ಕೊನೆಗೂ ಪಾಲನೆಯ ಸ್ತ್ರೀಶಕ್ತಿ ಪಾದಗಳಿಗೆ ಶರಣು -ದೇವನೂರ ಮಹಾದೇವ

[ಮೂಡುಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನವು ಕೊಡಮಾಡುವ ಶಿವರಾಮ ಕಾರಂತ ಪ್ರಶಸ್ತಿಯನ್ನು 3.2.2018ರಂದು ಪಡೆದ ದೇವನೂರ ಮಹಾದೇವ ಅವರು ಆ ಸಂದರ್ಭದಲ್ಲಿ ಆಡಿದ ಮಾತುಗಳ ಬರಹ ರೂಪ.]

ಕರಾವಳಿ ಮಣ್ಣಲ್ಲಿ ಹುಟ್ಟಿದ ದೊಡ್ಡ ಮನುಷ್ಯ ಕುದ್ಮಲ್ ರಂಗರಾವ್‍ರನ್ನು ಹಾಗೇ ಕನ್ನಡಕ್ಕೆ ಬೆಟ್ಟದಜೀವ, ಮರಳಿ ಮಣ್ಣಿಗೆ ಕಾವ್ಯ ನೀಡಿದ ಶಿವರಾಮ ಕಾರಂತರನ್ನು ನೆನಪಿಸಿಕೊಂಡು ನಮಿಸಿ ಒಂದೆರಡು ಮಾತುಗಳನ್ನಾಡುವೆ. ನಾನು ಕಾವ್ಯ ಎಂದದ್ದು ಬಾಯ್ತಪ್ಪಿನಿಂದ ಅಲ್ಲ; ಭಾವಿಸಿ ಹೇಳಿದೆ. ಕಾರಂತರು ಅಂದರೆ ಹೈಟೆನ್ಸನ್ ವೈರ್ ಎಂದು ನನ್ನ ಪತ್ನಿ ಸುಮಿತ್ರಾ ಆಗಾಗ ಹೇಳುತ್ತಿರುತ್ತಾರೆ. ಕಾರಂತರ ಪ್ರಖರತೆ ಹೈಟೆನ್ಸನ್ ವೈರ್‍ನಂತೆಯೇ ಇತ್ತು. ಅವರ ವೈಖರಿಯನ್ನು ಒಂದು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕಂಡಿದ್ದೇನೆ. ಕಾರಂತರು ತಾವು ಬಿಡುಗಡೆ ಮಾಡಬೇಕಿದ್ದ ಪುಸ್ತಕದ ಬಂಡಲ್‍ನ್ನು ಬಿಚ್ಚಿದರು; ಪುಸ್ತಕವನ್ನು ಸಭಿಕರಿಗೆ ತೋರಿಸಿದರು; `ಪುಸ್ತಕ ಬಿಡುಗಡೆಯಾಯ್ತು’ ಅಂದರು. ಪುಸ್ತಕದ ಬಗ್ಗೆ ಒಂದೂ ಮಾತಾಡಲಿಲ್ಲ. ಆದರೆ ಅಂದು, ನಾಡನ್ನು ಕಿತ್ತು ತಿನ್ನುತ್ತಿದ್ದ ಸಮಸ್ಯೆಗಳ ಬಗ್ಗೆ ಮಾತಾಡಿದರು. ಆ ಮಾತುಗಳು ಬೆಂಕಿ ಕೆಂಡದಂತೆ ಇದ್ದವು.


ನನಗೆ ಆ ರೀತಿ ಮಾತಾಡಲು ಬರುವುದಿಲ್ಲ. ಹಾಗಾಗಿ ಒಂದು ಮಕ್ಕಳ ಕತೆಗೆ ಮೊರೆ ಹೋಗುವೆ. ಚಂದಮಾಮದಲ್ಲಿ ಓದಿದ ಕತೆ ಇರಬೇಕು. ಬಹಳ ಹಿಂದೆ ರಾಜರ ಕಾಲ ಇದ್ದಾಗ, ಆ ರಾಜ್ಯದಲ್ಲಿ ಒಂದು ಭಯಂಕರ ದರೋಡೆಕೋರ ಗುಂಪು ಇತ್ತಂತೆ. ಅವರ ಕೆಲಸ ಏನು ಅಂತ ವಿವರಿಸಬೇಕಾದ ಅಗತ್ಯ ಇಲ್ಲ ಅಂದುಕೊಂಡಿದ್ದೇನೆ. ಆ ದರೋಡೆಕೋರರ ಗುಂಪಿನ ನಾಯಕ, ರಾಜನನ್ನೇ ಕಿತ್ತೆಸೆದು ತಾನೇ ರಾಜನಾಗಿ ಬಿಡುತ್ತಾನೆ. ದರೋಡೆ ಗುಂಪು ಕುಣಿದು ಕುಪ್ಪಳಿಸುತ್ತದೆ, ರಾಜನೇ ನಮ್ಮವನಿರುವಾಗ ತಮ್ಮನ್ನು ಇನ್ನು ತಡೆಯುವವರು ಯಾರೂ ಇಲ್ಲ ಎಂದು ಸಂಭ್ರಮಿಸುತ್ತದೆ. ಶಿಕ್ಷೆಯ ಭಯವಿಲ್ಲದೆ ಎಲ್ಲೆಂದರಲ್ಲಿ ದರೋಡೆಯನ್ನು ಮಾಡತೊಡಗುತ್ತದೆ. ಲಾ ಅಂಡ್ ಆರ್ಡರ್ ಅಂತ ಇವತ್ತು ಏನು ಹೇಳ್ತೀವಿ ಅದನ್ನು ತನ್ನ ಕೈಗೆ ತೆಗೆದುಕೊಳ್ಳುತ್ತದೆ. ಆದರೆ, ಈಗ ರಾಜನ ಸ್ಥಾನದಲ್ಲಿ ಕೂತ ಮಾಜಿ ದರೋಡೆಕೋರ ತನ್ನ ಗುಂಪಿನ ಉಪಟಳ ಸಹಿಸುವುದಿಲ್ಲ ಅಥವಾ ತಾನು ರಾಜನಂತೆ ಪ್ರದರ್ಶಿಸಿಕೊಳ್ಳುತ್ತ ತನ್ನ ಗುಂಪಿಗೆ ಕಣ್ಸನ್ನೆಯನ್ನೂ ಕೊಡುವುದಿಲ್ಲ. ಬದಲಾಗಿ ತನ್ನ ಪೂರ್ವಾಶ್ರಮದ ಗುಂಪನ್ನು ಸೆರೆ ಹಿಡಿಯುತ್ತಾನೆ; ಜೈಲಿಗೆ ಹಾಕುತ್ತಾನೆ; ಶಿಕ್ಷೆ ಕೊಡುತ್ತಾನೆ; ಶಿಕ್ಷಣ ಕೊಡುತ್ತಾನೆ; ಅವರೆಲ್ಲರಿಗೂ ಉದ್ಯೋಗದ ವ್ಯವಸ್ಥೆ ಮಾಡುತ್ತಾನೆ. ಇದನ್ನು ರೂಪಾಂತರಗೊಂಡ ರಾಜ ಮಾಡದಿದ್ದರೆ ಆ ದರೋಡೆ ಗುಂಪು ಮನುಷ್ಯರಾಗಿ ಉಳಿಯುತ್ತಿರಲಿಲ್ಲ- ಮಚ್ಚಾಗಿ ಬಿಡುತ್ತಿದ್ದರು, ಕತ್ತಿಯಾಗಿ ಬಿಡುತ್ತಿದ್ದರು, ಲಾಂಗ್ ಆಗಿ ಬಿಡುತ್ತಿದ್ದರು, ಬಂದೂಕಾಗಿ ಬಿಡುತ್ತಿದ್ದರು. ತಾನು ಕೂತ ಸ್ಥಾನಕ್ಕೆ ಆ ರಾಜ ಗೌರವ ಕೊಟ್ಟು ತನ್ನ ಮಾಜಿ ಪುಂಡ ಗುಂಪಿಗೆ ಉದ್ಯೋಗ ಕೊಟ್ಟು ಮನುಷ್ಯರನ್ನಾಗಿ ಮಾಡುತ್ತಾನೆ. ಬಹುಶಃ ಇದೇ ರಾಜಧರ್ಮ ಅಂತ ಕಾಣುತ್ತೆ.

