ಆಗಬೇಕಾದ್ದು ಕಸಿ ಮಾಡುವ ಪ್ರಯತ್ನ- ದೇವನೂರ ಮಹಾದೇವ

[ಡಿಸೆಂಬರ್ 1997ರ ‘ಇಬ್ಬನಿ’ ವಾರ್ಷಿಕ ವಿಶೇಷ ಸಂಚಿಕೆಯಲ್ಲಿ ಪ್ರಕಟಿತ ದೇವನೂರ ಮಹಾದೇವರ ಈ ಸಂದರ್ಶನವನ್ನು ಬಾಬುರಾಜ್ ಪಿ.ಪಿ. ಮತ್ತು ಲತಾ ಮೈಸೂರು ಮಾಡಿದ್ದಾರೆ. ಈ ಸಂದರ್ಶನವು ಮುಟ್ಟಿಸಿಕೊಂಡವರು ಕೃತಿಯ, ದಲಿತ ಸಂಸ್ಕೃತಿ ಕೆಲ ನೋಟಗಳು-ವಿಭಾಗದಲ್ಲಿ ದಾಖಲಾಗಿದೆ. ಈ ಸಂದರ್ಶನವನ್ನು ಹುಡುಕಿ ನಮ್ಮ ಬನವಾಸಿಗೆ ಕಳಿಸಿದ ಉಪನ್ಯಾಸಕರಾದ ಆರ್.ಶ್ರೀಧರ್ ಅವರಿಗೆ ನಮ್ಮ ಹೃದಯಪೂರ್ವಕ ಧನ್ಯವಾದಗಳು- ಬನವಾಸಿಗರು]

ಪ್ರ- ನೀವು ದಲಿತ ಸಂಘರ್ಷ ಸಮಿತಿಯಿಂದ ಹೊರಗಡೆ ಹೋಗಿದ್ದಿರಿ: ಈಗ ಮತ್ತೆ ಹಿಂದಿರುಗಿದ್ದೀರಿ ಕಾರಣವೇನು?
ದೇ.ಮ- ನಾನು ಹೊರಗಡೆ ಹೋಗಿರಲಿಲ್ಲ: ಸುಮ್ಮನೆ ಇದ್ದೆ. ಸುಮ್ಮನೆ ಇರುವುದು ಎಂದರೆ ಹೊರಗಡೆ ಹೋದ ಹಾಗೆ ಅಂದಲ್ಲ. ದ.ಸಂ.ಸ.ಗೆ ಎಷ್ಟೇ ಮಿತಿಗಳಿದ್ದರೂ ಅದು ಉಳಿಯಬೇಕು ಅನ್ನಿಸಿತು. ಇಂದೂ ಕೂಡಾ ಹಳ್ಳಿಗಳಲ್ಲಿ ದ.ಸಂ.ಸ ಅಂದರೆ ಭಾವನಾತ್ಮಕವಾದ ಒಂದು ಆಸರೆಯಾಗಿದೆ. ಆಸರೆ ಅಂದರೆ ಒಂದು ರಕ್ಷಣೆಯ ಥರಾ ಹಳ್ಳಿಗಳಲ್ಲಿ ದೌರ್ಜನ್ಯವನ್ನು ಕಡಿಮೆ ಮಾಡುತ್ತದೆ. ಅದರಿಂದಾಗಿ ದಸಂಸ ಉಳೀಬೇಕು ಅದಕ್ಕೆ ನಾನೇ ಕೇಳ್ಕೊಂಡು ಸಾಂಸ್ಕೃತಿಕ ಸಂಚಾಲಕನಾದೆ.
ಪ್ರ- ದ.ಸಂ.ಸ ಈಗ ಹೊಸ ಶಕ್ತಿಯಾಗಿ ಹೊರಹೊಮ್ಮುತ್ತಿದೆಯೇ?
