`ಅನರ್ಹರ ಠೇವಣಿ ಹೋಗಲಿ; ಮತದಾರರ ಮಾನ ಉಳಿಯಲಿ’-ದೇವನೂರ ಮಹಾದೇವ

[ಅನರ್ಹ ಶಾಸಕರ ವಿರುದ್ಧ ಮೈಸೂರಿನಲ್ಲಿ  27.11.2019ರಂದು ಸ್ವರಾಜ್ ಇಂಡಿಯಾ ಪಕ್ಷದಿಂದ ನಡೆದ ಸುದ್ದಿಗೋಷ್ಠಿಯಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಒಟ್ಟಾರೆ ಬರಹ ರೂಪ ಇಲ್ಲಿದೆ.]

 

 

ಇಂದಿನ ಪತ್ರಿಕೆಗಳಲ್ಲಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಫಡ್ನವೀಸ್ ಹೇಳಿಕೆಯೊಂದು ಪ್ರಕಟವಾಗಿದೆ- “ಶಾಸಕರನ್ನು ಖರೀದಿ ಮಾಡದೇ ಇರಲು ಮೊದಲೇ ನಿರ್ಧರಿಸಿದ್ದೆವು. ಎನ್‍ಸಿಪಿ ಬೆಂಬಲ ಪಡೆದು ಸರ್ಕಾರ ರಚಿಸಿದೆವು. ಆಮೇಲೆ ಅಜಿತ್ ಪವಾರ್ ಬೆಂಬಲ ನೀಡಲಿಲ್ಲ. ಫಡ್ನವೀಸ್ ಸರ್ಕಾರ ರಚಿಸಲು ಆಗಲಿಲ್ಲ”. ಇದರ ಅರ್ಥ ಏನೆಂದರೆ ಶಾಸಕರು ಅಂದರೆ ಖರೀದಿ ವಸ್ತುಗಳು ಅಂತ.

ಇಂಥಹ ಕೃತ್ಯ ಎಸಗುವುದನ್ನು ಅನೈತಿಕ ಎನ್ನುತ್ತಾರೆ, ಮನೆಮುರುಕ ಅಂತಾರೆ. ಇನ್ನೂ ಏನೇನೋ ಅನ್ನುತ್ತಾರೆ. ದೇಶವನ್ನು ಆಳ್ವಿಕೆ ನಡೆಸುತ್ತಿರುವ ಪಕ್ಷವೇ ಇಂದು ಇಂಥಹ ಕೃತ್ಯಗಳನ್ನು ಎಸಗುತ್ತಿದೆ. ಇಂಥವರ ಕೈಗೆ ದೇಶ ಕೊಟ್ಟರೆ ಆ ದೇಶವನ್ನು ದೇವರೂ ಕಾಪಾಡಲಾರನೇನೊ. ಅಂಥಹ ಪರಿಸ್ಥಿತಿ ಇಂದು ಭಾರತದ ಪ್ರಜೆಗಳಿಗೆ ವಕ್ಕರಿಸಿದೆ.

ಈಗ, ಫಡ್ನವೀಸ್ ಮಾತುಗಳನ್ನು ಕರ್ನಾಟಕದ ಹಿನ್ನೆಲೆಯಲ್ಲಿ ನೋಡುವುದಾದರೆ, ಏನರ್ಥ ಬರುತ್ತದೆ? ಕರ್ನಾಟಕದಲ್ಲಿ ಶಾಸಕರನ್ನು ಖರೀದಿ ಮಾಡಿದರು, ಬಿಜೆಪಿ ಸರ್ಕಾರ ಬಂತು ಅಂತ ಅರ್ಥತಾನೆ? ಇದು ಫಡ್ನವೀಸ್ ಮಹಾಶಯರಿಗೆ ಚೆನ್ನಾಗಿ ಗೊತ್ತು. ಕರ್ನಾಟಕದ ಶಾಸಕರನ್ನು ಕಾಯ್ದುಕೊಂಡಿದ್ದು ಈತನೇ ತಾನೇ?

ಈಗ ಈ ಬಿಕರಿ ಶಾಸಕರಿಂದಾಗಿ ಕರ್ನಾಟಕದಲ್ಲಿ ಉಪಚುನಾವಣೆ ನಮ್ಮ ಮುಂದಿದೆ. ಈ ಬಿಕರಿ ಶಾಸಕರಿಗೆ, ದ್ರೋಹಿ ಅನ್ನುತ್ತಾರೆ. ನಮಕ್ ಹರಾಮ್ ಅನ್ನುತ್ತಾರೆ ನಮ್ಮ ಹಳ್ಳಿ ಕಡೆ ಒಂದು ಬೈಗುಳ ಇದೆ. ಅದು ನನಗೆ ಗೊತ್ತಿಲ್ಲ ಅಂತಲ್ಲ, ಗೊತ್ತಿದೆ. ಆದರೆ ಅದನ್ನು ಹೇಳಲು ಮನಸ್ಸಾಗುತ್ತಿಲ್ಲ.

