ಅನಂತಕುಮಾರ್ ಹೆಗಡೆ ಸಾಹೇಬರಿಗೆ ಒಂದು ಬಹಿರಂಗ ಪತ್ರ-ದೇವನೂರ ಮಹಾದೇವ

[ಕೇಂದ್ರ ಕೌಶಲ ಅಭಿವೃದ್ಧಿ ಸಚಿವರಾಗಿದ್ದ ಅನಂತಕುಮಾರ್ ಹೆಗಡೆ 24.12.2017 ರಂದು ಕೊಪ್ಪಳದ ಕುಕನೂರಿನಲ್ಲಿ ನಡೆದ ಯುವಜನ ಮೇಳದಲ್ಲಿ ಆಡಿದ ವಿವಾದಾತ್ಮಕ ಮಾತುಗಳ ಹಿನ್ನೆಲೆಯಲ್ಲಿ ದೇವನೂರ ಮಹಾದೇವ ಅವರು, ಅವರಿಗೆ ಒಂದು ಬಹಿರಂಗ ಪತ್ರ ಬರೆದಿದ್ದರು. ಅದು 26.12.2017ರ thestate onlineಪತ್ರಿಕೆಯ ಮಹಾದೇವರ ಮೊದಲ ಅಂಕಣ ”ಮೂಡಲ್ಮಾತು”ವಿನಲ್ಲೂ ಪ್ರಕಟವಾಗಿತ್ತು.]

ದೇವನೂರ ಮಹಾದೇವ
ಸ್ವರಾಜ್ ಇಂಡಿಯಾ ರಾಷ್ಟ್ರೀಯ ಮಂಡಳಿ ಸದಸ್ಯ
ಮನೆ.ನಂ. 53,  11ನೇ ಕ್ರಾಸ್, ನವಿಲು ರಸ್ತೆ,
ಕುವೆಂಪುನಗರ, ಮೈಸೂರು-23

ಕೇಂದ್ರ  ಸಚಿವ ಅನಂತಕುಮಾರ್ ಹೆಗಡೆಯವರೇ, ಯಲಬುರ್ಗ ತಾಲೂಕು ಕುಕನೂರಿನಲ್ಲಿ ತಾವು ಆಡಿದ ಮಾತುಗಳನ್ನು  ಕೇಳಿದರೆ ಬೆಚ್ಚಿಬೀಳುವಂತಾಗುತ್ತದೆ. “ಅಪ್ಪ ಅಮ್ಮನ ಗುರುತು ಇಲ್ಲದಿರುವವರು ಜಾತ್ಯಾತೀತರು ಎಂದು ಕರೆಸಿಕೊಳ್ಳುತ್ತಿದ್ದಾರೆ’’ ಎಂದು ತಾವು ಲೇವಡಿ ಮಾಡಿದ್ದೀರ! ಈಗ ನಾವು ತಮಗೆ ತಮ್ಮ ಅಪ್ಪ ಅಮ್ಮನ ಗುರುತನ್ನು ತಿಳಿಸಿಕೊಡಬೇಕಾಗಿದೆ- ದ್ವೇಷವೇ  ನಿಮ್ಮ ತಂದೆ; ಅಸಹನೆಯೇ ನಿಮ್ಮ ತಾಯಿ; ಭ್ರಮೆಯೇ ನಿಮ್ಮ ಮೂಲ ಪುರುಷ; ಮಿಥ್ಯಾ ಎಂಬುದೇ ತಮ್ಮ ಜ್ಞಾನ ಸಂಪತ್ತು. ಇಷ್ಟು ಸಾಕೆನ್ನಿಸುತ್ತದೆ.

ಈಗಲೂ ಆಗಾಗ ನೆನಪಾಗುತ್ತ ನನಗೆ ನೋವನ್ನುಂಟು ಮಾಡುವ ಸಂಗತಿ ಎಂದರೆ- ಬಿಜೆಪಿಯ  ದೊಡ್ಡ ನಾಯಕ ವಾಜಪೇಯಿ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ, ಹಾಗೇ   ಎನ್‍ಡಿಎಗೆ  ಸೇರಿದ ಸಮಾಜವಾದಿ ಹಿನ್ನೆಲೆಯ ಜಾರ್ಜಫರ್ನಾಂಡೀಸ್ ಕೂಡ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಇಂಥವರು ಈಗ ತಮ್ಮ ಪಕ್ಷದಲ್ಲಿ ಸಕ್ರಿಯವಾಗಿ ಇಲ್ಲದ ಕಾರಣವಾಗಿ ಹಾಲಿ ಬಿಜೆಪಿ ಹಾಗೂ ಎನ್‍ಡಿಎಗಳು ಪ್ರಜ್ಞಾಹೀನ ಪುಂಡುಪೋಕರಿ ಮಾತುಗಳನ್ನು ಉದುರಿಸುತ್ತಿದ್ದಾರೇನೋ  ಎನ್ನಿಸಿಬಿಡುತ್ತದೆ.

