ಮದ್ಯಪಾನ ನಿಷೇಧ ಬೇಡಿಕೆಗೆ ಕಿವಿಗೊಡಿ-ಮುಖ್ಯಮಂತ್ರಿಗೆ ದೇವನೂರ ಮಹಾದೇವ, ಎಸ್‌.ಆರ್‌. ಹಿರೇಮಠ ಪತ್ರ

[‘ಮದ್ಯಪಾನ ನಿಷೇಧಿಸಿ ನಮ್ಮ ಸಂಸಾರಗಳನ್ನು ಉಳಿಸಿ’ ಎಂಬ ಅಹವಾಲಿನೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿನತ್ತ ಬರಿಗಾಲಲ್ಲಿ ಇಲ್ಲವೆ ಹರಿದ ಚಪ್ಪಲಿಗಳಲ್ಲಿ ನಡೆದು ಬರುತ್ತಿರುವ ಮಹಿಳೆಯರ ನೋವಿಗೆ ಕಿವಿಗೊಟ್ಟು, ಸಮಸ್ಯೆಗೆ ಪರಿಹಾರ ಸೂಚಿಸಿ’ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಹಾಗೂ ಸಮಾಜ ಪರಿವರ್ತನಾ ಸಮುದಾಯದ ಸಂಚಾಲಕ ಎಸ್‌.ಆರ್‌. ಹಿರೇಮಠ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ. -ಪ್ರಜಾವಾಣಿ ವಾರ್ತೆ 24.1.2019]

                                                                      ಮದ್ಯಪಾನ ನಿಷೇಧ ಬೇಡಿಕೆಗೆ ಕಿವಿಗೊಡಿ

ಪ್ರಜಾವಾಣಿ ವಾರ್ತೆ 24.1.2019

ಬೆಂಗಳೂರು: ‘ಮದ್ಯಪಾನ ನಿಷೇಧಿಸಿ ನಮ್ಮ ಸಂಸಾರಗಳನ್ನು ಉಳಿಸಿ’ ಎಂಬ ಅಹವಾಲಿನೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿನತ್ತ ಬರಿಗಾಲಲ್ಲಿ ಇಲ್ಲವೆ ಹರಿದ ಚಪ್ಪಲಿಗಳಲ್ಲಿ ನಡೆದು ಬರುತ್ತಿರುವ ಮಹಿಳೆಯರ ನೋವಿಗೆ ಕಿವಿಗೊಟ್ಟು, ಸಮಸ್ಯೆಗೆ ಪರಿಹಾರ ಸೂಚಿಸಿ’ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಹಾಗೂ ಸಮಾಜ ಪರಿವರ್ತನಾ ಸಮುದಾಯದ ಸಂಚಾಲಕ ಎಸ್‌.ಆರ್‌. ಹಿರೇಮಠ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ. ‘ದುಡಿದ ಗ್ರಾಮೀಣ ಮಹಿಳೆಯರ ಕಾಲುಗಳನ್ನು ಮತ್ತಷ್ಟು ದಣಿಸದಿರಿ, ಬೆಂದಿರುವ ಮನಸುಗಳನ್ನು ಮತ್ತಷ್ಟು ಬಳಲಿಸದಿರಿ. ಮೊದಲು ಅವರ ಜೊತೆ ಕೂತು ಮಾತನಾಡಿ’ ಎಂದು ಅವರು ಪತ್ರದಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ.

