲುವಿಗೆ ಇದು ಕಾರಣ ಎಂದು ಅವರು ಅಬ್ಬರಿಸುತ್ತಿರುವುದನ್ನಷ್ಟೆ ನೋಡುತ್ತಿದ್ದೇವೆ. ಮಾರಿಕೊಂಡ ಮಾಧ್ಯಮಗಳ ಮಾಯಜಾಲವೂ ಮಂಕುಬೂದಿ ಎರಚುತ್ತಿವೆ. ನಾವು ಈ ವಶೀಕರಣಕ್ಕೆ ಒಳಗಾದವರಂತೆ ಇದ್ದೇವೆ.
ಈ ರಾಜಕಾರಣವನ್ನು ನಾವು ನೋಡುವುದೇ ಬೇಡ. ಮಾಡಬಾರದ್ದನ್ನು ಮಾಡಿ ಗೆದ್ದ ಗೆಲುವು ಅದು. ಈ ಗೆಲುವು ನಮಗೆ ಗೆಲುವಲ್ಲ. ಹಾಗೆ ಆಡಳಿತ ಪಕ್ಷ ವಿರೋಧ ಪಕ್ಷ ಎಂಬ ಒಂದೇ ಡ್ರಾಮ ಕಂಪನಿಯಅದಲು ಬದಲು ರಾಜಕಾರಣವೂ ನಮ್ಮದಲ್ಲ. ಅವರ ಕುತಂತ್ರಕ್ಕೆ ನಾವು ಕುತಂತ್ರ ಮಾಡಬೇಕಿಲ್ಲ. ತಂತ್ರ ಮಾಡಬೇಕು. ಅವರು ಸಮಾಜದಲ್ಲಿ ಮಲಗಿರುವ ದ್ವೇಷ ಒಡಕುಗಳನ್ನು ಬಡಿದೆಬ್ಬಿಸಿ ರಾಜಕಾರಣ ಮಾಡಿದರೆ ನಾವು ಅದಕ್ಕೆ ಪ್ರತಿಕ್ರಿಯೆ ತೋರಿಸುತ್ತ ಕಳೆದುಹೋಗುತ್ತಿದ್ದೇವೆ. ಬದಲಾಗಿ ಸಮಾಜದಲ್ಲಿನ ಪ್ರೀತಿ, ಐಕ್ಯತೆ ಉದ್ದೀಪಿಸಿ ಸೌಹಾರ್ದತೆಗೆ ಶ್ರಮಿಸಬೇಕು. ಇಂದಿನ ರಾಜಕಾರಣ ಎಷ್ಟು ಪತನಗೊಂಡಿದೆ ಅಂದರೆ ‘ಚುನಾವಣಾ ಸಂದರ್ಭದಲ್ಲಿ ಒಬ್ಬ ಹಿಂದೂ ಕೊಲೆಯಾದರೆ ಅಲ್ಲಿ ಬಿಜೆಪಿ ಗೆದ್ದಂತೆ’ ಎಂಬ ಮಾತು ಚಾಲ್ತಿಯಲ್ಲಿರುವುದನ್ನು ಕೇಳಿದ್ದೇನೆ. ಜಾತಿ ಮತ ಇತ್ಯಾದಿ ಭಾವನಾತ್ಮಕತೆಗಳನ್ನು ಗೆಲ್ಲುವುದಕ್ಕಾಗಿ ಬಳಸಿಕೊಂಡರೆ ಅದು ಈ ಅಧಃಪತನಕ್ಕೆ ತಂದು ನಿಲ್ಲಿಸುತ್ತದೆ.ಈ ಗೆಲ್ಲುವ ಆಟದಲ್ಲಿ ಆಯಾಯ ಸಮುದಾಯದವರೇ ಅವರವರನ್ನೇ ಕೊಲ್ಲಿಸುವಲ್ಲಿಗೆ ಈ ಆಲೋಚನೆ ಕರೆದೊಯ್ಯಬಹುದು.ನೋಡಿದರೆ, ಇಂದಿನ ಮುಖ್ಯ ರಾಜಕೀಯ ಪಕ್ಷಗಳ ಚುನಾವಣಾ ಕಾರ್ಯವೈಖರಿಯು ಭೂಗತಜಗತ್ತಿನ ಚಟುವಟಿಕೆಗಿಂತಲೂ ಸ್ವಲ್ಪ ಹೆಚ್ಚು ಅನ್ನುವಂತಿದೆ. ಇಂಥಲ್ಲಿ ನಾವು ಇದುವರೆಗೂ ಶ್ರಮ ಪಡದೆ ಗೆಲುವು ಬಯಸುತ್ತಾ ಬಂದಿದ್ದೇವೆ. ಹಾಗಾಗಿ ಸೋಲುತ್ತಾ ಬಂದಿದ್ದೇವೆ.