ದೇ.ಮ-
 ದ.ಸಂ.ಸ ತನ್ನ ಪೊರೆ ಕಳಚೋ ಕೆಲಸ ಮಾಡಬೇಕು. ಹೊಸ ಶಕ್ತಿಗಿಂತ ಹೊಸ ಹುಟ್ಟು ಪಡೀಬೇಕು. ಇದಕ್ಕಾಗೇ ಮೂರು ಪುಸ್ತಕಗಳನ್ನು ಮುಂದಿಟ್ಟುಕೊಂಡು ಹಳ್ಳಿಹಳ್ಳಿಗೆ ಜಾಥಾ ಹೋಗಬೇಕೆಂದಿದ್ದೇವೆ. ಪ್ರೀತಿ, ಸಮಾನತೆ ಸಾರಿದ, ತಾರತಮ್ಯ ಬೇಡ ಎಂದ ಬುದ್ಧನನ್ನು ನಾವು ಓಡ್ಸಿದ್ವಲ್ಲ, ಆ ಶಾಪ ಭಾರತ ಅನುಭವಿಸ್ತಾ ಇದೆ. ಆದ್ರಿಂದ ‘ಬುದ್ಧ ಬರಲಿ ನಮ್ಮ ಊರಿಗೆ’ ಎಂಬುದು ಮೊದಲನೆಯ ಪುಸ್ತಕ. ಎರಡನೆದು ‘ಊರಿಗೊಬ್ಬ ಸಾಕು’. ಸರಳವಾದ, ಸಾಧಾರಣವಾದ ಒಬ್ಬ ವ್ಯಕ್ತಿ ಒಳ್ಳೆಯವನೊಬ್ಬ ಮನಸ್ಸು ಮಾಡಿದರೆ ಇಡೀ ಊರೇ ಉದ್ಧಾರವಾಗುತ್ತಲ್ಲಾ ಅದು ಅಣ್ಣಾ ಹಜಾರೆ ಬಗ್ಗೆ. ಇನ್ನೊಂದು ರಾಜಸ್ಥಾನ ಚಳವಳಿ- ಮಾಹಿತಿ ಹಕ್ಕನ್ನು ಕುರಿತಾಗಿರುವಂಥದ್ದು. ‘ಮಾಹಿತಿ ಹಕ್ಕು- ಪ್ರಜೆಗೇ ಪ್ರಭುತ್ವ’ ಈ ಮೂರೂ ಪುಸ್ತಕಗಳನ್ನು ಪ್ರತಿ ೨೫,೦೦೦ ಹಳ್ಳಿಗಳಿಗೂ ಒಂದೊಂದು ಪ್ರತಿಯಂತೆ ಕೊಡುವ ಜಾಥಾ ಇದು. ಈ ಜಾಥಾ ಗತಿಯಲ್ಲಿ ದ.ಸಂ.ಸವೇ ಬದಲಾಗಬಹುದು. ದ.ಸಂ.ಸವನ್ನು ಹಳ್ಳಿಗಳು ಬೇರೆಯದೇ ಆದ ರೀತಿಯಲ್ಲಿ ನೋಡಲು ಆರಂಭಿಸಬಹುದು. ಈ ನಡುವೆ ದ.ಸಂ.ಸದ ಸಂವಿಧಾನ- ಪ್ರಣಾಳಿಕೆಗಳನ್ನೂ ಹೊಸದಾಗಿ ಬರೆಯುವ ಪ್ರಯತ್ನ ಆಗುತ್ತಿದೆ.
ಪ್ರ- ದಲಿತ ಚಳವಳಿಯಲ್ಲಿನ ಬೇರೆ ಬೇರೆ ಗುಂಪುಗಳನ್ನು ಒಂದು ಮಾಡುವ ಆಲೋಚನೆ ಇದೆಯೇ?