ಈ ರಾಜಧರ್ಮ ಅನ್ನೋದು ಭಾರತದಲ್ಲಿ ಮೊದಲಿನಿಂದಲೂ ಇದ್ದುದ್ದೆ. ಯಾಕೋ ಇತ್ತೀಚೆಗೆ ಸ್ವಲ್ಪ ಕೈಕೊಡುತ್ತಿದೆ, ಅಷ್ಟೆ. ಈ ರಾಜಧರ್ಮಕ್ಕೆ ಇಂಗ್ಲಿಷ್‍ನಲ್ಲಿ ಸಂವಾದಿಯಾಗಿ Secular ಪದ ಇದೆ.Secular ನ್ನು ಭಾರತೀಯ ಭಾಷೆಗಳು ತಮಗೆ ಬೇಕಾದಂತೆ ಅನುವಾದಿಸಿಕೊಂಡಿವೆ. ಕನ್ನಡದಲ್ಲಿ `ಜಾತ್ಯಾತೀತ’ ಎಂದಿದೆ. ಭಾರತವು ತನ್ನ ಜಾತೀಯ ಮೇಲು ಕೀಳು ಕುಬ್ಜತೆಯನ್ನು ಮೀರಬೇಕಾಗಿರುವುದರಿಂದ ಈ ಜಾತ್ಯಾತೀತ ಪರಿಕಲ್ಪನೆಯೂ ನಮಗೆ ಅಗತ್ಯವಿದೆ. ಆದರೆ Secularನ ಅರ್ಥಕ್ಕೆ `ಜಾತ್ಯತೀತ’ ಸೂಕ್ತ ಅನುವಾದ ಅಲ್ಲ. ನಾನೂನು ತಲೆಕೆಡಿಸಿಕೊಂಡು `ಸಹನಾ ಧರ್ಮ’ ಎಂಬ ಪದ ಆಯ್ಕೆ ಮಾಡಿ ಚಾಲೂ ಮಾಡಿದೆ. ಇದು ಒಂದಿಷ್ಟು ಮೆಚ್ಚಿಗೆಯನ್ನೂ ಪಡೆಯಿತು. ಆದರೆ ನನಗೇನೆ ಅದರ ಬಗ್ಗೆ ಅಸಹನೆ ಉಂಟಾಯ್ತು. `ಸಹನಾ ಧರ್ಮ’ದ ಪ್ರವೃತ್ತಿ ನಮಗೆ ಇಂದು ತುರ್ತಾಗಿ ಅಗತ್ಯವಿದ್ದರೂSecular ಪದದ ಅರ್ಥವನ್ನು ಅದು ಧ್ವನಿಸಲಾರದು ಅನ್ನಿಸತೊಡಗಿತು. ಅದಕ್ಕಾಗಿ ಅರ್ಥ ಪ್ರಧಾನ ಮಾಡಿ `ಧರ್ಮನಿರಪೇಕ್ಷ ರಾಜಧರ್ಮ’ ಎಂದು ಭಾರತೀಯಗೊಳಿಸಿದ ಈ ಪದ ಸೂಕ್ತವೇನೊ ಎಂದು ಈಗನ್ನಿಸುತ್ತದೆ.

ಇಂದು, ಧರ್ಮನಿರಪೇಕ್ಷ ರಾಜಧರ್ಮ ಆತಂಕದಲ್ಲಿದೆ. ಧರ್ಮಗಳ ಅಂತರಂಗದಲ್ಲಿ ಧರ್ಮವೇ ಇಲ್ಲದಂತಾಗಿದೆ. ತಲೆ ಕತ್ತರಿಸಿ ತಂದುಕೊಟ್ಟವರಿಗೆ ಕೋಟಿ ರೂಪಾಯಿ ಇನಾಮು, ಕೈ ಕತ್ತರಿಸಿ ತಂದುಕೊಟ್ಟರೆ ಲಕ್ಷ ರೂಪಾಯಿ, ನಾಲಗೆ ಕತ್ತರಿಸಿದರೆ ಅದಕ್ಕೂ ಇನಾಮು ಎಂದು ಘೋಷಿಸುವುದರಲ್ಲಿ ಯಾವ ಧರ್ಮ ಇದೆ? ಆ ಧರ್ಮಗಳ ಒಳಗೆ ಇರುವುದು ಖೊಮೇನಿಸಂ. ನನಗೆ ವೈಯಕ್ತಿಕವಾಗಿ ದುಃಖವೆಂದರೆ ನಾನು ಬಯಸುವ ಬುದ್ಧಿಸಂಗೆ ಕೂಡ ಬರ್ಮಾದಲ್ಲಿ ಖೊಮೇನಿಸಂ ನುಸುಳಿದೆ. ಇಸ್ಲಾಂನೊಳಗೆ ಖೊಮೇನಿಸಂ ಗುಟುರು ಹಾಕುತ್ತಿದೆ. ಅಷ್ಟೇಕೆ ಎಲ್ಲಾ ಧರ್ಮಗಳನ್ನು ಸಹಿಸಿಕೊಂಡು ರೂಪಿತವಾದ ಭಾರತಕ್ಕೆ ‘ಹಿಂದುತ್ವ’ದ ಆರ್ಯರೋಗದ ಭೂತವು ರಂಗಪ್ರವೇಶ ಮಾಡಿದ ಮೇಲೆ ಈ ಹಿಂದು ಸೇರಿದಂತೆ ಭಾರತದ ಅನೇಕಾನೇಕ ಧರ್ಮಗಳ ಒಳಗೂ ಖೊಮೇನಿಸಂನ ಆರ್ಭಟವಾಗುತ್ತಿದೆ. ಅದು ಇದು ಎನ್ನದೆ ಎಲ್ಲಾ ಧರ್ಮಗಳ ತಿರುಳನ್ನು ಖೊಮೇನಿಸಂ ತಿಂದುಹಾಕುತ್ತಿದೆ. ಧರ್ಮ ಎಂಬುದು ಇಂದು ಒಂದು ನಾಮಪದ ಆಗಿದೆ ಅಷ್ಟೆ. ಇನ್ನೇನು ಪ್ರಾಣಪಕ್ಷಿ ಹಾರಿ ಹೋಗುತ್ತಿದೆಯೇನೋ ಎಂಬಂತೆ ಧರ್ಮಗಳೊಳಗಿನ ಧರ್ಮದ ಉಸಿರಾಟ ಕ್ಷೀಣವಾಗಿ ಕೇಳಿಸುತ್ತಿದೆ.

