ಹಿಂದೂ ಮುಸ್ಲಿಂ ಕ್ಲೀನರುಗಳು-ದೇವನೂರ ಮಹಾದೇವ
[ಎಚ್.ಗೋವಿಂದಯ್ಯ ಅವರ ಪ್ರಕಾಶನದ- ‘ಶೋಷಿತ’ (ಸಂಚಿಕೆ-01, ಪುಟ: 04, ಡಿಸೆಂಬರ್ 06, 1975)ಪತ್ರಿಕೆಯಲ್ಲಿ ಪ್ರಕಟವಾದ ದೇವನೂರ ಮಹಾದೇವ ಅವರು ಕಿಡಿಗೇಡಿ ಹೆಸರಿನಲ್ಲಿ ಬರೆಯುತ್ತಿದ್ದ “ಕಿಡಿಗೇಡಿ ಕಣ್ಣೋಟ” ಬರಹವನ್ನು ಹುಡುಕಿ ನಮಗೆ ಕಳಿಸಿದ ಆರ್.ಶ್ರೀಧರ ಅವರಿಗೆ ಧನ್ಯವಾದಗಳು]
ಯಾವುದೋ ಬ್ರಾಹ್ಮಣರ ಕಾಫಿ ಕ್ಲಬ್ಬಿಗೆ ಹೋಗಿ ಕೂತವನೆ ಟೀಗೆ ಹೇಳಿ ಹೊಟೆಲ್ಲ ಸುತ್ತಲೂ ಕಣ್ಣಾಡಿಸುತ್ತಿದ್ದೆ, ಬಾಳ ಹೊತ್ತಾದರೂ ಟೀ ಬಾರದಿದ್ದ ಪ್ರಯುಕ್ತ ಬಂದು ಹೋಗುತ್ತಿದ್ದ ಜನರ ಮೇಲೆ ನನ್ನ ಕಣ್ಣು ಓಡಾಡುತ್ತಿತ್ತು. ಇದ್ದಕ್ಕಿದ್ದಂತೆ ರಫ್ ಅಂತ ಸದ್ದಾಯಿತು. ಏನಪ್ಪ ಅಂತ ಸದ್ದು ಬಂದ ಕಡೆಗೆ ನೋಡಿದೆ. ಯಾರೋ ಒಬ್ಬ ಗಿರಾಕಿ ಕ್ಲೀನರ್ಗೆ ಕೆನ್ನೆಗೆ ಬಾರಿಸಿದ್ದನು. ಕಾರಣ: ಆ ಕ್ಲೀನರು ಗಿರಾಕಿಯ ಬಿಳಿಬಟ್ಟೆಗೆ ಸ್ವಲ್ಪ ನೀರು ಚೆಲ್ಲಿಸಿದ್ದು, ಅದಕ್ಕಾಗಿ ಕುಪಿತಗೊಂಡ ಗಿರಾಕಿಯ ಕ್ಲೀನರ್ನ ಕೆನ್ನೆ ಕಾಯಿಸಿದ್ದ. ಕ್ಲೀನರ್ ಏನೂ ತೋಚದೆ ಬೆಬೆಗುಟ್ಟುತ್ತ ನಿಂತಿದ್ದ.
