ಪರ್ಯಾಯ ರಾಜಕಾರಣಕ್ಕೆ ಸ್ವಾಗತ- ಯೋಗೇಂದ್ರ ಯಾದವ್

• ಅನುವಾದ ಮತ್ತು ಸಂಕಲನ : ದೊಡ್ಡಿಪಾಳ್ಯ ನರಸಿಂಹಮೂರ್ತಿ

ಗೆಳೆಯರೆ,
ಇಂದು ಬೆಂಗಳೂರಿನಲ್ಲಿರುವುದಕ್ಕೆ ನನಗೆ ಸಂತೋಷವಾಗಿದೆ. ಹಲವರ ಪಾಲಿಗೆ ಬೆಂಗಳೂರು ಎಂದರೆ
ಇಂದು ಐಟಿ, ಟೆಕ್ನಾಲಜಿ ಮತ್ತು ಹಣ ಎಂಬಂತಾಗಿದೆ. ಆದರೆ ನನ್ನ ಪಾಲಿಗೆ ಬೆಂಗಳೂರು ಈ ಹಿಂದೆಯೂ,
ಈಗಲೂ ಸೃಜನಶೀಲತೆ, ಚಿಂತನೆ ಮತ್ತು ಶಕ್ತಿಗಳ ಸಂಕೇತ. ಯಾಕೆಂದರೆ ಈ ನಗರ ನನಗೆ ನೆನಪಾದಾಗೆಲ್ಲ
ಯು.ಆರ್.ಅನಂತಮೂರ್ತಿ, ಡಿ.ಆರ್.ನಾಗರಾಜ್ ನೆನಪಾಗುತ್ತಾರೆ. ಅವರಿಬ್ಬರೂ ಇಂದು ನಮ್ಮನ್ನು ಬಿಟ್ಟು
ಅಗಲಿದ್ದಾರೆ. ಅವರು ನಮ್ಮ ಬೌದ್ಧಿಕ, ರಾಜಕೀಯ ಪ್ರಯಾಣಕ್ಕೆ ಪ್ರೇರಣೆ ನೀಡುವ ಶಕ್ತಿಗಳಾಗಿದ್ದರು.
ನಾನು ಅವರ ಬಗ್ಗೆ ಯೋಚಿಸುವಾಗೆಲ್ಲ ಸುಮಾರು 35 ವರ್ಷಗಳ ಹಿಂದೆ 1980ರಲ್ಲಿ, ಇದೇ ನಗರದಲ್ಲಿ
ಮೊದಲ ಬಾರಿಗೆ ಪರ್ಯಾಯ ರಾಜಕಾರಣದ ಪ್ರಯೋಗವನ್ನು ಕೈಗೊಂಡಿದ್ದ ಮಿತ್ರರು ನೆನಪಾಗುತ್ತಾರೆ. ಈ ಬಗ್ಗೆ
ಬಹುಶಃ ಇಲ್ಲಿನ ಬಹುತೇಕರಿಗೆ ಮಾಹಿತಿ ಇರಲಿಕ್ಕಿಲ್ಲ.. ಆ ಪ್ರಯೋಗದ ಹೆಸರು ಸಮತಾ ಸಂಘಟನ್.
ಅದನ್ನು ಸ್ಥಾಪಿಸಿದವರು ಕಿಶನ್ ಪಟ್ನಾಯಕ್ ಮತ್ತು ಕೆಲವು ಮಾಜಿ ಸಮಾಜವಾದಿಗಳು. ಅವರು ಕೈಗೊಂಡ
ಮೊದಲ ನಿರ್ಧಾರವೇನೆಂದರೆ ಅವರು ರಾಜಕೀಯ ಮಾಡಲು ನಿರ್ಧರಿಸಿದರು, ಆದರೆ ಹತ್ತು ವರ್ಷಗಳ
ಕಾಲ ಯಾವುದೇ ಚುನಾವಣೆಯಲ್ಲಿ ಭಾಗವಹಿಸದಿರುವ ನಿರ್ಣಯ ಕೈಗೊಂಡರು. ಇದೊಂದು
ಅಸಾಧಾರಣವಾದ (ಅನ್‍ಯೂಷುವಲ್) ಪ್ರಯೋಗವಾಗಿತ್ತು.
ಒಟ್ಟಾರೆ ಕರ್ನಾಟಕದ ವಿಷಯ ಬಂದಾಗ, ನನಗೆ ‘ಸರ್ವೋದಯ ಕರ್ನಾಟಕ’ ನೆನಪಾಗುತ್ತದೆ. ದೇವನೂರು
ಮಹಾದೇವ ಇಲ್ಲೇ ನಮ್ಮೆದುರಿಗಿದ್ದಾರೆ. ಹಸಿರು ಶಾಲುಗಳನ್ನು ಹೆಗಲಿಗೆ ಹಾಕಿರುವ ಹಲವಾರು
ಸಂಗಾತಿಗಳು ಇಲ್ಲಿದ್ದಾರೆ. ಪುಟ್ಟಣ್ಣಯ್ಯನವರು ನಮ್ಮೊಂದಿಗಿದ್ದಾರೆ. ಸರ್ವೋದಯದ ಬಗ್ಗೆ ಮಾತಾಡುವಾಗ
ಹಲವರ ಅಭಿಪ್ರಾಯ ‘ಇದು ರಾಜಕೀಯವಾಗಿ ಅಷ್ಟೇನು ಯಶಸ್ವಿಯಾಗದ ಪ್ರಯೋಗ’ ಎಂಬುದು. ಯಶಸ್ಸು
ಅಂದರೇನು? ಸೋಲು ಎಂದರೇನು? ಎಂಬ ಬಗ್ಗೆ ಇತಿಹಾಸ ಮೌಲ್ಯಮಾಪನ ಮಾಡುತ್ತದೆ.
ಫ್ರೆಂಚ್ ಕ್ರಾಂತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನೆಂದು ಯಾರೋ ಒಬ್ಬರು ಚೌ ಎಲ್ ಲೈ (ಚೀನಾ ದೇಶದ
ಪ್ರಧಾನಿ, ಮಾವೋತ್ಸೆ ತುಂಗ್ ಸಮಕಾಲೀನರು) ಅವರನ್ನು ಪ್ರಶ್ನಿಸಿದರರಂತೆ. ಅದಕ್ಕೆ “ಅದು ತೀರಾ
ಇತ್ತೀಚಿನ ವಿದ್ಯಮಾನ, ಆ ಬಗ್ಗೆ ನಾನು ಏನು ಹೇಳಲಿ? ಅದು ಇತಿಹಾಸದಲ್ಲಿ ಒಂದು ಬ್ಲಿಂಕ್, ಅದರ ಬಗ್ಗೆ
ಇತಿಹಾಸ ನಿರ್ಣಯಿಸುತ್ತದೆ” ಎಂದು ಅವರು ಉತ್ತರಿಸಿದ್ದರಂತೆ.
‘ಸರ್ವೋದಯ ಕರ್ನಾಟಕ’ದ ಪ್ರಯೋಗದ ಬಗ್ಗೆ ಹೇಳೋದಾದರೆ ನಮ್ಮ ಸಾರ್ವಜನಿಕ ಜೀವಿತಾವಧಿಯಲ್ಲಿ,
ದಲಿತ ಚಳವಳಿ ಮತ್ತು ರೈತ ಚಳವಳಿಗಳು ಒಂದೆಡೆ ಸೇರಿ ಈ ದೇಶದಲ್ಲಿ ನಡೆಸಿದ ಏಕಮಾತ್ರ, ಅಲ್ಲವಾದರೆ
ಅತ್ಯಂತ ವಿರಳವಾದ, ಅಸಾಮಾನ್ಯವಾದ ಪ್ರಯೋಗ ಎನಿಸುತ್ತದೆ. ಇಂಥ ವಿದ್ಯಮಾನ ದೇಶದಲ್ಲಿ ಬೇರೆಲ್ಲೂ
ಸಂಭವಿಸಿಲ್ಲ. ಉತ್ತರ ಪ್ರದೇಶ, ಮಧ್ಯಪ್ರದೇಶ ಮುಂತಾದ ಉತ್ತರ ಭಾರತದ ರಾಜ್ಯಗಳಲ್ಲಿ ಕಂಡುಬರುವಂತೆ
ರೈತ ಚಳವಳಿ ಸಾಮಾನ್ಯವಾಗಿ ದಲಿತ ವಿರೋಧಿಯೆನಿಸಿಕೊಂಡಿರುತ್ತದೆ. ಹಾಗೆಯೇ ದಲಿತರು ‘ಭೂಮಿಯ
ಒಡೆತನವುಳ್ಳ ಈ ರೈತರು ನಮ್ಮ ಪ್ರಧಾನ ಶತೃಗಳು’ ಎಂದೇ ಭಾವಿಸುತ್ತಾರೆ. ಈ ವ್ಯವಸ್ಥೆಯ ಇಬ್ಬರು
ಬಲಿಪಶುಗಳು ಪರಸ್ಪರ ಬಡಿದಾಡುತ್ತಿರುವುದು ದುರದೃಷ್ಟಕರ ಸಂಗತಿ.
ಕರ್ನಾಟಕದ ಉದಾಹರಣೆ ನೋಡೋದಾದರೆ, ವ್ಯವಸ್ಥೆಯಿಂದ ಬಾಧಿತರಾದ ಈ ಎರಡು
ಸಮುದಾಯಗಳನ್ನು ಇಷ್ಟೆಲ್ಲಾ   ಕಷ್ಟಗಳ ನಡುವೆಯೂ ಒಂದೆಡೆ ಸೇರಿಸುವ ಪ್ರಯತ್ನ ನಡೆಸಲಾಗಿದೆ. ಈ
ಐಡಿಯಾಅನ್ನು ನಾವು ತಳ್ಳಿಹಾಕಬೇಕು ಎಂದು ನನಗನಿಸುತ್ತಿಲ್ಲ. ಬದಲಿಗೆ ಇದರಿಂದ ನಾವು ಸ್ಪೂರ್ತಿ
ಪಡೆದುಕೊಳ್ಳಬೇಕು.
ಇಂಡಿಯಾ ಎಗೆನೆಸ್ಟ್ ಕರಪ್ಷನ್ ಚಳವಳಿ ಸಂದರ್ಭದಲ್ಲಿ ಭಾರೀ ದೊಡ್ಡ ರ್ಯಾಲಿ ಬೆಂಗಳೂರಿನಲ್ಲಿ ನಡೆದಿತ್ತು.
ಇಂಥಾ ಕಾರಣಗಳಿಗಾಗಿಯೇ ಬೆಂಗಳೂರು ಎಂದರೆ ಹೊಸ ಚಿಂತನೆಗಳ, ಸೃಜನಶೀಲತೆಯ, ಸ್ಪೂರ್ತಿ ನೀಡುವ
ಪ್ರಯೋಗಗಳ ನಗರ ಎಂದು ನನಗನಿಸುತ್ತದೆ.
ಆಪ್‍ನಲ್ಲಿ ನಡೆದ ಸಂಘರ್ಷದ ಬಗ್ಗೆ
ಇವತ್ತು ಬೆಳಿಗ್ಗೆ ಮೈಸೂರಿನಿಂದ ಗೆಳೆಯರೊಬ್ಬರು ನನಗೆ ಕರೆಮಾಡಿ ಒಂದು ನೇರವಾದ ದಿಟ್ಟ ಪ್ರಶ್ನೆಯನ್ನು
ಕೇಳಿದರು. “ಪ್ರಶಾಂತ ಭೂಷಣ್ ಮತ್ತು ನೀವು ಇಬ್ಬರು, ನಿಮ್ಮ ವ್ಯಕ್ತಿಗತ ಕುಂದುಕೊರತೆಗಳನ್ನು/
ಅಸಮಾಧಾನಗಳನ್ನು ಯಾಕೆ ಸಾರ್ವತ್ರಿಕಗೊಳಿಸುತ್ತಿದ್ದೀರಿ? ನಿಮಗೆ ಪಕ್ಷದೊಂದಿಗೆ ಸಮಸ್ಯೆಗಳಿರಬಹುದು,
ಅವುಗಳನ್ನು ದೇಶದ ತುಂಬಾ ಯಾಕೆ ಚರ್ಚೆ ಮಾಡುತ್ತಿದ್ದೀರಿ?” ಅಂತ. ಅವರ ನೇರ ಮತ್ತು ದಿಟ್ಟ ಪ್ರಶ್ನೆ
ನನಗೆ ಇಷ್ಟವಾಯಿತು. ನಾವು ಉತ್ತರಿಸಲು ಯೋಗ್ಯವಾದ ಪ್ರಶ್ನೆಯಿದು.
ನಾವೆಲ್ಲರೂ ಯಾಕಿಲ್ಲಿ ಸೇರಿದ್ದೇವೆ? ಇಲ್ಲಿ ಬಂದಿರುವ ಬಹಳ ಮಂದಿಗೆ ಇವತ್ತು ಮಂಗಳವಾರ ಕೆಲಸದ
ದಿನ. ಪೂರ್ವ ನಿಗದಿತ ಕಾರ್ಯಕ್ರಮಗಳ ಕಾರಣಕ್ಕೆ ನಮಗೆ ಲಭ್ಯವಾಗಿದ್ದು ಇದೊಂದೇ ದಿನ. ಆದರೂ
ಕೆಲಸ ಕಾರ್ಯಗಳನ್ನು ಬದಿಗೊತ್ತಿ ಇಷ್ಟೆಲ್ಲ ಜನರು ಯಾಕಿಲ್ಲಿ ಸೇರಿದ್ದೇವೆ? ಇಬ್ಬರು ವ್ಯಕ್ತಿಗಳ ಅಥವ ನಾಲ್ಕು
ಜನರ ತೊಂದರೆಗಳಿಗೆ ಪರಿಹಾರ ಕೊಡಲಿಕ್ಕಾಗಿಯೋ ಅಥವ ಅವರ ನೋವನ್ನು ಉಪಶಮನ ಮಾಡಲಿಕ್ಕಾಗಿ
ಇಲ್ಲಿ ಸೇರಿದ್ದೇವೆಯೆ?
