ಕೆಳ ಹಂತದ ವೇಶ್ಯಾವಾಟಿಕೆ-ಗಾಯದ ಮೇಲೆ ಸರ್ಕಾರದ ಬರೆ

      ರೂಪ ಹಾಸನ
                                 ಭಾಗ-1

                                                            ವೇಶ್ಯಾವಾಟಿಕೆ-ಗಾಯದ ಮೇಲೆ ಸರ್ಕಾರದ ಬರೆ

ಕರ್ನಾಟಕದಲ್ಲಿ ಇದ್ದಕ್ಕಿದ್ದಂತೆ ವೇಶ್ಯಾವಾಟಿಕೆ ಕಾನೂನುಬದ್ಧವಾಗಬೇಕು ಎಂಬ ಕೂಗೆದ್ದಾಗ, ಮುಖ್ಯವಾಗಿ ಕೆಳಹಂತದ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಹೆಣ್ಣುಮಕ್ಕಳು ಭೀತರಾಗಿದ್ದರು……‘ಮಕ್ಕಳಿಗೆ, ಕುಟುಂಬದವರಿಗೆ, ಸಂಬಂಧಿಕರಿಗೆ, ನೆರೆಹೊರೆಯವರಿಗೆ ಗೊತ್ತಾದ್ರೇ ಏನ್ಮಾಡೋದು ಅಂತ ಪ್ರತಿಕ್ಷಣ ಸಾಯ್ತಾ, ಜೀವ ಕೈಯಲ್ಲಿ ಹಿಡಿದು ಬದುಕ್ತಿವಿ. ನಾವು ಇಂತಹ ಕೆಲ್ಸ ಮಾಡ್ತಿದ್ದೀವಿ ಅಂಥ ಅವರಿಗೆ ತಿಳಿದುಬಿಟ್ಟರೆ ಆತ್ಮಹತ್ಯೆ ಮಾಡ್ಕೋಬೇಕಷ್ಟೇ. ಪ್ರತಿ ದಿನ, ಸಾಕಪ್ಪ ಈ ನರಕ ಅಂತ್ಲೇ ಬರ್ತೀವಿ. ನಾವೇನು ಇಷ್ಟಪಟ್ಟು ಇಲ್ಲಿಗೆ ಬಂದಿಲ್ಲ. ವಿಧಿಯಿಲ್ದೇ ಬಿದ್ದಿದ್ದೀವಿ’ ಎಂದು ಸಂಕಟದಿಂದ ಅವರು ಅಲವತ್ತುಕೊಳ್ಳುತ್ತಿದ್ದರು.
ಅವರ ಮೊರೆಗೆ ಕಿವಿಯಾದಂತೆ ಕಂಡ ರಾಜ್ಯ ಸರಕಾರ, ಈಗಾಗಲೇ ಸುಪ್ರೀಮ್‍ಕೋರ್ಟ್ ಹಲವು ಬಾರಿ ಆದೇಶ ಮಾಡಿದ್ದಂತೆ, ಇಡೀ ದೇಶದಲ್ಲೇ ಅದೇ ಮೊದಲ ಬಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ, ಮಹಿಳಾ ಅಭಿವೃದ್ಧಿ ನಿಗಮದ ಅಡಿಯಲ್ಲಿ ಲೈಂಗಿಕ ವೃತ್ತಿನಿರತರ ಅಧ್ಯಯನಕ್ಕಾಗಿ ವಿಧಾನ ಪರಿಷತ್ ಸದಸ್ಯೆ ಜಯಮಾಲ ಅವರ ಅಧ್ಯಕ್ಷತೆಯಲ್ಲಿ, 21 ಜನ ಸದಸ್ಯರನ್ನೊಳಗೊಂಡ ಸಮಿತಿಯೊಂದನ್ನು ಮೇ 2015ರಲ್ಲಿ ನೇಮಿಸಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀಯವರು ಆಗ ಪತ್ರಿಕಾ ಹೇಳಿಕೆ ನೀಡಿ “ರಾಜ್ಯದಲ್ಲಿ ವೇಶ್ಯಾವೃತ್ತಿಯಲ್ಲಿರುವವರ ಸ್ಥಿತಿಗತಿಗಳನ್ನು ನಿಖರವಾಗಿ ಗುರುತಿಸುವುದು, ಅವರಿಗೆ ಸರ್ಕಾರದಿಂದ ಅಗತ್ಯ ಸೌಲಭ್ಯಗಳನ್ನು ನೀಡುವುದು, ಪುನರ್ವಸತಿ ಕಲ್ಪಿಸುವುದು, ಅವರ ಮಕ್ಕಳಿಗೆ ಶಿಕ್ಷಣ ನೀಡುವುದು ಸೇರಿದಂತೆ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಈ ಸಮಿತಿಯ ವರದಿ ಬಂದ ತಕ್ಷಣವೇ ಶಿಫಾರಸ್ಸನ್ನು ಆಧಾರವಾಗಿಟ್ಟುಕೊಂಡು ಮುಂದುವರೆಯಲಾಗುವುದು” ಎಂದಿದ್ದರು.
ಸಮಿತಿಯು ಸ್ವ ಇಚ್ಛೆಯಿಂದ ವೇಶ್ಯಾವಾಟಿಕೆ ನಡೆಸುತ್ತಿರುವವರನ್ನು ಹಾಗೂ ಇದನ್ನೊಂದು ವೃತ್ತಿಯೆಂದು ಪರಿಗಣಿಸಿರುವವರನ್ನು ಅಧ್ಯಯನಕ್ಕೆ ಒಳಪಡಿಸಿಲ್ಲ. ಒತ್ತಡ, ಪರಿಸ್ಥಿತಿ, ಬಡತನ….ಇಂತಹವೇ ಕಾರಣದಿಂದ ಕೆಳಹಂತದ ದಂಧೆಯಲ್ಲಿ ದೂಡಲ್ಪಟ್ಟು ಅಕ್ಷರಶಃ ದಮನಿತರಾದವರನ್ನು ಮಾತ್ರ ಈ ಸಮಿತಿ ಪರಿಗಣಿಸಿ, ಅವರನ್ನು ‘ಲೈಂಗಿಕ ಕಾರ್ಯಕರ್ತೆಯರು’ ಎಂದು ಕರೆಯದೆ, ‘ದಮನಿತರು’ ಎಂದು ಸಂಬೋಧಿಸಬೇಕೆಂದು ಮೊದಲಿಗೆ ನಿರ್ಧರಿಸಲಾಯ್ತು. ಆ ಪರಿಮಿತಿಯೊಳಗೇ ಸಮಿತಿ ರಾಜ್ಯಾದ್ಯಂತ 30 ಜಿಲ್ಲೆಗಳಲ್ಲಿ ಸ್ವತಃ 3000 ದಮನಿತರನ್ನು ಭೇಟಿಯಾಗಿ ಮುಖಾಮುಖಿ ಮಾತಾಡಿಸಿ, ಎಲ್ಲ 176 ತಾಲ್ಲೂಕುಗಳಿಂದ 8100 ಮಹಿಳೆಯರನ್ನು, 169 ಪ್ರಶ್ನೆಗಳ ಪ್ರಶ್ನಾವಳಿಗಳ ಮೂಲಕ ಕೂಲಂಕಷ ಅಧ್ಯಯನ ನಡೆಸಿತು. ಇವರಲ್ಲಿ ಶೇಕಡಾ 72ರಷ್ಟು ಮಂದಿ ಸ್ವತಹಃ ಈ ದಂಧೆಯಿಂಧ ಹೊರಬಂದು ಪುನರ್ವಸತಿಗೊಳ್ಳಲು ಬಯಸಿದ್ದಾರೆಂಬುದು ಗಮನಾರ್ಹ.
ಅತ್ಯಂತ ಗೌಪ್ಯವಾಗಿ ಮತ್ತು ಚದುರಿದಂತಿರುವ ಇವರನ್ನು ಹುಡುಕುವುದು ಮತ್ತು ಅಧ್ಯಯನ ಮಾಡುವುದು ಪ್ರಯಾಸದ ಕೆಲಸವಾಗಿತ್ತು. ಹೀಗಾಗಿ, ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯಡಿ ಒಂದು ಘಟಕವಾಗಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿಯಲ್ಲಿ, ಕೆಳ ಹಂತದ ದಂಧೆಯೊಳಗೆ ನೂಕಲ್ಪಟ್ಟಿರುವ 96,878 ನೋಂದಾಯಿಸಲ್ಪಟ್ಟ ಲೈಂಗಿಕ ದಮನಿತರನ್ನೇ ಅಧ್ಯಯನಕ್ಕೆ ಬಳಸಿಕೊಳ್ಳಲಾಯ್ತು. 2017ರ ಮಾರ್ಚ್ ಬಜೆಟ್‍ನಲ್ಲಿ ಮಂಡನೆಯಾಗಲೆಂದು, ಇದಕ್ಕಾಗಿ ಪ್ರತ್ಯೇಕವಾಗಿ ವಾರ್ಷಿಕ 733 ಕೋಟಿ ರೂಪಾಯಿಗಳನ್ನು ಮೀಸಲಿಡಬೇಕೆಂದು ಒತ್ತಾಯಿಸಿ ಫೆಬ್ರವರಿಯಲ್ಲಿ ತನ್ನ ವಿಸ್ತ್ರತ ವರದಿಯನ್ನು ಸಮಿತಿ ಸರ್ಕಾರಕ್ಕೆ ಸಲ್ಲಿಸಿತು. ಈ ವರದಿ ಸಲ್ಲಿಕೆಯಾಗಿ ಈಗ್ಯೆ ಹತ್ತು ತಿಂಗಳುಗಳೇ ಕಳೆದು ಹೋಗಿವೆ.

ವರದಿಯೊಳಗೆ ವಿಶೇಷ ಆದ್ಯತೆ ನೀಡಲು ಸೂಚಿಸಿರುವ ಮುಖ್ಯ ಶಿಫಾರಸ್ಸು:

1. ಈ ದಂಧೆಯೊಳಗೆ ಬಿದ್ದಿರುವ ಸಾವಿರಾರು ಅಪ್ರಾಪ್ತ ಹೆಣ್ಣುಮಕ್ಕಳನ್ನು ರಕ್ಷಿಸಲು ತಕ್ಷಣವೇ ವಿಶೇಷ ಯೋಜನೆ ರೂಪಿಸಬೇಕು. ಏಕೆಂದರೆ ಸರಾಸರಿ 14-16ವಯಸ್ಸಿನಲ್ಲೇ 50% ಹೆಣ್ಣುಮಕ್ಕಳು ಈ ದಂಧೆಯೊಳಗೆ ನೂಕಲ್ಪಟ್ಟಿದ್ದಾರೆ.
2. ವಿವಿಧ ಬಗೆಯ ಅಂಗವೈಕಲ್ಯತೆಯಿದ್ದೂ ದಂಧೆ ನಡೆಸಿ ಬದುಕಬೇಕಾಗಿರುವ 1800ಕ್ಕೂ ಹೆಚ್ಚಿನ ಕಡು ಅಸಹಾಯಕರಿಗೆ ಹೊಸಬದುಕು ಕಟ್ಟಿಕೊಡಲು ತಕ್ಷಣವೇ ಕಾರ್ಯತತ್ಪರವಾಗಬೇಕಿರುವುದು ಮಾನವೀಯ ಸಮಾಜದ ಲಕ್ಷಣವಾಗಿದೆ.
3. ಎಚ್‍ಐವಿ ಪೀಡಿತರಾಗಿದ್ದೂ ದಂಧೆಯೊಳಗಿರುವ, ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವ ‘ಅಪಾಯದ ಗುಂಪು’ ಎಂದೇ ಗುರುತಿಸಲಾಗಿರುವ 8000ದಷ್ಟಿರುವ ಸೋಂಕಿತ ದಮನಿತರನ್ನು ತಕ್ಷಣವೇ ಸರ್ಕಾರ ದಂಧೆಯಿಂದ ಹೊರತೆಗೆದು ಪುನರ್ವಸತಿ ಕಲ್ಪಿಸುವ ಮೂಲಕ ಸೋಂಕಿಗೆ ನಿಜವಾದ ಅರ್ಥದಲ್ಲಿ ನಿಯಂತ್ರಣ ಮತ್ತು ಸಾಮಾಜಿಕ ಸ್ವಾಸ್ಥ್ಯಕ್ಕೆ ಮುಂದಾಗಬೇಕು. ಏಕೆಂದರೆ ಇದರಲ್ಲಿ 2257 ಜನರು ಮಾತ್ರ ಎಆರ್‍ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ!
4. ಹಾಗೂ ಈ ದಂಧೆಯಲ್ಲಿ ಬಿದ್ದಿರುವ 50% ಮಹಿಳೆಯರು ಬಾಲ್ಯವಿವಾಹವಾದವರೇ. ಅಪ್ರಾಪ್ತ ಹೆಣ್ಣುಮಕ್ಕಳ ಮದುವೆಯನ್ನು ಸಮರ್ಪಕವಾಗಿ ನಿಯಂತ್ರಿಸದ ಸರ್ಕಾರದ ಗುರುತರ ಲೋಪದಿಂದ ಹೆಣ್ಣುಮಕ್ಕಳು ಈ ಸ್ಥಿತಿಗೆ ಬಂದಿರುವುದರಿಂದ ತಕ್ಷಣವೇ ಅಂತಹವರನ್ನು ದಂಧೆಯಿಂದ ಹೊರತೆಗೆದು ಹೊಸ ಬದುಕು ನೀಡುವುದು ಸರ್ಕಾರದ ಆದ್ಯ ಕರ್ತವ್ಯ.
5. ಇದರ ಜೊತೆಗೇ ದಮನಿತರ ಮತ್ತು ಅವರ ಮಕ್ಕಳ ಶ್ರೇಯೋಭಿವೃದ್ಧಿಗಾಗಿ, ಕಳ್ಳಸಾಗಾಣಿಕೆ, ಮಾರಾಟ, ದೇವದಾಸಿ, ಗುಜ್ಜರ್ ಮದುವೆಗಳ ಮೂಲಕ ನಡೆಯುತ್ತಿರುವ ಹೆಣ್ಣುಮಕ್ಕಳ ಬಿಕರಿಗೆ ನಿಯಂತ್ರಣ ತರಲು ಸಮರ್ಪಕ ಯೋಜನೆಗಳನ್ನು ತಕ್ಷಣವೇ ರೂಪಿಸಬೇಕು.
6. ಕಳ್ಳಸಾಗಣಿಕೆಯಿಂದ ಪಾರಾಗಿ ಬಂದ 33.5% ಹೆಣ್ಣುಮಕ್ಕಳು ಸಾಮಾಜಿಕ ಕಳಂಕ ಹಾಗೂ ಸರ್ಕಾರದ ಅಸಮರ್ಪಕ ಪುನರ್ವಸತಿ ವ್ಯವಸ್ಥೆಯ ಕಾರಣಕ್ಕೆ ಮತ್ತೆ ದಂಧೆಗೇ ಬಿದ್ದಿರುವುದೂ ಅಧ್ಯಯನದಿಂದ ತಿಳಿದುಬಂದಿದೆ. ಅತ್ಯಾಚಾರಕ್ಕೊಳಗಾಗಿ ಬೀದಿಗೆ ಬೀಳುವ ಹೆಣ್ಣುಮಕ್ಕಳ ಸ್ಥಿತಿ ಕೂಡ ಇದಕ್ಕಿಂಥ ಭಿನ್ನವಾಗಿಲ್ಲ. ಹೀಗಾಗಿ ಇಂಥಹ ಹೆಣ್ಣುಮಕ್ಕಳಿಗೆ ತಕ್ಷಣವೇ ಪರಿಹಾರ, ಸೂಕ್ತ ರಕ್ಷಣೆ ಮತ್ತು ಸಮರ್ಪಕ ಪುನರ್ವಸತಿ ಕಲ್ಪಿಸುವ ಯೋಜನೆ ಸಿದ್ಧವಾಗಬೇಕು. ಇಂತಹ ಅಸಹಾಯಕ ಪರಿಸ್ಥಿತಿಗೆ ಬಿದ್ದ ಯಾವುದೇ ಹೆಣ್ಣುಮಗಳು ಬೀದಿಗೆ ಬೀಳುವಂತಾಗಬಾರದು.
7. ಜೊತೆಗೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ನೀಡಿರುವ ಅಂಕಿಅಂಶಗಳ ಪ್ರಕಾರ 1,05,310 ಹೆಣ್ಣುಮಕ್ಕಳು ಶಾಲೆಯಿಂದ ಹೊರಗಿದ್ದು ಇವರನ್ನು ತಕ್ಷಣವೇ ಶಾಲೆಯೊಳಗೆ ತರುವ ನಿಟ್ಟಿನಲ್ಲಿ ಸಮರ್ಪಕ ಯೋಜನೆಯನ್ನೂ ಸರ್ಕಾರ ಮಾಡಬೇಕು. ಕಳ್ಳಸಾಗಾಣಿಕೆ ಜಾಲ ಇಂತಹ ಹೆಣ್ಣುಮಕ್ಕಳನ್ನೇ ಬಲಿಪಶು ಮಾಡಲು ಗುರಿಯಾಗಿರಿಸಿಕೊಳ್ಳಲಾಗಿದೆ. ಶಾಲೆಯ ಒಳಗಿರುವವರೆಗೂ ಹೆಣ್ಣುಮಕ್ಕಳು ಹೆಚ್ಚು ಸುರಕ್ಷಿತವಾಗಿರುತ್ತಾರೆ.
ಮಾನವ ಕಳ್ಳಸಾಗಣಿಕೆ ಇಂದು ಒಂದು ದೊಡ್ಡ ಮಾಫಿಯಾ ಆಗಿ ಬೆಳೆದಿದ್ದು, ಅದರಲ್ಲಿ ಕರ್ನಾಟಕ ಮೂರನೆಯ ದೊಡ್ಡ ರಾಜ್ಯವೆಂದು ದಾಖಲಾಗಿದೆ. ನೊಂದಾಯಿತರಾದ 45.9% ರಷ್ಟು ದಮನಿತರನ್ನು ಕದ್ದೊಯ್ದು ಈ ದಂಧೆಗೆ ನೂಕಲಾಗಿದೆ ಎಂಬ ಅಂಶವೇ ಹೆಣ್ಣುಮಕ್ಕಳಿಗೆ ನಮ್ಮ ರಾಜ್ಯ ಎಷ್ಟು ಅಸುರಕ್ಷಿತವಾಗಿದೆ ಎಂಬುದರ ಸೂಚನೆಯಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಕಣ್ಮರೆಯಾದ 16,367 ಬಾಲಕಿಯರಲ್ಲಿ 1499 ಬಾಲಕಿಯರು ಪತ್ತೆಯೇ ಆಗಿಲ್ಲ. ಹಾಗೇ ಕಾಣೆಯಾದ 38,120 ಮಹಿಳೆಯರಲ್ಲಿ 4199 ಮಹಿಳೆಯರಿನ್ನೂ ಪತ್ತೆಯಾಗಬೇಕಿದೆ. ಇವು ದಾಖಲಾದ ಅಂಕಿಅಂಶಗಳಷ್ಟೇ. ಮರ್ಯಾದೆಗಂಜಿ ದಾಖಲಾಗದವುಗಳ ಸಂಖ್ಯೆ ಇದರ ಮೂರರಷ್ಟಿರುವ ಸಾಧ್ಯತೆಯಿದೆ. ಇವರಲ್ಲಿ ಹೆಚ್ಚಿನವರು ವೇಶ್ಯಾವಾಟಿಕೆಗೆ ನೂಕಲ್ಪಟ್ಟಿರುವ ಸಾಧ್ಯತೆಯಿರುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಪೊಲೀಸ್ ಇಲಾಖೆಯಲ್ಲಿರುವ ‘ಮಾನವ ಕಳ್ಳಸಾಗಾಣಿಕೆ ನಿಯಂತ್ರಣ ಸೆಲ್’ಗಳು ನಿದ್ದೆ ಹೋಗಿವೆಯೋ ಕೋಮಾ ತಲುಪಿವೆಯೋ ಗೊತ್ತಿಲ್ಲ! ಮೀರಜ್, ಮುಂಬೈ, ಬೆಂಗಳೂರು, ಸಾಂಗ್ಲಿ, ಪುಣೆ, ಗೋವಾ, ದೆಹಲಿ, ಹೈದ್ರಾಬಾದ್, ಕೊಲ್ಕತ್ತಾ……ಮುಂತಾದ ಕಡೆಗಳಿಗೆ, ಬ್ರಾಥೆಲ್‍ಗಳಿಗೆ ಇವರನ್ನು ಹೆಚ್ಚಾಗಿ ಕದ್ದೊಯ್ದಿರುವುದು ಅಧ್ಯಯನದ ವೇಳೆ ತಿಳಿದು ಬಂದಿದೆ. ಸದ್ಯ ವೇಶ್ಯಾವಾಟಿಕೆಯಲ್ಲಿರುವ, ನಿತ್ಯ ನೂಕಲ್ಪಡುತ್ತಿರುವವರಲ್ಲಿ 40% ಅಪ್ರಾಪ್ತ ಹೆಣ್ಣುಮಕ್ಕಳೇ ಆಗಿದ್ದು ಊರಿನ ಗಲ್ಲಿ ಗಲ್ಲಿಗಳಲ್ಲಿರುವ ಈ ಹಾಲುಗಲ್ಲದ ಅಸಹಾಯಕ ಬಾಲೆಯರನ್ನು ರಕ್ಷಿಸಲು ಅತ್ಯಂತ ಪ್ರಬಲವಾದ ಕಾರ್ಯ ಯೋಜನೆಯನ್ನು ಸರ್ಕಾರದ ಪೊಲೀಸ್ ಇಲಾಖೆ ಇನ್ನಾದರೂ ಸಿದ್ಧಪಡಿಸಿ ತಕ್ಷಣವೆ ಕಾರ್ಯಪ್ರವತ್ತವಾಗಬೇಕು.
ದುರಂತವೆಂದರೆ ಸರ್ಕಾರಕ್ಕೆ ಈ ವರದಿಯ ಅನುಷ್ಠಾನದಲ್ಲಿ ಕಿಂಚಿತ್ತೂ ಆಸಕ್ತಿಯಿಲ್ಲವೆಂಬುದು ಎದ್ದು ಕಾಣುತ್ತಿದೆ. ಗುಮಾನಿಯುಂಟಾಗಲು ಕಾರಣವೆಂದರೆ, ಇಷ್ಟೆಲ್ಲ ಕೆಲಸಕ್ಕಾಗಿ ಮೊದಲು ಆಯವ್ಯಯದಲ್ಲಿ ಇದಕ್ಕಾಗಿ ಪ್ರತ್ಯೇಕ ಹಣ ಎತ್ತಿಡಬೇಕಿತ್ತು. ಆದರೆ….. 2017ರ ಆಯವ್ಯಯ ಪತ್ರದಲ್ಲಿ ‘ಈ ಸಮಿತಿಯ ವರದಿ ಮತ್ತು ಪ್ರಮುಖ ಶಿಫಾರಸ್ಸುಗಳನ್ನು ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಅಳವಡಿಸಲಾಗಿದೆ’ ಎಂದು ನಮೂದಿಸಿದ್ದ ಸರ್ಕಾರದ ಕಾಳಜಿ ಕೇವಲ ತುಟಿಯಂಚಿನ ಮಾತುಗಳಾಗಿಬಿಟ್ಡಿದೆ! ಏಕೆಂದರೆ ಆಯವ್ಯಯದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮೀಸಲಿಟ್ಟ 4926 ಕೋಟಿ ಹಾಗೂ ಮಹಿಳಾ ಅಭಿವೃದ್ಧಿ ನಿಗಮಕ್ಕೆ ಹಂಚಿಕೆಯಾದ 148.74 ಕೋಟಿ ಹಣದಲ್ಲಿ ಈ ದಮನಿತ ಹೆಣ್ಣುಮಕ್ಕಳ ಶ್ರೇಯೋಭಿವೃದ್ಧಿಗಾಗಿ ಪ್ರತ್ಯೇಕವಾಗಿ ಐದು ಪೈಸೆಯನ್ನೂ ತೆಗೆದಿರಿಸಿಲ್ಲ!