ಗಿರಾಕಿ ಇನ್ನೂ ಕುದಿಯುತ್ತಿದ್ದ. ಹೊಟೆಲ್ಲ ಮಾಲಿಕನೆ ಖುದ್ದು ಬಂದು ನಿಂತು ಪರಿ ಪರಿಯಾಗಿ ಗಿರಾಕಿಯನ್ನು ಸಮಾಧಾನ ಪಡಿಸುತ್ತಿದ್ದ. ಉಳಿದ ಗಿರಾಕಿಗಳಲ್ಲಿ ಬಹು ಪಾಲು ಜನ ತಮಗೂ ಇದಕ್ಕೂ ಏನೂ ಸಂಬಂಧ ಇಲ್ಲದವರಂತೆ ಇದ್ದರು. ಕೆಲವರು ‘ಇನ್ನೂ ನಾಕು ತದಕಬೇಕು. ಬೋಳಿಮಕ್ಕಳಿಗೆ ತಿಂದ ಕೊಬ್ಬು’ ಎಂದು ಬಾಯಾಡಿಸುತ್ತಿದ್ದರು. ಅಲ್ಲಿದ್ದ ಯಾವೊಬ್ಬನಿಂದಲೂ ಕ್ಲೀನರ್ ಬಗ್ಗೆ ಪರವಾದ ಮಾತಾಗಲಿ, ಕಣ್ಣಲ್ಲಿ ಸಹಾನುಭೂತಿಯಾಗಲಿ ಕಾಣಲಿಲ್ಲ. ಸ್ವಲ್ಪ ಹೊತ್ತಾದ ಮೇಲೆ ಪರಿಸ್ಥಿತಿ ಮಾಮೂಲಿಯಾಯ್ತು.
ಇದಾದ ಎಷ್ಟೋ ದಿನಗಳ ಮೇಲೆ ಒಂದು ದಿನ ಯಾವುದೋ ಒಂದು ಮುಸ್ಲಿಮರ ದರಬಾರ್ ಹೊಟೆಲ್ಲಿಗೆ ಚಾ ಕುಡಿಯಲು ಹೋಗಿದ್ದೆ. ಬ್ರಾಹ್ಮಣರ ಕಾಫಿ ಕ್ಲಬ್ ಗಿಂತ ಭಿನ್ನ ವಾತಾವರಣ ಇತ್ತು. ಬ್ರಾಹ್ಮಣರ ಕಾಫಿ ಕ್ಲಬ್ಬಿನ ಕ್ಲೀನರ್ಗೆ ಗಿರಾಕಿಯು ತಟ್ಟಿದ್ದ ಘಟನೆ ಇನ್ನೂ ಮನಸ್ಸಲ್ಲಿ ಹಸಿಯಾಗಿದ್ದರಿಂದ ಇಲ್ಲೂ ಕ್ಲೀನರ್-ಗಿರಾಕಿ ಸಂಬಂಧದ ಬಗ್ಗೆ ಹೆಚ್ಚು ಗಮನವಿಟ್ಟಿದ್ದೆ. ಇಲ್ಲಿ ಎಲ್ಲಾ ಗಿರಾಕಿಗಳು ಬಯ್ಯ (ಸೋದರ) ಎಂದೇ ಮಾತಾಡಿಸುತ್ತಿದ್ದು ನನ್ನನ್ನು ಚಕಿತಗೊಳಿಸಿತು. ಇಲ್ಲಿನ ಕ್ಲೀನರ್ ಗಳ ಮುಖದಲ್ಲಿ ಹಿಂದೂ ಹೊಟೆಲ್ಲಿನ ಕ್ಲೀನರ್ ಗಳ ಮುಖದಂತೆ ದೈನ್ಯತೆ ಅಥವಾ ಕರುಣಾಕಾಂಕ್ಷೆ ಇರಲಿಲ್ಲ. ಇದ್ಯಾಕೆ ಇಲ್ಲಿ ಹೀಗೆ ಎಂಬ ಪ್ರಶ್ನೆ ನನ್ನ ಮನಸ್ಸಲ್ಲಿ ಸಿಕ್ಕಿಕೊಂಡಿತು.
ಹಿಂದೂ ಧರ್ಮದಲ್ಲಿ ದುಡಿಮೆಯನ್ನು ಕೀಳಾಗಿ ಕಂಡದ್ದರಿಂದಲೇ? ಅಥವಾ ಹಿಂದೂ ಧರ್ಮದಲ್ಲಿ ಜಾತಿಪದ್ದತಿ, ಅಸ್ಪೃಶ್ಯತೆಗಳು ಇರುವುದರಿಂದಲೇ? ಅಥವಾ?…
