ಪೂಜಾರಿಯವರು ಕಟ್ಟಿಸಿದ ಸುಳ್ಳುಗಳ ಗೋಪುರದೊಳಗೆ… -ದೇವನೂರ ಮಹಾದೇವ

[ಆರ್‌ಎಸ್‌ಎಸ್ ಗೆ ನೂರು ವರ್ಷಗಳು ತುಂಬಿದ ಸಂದರ್ಭದಲ್ಲಿ 2.10.2025ರಂದು ದೇವನೂರ ಮಹಾದೇವ ಅವರ ಒಂದು ಲೇಖನವು, ಪ್ರಜಾವಾಣಿ ಪತ್ರಿಕೆಯ ಆಳ- ಅಗಲ ವಿಭಾಗದಲ್ಲಿ ಪ್ರಕಟವಾಗಿತ್ತು. ಅದಕ್ಕೆ 11.10.2025ರಂದು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಪ್ರತಿಕ್ರಿಯೆಯಾಗಿ ಪ್ರಜಾವಾಣಿಯಲ್ಲಿ ಲೇಖನವನ್ನು ಬರೆದಿದ್ದರು. ಆ ಲೇಖನದ ಕೆಲ ಆಕ್ಷೇಪಗಳಿಗೆ 18.10.2025ರಂದು ಪ್ರಜಾವಾಣಿಯಲ್ಲಿ ದೇವನೂರರು ಉತ್ತರಿಸಿದ್ದಾರೆ]
   ಮಾನ್ಯ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ನನ್ನ ಲೇಖನಕ್ಕೆ ಪ್ರತಿಕ್ರಿಯಿಸುತ್ತಾ- ‘ದೇವನೂರರಿಗೊಂದು ದಾಳಿಂಬೆ ಕೊಡಿ’ ಎಂದು ಕರೆ ನೀಡಿದ್ದಾರೆ. ಇವರ ಕರೆಗೆ ಓಗೊಟ್ಟು ಆರ್‌ಎಸ್‌ಎಸ್, ಬಿಜೆಪಿ, ಸಂಘಪರಿವಾರಗಳ ಕಾರ‍್ಯಕರ್ತರ ಸಮೂಹದಿಂದ ನನಗೆ ದಾಳಿಂಬೆ ಬಂದರೆ ನಾನೊಂದು ಬೃಹತ್ ಗೋಡೌನ್ ಕಟ್ಟಿಸಬೇಕಾಗುತ್ತದೆ. ಇಲ್ಲ, ನಾನು ಗೋಡೌನ್ ಕಟ್ಟಿಸುವುದಿಲ್ಲ. ಬದಲಿಗೆ ಬರುವ ದಾಳಿಂಬೆಯಲ್ಲಿ ನಾನೂ ಒಂದು ಸೇವಿಸುತ್ತೇನೆ. ಹಾಗೂ ಪೂಜಾರಿಯವರಿಗೂ ಎರಡು ಕೊಡುತ್ತೇನೆ. ಹಾಗೇ ಎಲ್ಲಾ ಸಂಘಟನೆಗಳಿಗೂ ಹಂಚುವೆ. ವಿಶೇಷವಾಗಿ, ಸಮ್ಮೋಹನಕ್ಕೆ ಒಳಗಾಗಿ ಪ್ರಜ್ಞಾಹೀನರಾಗಿ ಹುಸಿ ದೇಶಪ್ರೇಮ, ಹುಸಿ ಧರ್ಮಪ್ರೇಮ, ಗೀಳಿನ ಮತಾಂಧ ಅತಿರೇಕದ ಸಂಘಟನೆಗಳಿಗೂ ಹೆಚ್ಚು ಪಾಲು ನೀಡುವೆ. ಜೊತೆಗೆ ಸಮಾನತಾವಾದಿ ನ್ಯಾಯಾಧೀಶರಿಗೆ ಚಪ್ಪಲಿ ಎಸೆದ ಸನಾತನವಾದಿ ಭೂತಕಾಲದ ಪಳೆಯುಳಿಕೆ ರಾಕೇಶ್ ಕಿಶೋರ್ ಅಂಥವರಿಗೂ ಎಲ್ಲರಿಗಿಂತ ಹೆಚ್ಚೇ ನೀಡುವೆ.
