ನಮ್ಮ ಪೂರ್ವಿಕರ ನಡುವೆ ಒಂದೈದು ನಿಮಿಷ -ದೇವನೂರ ಮಹಾದೇವ

[ 5.2.2019ರಂದು ಹುಣಸೂರಿನಲ್ಲಿ ನಡೆದ ಆದಿವಾಸಿಗಳ ಸಮಾವೇಶದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳು …]                                                                           

 

ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿಗೆ ಬಿಟ್ಟಂತೆ ಅನ್ನೊ ಮಾತಿದೆ. ಅಂದರೆ ದಿಕ್ಕೆಟ್ಟಂತೆ ಅಂತ ಅರ್ಥ. ಏನು ಗೊತ್ತಾಗ್ತ ಇಲ್ಲ, ಎಲ್ಲ ಅಪರಿಚಿತ ಅಂತ ಅರ್ಥ. ಈ ಮಾತು ನಾಡಿನಲ್ಲಿರುವವರಿಗೆ ಅನ್ವಯ. ನಾಡಿನಲ್ಲಿರುವವರು ಕಾಡಿಗೆ ಹೋದರೆ ಹೀಗಾಗುತ್ತೆ. ಅದೇ ಕಾಡಿನಲ್ಲಿ ಇರುವವರಿಗೆ? ಇದು ಅನ್ವಯ ಆಗಲ್ಲ. ಅದೇ ಮಾತನ್ನು ಕಾಡಿನಲ್ಲಿರುವವರಿಗೆ ಅನ್ವಯಿಸಿ ಹೇಳುವುದಾದರೆ ಏನು ಹೇಳಬಹುದು? ಕಣ್ಣಿಗೆ ಬಟ್ಟೆ ಕಟ್ಟಿ ನಾಡಿಗೆ ಬಿಟ್ಟಂತೆ ಅಂತ ಹೇಳಬೇಕಾಗುತ್ತೆ. ಅಂದರೆ ಕಾಡಿನಲ್ಲಿ ಇರುವವರು ನಾಡಿಗೆ ಬಂದರೆ- ಅವರಿಗೆ ದಿಕ್ಕೆಟ್ಟಂತೆ ಆಗುತ್ತದೆ. ದಿಕ್ಕಿಲ್ಲದವರಾಗ್ತಾರೆ. ಇಂದು ಇದೇ ದಿಕ್ಕೆಟ್ಟ ಪರಿಸ್ಥಿತಿ ನಮ್ಮ ಪೂರ್ವಿಕರಾದ ಮೂಲನಿವಾಸಿಗಳಿಗೆ ಬಂದಿದೆ. ಇದರ ಜೊತೆಗೆ ಇತ್ತೀಚೆಗೆ ಮೂಲನಿವಾಸಿಗಳನ್ನು ವನವಾಸಿಗಳೆಂದು ಕರೆಯಲಾಗುತ್ತದೆ. ಸಂಘ ಪರಿವಾರ ಇದನ್ನು ಚಾಲ್ತಿಗೆ ತರುತ್ತಿದೆ. ‘ನಾವು ಈ ದೇಶದ ಪೂರ್ವಿಕರು ಮೂಲನಿವಾಸಿಗಳು’ ಎಂಬ ಆದಿವಾಸಿಗಳಲ್ಲಿದ್ದ ಭಾವನಾತ್ಮಕ ಸಮಾಧಾನವನ್ನೂ ಸಂಘ ಪರಿವಾರ ಕೊಂದುಹಾಕುತ್ತಿದೆ. ಪುರಾತನ ಮೂಲನಿವಾಸಿಗಳನ್ನು ಅನಾಗರಿಕರೆಂಬಂತೆ ಬಿಂಬಿಸಿ ಸಂಘ ಪರಿವಾರದವರು ಗಾಯದ ಮೇಲೆ ಬರೆ ಎಳೆದಿದ್ದಾರೆ. ನಾವು ಹೇಳಬೇಕು- ‘ನಾವು ಮೂಲನಿವಾಸಿಗಳು’

