ಪುಟಾಣಿ ಅಮ್ಮಂದಿರು!-ಕೋಡಿಬೆಟ್ಟು ರಾಜಲಕ್ಷ್ಮಿ

[ನವಮಂಗಳೂರು ಬಂದರಿನ ಗುಡಿಸಲಿನಲ್ಲಿ ಸಹೋದರನ ಪಾಲನೆ ಮಾಡುವ ಫಾತಿಮಾ ಚಿತ್ರ: ನೈನಾ ಜೆ.ಎ.]

 

ಮಗುವನ್ನು ಹೆರುವವಳು ಅಮ್ಮ. ಆದರೆ, ಈ ಪುಟಾಣಿ ಹುಡುಗಿಯರು ತಮ್ಮ ಕುಟುಂಬದ ಬಡತನದ ಭಾರವನ್ನು ಹೊತ್ತು ಅಮ್ಮಂದಿರ ಪಾತ್ರ ನಿರ್ವಹಿಸುತ್ತಿರುತ್ತಾರೆ.ಬಾಲ್ಯವನ್ನು ಕಳೆದುಕೊಂಡು ಒಮ್ಮೆಗೇ ಪ್ರಬುದ್ಧತೆಯ ಪೋಷಾಕು ತೊಡುವ ಈ ‘ಬಾಲ ತಾಯಂದಿರು’ ಸಮಾಜದ ಆತ್ಮಸಾಕ್ಷಿಯನ್ನು ಕಲಕುತ್ತಲೇ, ಜಗತ್ತಿಗೆ ಸಹನೆಯ ಪಾಠ ಹೇಳಿಕೊಡುವವರಂತೆ ಕಾಣಿಸುತ್ತಾರೆ.

ಕುವೆಂಪು ಅವರ ‘ಕಾನೂನು ಹೆಗ್ಗಡಿತಿ’ ಕಾದಂಬರಿಯಲ್ಲಿ ಒಬ್ಬಳು ಪುಟಾಣಿ ಹುಡುಗಿ ಬರುತ್ತಾಳೆ. ಓಬಯ್ಯನ ತಂಗಿ ಈ ಪುಟಾಣಿ. ಓಬಯ್ಯನ ತಂದೆಗೆ ನಾಲ್ವರು ಹೆಂಡತಿಯರು. ಸದಾ ಕಾಯಿಲೆಯಿಂದ ಮಲಗಿರುವ ನಾಲ್ಕನೇ ಹೆಂಡತಿಯ ಮಗಳು ಈ ಹುಡುಗಿ. ಆಡಿಕೊಂಡು ಬೆಳೆಯಬೇಕಾದ ಹುಡುಗಿ ರೋಗಿ ಅಮ್ಮನನ್ನು, ತನ್ನ ಅಜ್ಜನಷ್ಟು ವಯಸ್ಸಾದ ಅಪ್ಪನನ್ನು, ಯಾರೋ ಪರೋಡಿಯಂತಿರುವ ಅಣ್ಣನನ್ನು ವಾತ್ಸಲ್ಯದಿಂದ ನೋಡುತ್ತಾಳೆ;

ಅನ್ನವಿಕ್ಕಿ ಅಮ್ಮನ ಪೋಷಾಕು ತೊಡುತ್ತಾಳೆ. ಆಟ ಪಾಠವಿಲ್ಲದೆ, ನೆತ್ತಿಮೇಲೆ ಒಂದಿಷ್ಟು ಎಣ್ಣೆಯ ಪಸೆ ಇಲ್ಲದೆ, ಯಾರ ನೇವರಿಕೆಯೂ ಇಲ್ಲದೆ ಆ ಹುಡುಗಿ ತನ್ನ ಹೆಗಲ ಮೇಲೆ ಬಿದ್ದ ಸಂಸಾರದ ಜವಾಬ್ದಾರಿಯನ್ನು ನಿರ್ವಹಿಸುತ್ತಿರುತ್ತಾಳೆ. ಆ ಇಡೀ ಮನೆಗೇ ಅಮ್ಮನಂತೆ ನಿಲ್ಲುತ್ತಾಳೆ. ಕೊನೆಗೆ, ಅಣ್ಣನ ಕ್ರೌರ್ಯ ಹಾಗೂ ಅಪ್ಪನ ಬೇಜವಾಬ್ದಾರಿಗೆ ಪುಟಾಣಿ ಬಲಿಯಾಗುತ್ತಾಳೆ.