ಆಯ್ತು, ಪೂಜಾರಿಯವರ ಲೇಖನಕ್ಕೆ ಈಗ ಬರುವೆ. 12.5.1939ರಂದು ಪುಣೆಯ ಆರ್‌ಎಸ್‌ಎಸ್ ಶಿಬಿರಕ್ಕೆ ಡಾ.ಅಂಬೇಡ್ಕರ್ ಭೇಟಿ ನೀಡಿ ಆರ್.ಎಸ್.ಎಸ್. ಬಗ್ಗೆ ಮೆಚ್ಚುಗೆ ಮಾತನಾಡಿದ್ದರು ಎಂದು ಬರೆದಿದ್ದಾರೆ. ಈ ಸುಳ್ಳಿನ ಹಿಂದಿರುವ ಸತ್ಯ ಹೀಗಿದೆ: ಆಯುಸ್ ನದೀಂಪಳ್ಳಿ ಮತ್ತು ರಾಹುಲ್ ಶಾಸ್ತ್ರಿ ಬರೆದಿರುವ  ‘The Founder of RSS: Dr.Hedgewar Seer Patriot and Nation Builder’  ಪುಸ್ತಕದಲ್ಲಿ ಈ ಸುಳ್ಳನ್ನು ಬಿತ್ತರಿಸಲಾಗಿದೆ. ಇದಕ್ಕೆ ಯಾವುದೇ ಮಾಹಿತಿ ಮೂಲಗಳನ್ನು ತಿಳಿಸಿಲ್ಲ, ಪತ್ರಿಕಾ ವರದಿ, ಫೋಟೋ ಇತ್ಯಾದಿ ಸಾಕ್ಷಿಗಳನ್ನೂ ತಿಳಿಸಿಲ್ಲ. ಇಂತಹ ಕಟ್ಟುಕತೆಯ ಆಧಾರಗಳನ್ನೆ ನಮ್ಮ ಸಂಸದರು ತಮ್ಮ ಲೇಖನಕ್ಕೆ ಬಳಸಿಕೊಂಡಿದ್ದಾರೆ. ದಯವಿಟ್ಟು ಗಮನಿಸಿ, ಡಾ.ಅಂಬೇಡ್ಕರ್ ಆರ್‌ಎಸ್‌ಎಸ್ ಬಗ್ಗೆ ಹೀಗೆ ಹೇಳುತ್ತಾರೆ: ‘ಹಿಂದೂ ಮಹಾಸಭಾ ಅಥವಾ ಆರ್‌ಎಸ್‌ಎಸ್‌ನಂತಹ ಪ್ರತಿಗಾಮಿ ಗುಂಪುಗಳೊಂದಿಗೆ ಯಾವುದೇ ಹೊಂದಾಣಿಕೆಗಳನ್ನು ಮಾಡಿಕೊಳ್ಳುವಂತಿಲ್ಲ’ (ಬಾಬಾ ಸಾಹೇಬ್ ಅವರ ಬರಹಗಳು ಮತ್ತು ಭಾಷಣಗಳು, ಸಂಪುಟ 17, ಪುಟ 359) ‘ಆರ್‌ಎಸ್‌ಎಸ್ ಒಂದು ಅಪಾಯಕಾರಿ ಸಂಘಟನೆ’ (ಇಂಗ್ಲಿಷ್ ಸಂಪುಟ 15, ಪುಟ 560 ) -ಹೀಗೆಲ್ಲಾ ಎಚ್ಚರಿಸಿದ್ದಾರೆ.
ಶ್ರೀ ಪೂಜಾರಿಯವರು ಬರೆದಿರುವ ಇನ್ನೊಂದು ಉಲ್ಲೇಖ ಹೀಗಿದೆ: 1962ರ ಭಾರತ-ಚೈನಾ ಯುದ್ಧದ ಉದ್ವಿಗ್ನತೆಯಲ್ಲಿ ಅಂದಿನ ಪ್ರಧಾನಿ ನೆಹರೂ ಏರ್ಪಡಿಸಿದ್ದ ದುಂಡುಮೇಜಿನ ಸಭೆಗೆ-
(1) ಶ್ರೀ ಗೋಲ್ವಾಲ್ಕರ್ ಆಹ್ವಾನದ ಮೇಲೆ ಭಾಗವಹಿಸಿದ್ದಾರೆಂದೂ,
(2) ಆ ಸಭೆಯಲ್ಲಿ ವಿಪಕ್ಷಗಳು ನೆಹರೂ ಸರ್ಕಾರವನ್ನು ಟೀಕಿಸುತ್ತ, ‘ಚೀನಿ’ ಸರ್ಕಾರ ಭಾರತದ ಭೂಭಾಗ ಆವರಿಸಿಕೊಳ್ಳುವಾಗ ನಿಮ್ಮ ಸೇನೆ ಏನು ಮಾಡುತ್ತಿತ್ತು’ ಎಂದು ಪ್ರಶ್ನಿಸಿದರೆಂದೂ
(3) ಆಗ ಗೋಲ್ವಾಲ್ಕರ್ ‘ನಿಮ್ಮ ಸೇನೆ ಎನ್ನುವ ಬದಲು ನಮ್ಮ ಸೇನೆ ಎಂಬ ಶಬ್ಧ ಪ್ರಯೋಗ ಮಾಡಬಹುದೆ?’ ಎಂದು ತಿದ್ದಿ ಹೇಳಿದರೆಂದೂ
(4) ಗೋಲ್ವಾಲ್ಕರ್ ಅವರ ಮಾತಿಗೆ ನೆಹರೂ ಕಣ್ಣಲ್ಲೆ ಕೃತಜ್ಞತೆ ಅರ್ಪಿಸಿದ್ದರೆಂದೂ ಬರೆದಿದ್ದಾರೆ.
