ಎಡವಟ್ಟುಗಳು ನಮ್ಮವು ಬಲಿಯಾಗುತ್ತಿರುವುದು ಪ್ರಾಣಿಗಳು -ಕೆ.ಸಿ.ರಘು

 

 

ಮಧ್ಯಪ್ರದೇಶದ ಮಾನ್ಡಸರ್ ಕಾಡಿನ ಸುತ್ತಲಿನ ರೈತರು ಚಿರತೆಗೆ ಹೆದರಿ ಅರಣ್ಯ ಇಲಾಖೆಗೆ ದೂರು ನೀಡಿ, ಅಲ್ಲಿದ್ದ ಎರಡೂ ಚಿರತೆಯನ್ನು ಹಿಡಿಸಿ ಮೃಗಾಲಯಕ್ಕೆ ಕಳುಸಿದ್ದರು. ಇನ್ನು ಕಾಟ ತಪ್ಪಿತು ಎನ್ನುವಷ್ಟರಲ್ಲಿ, ನೀಲ್‌ಗಾಯ್ ಹಿಂಡು ಬೆಳೆಗೆ ನುಗ್ಗಿ ನಾಶ ಮಾಡಲಾರಂಭಿಸಿದವು. ನೀಲ್‌ಗಾಯ್‌ಗಳ ಸತತ ದಾಳಿಗೆ ರೈತರು ಬೆಳೆಯುವ ಗಾಂಜಾ ಕಾರಣವಾಗಿತ್ತು. ಗಾಂಜಾ ಮತ್ತಿನಿಂದಾಗಿ ಅವು ಮತ್ತೆ ಮತ್ತೆ ದಾಳಿ ಇಡಲಾರಂಬಿಸಿದವು. ರೈತರು, ‘ನಮ್ಮ ಚಿರತೆ ನಮಗೆ ಮತ್ತೆ ಬೇಕು’ ಎಂದು ಸರ್ಕಾರಕ್ಕೆ ಮೊರೆಹೋಗಿದ್ದರು! ಪ್ರಾಣಿಗಳನ್ನು ನೋಡಲು ನಿರಂತರವಾಗಿ ಆಫ್ರಿಕಾಗೆ ಹೋಗುವ ಮಂದಿ, ಅಲ್ಲಿ ತಮ್ಮ ಜಂಕ್‌  ಫುಡ್ ಅನ್ನು ಪ್ರಾಣಿಗಳಿಗೆ ಕೊಡುತ್ತ ಬಂದದ್ದರಿಂದ ಅವುಗಳು ಈ ಆಹಾರಕ್ಕೆ ಒಗ್ಗಿಹೋಗಿ, ಪ್ರಯಾಣಿಕರು ಬರುವುದನ್ನೇ ಕಾಯುತ್ತ, ಯಾರಾದರೂ ಏನಾದರೂ ಹಾಕಿದ ನಂತರವೇ ತಿನ್ನಲಾರಂಭಿಸಿದವು. ಕ್ರಮೇಣ ಅವು ತಮ್ಮ ಆಹಾರ ಹುಡುಕಾಟ, ಶಿಕಾರಿಯನ್ನೆಲ್ಲ ಮರೆತು, ನಮ್ಮ ಆಹಾರ ತಿಂದು ಬೊಜ್ಜು ಬೆಳಸಿಕೊಂಡದ್ದರಿಂದ, ನಮ್ಮ ಆಹಾರ ಕಳಪೆ ಎಂಬುದು ಹಾಗೂ ನಮ್ಮ ಆಹಾರದಿಂದ ನಾವು, ನಮ್ಮನ್ನು ಮಾತ್ರವಲ್ಲದೆ ಇತರ ಪ್ರಾಣಿಗಳ ಆಹಾರ ಪದ್ಧತಿಯನ್ನೂ ನಾವು ಕೆಡಿಸಬಹುದು ಎಂದು ಅಧ್ಯಯನ ಮಾಡಿದ ತಂಡ ತಿಳಿಸುತ್ತದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ನಾಯಿಗಳ ಬೊಜ್ಜು ಕರಗಿಸುವ ಆಹಾರ ದೊರಕುತ್ತಿದೆ!