ಜೊತೆಗೆ, ಮಹಿಳಾ ಅಭಿವೃದ್ಧಿ ನಿಗಮದಲ್ಲಿ ಕಳೆದೆರೆಡು ವರ್ಷದಿಂದ ಈ ದಮನಿತ ಮಹಿಳೆಯರ ಪುನರ್ವಸತಿಗಾಗಿ ‘ಚೇತನಾ’ ಎಂಬ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಪ್ರತಿ ವರ್ಷ ರಾಜ್ಯಾದ್ಯಂತದ 1000 ದಮನಿತರಿಗೆ 20,000 ಸಹಾಯಧನ ನೀಡುವ ಮೂಲಕ ಪುನರ್ವಸತಿ ಕಲ್ಪಿಸಲು ಯೋಜಿಸಲಾಗಿತ್ತು. ವರದಿಯು ಫಲಾನುಭವಿಗಳ ಸಂಖ್ಯೆಯನ್ನು ವಾರ್ಷಿಕ 10,000ಕ್ಕೆ ಏರಿಸಿ, ಸಹಾಯಧನವನ್ನು ಒಂದು ಲಕ್ಷಕ್ಕೆ ಏರಿಸಬೇಕೆಂದು ಶಿಫಾರಸ್ಸು ಮಾಡಿತ್ತು. ಆದರೆ ವಿಪರ್ಯಾಸವೆಂದರೆ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ಸಮಿತಿಯ ವರದಿ ಸಲ್ಲಿಕೆಯಾದ ನಂತರ ಈ ವರ್ಷ 1000 ಫಲಾನುಭವಿಗಳ ಗುರಿಯನ್ನು 325ಕ್ಕೆ ಇಳಿಸಲಾಗಿದೆ! ಅಂದರೆ 2/3 ಭಾಗದಷ್ಟು ಇಳಿಕೆ! ಎಚ್‍ಐವಿ ಸೋಂಕಿತರ ಪುನರ್ವಸತಿಗಾಗಿ 1000 ಫಲಾನುಭವಿಗಳ ಗುರಿಯಿದ್ದ ‘ಧನಶ್ರೀ’ ಯೋಜನೆಯ ಫಲಾನುಭವಿಗಳ ಸಂಖ್ಯೆಯನ್ನೂ ಈ ವರ್ಷ 792ಕ್ಕೆ ಇಳಿಸಿದ್ದು, ಇದು ಗಾಯದ ಮೇಲೆ ಬರೆ ಎಳೆದಂತೆ……ಕ್ರೌರ್ಯದ ಪರಮಾವಧಿ!
ಒಳ್ಳೆಯ ಬದುಕಿನ ನಿರೀಕ್ಷೆಯಲ್ಲಿ ಸಮಿತಿಯ ಮುಂದೆ ಇಡೀ ತಮ್ಮ ಖಾಸಗಿ ಬದುಕು ಬಿಚ್ಚಿಟ್ಟ ದಮನಿತರೀಗ ಸರ್ಕಾರದ ಜೊತೆಗೇ ಸಮಿತಿಯವರಿಗೆಲ್ಲಾ ಹಿಡಿ ಶಾಪ ಹಾಕುತ್ತಿದ್ದಾರೆ. ‘ನೀವು ಅಧ್ಯಯನ ಮಾಡಿ ವರದಿ ಕೊಟ್ಟ ಮೇಲೆ ನಮಗಾಗಿ ಮೊದಲಿದ್ದ ಯೋಜನೆಯಲ್ಲೇ ಇಷ್ಟೊಂದು ಕಡಿತ ಮಾಡಿದ್ದಾರಲ್ಲಾ? ನೀವೆಂಥಹ ವರದಿ ಕೊಟ್ಟಿರಿ?’ ಎಂದು ಜಾಡಿಸುತ್ತಿದ್ದಾರೆ. ದಂಧೆಗೆ ಬೀಳುವ ಹೆಣ್ಣುಮಕ್ಕಳು ಕೆಲದಿನಗಳ ಸಂಘರ್ಷದಿಂದ ಒದ್ದಾಡಿ ಹೊಯ್ದಾಡಿದರೂ ವಿಧಿಯಿಲ್ಲದೇ ಹೀಗಿರುವುದೇ ತಮ್ಮ ಬದುಕೆಂದು ಹೇಗೋ ಒಪ್ಪಿ ಬದುಕು ಸವೆಸುತ್ತಿರುವಾಗ, ಅವರ ಅಧ್ಯಯನಕ್ಕೆ ಸಮಿತಿ ಪ್ರತಿ ಜಿಲ್ಲೆಗೂ ಹೋಗಿ ಮಾತಾಡಿಸಿ ಅವರ ಕಷ್ಟ ಇಷ್ಟಗಳನ್ನು ಕೇಳಿದ್ದು ಅವರಲ್ಲಿ ಹೊಸ ಭರವಸೆಯನ್ನು ತುಂಬಿತ್ತು. ಬದಲಾವಣೆಯ ನಿರೀಕ್ಷೆ ಅವರಿಗಿತ್ತು. ವರದಿ ಸಲ್ಲಿಸಿದ ನಂತರ ಅವರ ಶ್ರೇಯೋಭಿವೃದ್ಧಿಗಾಗಿ ಹೊಸ ಯೋಜನೆಗಳನ್ನು ರೂಪಿಸುವುದಿರಲಿ, ಈ ಮೊದಲು ಇವರಿಗೆ ಅನ್ವಯವಾಗುತ್ತಿದ್ದ ‘ಚೇತನಾ’ ಯೋಜನೆಯ ಫಲಾನುಭವಿಗಳ ಸಂಖ್ಯೆಯನ್ನು ಹೆಚ್ಚಿಸುವ ಬದಲು, ಈ ಪರಿಯಲ್ಲಿ ಇಳಿಸುವ ಮೂಲಕ ಸರ್ಕಾರ ಸಮಿತಿಯ ಅಧ್ಯಕ್ಷರು, ಸದಸ್ಯರು ಮತ್ತು ಅವರು ಕೊಟ್ಟ ವರದಿಯನ್ನು, ಅವಮಾನಿಸಿದಂತಾಗಿದೆ. ಮಾತ್ರವಲ್ಲಾ ದಮನಿತ ಮಹಿಳೆಯರ ನಂಬಿಕೆಗೆ ದ್ರೋಹ ಬಗೆದಂತಾಗಿದೆ. ಸರ್ಕಾರಕ್ಕೆ ದಮನಿತರ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲವೆಂದಾದರೆ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ, ಎಷ್ಟೆಲ್ಲ ಜನರ ಶ್ರಮ, ಸಮಯ ವ್ಯಯಿಸಿ ವರದಿ ತಯಾರಿಕೆಗೆ ಏಕೆ ಮುಂದಾಗಬೇಕಿತ್ತು? ಈ ಪ್ರಶ್ನೆಗೆ ಸರ್ಕಾರ ಉತ್ತರಿಸಬೇಕಿದೆ.
ಎಲ್ಲ ರೀತಿಯಿಂದಲೂ ಇವರು ದಮನಿತರೇ. ಏಕೆಂದರೆ ಈ ದಂಧೆಯೊಳಗೆ ಬಿದ್ದಿರುವ 36.8% ಹೆಣ್ಣುಮಕ್ಕಳು ಪರಿಶಿಷ್ಟ ಜಾತಿಗೆ ಸೇರಿದವರು, 6.8% ಪರಿಶಿಷ್ಟ ಪಂಗಡಕ್ಕೆ ಸೇರಿದವರು, 18.2%ರಷ್ಟು ಹಿಂದುಳಿದ ವರ್ಗದವರು, ಇತರೆ ಹೆಣ್ಣುಮಕ್ಕಳು 38.2%ರಷ್ಟು. ಈ ಅಂಕಿಅಂಶಗಳೇ ಅವರ ಸಾಮಾಜಿಕ ಸ್ಥಿತಿ ಮತ್ತು ದಂಧೆಗೆ ಬೀಳಬೇಕಾದ ಪರಿಸ್ಥಿತಿಯ ಸೂಚಕವಾಗಿದೆ. ಹಾಗೆ ಧರ್ಮವಾರು ಲೆಕ್ಕಾಚಾರದಲ್ಲಿ ನೋಡುವುದಾದರೆ ಹಿಂದು 85.5, ಮುಸ್ಲಿಂ 9.7, ಕ್ರಿಶ್ಚಿಯನ್ 1.7, ಜೈನ 0.4, ಬೌದ್ಧ 0.4, ಸಿಖ್ 0.2 ಮತ್ತು ಇತರೆ 2.2 ಹೆಣ್ಣುಮಕ್ಕಳು ಈ ದಂಧೆಯೊಳಗೆ ಬಿದ್ದಿದ್ದಾರೆ.