ಖಂಡಿತ ಅಲ್ಲ. ಇತಿಹಾಸದ ನಡೆಯಲ್ಲಿ ಎಷ್ಟೋ  ವ್ಯಕ್ತಿಗಳು ಬರುತ್ತಾರೆ, ಹೋಗುತ್ತಾರೆ. ಜನರು ಅವರನ್ನು
ಮರೆತುಬಿಡುತ್ತಾರೆ. ಯಾರೇ ಒಬ್ಬರ ವ್ಯಕ್ತಿಗತ ಕುಂದುಕೊರತೆಗಳು, ಆ ವ್ಯಕ್ತಿ ಅದೆಷ್ಟೇ  ಅಚ್ಚುಮೆಚ್ಚಿನ
ವ್ಯಕ್ತಿಯಾಗಿದ್ದರೂ ಕೂಡ, ಅಷ್ಟು ಪ್ರಮುಖವಾಗುವುದಿಲ್ಲ, ಪ್ರಮುಖವಾಗಬಾರದು. ಒಂದು ಸಾಮೂಹಿಕ
ಕಾರ್ಯದಲ್ಲಿ ಯಾವುದೇ ವ್ಯಕ್ತಿಯ ವಿಚಾರದ ಸುತ್ತ ನಾವು ಹೆಚ್ಚು ಸಮಯವನ್ನು ವ್ಯರ್ಥ ಮಾಡಬಾರದು.
ಪ್ರಶಾಂತ್‍ಜಿ ಮತ್ತು ನಾನು ಈ ವಿಚಾರವನ್ನು ಪದೇಪದೇ ಹೇಳಿದ್ದೇವೆ – ನಮ್ಮ ಸಂಘರ್ಷದಲ್ಲಿ
ವೈಯುಕ್ತಿಕವೆಂಬುದು ಏನೇನೂ ಇಲ್ಲ. ಇದು ವ್ಯಕ್ತಿಗತ ಅಹಂಗಳ ಸಂಘರ್ಷವೂ ಅಲ್ಲ. ಅಹಂಗಳ
ಸಂಘರ್ಷವೇ ಆಗಿದ್ದರೆ ಇದು ಎರಡು ವರ್ಷಗಳಿಗೆ ಮೊದಲೇ ಬರಬೇಕಿತ್ತು.
ರಾಜಕೀಯವೆಂದರೆ ಅದು ಕಠಿಣವಾದ ಸಂಬಂಧಗಳನ್ನು ಒಳಗೊಂಡಿರುತ್ತದೆ. ನೀವು ಏನನ್ನಾದರೂ
ಕಟ್ಟಬೇಕೆಂದಿದ್ದರೆ ಅತ್ಯಂತ ಸೂಕ್ಷ್ಮವಾದ, ಬಹುತೇಕ ಅಸಾಧ್ಯ ಎನ್ನುವಂಥಹ ಸಂಬಂಧಗಳನ್ನು ಕೂಡ
ಕಾಪಾಡಿಕೊಂಡು ಹೋಗುವ ಅಗತ್ಯವಿರುತ್ತದೆ.
ನಾವು ಕೆಲವು ಆದರ್ಶಗಳೊಂದಿಗೆ ಆರಂಭಿಸಿದ್ದೆವು. ಭರವಸೆಗಳನ್ನಿಟ್ಟುಕೊಂಡು ಆರಂಭಿಸಿದ್ದೆವು. ಕೆಲವು
ನೀತಿನಿಯಮಗಳೊಂದಿಗೆ ಆರಂಭಿಸಿದ್ದೆವು. ಆದರೆ ಒಂದು ಹಂತದಲ್ಲಿ ಪಕ್ಷದಲ್ಲಿದ್ದ ಹಲವು ಮಂದಿ ಇದು
ಅಸಾಧ್ಯವಾದ ದಾರಿ, ಇವು ಅಪ್ರಾಯೋಗಿಕ ವಿಚಾರಗಳು ಎಂದು ಹೇಳತೊಡಗಿದರು. ‘ನಾವು
ಆರಂಬಿಸಿದಾಗ ಹಾಗೆ ಅಂದುಕೊಂಡಿದ್ದೆವು. ಆದರೆ ಈಗ ಬಹಳ ಗೊಂದಲಮಯ ಸನ್ನಿವೇಶವಿದೆ. ಆದ್ದರಿಂದ
ಗೆಲುವು ಸಾಧಿಸಬೇಕೆಂದರೆ, ನಾವು ಕೆಲವು ‘ಟ್ಯಾಕ್ಟಿಕಲ್ ಲೈನ್’ (ತಂತ್ರಗಾರಿಕೆ ಹಾದಿ)
ಅಳವಡಿಸಿಕೊಳ್ಳಬೇಕು’ ಎಂದು ಮಾತಾಡತೊಡಗಿದರು. ‘ಏನೇ ಆದರೂ ಸರಿ, ಸಾಮ, ದಾನ, ಭೇದ, ದಂಡ
ಯಾವುದೇ ಮಾರ್ಗವಾದರೂ ಸರಿ, ನಾವು ಗೆಲ್ಲಲೇಬೇಕು’, ‘ಚುನಾವಣೆಯನ್ನು ಗೆಲ್ಲಲಿಕ್ಕಾಗಿಯೇ ನಾವು ಇಲ್ಲಿ
ಬಂದಿರುವುದು’ ಎಂಬುದು ಅವರ ವಾದ.
ಆ ರೀತಿ ಹೋಗುವುದು ಸರಿಯಲ್ಲ, ಇಂಥಾ ರಾಜಕೀಯ ಮಾಡಲಿಕ್ಕಾಗಿ ನಾವಿಲ್ಲಿ ಬಂದಿದ್ದಲ್ಲ ಎಂಬುದು
ಮತ್ತೆ ಕೆಲವರ ಅಭಿಪ್ರಾಯವಾಗಿತ್ತು. ನಾವು ಕೆಲವು ತತ್ವಾದರ್ಶಗಳಿಗಾಗಿ ಇಲ್ಲಿ ಬಂದಿದ್ದೇವೆ. ಅವುಗಳನ್ನು
ನಾವು ಉಳಿಸಿಕೊಳ್ಳಬೇಕು. ಹೌದು, ಗೆಲುವು ಮುಖ್ಯವೇ. ಗೆಲುವು ಬಹಳ ಮಹತ್ವವುಳ್ಳದ್ದು ನಿಜ, ಆದರೆ
ನಮಗೆ ಬೇಕಿರುವುದು ಚುನಾವಣಾ ಗೆಲುವೊಂದೇ ಅಲ್ಲ.
ಇಲ್ಲಿ ಸರಳವಾದ ಪ್ರಶ್ನೆಯೆಂದರೆ ಇಂಥಾ ಪ್ರಶ್ನೆಗಳನ್ನು ಎತ್ತಬಹುದೆ ಎಂಬುದು. ಇದು ಅಲ್ಪಸಂಖ್ಯಾತ,
ಬಹುಸಂಖ್ಯಾತರ ಪ್ರಶ್ನೆಯೂ ಅಲ್ಲ. ಯಾಕೆಂದರೆ ಹಲವಾರು ಸಂದರ್ಭಗಳಲ್ಲಿ ಸರಿಯಾದ ಪ್ರಶ್ನೆ ಎತ್ತುವವರು
ಮೈನಾರಿಟಿಯಲ್ಲಿರಬೇಕಾಗುತ್ತದೆ. ಅದೊಂದು ಸಮಸ್ಯೆಯಲ್ಲ. ಅಂಥವರು ಮೈನಾರಿಟಿಯಾಗಿದ್ದು ಕೆಲಸ
ಮಾಡುವುದನ್ನು ಕಲಿತುಕೊಳ್ಳಬೇಕು. ಅದು ಘನತೆಯುಳ್ಳದ್ದು. ಒಂದು ಸಂಘಟನೆಯೊಳಗೆ ನನ್ನ ಅಭಿಪ್ರಾಯಕ್ಕೆ
ಮನ್ನಣೆ ಸಿಗಲಿಲ್ಲ ಎಂದರೆ ಅದರರ್ಥ ನಾನು ಸಂಘಟನೆಯಿಂದ ಹೊರಹೋಗಿ, ಸಂಘಟನೆಯನ್ನು ದೂಷಿಸಿ
ಅದನ್ನು ಹಾಳುಗೆಡವಬೇಕು ಎಂದು ಅರ್ಥವಲ್ಲ. ಹೀಗಾದರೆ ನಾವು ಏನನ್ನೂ ಕಟ್ಟಲು ಸಾಧ್ಯವಿಲ್ಲ. ಹಾಳು
ಮಾಡುವುದು ತೀರಾ ಸುಲಭದ ಕೆಲಸ. ಆದರೆ ಕಟ್ಟುವುದು ತುಂಬಾ ತುಂಬಾ ಕಷ್ಟದ ಕೆಲಸ. ಆದ್ದರಿಂದ
ಮೈನಾರಿಟಿಯಲ್ಲಿದ್ದು ಕೆಲಸ ಮಾಡುವುದು ತಪ್ಪೇನಲ್ಲ.
ಆದರೆ ಆಮ್ ಆದ್ಮಿ ಪಾರ್ಟಿಯಲ್ಲಾಗಿದ್ದೇ ಬೇರೆ. ನೀವು ಮೈನಾರಿಟಿಯಲ್ಲಿದ್ದುಕೊಂಡು ಕೆಲಸ ಮಾಡಲು
ಯಾವಾಗ ಸಾಧ್ಯವಾಗುತ್ತೆಂದರೆ ಆ ಸಂಘಟನೆಯಲ್ಲಿ ಮೂಲಭೂತ ಪ್ರಜಾತಾಂತ್ರಿಕ ರಚನೆ ಮತ್ತು
ನಡವಳಿಕೆಗಳು ಅಸ್ತಿತ್ವದಲ್ಲಿರಬೇಕು. ನಮ್ಮ ಅಭಿಪ್ರಾಯಗಳನ್ನು ಕೇಳಿಸಿಕೊಳ್ಳುವವರಿಲ್ಲ ಎಂದಾಗ ನಮ್ಮ
ದೂರನ್ನು ಶಿಸ್ತು ಸಮಿತಿಗೆ ಕಳಿಸಬಹುದು; ಆ ಸಮಿತಿ ನಮ್ಮ ದೂರನ್ನು ಆಂತರಿಕ ಲೋಕಪಾಲ್‍ಗೆ
ಕಳಿಸಿಕೊಡುತ್ತದೆ. ಸಮಸ್ಯೆಯನ್ನು ಪರಿಶೀಲಿಸಿ ಲೋಕಪಾಲ್ ಒಂದು ತೀರ್ಪು ಕೊಡುತ್ತಾರೆ. ಹೀಗಿದ್ದಿದ್ದರೆ
ಸಮಸ್ಯೆಯೇ ಇರಲಿಲ್ಲ. ಯಾವುದೇ ಸಂಘಟನೆಯಲ್ಲಿ ಇಂಥ ಪ್ರಜಾತಾಂತ್ರಿಕ ಕ್ರಮಗಳು ಮತ್ತು
ನಿಯಮಗಳಿದ್ದಾಗ ಪ್ರಜಾತಾಂತ್ರಿಕ ಕಾರ್ಯನಿರ್ವಹಣೆ ಸಾಧ್ಯ.
ನಾವು ನಮ್ಮ ಸಲಹೆಗಳನ್ನು ಸಂಬಂಧಿಸಿದ ಸಮಿತಿಗೆ ಕಳಿಸಿಕೊಡಬಹುದು; ಸಮಿತಿ ಅದನ್ನು ಪರಿಗಣಿಸಿ,
ನಿಮ್ಮ ಅಭಿಪ್ರಾಯವನ್ನು ತಿರಸ್ಕರಿಸಬಹುದು. ಅದರಲ್ಲೇನೂ ಸಮಸ್ಯೆಯಿಲ್ಲ. ಆದರೆ ಆಮ್ ಆದ್ಮಿ ಪಕ್ಷದ ಕತೆ
ತೀರಾ ಭಿನ್ನವಾಗಿತ್ತು. ಆ ಬಗ್ಗೆ ಕೆಲವು ಅಂಶಗಳನ್ನು ಸಂಕ್ಷಿಪ್ತವಾಗಿ ನಿಮ್ಮ ಮುಂದಿಡುತ್ತೇನೆ. ನಂತರ ಈ ಬಗ್ಗೆ
ಹೆಚ್ಚಿನ ಸಮಯವನ್ನು ವ್ಯಯಿಸದೆ ಮುಂದಿನ ವಿಚಾರಗಳಿಗೆ ಹೋಗೋಣ.
ಆಂತರಿಕ ಸಂಘರ್ಷದ ಬಗ್ಗೆ
ಆಮ್ ಆದ್ಮಿ ಪಕ್ಷದೊಳಗೆ ಅಸ್ತಿತ್ವದಲ್ಲಿದ್ದ ಪ್ರತಿಯೊಂದು ಪ್ರಜಾತಾಂತ್ರಿಕ ರಚನೆಗಳನ್ನು ಒಂದಾದ ಮೇಲೆ
ಒಂದರಂತೆ ಧ್ವಂಸ ಮಾಡಲಾಯಿತು. ಪಕ್ಷದಲ್ಲಿ ಒಂದು ರಾಷ್ಟ್ರೀಯ ಕಾರ್ಯಕಾರಿಣಿ ಇತ್ತು, ಅದು ಪ್ರತಿ ಮೂರು
ತಿಂಗಳಿಗೊಮ್ಮೆ ಸಭೆ ಸೇರಬೇಕಾಗಿತ್ತು. ಆದರೆ 8 ತಿಂಗಳ ಕಾಲ ಅದರ ಸಭೆಯೇ ಸೇರಲಿಲ್ಲ. ಪಿ.ಎ.ಸಿ
(ಪೊಲಿಟಿಕಲ್ ಅಫೇರ್ಸ್ ಕಮಿಟಿ) ಪ್ರತಿ ವಾರ ಅಥವ 10 ದಿನದಲ್ಲಿ ಒಂದು ಸಭೆ ಸೇರಬೇಕು. ಆದರೆ
ತಿಂಗಳುಗಳು ಕಳೆದರೂ ಯಾವುದೇ ಸಭೆ ನಡೆಯಲಿಲ್ಲ. ಪಕ್ಷದ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿತ್ತು.
