ಅರಿವೆಂಬ ಅವ್ವಂದಿರೆಲ್ಲರೊಳಗೆ ನನ್ನ ಅಂಬೇಡ್ಕರ್-ದು. ಸರಸ್ವತಿ

ಅಂಬೇಡ್ಕರ್ ವಿಶೇಷ

ಯಾವಾಗಿನಿಂದ ಈ ಅಂಬೇಡ್ಕರ್ ನನ್ನವರಾದರು? ವರ್ಷ, ವಯಸ್ಸು ನೆನಪಿಟ್ಟುಕೊಳ್ಳುವ ವಯಸ್ಸಿಗಿಂತ ಮುನ್ನವೇ ಇವರ ಪರಿಚಯ ಮಾಡಿದ್ದು ನನ್ನ ಅವ್ವ. ‘ಅಂಬೇಡ್ಕರ್ ಅವರು ಬರವಣಿಗೆಯ ಕೆಲಸ ಮುಗಿಸಿ ತಮ್ಮ ಸಹಾಯಕನಿಗೆ ಹೋಗಿ ಬಾ ಎಂದು ಹೇಳಿಕಳಿಸಿ ಆತ ಮರುದಿನ ಬೆಳಗ್ಗೆ ಬರುವ ಹೊತ್ತಿಗಾಗಲೇ ಸತ್ತು ಹೋಗಿದ್ದರೆಂದು, ವಿಪರೀತ ಕೆಲಸ ಮಾಡಿದ್ದರಿಂದ ಆರೋಗ್ಯ ಹಾಳಾಗಿ ಅಕಾಲಿಕವಾಗಿ ತೀರಿಕೊಂಡರೆಂದು, ಪ್ರಧಾನಿಯಾಗಲು ನೆಹರೂವಿನಷ್ಟೇ ಅರ್ಹತೆ ಇದ್ದವರೆಂದು, ಮೇಧಾವಿ ಎಂದು…. ಹೀಗೆ ಆಗೀಗ ಹೇಳಿದ್ದು ಸ್ಪಷ್ಟವಾಗಿ ನೆನಪಿಲ್ಲ.

ನನ್ನ ಅಯ್ಯ ತನ್ನ ಆತ್ಮ ಗೌರವ, ಬುದ್ಧಿವಂತಿಕೆ, ಘನತೆಯ ನಿಲುವು, ನ್ಯಾಯಪರತೆ, ನಿಷ್ಟುರವೆನಿಸುವಷ್ಟು ಪ್ರಾಮಾಣಿಕತೆ, ಕೆಲಸದಲ್ಲಿ ದಕ್ಷತೆ ಯಾರಿಗೂ ಸೊಪ್ಪು ಹಾಕದ ಆದರೆ ಎಲ್ಲರನ್ನೂ ಗೌರವಿಸುವ, ಕೋಪಿಷ್ಟರಾದರೂ ಮರುಗುವ ಗುಣಗಳ ಮೂಲಕ ಸದಾ ನನ್ನೊಳಗೆ ಅಂಬೇಡ್ಕರ್ ಅವರನ್ನು ಜೀವಂತವಾಗಿರಿಸಿದ್ದರು.

 