ಆಮೇಲೆ ತಮ್ಮ ಇನ್ನೊಂದು ಮಾತು- “ಹುಟ್ಟಿದಾಗ ಪ್ರತಿಯೊಬ್ಬ ಮನುಷ್ಯನೂ ಪ್ರಾಣಿಯೇ. ಆದರೆ ಅವನು ಮಾಡುವ ಕೆಲಸ ಕಾರ್ಯಗಳಿಂದ ಮನುಷ್ಯನಾಗಿ ಬದಲಾಗುತ್ತಾನೆ’’ ಎನ್ನುತ್ತೀರಿ. ತಮ್ಮ ಕೇಸಲ್ಲಿ ಇದು ಯಾಕೊ ಉಲ್ಟಾ ಅನ್ನಿಸುತ್ತದೆ. ತಮ್ಮ ಗದ್ದಲದ ನಡುವೆಯೂ ಸ್ವಲ್ಪ ಕುವೆಂಪು ಅವರ, “ಹುಟ್ಟುತ್ತಾ ವಿಶ್ವಮಾನವ’’ ಪರಿಕಲ್ಪನೆಯನ್ನು ಗಮನಿಸಿ ಎಂದು ವಿನಂತಿಸುವೆ.

ಹಾಗೆಯೇ, ತಮ್ಮ ಚರಿತ್ರೆಯ ಜ್ಞಾನವಂತೂ ಚಾರಿತ್ರ್ಯಹೀನವಾಗಿದೆ. ‘ಇತ್ತೀಚಿನ ದಿನಗಳಲ್ಲಿ ಜಾತಿ ಎನ್ನುವ ವಿಕೃತಿ ಬೆಳೆದಿದೆ’’ಎನ್ನುವಿರಿ. ಗಮನಿಸಿ, “ಇತ್ತೀಚೆಗೆ’’ ಅನ್ನುತ್ತೀರಿ. ಹಾಗಾದರೆ ತಮಗೆ ಯಾವ ಕಾಲದ ಜಾತಿ ಬೇಕು? ಪೇಶ್ವೇ ಕಾಲದ್ದೇ ? ಸಿಪಾಯಿ ದಂಗೆಯ ಪೇಶ್ವೆ ಮತ್ತು ಬ್ರಿಟೀಷರ ಯುದ್ಧದಲ್ಲಿ ಬ್ರಿಟೀಷರೇನಾದರೂ  ಸೋತರೆ ಪೇಶ್ವೆಯ ಆಡಳಿತವು ತಳಸಮುದಾಯಕ್ಕೆ ನರಕ ಕಾಣಿಸಿಬಿಡುತ್ತದೆ ಎಂದು ಜ್ಯೋತಿ ಬಾಫುಲೆಯಾದಿಯಾಗಿ ತಳಸಮುದಾಯಗಳ ಪ್ರಜ್ಞಾವಂತರು ಕಂಗಾಲಾಗಿದ್ದರು. ಇದೇನು? ಇದು ಯಾಕೆ? ಎಂದು ತಾವು ಅರ್ಥ ಮಾಡಿಕೊಂಡರೆ ತಮಗೆ ಭಾರತ ಅರ್ಥವಾಗುತ್ತದೆ.

ಮುಂದೆ ತಾವು ರಣರಂಗದಲ್ಲಿ  ಠೇಂಕರಿಸುವಂತೆ – “ಸಂವಿಧಾನ ಬದಲಾಯಿಸುತ್ತೇವೆ… ಅದಕ್ಕೇ ನಾವು ಬಂದಿರುವುದು’’ ಎನ್ನುತ್ತೀರಿ. ತಮ್ಮಂಥವರ ಕಣ್ಣಿಗೇನಾದರೂ ಸಂವಿಧಾನ ರಚನಾ ಕಾರ್ಯ ಆಗ ಸಿಕ್ಕಿಬಿಟ್ಟಿದ್ದರೆ ಭ್ರಮಾಧೀನರಾದ ತಮ್ಮ ಪೂರ್ವಿಕರು ನರಕ ಸೃಷ್ಟಿಸಿ ಅದನ್ನೇ ಸ್ವರ್ಗ ಅಂದು ಬಿಡುತ್ತಿದ್ದರೇನೋ. ಸಂವಿಧಾನ ರಚನಾ ಕಾರ್ಯ ಡಾ.ಅಂಬೇಡ್ಕರ ಅವರ ಕೈಗೆ ಸಿಕ್ಕಿ ಭಾರತಮಾತೆ ಬಚಾವಾದಳು. ಸಂವಿಧಾನದ ಪ್ರಿಯಾಂಬಲ್  ಕಡೆಗೆ ಸಂವಿಧಾನದ ತಿದ್ದುಪಡಿಗಳು ಚಲಿಸುತ್ತ ನಡೆಯಬೇಕಾಗಿದೆ. ನಮ್ಮ ಸಂಸತ್ ಸದಸ್ಯರಾದ ತಾವು ಇದನ್ನು ನೆನಪಿನಲ್ಲಿಟ್ಟುಕೊಂಡರೆ ಒಳ್ಳೆಯದು.

ಇತ್ತೀಚೆಗೆ ಒಂದು ಸುದ್ದಿ ದಟ್ಟವಾಗಿ ಹರಿದಾಡುತ್ತಿದೆ. ಬಿಜೆಪಿ ಅಕಸ್ಮಾತ್ ಅಧಿಕಾರಕ್ಕೆ ಬಂದರೆ ಅಡ್ಡ ವಿಭೂತಿಯ ಯಡಿಯೂರಪ್ಪನವರಿಗೆ ಮೂರು ನಾಮ ಹಾಕಿ,  ವೈಷ್ಣವರನ್ನಾಗಿಸಿ ಶಂಕು-ಜಾಗಟೆ ಹಿಡಿಸುತ್ತಾರೆ, ಅನಂತಕುಮಾರ್ ಹೆಗಡೆಯವರೇ  ಮುಖ್ಯಮಂತ್ರಿ ಆಗುತ್ತಾರೆ ಎನ್ನುತ್ತದೆ ಆ ಸುದ್ದಿ. ಬಿಜೆಪಿಯ ಡೆಲ್ಲಿ-ನಾಗಪುರ ಲಗಾಮೀ ರಾಜಕಾರಣ ನೋಡಿದರೆ ಇದು ಸಂಭವಿಸಲೂಬಹುದು. ಈ ರೀತಿ ಏನಾದರೂ ಆದರೆ ತಮ್ಮಂಥವರು ಕರ್ನಾಟಕವನ್ನು ಸ್ಮಶಾನ ಮಾಡಿಬಿಡುತ್ತೀರಿ ಎಂಬ ಭೀತಿ ಉಂಟಾಗುತ್ತದೆ. ಯಡಿಯೂರಪ್ಪನವರೇ ಎಷ್ಟೋ ವಾಸಿ ಅನ್ನಿಸಿಬಿಡುತ್ತಾರೆ. ಇಂಥಾದರೆ, ಯಾರಾದರೂ ಬಂದುಕೊಳ್ಳಲಿ ಬಿಜೆಪಿಗೆ ಠೇವಣಿ ಕಳೆಯೋಣ ಎಂಬಲ್ಲಿಗೆ ಕರ್ನಾಟಕದ ವಿವೇಕ-ವಿವೇಚನೆ ಇರುವ ಮತದಾರ ನಿರ್ಧರಿಸುತ್ತಾನೆ. ನನಗೆ ನಂಬಿಕೆ ಇದೆ, ಯಾಕೆಂದರೆ ನಮ್ಮ ಪುರಾಣಗಳು ಚರಿತ್ರೆಯ  ಗರ್ವಭಂಗ ಮಾಡುತ್ತಲೇ ಬಂದಿವೆ.