ಅತ್ಯಂತ ಪ್ರಮುಖವಾದ ಕೆಲವು ನಿರ್ಣಯಗಳು ಏಕವ್ಯಕ್ತಿಯ ನಿರ್ಧಾರಗಳಾಗಿದ್ದವು.
ಉದಾಹರಣೆಗೆ ದೆಹಲಿ ಸರ್ಕಾರದ ರಾಜೀನಾಮೆಯ ನಿರ್ಣಯ. ಇದೊಂದು ಭಯಾನಕ ನಿರ್ಣಯವಾಗಿತ್ತು.
ಈ ನಿರ್ಣಯ ಕೈಗೊಳ್ಳುವ ಮುನ್ನ ಯಾವುದೇ ಸಮಿತಿಯ ಅಭಿಪ್ರಾಯ ಪಡೆಯಲಿಲ್ಲ. ಅದು ಕೇವಲ ಒಬ್ಬ
ವ್ಯಕ್ತಿಯ ನಿರ್ಣಯವಾಗಿತ್ತು. ಇದು ಪಕ್ಷದ ಸಂವಿಧಾನದ ಸ್ಪಷ್ಟ ಉಲ್ಲಂಘನೆ.
ದೆಹಲಿ ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸಬೇಕೆ? ಎಂಬ ಪ್ರಶ್ನೆಗೆ ರಾಷ್ಟ್ರೀಯ
ಕಾರ್ಯಕಾರಿಣಿ ಇದರ ಪರವಾಗಿ ಮತ ಚಲಾಯಿಸಿತು. ರಾಜ್ಯ ಘಟಕಗಳಿಗೆ ಈ ಬಗ್ಗೆ ಅಂತಿಮ ನಿರ್ಣಯ
ತೆಗೆದುಕೊಳ್ಳಲು ಬಿಡಬೇಕೆಂದು ತೀರ್ಮಾನವಾಯಿತು. ಆದರೆ ಪಕ್ಷದ ರಾಷ್ಟ್ರೀಯ ಸಂಚಾಲಕರು(ಅರವಿಂದ್
ಕೇಜ್ರಿವಾಲ್) ‘ಏನೇ ಆಗಲಿ, ಈ ನಿರ್ಣಯ ಜಾರಿಯಾಗಲು ನಾನು ಬಿಡೋದಿಲ್ಲ’ ಅಂತ ಅಡ್ಡ ನಿಂತರು.
ಸಮಿತಿಗಳ ಸಭೆ ಕರೆಯುತ್ತಿಲ್ಲ, ಪಕ್ಷದ ಎಲ್ಲ ಸಂಸ್ಥೆಗಳನ್ನು ಪಕ್ಕಕ್ಕೆ ಸರಿಸಿ, ಸ್ವತಂತ್ರ ನಿರ್ಣಯಗಳನ್ನು
ಕೈಗೊಳ್ಳಲಾಗುತ್ತಿದೆ. ಸಣ್ಣಪುಟ್ಟ ವಿಚಾರವಲ್ಲ, ಬಹಳ ಮಹತ್ವದ ವಿಚಾರಗಳಲ್ಲಿ ನಡೆದಿದ್ದು ಹೀಗೆ.
ಇಂಥ ಗಂಭೀರ ಸಮಸ್ಯೆಗಳನ್ನು ನಾವು ಸರಿಪಡಿಸಬೇಕೆ? ಬೇಡವೇ? ನ್ಯಾಷನಲ್ ಕೌನ್ಸಿಲ್ ಸಭೆಯಲ್ಲಿ ಈ
ಬಗ್ಗೆ ಚರ್ಚಿಸಲು ಹೊರಟೆವು. ಆದರೆ ಅಲ್ಲಿ ಕಂಡುಬಂದಿದ್ದೇನೆಂದರೆ ಕೌನ್ಸಿಲ್‍ನ ಸದಸ್ಯರು ಸಭಾಂಗಣ
ಪ್ರವೇಶಿಸದಂತೆ ನಿರ್ಬಂಧಿಸಲಾಗಿತ್ತು. ಸದಸ್ಯರಲ್ಲದ ಅನೇಕರು ಒಳಗಿದ್ದರು. ಇಂಥಾ ಸನ್ನಿವೇಶದಲ್ಲಿ ನೀವು
ಮಾತಾಡಲು ಹೊರಟಾಗ ಅಲ್ಲಿ ಬೌನ್ಸರ್(ಗೂಂಡಾ)ಗಳು ಹಾಜರಿದ್ದರು.
ಕೌನ್ಸಿಲ್‍ನ ಕತೆ ಹೀಗಾದ ನಂತರ ಅಂತಿಮವಾಗಿ ಉಳಿದಿರುವುದು ಲೋಕಪಾಲ್ ಮಾತ್ರ. ಆ
ಲೋಕಪಾಲ್‍ಗೆ ದೂರು ಕೊಡೋಣ ಎಂದು ನೋಡಿದರೆ ಲೋಕಪಾಲರನ್ನೇ ವಜಾ ಮಾಡಲಾಗಿದೆ. ಯಾಕೆ?
ಏನು? ಕಾರಣ ಹೇಳೋರಿಲ್ಲ. ನಮ್ಮ ಇಬ್ಬರು ಲೋಕಪಾಲರು ‘ನಮ್ಮ ಹುದ್ದೆಗಳಿಂದ ನಮ್ಮನ್ನು ವಜಾ
ಮಾಡಿದ್ದೇಕೆ? ನಮ್ಮ ಅವಧಿ ಮುಕ್ತಾಯವಾಗಿದ್ದು ಯಾವಾಗ? ದಯವಿಟ್ಟು ತಿಳಿಸಿ’ ಎಂದು ಪತ್ರ ಬರೆದಿದ್ದಾರೆ.
ಇದುವರೆಗೆ ಕನಿಷ್ಟ ಅವರಿಗೆ ಒಂದು ಉತ್ತರ ಕಳಿಸುವ ಸೌಜನ್ಯವೂ ಇಲ್ಲ. ಪಕ್ಷದಲ್ಲಿ ಯಾವ ನಿರ್ಣಯ
ಸಕ್ರಮ? ಯಾವ ನಿರ್ಣಯ ಅಕ್ರಮ? ಈ ಬಗ್ಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ಇಲ್ಲ.
ಇಲ್ಲಿ ಸಮಸ್ಯೆಯಿರುವುದು ಇಬ್ಬರು ವ್ಯಕ್ತಿಗಳ ಉಚ್ಚಾಟನೆಯದ್ದಲ್ಲ. ವ್ಯಕ್ತಿಗಳು ಬರುತ್ತಾರೆ, ಹೋಗುತ್ತಾರೆ. ಅದು
ಅಷ್ಟೊಂದು ಪ್ರಮುಖ ವಿಚಾರವಲ್ಲ. ಇವತ್ತಿನವರೆಗೂ ನಮ್ಮನ್ನು ಪಕ್ಷದಿಂದ ಉಚ್ಚಾಟಿಸಿದ ಬಗ್ಗೆ ನನಗೆ
ಅಧಿಕೃತ ಆದೇಶ ತಲುಪೇ ಇಲ್ಲ.
ಸಂಘರ್ಷ ನಡೆದದ್ದು, ನಮಗೆ ಕೆಲವು ಸಮಸ್ಯೆಗಳಿದ್ದವು ಅಥವ ನಾವು ಮೈನಾರಿಟಿಯಾಗಿದ್ದೆವು ಎಂಬುದಲ್ಲ.
ಒಂದು ಪ್ರಜಾತಾಂತ್ರಿಕ ಸಂಘಟನೆಯಲ್ಲಿ ಯಾರೇ ಆಗಲಿ ಮೈನಾರಿಟಿಯಲ್ಲಿದ್ದು ಕೆಲಸ ಮಾಡಬೇಕಾಗುತ್ತದೆ.
ಉದಾ: ಭಾರತದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾದ ಜ್ಯೋತಿ ಬಸು ಪ್ರಧಾನಮಂತ್ರಿಯಾಗಬೇಕೆಂದು
ಬಯಸಿದ್ದರು. ಇತರ ಅನೇಕರು ಕೂಡ ಅವರನ್ನು ಪ್ರಧಾನಿ ಸ್ಥಾನಕ್ಕೆ ಬೆಂಬಲಿಸಿದ್ದರು. ಆದರೆ ಅವರ ಪಕ್ಷ
ಬೇಡ ಎಂದು ನಿರ್ಣಯಿಸಿತು. ಬಹುಸಂಖ್ಯಾತರ ನಿರ್ಣಯವನ್ನು ಗೌರವಿಸಿ ಅವರು ಪಕ್ಷದ ತೀರ್ಮಾನದಂತೆ
ನಡೆದುಕೊಂಡರು. ಒಂದು ಪ್ರಜಾತಾಂತ್ರಿಕ ಸಂಘಟನೆ ನಡೆಯಬೇಕಾದ ರೀತಿ ಇದು.
ನಮ್ಮ ಪ್ರಕರಣದಲ್ಲಿ ನಡೆದದ್ದೇನೆಂದರೆ, ನಾವು ದನಿಯೆತ್ತಲು ಸಾಧ್ಯವಿದ್ದ, ಅಭಿಪ್ರಾಯಗಳನ್ನು ವ್ಯಕ್ತಪಡಿಸಲು
ಸಾಧ್ಯವಿದ್ದ ಪ್ರತಿಯೊಂದು ಪ್ರಜಾತಾಂತ್ರಿಕ ಅವಕಾಶಗಳನ್ನು ನಿರ್ಬಂಧಿಸಲಾಯ್ತು. ನ್ಯಾಷನಲ್ ಕೌನ್ಸಿಲ್
ಸಭೆಯಲ್ಲಿ ನಾವು ಕೇಳಿದ್ದಿಷ್ಟು. ‘ರಾಷ್ಟ್ರೀಯ ಸಂಚಾಲಕರ(ಅರವಿಂದ್ ಕೇಜ್ರಿವಾಲರ) ಅಮೋಘ ಭಾಷಣವನ್ನು
ನಾವು ಕೇಳಿದ್ದೇವೆ. ನಾವು ಪ್ರತಿಕ್ರಿಯಿಸಲು ಅವಕಾಶವಿದೆಯೆ? ನಮ್ಮ ವಿರುದ್ಧದ ಆರೋಪಗಳಿಗೆ ಉತ್ತರಿಸಲು
ಅವಕಾಶವಿದೆಯೆ?’ ಇಲ್ಲ. ಅಂಥ ಯಾವ ಅವಕಾಶವೂ ಇರಲಿಲ್ಲ. ಎಲ್ಲ ಪ್ರಜಾತಾಂತ್ರಿಕ ಸಂಸ್ಥೆಗಳನ್ನು
ವ್ಯವಸ್ಥಿತವಾಗಿ ಧ್ವಂಸಗೊಳಿಸುವ ಪ್ರಕ್ರಿಯೆ ಮುಂದುವರೆಯಿತು. ಇಂಥಾ ಸನ್ನಿವೇಶದಲ್ಲಿ ನಮಗೆ ಉಳಿದಿದ್ದ
ದಾರಿಯೇನು? ಬಹಿರಂಗವಾಗಿ ದನಿಯೆತ್ತದೆ ಬೇರೆ ದಾರಿಯೇ ಇರಲಿಲ್ಲ. ಯಾಕಾಗಿ? ಯಾಕೆಂದೆರೆ ನಿಮಗೆಲ್ಲ
ತಿಳಿದಂತೆ ಆಮ್ ಆದ್ಮಿ ಪಕ್ಷ ಇತರೆ ಪಕ್ಷಗಳಂತಲ್ಲ ಎಂದು ಹೇಳುತ್ತಾ ಬಂದಿದ್ದೇವೆ.
ಆದರ್ಶ – ಕನಸುಗಳನ್ನು ಹೊತ್ತು ಬಂದವರು…
ಈ ಪಕ್ಷ ಹುಟ್ಟಿಬಂದಿದ್ದು ಇಡೀ ದೇಶದಾದ್ಯಂತ ಸಾಮಾನ್ಯ ಜನರ ಭಾಗವಹಿಸುವಿಕೆಯಿಂದ ಸೃಷ್ಟಿಯಾದ
ಅಸಾಧಾರಣವಾದ ಚಳವಳಿಯಿಂದ. ಲಕ್ಷಗಟ್ಟಳೆ ಸಾಮಾನ್ಯ ಜನರು, ಯುವಕರು ಹಾಗೂ ಯುವತಿಯರು
ಪ್ರಪ್ರಥಮ ಬಾರಿಗೆ ಬೀದಿಗಿಳಿದಿದ್ದರು. ‘ಹೊಲಸು’ ಎಂದು ಪರಿಗಣಿತವಾಗಿರುವ ರಾಜಕೀಯದಲ್ಲಿ ತಾವು
ಭಾಗವಹಿಸುತ್ತೇವೆಂದು ಅವರೆಂದೂ ಊಹಿಸಿರಲಿಲ್ಲ. ಅಂಥ ಯುವಜನರು ಬೀದಿಗಿಳಿದಿದ್ದರು. ಅವರು
ಭರವಸೆ ಹೊತ್ತು ಬಂದಿದ್ದರು, ಶಕ್ತಿ ಸಾಮರ್ಥ್ಯಗಳನ್ನು ಹೊತ್ತು ತಂದಿದ್ದರು, ನಾನಾ ವಿಚಾರಗಳನ್ನು –
ಆದರ್ಶಗಳನ್ನು ಹೊತ್ತು ಬಂದಿದ್ದರು. ಇದು ಯಾವುದೇ ಒಂದು ಪಕ್ಷದ ಆಸ್ತಿಯಾಗಿರಲಿಲ್ಲ. ಇದು ರಾಷ್ಟ್ರೀಯ
ಸಂಪತ್ತಾಗಿತ್ತು. ಇದು ರಾಷ್ಟ್ರದ ಅತ್ಯಮೂಲ್ಯ ಸಂಪತ್ತಾಗಿತ್ತು. ಇದು ಯಾವಾಗಲೂ ಇರುವಂಥದ್ದಲ್ಲ.