ಹೇಗೋ ಎನೋ ಮೊನ್ನೆ ಸಂಸತ್  ಭವನದ ಬಳಿ ನೀಲ್‌ಗಾಯ್ ಕಂಡುಬಂದಿತ್ತು. ಹಿಡಿಯಲು ಹರಸಾಹಸ ನಡೆಸಬೇಕಾಯಿತು. ನಾಲ್ಕು ಕಾಲನ್ನೂ ಮೇಲಕ್ಕೆತ್ತಿ ಹಾರುವು ಅದರ ಭಂಗಿ  ಭ ದ್ರತಾ ಪಡೆಗೇ ಸವಾಲಾಗಿತ್ತು. ಹಾಗೆಯೇ, ಬಿಹಾರದ ರೈತರ ಹೊಲಗಳಲ್ಲಿ ನೀಲ್‌ಗಾಯ್ ಹಾವಳಿ ತಡೆಯಲು ರಾಜ್ಯ ಸರ್ಕಾರದ ಬೇಡಿಕೆಗೆ ಸ್ಪಂದಿಸಿ ಕೊಲ್ಲಲು ಕೇಂದ್ರ ಆದೇಶ ನೀಡಿತು. ಇತ್ತ ಗೋವಾದಲ್ಲಿ ಸರ್ಕಾರ ನವಿಲುಗಳನ್ನು ಕೊಲ್ಲಲು ಮುಂದಾಗಿದೆ. ಹರ್ಯಾಣ ಸರ್ಕಾರ ಮಂಗಗಳನ್ನು ಕೊಲ್ಲಲು ಆದೇಶ ಹೊರಡಿಸಿದೆ. ಹರ್ಯಾಣದ ಮಂತ್ರಿಯೊಬ್ಬರು, ನೀಲ್‌ಗಾಯ್ ಕೊಲ್ಲುವ ಕೇಂದ್ರದ ಆದೇಶದ ಪರವಾಗಿ ಮಾತನಾಡಿ, ‘‘ನೀಲ್‌ಗಾಯ್ ತಾನೇ? ಗಾಯ್ (ಹಸು) ಅಲ್ಲವಲ್ಲ…’’ ಎಂದಿದ್ದಾರೆ! ಆದರೆ ಜೆರ್ಸಿ, ಎಚ್‌ಎಫ್  ಅಮದು ಮಾಡಿಕೊಂಡ ವಿದೇಶಿ ತಳಿಗಳೇ ಈಗಿನ  ನಮ್ಮ ಗಾಯ್‌ಗಳಾಗಿವೆ ಎನ್ನುವುದನ್ನು ಮರೆಯುವಂತಿಲ್ಲ. ನೀಲ್‌ಗಾಯ್ ಸ್ಥಳೀಯ, ಭಾರತೀಯ  ಎನ್ನುವುದು ಸತ್ಯವೇ. ನಮಗೆ ತೊಂದರೆ ಎನಿಸಿದರೆ ‘ವೈಜ್ಞಾನಿಕವಾಗಿ’ ಕೊಲ್ಲಬಹುದು ಎನ್ನುತ್ತಾರೆ. ರೈತರು ಆನೆ ಹಾವಳಿ ತಡೆಗಟ್ಟಲು, ಮೆಣಸಿನ ಖಾರವನ್ನು ಬೇಲಿಗೆ ಹಾಕಿದರೆ ಸಾಕು ಎನ್ನುತ್ತಾರೆ. ಸ್ಥಳೀಯವಾಗಿ ನಮ್ಮ ಜನ ಕಾಡು ಪ್ರಾಣಿಗಳನ್ನು ದೂರವಿಡಲು ಅವರದ್ದೇ ಅನೇಕ ತಂತ್ರಗಾರಿಕೆ ಅಳವಡಿಸಿಕೊಂಡಿದ್ದಾರೆ. ಇನ್ನು ಕೆಲವು ಕಡೆ ಕೊಂದು, ತಿಂದು, ಮಾರಿ ಅದನ್ನೇ ಉದ್ಯಮವನ್ನಾಗಿ ಮಾಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ, ಆಸ್ಟ್ರೇಲಿಯಾದಲ್ಲಿ ಕಾಂಗರೂ ಹೆಚ್ಚಾದ ಕಾರಣ, ಅವುಗಳನ್ನು ಕೊಂದು ಮಾಂಸ ಮಾರಾಟ, ಚರ್ಮದಿಂದ ವಿವಿಧ  ವಸ್ತುಗಳನ್ನು ಮಾಡುವ ದೈತ್ಯ ಉದ್ಯಮವಿದೆ. ‘ನಾಗರಿಕ ಸಮಾಜ’ ಎಂದು ಬೀಗುವ ನಾವುಗಳು ಈ ರೀತಿ ನಡೆದುಕೊಂಡರೆ; ಇನ್ನೊಂದೆಡೆ, ಕಾಡನ್ನೇ ಆಧರಿಸಿರುವ ಜನರ ನಿಲುವೇ ಬೇರೆ. ಸೋಲಿಗರು ಬಿಳಿಗಿರಿರಂಗನ ಬೆಟ್ಟದಲ್ಲಿ ವಾಸಿಸುವ ಬುಡಕಟ್ಟು ಜನಾಂಗ. ಅವರಿಗೆ, ‘‘ನಿಮಗೆ ಕಾಡುಪ್ರಾಣಿಗಳಿಂದ ತೊಂದರೆ ಇಲ್ಲವೇ?’’ ಎಂದು ಕೇಳಿದ್ದಕ್ಕೆ, ‘‘ಅವುಗಳನ್ನು ನಾವು ತಿನ್ನುತ್ತೇವೆ, ಕೆಲವೊಮ್ಮೆ ಅವು ನಮ್ಮವರಿಗೆ ತೊಂದರೆ ಕೊಡುತ್ತವೆ. ಅದರಲ್ಲೇನೂ ವಿಶೇಷವಿಲ್ಲ,’’ ಎನ್ನುತ್ತಾರೆ.

ನಮ್ಮ ಕೈವಾಡವೆಷ್ಟೋ ತಿಳಿಯದು; ಆದರೆ ಇತ್ತೀಚೆಗೆ ನವಿಲುಗಳ ಸಂಖೆ ಹೆಚ್ಚಾಗಿರುವುದು ಎಲ್ಲೆಡೆ ಕಂಡುಬರುತ್ತಿದೆ. ಪಾರಿವಾಳ ಎಂದರೆ ಇವತ್ತು ಪೀಡೆ, ಪೆಸ್ಟ್, ಪಿಡುಗು ಎಂದಾಗಿರುವುದು ಹೌದು. ಇಡೀ ನಗರ, ಮನೆ, ಮಠ ಸುತ್ತುವರಿದಿವೆ. ಕಿಟಕಿ, ಸಂದುಗೊಂದು ಸೇರಿ ಆಕ್ರಮಿಸಿಕೊಂಡಿವೆ. ಎಲ್ಲಿ ನೋಡಿದರೂ ಅವುಗಳ ಹಿಕ್ಕೆ ರಾಶಿ, ಕಸ. ಅನೇಕ ಕಾಯಿಲೆಗಳಿಗೂ ಇವು ಕಾರಣವಾಗಿವೆ. ಬೀದಿನಾಯಿ ಕಾಟ ನಗರ ಪ್ರದೇಶಗಳಲ್ಲಿ ಅಷ್ಟಿಷ್ಟಲ್ಲ. ಇದರ ಮಧ್ಯೆ ಬೆಂಗಳೂರಿನಲ್ಲಿ ಪಾರಿವಾಳಕ್ಕೆ ತಿಂಡಿ ಹಾಕುವ ಕೆಲವು ಪ್ರಾಣಿದಯಾ ಸಂಘಗಳ ವಾಹನಗಳು  ಓಡಾಡುವುದನ್ನು ಕಾಣಬಹುದು! ಕೊಲ್ಲುವುದು ಒಂದು