ದೇವನೂರರ “ಎದೆಗೆ ಬಿದ್ದ ಅಕ್ಷರ” ಓದು ಸರಣಿ- 14 // ಅವಿನಾಶ್. ಟಿಜಿಎಸ್//

[ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕೃತಿ 14.12.2012 ರಂದು ಪ್ರಕಟವಾಗಿ, ಈ 9 ವರ್ಷಗಳಲ್ಲಿ 24 ಮುದ್ರಣಗಳನ್ನು ಕಂಡಿದೆ. ಹತ್ತನೆಯ ವರ್ಷದ ಕೊಡುಗೆಯಾಗಿ ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕಾಗಿ “ಎದೆಗೆ ಬಿದ್ದ ಅಕ್ಷರ” ಓದು ಸರಣಿ ಪ್ರಾರಂಭಿಸಲಾಗಿದ್ದು, ಸಂಕಲನದಿಂದ ಆಯ್ದ “ಒಂದು ಒಳನೋಟ” ಬರಹದ ವಾಚನ ಅವಿನಾಶ್. ಟಿಜಿಎಸ್ ಅವರಿಂದ.]

                                                                                                       ಒಂದು ಒಳನೋಟ
ಯಾವುದನ್ನಾಗಲೀ ಎಷ್ಟು ಮತ್ತು ಹೇಗೆ ಪ್ರತಿಭಟಿಸಬೇಕೆಂದು ನನಗೆ ತಿಳಿವಿನ ಸುಳಿವು ಕೊಟ್ಟ ಒಂದು ಘಟನೆ ಮುಂದಿಡುವೆ: ಹಿಂದೆ ಒಂದ್ಸಲ ನಂಜನಗೂಡು ದಲಿತ ವಿದ್ಯಾರ್ಥಿನಿಲಯಕ್ಕೆ ಹೋಗಿದ್ದೆ. ಅಲ್ಲಿ ದಲಿತ ವಿದ್ಯಾರ್ಥಿಯೊಬ್ಬ ಚೆಂಬಿನಲ್ಲಿ ನೀರ್ಹಿಡಿದು ಅತಿ ದಲಿತನಾದ ಪೌರಕಾರ್ಮಿಕನೊಬ್ಬನ ಕೈ ಬೊಗಸೆಗೆ ಎತ್ತರದಿಂದ ನೀರುಹಾಕುತ್ತಾ ನೀರು ಕುಡಿಸುತ್ತಿದ್ದನು. ಅಂದು ನನ್ನನ್ನು ತಲ್ಲಣಿಸಿದ ಇದು ಇಂದೂ ಗಂಟಲಲ್ಲಿ ನೀರು ಸಿಕ್ಕಿಕೊಂಡಂತೆ ಮರೆಯಲಾಗದೆ ಉಳಿದಿದೆ.
ಹೇಳಿ, ಸವರ್ಣೀಯನೊಬ್ಬ ನನಗೆ ಅಥವಾ ನಿಮಗೆ ಬೊಗಸೆ ನೀರು ಕುಡಿಸಲು ಬಂದಾಗ ನಮ್ಮ ಒಡಲೊಳಗೆ ಉಂಟಾಗುವ ಅಲ್ಲೋಲ ಕಲ್ಲೋಲಗಳು ಏನೇನು? ಎಷ್ಟೆಷ್ಟು? ಕೋಪ ದ್ವೇಷದಿಂದ ಸೇಡಿನ ಭಾವಾವೇಶಕ್ಕೆ ಒಳಗಾಗುವ ನಾವು ಸ್ವಾಭಿಮಾನ ಸಮಾನತೆಗಾಗಿ ಕುದಿಯುತ್ತೇವೆ. ಆದರೆ ಯಾವುದನ್ನು ಬೇರೆಯವರು ಮಾಡಿದಾಗ ನಮಗೆ ಅಪ್ರಿಯವಾಗುವುದೋ ಅದನ್ನೇ ನಾವು ಇತರರಿಗೆ ಮಾಡುವಾಗ ಅದೇ ನಮಗೆ ಪ್ರಿಯವಾಗುವುದಾದರೆ ಏನು ಅಂತ? ಇದನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಅಥವಾ ಹೀಗಿರಬಹುದೇ? ಮೊದಲನೆಯದು ಸಹಜ, ಪ್ರಾಣಿಸಹಜ ಕೋಪ. ಈ ‘ಪ್ರಾಣಿಸಹಜ ಕೋಪ’ ತನ್ನನ್ನು ಮೀರಿಕೊಂಡು ‘ತಾತ್ವಿಕ ಕೋಪ’ವಾಗಿ ನಮ್ಮೊಳಗೆ ರೂಪಾಂತರ ಪಡೆಯಬೇಕು. ಆಗ ಸವರ್ಣೀಯನೊಬ್ಬಗೆ ಒಬ್ಬ ದಲಿತನೇ ಕೈಬೊಗಸೆ ನೀರು ಕುಡಿಸುತ್ತಿದ್ದರೂ ಇದು ನಮ್ಮನ್ನು ಧೃತಿಗೆಡಿಸುತ್ತದೆ.
