ಇದರೊಂದಿಗೆ ಕೇರಳದ ನವನಿರ್ಮಾಣಕ್ಕೆ ಒಂದು ಜನತೆಯ ಆಂದೋಲನ -ಮಾಧವ ಗಾಡ್ಗಿಳ್

ಕನ್ನಡ ಅನುವಾದ-ವೇಣುಗೋಪಾಲ್ ಟಿ. ಎಸ್ .

ಕೇರಳದ ನೆರೆಹಾವಳಿಯಿಂದ ಒಟ್ಟಾರೆ ಆಗಿರುವ ಭೌತಿಕ ಹಾನಿ ಸುಮಾರು 26,000 ಕೋಟಿ ಎಂದು ಅಂದಾಜು ಮಾಡಲಾಗಿದೆ. ಆದರೆ ಅದರಾಚೆಗೆ ಆಗಿರುವ ಅಪಾರವಾದ ನೈಸರ್ಗಿಕ, ಮಾನವ ಹಾಗೂ ಸಾಮಾಜಿಕ ಬಂಡವಾಳದ ನಷ್ಟವನ್ನು ಕುರಿತಂತೆ ಯಾವುದೇ ಅಂದಾಜು ಲಭ್ಯವಿಲ್ಲ. ಈ ಅನಾಹುತ ಇಷ್ಟ್ಟು ತೀವ್ರವಾಗುವುದಕ್ಕೆ ಮನುಷ್ಯ ನಿರ್ಮಿತ ಬಂಡವಾಳ (ಅರಣ್ಯವೃತ್ತ ಬೆಟ್ಟ ಪ್ರದೇಶಗಳಲ್ಲಿ ಕಟ್ಟಿದ ಕಟ್ಟಡಗಳು, ನದಿ ಹಾಗೂ ಜೌಗು ಭೂಮಿಯ ಅತಿಕ್ರಮಣ, ಕಲ್ಲು ಗಣಿಗಾರಿಕೆ ಇತ್ಯಾದಿ)ವನ್ನು ನಿರ್ಮಿಸುವ ಪ್ರಯತ್ನಗಳು ಬಹುಮಟ್ಟಿಗೆ ಕಾರಣ ಅನ್ನುವುದರಲ್ಲಿ ಅನುಮಾನವಿಲ್ಲ. ಇವೆಲ್ಲಾ ದೂರಾಲೋಚನೆಯಿಲ್ಲದೆ ಮಾಡಿದ ಮಾನವಕೃತ್ಯಗಳು. ಇವುಗಳಿಂದ ಆಗುವ ನೈಸರ್ಗಿಕ, ಮಾನವ ಹಾಗೂ ಸಾಮಾಜಿಕ ಬಂಡವಾಳದ ನಷ್ಟವನ್ನು ಕಡೆಗಣಿಸಲಾಗಿದೆ. ರಾಜ್ಯದಲ್ಲಿ ಪರಿಹಾರ ಹಾಗೂ ಪುನರ್‍ವಸತಿಯನ್ನು ಕಲ್ಪಿಸುವುದು ತಕ್ಷಣದ ಕರ್ತವ್ಯ ಎನ್ನುವುದು ನಿಜ. ಆದರೆ ಈ ದುರಂತಕ್ಕೆ ಮೂಲಕಾರಣವನ್ನು ಕಂಡುಕೊಳ್ಳುವುದು ತುಂಬಾ ಮುಖ್ಯ.