ಪರಮಾವಧಿಯಾದರೆ, ತಿಂಡಿ-ತೀರ್ಥ ಹಾಕಿ ಸಾಕುವುದು ಇನ್ನೊಂದು ವಿಪರೀತ. ಇ ಒ ವಿಲ್ಸನ್, ಹೆಸರಾಂತ ಪರಿಸರ ವಿಜ್ಞಾನಿ; ಅದರಲ್ಲೂ ಇರುವೆ ಬಗ್ಗೆ ಆಳವಾದ ಅಧ್ಯಯನ ಮಾಡಿದವರು. ‘‘ನಾನು ಹಾರ್ವರ್ಡ್ ವಿವಿಯಲ್ಲಿ ಉಳಿಯಲು ಮುಖ್ಯ ಕಾರಣ, ಅಲ್ಲಿನ ಇರುವೆ ಸಂಗ್ರಹಾಲಯ,’’ ಎಂದಿದ್ದರು ಅವರು. ಅವರಿಗೆ, ಅವರ ಸ್ನೇಹಿತನ ಪತ್ನಿ, ‘‘ನಮ್ಮ ಮನೆಯಲ್ಲಿ ಇರುವೆ ಕಾಟ ಹೆಚ್ಚಾಗಿದೆ, ಸಲಹೆ ಕೊಡಿ,’’ ಎಂದು ಕೇಳಿದಾಗ ‘‘ಅವುಗಳಿಗೆ ಜೇನು ತಿನ್ನಿಸಿ. ಆದರೆ ಶೇ.೧೦ರಷ್ಟು ನೀರು ಸೇರಿಸಿ ಕೊಡಿ. ಶುದ್ಧಜೇನು ಅವುಗಳಿಗೆ ಅಜೀರ್ಣ ಉಂಟುಮಾಡಬಹುದು!’’ ಎನ್ನುತ್ತಾರೆ.

ಮನುಷ್ಯರಿದ್ದಲ್ಲಿ, ಇಲಿ, ಹೆಂಗಣ, ಸೊಳ್ಳೆ, ತಿಗಣೆ, ಜಿರಲೆ ಇರುವಂಥದ್ದು ಸಾಮಾನ್ಯ. ಮಾನವ ನಿರ್ಮಿತ, ಸಾಕಷ್ಟು ಬದಲಾದ ಪ್ರಕೃತಿ ಭೂಮಂಡಲ ಆವರಿಸಿದೆ. ನಾವು ಮಾಡುವ ಕೃಷಿ, ಪಶುಸಂಗೋಪನೆ, ಕೈಗಾರಿಕಾ ಉತ್ಪಾದನೆ, ಗಣಿಗಾರಿಕೆ, ತೈಲ ಉತ್ಪಾದನೆ ಮುಂತಾದವುಗಳಿಂದ ಭೂಮಿಯ  ಒಳಗೂ ಮತ್ತು ಹೊರಗೂ ಮಹತ್ತರ ಮಾರ್ಪಾಡು ಕಂಡುಬರುತ್ತವೆ. ಹಡಗು ಸಂಚಾರ ಸುಗಮವಾಗಿರಲು ತಳದಲ್ಲೂ ನೀರು ತುಂಬಿಸುತ್ತಾರೆ; ಅದನ್ನು ಬ್ಯಾಲಸ್ಟ್ ಎನ್ನುತ್ತಾರೆ. ಬಂದರಿನಿಂದ ಬಂದರಿಗೆ ಹೋದಂತೆಲ್ಲ ಈ ನೀರು ಸುರಿದು ಬದಲು ಮಾಡುವುದರಿಂದ ಜಗತ್ತಿನ ಕಾಯಿಲೆಗಳನ್ನು ಜಾಗತೀಕರಣ ಮಾಡಿದಂತಾಗುತ್ತಿದೆ. ಒಂದು ದೇಶದ ಬಂದರಿನ ರೋಗಾಣುಗಳು ಇನ್ನೊಂದು ದೇಶದ ಬಂದರಿನ ರೋಗಾಣುಗಳೊಂದಿಗೆ ಮಿಶ್ರಣಗೊಂಡು