ಹಾಗಾದರೆ ಗೆಲ್ಲುವುದಕ್ಕೆ ನಮ್ಮ ನಡಿಗೆ ಹೇಗಿರಬೇಕು? ಭ್ರಷ್ಟತೆ ಸಾಂಸ್ಥೀಕರಣಗೊಂಡು ಅದೇ ಸಹಜವೆನ್ನಿಸಿರುವ ಈ ಭೂಗತಜಗತ್‍ರಾಜಕಾರಣದಲ್ಲಿ ಗೆಲ್ಲುವುದು ಹೇಗೆ? ಉದಾಹರಣೆಗೆ- ನಾನೆ ಚುನಾವಣೆಗೆ ನಿಂತರೆ, ಇವ ಗೆಲ್ಲುವುದಿಲ್ಲ ಅಂತ ಜನರ ಮನಸಿನಲ್ಲಿರುವುದರಿಂದ ಠೇವಣಿ ಕಳೆದುಕೊಳ್ಳುತ್ತೇನೆ. ಆದರೆ, ನಾನು ಸ್ಪರ್ಧೆ ನೀಡುತ್ತಿದ್ದು ಮೂರನೆ ಸ್ಥಾನದಲ್ಲಿದ್ದೇನೆ ಎಂದು ಮತದಾರರಿಗೆ ಮನದಟ್ಟಾದರೆ, ಆಗ ಮತದಾರರು ತಾರ್ಕಿಕವಾಗಿ ಎರಡನೆ ಸ್ಥಾನಕ್ಕೆ ನಿಲ್ಲಿಸುವುದಿಲ್ಲ, ಬದಲಾಗಿ ಮಾಂತ್ರಿಕ ಗೆಲುವು ತಂದುಕೊಡುತ್ತಾರೆ. ಯಾಕೆಂದರೆ ನಾವು ನಮ್ಮ ಸಾಮಥ್ರ್ಯವನ್ನು ಇಷ್ಟು ಸಾಬೀತುಪಡಿಸಿದರೆ ಹವಾ(Wave) ಎಲ್ಲರಿಗಿಂತಹೆಚ್ಚು ನಮ್ಮ ಕಡೆಗೇ ಬೀಸುತ್ತದೆ. ಹಾಗಾಗಿ- ಹಣಬಲ, ತೋಳ್ಬಲ, ಹೆಂಡ ಆಮಿಷಗಳನ್ನು ಬಳಸದೆ ರಾಜಕಾರಣ ಮಾಡಬಯಸುವ ನಮಗೆ, ನಾವು ಚುನಾವಣಾ ಅಖಾಡದಲ್ಲಿ ಮೂರನೆ ಸ್ಥಾನದಲ್ಲಿದ್ದು ಸ್ಪರ್ಧೆ ಕೊಡುತ್ತಿದ್ದೇವೆಂದು ಮತದಾರರಿಗೆ ಮನದಟ್ಟಾಗಿಸಲು ದಾರಿಗಳನ್ನು ಹುಡುಕಬೇಕಾಗಿದೆ.

ನಮಗೂ ಒಂದು ದಾರಿ ಇದೆ. ಅದೆಂದರೆ, ಗ್ರಾಮ ಪಂಚಾಯ್ತಿ ಮತ್ತು ಸ್ಥಳೀಯ ಸಂಸ್ಥೆಗಳ  ಚುನಾವಣೆಯಲ್ಲಿ ನಮ್ಮ ಅಸ್ತಿತ್ವವನ್ನು ವ್ಯಾಪಕವಾಗಿ ಸ್ಥಾಪಿಸುವುದೇ ಅದಾಗಿದೆ. ಉದಾಹರಣೆಗೆ, ರಾಯಚೂರು ಜಿಲ್ಲೆಯಲ್ಲಿ ನವಜೀವನ ಮಹಿಳಾ ಒಕ್ಕೂಟ ಮತ್ತು ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆಗಳು ಒಗ್ಗೂಡಿ 474 ಗ್ರಾಮ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಿ 268 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. 5 ಪಂಚಾಯ್ತಿಗಳಲ್ಲಿ ಬಹುಮತ ಪಡೆದಿದ್ದಾರೆ. ಇವರ ನಿರ್ಮಾಣದ ಕಾರ್ಯವೈಖರಿಗೆ ನಿಧಾನಕ್ಕೆ ಇತರೆ ಸದಸ್ಯರೂಈ ಸಂಘಟನೆಗಳ ಜೊತೆಗೂಡುತ್ತಿದ್ದಾರೆ. ರಾಜಕಾರಣದ ವಾಸ್ತವಕ್ಕೆ ಹೀಗೆ ತಳಪಾಯ ಕಟ್ಟುವುದು ನಮಗೆ ದಾರಿಯಾಗಬೇಕು. ಹಾಗೇ ಎಲ್ಲಾ ಜನಾಂದೋಲನಗಳಿಗೂ ಕೂಡ. ಜನವಷ್ಟೇ ಅಲ್ಲ, ಆ ಜನಗಳ ಮತಗಳೂ ತಮಗಿವೆ ಎಂದಾದಾಗ ಮಾತ್ರವೇ ಜನಾಂದೋಲನಗಳ ಧ್ವನಿಗೂ ಸತ್ವ ಬರುತ್ತದೆ.