ಈ ಕಾದಂಬರಿಯಿಂದ ಎದ್ದುಬಂದಂಥ ‘ಪುಟಾಣಿ ಅಮ್ಮಂದಿರು’ ನಮ್ಮ ನಡುವೆ ಸಾಕಷ್ಟು ಮಂದಿ ಇದ್ದಾರೆ. ಅಕಾಲದಲ್ಲಿ ಜವಾಬ್ದಾರಿ ಹೊರುವ ಮೂಲಕ ಅಮ್ಮನ ಸ್ಥಾನದಲ್ಲಿ ನಿಂತು ಗೇಯುವ ಪುಟಾಣಿ ಹುಡುಗಿಯರು ಶಾಪಗ್ರಸ್ತ ದೇವತೆಯರಂತೆ ಕಾಣಿಸುತ್ತಾರೆ. ಕೊಳೆಗೇರಿಗಳಲ್ಲಿ ಇಣುಕಿ ನೋಡಿದರೆ, ವಲಸೆ ಕಾರ್ಮಿಕರ ಟೆಂಟುಗಳ ಒಳ ಹೊಕ್ಕು ನೋಡಿದರೆ, ಕಾಡ ನಡುವಿನ ಗುಡಿಸಲುಗಳಲ್ಲಿ ಒಂದಿಷ್ಟು ಹೊತ್ತು ಹಣಿಕಿ ಹಾಕುವ ಮನಸ್ಸು ಮಾಡಿದರೆ– ನಾಗಾಲೋಟದ ಲೋಕದಲ್ಲಿ ತಮ್ಮ ಕುಟುಂಬದ ಜಂತಿಯೊಂದು ಉರುಳಿ ಬೀಳದಂತೆ ದಿನರಾತ್ರಿ ಎನ್ನದೆ ಈ ಬಾಲಕಿಯರು ಪಾಡು ಪಡುತ್ತಿರುತ್ತಾರೆ. ಮನೆಯ ಎಲ್ಲರನ್ನೂ ಸಂಭಾಳಿಸುವ ಜೊತೆಗೆ ತಾವು ನಾಲ್ಕಕ್ಷರ ಕಲಿಯುವ ಪ್ರಯತ್ನವನ್ನೂ ಕೆಲವರು ಮಾಡುತ್ತಾರೆ.

ಹೆತ್ತಬ್ಬೆಯ ನೋವು, ಅಪ್ಪನ ಉಡಾಳತನ, ಅಣ್ಣನ ಹತಾಶೆ– ಹೀಗೆ, ಹಲವು ಒತ್ತಡಗಳನ್ನು ಅಪಾರ ಸಹನೆಯಲ್ಲಿ ನಿಭಾಯಿಸಿಕೊಂಡು ಗುಡಿಸಲಿನ ಬಾಗಿಲ ಸಂದಿಯಲ್ಲಿ ನಿಂತಿರುವ ಪುಟಾಣಿ ಅಮ್ಮಂದಿರು ಇಡೀ ಜಗತ್ತಿಗೆ ತಾಳ್ಮೆಯ ಪಾಠ ಹೇಳಿಕೊಡುವವರಂತೆ ಕಾಣಿಸುತ್ತಾರೆ.
***
ಬೆಂಗಳೂರಿನ ಸರ್ಕಾರಿ ಶಾಲೆಗಳಿಗೆ ಭೇಟಿಕೊಟ್ಟು ನೋಡಿ. ಅಲ್ಲಿ ಹಾಲು ಕುಡಿಯುವ ವಯಸ್ಸಿನ ಕಂದಮ್ಮಗಳ ಅಳು–ನಗು ಕೇಳಿಸುತ್ತದೆ. ಈ ಹಸುಳೆಗಳು ಅಕ್ಷರ ಕಲಿಯಲು ಶಾಲೆಗೆ ಬಂದವರಲ್ಲ. ಶಾಲೆಗೆ ಬರುವ ಅಕ್ಕನೊಂದಿಗೆ ಕಂದಮ್ಮಗಳೂ ಶಾಲೆಗೆ ಬರುತ್ತಿರುತ್ತವೆ. ಅಪ್ಪ–ಅಮ್ಮಂದಿರು ಕೂಲಿ ಕೆಲಸಕ್ಕೆ ಹೋಗುವುದರಿಂದ ಎಳೆಕಂದಮ್ಮಗಳನ್ನು ನೋಡಿಕೊಳ್ಳುವ ಹೊಣೆಯನ್ನು ಸ್ವಲ್ಪ ದೊಡ್ಡದಾದ ಮಗುವೇ ಹೊತ್ತುಕೊಳ್ಳಬೇಕು.

