ಭಾರತ ಅರೆ ಗಾಯವಾಗಿ ಬಿದ್ದಿರುವಾಗ ತಮಗೆ ಬೇಕಾದ್ದೆಲ್ಲವನ್ನೂ ಮಾಡಿಕೊಳ್ಳುತ್ತಿದ್ದಾರೆ. -ದೇವನೂರ ಮಹಾದೇವ

[ಜುಲೈ 2020 ರ  “ರೈತ ಚಳವಳಿ” ಪತ್ರಿಕೆಯಲ್ಲಿ ರಾಜ್ಯ ಸರ್ಕಾರ ಭೂಸುಧಾರಣಾ ಕಾಯ್ದೆಯ ಕೆಲವು ಸೆಕ್ಷನ್ ಗಳಿಗೆ ತಿದ್ದುಪಡಿ ತಂದಿರುವ ಕುರಿತು ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಡಾ. ರವಿಕುಮಾರ್ ಬಾಗಿಯವರು ಪ್ರತಿಕ್ರಿಯಾಧಾರಿತ ವಿಶೇಷ ವರದಿಯನ್ನು ಮಾಡಿದ್ದಾರೆ. ಅದರಲ್ಲಿ ದೇವನೂರ ಮಹಾದೇವ ಅವರ ಅಭಿಪ್ರಾಯ ಈ ರೀತಿಯಾಗಿದೆ. ನಮ್ಮ ಓದಿಗಾಗಿ….]

                                           
ಒಂದು ಹುಲ್ಲುಕಡ್ಡಿಯನ್ನೂ ಬಿಡದೆ ಜೊತೆ ಮಾಡಿಕೊಂಡು ಈ ಭೂಸುಧಾರಣಾ ಕಾಯ್ದೆ ತಿದ್ದುಪಡಿಯ ವಿರುದ್ಧ ಫೈಟ್ ಮಾಡಬೇಕಿದೆ. ಈ ಸರ್ಕಾರಕ್ಕೆ ಕ್ರೂರತ್ವ ಮತ್ತು ದುಷ್ಟತನ ಎರಡೂ ಇದೆ. ಹೀಗಾಗಿ ಮುಂದಿನ ದಿನಗಳು ಇನ್ನಷ್ಟು ಕಷ್ಟ ಇವೆ. ಇವರು ಇದನ್ನು ಏಕಾಏಕಿ ಮಾಡ್ತಾ ಇಲ್ಲ. ಮುಂದೆ ಇವರ ಅಜೆಂಡಾಗಳು ಇನ್ನೂ ಇವೆ. ಆದ್ದರಿಂದ ಎಲ್ಲರೂ ಸೇರಿಕೊಂಡು ಹೋರಾಟ ಮಾಡಬೇಕಿದೆ.

ನಾನು ಡಿಎಸ್‍ಎಸ್ ಅವರಿಗೂ ಹೇಳ್ತಾ ಇದ್ದೀನಿ. ಈ ಹೋರಾಟವನ್ನು ದಲಿತರು, ಹಿಂದುಳಿದವರು, ಸಣ್ಣ ರೈತರು, ದೊಡ್ಡ ರೈತರು ಅನ್ನೋ ಭೇದವಿಲ್ಲದೆ ಮಾಡಬೇಕಿದೆ. ಈಗ ದೊಡ್ಡ ರೈತರೂ ಕೂಡ ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಆದರೆ  ಅವರು ಆಸೆಗೆ ಬಿದ್ದಿದ್ದಾರೆ ಅನ್ನಿಸುತ್ತದೆ. ನಮ್ಮ ಜಮೀನಿಗೆ ಬೆಲೆ ಬಂದರೆ ಸಾಕು ಅಂತ ಇದ್ದಾರೆ. ನಮ್ಮ ಜಮೀನಿನ ಹತ್ರ ರಿಂಗ್‍ರೋಡ್ ಬಂದ್ರೆ ಸಾಕು ಅನ್ನುವ ಹಂತದಲ್ಲಿದ್ದಾರೆ. ಈ ಆಸೆಗೆ ಬಿದ್ದು ಭೂಮಿಯನ್ನು ಕಳೆದುಕೊಂಡು ಅವರದೇ ಜಮೀನುಗಳಲ್ಲಿ ಕೂಲಿಯಾಳುಗಳೋ, ವಾಚ್‍ಮನ್‍ಗಳೋ ಆಗಬೇಕಾಗುತ್ತದೆ.

