ಮೊದಲ ದಲಿತ ಬಂಡಾಯ ಮಹಾಡ್ ಕಂಪನಗಳು – ದೇವನೂರ ಮಹಾದೇವ

[ಕ್ರಿಯಾ ಮಾಧ್ಯಮ ಪ್ರಕಾಶದಿಂದ ಪ್ರಕಟವಾದ ಡಾ.ಆನಂದ್ ತೇಲ್ತುಂಬ್ಡೆ ಪ್ರಕಟಿತ ‘ಮಹಾಡ್ ಕೆರೆ ಸತ್ಯಾಗ್ರಹ – ದಲಿತ ಚಳವಳಿಗಳ ಒರೆಗಲ್ಲು’ ಮತ್ತು ‘ಮಹಾಡ್ – ಮೊದಲ ದಲಿತ ಬಂಡಾಯ’– ಎಂಬ ಶೀರ್ಷಿಕೆಗಳ ಎರಡು ಪುಸ್ತಕಗಳ ಕನ್ನಡ ಅನುವಾದ ಕೃತಿಯನ್ನು ಡಿಸೆಂಬರ್ 19, 2020 ರಂದು ನಡೆದ ಆನ್ ಲೈನ್ ಸಭೆಯಲ್ಲಿ ದೇವನೂರ ಮಹಾದೇವ ಅವರು ಬಿಡುಗಡೆ ಮಾಡಿ ಆಡಿದ ಮಾತುಗಳ ಬರಹ ರೂಪ]

ನಿಜ ಹೇಳಬೇಕೆಂದರೆ, ಪ್ರೊ. ಆನಂದ್ ತೇಲ್ತುಂಬ್ಡೆ ಅವರ ಪುಸ್ತಕದ ಕನ್ನಡ ಅನುವಾದದ ಬಿಡುಗಡೆಗಾಗಿ ನನ್ನನ್ನು ಕೇಳಿದಾಗ, ಈಗ ತೇಲ್ತುಂಬ್ಡೆ ಬಂಧನದಲ್ಲಿರುವುದರಿಂದ ಇಲ್ಲ ಅನ್ನುವುದಕ್ಕೆ ಬಾಯಿ ಬರಲಿಲ್ಲ. ಜೊತೆಗೆ ಪುಸ್ತಕ, ಮಹಾಡ್ ಸತ್ಯಾಗ್ರಹದ ಬಗ್ಗೆ ಇರುವುದೂ ನನ್ನ ಸೆಳೆತಕ್ಕೆ ಕಾರಣವಾಗಿತ್ತು. ಆದರೆ, ವೆಬಿನಾರ್ ಇತ್ಯಾದಿ ನನಗೆ ಒಗ್ಗುವುದಿಲ್ಲ, ಐದಾರು ನಿಮಿಷ ಮಾತಾಡಿ ರೆಕಾರ್ಡ್ ಮಾಡಿಸಿ ಕಳಿಸುವೆ ಎಂದಾಗ ಪ್ರಕಾಶಕರು ಒಪ್ಪಿ ಪುಸ್ತಕಗಳನ್ನು ಕಳಿಸಿಕೊಟ್ಟರು.