ಈ ವಾಕ್ಯಗಳನ್ನು ಗಮನಿಸಿದರೆ ಇದನ್ನು ಪೂಜಾರಿಯವರು ಅಲ್ಲೆ ಇದ್ದು ಕಣ್ಣಾರೆ ಕಂಡಂತೆ ವಿವರಿಸಿದ್ದಾರೆ. ಆದರೆ ಈ ಬಗ್ಗೆ ಆರ್ಖೈವ್‌ನಲ್ಲಿ ಪರಿಶೀಲಿಸಿದರೆ, ಅವರು ಹೇಳುವ ಯಾವ ದಾಖಲೆಗಳೂ ಇಲ್ಲ! ಇದೇನು ಕತೆ? ಈ ಕಟ್ಟುಕತೆಯನ್ನು ಕಟ್ಟಿ, ವಾಸ್ತವ ಎಂಬಂತೆ ಆರ್‌ಎಸ್‌ಎಸ್‌ನ ರತನ್ ಶ್ರದ್ದಾ ಅವರು 2018ರಲ್ಲಿ ಬರೆದ ಆರ್‌ಎಸ್‌ಎಸ್ 360 ಪುಸ್ತಕದಲ್ಲಿ ಹುಟ್ಟಿಸಿದ್ದು, ಇದನ್ನೇ ಆರ್‌ಎಸ್‌ಎಸ್‌ನಿಂದ ತರಬೇತಿ ಪಡೆದವರು ಜಪಿಸುತ್ತಾ ತಿರುಗುತ್ತಿದ್ದಾರೆ. ಈ ಕಥನ ಶೈಲಿಯ ಮಾಯಾಜಾಲವು ಮುಸುಕುಧಾರಿ ಸಂಘಟನೆಗಳಿಗೆ ಉಸಿರಾಟದಂತಾಗಿಬಿಟ್ಟಿದೆ.
ಎಷ್ಟೆಂದರೆ, ಮುಂದೆ ಪೂಜಾರಿಯವರು ಬರೆದಿರುವಂತೆ “ಎಡಪಂಥೀಯ ವಿಚಾರಧಾರೆಯ ಲೇಖಕರೊಬ್ಬರು ಬರೆದಿದ್ದ ‘ಆರ್‌ಎಸ್‌ಎಸ್ ಆಳ ಮತ್ತು ಅಗಲ’ ಎಂಬ ಕಿರುಪುಸ್ತಕಕ್ಕೆ ಪೂರಕ ಪ್ರಾಸ್ತಾವಿಕ ನುಡಿ ಬರೆದ ಗಣ್ಯರೊಬ್ಬರು ‘ಈ ಕಿರುಪುಸ್ತಕ ಆರ್‌ಎಸ್‌ಎಸ್‌ನ ನಿಜಸ್ವರೂಪವನ್ನು ತಿಳಿಸಿ, ಭಾರತದ ಸಂವಿಧಾನದ ಮತ್ತು ದೇಶದ ಏಕತೆಯನ್ನು ಗಟ್ಟಿಗೊಳಿಸಲು ಶಕ್ತಿ ನೀಡುತ್ತದೆ ಎಂದು ಘೋಷಿಸಿದ್ದರು’ ” ಎಂದು ಬರೆದಿದ್ದಾರೆ. ‘ಆರ್‌ಎಸ್‌ಎಸ್ ಆಳ ಮತ್ತು ಅಗಲ’ ಎಂಬ ಕಿರುಪುಸ್ತಕ ಬರೆದವನು ನಾನೇ ಅಲ್ಲವೆ? ಪೂರಕ ಪ್ರಸ್ತಾವಿಕ ನುಡಿಯ ಪ್ರಸ್ತಾಪ ನನಗೇ ಗೊತ್ತೇ ಇಲ್ಲವಲ್ಲ! ಇದೆಂಥ ಬಾಯಿಚಳಕ? ಇದೇನಿದು?
