ನನ್ನ ಬರವಣಿಗೆ-ದೇವನೂರ ಮಹಾದೇವ
[ ‘ಎದೆಗೆ ಬಿದ್ದ ಅಕ್ಷರ’ ಪುಸ್ತಕದಲ್ಲಿ ಈ ಟಿಪ್ಪಣಿಯ ಪರಿಷ್ಕೃತ ರೂಪವಿದೆ. ಇದು 1989ರಲ್ಲಿ ದೇವನೂರ ಮಹಾದೇವ ಅವರು ಅಮೇರಿಕದ ಅಯೋವಾದಲ್ಲಿ ನಡೆದ ‘ಅಂತರರಾಷ್ಟ್ರೀಯ ಬರಹಗಾರರ ಕಾರ್ಯಕ್ರಮ’ಕ್ಕೆ ಹೋಗಿದ್ದ ಸಂದರ್ಭದಲ್ಲಿ ಸಿದ್ಧಪಡಿಸಿದ್ದಂತಹ ಟಿಪ್ಪಣಿ. ಈ ಟಿಪ್ಪಣಿಯ ಕನ್ನಡ ಅವತರಣಿಕೆ ‘ಸಂವಾದ’ ದ್ವಿ-ಮಾಸಿಕ ಪತ್ರಿಕೆಯಲ್ಲಿ (ಸಂಚಿಕೆ- 14, ಮಾರ್ಚ್-ಏಪ್ರಿಲ್, 1990) ಪ್ರಕಟಗೊಂಡಿದೆ. ಬರಹವನ್ನು ಹುಡುಕಿ ನಮಗೆ ಕಳಿಸಿದ ಆರ್.ಶ್ರೀಧರ ಅವರಿಗೆ ಧನ್ಯವಾದಗಳು]
ನನ್ನ ಬರವಣಿಗೆಯಲ್ಲಿ ನಾನೆಲ್ಲಿದ್ದೇನೆ? ನಾನೊಬ್ಬ ಬರಹಗಾರ ಅಂದುಕೊಂಡಾಗ ನನಗೆ ಎರಡು ಕಥೆಗಳು ಮನಸ್ಸಿಗೆ ಬರುತ್ತವೆ. ಒಂದು, ಕ್ರಿಸ್ತಪೂರ್ವದಲ್ಲಿದ್ದ ಆದಿನಾಥನೆಂಬ ಜೈನ ದೊರೆಯದು. ಆತ ಒಂದು ಬೆಳಗ್ಗೆ ಎದ್ದು ನೋಡುತ್ತಾನೆ- ಅವನ ತಲೆಯ ಒಂದು ಕೂದಲು ನೆರೆತಿದೆ. ಅವನಿಗೆ ತಕ್ಷಣವೇ ಬದುಕಿನ ಕ್ಷಣಿಕತೆಯ- ಹುಟ್ಟು, ಸಾವು ಎಲ್ಲದರ ದರ್ಶನವಾಯಿತು. ಅವನು ರಾಜ್ಯ ಕೋಶ ಎಲ್ಲ ಬಿಟ್ಟು ತಪಸ್ಸು ಮಾಡಲು ಕಾಡಿಗೆ ಹೊರಟುಹೋದ.
ಇನ್ನೊಂದು, ಸುಮಾರು ನನ್ನ ತರದ ಮನುಷ್ಯನಿಗೆ ಸಂಬಂಧಿಸಿದ್ದು. ಅವನು ಒಂದು ದಿನ ನದಿಯೊಂದರಲ್ಲಿ ನೀರು ಕುಡಿಯುತ್ತಿದ್ದಾಗ ಅವನ ಬೊಗಸೆಯಲ್ಲಿ ಒಂದು ಉದ್ದನೆಯ ಕೂದಲು ಕಂಡಿತು. ತಕ್ಷಣ ಅವನ ಕಣ್ಮುಂದೆ ಒಬ್ಬ ಸುಂದರ ಹೆಣ್ಣಿನ ರೂಪ ಮೂಡಿತು. ಈ ಕೂದಲೇ ಇಷ್ಟೊಂದು ಮನೋಹರವಾಗಿರುವಾಗ ಈ ಕೂದಲನ್ನು ಪಡೆದ ಹೆಣ್ಣು ಇನ್ನೆಷ್ಟು ಚೆಲುವೆಯಾಗಿರಬೇಕು ಎಂದು ಆತ ಯೋಚಿಸಿದ. ಅವನು ಆ ಹೆಣ್ಣನ್ನು ಹುಡುಕಿ ಅವಳ ಒಲವನ್ನು ಗಳಿಸಲು ಹೆಣಗತೊಡಗಿದ.