ಕಾಡಿನಿಂದ ನಾಡಿಗೆ ಮೂಲನಿವಾಸಿಗಳ ಎತ್ತಂಗಡಿ ಆಗುತ್ತಿದೆ. ಏನಾಯಿತು? ಏನೇನು? ಕಾಡು ಕೂಡ ಅವನತಿ ಆಗ್ತಾ ಇದೆ. ಕಾಡು ಕಮ್ಮಿ ಆಗ್ತಾ ಇದೆ. ಕ್ಷಯವಾಗ್ತಾ ಇದೆ. ಕಾಡಿನ ಮಕ್ಕಳು ಕಾಡಿನಿಂದ ಎಸೆಯಲ್ಪಟ್ಟಿದ್ದರಿಂದ ಕಾಡು ಕೂಡ ಅಳುತ್ತಾ ಇದೆ. ಅದು ಕೂಡ ದಿಕ್ಕಿಲ್ಲದಂತಾಗಿದೆ. ಪ್ರಕೃತಿ ಏರುಪೇರಾಗ್ತಾ ಇದೆ. ಕಾಡಲ್ಲಿ ಮರ, ಗಿಡ, ಪ್ರಾಣಿ, ಪಕ್ಷಿ ಮೂಲನಿವಾಸಿಗಳು ಮೇಲುಕೀಳು ಇಲ್ಲದೆ ಜೀವ ಸಂಕುಲವೇ ಒಂದಾಗಿ ಬದುಕುತ್ತಿರುತ್ತದೆ. ನಾಡಿನ ಮೇಲು-ಕೀಳುಗಳ ನಡುವೆ ಮೂಲನಿವಾಸಿಗಳು ಬದುಕಬೇಕಾಗಿ ಬಂದರೆ ಸೂತ್ರ ಕಿತ್ತಂತೆ ಆಗುತ್ತದೆ.

ಈಗ ಹುಣಸೂರು ತಾಲ್ಲೂಕಿನಲ್ಲಿರುವ ಮೂಲನಿವಾಸಿಗಳ ಸ್ಥಿತಿಗತಿಗಳನ್ನು ನೋಡುವುದಾದರೆ- ಹುಣಸೂರು ತಾಲ್ಲೂಕಿಗೆ ಸುಮಾರು 54 ಹಾಡಿಗಳು ಕಾಡಿನಿಂದ ಎತ್ತಂಗಡಿ ಆಗಿ ನಾಡಿಗೆ ಬಿದ್ದಿವೆ. ಜನಸಂಖ್ಯೆ- ಸುಮಾರು 20 ಸಾವಿರ ಅನ್ನಬಹುದು. ಹೀಗೆ ನಾಡಿಗೆ ಬಿದ್ದ ಆದಿವಾಸಿಗಳ ಸಮಸ್ಯೆಗೆ ಬಂದರೆ- ಸ್ಮಶಾನದ ಸಮಸ್ಯೆಯನ್ನು ಮೊದಲು ನಾನು ಗಮನಿಸುತ್ತೇನೆ. ಕೆಲವು ಹಾಡಿಗಳಲ್ಲಿ ಸ್ಮಶಾನವಿದ್ದರೂ ಒತ್ತುವರಿ ಆಗಿದೆ. ಇನ್ನು ಕೆಲವು ಹಾಡಿಗಳಲ್ಲಿ ಸ್ಮಶಾನ ಮಂಜೂರಾಗಿಲ್ಲ. ಇದು ಅಂದರೆ ಸ್ಮಶಾನ ಇಲ್ಲದಿರುವುದು ಆದಿವಾಸಿಗಳ ಮನಸ್ಸಿನ ಮೇಲಾದ ಭಯಂಕರ ಗಾಯ ಅನ್ನಿಸುತ್ತದೆ. ಯಾಕೆಂದರೆ ಮೂಲನಿವಾಸಿಗಳು ಕಾಡಿನಲ್ಲಿದ್ದಾಗ ಕಾಲವಶರಾದವರನ್ನು ಸಮಾಧಿ ಮಾಡಿ ಅಲ್ಲೊಂದು ಮರ ನೆಟ್ಟು ಅಲ್ಲಿ ತಮ್ಮ ಹೆತ್ತಯ್ಯ, ಹೆತ್ತಮ್ಮ ಜೀವಿಸುತ್ತಿದ್ದಾರೆಂದು ಆಳವಾಗಿ ನಂಬುವ ಸಂಸ್ಕøತಿ ಆದಿವಾಸಿಗಳದು. ಸ್ಮಶಾನ ಇಲ್ಲದಿದ್ದರೆ ಏನಾಗಬೇಡ? ಸತ್ತವರು ಬದುಕಿರುವವರ ನಿದ್ದೆಯಲ್ಲಿ ಬಂದು ಹಿಂಸೆ ಮಾಡುತ್ತಾರೆ. ಬದುಕಿರುವವರ ಬದುಕು ದುಃಸ್ವಪ್ನವಾಗುತ್ತದೆ. ಅದಕ್ಕಾಗೆ ನಾವು ಮೊದಲು ಆದಿವಾಸಿಗಳ ಸ್ಮಶಾನಕ್ಕೆ ಆದ್ಯತೆ ನೀಡಬೇಕು, ಅವರ ಮನೋಭೂಮಿಕೆಯನ್ನು ಅರ್ಥ ಮಾಡಿಕೊಳ್ಳಬೇಕು.