ಪುಸ್ತಕದ ಎರಡು ಭಾಗಗಳೂ ಸೇರಿ ಸುಮಾರು 450 ಕ್ಕೂ ಹೆಚ್ಚು ಪುಟಗಳಷ್ಟಾಗುವ ‘ಮಹಾಡ್ ಕೆರೆಯ ಸತ್ಯಾಗ್ರಹ’ ಹಾಗೂ ‘ಮಹಾಡ್ – ಮೊದಲ ದಲಿತ ಬಂಡಾಯ’ ಕೃತಿಗಳನ್ನು ಓದಿದೆ. ಓದಿ ಮುಗಿಸಿದ ಮೇಲೆ ನಾನು ಬೆರಗಾದೆ. ಇದೊಂದು, ಒಮ್ಮೆಗೆ ಹತ್ತು ಡಾಕ್ಟರೇಟ್ ಕೊಟ್ಟರೂ ಇನ್ನೂ ಮಿಗಿಲಾದ ಬೆಲೆಯುಳ್ಳ ಸಂಶೋಧನಾ ಗ್ರಂಥ ಅನ್ನಿಸಿಬಿಟ್ಟಿತು. ಇಂಥಹ ಕೃತಿಗಳನ್ನು ಪ್ರಕಟಿಸುವ ಸಾಹಸ ಮಾಡಿದ ಕ್ರಿಯಾ ಮಾಧ್ಯಮ ಪ್ರಕಾಶನವನ್ನೂ ಹಾಗೂ ಇದು ಅನುವಾದವೇ ಅಲ್ಲ ಅನ್ನುವಷ್ಟು ಅನುರೂಪವಾಗಿ ಕನ್ನಡೀಕರಿಸಿದ ಗೆಳೆಯ ಅಬ್ದುಲ್ ರೆಹಮಾನ್ ಪಾಷಾ ಅವರನ್ನೂ ಅಭಿನಂದಿಸುವೆ.

ಈ ಕೃತಿಯಲ್ಲಿ ಸಂಶೋಧನೆ ಅಂದರೆ, ಇಲ್ಲಿ ಹೇಗಿದೆ ಎಂದರೆ ಗತಕಾಲದ ಮಹಾಡ್ ಘಟನೆಯ ತಳ ಮುಟ್ಟಿ, ಅದರ ಆಳ-ಅಗಲ ಅದರ ವಿಸ್ತಾರವನ್ನು ಮುಟ್ಟಿಮುಟ್ಟಿ ನೋಡುತ್ತಾ ಅದಕ್ಕೆ ಜೀವ ತಂದು ಕೊಟ್ಟು ಬಿಡುತ್ತಾರೆ ಡಾ.ತೇಲ್ತುಂಬ್ಡೆ. ಒಂದು ಕಡೆ ಮಾತ್ರ ಅದು ಲೆಜಂಡ್ರಿ ಅಯ್ಯನ್ ಕಾಳಿಯವರೊಡನೆ ಮಹಾಡ್ ಹೋರಾಟವನ್ನು ಹೋಲಿಕೆ ಮಾಡುವಲ್ಲಿ ಮಾತ್ರ ತೇಲ್ತುಂಬ್ಡೆ ಅವರ ವಿಶ್ಲೇಷಣೆಯನ್ನು ಒಪ್ಪುವುದಕ್ಕೆ ನನಗೆ ಕಷ್ಟ ಎನ್ನಿಸಿತು.

ಮಹಾಡ್ ಸತ್ಯಾಗ್ರಹದಲ್ಲಿ ಮುಖ್ಯ ಸಂಘಟಕರಾದ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಡಾ.ಅಂಬೇಡ್ಕರ್ ಅವರು ಹೋರಾಟದ ನೇತೃತ್ವ ವಹಿಸುವಂತಾಗಲು ಕಾರಣರಾದ ಶ್ರೀ ಆರ್.ಬಿ.