ದೇ.ಮ-
 ಒಂದು ಮಾಡುವುದು ಪ್ರಯಾಸದ ಕೆಲಸ. ಉದಾಹರಣೆಗೆ ದ.ಸಂ.ಸದಲ್ಲಿ ಒಡಕಾಯಿತು. ಬಿ.ಎಸ್.ಪಿ. ಬೆಂಬಲಿಗರು ಹೊರಗೆ ಹೋದರು. ಒಂದು ಮಾಡುವ ಆಲೋಚನೆ ಮಾಡಿದರೆ ಬಿ.ಎಸ್.ಪಿಗೆ ಬೆಂಬಲ ಕೊಡಬೇಕಾಗುತ್ತದೆ. ಬಿ.ಎಸ್.ಪಿ.ಯ ಬಗ್ಗೆ ನಂಗೇನೂ ಅಂಥ ವಿರೋಧವಿಲ್ಲ. ಆದರೆ ಬಿ.ಜೆ.ಪಿಯ ಜೊತೆಗೆ ಅವರು ಸಂಬಂಧ ಇಟ್ಟುಕೊಂಡಿರೋದರಿಂದ ಅವರ ಜೊತೆ ಹೋಗಲು ಸಾಧ್ಯವಿಲ್ಲ. ಇದೆಲ್ಲದರ ಬದಲು ಸರಿಯಾದ ಕಾರ್ಯಕರ್ತರು ಅಥವಾ ನಾಯಕರು ಇನ್ನೂರು ತಾಲ್ಲೂಕುಗಳಿಗೆ ಇನ್ನೂರು ಜನ ಸಾಕು.
ಪ್ರ- ಕೋಮುವಾದ ಬೆಳೆಯುತ್ತಿದೆ. ಆರ್‌ಎಸ್‌ಎಸ್ ಮತ್ತು ಬಿ.ಜೆ.ಪಿ ಶಕ್ತಿಯುತವಾಗುತ್ತಿದೆ. ದಲಿತರೂ ಕೂಡಾ ಅತ್ತ ಹೋಗುತ್ತಿದ್ದಾರೆ. ಅವರನ್ನು ತಡೆಯಲು ಚಳವಳಿಯ ಕಾರ್ಯಕ್ರಮವೇನು?
ದೇ.ಮ- 
ಮನುಷ್ಯರ ನಡುವೆ ಒಡಕು ತಾರತಮ್ಯವನ್ನೇ ಒಂದು ಮೌಲ್ಯವನ್ನಾಗಿ ಮಾಡಿಕೊಂಡಿರುವ ಬಿ.ಜೆ.ಪಿಯನ್ನು ಕೆಲವು ದಲಿತರು, ಹಿಂದುಳಿದವರೂ ಬೆಂಬಲಿಸುತ್ತಿರುವುದು ನಿಜ. ಇದರ ಅರ್ಥ- ದಲಿತರು ಆರ್.ಎಸ್.ಎಸ್. ಮತ್ತು ಬಿ.ಜೆ.ಪಿ ತತ್ವದ ಕಡೆ ಹೋಗುತ್ತಿದ್ದಾರೆ ಅಂತ ಅರ್ಥವಲ್ಲ. ಹೋಗ್ತಿರೋದು ಅಧಿಕಾರದ ಕಡೆಗೆ. ಇದು ಎಲ್ಲರಲ್ಲೂ ಇರುವ ಅವಕಾಶವಾದದ ಕೇಡು. ಬಾಬ್ರಿ ಮಸೀದಿ ಉರುಳಿಸಿದಾಗ ದೊಡ್ಡ ಲೇಖಕರೇ, ದೊಡ್ಡ ಗಣ್ಯರೆನಿಸಿಕೊಂಡವರೇ ಅದನ್ನು ಬೆಂಬಲಿಸಿದ್ದರು. ಇದು ಗಾಭರಿ ಹುಟ್ಟಿಸೋ ವಿಚಾರ. ಹೀಗಿರುವಾಗ ದಲಿತರು, ಮುಸ್ಲಿಂರ ವಿರುದ್ಧ ಹತ್ಯಾಕಾಂಡದಲ್ಲಿ ಭಾಗವಹಿಸಿದ್ದು ಆಶ್ಚರ್ಯವಲ್ಲ. ದಲಿತರ ಸೆಕ್ಟ್ ಗಳ ನಡುವಿನ ಸ್ಥಿತಿ-ಗತಿ ಬೇರೆ ಇದೆಯೇ? ಉದ್ದೂರಿನ ಗಲಾಟೆಯನ್ನೇ ನೋಡಿ. ನಾಯಕರು ಮತ್ತು ದಲಿತರು ಬಡಿದಾಡಿದರು. ಇದು ಪತನವಾಗಿರುವ ಇಂಡಿಯಾದ ವಿಚಿತ್ರ ಸ್ಥಿತಿ. ಒಂದೇ ತಟ್ಟೆ, ಒಂದಷ್ಟೇ ಆಹಾರ- ತಿನ್ನೋ ಕೈಗಳು ಜಾಸ್ತಿ. ಇದು ಸಮಸ್ಯೆ. ಇದು ಕುಟುಂಬದ ಒಳಗೂ ಇರಬಹುದಾದ್ದೇ ಅಲ್ಲವೇ? ಹೊರಗಡೆ ಬೇರೆ ಬೇರೆ ಸಮಸ್ಯೆ ಇದ್ದರೆ ಅಸ್ಪೃಶ್ಯರ ಒಳಗಡೇನೇ ಎಡ-ಬಲ ಅನ್ನೋ ಸಮಸ್ಯೆ ಇದೆಯಲ್ಲ? ಇವೆಲ್ಲಾ ಸರಿಯಾಗಬೇಕಾದರೆ ಹಂಚಿಕೊಂಡು ಉಣ್ಣುವ ಸ್ವಭಾವ, ಸಹನೆ ಇತ್ಯಾದಿ ಮಾನವೀಯ ಮೌಲ್ಯಗಳಿಗೆ ಒತ್ತು ನೀಡುವುದು ಹಾಗೂ ಕೆಳಜಾತಿ ಸಂಘಟನೆ ಮಾಡುವಾಗಲೂ ಜಾತಿ ಪಂಗಡ ಭಾವವನ್ನು ತನ್ನೊಳಗಿನಿಂದ ಕಿತ್ತೆಸೆಯುತ್ತಾ ಕೇವಲ ಮನುಷ್ಯ ಆಗುವ ಪ್ರಕ್ರಿಯೆಯೂ ಆಗಬೇಕು.
ಪ್ರ-ರೈತ ಸಂಘ ಕೂಡಾ ಇತ್ತೀಚೆಗೆ ಕರ್ನಾಟಕದಲ್ಲಿ ದುರ್ಬಲವಾಗಿದೆ. ದ.ಸಂ.ಸ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಕೈಜೋಡಿಸಿ ಕೆಲಸ ಮಾಡಬಹುದಲ್ಲವೇ?
ದೇ.ಮ- 
ಖಂಡಿತ ಮಾಡಬಹುದು ಆದರೆ ವಿವೇಕ ಮತ್ತು ಶಕ್ತಿ ಬೇಕು. ಒಕ್ಕಲಿಗರು, ಲಿಂಗಾಯತರೊಂದಿಗೆ ದಲಿತರು ಒಂದಾಗಬೇಕಾದ ಇಕ್ಕಟ್ಟಿದೆ. ಇದನ್ನು ನಿಭಾಯಿಸೋ ನಾಯಕತ್ವದ ಛಾತಿ ಇಬ್ಬರಲ್ಲೂ ಇಲ್ಲ. ತಾತ್ವಿಕ ತಿಳಿವಳಿಕೆ ಇದ್ದಲ್ಲಿ ಇದಾಗಬಹುದು. ಕೆಲವು ಕಡೆ ಉದಾಹರಣೆಗೆ ಹಾಸನ, ತುಮಕೂರುಗಳಲ್ಲಿ ರೈತರು ಹೊಂದಾಣಿಕೆಯಿಂದ ನಡೆದುಕೊಂಡಿರುವುದೂ ಇದೆ.
ಪ್ರ- ಜಾಗತೀಕರಣ ಭೂತವಾಗಿ ಆವರಿಸಿಕೊಂಡಾಗಿದೆ. ಈ ಕುರಿತು ಚಳವಳಿಯ ನಿಲುವೇನು?