ಸುಮಾರು 25 – 30 ವರ್ಷಗಳಿಗೊಮ್ಮೆ ಇಂಥ ಸಂಪತ್ತು ಸೃಷ್ಟಿಯಾಗುತ್ತದೆ. 1977ರಲ್ಲಿ ನಡೆದ
ಚಳವಳಿಯಲ್ಲಿ 14 ವರ್ಷದ ಹುಡುಗನಾಗಿದ್ದ ನಾನು ಭಾಗವಹಿಸಿದ್ದು ನೆನಪಿದೆ.
ಇಂಥ ಸಕಾರಾತ್ಮಕ ಶಕ್ತಿ ಸಂಚಯಗೊಂಡು ಚಳವಳಿ ರೂಪುಗೊಳ್ಳುವುದು ಒಂದು ತಲೆಮಾರಿನಲ್ಲಿ ಒಮ್ಮೆ
ಮಾತ್ರ. ಈ ಸಕಾರಾತ್ಮಕ ಶಕ್ತಿ ಯಾವುದೇ ಒಂದು ಪಕ್ಷದ ಅಥವ ಒಂದು ಕೂಟದ ಅಥವ ಒಬ್ಬ ವ್ಯಕ್ತಿಯ
ಸ್ವತ್ತಲ್ಲ. ಇದೊಂದು ರಾಷ್ಟ್ರೀಯ ಸಂಪತ್ತು. ಇಂದು ಆ ರಾಷ್ಟ್ರೀಯ ಸಂಪತ್ತು ನಾಯಿನರಿಗಳ ಪಾಲಾಗಿದೆ,
ವ್ಯರ್ಥವಾಗಿ ಹರಿದು ಹಳ್ಳ ಸೇರುತ್ತಿದೆ. ನೂರಾರು ವಾಲಂಟೀರ್‍ಗಳು ನನ್ನನ್ನು ಭೇಟಿಯಾಗಿ ಇಂಥ
ರಾಜಕೀಯದಲ್ಲಿ ನಾವಿರಲು ಸಾದ್ಯವಿಲ್ಲ, ಇನ್ನು ಮುಂದೆ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ ಅಂದರು.
ಯಾಕೆಂದರೆ ಮೋಸಹೋಗಿದ್ದೇವೆಂಬ ಭಾವನೆ ಅವರಲ್ಲಿ ಮೂಡಿದೆ, ಭ್ರಮನಿರಸನ ಉಂಟಾಗಿದೆ.
ನಮ್ಮ ತಂದೆ ಬ್ಯುಸಿನೆಸ್‍ಗೆ ಹೆಚ್ಚು ಗಮನ ಕೊಡು ಅಂತಿದಾರೆ, ನಾನು ಅದಕ್ಕೆ ಹೆಚ್ಚು ಸಮಯ
ಕೊಡಬೇಕಾಗಿದೆ ಅಂತ ಒಬ್ಬರು ಹೇಳ್ತಾರೆ. ಮತ್ತೊಬ್ಬರು ನಾನು ಮನೆಯವರಿಗೆ ಸಮಯ ಕೊಡುತ್ತಿಲ್ಲ ಎಂದು
ನನ್ನ ಹೆಂಡತಿಗೆ ಬಹಳ ಬೇಸರವಿದೆ, ಮನೆಯವರೊಂದಿಗೆ ಹೆಚ್ಚಿನ ಸಮಯ ಕಳೆಯಬೇಕು ಅಂತಾರೆ. ನಾನು
ವ್ಯಾಸಂಗ ಮುಂದುವರೆಸಬೇಕು, ಯುಪಿಎಸ್‍ಸಿ ಪರೀಕ್ಷೆಗೆ ತಯಾರಾಗಬೇಕು ಅಂತ ಇನ್ನೊಬ್ಬರು ಹೇಳ್ತಾರೆ.
ನಾನಿಲ್ಲಿ ಕೆರಿಯರ್ ನಿರ್ಮಾಣದ ವಿರುದ್ಧವೋ ಅಥವ ಪುರುಷರು ಹೆಚ್ಚಿನ ಸಮಯವನ್ನು ತಮ್ಮ ಕುಟುಂಬಕ್ಕೆ
ಕೊಡುವುದರ ವಿರುದ್ಧವೋ ಮಾತಾಡುತ್ತಿಲ್ಲ. ಆದರೆ ಇಂದು ಆ ಯುವಜನತೆ ಹೀಗೆ ಮಾತಾಡುತ್ತಿರುವುದು
ಒಂದು ರೀತಿಯ ಭ್ರಮನಿರಸನದಿಂದ, ಭರವಸೆ ಕಳೆದುಕೊಂಡಿರುವುದರಿಂದ. ಭರವಸೆ ಕಳೆದುಕೊಳ್ಳುವುದು
ಯಾವುದೇ ಸಮಾಜದ ಒಂದು ದೊಡ್ಡ ದುರಂತ. ಭರವಸೆಯನ್ನು ಗಳಿಸುವುದು ಯಾವುದೇ ಚಳವಳಿಯ ಅತಿ
ದೊಡ್ಡ ಸಾಧನೆ. ಇಂದು ಭರವಸೆ ಕ್ಷೀಣಿಸುತ್ತಿರುವುದು ನಮ್ಮ ದೇಶದ ದೊಡ್ಡ ದುರಂತ. ಈ ಸ್ವರಾಜ್
ಅಭಿಯಾನ್ ಎಂಬುದು ಕೊಚ್ಚಿಹೋಗುತ್ತಿರುವ ಆ ಭರವಸೆಯ ಹರಿವಿಗೆ ಅಡ್ಡಲಾಗಿ ಒಂದು ಒಡ್ಡು
ನಿರ್ಮಿಸುವ ಕಾರ್ಯವೇ ವಿನಃ ಬೇರೇನಲ್ಲ. ಭರವಸೆಯ ಜಲರಾಶಿ ವ್ಯರ್ಥವಾಗಿ ಹರಿದು ಹೋಗದಂತೆ
ತಡೆಯುವುದು ಈ ಅಭಿಯಾನದ ಉದ್ದೇಶ. ಈ ರಾಷ್ಟ್ರೀಯ ಶಕ್ತಿಯನ್ನು ಸಂರಕ್ಷಿಸುವುದು ನಮ್ಮ ನಿಮ್ಮೆಲ್ಲರ
ಕರ್ತವ್ಯ.
ಇದು ಎಲ್ಲರಿಗಿಂತ ಹೆಚ್ಚಾಗಿ ನಮ್ಮದೇ ಕರ್ತವ್ಯ. ಯಾಕೆಂದರೆ ನಾವು ಅವರಿಗೆ ಭರವಸೆ ಹೇಳಿ
ಬರಮಾಡಿಕೊಂಡು ಮೂಲ ಅಪರಾಧವೆಸಗಿದ್ದೇವೆ. ಇಂದು ಅವರು ಹಿಂದೆ ಸರಿಯುತ್ತಿದ್ದಾರೆ. ಅವರ
ಕೈಹಿಡಿದು ತಡೆದು ನಿಲ್ಲಿಸುವುದು ನನ್ನ ಮತ್ತು ನಿಮ್ಮ ಕರ್ತವ್ಯ ಮತ್ತು ಜವಾಬ್ದಾರಿ. ‘ವಾಪಸ್ ಹೋಗಬೇಡಿ
ಭರವಸೆಯಿದೆ, ಹಿಂದೆ ಸರಿಯಬೇಡಿ ನೀವು ಒಬ್ಬಂಟಿಯಲ್ಲ, ನೀವು ಮೂರ್ಖರಲ್ಲ, ನೀವು
ಅಮೂಲ್ಯವಾದವರು, ನೀವು ಈ ದೇಶದ ಆಸ್ತಿ’ ಎಂದು ಅವರಿಗೆ ಗಟ್ಟಿದನಿಯಲ್ಲಿ ಹೇಳಬೇಕಾಗಿದೆ. ನೀವು
ನಮ್ಮ ಜೊತೆ ಸೇರಿ ಎಂದು ನಾವು ಕಡ್ಡಾಯ ಮಾಡುತ್ತಿಲ್ಲ. ನೀವು ಯಾವ ಸಂಘಟನೆಯನ್ನಾದರೂ ಸೇರಿಕೊಳ್ಳಿ,
ಯಾವುದೇ ಸಿದ್ಧಾಂತವನ್ನಾದರೂ ಒಪ್ಪಿಕೊಳ್ಳಿ, ಬೇಕೆಂದರೆ ಆಮ್ ಆದ್ಮಿ ಪಕ್ಷಕ್ಕೇ ವಾಪಸ್ ಹೋಗಿ. ಆದರೆ
ದಯವಿಟ್ಟು ಚಳವಳಿಯಲ್ಲಿ ಉಳಿಯಿರಿ, ಚಳವಳಿಯಿಂದ ದೂರ ಸರಿಯಬೇಡಿ, ಭರವಸೆ ಉತ್ಸಾಹ
ಕಳೆದುಕೊಳ್ಳಬೇಡಿ, ಈ ದೇಶದ ಬದಲಾವಣೆಯಾಗಬಲ್ಲ ಸಾಮರ್ಥ್ಯದ ಮೇಲೆ ಭರವಸೆ ಇಡಿ ಎಂದು ನಾವು
ಅವರ ಮನವೊಲಿಸಬೇಕಿದೆ.
ಎಎಪಿ ನಮ್ಮ ಶತೃವಲ್ಲ
ಮತ್ತೊಂದು ವಿಷಯ. ನಾವು ಇಲ್ಲಿ ನೆರೆದಿರುವುದು ಆಮ್ ಆದ್ಮಿ ಪಕ್ಷವನ್ನು ಟೀಕಿಸಲಿಕ್ಕಾಗಿ ಅಲ್ಲ.
ರಾಜಕೀಯ ಚಳವಳಿಗಳು ಒಡೆದು ಇಭ್ಭಾಗವಾದಾಗ ಸಾಮಾನ್ಯವಾಗಿ ಒಂದು ತಪ್ಪು ನಡೆಯುತ್ತದೆ. ಪರಸ್ಪರರ
ವಿರುದ್ಧ ತಮ್ಮ ಶಕ್ತಿಯನ್ನು ವ್ಯಯ ಮಾಡಿಕೊಳ್ಳುತ್ತಾರೆ. ಸಿಪಿಐ ಪಕ್ಷದಿಂದ ಸಿಪಿಐ(ಎಂ) ಪ್ರತ್ಯೇಕಗೊಂಡಾಗ
ಆಗಿದ್ದೂ ಇದೆ. ಸಿಪಿಎಂನಿಂದ ನಕ್ಸಲೈಟ್ ಪಕ್ಷ ಬೇರೆಯಾದಾಗ ಆಗಿದ್ದು ಇದೇ. ನಿನ್ನೆಯವರೆಗೂ ತಮ್ಮ
ಜೊತೆಯಿದ್ದವರನ್ನು ವಿಮರ್ಶೆ ಮಾಡಲಿಕ್ಕೆ ಮೊದಲಿಗೆ ತಮ್ಮ ಎಲ್ಲ ಶಕ್ತಿ ಸಾಮರ್ಥ್ಯಗಳನ್ನು ವ್ಯಯಿಸಿದ್ದು
ನಡೆದಿದೆ. ನಾವು ಅಂಥಾ ತಪ್ಪನ್ನು ಮಾಡುವುದು ಬೇಡ ಎಂದು ಇಲ್ಲಿ ನೆರೆದಿರುವ ಪ್ರತಿಯೊಬ್ಬರಲ್ಲೂ ನಾನು
ಮನವಿ ಮಾಡುತ್ತೇನೆ. ನಮ್ಮ ಶಕ್ತಿಯನ್ನು ಹಾಗೆ ವೃಥಾ ವ್ಯಯ ಮಾಡುವುದು ಬೇಡ.
ಲಕ್ಷಾಂತರ ಜನರು ಇಂದು ನಮ್ಮ ಜೊತೆ ಬಂದಿಲ್ಲ. ಕೆಲವರು ಅನಾನುಕೂಲತೆಯಿಂದ ಬರದೇ ಇರಬಹುದು,
ಕೆಲವರು ಅನಿಶ್ಚತತೆಯ ಕಾರಣಕ್ಕೆ ಬಂದಿಲ್ಲದಿರಬಹುದು, ಇನ್ನೂ ಕೆಲವರು (ಪಕ್ಷದ ಶಿಸ್ತು ಕ್ರಮದ) ಭಯದ
ಕಾರಣಕ್ಕೆ ಬರದೇ ಇರಬಹುದು, ಮತ್ತೂ ಕೆಲವರು ತಮ್ಮ ಸ್ಥಾನ ಹಾಗೂ ಅಧಿಕಾರಗಳ ಸೆಳೆತದಿಂದಾಗಿ
ಬರದೇ ಇರಬಹುದು. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಪದಾಧಿಕಾರಿಗಳನ್ನು ಉಚ್ಚಾಟಿಸಲಾಗುತ್ತದೆಂದು
ಆಮ್ ಆದ್ಮಿ ಪಕ್ಷದ ಕರ್ನಾಟಕ ಘಟಕಕ್ಕೂ ಒಂದು ಫತ್ವಾ ಬಂದಿದೆಯೆಂದು ನನಗೆ ತಿಳಿದುಬಂತು. ಇಂಥಾ
ವಿಷಯಗಳ ಬಗ್ಗೆ ನಕ್ಕು ಸುಮ್ಮನಾಗಿಬಿಡಿ; ಅಂಥಾ ವಿಷಯಗಳಿಗೆ ಹೆಚ್ಚು ಸಮಯಹರಣ ಮಾಡಬೇಡಿ.