ಆಯ್ತು, ನಾವೀಗ ಗಂಭೀರವಾಗಿ ಚಿಂತಿಸಬೇಕಾಗಿದೆ. ಯಾಕೆಂದರೆ ಈಗ ಅನರ್ಹ ಶಾಸಕರು ತಮ್ಮನ್ನು ಮಾರಾಟ ಮಾಡಿಕೊಂಡಿದ್ದು ತಮ್ಮೊಬ್ಬರನ್ನೇ ಅಲ್ಲ. ಯಾಕೆಂದರೆ ಇವರು ಶಾಸಕರಾಗಲು ಕಾರಣ ಮತದಾರರ ಮತಗಳು ಕಾರಣ. ಅಂದರೆ ಈ ಹೊಣೆಗೇಡಿಗಳು ನಿಜವಾದ ಅರ್ಥದಲ್ಲಿ ಮಾಡಿದ್ದಾದರೂ ಏನನ್ನು? ಮತದಾರರನ್ನೇ ಮಾರಿಬಿಟ್ಟರು! ರಾಜಕಾರಣ, ಜನತಂತ್ರ ವ್ಯವಸ್ಥೆಯನ್ನೆ ಗಲೀಜು ಮಾಡಿಬಿಟ್ಟರು. ಇದನ್ನು ಗಂಭೀರವಾಗಿ ಚಿಂತಿಸಬೇಕಾಗಿದೆ. ಈಗ ಈ ಕುಬ್ಜ ರಾಜಕಾರಣಿಗಳು ಮತ್ತೆ ಚುನಾವಣೆಗೆ ಸ್ಪರ್ಧಿಸಿ ಮತದಾರರ ಮುಂದೆ ಮತ ಯಾಚಿಸುತ್ತಿದ್ದಾರೆ. ಇದನ್ನು ಧೈರ್ಯ ಅನ್ನಬೇಕೋ ಭಂಡತನ ಅನ್ನಬೇಕೋ ಅಥವ ನಿರ್ಲಜ್ಜ ಅನ್ನಬೇಕೋ ತಿಳಿಯದಾಗಿದೆ. ಒಟ್ಟಿನಲ್ಲಿ, ರಾಜಕಾರಣಿಗಳಿಗೆ ಚೆಲ್ಲಾಟ, ಪ್ರಜೆಗಳಿಗೆ ಪ್ರಾಣ ಸಂಕಟ ಎಂಬಂತಾಗಿದೆ.

ಈಗ ಮತದಾರರ ಮುಂದೆ ಉಳಿದಿರುವುದು ಒಂದೇ ದಾರಿ- ಈ ಅನರ್ಹ ಶಾಸಕರಿಗೆ ಠೇವಣಿಯೂ ಸಿಗದಂತೆ ಮಾಡಿ ಮತದಾರರು ತಮ್ಮ ಮಾನ ಮರ್ಯಾದೆ ಕಾಪಾಡಿಕೊಳ್ಳಬೇಕಿದೆ. ಈ ಉಪಚುನಾವಣೆಗೆ ಒಂದೇ ಘೋಷಣೆ- `ಅನರ್ಹರ ಠೇವಣಿ ಹೋಗಲಿ, ಮತದಾರರ ಮಾನ ಉಳಿಯಲಿ’

ರಾಜ್ಯ ಮುಳುಗಡೆಯಾದರೂ ತಮಗೇನೂ ಸಂಬಂಧವಿಲ್ಲದವರಂತೆ ಜನಪ್ರತಿನಿಧಿಗಳು ಇರುವಾಗ ಹಾಗೂ ಜನತಂತ್ರ ವ್ಯವಸ್ಥೆಯೇ ಬಿಕ್ಕಟ್ಟಿನಲ್ಲಿರುವ ಈ ಸಂದರ್ಭದಲ್ಲಿ ಸ್ವರಾಜ್ ಇಂಡಿಯಾ ಪಕ್ಷವು ಹೊಸ ದಾರಿಗಳಿಗಾಗಿ ಹುಡುಕುತ್ತಿದೆ. ರಾಜ್ಯದಲ್ಲಿ ಮುಂಬರುವ ತಾಲ್ಲೂಕು ಜಿಲ್ಲಾ ಪಂಚಾಯ್ತ್ ಚುನಾವಣೆಯಲ್ಲಿ ನಾಡು ಕಟ್ಟುವ ರಾಜಕಾರಣಕ್ಕೆ ವೇದಿಕೆ ಸಿದ್ಧಪಡಿಸುತ್ತಿದೆ. ‘ಹೊಸ ರಾಜಕಾರಣಕ್ಕೆ ಹೊಸ ಮುಖಗಳು’ ಎಂಬ ಆಲೋಚನೆಯಲ್ಲಿ ಹುಡುಕಾಟ ನಡೆಸಲಿದೆ. ಯುವಕರು, ಮಹಿಳೆಯರಿಗೆ ಆದ್ಯತೆ, ಅಷ್ಟೇ ಅಲ್ಲ, ನಾಡಿನ ಎಲ್ಲಾ ಸಮಾಜಮುಖಿ ಸಂಘಟನೆಗಳನ್ನೂ ಒಳಗೊಂಡು ಹಂಚಿಕೊಂಡು ಹೆಜ್ಜೆ ಹಾಕುವ ಪ್ರಯತ್ನವೂ ನಡೆದಿದೆ. ಈ ನಾಡು ಕಟ್ಟುವ ರಾಜಕಾರಣಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ವಿನಂತಿಸುವೆ.