ದೇ.ಮ- 
ದ.ಸಂ.ಸಕ್ಕೆ ಮತ್ತು ವೈಯಕ್ತಿಕವಾಗಿ ನನಗೆ ಈ ಬಗ್ಗೆ ವಿರೋಧ ಇದ್ದೇ ಇದೆ. ವಿಚಿತ್ರ ಎಂದರೆ ಜಗತ್ತು ಒಂದಾಗಬೇಕೆಂದು ಬಯಸುತ್ತೇವೆ. ಆದರೆ ಜಾಗತೀಕರಣದ ಹೆಸರಿನಲ್ಲಿ ಹೀಗಾಗುತ್ತಿರುವುದು ವ್ಯಾಪಾರ, ಸುಲಿಗೆ. ಅದಕ್ಕೆ ಜಾಗತೀಕರಣ ಅನ್ನೋ ಪದ ಬಳಸಬಾರದು.
ಪ್ರ- ಕುಡಿಯುವ ನೀರು, ಉಸಿರಾಡೋ ಗಾಳಿ, ಉಣ್ಣೋ ಅನ್ನ ವಿಷಮಯವಾಗುತ್ತಿರುವ ಈ ಸಂದರ್ಭದಲ್ಲಿ ಒಟ್ಟಾರೆಯಾದ ಈ ಪರಿಸರದ ಪ್ರಶ್ನೆಯನ್ನು ದ.ಸಂ.ಸ ಹೇಗೆ ನೋಡುತ್ತದೆ?
ದೇ.ಮ-
 ಈ ವಿಚಾರಗಳು ದಲಿತರನ್ನು ನೇರವಾಗಿ ತಟ್ಟೋದಿಲ್ಲ. ವಾಸ್ತವ ಹೇಳಿದರೂ ಕಣ್ಣಿಗೆ ಕಾಣುವ ಸಮಸ್ಯೆ ಅಲ್ಲವಲ್ಲ? ಹೊಟ್ಟೆ ಹಸಿದಿರುವವನಿಗೆ ಆಹಾರದಲ್ಲಿ ವಿಷ ಇದೆ, ನೀರು-ಗಾಳಿ ಮಲಿನವಾಗಿದೆ ಅಂದ್ರೆ ಮುಟ್ಟುವುದಿಲ್ಲ. ಇದಕ್ಕೆ ಒಂದು ಹಿನ್ನೆಲೆ ಸೃಷ್ಟಿ ಮಾಡಬೇಕಾಗುತ್ತದೆ. ಅದು ಸಿಕ್ಕಾಪಟ್ಟೆ ನಿಧಾನ. ನೇರವಾಗಿ ತೆಗೆದುಕೊಂಡ್ರೆ ಮುಟ್ಟೋದೇ ಇಲ್ಲ. ಇಂಥ ಒಂದು ಇಕ್ಕಟ್ಟಿದೆ. ಉದ್ಯೋಗಗಳ ನಷ್ಟ, ಪರಿಸರ ನಾಶ ಇವೆರಡೂ ಕೂಡಿಕೊಂಡಾಗ ಮುಟ್ಟಬಹುದು. ಮೀನುಗಾರರಿಗೆ ಹೊಟ್ಟೆ-ಬಟ್ಟೆಗೆ ನೇರ ಹೊಡೆತ ಬೀಳೋ ಪರಿಸ್ಥಿತಿ ಬಂದಾಗ ಪರಿಸರ ಚಳವಳಿಗೆ ಸರ‍್ಕೊಂಡ್ರು. ಆ ಸ್ಥಿತಿ ಬಂದಾಗ ಒಟ್ಟಾಗಿ ಸೇರಿಸಿ ಈ ಪ್ರಯತ್ನಾನ ನಿಭಾಯಿಸಬಹುದು.
ಪ್ರ-ಸ್ತ್ರೀವಾದಿ ಚಳವಳಿಗಳ ಬಗೆಗಿನ ನಿಮ್ಮ ನಿಲುವು ಏನು? ದ.ಸಂ.ಸದ ಹೋರಾಟದಲ್ಲಿ ಮಹಿಳೆಯರ ಭಾಗವಹಿಸುವಿಕೆ ಯಾವ ರೀತಿಯದು?
