ಮೇ 16 ‘ನ್ಯಾಯದ ದಿನ’ವಾಗಿ ಆಚರಿಸೋಣ ಬನ್ನಿ -ದೇವನೂರ ಮಹಾದೇವ

[ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಡಾ.ಆನಂದ್ ತೇಲ್ತುಂಬ್ಡೆ ಮತ್ತಿತರ ಚಿಂತಕರನ್ನು ಅನ್ಯಾಯದಿಂದ ಬಂಧಿಸಿರುವುದನ್ನು ವಿರೋಧಿಸಿ, ಬಿಡುಗಡೆಗೆ ಆಗ್ರಹಿಸಿ 16 ಮೇ 2020,ರ ದಿನವನ್ನು “ನ್ಯಾಯದ ದಿನ”ವಾಗಿ ಆಚರಿಸಲು ರಾಷ್ಟ್ರದ 35 ಚಿಂತಕರನ್ನೊಳಗೊಂಡ ತಂಡವು ದೇಶಾದ್ಯಂತದ ಪ್ರಜ್ಞಾವಂತರನ್ನು ಮನವಿ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿಗಳಾದ ದೇವನೂರ ಮಹಾದೇವ ಅವರ ಚಾಲನೆಯ ಮಾತುಗಳು ಇಲ್ಲಿವೆ.]
                                                             
ಸ್ನೇಹಿತರೇ, ಡಾ. ಆನಂದ್ ತೇಲ್ತುಂಬ್ಡೆಯವರು ಬಂಧನಕ್ಕೆ ಒಳಗಾಗಿ ಒಂದು ತಿಂಗಳು ಮುಗಿಯಿತು. ತೇಲ್ತುಂಬ್ಡೆಯವರು ನ್ಯಾಯದ ರಾಷ್ಟ್ರೀಯ ಸಂಕೇತ, ನ್ಯಾಯದ ಪ್ರತಿರೂಪ ಎಂದು ಹೆಸರಾದವರು, ಎಲ್ಲಾ ಬಗೆಯ ಶೋಷಣೆ, ಮೌಢ್ಯ, ಹಿಂಸೆ ವಿರುದ್ಧ ದನಿಯೆತ್ತಿದವರು. ಇಂತಹ ವ್ಯಕ್ತಿಯೇ ಇಂದು ಅನ್ಯಾಯದ ವ್ಯವಸ್ಥೆಗೆ ಬಲಿಯಾಗಿದ್ದಾರೆ. ಬಂಧಿಯಾಗಿದ್ದಾರೆ. ಇದು ದೊಡ್ಡ ದುರಂತ.
ತೇಲ್ತುಂಬ್ಡೆಯವರು ತಮ್ಮ ಬಂಧನಕ್ಕೂ ಮುನ್ನ ನಾಡಿನ ಜನತೆಗೆ ಒಂದು ಬಹಿರಂಗ ಪತ್ರವನ್ನು ಬರೆಯುತ್ತಾರೆ. ಆ ಪತ್ರದ ಕೊನೆಯ ಸಾಲುಗಳನ್ನು ನಾನಿಲ್ಲಿ ಓದುತ್ತಿರುವೆ.
ಈಗ ಆನಂದ ತೇಲ್ತುಂಬ್ಡೆಯವರ ಮಾತುಗಳನ್ನು ಕೇಳಿಸಿಕೊಳ್ಳೋಣ:
“ಇಂದು ರಾಜಕೀಯ ಮಾತುಗಾರಿಕೆ ಮೂಲಕ ಆಡಂಬರದ ದೇಶಭಕ್ತಿ ಮತ್ತು ರಾಷ್ಟ್ರೀಯತೆಯನ್ನು ಆಯುಧೀಕರಣಗೊಳಿಸಲಾಗಿದೆ. ಈ ರಾಜಕೀಯ ಮಾತುಗಾರಿಕೆಯನ್ನೇ ಬಳಸಿಕೊಂಡು ಭಿನ್ನಮತೀಯ ದನಿಗಳನ್ನು ನಾಶಮಾಡಲಾಗುತ್ತಿದೆ ಹಾಗೂ ಜನರನ್ನು ಧ್ರುವೀಕರಿಸಲಾಗುತ್ತಿದೆ.