ಮೋರೆಯವರು ಆ ಮಹಾಡ್ ಘಟನೆಯ ಬಗ್ಗೆ ಕೇವಲ 33 ಪುಟಗಳ ಅನುಭವ ಕಥನವನ್ನು ಮರಾಠಿಯಲ್ಲಿ ಬರೆಯುತ್ತಾರೆ. ಇದು ಇಂಗ್ಲೀಷ್‍ಗೆ ಅನುವಾದ ಆದಾಗ ಇದಕ್ಕೊಂದು ಮುನ್ನುಡಿಗಾಗಿ ಅದು ಆನಂದ್ ತೇಲ್ತುಂಬ್ಡೆಯವರ ಸಂಶೋಧನಾ ಅಖಾಡಕ್ಕೆ ತಲುಪುತ್ತದೆ. ಇದಕ್ಕೆ ತೇಲ್ತುಂಬ್ಡೆಯವರ ಮುನ್ನುಡಿ, ಹಿನ್ನುಡಿ, ಹಿನ್ನಲೆಗಳನ್ನೊಳಗೊಂಡ ಅವರ ಬರವಣಿಗೆ ಎಷ್ಟು ದೀರ್ಘವಾಗುತ್ತದೆ ಎಂದರೆ ಆ ಗ್ರಂಥದ ಪುಟಗಳ ಗಾತ್ರ 33 ಪುಟದಿಂದ ಸುಮಾರು 450 ಪುಟಗಳಿಗೆ ಚಿಮ್ಮುತ್ತದೆ. ಅಲ್ಲಿ ತೇಲ್ತುಂಬ್ಡೆ ಮಹಾಡ್ ಸತ್ಯಾಗ್ರಹವನ್ನು ಜಾಗತಿಕ ಆಂದೋಲನಗಳ ಇತಿಹಾಸದಲ್ಲಿಟ್ಟು ತೂಕ ಮಾಡುತ್ತಾರೆ. ಈ ಗ್ರಂಥದ ಪುಟಪುಟಗಳಲ್ಲೂ ಆ ಕಾಲದ ಉಲ್ಲೇಖಗಳು, ಟಿಪ್ಪಣಿಗಳು, ಡೈರಿ ದಾಖಲಾತಿ, ಸರ್ಕಾರದ ಗೌಪ್ಯವರದಿಗಳು, ಪತ್ರಿಕಾ ವರದಿಗಳು, ಠರಾವುಗಳು, ಯಥಾವತ್ ಭಾಷಣಗಳು, ಭಾಗವಹಿಸಿದ ವ್ಯಕ್ತಿ/ಸಂಘಟನೆಗಳ ಪರಿಚಯಗಳು, ಆ ಸಂದರ್ಭದಲ್ಲಿ ನಡೆದ ಮಾತುಕತೆಗಳು, ಕೋರ್ಟ್ ಆಜ್ಞೆಯ ವಿವರಗಳು, ಅಂದಿನ ಜನ ಜೀವನದ ರೀತಿ ರಿವಾಜು ಆಲೋಚನೆಗಳು.. ಹೀಗೆ ಹೀಗೆ ಎಲ್ಲವೂ ಇಲ್ಲಿ ಅಡಕವಾಗಿದೆ. ಹೇಳುವುದಾದರೆ, ತೇಲ್ತುಂಬ್ಡೆ ಅಲ್ಲ, ಇಲ್ಲಿ ದಾಖಲೆಗಳು ಮಾತಾಡುತ್ತವೆ. ಇಂತಹ ಪ್ರಕಾರ ಗೊತ್ತಿಲ್ಲದ ನನಗೆ ಇದೊಂದು ವಿಸ್ಮಯವೆ.

1927, ಮಾರ್ಚ್ 20. ಅಂದು ಅಂಬೇಡ್ಕರ್ ಅವರು ಮಹಾಡ್‍ನ ಚಾವದಾರ್ ಕೆರೆಯ ನೀರನ್ನು ಸ್ಪರ್ಶಿಸಿ ಆ ನೀರನ್ನು ಕುಡಿಯುತ್ತಾರೆ. ಆ ಒಂದು ಕ್ರಿಯೆಯಲ್ಲಿ ಆಗ ಎದ್ದ ಅಲೆಗಳು ಇನ್ನೂ ಇಂದಿಗೂ ಭಾರತದಲ್ಲಿ ಅಪ್ಪಳಿಸುತ್ತಲೇ ಇವೆ. ಈ ಸಂದರ್ಭದಲ್ಲಿ ದಲಿತರ ಮೇಲೆ ನಡೆದ ಹಲ್ಲೆಯನ್ನು ಪ್ರತಿಭಟಿಸಲು ಹಾಗೂ ಸತ್ಯಾಗ್ರಹವನ್ನು ಮುಂದುವರಿಸಲು 1927ರ ಡಿಸೆಂಬರ್ ಕೊನೆಯ ವಾರದಲ್ಲಿ ಸತ್ಯಾಗ್ರಹವನ್ನು ಹಮ್ಮಿಕೊಂಡಾಗ, ಕೆಲವು ಜಾತಿವಾದಿಗಳು ಚಾವದಾರ್ ಕೆರೆ ಖಾಸಗಿ ಆಸ್ತಿ ಎಂದು ವಿತಂಡವಾದ ಮಾಡಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಬಿಡುತ್ತಾರೆ. ಆಗ ಆ ಸತ್ಯಾಗ್ರಹವು, ಮೆರವಣಿಗೆ ಸಮಾವೇಶವಾಗಿ ಬದಲಾವಣೆಯಾಗುತ್ತದೆ. ಹತ್ತು ಸಹಸ್ರಕ್ಕೂ ಹೆಚ್ಚಾಗಿ ಸೈನಿಕರೇನೊ ಎಂಬಂತೆ ಶಿಸ್ತಾಗಿ ದೃಢನಿರ್ಧಾರದಿಂದ ದಲಿತ ಸಮುದಾಯ ಆ ಸಮಾವೇಶದಲ್ಲಿ ಭಾಗವಹಿಸುತ್ತಾರೆ. ಆ ಸಮಾವೇಶ ಮೂರ್ನಾಲ್ಕು ದಿನಗಳ ಕಾಲ ಜರುಗುತ್ತದೆ. ಇಲ್ಲೇ, ಈ ಸಮಾವೇಶದಲ್ಲೆ ಮನುಸ್ಮೃತಿಯ ಶವ ಸಂಸ್ಕಾರದ ವಿಧಿಗಳನ್ನು ಅಸ್ಪೃಶ್ಯ ವರ್ಗದ ಸಂತರು ಮತ್ತು ಸನ್ಯಾಸಿಗಳು ನಡೆಸಿಕೊಡುತ್ತಾರೆ. ಇದಾದ ಮೇಲೆ ಮನುಸ್ಮೃತಿಯ ಅಮಾನವೀಯ ಭಾಗಗಳನ್ನು ಸುಡಲಾಗುತ್ತದೆ. “ಉದ್ದೇಶಿತ ಸತ್ಯಾಗ್ರಹವು ಚಾವ್‍ದಾರ್ ಕೆರೆಯ ಬಳಿ ನಡೆಯದೇ ಇದ್ದರೂ, ಸಮ್ಮೇಳನವು ಮನುಸ್ಮೃತಿಯನ್ನು ಸುಡುವುದರಲ್ಲಿ ಮತ್ತು ಆ ಮೂಲಕ ಸಾಂಕೇತಿಕವಾಗಿ ಜಾತಿವ್ಯವಸ್ಥೆಯ ಸೈದ್ಧಾಂತಿಕ ಮೂಲವನ್ನೇ ನಿರಾಕರಿಸುವುದರಲ್ಲಿ ಯಶಸ್ವಿಯಾಯಿತು”. ಆ ಅಂದು ಮನುಸ್ಮೃತಿಯನ್ನು ಸುಟ್ಟ ಬೆಂಕಿ ಈಗಲೂ ಸುಡುತ್ತಾ ಭಾರತದ ಉದ್ದಗಲಕ್ಕೂ ಉರಿಯುತ್ತಿದೆ. ಇಲ್ಲೆ ಈ ಸಮಾವೇಶದಲ್ಲಿ ಫ್ರೆಂಚ್ ಕ್ರಾಂತಿಯ ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಬೀಜಗಳನ್ನು ನೆಡಲಾಗುತ್ತದೆ.

