ಕುಪ್ಪೆ ನಾಗರಾಜ ಅವರು ತಮ್ಮ’ಅಲೆಮಾರಿಯ ಅಂತರಂಗ’ದಲ್ಲಿ…

[ಕುಪ್ಪೆ ನಾಗರಾಜ ಅವರು ತಮ್ಮ’ಅಲೆಮಾರಿಯ ಅಂತರಂಗ’ (ಆತ್ಮಕಥನ, ಪುಟ: 173-174, 2017)ದಲ್ಲಿ ದೇವನೂರ ಮಹಾದೇವ ಅವರ ಕುರಿತು ಬರೆದ ಕಿರು ಟಿಪ್ಪಣಿ. ಇದನ್ನು ಹುಡುಕಿ ನಮಗೆ ಕಳಿಸಿದ ಶ್ರೀಧರ್. ಆರ್ ಅವರಿಗೆ ಧನ್ಯವಾದಗಳು.]
“ದ.ಸಂ.ಸ. (ದಲಿತ ಸಂಘರ್ಷ ಸಮಿತಿ) ಸಂಸ್ಥಾಪಕರಲ್ಲಿ ಒಬ್ಬರಾಗಿ ಆಗಲೇ ‘ದ್ಯಾವನೂರು’ ಕಥಾಸಂಕಲನ ತಂದು ಕನ್ನಡ ಸಾಹಿತ್ಯದಲ್ಲಿ ತಲ್ಲಣಗಳನ್ನು ಉಂಟುಮಾಡಿದ್ದವರು ದೇವನೂರ ಮಹಾದೇವ. ಗ್ರಾಮೀಣ ಭಾರತದ ದಲಿತರ ನೈಜಸ್ಥಿತಿಗಳನ್ನು ಪರಿಚಯಿಸಿದ್ದ ಇವರು ಸಾಹಿತ್ಯದ ಜೊತೆಗೆ ಸಮಾಜವಾದಿ ಸಂಘಟನೆ ಮತ್ತು ಅನೇಕ ಪ್ರಗತಿಪರ ಚಳವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರು ಹುಣಸೂರಿನ ನಮ್ಮ ಪುಣ್ಯಭೂಮಿ ಹಾಸ್ಟೆಲ್ ಗೆ ಬರುತ್ತಾರೆ ಅನ್ನೊ ವಿಷಯ ಕೇಳಿ ಅವರನ್ನು ನೋಡುವ ತೀವ್ರತೆ ನಮಗೆ ಹೆಚ್ಚಾಗಿತ್ತು. ಆ ದಿನ ನಾವೆಲ್ಲ ಅವರ ಬರುವಿಗಾಗಿ ಕಾದು ಕುಳಿತಿದ್ದೆವು.
ನೀಳಕಾಯ, ಕುರುಚಲು ಗಡ್ಡ, ಕಂಕುಳಲ್ಲಿ ನೇತಾಡುತ್ತಿದ್ದ ಬ್ಯಾಗು, ಮುದುರಿ ಮುದ್ದೆಯಾಗಿ ಮುಂಗೈ ತೋಳು ಮಡಚಿದ ಅಂಗಿ, ಮಾಸಲು ಬಣ್ಣದ ಪ್ಯಾಂಟ್ ತೊಟ್ಟ ವ್ಯಕ್ತಿ ಬಂದು ಹಾಸ್ಟೆಲ್ ಮುಂಭಾಗ ನಿಂತಿತ್ತು. ಈ ಹಿಂದೆಯೇ ಪರಿಚಯವಿದ್ದ ಆನಂದಸ್ವಾಮಿಯವರು ದೇವನೂರರನ್ನು ಬರಮಾಡಿಕೊಂಡ್ರು. ಅವರು ನಮ್ಮೊಡನೆ ನಾಲ್ಕಾರು ತಣ್ಣನೆ ಮಾತನಾಡಿದರು. ಅವರ ಮಾತಲ್ಲಿ ಆಕ್ರೋಶವಿರಲಿಲ್ಲ. ತಣ್ಣನೆಯ ಸುಳಿಗಾಳಿಯಂತಹ ನೋವಿತ್ತು. ಚಳವಳಿಗಾರರ ಆಕ್ರಂದನ ಮತ್ತು ಆಕ್ರೋಶದ ಮಾತುಗಳನ್ನು ಕೇಳಿದ್ದ ನನಗೆ ಇದೇನೋ ಒಂದು ತರ ಹೊಸದು ಅನ್ನಿಸಿತು. ಮೊದಲಬಾರಿ ತೀರ ಸರಳ ಸಜ್ಜನಿಕೆಯ ದೇವನೂರರನ್ನು ನೋಡಿದ ನನಗೆ ತೀರ ಹತ್ತಿರದ ನನ್ನ ಬಂಧು ಒಬ್ಬರನ್ನು ನೋಡಿದಂತಾಯಿತು. ಆಗ ಪರಿಚಯವಾದ ದೇವನೂರರ ಸಂಪರ್ಕ ಇಂದಿಗೂ ಮುಂದುವರಿದಿದೆ.”