ಹಾಗೇ ಇದು ಇತರ ವರದಿಗಳಂತಲ್ಲ  ಕಡುಬಡತನಕ್ಕೆ, ಅನಕ್ಷರಸ್ಥರಾಗಿದ್ದಕ್ಕೆ, ಕೆಲಸ ಸಿಕ್ಕಿಲ್ಲದ್ದಕ್ಕೆ, ಅತ್ಯಾಚಾರಕ್ಕೊಳಗಾಗಿ ಬೀದಿಗೆ ಬಿದ್ದಿದ್ದಕ್ಕೆ, ಚಿಕ್ಕವಯಸ್ಸಿಗೇ ಮದುವೆಯಾಗಿ, ಗಂಡ ಸತ್ತು ಕುಟುಂಬದ ಜವಾಬ್ದಾರಿ ಹೊರಬೇಕಾಗಿ ಬಂದಿದ್ದಕ್ಕೆ, ಯಾರೋ ಕದ್ದೊಯ್ದು ಈ ಜಾಲಕ್ಕೆ ನೂಕಿದ್ದಕ್ಕೆ, ಪ್ರೀತಿಯ ಹೆಸರಿನ ವಂಚನೆಗೆ ಸಿಕ್ಕಿದ್ದಕ್ಕೆ, ಒಳ್ಳೆಯ ಕೆಲಸದ ಆಸೆಗಾಗಿ ಯಾರದೋ ಬಲೆಗೆ ಬಿದ್ದಿದ್ದಕ್ಕೆ, ಮಕ್ಕಳ ಓದಿಗೆ, ಹಿರಿಯ ದಮನಿತ ಮಹಿಳೆಯರು ಮನವೊಲಿಸಿ ದಂಧೆಗೆ ನೂಕಿದ್ದಕ್ಕೆ, ಕಾಂಡೋಂ ಹಂಚುವ ಜಾಲದ ಕೈಗೆ ಅನಿರೀಕ್ಷಿತವಾಗಿ ಸಿಕ್ಕಿದ್ದಕ್ಕೆ……. ಹೀಗೆ ನೂರೆಂಟು ದಯನೀಯ ಕಾರಣಗಳಿಗಾಗಿ ಹೆಣ್ಣುಮಕ್ಕಳು ಈ ದಂಧೆಯೊಳಗೆ ಬಂದು ಸಿಕ್ಕಿಹಾಕಿಕೊಂಡು ಹೊರಬರಲಾಗದೇ ಉಸಿರುಗಟ್ಟಿ ವಿಲವಿಲ ಒದ್ದಾಡುತ್ತಿರುವುದರ ವಿಸ್ತೃತ ಅಧ್ಯಯನ ಮತ್ತು ವರದಿ ನಮ್ಮ ವ್ಯವಸ್ಥೆಯ ಮುಚ್ಚಿಟ್ಟ ಕ್ರೌರ್ಯದ ಮುಖಗಳನ್ನು ಅನಾವರಣಗೊಳಿಸುತ್ತದೆ. ಈ ಮಹಿಳೆಯರು ದಮನಿತರಲ್ಲಿ ದಮನಿತರು ಎಂಬುದಕ್ಕೆ ಯಾವ ಸಾಕ್ಷಿಯೂ ಬೇಕಿಲ್ಲ. ಹೀಗಿದ್ದೂ ನಮ್ಮ ಸರ್ಕಾರ ಇವರನ್ನು ಹೀಗೆ ನಡೆಸಿಕೊಳ್ಳಬಾರದಿತ್ತು. ಜರ್ಜರಿತರಾದ ಈ ಹೆಣ್ಣುಮಕ್ಕಳ ಚೀತ್ಕಾರವನ್ನು ಆಲಿಸಬೇಕಿತ್ತು. ಅವರನ್ನು ಈ ನರಕದಿಂದ ಹೊರತೆಗೆಯಲು ಪ್ರಯತ್ನಿಸಬೇಕಿತ್ತು.

                                  ಭಾಗ-2
                                                                   ಕಾಂಡೋಂ ವಿತರಣೆ ಎಂಬುದು….. ಒಂದು ಜಾಲ?

ಲೈಂಗಿಕ ದಮನಿತರ ಸ್ಥಿತಿಗತಿ ಅಧ್ಯಯನ ಸಮಿತಿ ವರದಿ ಸಲ್ಲಿಸಿ ಹತ್ತು ತಿಂಗಳಾದರೂ, ಈ ಹೆಣ್ಣುಮಕ್ಕಳದು ಅತ್ಯಂತ ಸಂಕಟದಾಯಕ ಬದುಕಾಗಿದ್ದರೂ ಒಂದು ಸಂವೇದನಾಶೀಲ ಸರ್ಕಾರ ಕನಿಷ್ಠ ವರದಿಯ ಪ್ರಮುಖ ಶಿಫಾರಸ್ಸುಗಳನ್ನಾದರೂ ಕೈಗೆತ್ತಿಕೊಳ್ಳಲು ಏಕೆ ಸಣ್ಣ ಪ್ರಯತ್ನವನ್ನೂ ಮಾಡುತ್ತಿಲ್ಲ? ಅದಕ್ಕಿರುವ ಪ್ರಮುಖ ಅಡೆತಡೆಗಳೇನು? ಎಂದು ಯೋಚಿಸಿದರೆ ಮೊದಲು ಹೊಳೆಯುವ ಹೆಸರು, ಕರ್ನಾಟಕ ಏಡ್ಸ್ ನಿಯಂತ್ರಣ ಮಂಡಳಿ!
ಭಾರತದಲ್ಲಿ ಏಡ್ಸ್ ಅಥವಾ ಎಚ್‍ಐವಿ ಸೋಂಕು ಮೊದಲ ಬಾರಿ ಕಾಣಿಸಿಕೊಂಡದ್ದು 1982ರಲ್ಲಿ. ಆ ನಂತರ ಅದೊಂದು ಪಿಡುಗಾಗಿ ವ್ಯಾಪಕವಾಗಿ ದೇಶಾದ್ಯಂತ ಹರಡಿಕೊಳ್ಳಲಾರಂಭಿಸಿದಾಗ ಅದನ್ನು ನಿಯಂತ್ರಿಸಲು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೆರವಿನೊಂದಿಗೆ, ಬೃಹತ್ ವಿದೇಶಿ ಆರ್ಥಿಕ ಬೆಂಬಲದೊಂದಿಗೆ 1992 ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಮಂಡಳಿ, [NACO] ಸರ್ಕಾರದ ಆರೋಗ್ಯ ಇಲಾಖೆಯ ಒಂದು ಘಟಕವಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ. ಪ್ರತಿ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯಡಿಯೂ ಇದರ ಘಟಕ, ಕಾರ್ಯ ನಿರ್ವಹಿಸುತ್ತಿದೆ. ಹಾಗೆ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿ[KASAPS] ಪ್ರಾರಂಭವಾಗಿದ್ದು 1997ರಲ್ಲಿ. ಪ್ರತಿ ಜಿಲ್ಲಾ ಆರೋಗ್ಯ ಇಲಾಖೆಯಡಿ ಇದರ ಘಟಕ ಕಾರ್ಯನಿರ್ವಹಿಸುತ್ತಿದೆ.
ಎಚ್‍ಐವಿ ಸೋಂಕು ಶೇ90 ರಷ್ಟು ಅಸುರಕ್ಷಿತ ಲೈಂಗಿಕ ಸಂಪರ್ಕದ ಮೂಲಕವೇ ಹರಡುತ್ತಿದೆ. ಹಾಗೇ ಸೋಂಕಿರುವವರಿಂದ ರಕ್ತದಾನ ಪಡೆದಾಗ ಕೂಡ ಸೋಂಕು ಹರಡುತ್ತದೆ. ಕಳೆದ ಐದು ವರ್ಷದಲ್ಲಿ ಭಾರತದಲ್ಲಿ 9000ಕ್ಕೂ ಹೆಚ್ಚು ಜನರು ಈ ಮೂಲಕ ಸೋಂಕಿಗೆ ತುತ್ತಾಗಿದ್ದಾರೆ. ಸೋಂಕಿತ ತಾಯಿಯಿಂದ ಮಗುವಿಗೆ ಶೇ 1/3ರಷ್ಟು ಸೋಂಕು ಹರಡುತ್ತಿದೆ. ಸಂಸ್ಕರಿಸದೇ ಇರುವ ಸಿರಿಂಜ್ ಬಳಸುವ ಮೂಲಕವೂ ಮಾದಕದ್ರವ್ಯ ವ್ಯಸನಿಗಳಲ್ಲಿ ಸೋಂಕು ಹರಡುತ್ತಿದೆ. ಭಾರತದಲ್ಲಿ ಸದ್ಯ 22 ಲಕ್ಷಕ್ಕೂ ಹೆಚ್ಚು ಎಚ್‍ಐವಿ ಸೋಂಕಿತರಿದ್ದು, ಭಾರತ ಮೂರನೇ ಅತಿ ಹೆಚ್ಚಿನ ಸೋಂಕಿತರನ್ನು ಹೊಂದಿರುವ ದೇಶವಾಗಿದೆ. ಕರ್ನಾಟಕವೊಂದರಲ್ಲೇ ಸಧ್ಯ ಮೂರು ಕಾಲು ಲಕ್ಷಕ್ಕೂ ಹೆಚ್ಚಿನ ಸೋಂಕಿತರಿದ್ದಾರೆ. ರಾಷ್ಟ್ರದ ಎಲ್ಲ ರಾಜ್ಯಗಳ ಲೆಕ್ಕದಲ್ಲಿ ಕರ್ನಾಟಕ 8ನೆಯ ಸ್ಥಾನದಲ್ಲಿದೆ. ಕಳೆದ ಹತ್ತು ವರ್ಷಗಳಲ್ಲಿ ನಮ್ಮ ರಾಜ್ಯದಲ್ಲಿ 80,173 ಮಂದಿ ಈ ಸೋಂಕಿನಿಂದ ಮೃತಪಟ್ಟಿರುವುದು ಅಪಾಯದ ಕರೆಗಂಟೆಯಾಗಿದೆ. ಕಳೆದೆರಡು ದಶಕಗಳಿಂದ ಏಡ್ಸ್ ನಿಯಂತ್ರಣ ಮಂಡಳಿಯಿಂದ ನಿರಂತರವಾಗಿ ಸೋಂಕು ಹರಡದಂತೆ ತಡೆಗಟ್ಟಲು ಅನೇಕ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ನಿಯಂತ್ರಣ ಸಾಧ್ಯವಾಗಿಲ್ಲವೆಂಬುದು ಆತಂಕಕಾರಿಯಾದ ಸಂಗತಿಯಾಗಿದೆ.