‘ಮದ್ಯಪಾನ ನಿಷೇಧ ತುರ್ತು ಸಾಮಾಜಿಕ ಬೇಡಿಕೆ ಆಗಿರುವು ದರಿಂದ ಈ ಬಹಿರಂಗ ಪತ್ರ ಬರೆಯುತ್ತಿದ್ದೇವೆ. ನಮ್ಮ ಗ್ರಾಮೀಣ ಮಹಿಳೆಯರು ರಸ್ತೆಯಲ್ಲಿ ನಡೆಯಲು ಪ್ರಾರಂಭಿಸಿ 5 ದಿನಗಳಾಗಿವೆ. ಇದೇ 19ರಂದು ಚಿತ್ರದುರ್ಗದಿಂದ ಅವರು ಪಾದಯಾತ್ರೆ ಹೊರಟಾಗ ಅನೇಕ ಸ್ವಾಮೀಜಿಗಳು ಹಾಗೂ ಸಂಘ ಸಂಸ್ಥೆಗಳ ಮುಂದಾಳುಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ’ ಎಂದು ವಿವರಿಸಿದ್ದಾರೆ. ‘ವಿಶ್ವಾಸವನ್ನು ಸೆರಗಲ್ಲಿ ಕಟ್ಟಿಕೊಂಡು, ನಿರೀಕ್ಷೆಗಳನ್ನು ಕಣ್ಣುಗಳಲ್ಲಿ ತುಂಬಿಕೊಂಡು ಈ ಪಾದಯಾತ್ರೆಯಲ್ಲಿ ಹೆಜ್ಜೆಹಾಕುತ್ತಿರುವವರು ಬಹುತೇಕ ಕೂಲಿ ಮಾಡುವ ಹೆಣ್ಣು ಮಕ್ಕಳು. ಯಾವ ರಾಜಕೀಯ ಪಕ್ಷಕ್ಕೂ ಸೇರಿದವರಲ್ಲ, ಯಾವುದೇ ಸಂಘಟನೆ ಒತ್ತಡದಿಂದ ಬೀದಿಗಿಳಿದವರಲ್ಲ. ಮಿತಿಮೀರಿ ಹೋಗಿರುವ ಕುಡಿತದ ಹಾವಳಿಯಿಂದ ನಲುಗಿ, ಕಣ್ಣೀರಿಟ್ಟು, ಕೈ ಸೋತು, ಕೊನೆಗೆ ಕೊನೆ ಆಸೆಯಾಗಿ ಹೋರಾಟಕ್ಕೆ ಇಳಿದವರು’ ಎಂದು ಸ್ಪಷ್ಟಪಡಿಸಿದ್ದಾರೆ.

‘ಅಧಿಕಾರದಲ್ಲಿ ಕೂತವರ ಇಕ್ಕಟ್ಟುಗಳೂ ನಮಗೆ ಅರ್ಥವಾಗುತ್ತವೆ. ಕುಡುಕರು ಕುಡಿತದ ಚಟಕ್ಕೆ ಬಲಿಯಾಗಿರುವಂತೆ, ಸರ್ಕಾರಗಳು ಹೆಂಡದ ತೆರಿಗೆ ಚಟಕ್ಕೆ ಬಲಿಯಾಗಿವೆ. ಹೆಂಡ ಮಾರಿದ ಹಣ ಇಲ್ಲವೆಂದರೆ ಸರ್ಕಾರದ ಕೈಕಾಲುಗಳು ನಡುಗುತ್ತವೆ. ಹಾಗಂತ ಮದ್ಯದ ವ್ಯಸನದ ದಾಸ್ಯದಲ್ಲೇ ಸರ್ಕಾರ ಇರಿಸಲು ಸಾಧ್ಯವಿಲ್ಲ. ತಕ್ಷಣವೇ ಪರಿಪೂರ್ಣ ಪರಿಹಾರ ಲಭ್ಯವಿಲ್ಲವಾದರೂ ಆ ನಿಟ್ಟಿನಲ್ಲಿ ನಿಷ್ಠುರ ಹೆಜ್ಜೆ ಹಾಕುವುದು  ಜನ ಒಳಿತನ್ನು  ಬಯಸುವ ಸರ್ಕಾರದ ಕರ್ತವ್ಯ’ ಎಂದು ಹೇಳಿದ್ದಾರೆ. ‘ಸರ್ಕಾರದ ಇಕ್ಕಟ್ಟುಗಳು ಏನೇ ಇದ್ದರೂ ಇದುವರೆಗಿನ ಸರ್ಕಾರಗಳು ಮಾಡಿದಂತೆಯೇ ನೀವೂ ಮೌನದ ಮೊರೆ ಹೋಗುವುದಿಲ್ಲ ಎಂಬ ವಿಶ್ವಾಸವಿದೆ’ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಿಗೂ ಪತ್ರ ಕಳುಹಿಸಲಾಗಿದೆ.