ಜೋತಮ್ಮರ ಬೆಳಕಿನಲ್ಲಿ ದೇವನೂರರ ಚಿಂತನೆಯ ಹೊಳಪು: ಕಿರು ರಂಗಮಂದಿರದಲ್ಲಿ ‘ಎದೆಗೆ ಬಿದ್ದ ಅಕ್ಷರ’ದ ರಂಗರೂಪ ಪ್ರದರ್ಶನ
(ಆಂದೋಲನ ಪತ್ರಿಕಾ ವರದಿ-5.5.2025)
ಮೈಸೂರು: ಜೋತಮ್ಮದಿರ ಬೆಳಕಿನಲ್ಲಿ ನಾಡಿನ ಸಾಕ್ಷಿ ಪ್ರಜ್ಞೆ ದೇವನೂರ ಮಹಾದೇವರ ಚಿಂತನೆಗಳ ಹೊಳಹು ರಂಗದಲ್ಲಿ ಪ್ರದರ್ಶನ ಗೊಂಡಿತು.
ನಗರದ ಕಲಾಮಂದಿರದ ಕಿರು ರಂಗಮಂದಿರ ದಲ್ಲಿ ನಡೆದ ದೇವನೂರ ಮಹಾದೇವ ಅವರು ತಮ್ಮ ಕೃತಿ ‘ಎದೆಗೆ ಬಿದ್ದ ಅಕ್ಷರ’ ದಲ್ಲಿನ 4 ದಶಕಗಳ ಚಿಂತನೆ, ಅಭಿಪ್ರಾಯ, ಸಾಹಿತ್ಯದ ಮೂಲಕ ಧ್ಯಾನಿಸಿದ್ದ ಎಲ್ಲ ವಿಚಾರಗಳನ್ನು ಸಾಹಿತಿ ಎಸ್. ನಟರಾಜ ಬೂದಾಳ್ ಮತ್ತು ಆರ್.ಸಂತೋಷ್ ನಾಯಕ ಅವರು ರಂಗರೂಪದ ಮೂಲಕ ಜನರಿಗೆ ದಾಟಿಸಿದರು.
ದೇವನೂರ ಮಹಾದೇವ ಅವರ ಎದೆಗೆ ಬಿದ್ದ ಅಕ್ಷರ’ ಕೃತಿಯನ್ನು ಓದುವಾಗ, ಅಲ್ಲಿನ ಕಥಾನಕ ಗಳು ಬೀರುವ ಪರಿಣಾಮವನ್ನು ಕಾವಲು ಮನೆ ಸಾಂಸ್ಕೃತಿಕ ಕೇಂದ್ರದ ಕಲಾವಿದರು ರಂಗಾಸಕ್ತರ ಮನಸ್ಸಿಗೆ ನಾಟುವಂತೆ ರಂಗದ ಮೇಲೆ ತೆರೆದಿಟ್ಟರು.
ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ, ಇಂದಲ್ಲ ನಾಳೆ ಫಲ ನೀಡುತ್ತದೆ’ ಎಂಬ ಸಾಲುಗಳಿಂದ ಆರಂಭಗೊಂಡ ನಾಟಕ ನೆರೆದಿದ್ದ ರಂಗಾಸಕ್ತರನ್ನು ಆಕರ್ಷಿಸಿತು. ಜಾತೀಯತೆ, ಕನ್ನಡ ಭಾಷೆಯ ಉಳಿವು, ಒಳಮೀಸಲಾತಿ, ರಾಜಕೀಯ ಸ್ಥಿತಿಗತಿ, ರಾಮನ ವಚನಗಳು, ಶ್ರೀ ಕೃಷ್ಣನನ್ನು ಕಾಣಲು ಉಡುಪಿ ಮಠದಲ್ಲಿ ಕನಕದಾಸರು ನಡೆಸುವ ಸಂವಾದ ರೈತರ ಸಂಕಷ್ಟಗಳ ಜೊತೆಗೆ ದೇವನೂರ ಮಹಾದೇವ ಅವರ ವಿಚಾರಧಾರೆಯನ್ನು ಕಲಾವಿದರು ರಂಗ ಮೇಲೆ ಅಚ್ಚುಕಟ್ಟಾಗಿ ಮೂಡಿಸಿ ಕರತಾಡನಕ್ಕೆ ಸಾಕ್ಷಿಯಾದರು.
ಪ್ರತಿ ಸನ್ನಿವೇಶದಲ್ಲಿನ ಸಂಭಾಷಣೆಗೆ ನೆರೆದಿದ್ದವರು ಶಿಳ್ಳೆ, ಚಪ್ಪಾಳೆ ಮೂಲಕ ಹುರಿದುಂಬಿಸುವ ಜೊತೆಗೆ ಗಂಭೀರ ವಿಚಾರಗಳನ್ನು ಎದೆಗೆ ಆತುಕೊಂಡರು. ಕಲಾವಿದರು ಧರಿಸಿದ್ದ ಗೊಂಬೆಗಳು ಪೆಡಂಭೂತಗಳು ಯಾರು ಮತ್ತು ಯಾವ ವಿಚಾರಗಳು ಎಂಬುದನ್ನು ಬಿಂಬಿಸಿದವು. ಕನ್ನಡ ಭಾಷೆಯ ಉಳಿವು ಕೂಡ ದಲಿತರು ಮತ್ತು ಬಡಜನರ ಕೈಯಲ್ಲಿದೆ. ಕನ್ನಡ ಕಡ್ಡಾಯ ಎಂಬ ಕಾನೂನನ್ನು ತರಬೇಕು. ಶಿಕ್ಷಣ ಕೇವಲ ಅಂಕಗಳಿಸುವುದಕ್ಕಷ್ಟೇ ಸೀಮಿತವಾಗದೆ ಮಾನವೀಯ ಮೌಲ್ಯಗಳನ್ನು ಬಿತ್ತುವ ಕಾರ್ಯಕ್ಕೂ ಹಾದಿ ಆಗಬೇಕು ಎಂದು ಸಾರಿದರು.