ಇನ್ನೂ ಮಾರಕ ರೋಗಾಣುಗಳಾಗುವ ಸಾಧ್ಯತೆ ಇದೆ ಎಂಬುದು ತಜ್ಞರ ಅಭಿಪ್ರಾಯ. ಈಗಾಗಲೇ ಮದುವೆಯಾಗಿ ಮಕ್ಕಳಾದ ನಂತರ ಬೇರೆಯಾದ ಗಂಡು-ಹೆಣ್ಣು, ಮರುಮದುವೆಯಾಗಿ ಮತ್ತೆ ಮಕ್ಕಳಾಗಿ, ಒಟ್ಟಿಗೆ ಇರುವಾಗ, ಮನೆಯಲ್ಲಿ ಮಕ್ಕಳ ಗಲಾಟೆಗೆ ಹೆಂಡತಿ, ‘‘ನೋಡ್ರಿ, ನಿಮ್ಮ ಮಕ್ಕಳೂ ನನ್ನ ಮಕ್ಕಳೂ ಸೇರಿ ನಮ್ಮ ಮಕ್ಕಳೊಂದಿಗೆ ಗಲಾಟೆ ಮಾಡುತ್ತಿದ್ದಾರೆ,’’ ಎಂದಳಂತೆ. ಈಗ ಕಾಯಿಲೆಯ ಜಾಗತೀಕರಣದ್ದೂ ಇದೇ ಕತೆ. ಸದ್ಯ ಈ ಬ್ಯಾಲಸ್ಟ್ ನೀರನ್ನು ಶುದ್ಧೀಕರಿಸುವ ಬಗ್ಗೆ ಗಂಭೀರ ಚಿಂತನೆ ನಡೆಯುತ್ತಿದೆ.

ಇನ್ನೊಂದೆಡೆ, ತರಹೇವಾರಿ ಪ್ರಾಣಿ, ಹಾವು, ಮೀನುಗಳನ್ನು ಮನೆಯಲ್ಲಿ ಸಾಕಿ, ಚಂದಕ್ಕೆ ಇಡುವಂಥ ವಿಚಿತ್ರ ಸ್ವಭಾವದವರು ಹೆಚ್ಚಾಗುತ್ತಿದ್ದಾರೆ. ಇತ್ತೀಚೆಗೆ ಗೋದಾವರಿ ನದಿಯಲ್ಲಿ ಪಿರಾನ ಮೀನು ಕಂಡುಬಂದಿದೆ. ಕಚ್ಚಿ ಕೊಚ್ಚಿ ಕೆಡಹುವಂಥ ಶಕ್ತಿಶಾಲಿ ಮೀನು ಇದು. ಈ ಮೀನು ಇದ್ದಲ್ಲಿ ಇತರ ಮೀನುಗಳ ಮಾರಣಹೋಮವೇ ಸರಿ. ಮನೆಯ ಅಕ್ವೇರಿಯಂನಲ್ಲಿ ಇಡಲು ತಂದ ಈ ಮೀನು, ಅದ್ಹೇಗೋ ತಪ್ಪಿ ನದಿ ಸೇರಿದೆ ಎನ್ನಲಾಗುತ್ತಿದೆ! ಈ ಹಿಂದೆ ಬ್ರಿಟಿಷ್ ಮಹಿಳೆಯೊಬ್ಬಳು ಅಲಂಕಾರಿಕ ಗಿಡವಾಗಿ ತಂದ ವಾಟರ್ ಹಯಸಿಂತ್ ಇಂದು ನಮ್ಮ ಕೆರೆ-ಕೊಳಗಳನ್ನು ಸಂಪೂರ್ಣವಾಗಿ ಅವರಿಸಿಕೊಂಡಿದೆ. ಅದನ್ನು ಸ್ವಚ್ಛಗೊಳಿಸಲು ಕೋಟ್ಯಂತರ ರು. ಖರ್ಚು ಮಾಡುವುದಾಗಿದೆ. ಪಾರ್ಥೇನಿಯಂ ಕೂಡ ಅಮೆರಿಕದ ಗೋದಿಯೊಂದಿಗೆ ಬಂದದ್ದು; ಇವತ್ತು ಇಡೀ ದೇಶಕ್ಕೆ ಹಬ್ಬಿದೆ.