ಸರ್, ಪೂಜಾರಿಯವರೇ ತಾವು ಸರಳ ಸಜ್ಜನರೆಂದು ಕೇಳಿದ್ದೇನೆ, ಜನರ ಕಷ್ಟ ಸುಖಕ್ಕೆ ಸ್ಪಂದಿಸುವ ವ್ಯಕ್ತಿತ್ವದವರೆಂದೂ ಕೇಳಿದ್ದೇನೆ. ಈ ವಿಶ್ವಾಸದಿಂದ ಸದ್ಯಕ್ಕೆ ಎರಡು ಪ್ರಶ್ನೆಗಳನ್ನು ತಮ್ಮ ಮುಂದಿಡುವೆ.
ಒಂದು: ಸನಾತನ(ಶಾಶ್ವತ)ಗಳೆಂದು ಹೇಳಿಕೊಳ್ಳುವವರಿಗೆ ಪರಮಪೂಜ್ಯರೆನ್ನಿಸಿಕೊಂಡ ಗೋಲ್ವಾಲ್ಕರ್, ಸಾವರ‍್ಕರ್ ಅವರ ಎದೆಯೊಳಗಿನ ಎರಡು ಮಾತುಗಳನ್ನು ಇಲ್ಲಿ ಉಲ್ಲೇಖಿಸುವೆ. ತಾವು ಈಗಾಗಲೇ ಓದಿರುವ ನನ್ನ ಲೇಖನ- ‘ಆರ್‌ಎಸ್‌ಎಸ್’ಗೆ ನೂರು ವರ್ಷಗಳಂತೆ! ಹೌದಾ?’ದಲ್ಲಿ ಇದನ್ನು ವಿವರವಾಗಿ ಬರೆದಿರುವೆ. ನನ್ನ ಪ್ರಶ್ನೆ ಇಷ್ಟೆ: ಗೋಲ್ವಾಲ್ಕರ್ ಅವರು- ‘ಈ ಚತುರ್ವಿದ(ಚಾತುರ‍್ವರ್ಣ) ವ್ಯವಸ್ಥೆ ಹೊಂದಿದವರು ಎಂದರೆ ಹಿಂದೂ ಜನಾಂಗ, ಇದೇ ನಮ್ಮ ದೇವರು’ ಎಂದರೆ, ಸಾವರ‍್ಕರ್ ಅವರು ‘ಇವತ್ತು ಮನುಸ್ಮೃತಿಯೇ ಹಿಂದೂ ಕಾಯ್ದೆ’ ಎಂದಿದ್ದಾರೆ.
ಸರ್, ಪೂಜಾರಿಯವರೇ, ಈಗ ನಾನು ತಮ್ಮಲ್ಲಿ ವಿನಂತಿಸುವುದು ಇಷ್ಟೇ:
1) ‘ದೇವನೂರರು ಉಲ್ಲೇಖಿಸಿರುವ ಗೋಲ್ವಾಲ್ಕರ್, ಸಾವರ‍್ಕರ್ ಹೇಳಿಕೆಗಳನ್ನು ಸುಳ್ಳು’ ಎಂದಾದರೂ ಹೇಳಿರಿ.
 2) ‘ಆ ಉಲ್ಲೇಖಗಳನ್ನು ಗೋಲ್ವಾಲ್ಕರ್, ಸಾವರ‍್ಕರ್ ಹೇಳಿದ್ದಾರೆ, ಅದನ್ನು ಸಮ್ಮತಿಸುತ್ತೇನೆ’ ಎಂದಾದರೂ ಹೇಳಿರಿ.
3) ‘ಗೋಲ್ವಾಲ್ಕರ್, ಸಾವರ‍್ಕರ್ ಹೇಳಿರುವ ಉಲ್ಲೇಖಗಳನ್ನು ನಾನು ಸಮ್ಮತಿಸುವುದಿಲ್ಲ’ ಎಂದಾದರೂ ಹೇಳಿರಿ. ದಯವಿಟ್ಟು ಯಾವುದಾದರು ಒಂದನ್ನು ತಿಳಿಸುವಿರಾ? ಸದ್ಯಕ್ಕೆ ಇಷ್ಟು ಸಾಕು!
https://www.prajavani.net/op-ed/opinion/rss-controversy-devanur-mahadeva-poojari-response-3589229