ಕರ್ನಾಟಕ ಏಡ್ಸ್ ನಿಯಂತ್ರಣ ಮಂಡಳಿಯು ವ್ಯಾಪಕವಾಗಿ ಹಬ್ಬುತ್ತಿದ್ದ ಈ ಸೋಂಕಿನ ನಿಯಂತ್ರಣಕ್ಕಾಗಿ ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಸಾಧ್ಯತೆಯಿರುವ, ಮತ್ತು ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುವ, ಅಪಾಯಕಾರಿ ಗುಂಪುಗಳೆಂದೇ ಪರಿಗಣಿತವಾದ ಅತ್ಯಂತ ತಳಹಂತದಲ್ಲಿರುವ ಲೈಂಗಿಕ ದಮನಿತರು, ಲಿಂಗತ್ವ ಅಲ್ಪಸಂಖ್ಯಾತರು, ಮಾದಕದ್ರವ್ಯ ವ್ಯಸನಿಗಳು, ಟ್ರಕ್ ಡ್ರೈವರ್‍ಗಳು ಮುಂತಾದವರನ್ನು ನೋಂದಾಯಿಸಿ, ಸೋಂಕು ತಡೆಯಲೆಂದು ದಿನವೂ ಅವರಿಗೆ ಕಾಂಡೋಂ ಹಂಚಿಸುವ, ಮತ್ತಿತರ ಅವಶ್ಯಕ ವಸ್ತುಗಳನ್ನು ನೀಡುವ, ರಕ್ತ ಮತ್ತಿತರ ಪರೀಕ್ಷೆ ನಡೆಸುವ ವ್ಯಾಪಕವಾದ ಜಾಲವನ್ನು ಕಳೆದ 15-20 ವರ್ಷಗಳಿಂದ ರೂಪಿಸುತ್ತಾ ಬಂದಿದೆ. ರಾಜ್ಯಾದ್ಯಂತ ಇದಕ್ಕಾಗಿ ಆರೋಗ್ಯ ಇಲಾಖೆಯಡಿ ಪ್ರತ್ಯೇಕ ಸಿಬ್ಬಂದಿ ಹೊಂದಿರುವ ಘಟಕ, 23 ಎನ್‍ಜಿಓಗಳು ಮತ್ತು 42 ಸಿಬಿಓ[ಸಮುದಾಯ ಆಧಾರಿತ ಸಂಸ್ಥೆ]ಗಳ ಸಹಕಾರದಿಂದ ಈ ಕೆಲಸಕ್ಕಾಗಿ ವ್ಯವಸ್ಥಿತ ಜಾಲವನ್ನು ಹೆಣೆಯಲಾಗಿದೆ. ದಿನವೊಂದಕ್ಕೇ ಸರಾಸರಿ ಒಂದು ಲಕ್ಷದಷ್ಟು ಕಾಂಡೋಂಗಳು ಲೈಂಗಿಕ ದಮನಿತರಾಗಿ ದಾಖಲಾದ ಪೀರ್‍ವರ್ಕರ್‍ಗಳ ಮೂಲಕ ರಾಜ್ಯಾದ್ಯಂತದ ಗಿರಾಕಿಗಳಿಗೆ ಹಂಚಿಕೆಯಾಗುತ್ತಿದೆ.
ಸರ್ಕಾರದ ಅಂಗಸಂಸ್ಥೆಯೆಂದೇ ಪರಿಗಣಿತವಾದ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿಯಡಿ ನೊಂದಣಿಯಾದ ಇಂತಹ 96,878 ದಮನಿತರಿದ್ದು, ಲೈಂಗಿಕ ದಮನಿತರ ಅಧ್ಯಯನ ಸಮಿತಿಯು, ತನ್ನ ಅಧ್ಯಯನಕ್ಕಾಗಿ ಅತ್ಯಂತ ತಳಹಂತದವರಾದ ಇವರನ್ನೇ ಪರಿಗಣಿಸಿದೆ. ಇದರಲ್ಲಿ 18 ವರ್ಷಕ್ಕಿಂತಾ ಕಡಿಮೆಯಿರುವ ಅಪ್ರಾಪ್ತರಾದ 459 ಮಂದಿಯನ್ನು ದಾಖಲಿಸಲಾಗಿದೆ! ಇನ್ನು ದಾಖಲಾದ 18 ರಿಂದ 24 ವಯೋಮಾನದವರು 12,185 ಜನರು. ಆದರೆ ಇವರಲ್ಲೂ ಹೆಚ್ಚಿನವರು ಅಪ್ರಾಪ್ತರು ಮತ್ತು ಬಾಲೆಯರಾಗಿದ್ದಾಗಲೇ ದಂಧೆಗೆ ಬಿದ್ದವರು. ಆದರೂ ಇವರ ವಯಸ್ಸನ್ನು ಅಧ್ಯಯನಕ್ಕೊಳಪಡಿಸುವ ಯಾವ ಕೆಲಸವನ್ನೂ ಇದುವರೆಗೆ ಮಾಡಲಾಗಿಲ್ಲವೆಂಬುದೇ ವಿಪರ್ಯಾಸ. ಅವರು ಹೇಳಿದ ವಯಸ್ಸನ್ನು ದಾಖಲಿಸಲಾಗಿದೆಯಷ್ಟೇ. 25ರಿಂದ 44ರವರೆಗಿನ ವಯಸ್ಸಿನವರು 71,364 ಮಂದಿ. ಮಿಕ್ಕ 6100 ಜನರು 45 ವರ್ಷ ದಾಟಿದವರು. ಕಳೆದ ಹತ್ತು ವರ್ಷಗಳ ಜಿಲ್ಲಾವಾರು ದಾಖಲೀಕರಣವನ್ನು ಗಮನಿಸಿದರೆ ವರ್ಷದಿಂದ ವರ್ಷಕ್ಕೆ ನೋಂದಣಿಯಾಗುತ್ತಿರುವ ಈ ದಮನಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು ಗೋಚರಿಸುತ್ತದೆ. ಹಾಗೇ ಕಾಂಡೋಂ ವಿತರಣೆಯಲ್ಲೂ ಖಂಡಿತಾ ಹೆಚ್ಚಳವಾಗಲೇಬೇಕಲ್ಲ! ಖಂಡಿತಾ ಆಗುತ್ತಿದೆ.