ನನ್ನ ಬರವಣಿಗೆ ಈ ಎರಡರ ಮಧ್ಯೆ ಇರುವಂತಹದು. ಕುಸುಮಬಾಲೆ ಬರೆಯಲು ನನ್ನನ್ನು ಪ್ರೇರೇಪಿಸಿದ್ದು ಏನು? ಈ ಮೂರು: ಮೊದಲನೆಯದು, ನಾನಿನ್ನೂ ಹುಡುಗನಾಗಿದ್ದಾಗ ಸಾವಿನ ಕಡೆಗೆ ನಡೆದುಹೋಗುತ್ತಿದ್ದವರನ್ನು ಉಳಿಸಲು ಆಚರಿಸುತ್ತಿದ್ದ ನೇಮವೊಂದರ ಬಗ್ಗೆ ಕೇಳಿದ್ದೆ. ದೇಹಕ್ಕೆ ದೆವ್ವ ಬಡಿದಿದೆ ಎಂಬೊಂದು ನಂಬಿಕೆ. ಈ ದೆವ್ವವನ್ನು ಓಡಿಸಲು ಕುಟುಂಬ ಆ ವ್ಯಕ್ತಿಗೆ ಗೊತ್ತಿಲ್ಲದಂತೆ ಒಂದು ದೊಡ್ಡ ಔತಣವನ್ನು ಸಿದ್ಧಪಡಿಸಿ ಆ ವ್ಯಕ್ತಿಯನ್ನು ಒಂಟಿಯಾಗಿ ಆ ಅನಿರೀಕ್ಷಿತ ಔತಣದ ಮುಂದೆ ಕುಳ್ಳಿರಿಸಿ ಮನೆ ಬಿಟ್ಟು ಹೊರಗೆ ಹೋಗುತ್ತದೆ. ಆಗ ದೆವ್ವಕ್ಕೆ ಎಷ್ಟು ಆಘಾತವಾಗುತ್ತೆ ಎಂದರೆ, ಅದು ಆ ದೇಹವನ್ನು ಬಿಟ್ಟು ಓಡಿಹೋಗುತ್ತದೆ, ಈ ನೇಮದ ಕಥೆ ನನ್ನನ್ನು ಬಹುವರ್ಷಗಳ ಕಾಲ ಕಾಡಿತು. ಇದು ನನಗೆ ಬಡತನವನ್ನು ಅರ್ಥಮಾಡಿಸಿತು. ಜಾನಪದ ಆಚರಣೆ ನಮ್ಮ ಜನ ತಮ್ಮ ಅರಿವಿನ ಮೂಲಕ ರೂಢಿಸಿಕೊಂಡ ಒಂದು ರೀತಿಯ ಮನೋಚಿಕಿತ್ಸೆ. ನಾನೆಂದೂ ಈ ಆಚರಣೆಯನ್ನು ಕಣ್ಣಾರೆ ನೋಡಿಲ್ಲ; ಆದರೆ ನನ್ನ ಕಾದಂಬರಿಯಲ್ಲಿ ಈ ಆಚರಣೆಯನ್ನು ವಿವರಿಸುವ ಪುಟಗಳು ನನ್ನ ಅತ್ಯುತ್ತಮ ಬರವಣಿಗೆ ಎಂದು ನಾನು ಭಾವಿಸುತ್ತೇನೆ.