ಇರಲಿ, ಎಲ್ಲಿಗೆ ನಿಲ್ಸಿದ್ದೆ ನಾನು? ದರೋಡೆಕೋರನಾಗಿದ್ದವನು ರಾಜನಾದ ಮೇಲೆ ತನ್ನ ದರೋಡೆ ಗುಂಪನ್ನು ಸೆರೆ ಹಿಡಿದು, ಶಿಕ್ಷಿಸಿ, ಶಿಕ್ಷಣ ಕೊಟ್ಟು ಉದ್ಯೋಗ ನೀಡಿ ಉದ್ಧಾರ ಮಾಡಿದ ಎಂಬಲ್ಲಿಗೆ ತಾನೆ? ಇದು ಇಂದು ತುರ್ತಾಗಿ ಆಗಬೇಕಾದ ಕೆಲಸ. ಇಂದಿನ ವಿಧ್ವಂಸಕತೆಗಳ ತಾಯಿ ಬೇರು ನಿರುದ್ಯೋಗ ಅನ್ನಬಹುದು. ಉದ್ಯೋಗವಿಲ್ಲದೆ ಯುವಜನತೆ ದಿಕ್ಕು ಕಾಣದೆ ಕುಪಿತರಾಗಿದ್ದಾರೆ; ಮಚ್ಚು ಹಿಡಿಯುತ್ತಿದ್ದಾರೆ, ಬಂದೂಕು ಹಿಡಿಯುತ್ತಿದ್ದಾರೆ. ಇದಕ್ಕೆಲ್ಲಾ ಆಳುವವರ ಕೃಪೆ ಇರಬಹುದೇನೋ ಎಂಬ ವಾಸನೆಯೂ ಇದೆ. ಸಮಸ್ಯೆಗಳಿಗೆ ಮುಖಾಮುಖಿಯಾಗಲು ಸಾಮರ್ಥ್ಯವಿಲ್ಲದ ಆಳ್ವಿಕೆ ನಡೆಸುವವರು ಜಾತಿ, ಮತ, ಭಾಷೆ, ಗಡಿ ಇತ್ಯಾದಿ ಭಾವನಾತ್ಮಕ ಭೂತಗಳನ್ನು ಕೆರಳಿಸಿ ಜನರನ್ನು ದಿಕ್ಕು ತಪ್ಪಿಸಿ, ಕಿತ್ತು ತಿನ್ನುವ ಸಮಸ್ಯೆಗಳನ್ನು ಮರೆಸುತ್ತಾರೆ ಎಂದು ಇತಿಹಾಸ ಹೇಳುತ್ತದೆ. ಇಂದು ಜರಗುತ್ತಿರುವುದು ಇದೇನೆ.

ಈಗ ಕರ್ನಾಟಕದಲ್ಲಿ `ಉದ್ಯೋಗಕ್ಕಾಗಿ ಯುವಜನರು’ ಎಂಬ ಕೂಗು ಎದ್ದಿದೆ. ನಿರುದ್ಯೋಗವನ್ನೇ ಅಭಿವೃದ್ಧಿ ಎಂದು ಬಿಂಬಿಸುತ್ತಿರುವ ವಯಸ್ಸಾದ ರಾಜಕಾರಣಿಗಳಿಂದ ಜುಗುಪ್ಸೆಗೊಂಡ ಯುವಜನತೆ ವಾಸ್ತವಕ್ಕೆ ಮುಖಾಮುಖಿಯಾಗುತ್ತಿದೆ. ನಾಡನ್ನು ಕಟ್ಟುವ ಈ ಆಂದೋಲನದ ಯುವನಾಯಕರಿಗೆ ಹೇಳಿದೆ- `ನಾನು ನಿಮ್ಮನ್ನು ಹಿಂಬಾಲಿಸುತ್ತೇನೆ’ ಅಂತ. ಎಲ್ಲರೂ ಈ ಆಂದೋಲನವನ್ನು ಹಿಂಬಾಲಿಸಬೇಕಾಗಿದೆ. ಭಜರಂಗದಳ, ಸಂಘಪರಿವಾರದ ನಮ್ಮ ಯುವಜನತೆಗೆ ‘ಉದ್ಯೋಗ ಸಿಗಲಿ ಎಂದು ಹೋರಾಡಿ’ ಎಂದು `ಉದ್ಯೋಗಕ್ಕಾಗಿ ಯುವಜನರು’ ನಾಯಕತ್ವಕ್ಕೆ ನಾನು ವಿನಂತಿಸುವೆ. ಹಾಗೇನೆ ಭಜರಂಗದಳ ಸಂಘಪರಿವಾರದ ಯುವಜನತೆಗೆ `ಉದ್ಯೋಗಕ್ಕಾಗಿ ಯುವಜನರು’ ಆಂದೋಲನಕ್ಕೆ ಜೊತೆಯಾಗಿ ಎಂದು ವಿನಂತಿಸುವೆ. ಎಲ್ಲರೂ ಸೇರಿ ಒಕ್ಕೊರಲಿನಿಂದ `ಉದ್ಯೋಗವೇ ಅಭಿವೃದ್ಧಿ’ ಎಂದು ನಮ್ಮನ್ನಾಳುವ ಸರ್ಕಾರಗಳಿಗೆ ಹೇಳಬೇಕಾಗಿದೆ. ರಾಜ್ಯ ಸರ್ಕಾರಕ್ಕೂ ಕೇಳಬೇಕಾಗಿದೆ- `ನೀವು ಕೊಟ್ಟ ಉದ್ಯೋಗದ ಭರವಸೆ ಏನಾಯ್ತು?’ ಅಂತ. ಹಾಗೇ ‘ಒಂದು ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ’ ಎಂದು ವಚನ ಕೊಟ್ಟು, ಮಾತಿಗೆ ತಪ್ಪಿದ ಪ್ರಧಾನಿ ನರೇಂದ್ರ ಮೋದಿಯವರನ್ನೂ ಕೇಳಬೇಕು- ಎಲ್ಲಿಗೆ ಹೋಯ್ತು ನಿಮ್ಮ ಮಾತು? ನೀವು ಮಾತು ಕೊಟ್ಟಾಗ ಇದ್ದಷ್ಟು ಉದ್ಯೋಗವೂ ಈಗ ಉಳಿದಿಲ್ಲ ಎಂದು ಅಂಕಿ ಅಂಶ ಹೇಳುತ್ತವೆ. ಇದು ದ್ರೋಹವಲ್ಲವೆ?- ನಾವು ಪ್ರಶ್ನಿಸಬೇಕು.

ಆದರೆ ಇಂದು ಪ್ರಶ್ನಿಸಬೇಕಾದ ಅಕ್ಷರ ಕಲಿತವರು ಸಾಮಾಜಿಕ ಜಾಲತಾಣ ಎಂಬ ಜಾಲದೊಳಗೆ ಸಿಕ್ಕಿಬಿದ್ದಿದ್ದಾರೆ. ಸಮಾಜಕ್ಕಿಂತಲೂ ಈ ಸಾಮಾಜಿಕ ಜಾಲತಾಣ ದುಪ್ಪಟ್ಟು ಕೆಟ್ಟಿದೆ. ಉದಾಹರಣೆಗೆ ಇತ್ತೀಚಿಗೆ- “ಇತಿಹಾಸ ಮರುಕಳಿಸಿತೆ? ಮತ್ತೊಬ್ಬ ಲಾಲ್ ಬಹದ್ದೂರ್ ಶಾಸ್ತ್ರಿ ಸಿಕ್ಕಿದ್ದಾರೆಯೇ? ನೀವೇ ಆಲೋಚಿಸಿ” ಎಂಬ ಜಾಲತಾಣದ ಬರಹ ಓದಿದೆ. ಪ್ರಧಾನಿ ನರೇಂದ್ರ ಮೋದಿಯವರ ಕುಟುಂಬದವರ ಆಸ್ತಿ, ಜೀವನ ಶೈಲಿ, ಬಡತನ, ಬವಣೆ ಇತ್ಯಾದಿ ವಿವರಗಳನ್ನು ಕೊಟ್ಟು, ಅವರಲ್ಲಿ ಕೆಲವರು ಬಾಡಿಗೆ ಮನೆಯಲ್ಲಿರುವುದನ್ನೂ, ಕಷ್ಟವಿದ್ದರೂ ಪ್ರಧಾನಿ ನಿವಾಸಕ್ಕೆ ಕಾಲಿಟ್ಟಿಲ್ಲ ಎಂಬುದನ್ನೂ ವಿವರಿಸಿ ಲಾಲ್ ಬಹದ್ದೂರ್‍ರಂತೆಯೇ ನರೇಂದ್ರ ಮೋದಿಯವರೂ ಕೂಡ ಇದ್ದಾರೆ ಎಂದು ಆ ಬರಹ ಹೇಳತ್ತದೆ. ಈ ರೀತಿ ಹಿನ್ನಲೆಯಿರುವ ಮೋದಿಯವರು ಲಾಲ್ ಬಹದ್ದೂರ್  ಶಾಸ್ತ್ರಿ ಅವರಂತೆ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ನನಗೂ ಒಂದೊಂದು ಸಲ ಅನ್ನಿಸುತ್ತದೆ. ಮೋದಿಯವರಿಗೆ ವೇಷಭೂಷಣದ ಖಯಾಲು ಇದೆ, ಇದನ್ನು ದೊಡ್ಡದು ಮಾಡುವುದು ಬೇಡ. ಆದರೆ ಮೋದಿಯವರು