ಆದರೆ ದಯವಿಟ್ಟು ಒಂದು ವಿಷಯವನ್ನು ನೆನಪಿನಲ್ಲಿಡಿ. ಇಲ್ಲಿ ಭಾಗವಹಿಸದೇ ಇರುವವರು ನಮ್ಮ
ಶತೃಗಳಲ್ಲ; ಅವರು ನಮ್ಮ ಮಿತ್ರರು. ಅವರು ನಮ್ಮ ಸಹ ಪ್ರಯಾಣಿಕರು. ಅವರು ನಮ್ಮ ಪ್ರಯಾಣದಲ್ಲಿ
ಈಗಲೇ ಸೇರಿಲ್ಲವಾದರೂ ರಸ್ತೆಯ ಮುಂದಿನ ಜಂಕ್ಷನ್‍ನಲ್ಲಿ ಸೇರಬಹುದು, ಕೆಲವರು ಮೂರನೇ ಕ್ರಾಸ್‍ನಲ್ಲಿ,
ಮತ್ತೆ ಕೆಲವರು ಏಳನೇ ಕ್ರಾಸ್‍ನಲ್ಲಿ ನಮ್ಮ ಜೊತೆ ಸೇರಬಹುದು. ಆದ್ದರಿಂದ ನಮ್ಮ ಆ ಗೆಳೆಯರನ್ನು ಟೀಕೆ
ಮಾಡಲಿಕ್ಕೆ ಒಂದು ಕ್ಷಣದ ನಮ್ಮ ಶಕ್ತಿಯನ್ನೂ ವ್ಯಯಿಸಬಾರದು. ಬೆಂಗಳೂರಿನಲ್ಲಿ ಅವರು ಯಾವುದೇ
ಉತ್ತಮ ಕೆಲಸ ಮಾಡುತ್ತಿದ್ದರೆ, ನೀವು ಸಮಯ ಕೊಡಲು ಸಾಧ್ಯವಿದ್ದರೆ ದಯವಿಟ್ಟು ಸ್ಪೂರ್ತಿಯಿಂದಲೇ
ಅವರೊಂದಿಗೆ ಭಾಗವಹಿಸಿ.
ಪರಿಸ್ಥಿತಿಯಲ್ಲಿ ಬದಲಾವಣೆ ಬಂದೇ ಬರುತ್ತದೆ ಎಂದು ನನಗೆ ಭರವಸೆಯಿದೆ, ಈ ವಿಷಯವನ್ನು ಪ್ರಮಾಣ
ಮಾಡಿ ಹೇಳಬಲ್ಲೆ. ಯಾಕೆಂದರೆ ಅವರಲ್ಲಿರುವ ಬಹುತೇಕರು ಬಂದಿರುವುದು ಎಂಎಲ್‍ಎ ಆಗಲಿಕ್ಕೆಂದೋ,
ಕಾರ್ಪೊರೇಟರ್ ಆಗಲಿಕ್ಕೆಂದೋ ಅಲ್ಲ; ಅವರೂ ಕೂಡ ತಮ್ಮ ದೇಶಕ್ಕಾಗಿ, ಸಮಾಜಕ್ಕಾಗಿ ಏನಾದರೂ
ಮಾಡಬೇಕೆಂಬ ಆಶಯದೊಂದಿಗೆ ಬಂದಿದ್ದಾರೆ. ಭೌತಿಕವಾಗಿ ಅವರು ಇಂದು ಇಲ್ಲಿಲ್ಲ, ಆದರೆ ಅವರು ನಮ್ಮ
ಆಶಯಗಳ ಜೊತೆಗಿದ್ದಾರೆ, ಆದ್ದರಿಂದ ಅವರು ಖಂಡಿತ ನಮ್ಮೊಂದಿಗೆ ಸೇರುತ್ತಾರೆ.
ದೆಹಲಿಯ ಆಮ್ ಆದ್ಮಿ ಪಕ್ಷ ಒಂದು ಪ್ರಾದೇಶೀಕ ಪಕ್ಷವಾಗಿದೆ. ಅದನ್ನು ವಿಮರ್ಶೆ ಮಾಡುತ್ತಾ ಕಾಲಹರಣ
ಮಡುವುದು ಬೇಡ. ನಿನ್ನೆ ಸಭೆಯಲ್ಲಿ ಒಬ್ಬರು ತಮ್ಮನ್ನು ಬಿಎಸ್‍ಪಿ ಪಕ್ಷದ ರಾಜ್ಯಾಧ್ಯಕ್ಷ ಎಂದು ಪರಿಚಯ
ಮಾಡಿಕೊಂಡರು. ಕರ್ನಾಟಕದಲ್ಲಿ ಬಿಎಸ್‍ಪಿ ಪಕ್ಷವಿದೆ ಎಂಬ ಸಂಗತಿಯೇ ನನ್ನ ಗಮನಕ್ಕೆ ಬಂದಿರಲಿಲ್ಲ.
ಅದು ಉತ್ತರಪ್ರದೇಶದ ಪ್ರಾದೇಶಿಕ ಪಕ್ಷ ಎಂಬುದು ನನ್ನ ತಿಳುವಳಿಕೆ. ಅದು ಬಿಟ್ಟರೆ ಕೆಲವರು
ಮಹಾರಾಷ್ಟ್ರದಲ್ಲಿ, ಕೆಲವರು ಪಂಜಾಬ್‍ನಲ್ಲಿ ಇದ್ದಾರೆ. ಆದರೂ ಅದೊಂದು ಪ್ರಾದೇಶಿಕ ಪಕ್ಷವೇ.
ಅದೇ ರೀತಿ ದೆಹಲಿಯ ಆಮ್ ಆದ್ಮಿ ಪಕ್ಷ ಇತರ ಕಡೆಗಳಲ್ಲೂ ಒಂದಷ್ಟು ವಿಸ್ತರಣೆ ಕಂಡಿರಬಹುದು.
ಆದ್ದರಿಂದ ದೆಹಲಿಯ ಆಮ್ ಆದ್ಮಿ ಪಕ್ಷದ ಬಗ್ಗೆ ಅಥವ ದೆಹಲಿಯ ಸರ್ಕಾರದ ಬಗ್ಗೆ ವಿಮರ್ಶೆ ಮಾಡುತ್ತಾ
ಕೂರುವುದರಲ್ಲಿ ಅರ್ಥವಿಲ್ಲ. ಈ ದೇಶ ಎದುರಿಸುತ್ತಿರುವ ಹತ್ತು ಪ್ರಮುಖ ಸಮಸ್ಯೆಗಳನ್ನು ನಾವು
ಪಟ್ಟಿಮಾಡಿದರೆ ಆಮ್ ಆದ್ಮಿ ಪಕ್ಷವೂ ಆ ಹತ್ತು ಸಮಸ್ಯೆಗಳಲ್ಲಿ ಒಂದು ಸಮಸ್ಯೆಯಾಗಿದೆಯೆ? ಖಂಡಿತ
ಇಲ್ಲ. ವಿಷಯ ಇಷ್ಟು ನಿಚ್ಚಳವಾಗಿದೆ. ಹೀಗಿದ್ದಾಗ ನಾವು ಈ ಬಗ್ಗೆ ನಮ್ಮ ಶಕ್ತಿ- ಸಮಯ ವ್ಯಯ
ಮಾಡುವುದರಲ್ಲಿ ಅರ್ಥವಿದೆಯೆ?
ಮತ್ತೊಂದು ಸರಳ ಹೋಲಿಕೆ ಮೂಲಕ ಅರ್ಥಮಾಡಿಕೊಳ್ಳೋಣ. ನಮ್ಮ ದೇಶವನ್ನು ಒಂದು ದೊಡ್ಡ
ಮೈದಾನವೆಂದು ಕಲ್ಪಿಸಿಕೊಳ್ಳಿ. ನಾವು ಕಳೆದ ಮೂರು ವರ್ಷಗಳ ಹಿಂದೆ ಆರಂಭಿಸಿದ ಚಳವಳಿ ಆ
ಮೈದಾನದಲ್ಲಿ ಕರವಸ್ತ್ರವಿದ್ದಂತೆ. ನನಗೂ, ನಿಮಗೂ ಆ ಕರವಸ್ತ್ರ ಸ್ವಚ್ಚವಾಗಿಲ್ಲ ಎಂಬುದು ಗೊತ್ತಿದೆ. ಅದರಲ್ಲಿ
ಕಲೆಗಳಿವೆ, ತೂತು ಬಿದ್ದಿದೆಯೆಂಬುದೂ ಗೊತ್ತಿದೆ. ಹೀಗಿದ್ದಾಗ ನೀವು ನಿಮ್ಮ ಇಡೀ ಗಮನವನ್ನು ಕರವಸ್ತ್ರದ
ಮೇಲೆ ಕೇಂದ್ರೀಕರಿಸಲು ಸಾಧ್ಯವೆ? ಇಡೀ ಮೈದಾನವನ್ನೇ ಶುಚಿಗೊಳಿಸುವುದು ನಮ್ಮ ಪ್ರಧಾನ
ಕೆಲಸವಾಗಿರುವಾಗ ಒಂದು ಕರವಸ್ತ್ರದ ಸಮಸ್ಯೆಯ ಬಗ್ಗೆ ಮಾತ್ರ ಮತಾಡಿಕೊಂಡಿರಲು ಹೇಗೆ ಸಾಧ್ಯ?
ಆದ್ದರಿಂದ ಇಡೀ ಮೈದಾನವನ್ನು ಶುಚಿಗೊಳಿಸುವ ಕಡೆ ಗಮನಹರಿಸಬೇಕೆಂದು ನಿಮ್ಮಲ್ಲಿ ವಿನಂತಿ
ಮಾಡುತ್ತಿದ್ದೇನೆ.
ಕಳೆದ ನಾಲ್ಕೈದು ದಿನಗಳಿಂದ (ದೆಹಲಿಯ ಎಎಪಿ ಸಭೆಯಲ್ಲಿ) ರೈತನ ಆತ್ಮಹತ್ಯೆ ಬಗ್ಗೆ ನಿಮ್ಮ
ಅಭಿಪ್ರಾಯವೇನೆಂದು ಮಾಧ್ಯಮದವರು ಪದೇಪದೇ ಪ್ರಶ್ನೆ ಕೇಳುತ್ತಿದ್ದಾರೆ. ದೆಹಲಿಯ ಆಮ್ ಆದ್ಮಿ ಪಕ್ಷದ
ಬಗ್ಗೆ ನಿಂದನಾತ್ಮಕವಾದ ಹೇಳಿಕೆ ನೀಡಲಿ ಎಂಬುದು ಅವರ ನಿರೀಕ್ಷೆ. ತಮಗೆ ಧನ್ಯವಾದಗಳು, ಆ ಬಗ್ಗೆ
ನನಗೆ ಹೇಳಲಿಕ್ಕೇನೂ ಇಲ್ಲ ಎಂದು ಹೇಳಿದ್ದೇನೆ. ಇಲ್ಲಿ ನಾವು ಗಮನಿಸಲೇಬೇಕಾದ ಒಂದು ಅಂಶವಿದೆ.
ಬಹುತೇಕ ಮಾಧ್ಯಮದವರಿಗೆ, ಸಾರ್ವಜನಿಕ ಜೀವನದಲ್ಲಿರುವ ಬಹುತೇಕರಿಗೆ ಹಾಗೂ ಅವರ ಹಿಂದಿರುವ
ಭಾರೀ ಕಾರ್ಪೊರೇಟ್ ಶಕ್ತಿಗಳು ಆಮ್ ಆದ್ಮಿ ಪಕ್ಷ ನಾಶವಾಗಲಿ ಎಂದು ಬಯಸಿದ್ದಾರೆ. ಅದಕ್ಕಾಗಿಯೇ
ಅವರು ಟೀಕಾಪ್ರಹಾರ ನಡೆಸಿದ್ದಾರೆ. ನನಗೆ ನಿಮಗಿರುವ ಕಾರಣಕ್ಕಾಗಿ ಅವರು ಟೀಕಿಸುತ್ತಿಲ್ಲ. ಭ್ರಚ್ಟಾಚಾರದ
ವಿರುದ್ಧ ಯಾರೇ ದನಿಯೆತ್ತುವುದು ಅವರಿಗೆ ಬೇಕಾಗಿಲ್ಲ. ಆದ್ದರಿಂದ ಎಎಪಿಯ ವಿರುದ್ಧ ನಮ್ಮನ್ನು ಒಂದು
ಆಯುಧವಾಗಿ ಬಳಸಲು ಹವಣಿಸಿದ್ದಾರೆ. ಆಮ್ ಆದ್ಮಿ ಪಕ್ಷವನ್ನು ಬಡಿಯಲು ಅವರ ಕೈಗೆ ದೊಣ್ಣೆ
ಬೇಕಾಗಿದೆ. ಯಾವುದೇ ಕಾರಣಕ್ಕೂ ನಾವು ಅವರ ಕೈಯಲ್ಲಿನ ಉಪಕರಣವಾಗಬಾರದು.
ಆದ್ದರಿಂದ ನನ್ನ ವಿನಂತಿ ಏನೆಂದರೆ, ಮಾಡಲಿಕ್ಕೆ ನಮಗೆ ಬಹಳಷ್ಟು ಸಕಾರಾತ್ಮಕವಾದ ಮತ್ತು
ರಚನಾತ್ಮಕವಾದ ಕೆಲಸಗಳು ನಮ್ಮ ಮುಂದಿವೆ. ನಕಾರಾತ್ಮಕ ವಿಷಯಗಳಲ್ಲಿ ತೊಡಗಿಸಿಕೊಳ್ಳುವುದು ಬೇಡ.
ಇದುವರೆಗೂ ಕೇಳಿಬಂದ ವಿಮರ್ಶೆಗಳು, ದೂಷಣೆಗಳನ್ನು ಹಗುರವಾಗಿ ತೆಗೆದುಕೊಳ್ಳಲು ಅಭ್ಯಾಸ
ಮಾಡಿಕೊಳ್ಳಬೇಕು. ಯಾಕೆಂದರೆ ಸಾರ್ವಜನಿಕ ಜೀವನದಲ್ಲಿ ಇಂಥಾ ನಿಂದನೆಗಳು ಸಾಮಾನ್ಯ. ಎಲ್ಲಕ್ಕಿಂತ
ಮೊದಲು ನಾವಿಲ್ಲಿಗೆ ಬಂದಿರುವುದೇಕೆ ಎಂಬುದನ್ನು ಸದಾ ನೆನಪಿನಲ್ಲಿಡಬೇಕು. ದೂಷಣೆಗಳನ್ನು ನಿರ್ಲಕ್ಷಿಸಿ
ನಾವು ನಮ್ಮ ಗುರಿಯತ್ತ ಮುನ್ನಡೆಯುತ್ತಿರಬೇಕು.