ದೇ.ಮ- 
ಸಾಮರಸ್ಯದೆಡೆಗೆ ಹೆಚ್ಚಿನ ಒತ್ತು ನೀಡಬೇಕು. ಗಂಡು ಹೆಣ್ಣು ಎರಡೂ ವಿಭಿನ್ನ ಲಿಂಗಗಳು. ಪರಸ್ಪರ ವ್ಯತ್ಯಾಸಗಳಿವೆ, ಇರಬೇಕು. ಗಂಡಿನಲ್ಲಿಲ್ಲದ ಸಾಮರ್ಥ್ಯ ಹೆಣ್ಣಿನಲ್ಲಿದೆ. ಹೆಣ್ಣಿನಲ್ಲಿರದ ಸಾಮರ್ಥ್ಯ ಗಂಡಿನಲ್ಲಿದೆ. ಈ ಎರಡೂ ಸಾಮರ್ಥ್ಯಗಳು ಸ್ಪರ್ಧಿಗಳಲ್ಲ, ಸ್ತ್ರೀವಾದಿ ಚಳವಳಿ ಅಂತ ಪುರುಷ ದ್ವೇಷ ಮೂಡುವಂತಾಗಬಾರದು. ಸ್ಪರ್ಧಿಗಳಾಗಬಾರದು. ದಲಿತ ಚಳವಳಿಯ ಒಳಗೆ ಮಹಿಳೆಯರು ಒಂದೆರಡು ಹೋರಾಟದ ಘಟನೆಗಳ ಉದಾಹರಣೆಯನ್ನು ಬಿಟ್ಟರೆ ಸಕ್ರಿಯರಾಗಿಲ್ಲ ಸ್ತ್ರೀಯರಿಗಾಗಿ ಪ್ರತ್ಯೇಕವಾದ ಘಟಕವಿದೆ. ಆದರೆ ಅದು ಕ್ರಿಯಾಶೀಲವಾಗಿಲ್ಲ. ಸ್ತ್ರೀ ನಾಯಕತ್ವದ ಕೊರತೆ ಇದೆ.

ಪ್ರ- ದಲಿತ ಹೆಣ್ಣು ಮಕ್ಕಳ ಮೇಲೆ ದಲಿತ ನಾಯಕರಿಂದಲೇ ದೌರ್ಜನ್ಯಗಳು ನಡೆದಿವೆಯೆಂಬ ಆರೋಪಗಳು ಇತ್ತೀಚೆಗೆ ಕೇಳಿಬರುತ್ತಿವೆ?
ದೇ.ಮ- 
ದಲಿತ ಹೆಣ್ಣು ಮಗಳು ಬೇರೆ, ಇತರ ಹೆಣ್ಣುಮಕ್ಕಳು ಬೇರೆ ಅನ್ನೋ ಪ್ರಶ್ನೆನೇ ಬರದಿಲ್ಲ. ದೌರ್ಜನ್ಯವನ್ನು ದಲಿತನೇ ಮಾಡಿದನೋ ಅಥವಾ ಇನ್ಯಾರೋ ಮಾಡಿದರೋ ಅನ್ನುವುದು ಪ್ರಶ್ನೆ ಅಲ್ಲ. ಯಾರೇ ವಸ್ತುವಾಗೋದು ದುರುಪಯೋಗವಾಗೋದು, ದೌರ್ಜನ್ಯಕ್ಕೊಳಗಾಗೋದು, ಇಷ್ಟಕ್ಕೆ ವಿರುದ್ಧವಾಗಿ ಬಲಾತ್ಕಾರಕ್ಕೊಳಗಾಗೋದು ನಡೆದಾಗ ವಿರೋಧಿಸಬೇಕು.
ಪ್ರ- ಸ್ತ್ರೀ ಪರ ಚಳವಳಿ ಮತ್ತು ದಲಿತರ ಸಾಮ್ಯ ಬಗ್ಗೆ ಏನು ಹೇಳುತ್ತೀರಿ?