ಇಲ್ಲಿ ಗಂಗೊತ್ರಿಯಲ್ಲ್ಲಿ ದಲಿತರ ಬಗ್ಗೆ ಅಸಹನೆ ತಾರತಮ್ಯಗಳು ಸಾಕಷ್ಟು ಇವೆ. ಉದಾಹರಣೆಗೆ ಒಬ್ಬ ಸವರ್ಣೀಯ ಅಧ್ಯಾಪಕ ತನ್ನ ಸ್ವಜಾತಿ ವಿದ್ಯಾರ್ಥಿಗೆ ಸ್ವಸಂತೋಷದಿಂದಲೇ ಹೆಚ್ಚು ಅಂಕ ಕೊಟ್ಟು ಬೇರೆಯವರಿಗೆ ಅದರಲ್ಲೂ ದಲಿತರಿಗೆ ತಾರತಮ್ಯ ಮಾಡಿರಬಹುದಾದ ಅನೈತಿಕತೆಯಂಥವು ಒಂದೆರಡಲ್ಲ. ಇವನ್ನು ಹೇಗೆ ಮತ್ತು ಎಷ್ಟು ಪ್ರತಿಭಟಿಸಬೇಕು? ಇನ್ನೊಬ್ಬರಿಗೆ ಹೆಚ್ಚು ಕೊಟ್ಟಂತೆ ನನಗೂ ಹೆಚ್ಚು ಕೊಡು ಎಂದು ಕೇಳುವುದು ಆ ಅನೈತಿಕತೆಯಲ್ಲಿ ಪಾಲು ಕೇಳಿದಂತಾಗುತ್ತದೆ. ಹಾಗೂ ಆ ಅಧ್ಯಾಪಕ ದಲಿತ ವಿದ್ಯಾರ್ಥಿಗಳೊಡನೆ ಅಂಥಾ ಅನೈತಿಕ ಸಂಬಂಧಕ್ಕೆ ನಿರಾಕರಿಸಿದಾಗ ಆತನಿಗೆ ಬೆದರಿಕೆ ಹಾಕಿ ಪಾಲು ತೆಗೆದುಕೊಳ್ಳುವುದು ಬಲತ್ಕಾರದ ಸಂಬಂಧದಂತಾಗುತ್ತದೆ. ಒಂದು ತಪ್ಪು ಹೋಗಿ ಎರಡಾಗುತ್ತದೆ. ಈ ಬಲಾತ್ಕಾರ, ಒತ್ತಡ ಬೇರೆಯವರು ಮಾಡುವುದಿಲ್ಲವೇ? ನಾವೇಕೆ ಮಾಡಬಾರದು ಎಂಬುದು ದಲಿತರ ಮನಸ್ಸಿನಲ್ಲಿ ಏಳಬಹುದು. ಕಲುಷಿತವಾಗಿರುವ ಹಿಂದೂ ಧರ್ಮದ ಕಾರಣವಾಗಿ ಸವರ್ಣೀಯ ತಪ್ಪು ಮಾಡಿದಾಗ ಆ ತಪ್ಪು ಮಾಡಿದ ವ್ಯಕ್ತಿಯನ್ನು ಮಾತ್ರ ಹಿಡಿದುಕೊಳ್ಳುತ್ತದೆ. ಆದರೆ ಅದೇ ತಪ್ಪನ್ನು ಒಬ್ಬ ದಲಿತ ಮಾಡಿದರೆ ಆ ತಪ್ಪು ಮಾಡಿದ ದಲಿತನನ್ನು ಮಾತ್ರ ಹಿಡಿದುಕೊಳ್ಳದೆ, ಆತ ಹುಟ್ಟಿದ ದಲಿತ ಜನಾಂಗವನ್ನೂ ಹಿಡಿದುಕೊಳ್ಳಲು ಹವಣಿಸುತ್ತದೆ- ನಡಾವಳಿ ಇರುವುದು ಹೀಗೆ.