ಮಹಾಡ್ ಘಟನೆಯು ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಹಬ್ಬುತ್ತದೆ. ಭಾರತದ ಉದ್ದಗಲಕ್ಕೂ ಚಾಚುತ್ತದೆ. ಮಹಾಡ್‍ನ ತರಂಗಗಳು ಅಸ್ಪೃಶ್ಯರಿಗೆ ಸ್ವಾಭಿಮಾನ, ಆತ್ಮವಿಶ್ವಾಸ ತಂದುಕೊಡುತ್ತದೆ. ಇದು ಎಷ್ಟು ಪರಿಣಾಮ ಬೀರಿತು ಎಂದರೆ ಸಮ್ಮೇಳನದ ನಾಲ್ಕನೆ ದಿನ, ಅಲ್ಲಿ ಭಾಗವಹಿಸಿದ್ದ ಮಹಿಳೆಯರು ಜಾತಿ ಸೂಚಕವಾಗಿದ್ದ ತಮ್ಮ ಬಟ್ಟೆ ಉಡುವ ಶೈಲಿಯನ್ನು ಬದಲಾಯಿಸಿಕೊಂಡಿದ್ದರು. ಪುರುಷರೂ ಕೂಡ ಜಾತಿ ಸೂಚಕವಾಗಿ ತಮ್ಮ ಕೈ ಮತ್ತು ಕಿವಿಗಳಿಗೆ ಧರಿಸುತ್ತಿದ್ದ ಒಡವೆಗಳನ್ನು ತೆಗೆದುಬಿಟ್ಟರು. ಮಹಾಡ್ ಮುನಿಸಿಪಾಲಿಟಿಯಲ್ಲಿ ಝಾಡಮಾಲಿಗಳಾಗಿ ನೇಮಿಸಲ್ಪಟ್ಟಿದ್ದವರು ತಮ್ಮ ಕೆಲಸಕ್ಕೆ ರಾಜಿನಾಮೆ ಕೊಟ್ಟರು. ಇವಿಷ್ಟೇ ಅಲ್ಲ, “ಸಮಾಜದಲ್ಲಿನ ತಮ್ಮ ಸ್ಥಾನವು ತಮ್ಮ ವಿಧಿಯೆಂಬ ಭಾವನೆಯನ್ನು ಮನಸ್ಸಿನಲ್ಲಿ ಬೇರೂರಿಸಿಕೊಂಡಿರುವ ಅಸ್ಪೃಶ್ಯರ ಜಡತ್ವವನ್ನು ಗಮನದಲ್ಲಿರಿಸಿಕೊಂಡು ನೋಡುವುದಾದರೆ ಈ ಬದಲಾವಣೆಯನ್ನು ಗೌಣವಾಗಿ ಕಾಣುವಂತಿಲ್ಲ. ಕೊಂಕಣ್ ಪ್ರದೇಶದ ಹಲವು ಗ್ರಾಮಗಳಲ್ಲಿ ಮಹಾರ್‍ರು ಅನ್ನಕ್ಕಾಗಿ ಭಿಕ್ಷೆ ಬೇಡುವುದನ್ನು ನಿಲ್ಲಿಸಿದ್ದರು, ಸತ್ತ ಪ್ರಾಣಿಗಳನ್ನು ಎಳೆದೊಯ್ಯುವುದು ಮತ್ತು ಅವುಗಳ ಚರ್ಮವನ್ನು ಸುಲಿಯುವುದನ್ನು ನಿಲ್ಲಿಸಿದ್ದರು, ಸಾಂಪ್ರದಾಯಿಕ ವೇತ್‍ಬೇಗಾರಿಯನ್ನು (ಅಂದರೆ ಗ್ರಾಮದವರು ನಿಗದಿಪಡಿಸಿದ, ಸಂಭಾವನೆಯಿಲ್ಲದೆ ಮಾಡುವ ತಮ್ಮ ಕೆಲಸಗಳನ್ನು) ನಿರಾಕರಿಸಿದ್ದರು, (ನಿಮ್ನ ಜಾತಿಯ ಕೆಲಸಗಾರ, ಎಂದರೆ) ಮಾಹಾರ್‍ಕಿ ಎಂಬುದನ್ನು ಬಿಟ್ಟಿದ್ದರು; ಇವೆಲ್ಲವುಗಳ ಮೂಲಕ ತಮ್ಮ ಮಹತ್ವದ ಬಗ್ಗೆ ಸವರ್ಣೀಯರ ಕಣ್ತೆರಿಸಿದ್ದರು. ಇದೆಲ್ಲಾ ಮಾಡುವಾಗ ಹಲವು ಸ್ಥಳಗಳಲ್ಲಿ ಬಹಿಷ್ಕಾರ ಮತ್ತು ದೈಹಿಕ ಹಲ್ಲೆಗಳ ರೂಪದಲ್ಲಿ ದುಷ್ಪರಿಣಾಮಗಳನ್ನೂ ಎದುರಿಸಿದರು ಮತ್ತು ಅವುಗಳನ್ನೆಲ್ಲಾ ಅವರು ದೃಢ ಮನಸ್ಸಿನಿಂದ ಸಹಿಸಿಕೊಂಡರು ಎನ್ನುವ ಮಾತೂ ನಿಜ” – ಇಂಥ ಬದಲಾವಣೆಗಳು ವ್ಯಾಪಕವಾಗಿ ಜರುಗುತ್ತವೆ.