ಪ್ರಧಾನಿಯಾಗಿದ್ದಾರೆ; ಅವರು ನಮ್ಮ ದೇಶದ ಭವಿಷ್ಯವನ್ನು ನಿರ್ಧರಿಸುವವರೂ ಆಗಿರುತ್ತಾರೆ ಎಂಬುದನ್ನು ನಾವು ಮರೆಯಬಾರದು. ಭಾರತದಲ್ಲಿ ಶೇಕಡ 1 ರಷ್ಟು ಇರುವ ಜನರ ಕೈಲಿ ಶೇಕಡ 73 ರಷ್ಟು ದೇಶದ ಸಂಪತ್ತು ವಶವಾಗಿದೆ ಎಂದು ಕಳೆದ ವರ್ಷದ ವಹಿವಾಟಿನ ಅಂಕಿಅಂಶ ಹೇಳುತ್ತದೆ. ಲಾಲ್ ಬಹದ್ದೂರ್ ಶಾಸ್ತ್ರಿಯವರು ಖಂಡಿತ ಶೇಕಡ 1ರಷ್ಟು ಇರುವ ಬಂಡವಾಳಿಗರ ಪರವಾಗಿ ನಿಲ್ಲುತ್ತಿರಲಿಲ್ಲ, ಬದಲಾಗಿ ಮೋದಿಯವರ ಕುಟುಂಬದಂತೆಯೇ ಬದುಕಲು ಬವಣೆ ಪಡುತ್ತಿರುವ ಬಹುಸಂಖ್ಯಾತ ಜನಸ್ತೋಮದ ಪರವಾಗಿ ನಿಲ್ಲುತ್ತಿದ್ದರು ಎಂದು ಧೈರ್ಯವಾಗಿ ಹೇಳಬಹುದು. ಹಾಗೆಯೇ ಲಾಲ್ ಬಹದ್ದೂರ್ ಶಾಸ್ತ್ರಿಯವರ ಅಕ್ಕಪಕ್ಕ ಹಿಂದು ಮುಂದು ಅಂಬಾನಿ ಸಹೋದರರೋ ಜೊತೆಗೆ ಅದಾನಿ ಮುಂತಾದ ಕಾರ್ಪೊರೇಟ್ ಕುಳಗಳೋ ಇರುತ್ತಿರಲಿಲ್ಲ ಎಂದೂ ಹೇಳಬಹುದು. ಈ ಅಂಬಾನಿ ಸಹೋದರರು ಹಾಗೂ ಅದಾನಿ ಮಹಾಶಯ ಈ ಮೂರು ಬಲಾಡ್ಯ ಕುಟುಂಬಗಳು ಬ್ಯಾಂಕಿಗೆ ಮರುಪಾವತಿಸದೆ ದಗಾ ಹಾಕಿರುವ ಹಣದ ಮೊತ್ತ ಮೂರು ಲಕ್ಷ ಕೋಟಿಗಿಂತಲೂ ಇನ್ನೂ ಹೆಚ್ಚು! ಈ NPA ಎಂಬ ಸರ್ಕಾರಿ ಪ್ರಾಯೋಜಿತ ಖಾಸಗಿ ಲೂಟಿಯನ್ನು ಜನರು ತಮ್ಮ ತೆರಿಗೆಯ ಹಣ ಅಂದುಕೊಂಡಿಲ್ಲ, ದುರಂತ ಇರುವುದು ಇಲ್ಲೇ. ಇಂಥ ಬಲಾಢ್ಯ ಕುಟುಂಬಗಳು ಮರುಪಾವತಿಸದೆ ಇರುವ ಸಾಲಗಳನ್ನು ವೇವಾಫ್ ಮಾಡಿಬಿಡುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಬಹುಷಃ ಲಾಲ್ ಬಹದ್ದೂರ್‍ರವರ ಜಮಾನದಲ್ಲಿ ಇದಾಗುತ್ತಿರಲಿಲ್ಲ. ಹಾಗಾಗಿ ಇಂಥ ಹೋಲಿಕೆಗಳೇ ಅಸಂಬದ್ಧ. ಜೊತೆಗೆ ಹೋಲಿಕೆಗಳು ಇನ್ನೆಲ್ಲಿಗೋ ಕರೆದೊಯ್ಯಲೂಬಹುದು. ಉದಾಹರಣೆಗೆ ಮೋದಿಯವರಿಗೆ ಆಗದವರು ಅವರನ್ನು, ದಡ್ಡನಿಗೆ ಧೈರ್ಯ ಜಾಸ್ತಿ ಎಂಬಂತಿದ್ದ ಸಂಜಯ್‍ಗಾಂಧಿಗೆ ಹೋಲಿಸಬಹುದು. ಹೊಟ್ಟೆ ತುಂಬಿಸದ ಇಂಥ ಮಾತುಗಳು ಯಾಕೆ ಬೇಕು?