ಇಲ್ಲಿ ಸ್ಥಳೀಯ ಮತ್ತು ಹೊರಗಿನ ವಿಷಯ ಎಂದು ಬೇರೆ-ಬೇರೆ ಮಾಡಿ ನೋಡುವ ಅಗತ್ಯವೇನಿಲ್ಲ, ಅಗಾಗ ಇಂಥ ಅನಾಹುತಗಳು ನಡೆಯುತ್ತಲೇ ಇರುತ್ತವೆ; ಕೆಲವೊಮ್ಮೆ ತಿಳಿದು, ಕೆಲವೊಮ್ಮೆ ತಿಳಿಯದೆ. ನೀಲಗಿರಿ ಮರದ ಕಾಡು ಎಂಬುದು ನಾವು ತಿಳಿದೂ ಮಾಡಿದ ಅನಾಹಿತ. ನಮ್ಮ ದೇಶದ ಶೇ.೪೦ ಸಸ್ಯ ಸಂಪತ್ತು ಸ್ಥಳೀಯವಲ್ಲ ಎನ್ನಲಾಗುತ್ತದೆ. ಅದರಲ್ಲಿ ಶೇ.೨೫  ಅಕ್ರಮಣಕಾರಿ ಎಂದು ಅಂದಾಜು ಮಾಡಲಾಗಿದೆ. ನಮ್ಮ ಅಹಾರ ಸಾಮಗ್ರಿಗಳನ್ನು ಗಮನಿಸಿದರೆ ಆಲೂಗೆಡ್ಡೆ, ನೆಲಗಡಲೆ, ಮೆಕ್ಕೆಜೋಳ, ಮೆಣಸಿನಕಾಯಿ ಕೂಡ ನಮ್ಮದಲ್ಲ. ಕೊಲಂಬಸ್ ದಕ್ಷಿಣ ಆಮೆರಿಕಗೆ ಕಾಲಿಟ್ಟ ಮೇಲೆ ಅಲ್ಲಿನ ಸಸ್ಯ ಸಾಮ್ರಾಜ್ಯ ಇತ್ತ ಕಡೆ ಬರಲಾರಂಭಿಸಿತು. ಇದನ್ನು ‘ಕೊಲಂಬಿಯನ್ ವಿನಿಮಯ’ ಎನ್ನುತ್ತಾರೆ.

ಐತಿಹಾಸಿಕವಾಗಿ ನಮ್ಮಲ್ಲಿ ‘ಸ್ಥಳೀಯತೆಯ’ ಪ್ರಶ್ನೆ ಮನುಷ್ಯರಲ್ಲೇ ಇನ್ನೂ ನಿಗೂಢ. ಆರ್ಯರು ಸ್ಥಳೀಯರೇ? ದ್ರಾವಿಡರು ಸ್ಥಳೀಯರೇ? ಮುಂಡಾ ಸಮುದಾಯದವರು ಸ್ಥಳೀಯರೇ? ಇನ್ನೂ ಉತ್ತರ ಸರಿಯಾಗಿ ಸಿಕ್ಕಿಲ್ಲ. ಒಟ್ಟಿನಲ್ಲಿ ಸುಮಾರು ಲಕ್ಷ ವರ್ಷ ಹಿಂದೆ ಆಫ್ರಿಕಾದಿಂದ ಹೊರಟವರು ಮನುಷ್ಯರು ಎಂಬುದು ಸಾಬೀತಾಗಿರುವ ವಿಷಯ. ತಾಯಿನಾಡು ಮೂಲತಃ ಅಫ್ರಿಕಾವೇ. ಉಳಿದ ಕಡೆ ನಾವು ವಲಸಿಗ ಮತ್ತು ನೆಲಸಿಗ. ದೊಡ್ಡಣ್ಣ ಅಮೆರಿಕ ಸಂಪೂರ್ಣ ವಲಸಿಗರ ತವರು. ಸ್ಥಳೀಯರನ್ನು ಒಕ್ಕಲೆಬ್ಬಿಸಲು ‘ಇಂಡಿಯನ್ ರಿಮೂವಲ್ ಆ್ಯಕ್ಟ್’ ಕಾನೂನು ಮಾಡಿ, ಸಾವಿರಾರು ಜನರನ್ನು ಕೊಂದು ಹೊರದಬ್ಬಲಾಯಿತು. ಈಗ ಸ್ಥಳೀಯರನ್ನು ಪ್ರಾಣಿಗಳ ಹಾಗೆ ನಿಮಿತ್ತ ಜಾಗಕ್ಕೆ ಸೀಮಿತಗೊಳಿಸಿ ದೇಶವನ್ನು ಭದ್ರವಾಗಿ ಕಟ್ಟಲಾಗಿದೆ!