ಜಾತಿ, ಸೌಂದರ್ಯದ ಕಲ್ಪನೆಗಳು ಯೌವನದ ದಿನಗಳಲ್ಲಿ ಮೈ ಮನದೊಳಗೆ ಬೆಂಕಿಯಂತೆ ಹೊತ್ತಿ ಉರಿಯುವಾಗ ಆ ಬೆಂಕಿಯನ್ನು ಅಭಿಮಾನದ ಕಾವಾಗಿಸಿದ್ದು ದಲಿತ ಸಂಘರ್ಷ ಸಮಿತಿ ಕಾಣಿಸಿದ ಅಂಬೇಡ್ಕರ್. ದಲಿತರೂ ಮೇಧಾವಿಗಳೇ, ದಲಿತರೂ ಇಂಗ್ಲಿಷ್ ಮಾತನಾಡಬಲ್ಲರು, ದಲಿತರೂ ಫಾರಿನ್ ಡಿಗ್ರಿ ಪಡೆಯಬಲ್ಲರು, ದಲಿತರೂ ವಾದ ಮಾಡಿ ಗೆಲ್ಲಬಲ್ಲರು, ದಲಿತರೂ ಕಾನೂನು ಬಲ್ಲರು, ಕಾನೂನು ರಚಿಸಬಲ್ಲರು, ಆಡಳಿತ ನಡೆಸಬಲ್ಲರು…. ಹೀಗೆ ಅಬ್ಬಬ್ಬಾ ಅದೆಷ್ಟು ಅವತಾರಗಳಲ್ಲಿ ಅಂಬೇಡ್ಕರ್ ಅವರು ರಕ್ಷಾಕವಚದಂತೆ, ಗುರಾಣಿಯಂತೆ ವಾದ ಮಂಡಿಸಲು ನೆರವಿಗೆ ಬರುತ್ತಿದ್ದರು! ನಾನೇ ಫಾರಿನ್ ಡಿಗ್ರಿ ಪಡೆದಂತೆ, ನಾನೇ ಮೇಧಾವಿಯಂತೆ ಅವರು ಮಾಡಿದ್ದೆಲ್ಲವೂ ನಾನೆ ಮಾಡಿದ್ದೇನೆ ಎನ್ನುವಷ್ಟು ಅವರನ್ನು ಆವಾಹಿಸಿಕೊಂಡಿದ್ದೆ.
ಬಹುಶಃ ದೇಶದ ದಲಿತರೆಲ್ಲರೂ ಹಾಗೆ ಭಾವಿಸಿರುತ್ತಾರೆ. ಕಾಲ ಸರಿಯುತ್ತ ಗುರಾಣಿಯಂತೆ, ರಕ್ಷಾ ಕವಚದಂತೆ ಬಳಕೆಯಾಗುತ್ತಿದ್ದ ಅಂಬೇಡ್ಕರ್ ಅವರು ಎದೆಯ, ಮನದ ಆಳಕ್ಕೆ ಇಳಿದಂತೆ ಕನ್ನಡಿಯಂತೆ ನನ್ನನ್ನು ನನಗೆ ತೋರಿಸತೊಡಗಿದರು. ಅಗಾಧವಾದ ಅವರ ಓದು, ಬರವಣಿಗೆ, ವಿದ್ವತ್ತು, ತಿಳುವಳಿಕೆಯ ಕಡಲಿನೆದುರು ಹನಿಯನ್ನೂ ನನ್ನದಾಗಿಸಿಕೊಳ್ಳದೆ ಕೇವಲ ಕಡಲಿನ ವಿಸ್ತಾರವನ್ನೇ ಹೊಗಳಿಕೊಂಡು ಬದುಕಿದ್ದೇನೆ ಎನಿಸಿತು. ಅವರು ಮಾಡಿದ ಕೆಲಸ, ಚಿಂತನೆ, ಬರವಣಿಗೆ ಅದೆಷ್ಟು ಅಗಾಧವೆಂದರೆ ಅದರಲ್ಲೊಂದು ಹನಿಯನ್ನು ಬಳಸಿಕೊಂಡು ವರ್ಷಾನುಗಟ್ಟಲೆ ಇರಲಿ, ಜೀವನ ಪರ್ಯಂತ ಬದುಕಲು ಬಂಡವಾಳ ಮಾಡಿಕೊಳ್ಳಬಹುದು.

ಅಂಬೇಡ್ಕರ್ ಅವರನ್ನು ಕುರಿತ ಟೀಕೆಗಳನ್ನು ಒಳಗೊಂಡ ಅರುಣ್ ಶೌರಿಯವರ ‘ವರ್ಶಿಪ್ಪಿಂಗ್ ಫಾಲ್ಸ್ ಗಾಡ್ಸ್’ ಎಂಬ ಬೃಹತ್ ಗಾತ್ರದ ಪುಸ್ತಕ ನೆನಪಾಗುತ್ತಿದೆ. ಆ ಪುಸ್ತಕವನ್ನು ನೋಡಿ ಇಷ್ಟೊಂದು ಟೀಕೆ ಮಾಡುವಷ್ಟು ಕೆಲಸಗಳನ್ನು ಅಂಬೇಡ್ಕರ್ ಮಾಡಿದ್ದಾರೆಂದು ಹೆಮ್ಮೆಪಟ್ಟಿದ್ದೆ. ಅವರನ್ನು ಗಂಭೀರವಾಗಿ ಅರಿಯಲು ಪ್ರಯತ್ನಿಸಿದಂತೆ ಆಪ್ತ ಬಂಧುವಾದರು. ಮಹಿಳೆಯರ ಪ್ರಗತಿಯಾದರೆ ಮಾತ್ರ ಸಮುದಾಯದ ಪ್ರಗತಿ ಸಾಧ್ಯವೆಂಬುದು, ಮಹಿಳೆಯರು ಯಾರದೋ ನೆರಳಗಾದೆ ತಮ್ಮ ಸಾಮರ್ಥ್ಯದ ಮೇಲೆ ಚಳುವಳಿಯ ಭಾಗವಾಗಬೇಕು, ಗಂಡಹೆಂಡಿರು ಮಿತ್ರರಂತಿರಬೇಕು ಎಂಬುದು ಅಂಬೇಡ್ಕರ್ ಅವರ ನಂಬಿಕೆಯಾಗಿತ್ತು.