ಕೊನೆಯಾದಾಗಿ ತಮಗೊಂದು ಕಿವಿಮಾತು: ಕುವೆಂಪು ಅವರ  ವೈಚಾರಿಕತೆಗೆ ತತ್ತರಿಸಿದ ಧರ್ಮಾಂಧರು ತುಂಬಾ ನೀಚವಾಗಿ ಪ್ರತಿಕ್ರಿಯಿಸುತ್ತಿರುತ್ತಾರೆ. ಕುವೆಂಪು ಅಂಥದ್ದನ್ನೆಲ್ಲ ನಿರ್ಲಕ್ಷಿಸಿ  ಹೇಳುತ್ತಾರೆ- “ಕುಸ್ತಿ ಅಖಾಡಕ್ಕೆ ಬರುವವರು ಕನಿಷ್ಠ ಲಂಗೋಟಿ ಹಾಕಿ ಬರಬೇಕು…ಲಂಗೋಟಿ ಹಾಕದೆ ಅಖಾಡಕ್ಕೆ ಬರುವವರ ಜೊತೆ ನಾನು ಕುಸ್ತಿ ಆಡಲಾರೆ” ಎಂದು. ಕುವೆಂಪು ಅವರ ಈ ಮಾತನ್ನು ತಾವು ಮನನ ಮಾಡಿಕೊಳ್ಳಿ ಎಂದು ವಿನಂತಿಸುವೆ. ಬೀದಿಯನ್ನೇ ಅಖಾಡ ಮಾಡಿಕೊಳ್ಳುವ ತಮ್ಮ ಮತ್ತು ತಮ್ಮಂಥವರ ಮಾನಮರ್ಯಾದೆ ಆಗ ಸ್ವಲ್ಪವಾದರೂ ಉಳಿಯಲೂಬಹುದು.

ಸ್ವರಾಜ್ ಇಂಡಿಯಾದ ಅಧ್ಯಕ್ಷರಾದ ಯೋಗೇಂದ್ರ ಯಾದವ್ ಅವರು ಚರ್ಚಿಸುತ್ತಾ- “ಸೆಕ್ಯುಲರಿಸಂಗೆ ಅನುವಾದ, ಭಾರತೀಯ ಭಾಷೆಗಳಲ್ಲಿ ಯಾವುದೂ ಸರಿಯಾಗಿಲ್ಲ. ಅನುವಾದ ಮಾಡದೆ ನಮ್ಮೊಳಗಿಂದಲೇ ಒಂದು ಪದವನ್ನು ಇದಕ್ಕೆ ಸಂವಾದಿಯಾಗಿ ಹುಡುಕಬೇಕಿದೆ. ಭಾರತದಲ್ಲಿ ಸಾಮಾನ್ಯವಾಗಿ ಧರ್ಮವನ್ನು ಸ್ವಭಾವ (Nature) ಎಂದೇ ಪರಿಗಣಿಸಿ (ರಾಜಧರ್ಮ, ಪುತ್ರಧರ್ಮ ಇತ್ಯಾದಿ) ಪದೋತ್ಪತ್ತಿಯಾಗುತ್ತದೆ. ಇದರ ಸ್ಪಿರಿಟ್ ಹಿಡಿದು  ನೋಡಿ’’ ಎಂದಿದ್ದರು.  ಕೊಳಕನ್ನು ಹೀರಿಕೊಂಡು ಸಸ್ಯಗಳು ಫಲಪುಷ್ಪ ಕೊಡುವಂತೆ ಹೆಗಡೆಯವರ ವಾಕ್  ಕೊಳಕನ್ನು ರೂಪಾಂತರಿಸಿಕೊಂಡು ಸೆಕ್ಯುಲರಿಸಂಗೆ ಒಂದು ಪದ ಹುಟ್ಟಿತು. ಅದು- “ಸಹನಾಧರ್ಮ’’(Religion of Tolerance). ಈ ಸಹನಾಧರ್ಮ ಆಯಾಯ ಧರ್ಮದೊಳಗೂ ಇರಬೇಕು, ಹಾಗೇ ಧರ್ಮ ಧರ್ಮಗಳ ನಡುವೆಯೂ ಇರಬೇಕು. ಈ ನುಡಿ ಹುಟ್ಟಿಗೆ ಕಾರಣರಾದ ಅನಂತಕುಮಾರ್ ಹೆಗಡೆಯವರಿಗೆ ಕೃತಜ್ಞತೆಗಳು.

ದಿನಾಂಕ: 26-12-17
ಸ್ಥಳ : ಮೈಸೂರು.

(ದೇವನೂರ ಮಹಾದೇವ)