ಮನುಷ್ಯ ಮನುಷ್ಯರ ನಡುವೆ ಕತೆ ಹೀಗಿರುವಾಗ, ಮನುಷ್ಯ ಮತ್ತು ಪ್ರಾಣಿ ಸಂಘರ್ಷ ಯಾವ ಮಟ್ಟಕ್ಕೂ ಹೋದೀತು. ನಮ್ಮ ದೇಶದಲ್ಲಿ, ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ೮೦,೦೦೦ ಹುಲಿ ಕೊಲ್ಲಲಾಯಿತು ಎಂದು ಅಂದಾಜು ಮಾಡಲಾಗಿದೆ! ಇತ್ತೀಚಿನ ಆಂದಾಜಿನ ಪ್ರಕಾರ, ಸುಮಾರು ೨,೨೨೬ ಉಳಿದಿವೆ ಎನ್ನಲಾಗಿದೆ. ಇಡೀ ಜಗತ್ತಿನಲ್ಲಿ, ಕಾಡಿನಲ್ಲಿರುವ ಹುಲಿಗಳ ಸಂಖ್ಯೆ ಕೇವಲ ೩,೮೯೦! ಒಂದು ಹುಲಿಗೆ ವರ್ಷಕ್ಕೆ ಸುಮಾರು ೬೦ ಕೆಜಿ ತೂಕವಿರುವ ೫೦ ಪ್ರಾಣಿಯ ಲೆಕ್ಕದಲ್ಲಿ ಮೂರು ಟನ್ ಮಾಂಸ ಬೇಕಾಗುತ್ತದೆ. ಉಲ್ಲಾಸ ಕಾರಂತರ ಪ್ರಕಾರ, ನಮ್ಮ ಕಾಡು ಇಂದಿಗೂ ೨೦,೦೦೦ ಸಾವಿರ ಹುಲಿಗಳ ವಾಸಕ್ಕೆ ಯೋಗ್ಯವಾಗಿದೆ. ಐತಿಹಾಸಿಕವಾಗಿ ಸಿಂಹವಾಸ ಆಫ್ರಿಕಾದಿಂದ ಹಿಡಿದು ಪಶ್ಚಿಮ ಏಷ್ಯಾ, ಭಾರತದ ಮಧ್ಯಭಾಗದಿಂದ ಮುಂದುವರಿದು ಬಂಗಾಳದವರೆಗೂ ಇತ್ತು; ಇಂದು ಕೇವಲ ಗುಜರಾತಿನ ಗಿರ್ ಕಾಡಿಗೆ ಸೀಮಿತವಾಗಿದೆ. ಆಹಾರ ಸರಪಳಿ ಕೊಂಡಿ ಕಳಚಿದರೆ ವೈಪರೀತ್ಯ ಕಂಡುಬರುವುದು ಮಾಮೂಲಿ. ಆಸ್ಟ್ರೇಲಿಯದ ಬೇಟೆನಾಯಿ ಡಿಂಗೊ ಬೊಗುಳಿದರೆ ಏಡಿ ಸಂಖೆ ಹೆಚ್ಚಾಗುತ್ತದೆ ಎನ್ನುತ್ತಾರೆ. ಕಾರಣ, ಡಿಂಗೊ ಶಬ್ದಕ್ಕೆ ಡಿಂಗೊ ತಿನ್ನುವ ರಕೂನ್‌ಗಳು ಬಿಲ ಸೇರಿಕೊಳ್ಳುತ್ತವೆ. ರಕೂನ್ ಏಡಿ ತಿನ್ನುವ ಪ್ರಾಣಿ. ಹಾಗಾಗಿ ನಾಯಿ ಬೊಗುಳಿದರೆ ಏಡಿಗೆ ಪಂಚಪ್ರಾಣ.