ಇನ್ನೊಂದು ಕಡೆ, ಅಲ್ಲೊಬ್ಬ ಇಲ್ಲೊಬ್ಬ ಸವರ್ಣೀಯ ಪ್ರಜ್ಞಾವಂತರು ಭಾಗವಹಿಸಿದ್ದರೂ ಅದು ಎದ್ದು ಕಾಣುತ್ತಿತ್ತು. ಅದೇ ಸಭೆಯಲ್ಲಿ ಮಹಾಡ್ ಮುನಿಸಿಪಾಲಿಟಿಯ ಅಧ್ಯಕ್ಷರಾಗಿದ್ದ ಕಾಯಸ್ಥ ಪಂಗಡಕ್ಕೆ ಸೇರಿದ ಶ್ರೀ ಸುರೇಂದ್ರನಾಥ್ ಟಿಪ್ಣೀಸ್ ಅವರು “ಅಸ್ಪೃಶ್ಯರಿಗೆ ಚಾವದಾರ್ ಕೆರೆಗೆ ಹೋಗುವ ಅನುಮತಿ ಸಿಗುವವರೆಗೆ ತಾನೂ ಅದರ ನೀರನ್ನು ಕುಡಿಯುವುದಿಲ್ಲ’ ಎಂದು ಘೋಷಿಸುತ್ತಾರೆ. ಇನ್ನೊಂದು ಮುಖ್ಯವಾದ ಸಂಗತಿ ಎಂದರೆ ಈ ಮಹಾಡ್ ಸತ್ಯಾಗ್ರಹದ ಸಮ್ಮೇಳನದ ಸಿದ್ಧತೆಯ ಜವಾಬ್ದಾರಿಯನ್ನು ಚಂದ್ರಸಾನಿ ಕಾಯಸ್ಥ ಪ್ರಭು (ಸಿಕೆಪಿ) ಪಂಗಡಕ್ಕೆ ಸೇರಿದ ಶ್ರೀ ಅನಂತ ವಿನಾಯಕ ಚಿತ್ರೆಯವರಿಗೆ ವಹಿಸಿಕೊಡಲಾಗಿತ್ತು. ಅವರ ಶರೀರ ನೋಡುವುದಕ್ಕೆ ಪುಟ್ಟ ಬಡಕಲು ದೇಹ, ಆದರೆ ಆತ ಶಕ್ತಿಯ ಖಜಾನೆ. ಅಂಬೇಡ್ಕರ್ ಬಹಿಷ್ಕೃತ್ ಭಾರತದಲ್ಲಿ “ಮುಂಚೂಣಿ ಯೋಧ” ಎಂದು ಅವರನ್ನು ಬಣ್ಣಿಸುತ್ತಾರೆ.