ಪರ್ಯಾಯ ರಾಜಕಾರಣದ ಹಾದಿಯಲ್ಲಿ …
ನಾವೆಲ್ಲರೂ ಯಾಕಿಲ್ಲಿ ಸೇರಿದ್ದೇವೆ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳೋಣ. ಕೆಲವು ಪ್ರಮುಖ ಪ್ರಶ್ನೆಗಳಿಗೆ
ಉತ್ತರಗಳನ್ನು  ಹುಡುಕುವ ಪ್ರಕ್ರಿಯೆಯಲ್ಲಿ ನಾವಿಲ್ಲಿ ಒಟ್ಟಾಗಿದ್ದೇವೆ. ನೀವು ಎಲ್ಲ ಪ್ರಶ್ನೆಗಳನ್ನು ಕೇಳಿ
ನನ್ನ ಬಳಿ ಉತ್ತರ ಇದೆ, ನಾನು ಉತ್ತರಿಸುತ್ತೇನೆ ಎಂಬುದಲ್ಲ, ಅಥವ ಬೇರಾರ ಬಳಿಯೋ ಉತ್ತರ ಇದೆ
ಎಂದರ್ಥವಲ್ಲ. ನಾವೆಲ್ಲರೂ ಕಲೆತು ಈ ಸಂವಾದದ ಮೂಲಕ ಉತ್ತರಗಳನ್ನು ಕಂಡುಕೊಳ್ಳಬೇಕು. ಇದು
ಏಕಮುಖ ವಾದವಲ್ಲ, ಇದು ಸಂವಾದ. ಆದ್ದರಿಂದ ಇಲ್ಲಿ ನೆರೆದಿರುವ ಪ್ರತಿಯೊಬ್ಬರೂ ತಮ್ಮ ವಿಚಾರಗಳನ್ನು
ಹಂಚಿಕೊಳ್ಳುವಂತಾಗಬೇಕು. ನಾವೆಲ್ಲ ಕಲೆತು ಸಾಮೂಹಿಕ ಚರ್ಚೆ ನಡೆಸಿ ನಮ್ಮ ರಾಜಕೀಯ ಪ್ರಶ್ನೆಗಳಿಗೆ
ಉತ್ತರ ಕಂಡುಕೊಳ್ಳಬೇಕು ಎಂಬುದು ಸ್ವರಾಜ್ ಸಂವಾದದ ಉದ್ದೇಶ.
ನೀವು ಒಂದು ರಾಜಕೀಯ ಪಕ್ಷವೇ? ನೀವು ಮತ್ತೊಂದು ಪಕ್ಷ ಕಟ್ಟಲು ಹೊರಟಿದ್ದೀರಾ? ಎಂಬ ಪ್ರಶ್ನೆಯನ್ನು
ನಾವು ಪದೇಪದೇ ಎದುರಿಸುತ್ತಿದ್ದೇವೆ. ಇದಕ್ಕೆ ನನ್ನ ಉತ್ತರ ಇಲ್ಲ ಮತ್ತು ಹೌದು ಎಂದು. ರಾಜಕೀಯ
ಎಂಬುದನ್ನು ಯಾವ ರೀತಿಯಲ್ಲಿ ಅರ್ಥಮಾಡಿಕೊಂಡಿದ್ದೀರಿ ಎಂಬುದರ ಮೇಲೆ ನಮ್ಮ ಉತ್ತರ
ಅವಲಂಬಿಸಿದೆ. ರಾಜಕೀಯದ ಅರ್ಥ ಚುನಾವಣೆಗಳಲ್ಲಿ ಸ್ಪರ್ಧಿಸುವುದು ಮತ್ತು ಹೇಗಾದರೂ ಮಾಡಿ
ಸರ್ಕಾರ ರಚಿಸುವುದು ಎಂಬುದಾದರೆ ‘ಅಲ್ಲ’ ಎಂಬುದು ನಮ್ಮ ಉತ್ತರ. ನಮ್ಮದು ಅಂಥ ರಾಜಕಾರಣವಲ್ಲ.
ಹಾಗಾದರೆ ಅದು ರಾಜಕೀಯದ ದುರಂತ. ರಾಜಕೀಯ ಎಂದರೆ ಕೇವಲ ಇದಿಷ್ಟೇ ಅಲ್ಲ.
ರಾಜಕೀಯ ಎಂಬುದರಲ್ಲಿ ಕನಿಷ್ಟ ಈ ಐದು ಅಂಶಗಳನ್ನು ಒಳಗೊಂಡಿದೆ.
ರಾಜಕೀಯ ಎಂದರೆ ಚುನಾವಣೆಗಳಲ್ಲಿ ಸ್ಪರ್ಧಿಸಿ, ಸರ್ಕಾರ ರಚಿಸುವುದು ಎಂಬುದು ನಿಜ. ಉತ್ತಮ
ರಾಜಕಾರಣದಲ್ಲಿ ಇದೊಂದು ಅವಿಭಾಜ್ಯ ಅಂಗ. ಆದರೆ ಇದು ರಾಜಕಾರಣದ ಆರಂಭ ಎಂತಲೂ ಅಲ್ಲ;
ರಾಜಕಾರಣದ ಅಂತಿಮ ಗುರಿಯೂ ಅಲ್ಲ.
ರಾಜಕೀಯ ಎಂದರೆ, ಚುನಾವಣೆಗಳಲ್ಲಿ ಸ್ಪರ್ಧಿಸಿ ಸರ್ಕಾರ ರಚಿಸುವುದು, ರಾಜಕೀಯ ಅಧಿಕಾರ ಬಳಸಿ
ಕಾರ್ಯನಿರ್ವಹಿಸುವುದು, ಅಜೆಂಡಾಗಳನ್ನು ಬದಲಿಸುವುದೂ ಆಗಿರಬೇಕು.
ಎರಡನೆಯದಾಗಿ, ರಾಜಕೀಯ ಎಂಬುದು ಹೋರಾಟ, ಎಲ್ಲೆಡೆ ಇರುವ ಅನ್ಯಾಯಗಳ ವಿರುದ್ಧ,
ಪ್ರತಿಯೊಂದು ಅನ್ಯಾಯದ ವಿರುದ್ಧ ಹೋರಾಡುವುದು ಎಂಬುದಾಗಿರಬೇಕು. ಸಾಮಾನ್ಯವಾಗಿ ಈ ಕೆಲಸವನ್ನು
ನಾವು ಚಳವಳಿ-ಸಂಘಟನೆಗಳ ಕೆಲಸ ಎಂದುಕೊಂಡಿದ್ದೇವೆ. ರಾಜಕೀಯ ಪಕ್ಷಗಳು ಸಾಮಾನ್ಯವಾಗಿ ಇಂಥಾ
ಹೋರಾಟಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಸಾಂದರ್ಭಿಕವಾಗಿ ಮಾತ್ರ ಇಂಥ ಚಟುವಟಿಕೆ ನಡೆಸುತ್ತವೆ.
ನಿಮಗೆ ನೆನಪಿರಬಹುದು – ಆಮ್ ಆದ್ಮಿ ಪಕ್ಷದಲ್ಲಿದ್ದಾಗ ಒಂದು ಪ್ರಶ್ನೆ ಪದೇಪದೇ ಕೇಳಿ ಬರುತ್ತಿತ್ತು.
“ನೀವು ಚಳವಳಿಯಾಗಿರಲು ಬಯಸುತ್ತೀರೋ? ಅಥವ ನೀವು ರಾಜಕೀಯ ಪಕ್ಷವಾಗಿರಲು
ಬಯಸುತ್ತೀರೋ?” ಎಂಬುದು ಆ ಪ್ರಶ್ನೆ. ಆಗ ನಾವು ಹೇಳಿದ್ದೇನೆಂದರೆ, ಕನಿಷ್ಟ ಪಕ್ಷ ಮಾತಿನಲ್ಲಾದರೂ
ಹೇಳಿದ್ದೇನೆಂದರೆ ‘ನಾವು ಚಳವಳಿಯಾಗಿ ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ ಮತ್ತು ನಾವೊಂದು
ರಾಜಕೀಯ ಪಕ್ಷವಾಗಿಯೂ ಇರುತ್ತೇವೆ’ ಎಂದು. ನಾವೀಗ ಆ ವಿಷಯವನ್ನು ಮರೆತುಬಿಟ್ಟಿದ್ದೇವೆ. ಆದರೆ
ಅದು ಬಹಳ ಮಹತ್ವದ ವಿಚಾರ. ಪ್ರತಿಭಟನೆ, ಅನ್ಯಾಯದ ವಿರುದ್ಧ ಹೋರಾಟ ಎಂಬುದು ರಾಜಕಾರಣದ
ಅಂತರ್ಗತ ಅಂಶ.
ಮೂರನೆಯದು ರಚನಾತ್ಮಕ ಕೆಲಸ, ಸಕಾರಾತ್ಮಕ – ರಚನಾತ್ಮಕ ಕಾರ್ಯ. ಉದಾಹರಣೆಗೆ ಚಪ್ಪಲಿ
ಮಾಡುವವರನ್ನು ಒಗ್ಗೂಡಿಸಿ, ಒಂದು ಸಹಕಾರ ಸಂಸ್ಥೆ ರೂಪಿಸುವುದು, ಶಾಲೆಗಳಲ್ಲಿ ಉತ್ತಮ ಕಲಿಕಾ
ವಾತಾವರಣ ರೂಪಿಸುವುದು, ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಾಗರಿಕರನ್ನು ಒಂದೆಡೆ
ಸೇರಿಸುವುದು – ಇಂಥ ಕೆಲಸಗಳನ್ನು ನಾವು ಎನ್‍ಜಿಒ ಗಳಿಗೆ ಬಿಟ್ಟುಬಿಟ್ಟಿದ್ದೇವೆ. ಇಂತಹ ಕೆಲಸಗಳು
ಎನ್‍ಜಿಒ ಚಟುವಟಿಕೆ ಎಂದೇ ಪರಿಗಣಿತವಾಗಿವೆ. ಆದರೆ ರಚನಾತ್ಮಕ ಕೆಲಸವೂ ಕೂಡ ರಾಜಕೀಯದ
ಒಂದು ಭಾಗವೇ ಆಗಿರಬೇಕು.
ನಾಲ್ಕನೆಯದು ಹೊಸ ವಿಚಾರ, ಚಿಂತನೆಗಳನ್ನು ಸೃಷ್ಟಿಸುವುದು. 20ನೇ ಶತಮಾನದ ಅತ್ಯಂತ ಆಸಕ್ತಿದಾಯಕ
ವಿಚಾರಗಳು, ಅತ್ಯಂತ ಸೃಜನಶೀಲ ವಿಚಾರಗಳು ಯಾವುದೇ ವಿಶ್ವವಿದ್ಯಾಲಯದಿಂದ ಬಂದವುಗಳಲ್ಲ. ಅವು
ಬಂದದ್ದು ರಾಜಕೀಯ ಚಳವಳಿಯಿಂದ ಎಂಬುದನ್ನು ನಾವು ಮರೆಯುವಂತಿಲ್ಲ. 20 ನೇ ಶತಮಾನದ
ಮಹಾನ್ ಚಿಂತಕರಾಗಲಿ, ಅತ್ಯಂತ ಜನಪ್ರಿಯವಾದ ಕಾವ್ಯವೇ ಇರಲಿ, ನಿಮ್ಮ ನೆಚ್ಚಿನ ಸಿನಿಮಾ ನಿರ್ದೇಶಕರೇ
ಇರಲಿ, ನೆಚ್ಚಿನ ಸಿನಿಮಾ ಹಾಡುಗಳೇ ಇರಲಿ – ಇವೆಲ್ಲವೂ ರಾಜಕೀಯ ಚಳವಳಿಯ ಹಿನ್ನೆಲೆಯಿದ್ದ
ವ್ಯಕ್ತಿಗಳಿಂದ ಸೃಷ್ಟಿಸಲ್ಪಟ್ಟಿವೆ. ಪ್ರಸಿದ್ಧ ಪ್ರೇಮ ಕಾವ್ಯಗಳೂ ಕೂಡ ರಾಜಕೀಯ ವ್ಯಕ್ತಿಗಳಿಂದ ಸೃಷ್ಟಿಸಲ್ಪಟ್ಟಿವೆ.
ರಾಜಕೀಯ ಎಂಬುದು ಸೃಜನಾತ್ಮಕ ಕ್ರಿಯೆಗಳ ಆಗರ. ಆದರೆ ಈ ಕ್ರಿಯೆ ಈಗ ವಿಶ್ವವಿದ್ಯಾಲಯಗಳ ವ್ಯಾಪ್ತಿಗೆ
ಸೀಮಿತವಾಗಿಬಿಟ್ಟಿದೆ.
ಅಂತಿಮವಾಗಿ, ರಾಜಕೀಯ ಎಂಬುದು ನಿಮ್ಮ ಅಂತರಾತ್ಮದ ಜೊತೆ ನಿಮ್ಮ ಸಂಬಂಧದ ಕುರಿತದ್ದಾಗಿದೆ. ಈ
ವಿಷಯ ನಿಮ್ಮಲ್ಲಿ ಅನೇಕರಿಗೆ ಆಶ್ಚರ್ಯವೆನಿಸಬಹುದು. ಯಾಕೆಂದರೆ ರಾಜಕೀಯಕ್ಕೂ ಇದಕ್ಕೂ ಏನಾದರೂ
ಸಂಬಂಧವಿರುತ್ತೆ ಎಂದು ನಾವು ಎಂದಿಗೂ ಊಹಿಸಿರುವುದಿಲ್ಲ.