ಮೂಲ ಕಾರಣಗಳು
ಈ ದುರಂತಕ್ಕೆ ಕಾರಣವಾದ ಎಲ್ಲಾ ಪ್ರಮುಖ ಅಂಶಗಳನ್ನು ಪಶ್ಚಿಮಘಟ್ಟಗಳ ಉದ್ದಕ್ಕೂ, ಅಷ್ಟೇ ಅಲ್ಲ ದೇಶದ ಉಳಿದ ಭಾಗಗಳಲ್ಲೂ ಕಾಣಬಹುದು. ಮೊದಲನೆಯದು ಪ್ರಾಕೃತಿಕ ಬಂಡವಾಳವನ್ನು ರಕ್ಷಿಸಲು ಇರುವ ಕಾನೂನುಗಳನ್ನು ಕಡೆಗಣಿಸಿರುವುದು. ಅನುಮತಿಯ ಮಿತಿಯನ್ನು ಮೀರಿ ಗಣಿ ತೋಡಿರುವುದರಿಂದ ಜಲ ಸಂಪನ್ಮೂಲಗಳಿಗೆ, ಕೃಷಿ ಹಾಗೂ ಜೀವ ವೈವಿಧ್ಯತೆಗೆ ಗಂಭೀರ ಹಾನಿಯಾಗಿದೆ ಎಂದು ಗೋವಾದಲ್ಲಿನ ಅಕ್ರಮ ಗಣಿಗಾರಿಕೆಯನ್ನು ಕುರಿತು ವಿಚಾರಣೆ ನಡೆಸಿರುವ ಶಾ ಆಯೋಗ ಅಭಿಪ್ರಾಯಪಟ್ಟಿದೆ. ಎರಡನೆಯದಾಗಿ, ಆರೋಗ್ಯ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದಂತೆ ಮಾನವ ಬಂಡವಾಳಕ್ಕೆ ಗಂಭೀರ ಸ್ವರೂಪದ ಹಾನಿಯಾಗಿದೆ. ಪಾಲಕ್ಕಾಡು ಜಿಲ್ಲೆಯ ಪಚ್ಚಿಮಡ ಪಂಚಾಯತಿಯಲ್ಲಿ ಕೋಕೊಕೋಲ ಫ್ಯಾಕ್ಟರಿ ಜಲಸಂಪನ್ಮೂಲವನ್ನು ಮಿತಿಮೀರಿ ಬಳಸಿಕೊಂಡಿದೆ. ಹಾಗೂ ತೀವ್ರಮಟ್ಟದ ಮಾಲಿನ್ಯಕ್ಕೆ ಕಾರಣವಾಗಿದೆ. ಇದರಿಂದ ಸುಮಾರು 160 ಕೋಟಿ ರೂಪಾಯಿಗಳಷ್ಟು ನಾಶವಾಗಿದೆ. ಮೂರನೆಯದಾಗಿ ವಿಜ್ಞಾನದ ಜ್ಞಾನ ಹಾಗೂ ಸಲಹೆಯನ್ನು ನಾವು ನಿರಂತರವಾಗಿ ನಿರ್ಲಕ್ಷಿಸುತ್ತಾ ಬರುತ್ತಿದ್ದೇವೆ. ಈಗ ಕೈಗೆತ್ತಿಕೊಳ್ಳಬೇಕಿರುವ ಅಥಿರಪಿಲ್ಲಿ ಜಲವಿದ್ಯುತ್ ಯೋಜನೆಯಲ್ಲಿ ನೀರಿನ ಲಭ್ಯತೆಯನ್ನು ಕುರಿತಂತೆ ಉತ್ಪ್ರೇಕ್ಷಿತ ಅಂದಾಜನ್ನು ನೀಡಲಾಗಿದೆ. ಇದನ್ನು ನದಿಸಂಶೋಧನಾ ಕೇಂದ್ರದ ವಿಶ್ಲೇಷಣೆ ತೋರಿಸಿದೆ. ಆ ಯೋಜನೆಯನ್ನು ನಿರ್ಮಿಸಿ, ಚಾಲನೆಗೊಳಿಸಲು ತಗಲುವ ಅಂದಾಜು ವೆಚ್ಚಕ್ಕೆ ಹೋಲಿಸಿದರೆ ಅದರಿಂದ ಉತ್ಪಾದಿಸಬಹುದಾದ ವಿದ್ಯುತ್ ತುಂಬಾ ಕಡಿಮೆ ಅನ್ನುವುದು ಅದಕ್ಕೆ ಸಂಬಂಧಿಸಿದ ಅಂಕಿಅಂಶಗಳ ಪರಿಶೀಲಿಸಿದಾಗ ಸ್ಪಷ್ಟವಾಗುತ್ತದೆ. ಹಾಗಾಗಿ ಆ ಯೋಜನೆಯನ್ನು ಕೈಗೆತ್ತಿಕೊಳ್ಳುವುದಕ್ಕೆ ಯಾವುದೇ ಸಮರ್ಥನೆಯೂ ಇಲ್ಲ ಎಂಬ ನಿಲುವಿಗೆ ಆ ಕೇಂದ್ರದ ವರದಿ ಬಂದಿದೆ. ನಾಲ್ಕನೆಯದಾಗಿ ಸಾಮಾಜಿಕ ಬಂಡವಾಳ ತೀರಾ ಗಂಭೀರವಾಗಿ ಘಾಸಿಗೊಂಡಿದೆ. ಉದಾಹರಣೆಗೆ ಕಲ್ಲಿನ ಗಣಿ ಕೈಗಾರಿಕೆಯನ್ನು ಪ್ರಬಲ ವಿರೋಧಿಸುತ್ತಿದ್ದ ಅನೂಪ್ ವೆಲ್ಲೋಲಿಪ್ಪಿಲ್, ಶಾಂತಿಯುತವಾದ ಮೆರವಣೆಗೆಯನ್ನು ಸಂಘಟಿಸುತ್ತಿದ್ದಾಗ ಅವರನ್ನು ಕೊಲ್ಲಲಾಯಿತು. ಅವರನ್ನು ಕೋಜಿಕೋಡ್ ಜಿಲ್ಲೆಯ, ವದಕರ ತಾಲ್ಲೋಕಿನ ಕೈವೇಳಿಯ ಕ್ವಾರಿ ಮಾಲಿಕರು ಬಾಡಿಗೆ ಗೂಂಡಾಗಳಿಂದ ಡಿಸೆಂಬರ್ 16, 2014ರಂದು ಕೊಲ್ಲಿಸಿದರು ಎಂದು ಹೇಳಲಾಗಿದೆ.
ಸ್ಥಳೀಯ ಸಮುದಾಯದ ಹಕ್ಕುಗಳು
ಹಾಗಾಗಿ ನಡೆದುಕೊಂಡು ಹೋಗುತ್ತಿರುವಂತೆ ನಡೆದುಕೊಂಡು ಹೋಗಲಿ ಎಂದು ಬಿಡಲಾಗುವುದಿಲ್ಲ. ನಾವು ಕೇವಲ ಮನುಷ್ಯ ನಿರ್ಮಿತ ಸಂಪತ್ತಿನ ಕಡೆಗೆ ಮಾತ್ರ ಗಮನ ಹರಿಸುವುದಕ್ಕೆ ಸಾಧ್ಯವಿಲ್ಲ. ನಾವು ಒಟ್ಟಾರೆಯಾಗಿ ಮಾನವ ನಿರ್ಮಿತ, ಪ್ರಾಕೃತಿಕ, ಮಾನವ ಹಾಗೂ ಸಾಮಾಜಿಕ ಸಂಪತ್ತಿನ ಹೆಚ್ಚಳದ ಕಡೆ ಗಮನಕೊಡಬೇಕು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಾವು ಹೊಸ ವ್ಯವಸ್ಥೆಯನ್ನು ರೂಪಿಸಬೇಕು. ಹೀಗೆ ಮಾಡುವಾಗ ನಾವು, ಸ್ಥಳೀಯ ಸಮುದಾಯಗಳಿಗೆ ಮಾತ್ರ ಅವರ ಪ್ರಾಕೃತಿಕ ಪರಿಸರ ವ್ಯವಸ್ಥೆಯ ಸುಸ್ಥಿತಿ ಕುರಿತಂತೆ ನಿಜವಾಗಿ ಹಕ್ಕು ಇರುವುದು ಎಂಬುದನ್ನು ಒಪ್ಪಿಕೊಳ್ಳಬೇಕು. ಹಾಗೆಯೇ ಅದರ ಬಗ್ಗೆ ನಿಜವಾದ ಜ್ಞಾನವಿರುವುದು ಅವರಿಗೆ ಮಾತ್ರ. ಈಗ ಪ್ರಾಕೃತಿಕ ಸಂಪನ್ಮೂಲಗಳನ್ನು ರಕ್ಷಿಸಲು ಶಿಕ್ಷೆಯನ್ನು ಕ್ರಮವಾಗಿ ಬಳಸಲಾಗುತ್ತಿದೆ. ಇದನ್ನು ಜಾರಿಗೊಳಿಸುವ ಅಧಿಕಾರವನ್ನು ಭ್ರಷ್ಟ ಅಧಿಕಾರಿಗಳಿಗೆ ಕೊಡಲಾಗಿದೆ. ಅವರು ಯಾವಾಗಲೂ ಬಲವನ್ನು ಬಳಸುತ್ತಾರೆ. ಈ ಕ್ರಮ ನಿಲ್ಲಬೇಕು. ಪ್ರಾಕೃತಿಕ ಸಂಪನ್ಮೂಲವನ್ನು ರಕ್ಷಿಸುವವರಿಗೆ ಪ್ರೋತ್ಸಾಹಕಗಳನ್ನು ಕೊಡುವ ಪದ್ಧತಿ ಜಾರಿಗೆ ಬರಬೇಕು. ಈ ಕ್ರಮ ಎಲ್ಲಾ ಸಂಬಂಧಪಟ್ಟ ಪ್ರಜೆಗಳು ಮೇಲ್ವಿಚಾರಣೆಯಲ್ಲಿ ಪಾರದರ್ಶಕವಾಗಿ ನಡೆಯುವಂತಾಗಬೇಕು. ನಮ್ಮ ಪಶ್ಚಿಮ ಘಟ್ಟಗಳ ಸಮಿತಿಯು ಅಂತಹ ಹಲವಾರು ಪ್ರೋತ್ಸಾಹಕಗಳನ್ನು ಸೂಚಿಸಿದೆ. ಉದಾಹರಣೆಗೆ ಪವಿತ್ರವನಗಳಂತಹ ಜೀವವೈವಿಧ್ಯಗಳನ್ನು ರಕ್ಷಿಸುವುದಕ್ಕೆ ರಕ್ಷಣಾ ಸೇವೆಯ ಹಣವನ್ನು ಕೊಡುವುದು ಮತ್ತು ನೈಸರ್ಗಿಕ ಕೃಷಿ ಪದ್ಧತಿಯ ಮೂಲಕ ಮಣ್ಣಿನಲ್ಲಿ ಕಾರ್ಬನ್ ಪ್ರಮಾಣ ಹೆಚ್ಚಿಸುವುದಕ್ಕೆ ಪ್ರೋತ್ಸಾಹಧನ  ಕೊಡುವುದು ಹೀಗೆ ಹಲವಾರು ಸಲಹೆಗಳನ್ನು ನೀಡಿದೆ.
ಒಂದು ಹೊಸ ಅಧ್ಯಾಯಕ್ಕೆ ನಾಂದಿ ಹಾಡುತ್ತಾ, ಕೇರಳ ಸರ್ಕಾರ ತನ್ನ ಜನತೆಗೆ ಕೆಲವು ಭರವಸೆ ನೀಡಬೇಕು. ಅದು ತನ್ನ ಬೆಳವಣಿಗೆಯ ಹಳೆಯ ಮಾದರಿಯನ್ನು ಮುಂದುವರಿಸುವುದಿಲ್ಲ; ಸಂರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳುವಾಗ ಸಂಬಂಧಿಸಿದ ಜನತೆಯನ್ನು ಹೊರಗಿಡುವುದಿಲ್ಲ. ಬೆಳವಣಿಗೆಯ ಹಾಗೂ ಸಂರಕ್ಷಣೆಯ ಕ್ರಮಗಳನ್ನು ಕುರಿತು ನಿರ್ಧಾರ ತೆಗೆದುಕೊಳ್ಳುವಾಗ ಅದು ಸ್ಥಳೀಯ ಸಮುದಾಯಗಳ ಹಕ್ಕನ್ನು ರಕ್ಷಿಸುತ್ತದೆ ಎಂದು ಮತ್ತೆ ಭರವಸೆ ನೀಡಬೇಕು.