ಒಟ್ಟಿನಲ್ಲಿ ಮಹಾಡ್ ಘಟನೆ ದಲಿತರ ಒಳಗೂ ಹಾಗೂ ದಲಿತೇತರರ ಒಳಗೂ ಬದಲಾವಣೆಯ ಬಿರುಗಾಳಿ ಎಬ್ಬಿಸಿತ್ತು. ಅಷ್ಟೆ ಅಲ್ಲ ಆಡಳಿತದ ಮೇಲೂ ತನ್ನ ಪ್ರಭಾವ ಬೀರಿತ್ತು. ತಡೆಯಾಜ್ಞೆ ನೀಡಿದ್ದ ನ್ಯಾಯಾಧೀಶರಿಗೂ ಒಳಗಣ್ಣು ತೆರೆಸಿತ್ತು. ಬಾಂಬೆ ಕ್ರೋನಿಕಲ್ ಪತ್ರಿಕೆಯ ಇಸವಿ 1928, ಮಾರ್ಚ್ ತಿಂಗಳು, 3ನೇ ತಾರೀಖಿನ ಸಂಚಿಕೆಯಲ್ಲಿ “ತಡೆಯಾಜ್ಞೆ ನೀಡಿದ್ದರ ಬಗ್ಗೆ ಮ್ಯಾಜಿಸ್ಟ್ರೇಟ್ ವಿಷಾದ” ಎಂಬ ಶೀರ್ಷಿಕೆ ಅಡಿಯಲ್ಲಿ ಒಂದು ಸುದ್ದಿ ಪ್ರಕಟವಾಗುತ್ತದೆ. ಅದರಲ್ಲಿ ತಡೆಯಾಜ್ಞೆ ನೀಡಿದ್ದ ಜಡ್ಜ್ ಅವರು – “ನಾನು ಮಂಜೂರು ಮಾಡಿದ ತಡೆಯಾಜ್ಞೆಯಿಂದಾಗಿ (ದಲಿತ) ಪ್ರತಿವಾದಿಗಳಿಗೆ ಆದ ಅನಾನುಕೂಲ ಮತ್ತು ಕಷ್ಟಗಳಿಗೆ ನನ್ನ ವಿಷಾದವನ್ನು ವ್ಯಕ್ತಪಡಿಸದೇ ನಾನು ಈ ಆದೇಶವನ್ನು ಮುಕ್ತಾಯಗೊಳಿಸಲಾರೆ. ಅದು (ತಡೆಯಾಜ್ಞೆ) ತಾತ್ಕಾಲಿಕವಾಗಿದ್ದರೂ, ಈಗಾಗಲೇ ಅತ್ಯಂತ ಕ್ರೂರ ಮತ್ತು ಅನ್ಯಾಯದ ಸಾಮಾಜಿಕ ತಪ್ಪಿನ ಅಡಿಯಲ್ಲಿ ತತ್ತರಿಸುತ್ತಿರುವ ಸಮುದಾಯದ ಮೇಲೆ ಇನ್ನೊಂದು ತಪ್ಪನ್ನು ಹೇರುವಲ್ಲಿ ಕಾರಣವಾದ ನಾನು, ನೀಡಿದ್ದ ತಡೆಯಾಜ್ಞೆಯನ್ನು ರದ್ದು ಮಾಡುತ್ತಿದ್ದೇನೆ” ಹೀಗೆ ಮಹಾಡ್ ಘಟನೆ ಎಲ್ಲಾ ಕಡೆ ಕಲಕಿತ್ತು ಎನ್ನುವುದಕ್ಕೆ ಸಾಕ್ಷಿಯಾಗೂ ಉಳಿಯುತ್ತದೆ.