ಈ ಸಮೂಹ ಸನ್ನಿಯ ಉನ್ಮಾದವು ಈವರೆಗಿನ ಎಲ್ಲಾ ನಂಬಿಕೆಗಳನ್ನು ತಲೆಕೆಳಗು ಮಾಡುತ್ತಿದೆ. ಇಂದು ದೇಶವನ್ನು ಧ್ವಂಸ ಮಾಡುತ್ತಿರುವವರೇ ದೇಶಭಕ್ತರೆನ್ನಿಸಿಕೊಳ್ಳುತ್ತಿದ್ದಾರೆ. ನಿಸ್ವಾರ್ಥದಿಂದ ಸೇವೆ ಮಾಡುತ್ತಿರುವವರು ದೇಶದ್ರೋಹಿಗಳಂತೆ ಬಿಂಬಿತವಾಗುತ್ತಿದ್ದಾರೆ.
ಹೀಗೆ, ನನ್ನ ಭಾರತವು ಅಧಃಪತನದೆಡೆಗೆ ಸಾಗುತ್ತಿರುವುದನ್ನು ನೋಡುತ್ತಿರುವಾಗಲೂ ಒಂದು ಸಣ್ಣ ಭರವಸೆಯೊಂದಿಗೆ ನಾನು ಇದನ್ನು ಹೇಳುತ್ತಿದ್ದೇನೆ.- ಆಯ್ತು, ಇನ್ನು ನಾನು ಎನ್.ಐ.ಎ. ಕಸ್ಟಡಿಯಲ್ಲಿ ಇರುತ್ತೇನೆ. ನಿಮ್ಮೊಂದಿಗೆ ಮರಳಿ ಯಾವಾಗ ಮಾತನಾಡಬಲ್ಲೆ ಎಂಬುವುದು ಗೊತ್ತಿಲ್ಲ. ಅದರೆ, ನಿಮ್ಮ ಸರಧಿ ಬರುವುದಕ್ಕಿಂತ ಮೊದಲು ನೀವು ಮಾತನಾಡಬೇಕೆಂದು ಕಳಕಳಿಯಿಂದ ಮನವಿ ಮಾಡುತ್ತೇನೆ”
– ಇವಿಷ್ಟು ತೇಲ್ತುಂಬ್ಡೆಯವರ ಮಾತುಗಳು. ಈಗ ಬಂಧನಕ್ಕೆ ಒಳಗಾಗಿರುವ ತೇಲ್ತುಂಬ್ಡೆಯವರು ಜಗತ್ತಿನಾದಾದ್ಯಂತ ಶೋಷಣೆ ಮತ್ತು ಅನ್ಯಾಯದ ವಿರುದ್ಧ ದನಿಯಾದ ಕಾರಣಕ್ಕಾಗೇ ಬಂಧನಕ್ಕೆ ಒಳಗಾಗಿದ್ದಾರೆ. ಹಾಗಾಗೇ ಜಿಜ್ಞಾಸುಗಳು, ಚಿಂತಕರು, ಕಲಾವಿದರು, ಕಾರ್ಯಕರ್ತರು, ಮುಖಂಡರುಗಳು ಹಾಗೂ ನಾಗರೀಕ ಹಕ್ಕುಗಳ ಸಂಘಟನೆಗಳು ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ತೇಲ್ತುಂಬ್ಡೆ ಬಂಧನದ ವಿರುದ್ಧ ಧ್ವನಿ ಎತ್ತಿದ್ದಾರೆ. ಈಗ ನಾವೂ ದನಿಗೂಡಿಸಬೇಕಾಗಿದೆ. “ನಿಮ್ಮ ಸರದಿ ಬರುವುದಕ್ಕಿಂತ ಮೊದಲು ನೀವು ಮಾತನಾಡಬೇಕೆಂದು ಕಳಕಳಿಯಿಂದ ಮನವಿ ಮಾಡುತ್ತೇನೆ” ಎನ್ನುವ ತೇಲ್ತುಂಬ್ಡೆಯವರ ನುಡಿಗಳನ್ನು ನಾವು ಆಲಿಸಬೇಕಾಗಿದೆ. ನಾವೂ ನೀವೂ ಎಲ್ಲರೂ ಮಾತಾಡಬೇಕಾಗಿದೆ. ಇದು ಇಂದಿನ ತುರ್ತು ಅಗತ್ಯ. ನಮಸ್ಕಾರಗಳು.