ಆದ್ದರಿಂದಲೇ ದಲಿತ ಒಂದು ತಪ್ಪು ಮಾಡಿದರೂ ಅದೇ ಹತ್ತಾಗಿ ರಾವಣನ ರೂಪದಲ್ಲಿ ಈ ಸಮಾಜಕ್ಕೆ ಕಾಣಿಸಿಕೊಳ್ಳುತ್ತದೆ. ಹೀಗಿರುವಾಗ ಒಬ್ಬ ದಲಿತ ವಿದ್ಯಾರ್ಥಿಯು ಸವರ್ಣೀಯ ಅಧ್ಯಾಪಕನನ್ನು ಬೆದರಿಸಿ ಬಲಾತ್ಕಾರದಿಂದ ಹೆಚ್ಚು ಅಂಕ ಹಾಕಿಸಿಕೊಂಡರೆ- ಹೀಗೆ ಭಯದಿಂದ ಹೆಚ್ಚು ಅಂಕ ನೀಡಿದ ಅಧ್ಯಾಪಕನು ತನ್ನ ಸೇವಾವಧಿ ಮುಗಿಯುವವರೆಗೂ ತನ್ನ ಪರಿಧಿಯೊಳಗೆ ಮುಂದೆ ಬರುವ ದಲಿತ ವಿದ್ಯಾರ್ಥಿಗಳಿಗೆ ನಗುವಿನೊಡನೆ ಹೇಗೇಗೆ ಎಷ್ಟೆಷ್ಟು ಮುಗಿಸಬಹುದೊ ಅಷ್ಟಷ್ಟು ಮುಗಿಸುತ್ತಾ ಸೇವೆ ಸಲ್ಲಿಸುತ್ತಾನೆ. ಮಿಗಿಲಾಗಿ ಇಲ್ಲಿ ದಲಿತ ವಿದ್ಯಾರ್ಥಿಯೊಬ್ಬ ಸವರ್ಣೀಯನೊಬ್ಬನಿಗೆ ಹೊಡೆದ ಏಟು ಗರಿಗೆದರಿಕೊಂಡು ರಣಹದ್ದಾಗಿ ರೂಪಾಂತರಗೊಂಡು ಹಳ್ಳಿಗಾಡಿನ ಒಂಟಿ ದಲಿತನ ಜೋಪಡಿಯ ಮೇಲೆ ಇದಕ್ಕೆಲ್ಲಾ ಸಂಬಂಧವೇ ಇಲ್ಲದ ದಲಿತನ ಬಲಿಗಾಗಿ, ಅಲ್ಲಿ ಯಾವುದಾದರೂ ಜಾತಿ ಜಗಳದ ನೆಪಕ್ಕಾಗಿ ಕಾಯುತ್ತಾ ಸುತ್ತುತ್ತಿರುತ್ತದೆ. ಹೀಗೆ ಕಾಣಿಸುವ ತಲ್ಲಣದಿಂದಾಗಿ ನಾನು ಅಲ್ಲಾಡುವೆ. ಅದಕ್ಕಾಗೇ ದಲಿತ ವಿದ್ಯಾರ್ಥಿಗಳು ತಾನೂ ಒಳಗಾಗಬಹುದಾದ ತಾರತಮ್ಯವಿಲ್ಲದ ‘ಸಮಾನ ನ್ಯಾಯ’ಕ್ಕಾಗಿ ಹೆಜ್ಜೆ ಇಟ್ಟರೆ ಮಾತ್ರ ತಾನೂ ಉಳಿದು ಇತರರನ್ನೂ ಉಳಿಸಬಲ್ಲರು.
ಹೀಗೆ ನಾನು ಹೇಳುವುದು ಮತ್ತೂ ಗೊಂದಲಕ್ಕೆ ಕಾರಣವಾದರೆ ನನಗೆ ಹೇಗೆ ಹೇಳಬೇಕೋ ತಿಳಿಯದು. ಕನ್ನಡ ನಾಡಿನ ಮಣ್ಣಿನಲ್ಲಿ ಒಬ್ಬ ನಾಡಾಡಿ ಕಟ್ಟಿದ ‘ದೈಹಿಕವಾಗಿ ದುರ್ಬಲನಾದ ಶೋಷಿತನ ನಿಜದ ಎದುರು ದೈಹಿಕ ಪ್ರಬಲನಾದ ಶೋಷಕ ತಂತಾನೇ ಕುಸಿಯುತ್ತಾನೆ’ ಎಂಬ ಸತ್ಯವನ್ನು ತನ್ನ ಗರ್ಭದಲ್ಲಿ ಇಟ್ಟುಕೊಂಡ ಗೋವಿನ ಕಥೆಯು ಪಂಡಿತರಿಗೇ ಅರ್ಥವಾಗದಿರುವ ಪರಿಸ್ಥಿತಿ ಇರುವಾಗ ಹೇಗೆ ಹೇಳಬೇಕೋ ತಿಳಿಯದಾಗಿದೆ.