ವಿದ್ಯಾರ್ಥಿಗಳು ಎಳೆಯ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರಲು ಅವಕಾಶವನ್ನೂ ಕಲ್ಪಿಸಲಾಗಿದೆ. ಇಲ್ಲಿ ಭಾವನೆಗೆ, ಭಾವುಕತೆಗೆ ಜಾಗವಿಲ್ಲ. ಬದುಕಿನ ಕಟು ವಾಸ್ತವದೆದುರು ಮಾನವೀಯತೆ ಅರ್ಥ ಕಳೆದುಕೊಳ್ಳುತ್ತದೆ.

ತಮ್ಮನತ್ತಲೋ ತಂಗಿಯತ್ತಲೋ ಒಂದು ಕಣ್ಣು ನೆಟ್ಟು, ತರಗತಿಗಳತ್ತ ಇನ್ನೊಂದು ಕಣ್ಣುಹರಿಸುವ ಬಾಲೆಯರಿಗಿಂತಲೂ ನಿಕೃಷ್ಟ ಪರಿಸ್ಥಿತಿ ಹೆಣ್ಣುಮಕ್ಕಳು ಇರುತ್ತಾರೆ. ಅವರ ಬಾಲ್ಯ–ಕಲಿಕೆಯೆಲ್ಲ ಮನೆಯ ಚೌಕಟ್ಟಿನೊಳಗೆ, ಎಳೆಯರ ಲಾಲನೆ ಪಾಲನೆಯಲ್ಲಿ ಕಳೆದುಹೋಗುತ್ತದೆ.

ಏಳನೇ ತರಗತಿಯ ಹುಡುಗಿಯೊಬ್ಬಳಿಗೆ ಶಾಲೆಯ ದಾರಿಯಲ್ಲಿ ಹುಡುಗರು ತೊಂದರೆ ಮಾಡುತ್ತಿದ್ದಾರೆ, ಆದ್ದರಿಂದ ಆಕೆ ಶಾಲೆಗೆ ಬರುತ್ತಿಲ್ಲ ಎನ್ನುವ ಸುದ್ದಿಯೊಂದು ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಶಿಕ್ಷಕಿಯರು ಬಂದು ಎಷ್ಟು ಪುಸಲಾಯಿಸಿದರೂ ಆ ಹುಡುಗಿ ಶಾಲೆಗೆ ಹೋಗುವುದಕ್ಕೆ ಸಿದ್ಧಳಿಲ್ಲ. ಮಾತಿನ ನಡುವೆ ಶಿಕ್ಷಕಿಯೊಬ್ಬರು ನಿಧಾನವಾಗಿ ಮನೆಯೊಳಗೆ ಹಣಿಕಿದಾಗ ಕಾಣಿಸಿದ್ದು ಅಕ್ಕಿಯನ್ನು ಸೋಸುತ್ತಿದ್ದ ವಿದ್ಯಾರ್ಥಿನಿಯ ದೃಶ್ಯ. ಬಡತನವನ್ನು ನಿಭಾಯಿಸಲು ಅಮ್ಮ ಕೆಲಸಕ್ಕೆ ಹೋದರೆ ಒಳ್ಳೆಯದು.,ತಾನು ಮನೆ ವಾರ್ತೆ ನಡೆಸಿದರೆ ಒಳ್ಳೆಯದು ಎಂಬ ನಿರ್ಧಾರಕ್ಕೆ ಆ ಹುಡುಗಿಯೇ ಬಂದಿದ್ದಳು.
***
ಬೆಂಗಳೂರಿನಿಂದ ನವಮಂಗಳೂರು ಬಂದರಿಗೆ ಬನ್ನಿ. ಅಲ್ಲಿ ಆಸುಪಾಸಿನಲ್ಲಿ ಸಾಲು ಸಾಲು ಗುಡಿಸಲುಗಳು ಕಾಣಿಸುತ್ತವೆ. ಉತ್ತರಕರ್ನಾಟಕದಿಂದ ಬರುವ ವಲಸೆ ಕಾರ್ಮಿಕರು ಆ ಗುಡಿಸಲುಗಳಲ್ಲಿ ಬಾಳುವೆ ನಡೆಸುತ್ತಾರೆ. ಒಂದು ಕುಟುಂಬ ಒಂದಿಷ್ಟು ದುಡಿದು ತಮ್ಮೂರಿಗೆ ಹೋಗುತ್ತಲೇ ಮತ್ತೊಂದು ಕುಟುಂಬ ಅಲ್ಲಿ ಬಂದು ಬೀಡು ಬಿಡುತ್ತದೆ. ರಾತ್ರಿ ಬೆಳಕಿಲ್ಲದ, ಹಗಲು ಯಾರದೇ ಕಲರವ ಇಲ್ಲದ ಅಂತಹ ಒಂದು ಮನೆಯಲ್ಲಿ ಫಾತಿಮಾ ಎನ್ನುವ ಎಂಟನೇ ತರಗತಿ ಓದುತ್ತಿರುವ ಬಾಲಕಿ ಇದ್ದಾಳೆ.