ರಾಜಕೀಯ ಎಂಬುದು ಹೊರಗಿನ ಕೆಲವು ಅಂಶಗಳನ್ನು ಪುನರ್‍ವ್ಯವಸ್ಥೆಗೊಳಿಸುವ ಕೆಲಸ ಎನಿಸಿಕೊಂಡಿದೆ;
ಆದರೆ ಅದೇ ಸಂದರ್ಭದಲ್ಲಿ ನಮ್ಮ ಒಳಗಿನ ಅಂತಃಸತ್ವ  ಅಸ್ತವ್ಯಸ್ತಗೊಂಡು, ಸಂಪೂರ್ಣ ಕುಸಿದು ಬಿದ್ದಿದೆ.
ನಮ್ಮ ಅಂತರಾಳದ ಒಳಮನೆಯನ್ನು ಕ್ರಮಬದ್ಧಗೊಳಿಸುವ ಕೆಲಸ ಸಂಪೂರ್ಣ ನಿಂತೇಹೋಗಿದೆ. ಹಲವಾರು
ರಾಜಕೀಯ ಕಾರ್ಯಕರ್ತರನ್ನು ನಾನು ಭೇಟಿ ಮಾಡಿದ್ದೇನೆ. ಅವರು ರಾಜಕೀಯದಲ್ಲಿ ಬಹಳ ಗಂಭೀರವಾಗಿ
ತೊಡಗಿಸಿಕೊಂಡಿರುತ್ತಾರೆ. ಆದರೆ ಬಹಳಷ್ಟು ಮಂದಿ ತಮ್ಮ ಅಂತರಾಳವನ್ನು ಕ್ರಮಬದ್ಧಗೊಳಿಸುವ ವಿಷಯಕ್ಕೆ
ಸ್ವಲ್ಪವೂ ಗಮನ ಕೊಡುತ್ತಿಲ್ಲ. ಇದೊಂದು ಗಂಭೀರ ಕೊರತೆಯಾಗಿದ್ದು, ಇದರ ಕಡೆ ಸೂಕ್ತ ಗಮನ
ಕೊಡಬೇಕೆಂದು ಅವರನ್ನು ವಿನಂತಿಸುತ್ತೇನೆ.
ನಾವು ಈ ಕೆಲಸವನ್ನು ಬಾಬಾಗಳಿಗೆ, ಕೆಲವು ಆಧ್ಯಾತ್ಮಿಕ ಗುರುಗಳಿಗೆ ವಹಿಸಿಕೊಟ್ಟಿದ್ದೇವೆ. ಇಂಥಾ
ಬಹುಪಾಲು ಸ್ವಾಮಿಗಳು ಆಶ್ರಮಗಳನ್ನು ಕಟ್ಟಿಕೊಂಡಿರುತ್ತಾರೆ. ಹಣ ಬಾಚುತ್ತಿರುತ್ತಾರೆ. ಬಹುಪಾಲು ಮಂದಿ
ಕಳ್ಳ ಖದೀಮರಾಗಿದ್ದಾರೆ. ಇಂಥವರ ಕೈಗೆ ನಾವು ಈ ಕೆಲಸ ಕೊಟ್ಟಿದ್ದೇವೆ.
ನನ್ನ ಅರ್ಥದಲ್ಲಿ ರಾಜಕೀಯ ಎಂದರೆ ಈ ಎಲ್ಲ ಐದು ಅಂಶಗಳನ್ನು ಒಳಗೊಂಡ ಸಮೈಕ್ಯ ಚಟುವಟಿಕೆ.
ಒಂದು ಉತ್ತಮ ರಾಜಕೀಯ ಚಳವಳಿಯು ರಾಜಕೀಯ ಪಕ್ಷದ ಕೆಲಸವನ್ನೂ ಮಾಡಬೇಕು; ಸಾಮಾಜಿಕ
ಚಳವಳಿಗಳ ಕೆಲಸವನ್ನು, ಅಂದರೆ ಪ್ರತಿಭಟನೆ, ಹೋರಾಟಗಳನ್ನೂ ಮಾಡಬೇಕು. ಅದು ಎನ್‍ಜಿಒಗಳ
ಕೆಲಸವನ್ನೂ ಮಾಡಬೇಕು, ವಿಶ್ವವಿದ್ಯಾಲಯಗಳ ಕೆಲಸವನ್ನೂ, ಆಧ್ಯಾತ್ಮಿಕ ಗುರುಗಳ ಕೆಲಸವನ್ನೂ
ಮಾಡಬೇಕು. ಒಂದು ನಿಜವಾದ ರಾಜಕೀಯ ಚಳವಳಿಗೆ ಈ ಎಲ್ಲ ಜವಾಬ್ದಾರಿಗಳೂ ಇರುತ್ತವೆ.
ಸ್ವರಾಜ್ ಅಭಿಯಾನ್ ಎಂದರೆ ಏನು? ನನ್ನ ಅಭಿಪ್ರಾಯ ಅಥವ ನನ್ನ ಕನಸು ಏನೆಂದರೆ ಅದು ಈ
ಮೇಲಿನ ಐದೂ ಅಂಶಗಳ ಸಂಯೋಜನೆ ಹೊಂದಿರುವ ಒಂದು ರಾಜಕೀಯ ಚಳವಳಿ. ಚುನಾವಣೆಗಳಲ್ಲಿ
ಈಗ ನಾವು ಸ್ಪರ್ಧಿಸದೆ ಇರಬಹುದು, ಆದರೆ ಮುಂದೆ ಸ್ಪರ್ಧಿಸಲೇಬೇಕು. ಯಾಕಾಗಬಾರದು? ಆದರೆ
ಚುನಾವಣೆಗಳಲ್ಲಿ ಸ್ಪರ್ಧಿಸುವುದು ಮತ್ತು ಗೆಲ್ಲುವುದು ಮಾತ್ರವೇ ಏಕಮಾತ್ರ ಗುರಿ ಅಥವ ಅದೇ ಅಂತಿಮ
ಗುರಿಯಾಗಿಬಿಟ್ಟರೆ ಅದೊಂದು ದುರಂತ, ಅದು ರಾಜಕೀಯದ ದುರಂತ, ಅದು ಸೃಜನಶೀಲತೆಗೆ ಒದಗಿಬಂದ
ದುರಂತ. ನಾವೆಲ್ಲರೂ ಕಾಣುತ್ತಿರುವ ಉತ್ತಮ ಕನಸಿನ ದುರಂತ ಅಂತ್ಯ.
ನನ್ನ ಮಾತು ಕೆಲವರಿಗೆ ವಿಚಿತ್ರ ಎನಿಸುತ್ತಿರಬಹುದು. ನನ್ನ ಮಾತನ್ನು ನಂಬದಿದ್ದರೆ ನೀವು ನಿಮ್ಮ
ಅಂತಃಸಾಕ್ಷಿಯನ್ನು ಕೇಳಿ ನೋಡಿ. ಹತ್ತು ಸೆಕೆಂಡುಗಳ ಕಾಲ ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿ. ನೀವು
ಸಾರ್ವಜನಿಕ ಜೀವನಕ್ಕೆ ಬರಬೇಕೆಂದುಕೊಂಡ ಆ ಮೊದಲ ಕ್ಷಣಗಳನ್ನು ನೆನಪಿಗೆ ತಂದುಕೊಳ್ಳಿ. ನೀವು
ಬಯಸಿದ್ದುದು ಈ ಮೇಲಿನ ಐದು ಅಂಶಗಳೇ ಹೊರತು, ಎಂಎಎಲ್‍ಎ, ಎಂಪಿಗಳಾಗುವುದು ಮಾತ್ರ
ಆಗಿರಲಿಲ್ಲ ಎಂಬುದು ನಿಮ್ಮ ಅರಿವಿಗೆ ಬರುತ್ತದೆ. ಹಾಗಿದ್ದರೆ ನಾವು ಯಾಕೆ ಆ ಕೆಲಸಗಳನ್ನು ಮಾಡುತ್ತಿಲ್ಲ?
ನಮ್ಮ ಯೋಜನೆಗಳು ಹಂತಹಂತವಾಗಿ ಸಂಕುಚಿತಗೊಳ್ಳಲು ನಾವು ಅವಕಾಶ ಕೊಟ್ಟಿದ್ದೇಕೆ? ನಾವು ಯಾತಕ್ಕಾಗಿ
ಸಾರ್ವಜನಿಕ ಜೀವನಕ್ಕೆ ಬಂದೆವೋ, ಆ ಉದ್ದೇಶ ಗುರಿಗಳನ್ನು ಬದಿಗೆ ಸರಿಸಿ ಕೇವಲ ಎಂಎಲ್‍ಎ,
ಎಂಪಿಗಳನ್ನು ಗೆಲ್ಲಿಸುವ ಚಟುವಟಿಕೆಗೆ ಮಾತ್ರ ಸೀಮಿತಗೊಂಡಿದ್ದೇಕೆ?
ರಾಜಕೀಯ ಇಂದಿನ ಯುಗಧರ್ಮ
ಮತ್ತೆ ಮತ್ತೆ ಒಂದು ವಿಷಯ ಹೇಳಬೇಕೆನಿಸುತ್ತದೆ. ರಾಜಕೀಯ ಇಂದಿನ ಯುಗ ಧರ್ಮ. ಪ್ರತಿಯೊಂದು
ಕಾಲಮಾನಕ್ಕೂ ಒಂದು ಧರ್ಮವಿರುತ್ತದೆ. ಯಾರಿಗಾದರೂ ಏನನ್ನಾದರೂ ಸಾಧಿಸಬೇಕೆಂದಿದ್ದರೆ ಅವರು ಆ
ಯುಗ ಧರ್ಮಕ್ಕೆ ಅನುಗುಣವಾಗಿ ಕಾರ್ಯಪ್ರವೃತ್ತರಾಗಬೇಕಾಗುತ್ತದೆ. ರಾಜಕೀಯ ಇಂದಿನ ಯುಗಧರ್ಮ.
20ನೇ ಶತಮಾನ ಹಾಗೂ 21ನೇ ಶತಮಾನದ ಭಾರತಕ್ಕೆ ರಾಜಕೀಯವೇ ಯುಗಧರ್ಮ. 22ನೇ ಶತಮಾನ
ಹೇಗಿರುತ್ತದೆಂಬುದು ನಮಗೆ ಗೊತ್ತಿಲ್ಲ. ಇಂದಿನ ಯುಗದಲ್ಲಿ ಯಾರಾದರೂ ಸೃಜನಶೀಲವಾದ,
ಮಹತ್ತರವಾದ ಏನನ್ನಾದರೂ ಸಾಧಿಸಬೇಕೆಂದಿದ್ದರೆ ಅವರು ರಾಜಕೀಯದ ಮೂಲಕವೇ ಅದನ್ನು ಸಾಧಿಸಲು
ಸಾಧ್ಯ. ಮಹಾತ್ಮ ಗಾಂಧಿ ರಾಜಕೀಯಕ್ಕೆ ಬರಲು ಇದೇ ಕಾರಣ, ಡಾ.ಅಂಬೇಡ್ಕರ್‍ರವರು ರಾಜಕೀಯಕ್ಕೆ
ಬರಲಿಕ್ಕೂ ಇದೇ ಕಾರಣ. ಅನೇಕ ಮಹಾನ್ ಲೇಖಕರು ದುಷ್ಟ ರಾಜಕಾರಣಕ್ಕೆ ಎದುರಾಗಿ ನಿಂತಿದ್ದೂ ಇದೇ
ಕಾರಣಕ್ಕೆ. ನಮ್ಮ ಸಮಾಜದ ಸೃಜನಾತ್ಮಕ ಭರವಸೆ ರಾಜಕೀಯದಲ್ಲೇ ಅಡಗಿದೆ ಎಂಬುದು ನನ್ನ ಅನಿಸಿಕೆ.
ಆದ್ದರಿಂದ ಸ್ವರಾಜ್ ಅಭಿಯಾನ್ ಎಂಬುದು ಈ ಎಲ್ಲ ಅರ್ಥಗಳನ್ನು ಒಳಗೊಂಡ ಒಂದು ಸೃಜನಶೀಲ
ಕ್ರಿಯೆಯಾಗಿರಬೇಕು.
ನಾವು ಇದನ್ನು ಸಾಧಿಸುವುದು ಹೇಗೆ? ಮೊಟ್ಟ ಮೊದಲನೆಯದಾಗಿ, ನಾವು ಒಂದು ಪ್ರಜಾತಾಂತ್ರಿಕ
ರಾಜಕೀಯ ಸಂಘಟನೆಯೊಂದನ್ನು ನಿರ್ಮಿಸಬೇಕು. ಆಮ್ ಆದ್ಮಿ ಪಕ್ಷ ಹೀಗೆ ಮಾಡಬಾರದಿತ್ತು, ಹಾಗೆ
ಮಾಡಬಾರದಿತ್ತು ಎಂದು ನಾವು ಹೇಳುತ್ತಿರುವುದರ ಅರ್ಥವೇನು? ನಾವು ಮತ್ತೆ ಅದೇ ತಪ್ಪುಗಳನ್ನು
ಮಾಡಬಾರದು ಎಂದರ್ಥ. ಸಂಘಟನೆಯಲ್ಲಿ ಪ್ರಜಾತಂತ್ರಕ್ಕೆ ಗಟ್ಟಿ ಬುನಾದಿ ಹಾಕಬೇಕು. ಸಂಘಟನೆಯ ಎಲ್ಲ
ವಹಿವಾಟುಗಳನ್ನು ಕಡ್ಡಾಯವಾಗಿ ಆರ್‍ಟಿಐನಡಿ ತರಬೇಕು. ನಮ್ಮ ಸಂಘಟನೆಯೊಳಗೆ ಈಗಾಗಲೇ ಒಬ್ಬರು
ಮಾಹಿತಿ ಅಧಿಕಾರಿಯನ್ನು ನೇಮಿಸಲಾಗಿದೆ ಎಂಬುದು ಸಂತೋಷದ ಸಂಗತಿ. ನಮ್ಮ ಸಂಘಟನೆಯ ಜಮಾ-
ಖರ್ಚುಗಳನ್ನು ಸದಾ ಮುಕ್ತವಾಗಿರಿಸಬೇಕೆಂಬುದು ನಮ್ಮ ನೀತಿ.