ದೇ.ಮ- 
ಸಹನೆ ಸ್ತ್ರೀಯರಲ್ಲೂ, ದಲಿತರಲ್ಲೂ ಹುಟ್ಟಿನಿಂದಲೇ ಬಂದಿರುವಂತಹ ಒಂದು ಗುಣಾತ್ಮಕವಾದ ಅಂಶ. ಸಹನೆ ಒಂದು ಮೌಲ್ಯ. ಇಂಥ ಮೌಲ್ಯಗಳನ್ನು ಕಳೆದುಕೊಳ್ಳದೇ ಉಳಿಸಿಕೊಳ್ಳಬೇಕು. ಉದಾಹರಣೆಗೆ- ಶ್ರೀಮತಿ ಮೀರಾ ನಾಯಕ್ ಅವರು ಚಿಕ್ಕವರಿದ್ದಾಗಲೇ ನೋಡಿದರೆ ತಾಯಂತೆ ಕಾಣುತ್ತಿದ್ದರು. ಅವರು ಸಮತಾ ಹುಟ್ಟುಹಾಕಿ ಸ್ತ್ರೀವಾದಿಯಾದಾಗ ಚಿಕ್ಕವರಿದ್ದಾಗಲೇ ಕಾಣುತ್ತಿದ್ದ ತಾಯಿಯಂಥ ರೀತಿ ಅವರು ದೊಡ್ಡವರಾದ ಮೇಲೆ ಮತ್ತೂ ಹೆಚ್ಚಾಗಬೇಕಿತ್ತು. ಇದಾಗಲಿಲ್ಲ. ಹೀಗಾಗಬಾರದು.

ಪ್ರ- ದಲಿತ ಚಳವಳಿಯನ್ನು ಪುನರ್ ಜಾಗೃತಿಗೊಳಿಸುತ್ತಿರುವ ಈ ಸಂದರ್ಭದಲ್ಲಿ ದ.ಸಂ.ಸದ ತಾತ್ವಿಕ ನೆಲೆಗಟ್ಟು ಹೇಗಿರಬೇಕು? ಗಾಂಧೀ ಚಿಂತನೆ ದಲಿತರಿಗೆ ಇಂದು ಪ್ರಸ್ತುತ ಎನಿಸುತ್ತದೆಯೇ?
ದೇ.ಮ- 
ಸಮಾನತೆ ಸಾಮರಸ್ಯಕ್ಕೆ ತುಡಿದ ಜೀವಿಗಳ ಆಸೆ ನಡಿಗೆಗಳನ್ನು ತೆಗೆದುಕೊಂಡು ಕಸಿ ಮಾಡುವ ಪ್ರಯತ್ನ ಇಂದು ಆಗಬೇಕಾದ್ದು… ಫಿಲಾಸಫಿಗಳೆಲ್ಲಾ ಜಗಳ ಆಡ್ತಿದಾವಲ್ಲಾ ಅವುಗಳ ರಾಡಿಯನ್ನು ತಿಳಿ ಮಾಡಿ ಒಂದಾಗುವ ಕಡೆ ಒಳ್ಳೆಯ ಅಂಶಗಳನ್ನು ಒಟ್ಟುಗೂಡಿಸಿ- ಹಕ್ಕಿಗಳು ಅಲ್ಲಿಂದ ಸ್ವಲ್ಪ, ಇಲ್ಲಿಂದ ಸ್ವಲ್ಪ, ಹುಲ್ಲುಗರಿ ತಂದು ಚಂದವಾದ, ಬಿಗಿಯಾದ ಗೂಡು ಕಟ್ಟುವಂತೆ ಸಂಘಟನೆಯನ್ನು ಕಟ್ಟುವುದು. ಸಮಾನತೆ ಮತ್ತು ಪ್ರೀತಿಯ ಗೂಡು ಕಟ್ಟುವವರಿಗೆ ಗಾಂಧಿ ತುಂಬಾ ಪ್ರಸ್ತುತವೇ.