ಇನ್ನೊಂದು ಕೂಡಾ ಒಂದು ಜಾನಪದ ಕಥೆಯೇ- ಜೋತಮ್ಮಗಳನ್ನು ಕುರಿತದ್ದು. ರಾತ್ರಿ ದೀಪಗಳನ್ನು ಆರಿಸಿದ ನಂತರ ಈ ದೀಪ-ದೆವ್ವಗಳು ಹಳ್ಳಿಯ ಒಂದು ಸ್ಥಳದಲ್ಲಿ- ಮರವೊಂದರ ಕೆಳಗಿರುವ ಮಂಟಪದಲ್ಲಿ ಸೇರಿ ತಮ್ಮ ಮನೆಗಳಲ್ಲಿ ಏನೇನು ಆಗುತ್ತಿದೆ ಎಂಬುದರ ಬಗ್ಗೆ ಹರಟೆ ಹೊಡೆಯುತ್ತವೆ ಎಂಬುದು ಈ ಕಥೆ. ಜಾನಪದ ಕಥೆಯಲ್ಲಿ ಇದನ್ನು ತಮಾಷೆಗೆಂದು ಬಳಸಲಾಗಿದೆ. ಆದರೆ ಸತ್ಯವನ್ನು ನಿರೂಪಿಸಲು ಇದನ್ನು ನಿಜವಾಗಿ ಅದ್ಭುತ ರೀತಿಯಲ್ಲಿ ಬಳಸಬಹುದೆಂದು ನಾನು ಭಾವಿಸಿದೆ.
ಕೆಲವರ್ಷಗಳ ಹಿಂದೆ ನನಗೆ ಗೊತ್ತಿದ್ದ ರಾಜಕೀಯ ಸಂಘಟನೆಯಲ್ಲಿದ್ದ ನನ್ನ ಸ್ನೇಹಿತನೊಬ್ಬನ ಕೊಲೆಯಾಯಿತು. ಆತ ಕೊಲೆಯಾದ ಸ್ಥಳಕ್ಕೆ ಹೋಗಿ ನೋಡಿದರೆ, ಆ ಸ್ಥಳದಲ್ಲಿದ್ದ ಗೋಡೆಗಳಿಗೆ ಸುಣ್ಣ ಬಳಿಯಲಾಗಿತ್ತು. ಅಲ್ಲಿದ್ದ ಒಬ್ಬ ಮುದುಕಿ ‘ನೀವು ಎರಡು ದಿನ ಮುಂಚೆ ಬಂದಿದ್ದರೆ ರಕ್ತದ ಕಲೆಗಳನ್ನು ನೋಡಬಹುದಿತ್ತು’ ಎಂದಳು. ಆ ಕ್ಷಣ ನನಗೆ ‘ಗೋಡೆಗೆ ಸುಣ್ಣ ಬಳಿದಾಗ ರಕ್ತದ ಕಲೆಗಳು ಕಾಣೆಯಾಗಿ ಬಿಡುತ್ತವಾ?’ ಎಂದು ಆಶ್ಚರ್ಯವಾಯಿತು.
ಒಂದು ದಿನ ನನ್ನ ಮನಸ್ಸಿನಲ್ಲಿ ಈ ಮೂರೂ ಕಥೆಗಳೂ ಐಕ್ಯಗೊಂಡವು. ನಾನು ಕುಸುಮಬಾಲೆ ಬರೆಯಲಾರಂಭಿಸಿದೆ. ‘ಕುಸುಮಬಾಲೆ’ ಕಥೆಯಲ್ಲಿ ‘ಕಥೆ’ ಎಂಬುದೇನೂ ಇಲ್ಲ. ನನ್ನ ಹಳ್ಳಿಯಲ್ಲಿ ಇಂತಹ ನಾಟಕವನ್ನು ಜನ ಮತ್ತೆ ಮತ್ತೆ ನೋಡುತ್ತಲೇ ಇರುತ್ತಾರೆ. ನಾನು ಆರಂಭದಲ್ಲೇ ಕಥೆಯ ಸಾರಾಂಶ ಕೊಟ್ಟಿರುವುದರಿಂದ, ಕಾದಂಬರಿ ಕಥೆಗಿಂತ ಮನುಷ್ಯ ಸಂಬಂಧಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.
ಕೃಪೆ: -‘ಸಂವಾದ’ (ಸಂಚಿಕೆ- 14, ಪುಟ: 45-46, ಮಾರ್ಚ್- ಏಪ್ರಿಲ್, 1990)
ಸಂಪಾದಕರು: ಡಿ.ಎಸ್. ನಾಗಭೂಷಣ, ರಾಘವೇಂದ್ರ ಪಾಟೀಲ, ಸ. ಉಷಾ