ಪ್ರಕೃತಿ ವಿಕೋಪದಿಂದ ಸತ್ತವರಿಗಿಂತ ಯುದ್ಧೋ ನಾದದಲ್ಲಿ ಸತ್ತವರ ಸಂಖ್ಯೆಯೇ ಹೆಚ್ಚಾಗಿದೆ. ಇಂತಹ ಕಾಲಘಟ್ಟದಲ್ಲಿ ದೇಶದಲ್ಲಿ ಯುದ್ಧದ ಮಾತುಗಳು ಕೇಳಿ ಬರುತ್ತಿವೆ. ದಲಿತರು, ಅಲ್ಪ ಸಂಖ್ಯಾತರ ಹತ್ಯೆಗಳು ಹೆಚ್ಚುತ್ತಿವೆ. ಹೀಗಾಗಿ ಸೌಹಾರ್ದತೆ ಮೂಡಿಸುವುದು ಅಗತ್ಯ ಎನ್ನುವ ಪ್ರಸಂಗವನ್ನು ಕಲಾವಿದರು ಸೊಗಸಾಗಿ ಅಭಿನಯಿಸಿದರು. ನಾಟಕದ ಪರಿಕಲ್ಪನೆ, ಸಂಗೀತ ಮತ್ತುನಿರ್ದೆಶನ ಸಿ.ಬಸವಲಿಂಗಯ್ಯ ರಂಗರೂಪಕ್ಕೆ ತಂದ ಸಾಹಿತಿ ಎಸ್.ನಟರಾಜ ಬೂದಾಳ್, ಆ. ಸಂತೋಷ್ ನಾಯಕ್, ಸಹಾಯಕ ನಿರ್ದೇಶಕ ಎಸ್.ಕಾರ್ತಿಕ್, ಸಾಹಿತಿ ಡಾ. ರಾಜಪ್ಪ ದಳವಾಯಿ ಹಾಜರಿದ್ದರು.
———-
‘ಹಂಚಿ ಉಂಡರೆ ಒಳ ಮೀಸಲಾತಿ’
ಪ್ರಸ್ತುತ ಸಂದರ್ಭದಲ್ಲಿ ಒಳಮೀಸಲಾತಿಯ ಕಾರಣದಿಂದ ದಲಿತ ಸಮುದಾಯದಲ್ಲಿ ಒಡಕು ಮೂಡುತ್ತಿದೆ. ಹೀಗಾಗಿ ಮೀಸಲಾತಿ ಎಡ-ಬಲ ಸೇರಿದಂತೆ ಇತರೆ ಸಮುದಾಯಗಳಿಗೂ ಸಮನಾಗಿ ಹಂಚಿಕೆ ಆಗಬೇಕು ಎಂಬುದನ್ನು ಒಂದೇ ದೇಹದ ಎರಡು ಪಕ್ಷಿಗಳು ಆಹಾರ ಸೇವಿಸುವ ದೃಶ್ಯಾಭಿನಯ ಮನೋಜ್ಞವಾಗಿ ಮೂಡಿ ಬಂದಿತು.
———-
“ಮನೆ ಸಿಗುವ ತನಕ ಗುಡಿ ಕಟ್ಟಬೇಡಿ’
ಕನಕನ ಕಿಂಡಿಯ ಪ್ರಸಂಗ ವೇದಿಕೆ ಮೇಲೆ ಸುಂದರವಾಗಿ ಪ್ರದರ್ಶನಗೊಂಡಿತು. ಕೃತಿಯಲ್ಲಿನ ‘ದೇವರ ಕಲ್ಪನೆ’ ಲೇಖನದಲ್ಲಿ ಮನೆ ಮಂಚಮ್ಮ ದೇಗುಲ ಕಟ್ಟಲು ಊರಿನ ಗ್ರಾಮಸ್ಥರು ಮುಂದಾಗುತ್ತಾರೆ. ಇಂತಹ ಸಂದರ್ಭದಲ್ಲಿ ಮನೆ ಮಂಚಮ್ಮ ದೇವರು ಮೈ ಮೇಲೆ ಬಂದು, ‘ಮಕ್ಕಳೇ ನಿಮಗೆ ಮನೆ ಸಿಗುವ ತನಕ ನನಗೆ ಗುಡಿ ಕಟ್ಟಬೇಡಿ ಎನ್ನುತ್ತಾಳೆ ಈ ಪ್ರಸಂಗ ಜೋರು ಚಪ್ಪಾಳೆ ಗಿಟ್ಟಿಸಿಕೊಂಡಿತು.