ಇದು ಸಾಧ್ಯವಾಗಬೇಕಾದರೆ, ಸರ್ಕಾರ 73ನೇ ಹಾಗೂ 74ನೇ ಸಂವಿಧಾನಾತ್ಮಕ ತಿದ್ದುಪಡಿಯನ್ನು ಅದರ ನಿಜವಾದ ಅರ್ಥದಲ್ಲಿ ಜಾರಿಗೊಳಿಸಬೇಕು. ಪರಿಸರದ ಸ್ಥಿತಿಗತಿಗಳನ್ನು ಕುರಿತಂತೆ ವರದಿಗಳನ್ನು ತಯಾರಿಸಲು ಮತ್ತು ಈ ವರದಿಗಳನ್ನು ಆಧರಿಸಿ ಬಜೆಟ್ಟಿನಲ್ಲಿ ಒಂದು ಗಣನೀಯವಾದ ಮೊತ್ತವನ್ನು ಖರ್ಚುಮಾಡುವ ವಿಧಾನವನ್ನು ಕುರಿತಂತೆ ತೀರ್ಮಾನಿಸಲು ವಾರ್ಡ್, ಗ್ರಾಮಪಂಚಾಯ್ತಿ, ಪಟ್ಟಣ, ನಗರ ಮಟ್ಟದ ಸ್ಥಳೀಯ ಸಂಸ್ಥೆಗಳನ್ನು ಸದೃಢಗೊಳಿಸಬೇಕು. ಪ್ರಜಾ ಪರಿಸರ ವೈವಿಧ್ಯ ನಿರ್ವಹಣಾ ಸಮಿತಿಗಳನ್ನು ಸ್ಥಾಪಿಸಬೇಕು. ಸ್ಥಳೀಯ ಪರಿಸರ ವ್ಯವಸ್ಥೆಯ ಪರಿಸ್ಥಿತಿ ಹಾಗೂ ಜೀವವೈವಿಧ್ಯ ಸಂಪನ್ಮೂಲಗಳನ್ನು ದಾಖಲಿಸಲು ಮತ್ತು ಅವುಗಳ ಬಳಕೆಯನ್ನು ನಿಯಂತ್ರಿಸಲು ಈ ಸಮಿತಿಗಳನ್ನು ಸಬಲೀಕರಿಸಬೇಕು. ಜೀವವೈವಿಧ್ಯದ ಬಳಕೆಗೆ ಮತ್ತು ಸಮುದಾಯದ ಜ್ಞಾನಕ್ಕೆ ಸಂಬಂಧಿಸಿದ ಬೌದ್ಧಿಕ ಆಸ್ತಿಯನ್ನು ಬಳಸುವುದಕ್ಕೆ ಸಂಗ್ರಹ ಶುಲ್ಕವನ್ನು ವಿಧಿಸಲು ಈ ಸಮಿತಿಗಳಿಗೆ ಅಧಿಕಾರ ನೀಡಬೇಕು. ಅದರಲ್ಲಿಯೂ ಮುಖ್ಯವಾಗಿ ಪರಿಸರದ ಪರಿಣಾಮವನ್ನು ಅಂದಾಜನ್ನು ಮಾಡುವಲ್ಲಿ ಜೀವವೈವಿಧ್ಯ ನಿರ್ವಹಣಾ ಸಮಿತಿಗೆ ಪ್ರಮುಖ ಸ್ಥಾನವನ್ನು ನೀಡಬೇಕು. ಹಾಗೂ ಹಾಗೆ ಮಾಡಲಾದ ಲೆಕ್ಕಾಚಾರ ನಿಜವಾದ ಪರಿಸ್ಥಿತಿಯನ್ನು ಪ್ರತಿಫಲಿಸುವಂತೆ ನೋಡಿಕೊಳ್ಳಬೇಕು. ಇದು ಮಂಡಿಸುತ್ತಿರುವಂತಹ ಸಂಪೂರ್ಣ ಸುಳ್ಳು ದಾಖಲೆಯಾಗಬಾರದು. ಅರಣ್ಯ ಹಕ್ಕು ಕಾಯ್ದೆ ಸಮಗ್ರವಾಗಿ ಜಾರಿಯಾಗಬೇಕು. ಬುಡಕಟ್ಟು ಸಮುದಾಯಕ್ಕಷ್ಟೇ ಅಲ್ಲದೆ ಎಲ್ಲಾ ಸಾಂಪ್ರದಾಯಿಕ ವನವಾಸಿಗಳಿಗೆ ಮರವನ್ನು(ಟಿಂಬರ್) ಹೊರತುಪಡಿಸಿ ಉಳಿದ ಅರಣ್ಯ ಉತ್ಪನ್ನಗಳನ್ನು ನಿಯಂತ್ರಿಸುವ, ನಿರ್ವಹಿಸುವ, ಮಾರುವ ಅಧಿಕಾರ ನೀಡಬೇಕು. ಪರಿಸರ ಹಾಗೂ ಅಭಿವೃದ್ಧಿ ಸಂಬಂಧಿ ಮಾಹಿತಿಯನ್ನು ವಿರೂಪಗೊಳಿಸುವುದು, ಹತ್ತಿಕ್ಕುವುದನ್ನು ನಿಲ್ಲಿಸಬೇಕು. ಮಾಹಿತಿ ಹಕ್ಕು ಕಾಯ್ದೆ ಒತ್ತಾಯಿಸುವಂತೆ ಆ ಎಲ್ಲಾ ಮಾಹಿತಿಗಳನ್ನು ವೆಬ್‍ತಾಣದಲ್ಲಿ ಹಾಕಬೇಕು. ಪರಿಸರ ಸ್ಥಿತಿ ವರದಿಗಳು, ಜನತಾ ಜೀವವೈವಿಧ್ಯ ದಾಖಲೆಗಳು, ಸಮುದಾಯ ಅರಣ್ಯ ನಿರ್ವಹಣಾ ಕಾರ್ಯ ಯೋಜನೆ, ಹಾಗೂ ಪರಿಸರಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳು ಸಿದ್ಧಪಡಿಸಿದ ಶೈಕ್ಷಣಿಕ ಯೋಜನೆಗಳನ್ನು ಆಧರಿಸಿದ ಪ್ರಾಕೃತಿಕ ಅಂಶಗಳನ್ನು ಕುರಿತಂತೆ ಸಾರ್ವಜನಿಕ ಹಾಗೂ ಪಾರದರ್ಶಕ ಅಂಕಿಅಂಶಗಳನ್ನು ಕ್ರೋಢೀಕರಿಸಲು ಕ್ರಮತೆಗೆದುಕೊಳ್ಳಬೇಕು.
ಈ ಎಲ್ಲಾ ಮಾಹಿತಿಗಳನ್ನು ಹಾಗೂ ಸಂಬಂಧಿಪಟ್ಟ ದಾಖಲೆಗಳನ್ನು ವೆಸ್ಟರನ್ ಘಾಟ್ಸ್ ಇಕಾಲಜಿ ಎಕ್ಸ್‍ಪರ್ಟ್ ಪ್ಯಾನೆಲ್, ಕಸ್ತೂರಿ ರಂಗನ್ ಸಮಿತಿ, ಮತ್ತು ಓಮನ್ ವಿ ಓಮನ್ ಸಮಿತಿಗಳಿಂದ ರಾಜ್ಯ ಸರ್ಕಾರಗಳು ಪಡೆದುಕೊಳ್ಳಬೇಕು. ನಂತರ ಸ್ಥಳವಿವರಣೆ (ಟೋಪಾಗ್ರಫಿ), ಜಲವಿಜ್ಞಾನ (ಹೈಡ್ರಾಲಜಿ), ಭೂಮಿಯ ಬಳಕೆ ಮತ್ತು ಸಸ್ಯವರ್ಗ ಇವುಗಳನ್ನು ಆಧರಿಸಿ, ಭೂಪ್ರದೇಶದ ವಿವಿಧ ಭಾಗಗಳ ಪರಿಸರಾತ್ಮಕ ಸೂಕ್ಷ್ಮತೆಯನ್ನು ಕುರಿತು ರಾಜ್ಯಸರ್ಕಾರಗಳು ಸ್ಥಳೀಯ ಸಂಘಟನೆಗಳನ್ನು ಕೇಳಬೇಕು. ಆ ಭೂಪ್ರದೇಶಗಳು ಯಾರ ಒಡೆತನದಲ್ಲಿವೆ ಎನ್ನುವುದು ಯಾವ ಕಾರಣಕ್ಕೂ ಮುಖ್ಯವಾಗಬಾರದು. ಈ ವಿಭಿನ್ನ ಸ್ಥಳೀಯ ಸಂಸ್ಥೆಗಳು ನೀಡುವ ಮಾಹಿತಿಗಳು ಪಾರದರ್ಶಕವಾಗಿ ಎಲ್ಲಾ ನಾಗರಿಕರಿಗೂ ಸಿಗುವಂತಾಗಬೇಕು. ಅದಕ್ಕಾಗಿ ಬಳಕೆದಾರ ಸ್ನೇಹಿಯಾಗಿರುವ ಸ್ಮಾರ್ಟ್‍ಫೋನುಗಳೂ ಸೇರಿದಂತೆ ಆಧುನಿಕ ತಂತ್ರಜ್ಞಾನವನ್ನು ಸರ್ಕಾರಗಳು ಸೂಕ್ತವಾದ ಪೂರ್ವಸಿದ್ಧತೆಗಳೊಂದಿಗೆ ಬಳಸಬೇಕು. ಆಗ ನಾಗರಿಕರು ಈ ಎಲ್ಲಾ ಮಾಹಿತಿಗಳನ್ನು ಕ್ರೋಢೀಕರಿಸುವ ಕೆಲಸದಲ್ಲಿ ಸಹಾಯ ಮಾಡಬಹುದು. ಜೊತೆಗೆ ಅವರು ಆ ಪ್ರದೇಶಕ್ಕೆ, ಅಲ್ಲಿನ ಸಾಮಾಜಿಕ ಮತ್ತು ಪರಿಸರದ ಸನ್ನಿವೇಶಗಳಿಗೆ ಹೊಂದಿಕೊಳ್ಳುವಂತಹ ಬದಲಾವಣೆಗಳನ್ನು ಒಳಗೊಂಡಂತಹ ಸಂರಕ್ಷಣೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ಸೂಚಿಸಬಹುದು.