ಆಮೇಲೆ ಅಂಬೇಡ್ಕರ್‍ರವರ ಅಂತರಂಗದಲ್ಲಿ ಮಹಾಡ್ ಅನುಭವ ಎಬ್ಬಿಸಿದ ಕಂಪನಗಳು ಅವರ ಮುಂದಿನ ಹೆಜ್ಜೆಗಳನ್ನು ನಿರ್ಧರಿಸುವುದರಲ್ಲಿ ಭೂಮಿಕೆಯಾಗುತ್ತವೆ ಎಂದೂ ಅನ್ನಿಸುತ್ತದೆ. ಯಾಕೆಂದರೆ, ಮಹಾಡ್ ಸತ್ಯಾಗ್ರಹದ ನಂತರ ಅಂಬೇಡ್ಕರ್ ಅವರು ಹಿಂದೂ ಧರ್ಮವನ್ನು ತ್ಯಜಿಸುವ ಮಾತುಗಳನ್ನಾಡತೊಡಗಿದರು. ಇದರ ಪರಿಣಾಮ ಹೇಗಿತ್ತೆಂದರೆ – ‘ಪಟುರ್ದಾದಲ್ಲಿ ಸವರ್ಣೀಯರು ತಮ್ಮ ನಾಲ್ಕು ಬಾವಿಗಳನ್ನು ಅಸ್ಪೃಶ್ಯರಿಗಾಗಿ ತೆರೆದರು. ಸ್ನೇಹಕೂಟಕ್ಕೆ ಬನ್ನಿರೆಂದು ಕರೆಯ ತೊಡಗಿದರು. ಆದರೆ ಅಲ್ಲಲ್ಲಿ ಸ್ಥಳೀಯವಾದ ಕೆಲವು ಪ್ರತಿಕ್ರಿಯೆಗಳನ್ನು ಬಿಟ್ಟರೆ ಅದು ಹೆಚ್ಚು ವ್ಯಾಪಕವಾದ ಪರಿಣಾಮ ಬೀರಲಿಲ್ಲ. ಇದಾದ ನಂತರ ಬಹಳ ಬೇಗನೇ ಅಂಬೇಡ್ಕರ್ ರಾಜಕೀಯದ ಕಡೆ ತಮ್ಮ ಲಕ್ಷ್ಯವನ್ನು ಬದಲಾಯಿಸಿದರು. ಮುಂದೆ ಅಂಬೇಡ್ಕರ್, ಮಹಾನಾಯಕ ಅಂಬೇಡ್ಕರ್ ಆಗಿ ಬೆಳೆದು ನಿಲ್ಲುವಂತಾಗಲು ಈ ಮಹಾಡ್ ಬಿತ್ತನೆ ಕಾರಣವೆನ್ನಬಹುದು.

ಈ ಗ್ರಂಥವನ್ನು ಓದಿ ಮುಗಿಸಿದ ಮೇಲೆ, ಸಮಾಜವನ್ನು ಮುನ್ನಡೆಸಲು ಹೋರಾಟ ಮಾಡುವ ಹೋರಾಟಗಾರರಿಗೆ, ಒಂದು ಹೋರಾಟವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂದು ನೋಡಲು ಈ ಗ್ರಂಥ ಕಲಿಸುತ್ತದೆ, ಹಾಗೇ ಸಂಶೋಧನ ವಿದ್ಯಾರ್ಥಿಗಳು ತಾವು ಸಂಶೋಧನೆಯನ್ನು ಕೈಗೊಳ್ಳುವ ಮುನ್ನ ಈ ಕೃತಿಯನ್ನು ಪಠ್ಯವಾಗಿ ಅಧ್ಯಯನ ಮಾಡಿದರೆ ಅದು ಅವರನ್ನು ಕೈಹಿಡಿದು ಮುನ್ನಡೆಸುತ್ತದೆ ಎಂದನ್ನಿಸಿತು.

ಕೊನೆಗೆ ನನ್ನ ಮನಸ್ಸಲ್ಲಿ ಆನಂದ್ ತೇಲ್ತುಂಬ್ಡೆ ಮುಖ ಗೋಚರಿಸಿತು. ಈತ ಕಠೋರ ಸತ್ಯವಂತ, ನ್ಯಾಯವಂತ, ಪ್ರಮಾಣಿಕ ಹಾಗೂ ಮಹಾನ್ ಸಂಶೋಧಕ ಅನ್ನಿಸಿತು. ಬಹುಶಃ ಈ ಗುಣಗಳು ಆಳ್ವಿಕೆಯ ಕಣ್ಣುಗಳಿಗೆ ಚುಚ್ಚುತ್ತವೇನೊ! ಅದಕ್ಕಾಗಿ ಅವರು ಮತ್ತು ಅವರಂಥಹ ಗುಣದವರು ಬಂಧನದಲ್ಲಿದ್ದಾರೇನೋ – ಈ ವಿಷಾದ ನನ್ನೊಳಗೆ ಆವರಿಸಿಕೊಂಡಿತು.