ಎಂಥಾ ಸಂಘಟನೆ ಕಟ್ಟಬೇಕು?
ಸಂಘಟನೆಯನ್ನು ವ್ಯಕ್ತಿ ಕೇಂದ್ರಿತವಾಗಿ ಕಟ್ಟಬಾರದು. ಒಂದು ವ್ಯಕ್ತಿಯ ಸುತ್ತ, ಅದರಲ್ಲೂ ಜೀವಂತವಾಗಿರುವ
ವ್ಯಕ್ತಿಯ ಸುತ್ತ ಸಂಘಟನೆಯನ್ನು ಕಟ್ಟುವುದು ತೀರಾ ಅಸಂಬದ್ಧ. ಜಯಲಲಿತಾ ಕೂಡ ತಮ್ಮ ಪಕ್ಷದ
ಬಾವುಟದಲ್ಲಿ ತನ್ನ ಚಿತ್ರ ಹಾಕಿಕೊಂಡಿಲ್ಲ. ವೇದಿಕೆಯ ಮೇಲಿನ ಬ್ಯಾನರ್‍ನಲ್ಲಿದ್ದ ನನ್ನ ಫೋಟೋ
ತೆಗೆದುಹಾಕಿದ್ದಕ್ಕಾಗಿ ಕಾರ್ಯಕ್ರಮದ ಸಂಘಟಕರಿಗೆ ತುಂಬಾ ಧನ್ಯವಾದಗಳು. ವ್ಯಕ್ತಿ ಪೂಜೆಗೆ ಅವಕಾಶ
ಕೊಡಕೂಡದು. ಪ್ರಜಾತಂತ್ರ ಹಿಂದಿನ ಎಲ್ಲ ಅನುಭವಗಳ ಪಾಠ ಇದು. ನಾವು ಯಾರೇ ವ್ಯಕ್ತಿಗೆ ಪ್ರಶ್ನಾತೀತ
ಅಧಿಕಾರ ಕೊಟ್ಟರೆ ಅದರ ಪರಿಣಾಮ ಕೆಟ್ಟದಿರುತ್ತದೆ. ಅವರು ಎಷ್ಟೇ  ಒಳ್ಳೆಯವರೆನಿಸಿಕೊಂಡಿದ್ದರೂ,
ಅಚ್ಚುಮೆಚ್ಚಿನವರಾಗಿದ್ದರೂ ಕೂಡ ಅವರು ನಮ್ಮನ್ನು ಮಕಾಡೆ ಬೀಳಿಸುವುದು ಖಚಿತ. ಆದ್ದರಿಂದ
ಪ್ರಜಾತಾಂತ್ರಿಕ ಸಂಘಟನೆ ಸರಿಯಾಗಿ ಕಾರ್ಯನಿರ್ವಹಿಸಬೇಕೆಂದರೆ ಯಾವ ಕಾರಣಕ್ಕೂ ಒಂದೇ ವ್ಯಕ್ತಿಯ ಕೈಗೆ
ಎಲ್ಲ ಅಧಿಕಾರಗಳನ್ನು ಕೊಡಬಾರದು. ಹಾಗೆಯೇ ನಾಲ್ಕೈದು ಜನರ ಅಥವ ಒಂದಷ್ಟು ಜನರ ಸಮಷ್ಠಿಗೂ
ಎಲ್ಲ ಅಧಿಕಾರ ಕೊಡಬಾರದು.
ನಾಯಕರನ್ನು ಹೇಗೆ ಟ್ರೀಟ್ ಮಾಡಬೇಕು ಎಂಬುದನ್ನು ಒಂದು ಉದಾಹರಣೆಯ ಮೂಲಕ ಹೇಳಲು
ಬಯಸುತ್ತೇನೆ. ನಾಯಕರ ಬಗ್ಗೆ ನಾವು ಬಟ್ಟೆ ಒಗೆಯುವ ವಿಧಾನವನ್ನು ಬಳಸಬೇಕು. ಹೊರಗಡೆ
ಸಾರ್ವಜನಿಕವಾಗಿ ಓಡಾಡುವಾಗ ನಮ್ಮ ಬಟ್ಟೆಯ ಬಗ್ಗೆ ಎಷ್ಟೊಂದು ಮುತುವರ್ಜಿ ತೋರುತ್ತೇವೆ?
ಕೊಳೆಯಾಗದಂತೆ ನೋಡಿಕೊಳ್ಳುತ್ತೇವೆ. ಇಸ್ತ್ರಿ ಕೆಡದಂತೆ ಎಚ್ಚರ ವಹಿಸುತ್ತೇವೆ. ಹಾಗೆಯೇ ನಮ್ಮ ನಾಯಕರನ್ನು
ಗೌರವಪೂರ್ವಕವಾಗಿಯೇ ನಡೆಸಿಕೊಳ್ಳಬೇಕು. ಅದು ಮುಖ್ಯವಾದ ಅಂಶವೇ. ಆದರೆ ಮನೆಗೆ ಬಂದ ನಂತರ
ಬಟ್ಟೆ ಕಳಚಿ ಒಗೆಯಲು ಹಾಕುತ್ತೇವೆ. ನೀರಲ್ಲಿ ಮುಳುಗಿಸುತ್ತೇವೆ, ಸಾಬೂನು ಹಚ್ಚುತ್ತೇವೆ, ಚಚ್ಚಿ
ಬಡಿಯುತ್ತೇವೆ. ಇನ್ನೂ ಸ್ವಚ್ಚವಾಗಲಿಲ್ಲ ಎಂದರೆ ಮತ್ತಷ್ಟು ಹೆಚ್ಚು ಬಡಿಯುತ್ತೇವೆ. ನಾವು ನಮ್ಮ ನಾಯಕರ
ಬಗ್ಗೆ ಕೂಡ ಬಿಲ್‍ಕುಲ್ ಹೀಗೇ ವ್ಯವಹರಿಸಬೇಕು.
ನಾವು ಎಲ್ಲಿಯವರೆಗೆ ನಾಯಕರನ್ನು ಪ್ರಶ್ನಿಸುತ್ತಿರುತ್ತೇವೆಯೋ ಅಲ್ಲಿಯವರೆಗೆ ಸಂಘಟನೆ ಜೀವಂತವಾಗಿರುತ್ತದೆ
ಎಂಬುದು ಖಾತ್ರಿ. ಪ್ರಶ್ನೆ ಮಾಡುವವರು ಇಲ್ಲದಂತಾದರೆ ಆ ಸಂಘಟನೆಯ ಪ್ರಜಾತಂತ್ರದ ಕತೆ
ಮುಗಿದಂತೆಯೇ. ಆದ್ದರಿಂದ ಪ್ರಶ್ನೆಗಳನ್ನು ನಾವು ಜೀವಂತವಾಗಿಡಬೇಕು. ಪ್ರಶ್ನೆ ಬಂದಾಕ್ಷಣ ಎಲ್ಲವೂ
ಸರಿಯಾಗುತ್ತದೆ ಎಂದರ್ಥವಲ್ಲ; ಎಲ್ಲ ಉತ್ತರಗಳೂ ರೆಡಿಮೇಡ್ ಆಗಿ ಸಿಕ್ಕಿಬಿಡುತ್ತವೆ ಎಂದರ್ಥವಲ್ಲ.
ಪ್ರಶ್ನೆಗಳು ಸದಾ ಜೀವಂತವಾಗಿರುವುದೇ ಉತ್ತರಗಳನ್ನು ಕಂಡುಕೊಳ್ಳಲು ದಾರಿಯಾಗುತ್ತದೆ. ಅದು ಬಿಟ್ಟು
ಇನ್ನಾವುದೇ ಅಡ್ಡದಾರಿಯಿಲ್ಲ.
ನಾವು ಸಂಘಟನೆಯಲ್ಲಿ ಕೆಲವು ನಿಯಮ ನಿಬಂಧನೆಗಳನ್ನು ಹೊಂದಿರಬೇಕು ಮತ್ತು ಸಂಘಟನೆಯಲ್ಲಿರುವ
ಯಾವುದೇ ವ್ಯಕ್ತಿ ಆ ನಿಯಮ-ನಿಬಂಧನೆಗಳಿಗೆ ಅತೀತರಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳುವಂತೆ ಜಾಗೃತಿ
ಮೂಡಿಸಬೇಕು. ಅಡಿಯಿಂದ ಮುಡಿಯವರೆಗೆ ಎಲ್ಲ ಅಂಗಗಳಿಗೂ, ಎಲ್ಲ ಸದಸ್ಯರಿಗೂ ನಿಬಂಧನೆಗಳು
ಸಮಾನವಾಗಿ ಅನ್ವಯಿಸುವ ವ್ಯವಸ್ಥೆ ರೂಪಿಸಬೇಕು.
ನಿರ್ಣಯಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಸಾಮೂಹಿಕತೆಗೆ ಮಹತ್ವ ಕೊಡಬೇಕು. ಪಾರದರ್ಶಕವಾದ
ವಿಧಾನಗಳನ್ನು ಅಳವಡಿಸುವಂತಾಗಬೇಕು. ವಿಭಿನ್ನ ಅಭಿಪ್ರಾಯಗಳನ್ನು ಗೌರವಿಸಬೇಕು. ನಮ್ಮ ಅಭಿಪ್ರಾಯ
ಅಂಗೀಕಾರವಾಗದಿದ್ದ ಸಂದರ್ಭದಲ್ಲಿ, ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶಗಳನ್ನು
ಖಾತ್ರಿಪಡಿಸಿಕೊಳ್ಳಬೇಕು ಹಾಗೂ ನಾವು ಮೈನಾರಿಟಿಯಾಗಿದ್ದು, ಕೆಲಸ ಮಾಡುವುದನ್ನು ರೂಡಿಸಿಕೊಳ್ಳಬೇಕು.
ನಮ್ಮ ಸಿದ್ಧಾಂತ ಯಾವುದು?
ಈಗ ಸಿದ್ಧಾಂತ ಪ್ರಶ್ನೆ ಕೈಗೆತ್ತಿಕೊಳ್ಳೋಣ. ನಿಮಗೆ ಯಾವುದೇ ನಿರ್ದಿಷ್ಟ ಸಿದ್ಧಾಂತವೇ ಇಲ್ಲವಲ್ಲ ಎಂದು
ಕೆಲವರು ಕೇಳುತ್ತಿರುತ್ತಾರೆ. ಅವರ ಮಾತಿನ ಅರ್ಥ ಈಗಾಗಲೇ 20ನೇ ಶತಮಾನದಲ್ಲಿ ನಿರ್ಧರಿಸಲ್ಪಟ್ಟಿರುವ
ಯಾವುದಾದರೂ ಒಂದು ಸಿದ್ಧಾಂತವನ್ನು ನಾವು ಒಪ್ಪಿಕೊಳ್ಳಬೇಕೆಂಬುದು. ಆದರೆ ವಾಸ್ತವವೇನೆಂದರೆ 20ನೇ
ಶತಮಾನದ ಸಿದ್ಧಾಂತಗಳು 21ನೇ ಶತಮಾನದ ಸಮಸ್ಯೆಗಳಿಗೆ ಸಮಗ್ರ ಪರಿಹಾರವನ್ನು ಒದಗಿಸುವಲ್ಲಿ
ವಿಫಲವಾಗಿವೆ. ಅದರರ್ಥ ಅವೆಲ್ಲ ನಿಷ್ಪ್ರಯೋಜಕ ಎಂಬುದಲ್ಲ, ಅವುಗಳಿಗೆ ಸಾಕಷ್ಟು ರಿಪೇರಿ ಕೆಲಸ
ಆಗಬೇಕಿದೆ.
ಸಿದ್ಧಾಂತದ ವಿಷಯದಲ್ಲಿ ನಾವು ಯಾವುದೋ ಒಂದು ನಿರ್ದಿಷ್ಟ ಸಿದ್ದಾಂತದ ಹಿಂದೆಯೇ ಹೋಗಬೇಕು ಎಂಬ
ಯಾವ ನಿಯಮವೂ ಇಲ್ಲ. ಎಲ್ಲ ಸಿದ್ಧಾಂತಗಳಲ್ಲಿರುವ ಉತ್ತಮ ಅಂಶಗಳಿಂದ ನಾವು ಕಲಿಯಬೇಕಾಗಿದೆ.
ಕೊನೆಯದಾಗಿ ಒಂದು ಅಂಶ. ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಸಂಘರ್ಷ, ಗೊಂದಲಗಳು ನಮ್ಮ
ಪ್ರಯಾಣದ ದುರಂತ ಅಂತ್ಯವೆ? ಕೆಲವರು ಸಿಕ್ಕಾಗ ‘ಓಹ್, ಮೊದಲು ಎಷ್ಟು ಚನ್ನಾಗಿತ್ತು? ಈಗ ಎಲ್ಲ
ಹಾಳಾಗಿ ಹೋಯ್ತು. ನಮ್ಮ ಕತೆ ಮುಗಿದೇ ಹೋಯ್ತು’ ಅಂತ ಉದ್ಗಾರ ತೆಗಯುತ್ತಿರುತ್ತಾರೆ. ಅದು ಹೌದೆ?
ನಮ್ಮ ಪ್ರಯಾಣ ದುರಂತ ಅಂತ್ಯದ ಕಡೆ ಸಾಗಿದೆಯೆ? ಖಂಡಿತ ಇಲ್ಲ. ಇದು ಕಷ್ಟಗಳಿಂದ ಕೂಡಿದ,
ಸೃಜನಾತ್ಮಕವಾದ ಮತ್ತು ಉತ್ಪಾದಕತೆಯಿಂದ ಕೂಡಿರುವ ಸುದೀರ್ಘ ಪ್ರಯಾಣದ ಆರಂಭ ಮಾತ್ರ. ಇಂಥಾ
ಸೃಜನಾತ್ಮಕವಾದ, ಸುಂದರವಾದ ಪ್ರಯಾಣಕ್ಕೆ ನಾವು ಪರಸ್ಪರ ಸ್ವಾಗತ ಹೇಳೋಣ. ಎಲ್ಲರಿಗೂ ಸುಸ್ವಾಗತ.