ಬಾಳಿಕೆಯ ಹಾಗೂ ಸುರಕ್ಷಿತ ಭವಿಷ್ಯಕ್ಕಾಗಿ
ಇದು ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಒಂದು ವಿಶಾಲ ತಳಹದಿಯ, ಸಂಬಂಧಪಟ್ಟವರನ್ನು ಒಳಗೊಳ್ಳುವ ಪ್ರಸ್ತಾಪ. ಅದಕ್ಕೆ 1990ರಲ್ಲಿ ನಡೆದ ‘ಜನತಾ ಯೋಜನಾ ಆಂದೋಲನ’ದ ಆಶಯ ಇರಬೇಕು. ಆ ಆಂದೋಲನ ಕೇರಳದಲ್ಲಿ ರಾಜ್ಯದ ವಿತ್ತಸಚಿವ ಥಾಮಸ್ ಐಸ್ಸಾಕ್ ಅವರ ನೇತೃತ್ವದಲ್ಲಿ ನಡೆಯಿತು. ಆ ಆಂದೋಲನವನ್ನು ಹತ್ತಿಕ್ಕದೆ ಅದರ ಆಶಯವನ್ನು ಪುರುಜ್ಜೀವಗೊಳಿಸಬೇಕೆಂದು ನಾನು ಥಾಮಸ್ ಐಸ್ಸಾಕ್ ಅವರನ್ನು ಕೇಳಿಕೊಳ್ಳುತ್ತೇನೆ. ಆಗಷ್ಟೇ ಕೇರಳದ ಜನರಿಗೆ ಪ್ರಕೃತಿ ಮತ್ತು ಸಮಾಜವನ್ನು ಮತ್ತೆ ಕಟ್ಟುವುದಕ್ಕೆ ಸಾಧ್ಯ. ಆಗಷ್ಟೆ ಅವರಿಗೆ ಬಾಳಿಕೆಯ ಹಾಗೂ ಸುಸ್ಥಿರವಾದ ಭವಿಷ್ಯದ ಭರವಸೆ ಮೂಡುವುದಕ್ಕೆ ಸಾಧ್ಯ. ಕೇರಳ ಸರ್ಕಾರ ಇಂತಹ ಒಂದು ಪ್ರಗತಿಪರ ನಿಲುವು ತಳೆಯುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ. ಆಗ ಇಂದು ಕೇರಳದಲ್ಲಿ ಆದಂತಹ ದುರಂತವನ್ನು ಪೂರ್ಣ ತಪ್ಪಿಸುವುದಕ್ಕೆ ಸಾಧ್ಯವಾಗದೇ ಹೋದರೂ, ಅದರ ಪ್ರಮಾಣವನ್ನು ಕಡಿಮೆಮಾಡುವುದಕ್ಕೆ ಸಾಧ್ಯವಾಗುತ್ತದೆ. ಅದಕ್ಕೆ ಬೇಕಾದ ಉತ್ತಮ ತಯಾರಿಯನ್ನು ಮಾಡಿಕೊಳ್ಳಬಹುದು.