ಬಾಗಲಕೋಟೆಯಿಂದ ಬಂದ ಕುಟುಂಬ ಅವಳದು. ಅವಳ ಅಣ್ಣಂದಿರು ದುಡಿದು ತರುತ್ತಾರೆ. ತಮ್ಮಂದಿರು ಶಾಲೆಗೆ ಹೋಗುತ್ತಾರೆ. ಆಗೊಮ್ಮೆ ಈಗೊಮ್ಮೆ ಬಾಗಲಕೋಟೆಯಿಂದ ಬರುವ ಅಮ್ಮ ನಾಲ್ಕು ದಿನ ಇದ್ದರೆ, ಅವಳಿಗೆ ಮೀನುಗಾರಿಕೆಯಿಂದ ಬರುವ ನಾಲ್ಕು ಕಾಸಿನ ಬಗ್ಗೆ ಗಮನ. ಧಕ್ಕೆಗೆ ರಾತ್ರಿ 2 ಗಂಟೆ ಸುಮಾರಿಗೆ ತೆರಳಿ ಆಳ ಸಮುದ್ರದಿಂದ ಬರುವ ಹಡಗಿಗಾಗಿ ಕಾಯುತ್ತಾಳೆ.

ಫಾತಿಮಾ ನಾಲ್ಕು ಗಂಟೆಗೆದ್ದು ಎಲ್ಲರಿಗೂ ರೊಟ್ಟಿ ತಟ್ಟಿ ಇಟ್ಟು, ನಳದಲ್ಲಿ ಬರುವ ನಾಲ್ಕೈದು ಕೊಡಪಾನ ನೀರು ಹಿಡಿದಿಡುತ್ತಾಳೆ. ಅಣ್ಣಂದಿರ ಕೆಂಪೇರಿದ ಶರಟು ಒಗೆದು, ತಮ್ಮಂದಿರ ಬಟ್ಟೆಗಳನ್ನು ತೊಳೆಯುವಷ್ಟರಲ್ಲಿ ಶಾಲೆಯ ಸಮಯ ಆಗಿರುತ್ತದೆ. ಓಡಿ ಓಡಿ ಶಾಲೆ ತಲುಪುವ ಹೊತ್ತಿಗೆ ಎಲ್ಲ ಮಕ್ಕಳೂ ಪ್ರಾರ್ಥನೆಗೆಂದು ಮೈದಾನದಲ್ಲಿ ಸೇರಿರುತ್ತಾರೆ. ಅಂದಹಾಗೆ, ಈ ಫಾತಿಮಾ ಶಾಲೆಗೆ ಟಾಪರ್‌.