ಇಂದು “ಉದ್ಯೋಗವೇ ಅಭಿವೃದ್ಧಿ” ಎಂದು ದೇಶದ ಜನತೆ ಒಕ್ಕರಲಿನಿಂದ ಕೂಗಬೇಕಿದೆ. ಜೊತೆಗೆ ಬಡವ ಬಲ್ಲಿದರ ನಡುವೆ ಅಂತರ ಸಮತೋಲನದಲ್ಲಿದ್ದರೆ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ, ಸುಲಿಗೆಯಿಲ್ಲದ ಸಮತೋಲನದ ಸಮಾಜ ಮೂಡುತ್ತದೆ ಎಂಬುದನ್ನು ಮೊದಲು ನಾವು ಮನಗಾಣಬೇಕಾಗಿದೆ. ಒಂದು ದೇಹದಲ್ಲಿರುವ ಬಿಳಿರಕ್ತಕಣ ಹೇಗೋ ಹಾಗೆಯೇ ಒಂದು ದೇಶದಲ್ಲಿರುವ ಬಂಡವಾಳಿಗರೂ ಕೂಡ. ಹಾಗೇ ಒಂದು ದೇಹದಲ್ಲಿರುವ ಕೆಂಪುರಕ್ತಕಣ ಹೇಗೋ ಹಾಗೆಯೇ ಅದು ಜೀವನ ನಿರ್ವಹಿಸುವ ಜನ ಸಾಮಾನ್ಯರು ಇದ್ದಂತೆ. ಈ ಬಿಳಿ ಮತ್ತು ಕೆಂಪು ಒಂದು ಸರಿಯಾದ ಪ್ರಮಾಣದಲ್ಲಿ ಇದ್ದರೆ ಮಾತ್ರ ಆ ದೇಹದ ಆರೋಗ್ಯ ಹಾಗೇ ಆ ದೇಶದ ಆರೋಗ್ಯ ಸಮತೋಲನದಲ್ಲಿರುತ್ತದೆ. ಬಿಳಿರಕ್ತಕಣವೇ ಹೆಚ್ಚಾದರೆ ಅರ್ಬುದ ಪ್ರಾಪ್ತಿ, ನೆನಪಿರಲಿ. ಇಂದು ದೇಶದ ಬಿಳಿರಕ್ತಕಣವಾದ ಬಂಡವಾಳಿಗರು ಉಲ್ಬಣಗೊಂಡಿದ್ದಾರೆ. ತಕ್ಷಣವೇ ದೇಶದ ಆರೋಗ್ಯವನ್ನು ತಪಾಸಣೆಗೆ ಒಳಪಡಿಸಬೇಕಾಗಿದೆ. ಮತ್ತೆ “ಕಲ್ಯಾಣರಾಜ್ಯ(welfare state)’’ ಕನಸು ಕಾಣಬೇಕಾಗಿದೆ.

ಇಷ್ಟು ಸಾಲದು ಎಂಬಂತೆ ಮತಾಂಧತೆಯೂ ಭಾರತವನ್ನು ಕಿತ್ತು ತಿನ್ನುತ್ತಿದೆ. ಕರಾವಳಿ ಕರ್ನಾಟಕವನ್ನು ಮತಾಂಧತೆಗೆ ಪ್ರಯೋಗಶಾಲೆ ಅನ್ನುತ್ತಿದ್ದಾರೆ, ಇದಾಗಬಾರದಿತ್ತು. `ಎದೆಗೆ ಬಿದ್ದ ಅಕ್ಷರ’ದಲ್ಲಿ, ಕೆಲವು ಮಾತುಗಳು ಹೀಗಿವೆ- `ಯಾವುದೇ, ಯಾರದೇ ಮತಾಂಧತೆಯು ಮೊದಲು ಮಾಡುವುದು ತನ್ನವರ, ತನಗೆ ಸೇರಿದವರ ಕಣ್ಣುಗಳನ್ನು ಕಿತ್ತು ಅಂಧರನ್ನಾಗಿಸುವುದು. ಆಮೇಲೆ ಮಿದುಳು ಕಿತ್ತು ವಿವೇಕಶೂನ್ಯರನ್ನಾಗಿಸುವುದು. ನಂತರ ಹೃದಯ ಕಿತ್ತು ಕ್ರೂರಿಗಳನ್ನಾಗಿಸುವುದು. ಆಮೇಲೆ ನರಬಲಿ ಕೇಳುವುದು. ಇಂದು ಇದು ಹೆಚ್ಚುತ್ತಿದೆ. ಬಹಳ ತುರ್ತಾಗಿ ನಮ್ಮ ಮಕ್ಕಳ ಕಣ್ಣು ಹೃದಯ ಮಿದುಳುಗಳನ್ನು ಮತಾಂಧತೆಯ ದವಡೆಯಿಂದ ರಕ್ಷಿಸಬೇಕಾಗಿದೆ’ ಎಂದೆ. ಈ ಮಾತುಗಳು ಸುಮ್ಮಸುಮ್ಮನೆ ಬಂದುದ್ದಲ್ಲ. ಮಾಜಿ ಮುಖ್ಯ ಮಂತ್ರಿಗಳೊಬ್ಬರು ಶಾಸಕರೊಬ್ಬರಿಗೆ, ‘ನಾವು ಗೆಲ್ಲೋದು ಸುಲಭಾ.. ಒಂದು ಹಿಂದೂ ಹೆಣ ಬಿದ್ದರೆ ಕೋಮುಗಲಭೆ ಆಗುತ್ತದೆ. ಅಲ್ಲಿ ನಮ್ಮ ಗೆಲುವು ಗ್ಯಾರಂಟಿ’- ಇಂಥ ಮಾತುಗಳನ್ನು ಕೇಳಿ, ನೋಡಿ ‘ನಮ್ಮ ಮಕ್ಕಳನ್ನು ಮತಾಂಧತೆಯ ದವಡೆಯಿಂದ ರಕ್ಷಿಸಬೇಕಾಗಿದೆ’ ಎಂದೆ. ಗೆಲ್ಲಬೇಕೆಂಬ ದೆವ್ವ ಮೆಟ್ಟಿದವರು ಅವರವರ ಸಮುದಾಯಗಳಿಗೆ ಸೇರಿದವರ ಕೊಲೆಗಳನ್ನು ಮಾಡಿಸಬಹುದಲ್ಲ? ಅದಕ್ಕಾಗೆ `ನಮ್ಮ ಮಕ್ಕಳ ಕಣ್ಣು ಹೃದಯ ಮಿದುಳುಗಳನ್ನು ಮತಾಂಧತೆಯ ದವಡೆಯಿಂದ ರಕ್ಷಿಸಬೇಕಾಗಿದೆ’ ಎಂದೆ.