ಒಟ್ಟಿನಲ್ಲಿ ತಳಪಾಯದ ರಾಜಕಾರಣವನ್ನು ತಳಪಾಯ ಮಾಡಿಕೊಂಡೇ ನಾವು ಈ ಭೂಗತಜಗತ್‍ರಾಜಕಾರಣಕ್ಕೆ ಮುಖಾಮುಖಿಯಾಗಬೇಕಾಗಿದೆ. ಸಮಾಜದಲ್ಲಿ ಕುದಿಯುತ್ತಿರುವ ಕ್ಷೋಭೆ ಅಸಹನೆಗಳಿಗೆ ಮೂಲಕಾರಣವಾದ ನಿರುದ್ಯೋಗ, ತಾರತಮ್ಯ, ಅಸಮಾನತೆಗಳನ್ನು ನಿವಾರಣೆ ಮಾಡುವುದರ ಬದಲು, ಭೂಗತಜಗತ್‍ರಾಜಕಾರಣದ ಆಳ್ವಿಕೆಯು ನಿರುದ್ಯೋಗ, ತಾರತಮ್ಯ, ಅಸಮಾನತೆಗಳನ್ನು ಉಲ್ಬಣಿಸಿ ಸಮಸ್ಯೆಗಳನ್ನೇ ಗದ್ದಿಗೆಗೇರಲು ಬಳಸಿಕೊಳ್ಳುತ್ತಿರುವ ಈ ಅಧಃಪತನದ ಭೂಗತಜಗತ್‍ರಾಜಕಾರಣವನ್ನು ಭೂಮಿಮೇಲಕ್ಕೆ ತರಬೇಕಾಗಿದೆ.

ಇದಕ್ಕೆ ಆ ಪಕ್ಷ ಈ ಪಕ್ಷಗಳ ಅದಲು ಬದಲು,ಅಧಿಕಾರ-ಆಡಳಿತ ಬದಲಾವಣೆಮಾಡಿದರೆ ಸಾಲದು; ರಾಜಕಾರಣಕ್ಕೇನೇ ಹೊಸ ನಡಿಗೆ ಬೇಕು. ಹಾಗಾಗಿ ಸ್ವರಾಜ್ ಇಂಡಿಯಾ ಅನ್ವೇಷಣಾ (Innovative) ರಾಜಕಾರಣದತ್ತ ತನ್ನ ಹೆಜ್ಜೆಗಳನ್ನು ಇಡುತ್ತಿದೆ. ಈ ನಡೆಗೆ ಸಮಾಜದ ಎಲ್ಲಾ ಸಮುದಾಯ, ಕ್ಷೇತ್ರಗಳಿಂದಲೂ ನಾಳಿನ ರಾಜಕಾರಣದ ಯುವಜನತೆ ಹಾಗೂ ಮಹಿಳೆಯರು ನಾಯಕತ್ವ ವಹಿಸಿಕೊಳ್ಳಬೇಕಾಗಿದೆ. ಯಾವುದೇ ಕೇಂದ್ರೀಕರಣವು ಸರ್ವಾಧಿಕಾರಕ್ಕೆಡೆಮಾಡಿ ಅಧಿಕಾರವನ್ನು ವ್ಯಾಘ್ರ್ರನನ್ನಾಗಿಸುತ್ತದೆ. ಇದರ ಎದುರು ನಾವು ವಿಕೇಂದ್ರೀಕರಣದ ಪಾರಿವಾಳ ಹಾರಿಸಬೇಕಾಗಿದೆ.

ಹಾಗಾಗೆ ಇದು ಕಷ್ಟ. ನಿಜ. ಆದರೆ ಅಸಾಧ್ಯವಲ್ಲ. ಜನಾಂದೋಲನಗಳೂ ಜೊತೆಗೂಡಿಕೊಂಡು ಈ ದಿಕ್ಕಿನಲ್ಲಿ ನಡೆಯಬೇಕಾಗಿದೆ.ಇದನ್ನೆಲ್ಲಾ ಯಾರೋ ಹೋರಾಟಗಾರರು ಯಾವುದೋ ಪಕ್ಷದವರು ಮಾಡಬೇಕಾಗಿರುವ ಕೆಲಸ ಅಂದುಕೊಳ್ಳದೆ ಎಲ್ಲರೂ ತಮ್ಮದೂ ಕೂಡ ಎಂದು ಜೊತೆಗೂಡಿದರೆ, ಈ ಗಳಿಗೆಯಿಂದಲೇ ಕನಸು ವಾಸ್ತವವಾಗತೊಡಗುತ್ತದೆ.