 

ಜಾತಿ ಸೂಚಕ ಧಿರಿಸು, ಆಭರಣಗಳನ್ನು ತೊಡಬೇಡಿ ಎಂದು ದಲಿತ ಮಹಿಳೆಯರಿಗೆ ಹೇಳುತ್ತಿದ್ದ ಅಂಬೇಡ್ಕರ್ ಒಂದು ಸಭೆಗೆ ಸ್ವಚ್ಚವಾದ ಉಡುಪು ಧರಿಸಿ ಬಂದಿದ್ದ ಮಹಿಳೆಯರನ್ನು ನೋಡಿ ಕಣ್ಣೀರು ಹಾಕಿದ್ದು; ಹುಟ್ಟಿ ಹುಟ್ಟಿ ಸಾಯತ್ತಿದ್ದ ಮಕ್ಕಳನ್ನು ನೆನೆದು ದುಃಖ ತಡೆಯಲಾರದೆ ಒಂಟಿಯಾಗಿರಬೇಕೆನಿಸಿ ಯಾರಿಗೂ ತಿಳಿಯದಂತೆ ಎಲ್ಲಿಯೋ ಹೋಗಿ ಗೆಳೆಯರೊಬ್ಬರಿಗೆ ಮಾತ್ರ ನಾನಿಂತ ಕಡೆ ಇದ್ದೇನೆ ‘ಮಕ್ಕಳಿಲ್ಲದ ನನ್ನ ಬದುಕು ಹೂವಿಲ್ಲದ ಉದ್ಯಾನದಂತಾಗಿದೆ’ ಎಂದು ಪತ್ರ ಬರೆದದ್ದು, ತಾವು ಬರೆದ ಪುಸ್ತಕವನ್ನು ತಮ್ಮ ಹೆಂಡತಿ ರಮಾಬಾಯಿಯವರಿಗೆ ‘ರಾಮೂ ನೆನಪಿಗೆ ಅರ್ಪಣೆ… ಆಕೆಯ ಹೃದಯವಂತಿಕೆ, ಉದಾತ್ತ ಮನಸು ಮತ್ತು ಶುದ್ಧ ಗುಣಗಳಿಗೆ ಹಾಗೂ ಸ್ನೇಹಿತರೇ ಇಲ್ಲದೆ ಚಿಂತೆ ಮತ್ತು ಅಭಾವವೇ ನಮ್ಮನ್ನು ಕವಿದಿದ್ದ ದಿನಗಳಲ್ಲಿ ಎದೆಗುಂದದೆ, ನನ್ನೊಂದಿಗೆ ಸಂಕಟಪಡಲು ಸದಾ ಸಿದ್ಧಳಿರುತ್ತಿದ್ದಕ್ಕೆ ಗೌರವಾರ್ಥವಾಗಿ’ ಎಂದು ಅರ್ಪಿಸಿದ್ದು, ಪ್ರಖರ ವೈಚಾರಿಕ ವ್ಯಕ್ತಿಯೊಳಗಿನ ಹೆಣ್ಣಿನ ಅಂತಃಕರಣವನ್ನು ಪರಿಚಯಿಸಿತು. ಪುಣೆಯ ಪ್ರೊಫೆಸರ್ ಒಬ್ಬರು ‘ನಮ್ಮ ಕಾನೂನು ಕಾಲೇಜಿನಲ್ಲಿ ಅಂಬೇಡ್ಕರ್ ನುಡಿಸುತ್ತಿದ್ದ ವಯೋಲಿನ್ ಇಟ್ಟಿದ್ದೇವೆ’ ಎಂದು ಹೇಳಿ ಆತನೊಳಗಿನ ಸಂಗೀತಗಾರನನ್ನು ಇತ್ತೀಚೆಗೆ ಪರಿಚಯಿಸಿದರು.

ವೈಚಾರಿಕತೆ ಮತ್ತು ಅಂತಃಕರಣಗಳೆರಡರ ಉತ್ತುಂಗವಾದ, ನಿರಂತರ ಪರಿವರ್ತನೆಯೊಂದೆ ಸತ್ಯ, ಅರಿವೇ ಗುರುವೆಂದ ಬುದ್ಧನ ಸಮಚಿತ್ತದ ಮಧ್ಯಮ ಮಾರ್ಗಕ್ಕೆ ಕೈಕಂಬವಾಗಿ ಅಂಬೇಡ್ಕರ್ ಪರಿಚಯವಾದ ಮೇಲೆ ಆ ದಾರಿಯಲ್ಲಿ ಹೆಜ್ಜೆ ಇರಿಸಿ ತಟ್ಟಾಡುತ್ತ ಆ ದಾರಿಯಿಂದ ನಾನೆಷ್ಟು ದೂರದಲ್ಲಿದ್ದೇನೆಂದು ಅರಿಯುತ್ತಿರುವ ಕಾಲದಲ್ಲಿ ಮೊನ್ನೆ ಅರನಕಟ್ಟೆ ರಂಗನಾಥ ತನ್ನ ಕವಿತೆಯ ಮೂಲಕ ಅವ್ವಅಂಬೇಡ್ಕರನ್ನು ಪರಿಚಯಸಿದರು. ಅರಿವೆಂಬ ಅವ್ವಂದಿರೆಲ್ಲರೊಳಗೆ ನನ್ನ ಅಂಬೇಡ್ಕರ್ ಕಾಣಲಾಗಿ ಸೋಜಿಗದ ಆನಂದವನ್ನು ಅನುಭವಿಸುತ್ತಿದ್ದೇನೆ.