ಈ ಹೋರಾಟ ಒಂದು ಪ್ರಾಸಸ್; ಅದನ್ನ ಎಲ್ಲರೂ ಸೇರಿ ಮಾಡಬೇಕಿದೆ; ಅದು ರೆಡಿಮೇಡ್ ಅಲ್ಲ. ಈಗಾಗಲೇ ದಲಿತ ಸಂಘಟನೆಗಳು, ರೈತ ಸಂಘಟನೆಗಳು ಹೋರಾಟ ಶುರು ಮಾಡಿವೆ. ಆದರೆ  ಅದನ್ನ ಎಲ್ಲರೂ ಒಟ್ಟಾಗಿ ಸೇರಿ ಮಾಡುವ ರೀತಿ ಆಗಬೇಕು. ಇತ್ತೀಚೆಗೆ ಕ್ಯಾತನಹಳ್ಳಿಯಲ್ಲಿ ಪ್ರಕಾಶ್ ಕಮ್ಮರಡಿ, ರವಿವರ್ಮಕುಮಾರ್ ಎಲ್ಲರೂ ಸೇರಿ ಚರ್ಚೆ ಮಾಡಿದ್ದಾರೆ.

ಜೊತೆಗೆ ಭೂಮಿಯನ್ನು ಸೆಂಟರ್ ಮಾಡಿಕೊಂಡು ಜನರಿಗೆ ಮನವರಿಕೆ ಮಾಡಬೇಕಿದೆ. ಏನೆಂದರೆ, ನಮಗೆ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ಮೂಲ ಯಾವುದು? ಎಲ್ಲರೂ ಬದುಕು ಕಟ್ಟಿಕೊಳ್ಳುವುದಕ್ಕೆ ಅವಕಾಶ ಇರುವುದು ಎಲ್ಲಿ? ಎನ್ನುವುದನ್ನು ನಾವು ತಿಳಿಸಬೇಕಿದೆ. ಇದೊಂದು ಕರಾಳ ಕಾನೂನಾದ್ದರಿಂದ ಈ ತಿದ್ದುಪಡಿಯ ಬಗ್ಗೆ ಅಡ್ವೋಕೇಟ್‍ಗಳು ಹೆಚ್ಚೆಚ್ಚು ಮಾತನಾಡಬೇಕು. ಅವರು ಮೊದಲು ಏನೋ ಮಾಡಬೇಕು ಅಂತ ಆಲ್‍ ಇಂಡಿಯಾ ಲೆವಲ್‍ನಲ್ಲಿ ಪ್ರಯತ್ನಿಸಿದರು. ದೇಶಾದ್ಯಂತ ಪ್ರತಿಭಟನೆಯಾದ್ದರಿಂದ ನಿಲ್ಲಿಸಿದರು. ಆದರೆ ಈಗ ಈ ಲಾಕ್‍ಡೌನ್ ಸಂದರ್ಭದಲ್ಲಿ ಅವರು ಏನೇನು ಮಾಡಬೇಕಿತ್ತೋ ಅದೆಲ್ಲವನ್ನೂ ಮಾಡಿಕೊಳ್ಳುತ್ತಿದ್ದಾರೆ. ಭಾರತ ಅರೆಗಾಯವಾಗಿ ಏಳಕ್ಕಾಗದೆ ಬಿದ್ದಿರುವಾಗ ತಮಗೆ ಬೇಕಾದ್ದೆಲ್ಲವನ್ನೂ ಜಾರಿಗೊಳಿಸಲು ಮುಂದಾಗಿದ್ದಾರೆ. ಇದನ್ನು ಎಲ್ಲರೂ ಒಟ್ಟಾಗಿ ಸಂಘಟಿತ ರೂಪದಲ್ಲಿ ವಿರೋಧಿಸಬೇಕಿದೆ.