ಇಂತಹದೊಂದು ಜಾಲವನ್ನು ತಳಮಟ್ಟದಲ್ಲಿ ರೂಪಿಸಿರುವ ಏಡ್ಸ್ ನಿಯಂತ್ರಣ ಮಂಡಳಿಗೆ ಸೋಂಕಿನ ತಡೆಗಟ್ಟುವಿಕೆಯೆಡೆಗೆ ಮಾತ್ರ ಗಮನವೇ ಹೊರತು ಈ ಸಂತೃಸ್ತರ ಸಂಕಟಗಳ ಬಗೆಗಲ್ಲ. ಹೀಗಾಗೇ ಹೆಚ್ಚಿನ ಸಂಖ್ಯೆಯಲ್ಲಿ ಅಪ್ರಾಪ್ತ ಬಾಲೆಯರು ಈ ಘಟಕದಡಿ ನೋಂದಣಿಯಾಗಿದ್ದಾರೆ. ಇದು ಕಾನೂನುಬಾಹಿರ. ಆದರೂ ಅವರನ್ನು ಈ ದಂಧೆಯಿಂದ ಹೊರ ತೆಗೆಯುವ ಪ್ರಯತ್ನಗಳಾಗಿಲ್ಲ. ಶೇ72 ದಮನಿತರು ‘ಅನಿವಾರ್ಯವಾಗಿ ಈ ದಂಧೆಗೆ ಬಿದ್ದಿದ್ದೇವೆ. ಬದುಕು ಕಟ್ಟಿಕೊಳ್ಳಲು ನಮಗೆ ಸಮರ್ಪಕ ಕೆಲಸ ಕೊಡಿ ಇದನ್ನು ಬಿಟ್ಟು ಹೊರಬರುತ್ತೇವೆ’ ಎಂದು ದಯನೀಯವಾಗಿ ಬೇಡಿಕೊಳ್ಳುತ್ತಿದ್ದರೂ ಏಡ್ಸ್ ನಿಯಂತ್ರಣ ಮಂಡಳಿ ಅಧಿಕಾರಿಗಳಿಂದ ‘ಅದು ನಮಗೆ ಸೇರಿದ್ದಲ್ಲ. ಸೋಂಕು ತಗುಲದಂತೆ ನೋಡಿಕೊಳ್ಳುವುದಷ್ಟೇ ನಮ್ಮ ಜವಾಬ್ದಾರಿ’ ಎಂಬ ಬೇಜವಾಬ್ದಾರಿಯ ಉತ್ತರ ಮಾತ್ರ ಲಭಿಸುತ್ತದೆ.
ಹೀಗಾಗೇ ಇಂದಿಗೂ 8000ದಷ್ಟು ಎಚ್‍ಐವಿ ಸೋಂಕಿತ ದಮನಿತರು ದಂಧೆಯೊಳಗೆ ಕ್ರಿಯಾಶೀಲರಾಗಿದ್ದರೂ, ಇವರು ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವ ಅತ್ಯಂತ ಅಪಾಯಕಾರಿ ಗುಂಪಾಗಿದ್ದರೂ, ಇವರನ್ನಾದರೂ ದಂಧೆಯಿಂದ ಹೊರತೆಗೆಯುವ ಪ್ರಯತ್ನವನ್ನು ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿ ಇದುವರೆಗೆ ಮಾಡಿಲ್ಲ. ರಾಜ್ಯಾದ್ಯಂತ ಕಾಂಡೋಂ ವಿತರಣೆ ಮಾಡುವ ಜವಾಬ್ದಾರಿಯನ್ನು ಏಡ್ಸ್ ನಿಯಂತ್ರಣ ಮಂಡಳಿಯು ಎನ್‍ಜಿಓ, ಸಿಬಿಓಗಳ ಮೂಲಕ ಮಾಡಿಸುತ್ತಿದ್ದು, ರಾಜ್ಯಾದ್ಯಂತ ಅಂದಾಜು 1000ದಷ್ಟಿರುವ ಪೀರ್‍ವರ್ಕರ್ಸ್‍ಗಳು [ಲೈಂಗಿಕ ದಮನಿತರಲ್ಲೇ ನಾಯಕತ್ವದ ಗುಣ ಹೊಂದಿರುವವರು] ಈ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಲೈಂಗಿಕ ದಮನಿತರು ಹೆಚ್ಚಿನ ಸಂಖ್ಯೆಯಲ್ಲಿ ಈ ದಂಧೆ ಬಿಟ್ಟು ಪುನರ್ವಸತಿಯಾಗುತ್ತಾ ಹೋದರೆ, ಕಾಂಡೋಂ ವಿತರಣೆಯ ಗತಿಯೇನು? ಎಂಬುದು ಅವರ ಆತಂಕವೇ? ಹೀಗಾಗಿ ಅವರು ಪುನರ್ವಸತಿಗೊಳ್ಳುವುದು ಏಡ್ಸ್ ನಿಯಂತ್ರಣ ಮಂಡಳಿಗೆ ಹೋಗಲಿ, ಆರೋಗ್ಯ ಇಲಾಖೆಗೂ ಬೇಕಿಲ್ಲವೇ? ಆದ್ದರಿಂದಲೇ ‘ಲೈಂಗಿಕ ಕಾರ್ಯಕರ್ತೆಯರ ಅಧ್ಯಯನ ಸಮಿತಿ’ಯಲ್ಲಿ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿಯ ಪರವಾಗಿ ಒಬ್ಬ ಪ್ರತಿನಿಧಿ, ಸದಸ್ಯರಾಗಿ ಭಾಗವಹಿಸಬೇಕಿದ್ದು, ಅದರಲ್ಲಿ ಯಾರೂ ಭಾಗವಹಿಸಲೇ ಇಲ್ಲ!
ಇದರಾಚೆಗೆ ಕಾಂಡೋಂ ವಿತರಣೆಯ ಸಾಂಸ್ಥಿಕ ವ್ಯವಸ್ಥೆಯ ಮೂಲಕವೇ ಮಹಿಳೆ ಮತ್ತು ಅಪ್ರಾಪ್ತ ಬಾಲೆಯರು ಈ ಮಾರಾಟ ಜಾಲದೊಳಗೆ ಬೀಳುತ್ತಿರುವ ನಿದರ್ಶನಗಳೂ ಉಂಟು. ‘ಕೆಲಸ ಕೊಡುತ್ತೇವೆ ಬನ್ನಿ’ ಎಂದು ಕಾಂಡೋಂ ಹಂಚಲು ಎನ್‍ಜಿಓ, ಸಿಬಿಓಗಳು, ಪೀರ್‍ವರ್ಕರ್‍ಗಳು, ಮುಗ್ಧ ಹೆಣ್ಣುಮಕ್ಕಳನ್ನು ನಿರಂತರವಾಗಿ ಈ ದಂಧೆಯೊಳಗೆ ದಾಖಲು ಮಾಡುವುದೂ 19%ರಷ್ಟು ನಡೆಯುತ್ತಿರುವ ಅತ್ಯಂತ ಆತಂಕಕಾರಿಯಾದ ಅಂಶವೂ ಅಧ್ಯಯನದಿಂದ ಸಾಬೀತಾಗಿದೆ. ಮುಂದಕ್ಕೆ ದಂಧೆ ನಡೆಸಲು ಸಾಧ್ಯವಿಲ್ಲದ ವಯಸ್ಸಾದ 10%ರಷ್ಟು ಲೈಂಗಿಕ ದಮನಿತರೂ, ಹೊಸ ಹೆಣ್ಣುಮಕ್ಕಳನ್ನು ದಂಧೆಯೊಳಗೆ ಕರೆತಂದು ತಾವೇ ಮಧ್ಯಸ್ಥಿಕೆವಹಿಸಿ ಇವರನ್ನಿಟ್ಟುಕೊಂಡು ವ್ಯವಹಾರ ನಡೆಸುತ್ತಿರುವ ಸತ್ಯವೂ ಅಧ್ಯಯನದ ವೇಳೆ ಹೊರಬಿದ್ದಿದ್ದು ಬೆಚ್ಚಿಬೀಳುವಂತಾಗುತ್ತದೆ.