ಮಾತಿಗೆ ಕುಳಿತರೆ ಫಾತಿಮಾಳ ನಗುವಿನಲ್ಲಿ ಅಮ್ಮನೊಬ್ಬಳ ವಾತ್ಸಲ್ಯದ ಒರತೆ ಕಾಣಿಸುತ್ತದೆ. ಎಳೆ ಪುಟಾಣಿಗಳ ಚಿಗರೆಕಣ್ಣುಗಳ ಚಲನೆ ಆಕೆಯಲ್ಲಿಲ್ಲ. ನಿಧಾನವಾಗಿ ಮಾತುಗಳನ್ನಾಡುತ್ತಾ ಅಮ್ಮನಂತೆ ಜಗಲಿಯಲ್ಲಿ ಕುಳಿತುಕೊಳ್ಳುತ್ತಾಳೆ. ಇತ್ತೀಚೆಗೆ ಗುಡಿಸಲಿನ ಓನರ್‌ ‘ಸೆಲ್ಕೋ’ದವರ ನೆರವಿನಿಂದ ಒಂದು ಸೋಲಾರ್‌ ಲೈಟ್‌ ಹಾಕಿಸಿಕೊಂಡಿದ್ದಾರೆ. ‘ಓನರ್‌ ಒಳ್ಳೆಯವರು’ ಎನ್ನುವ ಫಾತಿಮಾ, ‘ರಾತ್ರಿ ಗುಡಿಸಲಿನಲ್ಲಿ ಒಂದು ಲೈಟ್ ಇದ್ದರೆ ಅಡುಗೆ ಕೆಲಸ ಸುಲಭವಾಗುತ್ತದೆ’ ಎನ್ನುತ್ತಾಳೆ.
***
ಹೊಸಪೇಟೆ ತಾಲ್ಲೂಕಿನ ಢಾಣಾಪುರದ ಹನುಮವ್ವನದು ಬೇರೊಂದು ಕಥೆ. ಆಕೆ ತನ್ನ ಅಮ್ಮನ ಪಾಲಿಗೆ ಅಮ್ಮನಾದವಳು! ಹತ್ತಾರು ಕೆಲಸ ಹುಡುಕಿಕೊಂಡು ಉತ್ತರ ಭಾರತವೋ ಈಶಾನ್ಯ ಭಾರತವೋ ಎಲ್ಲಿಂದಲೋ ಬಂದವರು ಸಿಕ್ಕ ಸಿಕ್ಕ ಖಾಲಿ ಜಾಗಗಳಲ್ಲಿ ಟೆಂಟ್‌ ಹಾಕಿಕೊಂಡು ನೆಲೆಸುತ್ತಾರೆ. ಇಂಥ ಗುಡಿಸಲಿನಂತಹ ಮನೆಯಲ್ಲಿ ಹನುಮವ್ವ ಒಂಬತ್ತನೇ ತರಗತಿ ಕಲಿತಿದ್ದಾಳೆ.

ಆದರೆ ಹನುಮವ್ವನ ಪಾಲಿಗೆ ರಾತ್ರಿಗಳು ಕರಾಳವಾಗಿರುತ್ತವೆ. ಅಮ್ಮನ ಆತಂಕವನ್ನು ಅರ್ಥ ಮಾಡಿಕೊಂಡ ಬಾಲಕಿ, ಯಾರೋ ಹೇಳಿದ್ದನ್ನು ನೆನಪಿಸಿಕೊಂಡು ಬಳ್ಳಾರಿಯಲ್ಲಿರುವ ಸ್ವಯಂ ಸೇವಾಸಂಸ್ಥೆಗೆ ತೆರಳಿ ತನ್ನ ಅಳಲು ಹೇಳಿಕೊಂಡಿದ್ದಾಳೆ. ಈ ಮೂಲಕ ಹನುಮವ್ವ ಬಳ್ಳಾರಿ ಸೇರಿ– ಅಮ್ಮನನ್ನೂ ತನ್ನನ್ನೂ ತಂಗಿಯರನ್ನೂ ಕಾಮುಕರಿಂದ ಬಚಾವ್‌ ಮಾಡಿಕೊಂಡಿದ್ದಳು. ಹಾಗೆ ನಗರಕ್ಕೆ ಬಂದ ಮೇಲೆ ಆ ಇಡೀ ಮನೆಗೆ ಅವಳೇ ಅಮ್ಮ– ಅವಳ ಅಮ್ಮನಿಗೂ!
***
ಫಾತಿಮಾ, ಹನುಮವ್ವ– ಇವರೆಲ್ಲ ಕೆಲವು ಉದಾಹರಣೆಗಳಷ್ಟೇ. ಸಾವಧಾನದಿಂದ ನೋಡಿದರೆ ನಮ್ಮ ಅಕ್ಕಪಕ್ಕದಲ್ಲೇ ಪುಟಾಣಿ ಅಮ್ಮಂದಿರು ಕಣ್ಣಿಗೆ ಬಿದ್ದಾರು. ಅಂಥ ಅಮ್ಮಂದಿರನ್ನು ನಾವು ಸಾವಧಾನದಿಂದ ನೋಡಬೇಕಿದೆ. ಮತ್ತೆ ಅವರಲ್ಲಿ ಕನಸುಗಳು ಅರಳಲು, ಬಾಲ್ಯ ಮೈಗೂಡಲು ನಮ್ಮಿಂದೇನಾದರೂ ಮಾಡಲು ಸಾಧ್ಯವೇ ಎಂದು ಯೋಚಿಸಬೇಕಿದೆ.