ಈಗ ಒಂದೊಂದೇ ಮಾತಿನಲ್ಲಿ ನನ್ನ ಕಳಕಳಿಯನ್ನು ತಮ್ಮ ಮುಂದಿಡುವೆ-
ಎಷ್ಟೋ ಕುಟುಂಬಗಳು ಹೆಚ್ಚುಕಮ್ಮಿ ಸೂರಿಲ್ಲದ ಸ್ಥಿತಿಯಲ್ಲಿ ಬದುಕುತ್ತಿವೆ. ಈ ಸಭೆಯಲ್ಲಿರುವ ನಮ್ಮ ಶಾಸಕರು ಒಂದು ವರ್ಷದೊಳಗೆ ತಾವೇ ಸ್ವಯಂ ನಿಂತು ಎಲ್ಲರಿಗೂ ವಸತಿ ವ್ಯವಸ್ಥೆ ಮಾಡುವುದು ಅಸಾಧ್ಯವೇ? ಹಾಗೇ ಈ ಸಭೆಯಲ್ಲಿ ಇರುವ ಮಾಜಿ ಶಾಸಕರೂ ಕೈ ಜೋಡಿಸಿದರೆ, ಇದನ್ನು ಕಾರ್ಯಗತ ಮಾಡಿ ಮೂಲನಿವಾಸಿಗಳ ನೆತ್ತಿಗೆ ನೆರಳು ನೀಡಿದರೆ ಹಾಲಿ ಮಾಜಿ ಶಾಸಕರ ಬದುಕು ಸಾರ್ಥಕವಾಗುತ್ತದೆ.
ಹಾಗೆ ಆದಿವಾಸಿಗಳಿಗೆ ಮಂಜೂರಾದ ಭೂಮಿ ಎಷ್ಟೋ ಕಡೆ ಒತ್ತುವರಿಯಾಗಿದೆ. ಹುಣಸೂರು ತಾಲ್ಲೂಕಿನಲ್ಲಿ ರೈತ ಸಂಘದ ವಿವೇಕದ ನಾಯಕತ್ವ ಇದೆ. ರೈತ ಸಂಘ ಈ ಕಡೆಗೂ ನೋಡಬೇಕಾಗಿದೆ. ಜನಪ್ರತಿನಿಧಿಗಳು ಹಾಗೂ ಸರ್ಕಾರದೊಡನೆ ಸಮನ್ವಯ ಸಾಧಿಸಿ ಆದಿವಾಸಿಗಳಿಗೆ ಮಂಜೂರಾದ ಭೂಮಿಯನ್ನು ಆದಿವಾಸಿಗಳ ಸ್ವಾಧೀನಕ್ಕೆ ಕೊಡಿಸುವುದು ರೈತ ಸಂಘದ ಕರ್ತವ್ಯವಾಗಬೇಕಾಗಿದೆ. ಆಗ ರೈತ ಸಂಘಕ್ಕೆ ನೈತಿಕತೆ ಬರುತ್ತದೆ. ಇಲ್ಲಿ ದಲಿತ ಸಂಘರ್ಷ ಸಮಿತಿಗಳಿಗೂ ಕೆಲಸವಿದೆ. ಮುಖ್ಯವಾಗಿ ಬೆಟ್ಟಯ್ಯ ಕೋಟೆ ನಾಯಕತ್ವದ ದಸಂಸಕ್ಕೆ ಸಹಕಾರ ಸಂಘದ ಕಾರ್ಯಚಟುವಟಿಕೆ ಅನುಭವ ಇದೆ. ಮೂಲನಿವಾಸಿಗಳು ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಮಾಡುವಂತಹ ಚಟುವಟಿಕೆ ಆರಂಭಿಸಬೇಕಾಗಿದೆ.

ಕೊನೆಯದಾಗಿ, ಹುಣಸೂರು ತಾಲ್ಲೂಕು ಪ್ರಜ್ಞಾವಂತರಲ್ಲಿ ಒಂದು ಮನವಿ: ಇದುವರೆಗೆ 44 ಜನ ಆದಿವಾಸಿ ಮಕ್ಕಳು ಎಸ್‍ಎಸ್‍ಎಲ್‍ಸಿ ದಾಟಿದವರು ಇಲ್ಲಿ ಇದ್ದಾರೆ. ಇಂತಹ ಮಕ್ಕಳನ್ನು ಹುಣಸೂರು ನಾಗರೀಕರು, ವಿದ್ಯಾವಂತರು, ಉದಾರವಾದ ಉಳ್ಳಾದವರು ದತ್ತು ತೆಗೆದುಕೊಂಡು ಅವರೊಡನೆ ಒಂದಾಗಲು ಸಾಧ್ಯವಿಲ್ಲವೇ?… ಹೀಗೇ ಒಂದಿಷ್ಟು.