ಯಾರು ರಕ್ಷಿಸಬೇಕು? ಕರಾವಳಿ ಕರ್ನಾಟಕದ ಪಾಲನೆಯ ಸ್ವಭಾವದ ಮಹಿಳಾ ಸಮೂಹಕ್ಕೆ ಇಚ್ಚಾ ಶಕ್ತಿ ಬಂದರೆ ರಕ್ಷಿಸಲು ಸಾಧ್ಯ ಎಂದು ನನಗನ್ನಿಸುತ್ತದೆ. ಮಹಿಳಾ ಸಮೂಹವು ರಾಜಕೀಯವಾಗೇ ಇದಕ್ಕೆ ಮುಖಾಮುಖಿಯಾಗಬೇಕು. ಕರಾವಳಿ ಕರ್ನಾಟಕವು ಗುಣಾತ್ಮಕವಾದ ಪ್ರಯೋಗಶಾಲೆಯಾಗಲಿ ಎಂಬ ಆಸೆಯಿಂದ ಒಂದು ಪ್ರಸ್ತಾಪವನ್ನು ಮುಂದಿಡುತ್ತಿದ್ದೇನೆ: ಕರ್ನಾಟಕದಲ್ಲಿ ಸ್ವರಾಜ್ ಇಂಡಿಯಾ ಪಕ್ಷವು ಈಗಷ್ಟೇ ಕಣ್ಣು ಬಿಟ್ಟು ಅಂಬೆಗಾಲಿಡುತ್ತಿದೆ. ಚುನಾವಣೆ ಮಾತ್ರವೇ ರಾಜಕಾರಣವಲ್ಲ, ಹೋರಾಟವೂ ರಾಜಕಾರಣವೆ, ರಚನಾತ್ಮಕ ಕಾರ್ಯವೂ ರಾಜಕಾರಣವೆ, ಹಾಗೆಯೇ ಹೊಸ ವಿಚಾರ–ಚಿಂತನೆ, ಕಲೆ – ಸಂಸ್ಕೃತಿಗಳನ್ನು ಸೃಷ್ಟಿಸುವುದೂ ಕೂಡ ರಾಜಕಾರಣವೆ ಎಂದು ಸ್ವರಾಜ್ ಇಂಡಿಯಾ ಪಕ್ಷವು ನಾಡನ್ನು ಕಟ್ಟುವ ರಾಜಕಾರಣ ಮಾಡಲು ಹೊರಟಿದೆ. ಕರಾವಳಿ ಕರ್ನಾಟಕದ ಮಹಿಳಾ ಸಮೂಹವು ಇದನ್ನು ತಮ್ಮದನ್ನಾಗಿ ಮಾಡಿಕೊಂಡು ಸ್ವರಾಜ್ ಇಂಡಿಯಾ ಪಕ್ಷವು ಸಂಪೂರ್ಣ ಮಹಿಳೆಯರದೇ ಆಗಲಿ ಎಂಬ ಪ್ರಸ್ತಾಪವನ್ನು ಮುಂದಿಡುತ್ತಿದ್ದೇನೆ. ಮಹಿಳೆಯರಿಗಿಷ್ಟವಿದ್ದಲ್ಲಿ ಅವರೇ ಪುರಷರಿಗೆ ಮೀಸಲಾತಿ ನೀಡುವಂತಾಗಲಿ, ಬಹುಷಃ ಪ್ರಯೋಗ ಅಂದರೆ ಹೀಗೇ, ಇಂಥವು. ಇದನ್ನು ತಮ್ಮ ಮುಂದಿಡುತ್ತೇನೆ.