ಇನ್ನೊಂದೆಡೆ, ‘ಈ ಕಾಂಡೋಂ ಲೆಕ್ಕಾಚಾರ, ಅದನ್ನ ಬೇಕಾದವರನ್ನ ಗುರುತಿಸಿ ಹಂಚೋ ಕೆಲಸ, ಪ್ರತಿ ತಿಂಗಳು ಹೆಚ್ಚುತ್ತಾ ಹೋಗುವ ಟಾರ್ಗೆಟ್ ಮುಟ್ಟಲು ಪಡುವ ಪಡಿಪಾಟಲು….. ಅಸಹ್ಯ ಹುಟ್ಟಿಸಿದೆಯಮ್ಮ. ಯಾವಾಗ ಬಿಡುಗಡೆಯಾಗುತ್ತೋ ಅಂತ ಬಹಳಷ್ಟು ಜನ ಕಾಯ್ತಾ ಇದ್ದೀವಿ. ಆದರೆ ರಾಜ್ಯ ಸಂಘದವರು, ಈ ಕೆಲಸದಲ್ಲಿದ್ದರೆ ನಿಮಗೆ ಮುಂದೆ ತುಂಬಾ ಅನುಕೂಲವಾಗುತ್ತೆ, ಮನೆ ಸಿಗುತ್ತೆ, ಸೈಟ್ ಸಿಗುತ್ತೆ, ಸಹಾಯಧನ ಸಿಗುತ್ತೆ, ಇನ್ನೂ ಏನೇನೋ ಸರಕಾರದಿಂದ ಅನುಕೂಲ ಸಿಗುತ್ತೆ…… ಈ ದಂಧೆ ಬಿಟ್ಟು ಹೋದ್ರೆ ಏನೂ ಸಿಗಲ್ಲ ಅಂತಾರೆ. ಅದಕ್ಕೇ ಬಾಯ್ಮುಚ್ಚಿಕೊಂಡು ಇಲ್ಲೇ ಬಿದ್ದೀದ್ದೀವಿ ನಮ್ಮಂತೋರು. ಈ ದಂಧೆ ಬಿಟ್ಟರೆ ನಮಗೆ ನಿಜವಾಗಲೂ ಪುನರ್ವಸತಿಗೆ ಸರ್ಕಾರ ಏನೂ ಮಾಡಲ್ಲವಾ?’ ಎಂದು ಮುಗ್ಧವಾಗಿ ಕೇಳುವ ಅವರ ಪ್ರಶ್ನೆಗಳಿಗೆ ನಿರ್ದಯಿ ಸರ್ಕಾರ ಮತ್ತು ಸಮಾಜ ಉತ್ತರಿಸಬೇಕಾಗಿದೆ.
ಒಳಗಿರುವ ನಿಜ ಬೇರೆಯಿರಬಹುದೇ? ಕೋಟ್ಯಾಂತರ ರೂಪಾಯಿಗಳ ವಹಿವಾಟು ನಡೆಸುತ್ತಿರುವ ಏಡ್ಸ್ ನಿಯಂತ್ರಣ ಮಂಡಳಿ, ಸಾವಿರಾರು ಜನ ಉದ್ಯೋಗಿಗಳನ್ನೊಳಗೊಂಡ ತನ್ನ ಹೊಟ್ಟೆ ಹೊರೆದುಕೊಳ್ಳಲು ಇದನ್ನೆಲ್ಲಾ ಉತ್ತೇಜಿಸುತ್ತಿರಬಹುದೇ? ಎಂಬ ಗುಮಾನಿಯೂ ಏಳುತ್ತದೆ. ಹಾಗೇ ಪ್ರಶ್ನೆಗಳೂ ಏಳುತ್ತವೆ. ಒಂದೆಡೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹಿಳಾ ಅಭಿವೃದ್ಧಿ ನಿಗಮದಿಂದ ಈ ಲೈಂಗಿಕ ದಮನಿತರಿಗಾಗಿ ಪುನರ್ವಸತಿ ಕಾರ್ಯಕ್ರಮಗಳನ್ನು ರೂಪಿಸುವ ಉದ್ದೇಶದಿಂದ ಸಮಿತಿ ನೇಮಿಸಿ ಸರ್ಕಾರ ವರದಿ ಪಡೆದಿದೆ. ಇನ್ನೊಂದೆಡೆ ಎಚ್‍ಐವಿ ಸೋಂಕು ನಿಯಂತ್ರಣದ ಹೆಸರಿನಲ್ಲಿ ಆರೊಗ್ಯ ಇಲಾಖೆಯ ಏಡ್ಸ್ ನಿಯಂತ್ರಣ ಮಂಡಳಿಯಡಿ ‘ದಮನಿತರ’ನ್ನು ಸರ್ಕಾರ ನೋಂದಾವಣೆ ಮಾಡಿಕೊಂಡು ಅವರಿಂದ ಕಾಂಡೋಂ ಹಂಚಿಸುತ್ತಿದೆ. ನಿರುದ್ಯೋಗ ಬವಣೆಯಿಂದ ಅಸಹಾಯಕರಾಗಿ ತತ್ತರಿಸುತ್ತಿರುವ ಅಪ್ರಾಪ್ತ ಬಾಲಕಿಯರನ್ನೂ ಬಿಡದೇ ಇದೊಂದು ಉದ್ಯೋಗ ಎಂದು ಭ್ರಮೆ ಹುಟ್ಟಿಸಿ, ಉತ್ತೇಜಿಸಿ -ಕೊನೆಗೆ ಅವರೂ ವೇಶ್ಯಾವಾಟಿಕೆಗೆ ಜಾರುತ್ತಿದ್ದಾರೆ. ನಾವು ಕೇಳಬೇಕಾಗಿದೆ-ಇವೆರಡೂ ಸರ್ಕಾರಿ ಯೋಜನೆಗಳು ಒಂದಕ್ಕೊಂದು ವಿರುದ್ಧ ದಿಕ್ಕಿನಲ್ಲಿ ಕೆಲಸ ಮಾಡುತ್ತಿಲ್ಲವೇ? ಒಂದು ಆಚೆಗೆ ಎಳೆಯಲು ಪ್ರಯತ್ನಿಸಿದರೆ, ಇನ್ನೊಂದು ಒಳಕ್ಕೆ ಎಳೆಯುತ್ತಿದೆ. ಇವುಗಳ ಮಧ್ಯೆ ಸಿಕ್ಕಿಕೊಂಡು ಲೈಂಗಿಕ ದಮನಿತರು ಅತಂತ್ರರಾಗಿ ಜರ್ಜರಿತರಾಗಿದ್ದಾರೆ.
ಸರ್ಕಾರ ನಿಜವಾಗಿ ಏನನ್ನು ಬಯಸುತ್ತದೆ? ಈ ದಂಧೆಯಿಂದ ಹೊರಬರಲು ಕಾತರದಿಂದ ನಿರೀಕ್ಷಿಸುತ್ತಿರುವ ಹೆಣ್ಣುಮಕ್ಕಳನ್ನು ಇದರಿಂದ ಹೊರ ತೆಗೆಯುವ ಪ್ರಾಮಾಣಿಕ ಪ್ರಯತ್ನವೋ? ಅಥವಾ ಸೋಂಕು ನಿಯಂತ್ರಣದ ಹೆಸರಿನಲ್ಲಿ ಕಾಂಡೋಂ ಹಂಚುತ್ತಾ ‘ಡಿಮ್ಯಾಂಡ್’ ಮತ್ತು ‘ಸಪ್ಲೈ’ಯನ್ನು ಹೀಗೇ ವ್ಯವಸ್ಥಿತವಾಗಿ ನಿರ್ವಹಿಸುತ್ತಿರುವುದೋ? ತನ್ಮೂಲಕ ಇಂತಹ ಹೆಣ್ಣುಮಕ್ಕಳಿಗೆ ಮೈ ಮಾರಿಕೊಂಡು ಬದುಕುವುದನ್ನೇ ವೃತ್ತಿಯಾಗಿಸಿ ‘ಸುರಕ್ಷಿತ’ತೆಯ ಹೆಸರಿನಲ್ಲಿ “ಯಥಾಸ್ಥಿತಿ”ಯನ್ನು ಕಾಯ್ದುಕೊಳ್ಳುತ್ತಾ ಲಾಭ ದೋಚಲು ಮುಂದಾಗಿರುವ ಪರಮಸ್ವಾರ್ಥದ ಬಂಡವಾಳಶಾಹಿ ಜಗತ್ತಿಗೆ ಬೆಂಬಲವಾಗಿ ನಿಲ್ಲುವುದೋ? ಇನ್ನಾದರೂ ಸರ್ಕಾರವೇ ಬಾಯ್ಬಿಟ್ಟು ಹೇಳಬೇಕು. ನಿಜಕ್ಕೂ ದಮನಿತರ ಬಗ್ಗೆಯೇ ಅದರ ಪ್ರಾಮಾಣಿಕ ಕಾಳಜಿಯಿದ್ದರೆ, ಅವರನ್ನು ‘ಯಥಾಸ್ಥಿತಿ’ಯ ನರಕಕ್ಕೆ ನೂಕಿರುವ ಈ ಕಾಂಡೋಂ ಜಾಲದಿಂದ ಮೊದಲು ಮುಕ್ತಗೊಳಿಸಿ ಅವರು ಹೊಸ ಬದುಕು ಕಟ್ಟಿಕೊಳ್ಳಲು ಎಲ್ಲ ರೀತಿಯ ವ್ಯವಸ್ಥೆಯನ್ನೂ ಅತ್ಯಂತ ತುರ್ತಾಗಿ ಮಾಡಿ, ತಾನೊಂದು ಸಂವೇದನಾಶೀಲ ಸರ್ಕಾರ ಎಂಬುದನ್ನು ಸಾಬೀತುಪಡಿಸಬೇಕು.