ಅಮಾಸ ಕುರಿತು-ಡಾ. ಕರೀಗೌಡ ಬೀಚನಹಳ್ಳಿ,
“ಕನ್ನಡ ಕಥಾ ಸಾಹಿತ್ಯದಲ್ಲಿಯೇ ಅಮಾಸನ ಪಾತ್ರ ವಿಶಿಷ್ಟತೆಯಿಂದ ಕೂಡಿದೆ. ಮಹಾದೇವರ ಮನೋಧರ್ಮ ಈ ಪಾತ್ರದ ಅನನ್ಯತೆಯಲ್ಲಿ ವ್ಯಕ್ತವಾಗುತ್ತದೆ. ಆತ ತಬ್ಬಲಿ ಹುಡುಗನಾದರೂ ಆತನಿಗೂ ಒಂದು ಅನನ್ಯವಾದ ವ್ಯಕ್ತಿತ್ವವಿದೆ. ಆ ವ್ಯಕ್ತಿತ್ವಕ್ಕೊಂದು ಸತ್ವ ಇದೆ. ಬದುಕಿನಲ್ಲಿ ಆತನಿಗೊಂದು ಅನಿವಾರ್ಯತೆ ಇದೆ. ಆತ ಶೋಷಣೆ ಸಹಿತ ಸಮಾಜಕ್ಕೆ ಭಯದ ಸಂಕೇತವಾಗಿದ್ದಾನೆ. ದಲಿತ ಸಮಾಜಕ್ಕೆ ಆತ ಭರವಸೆಯ ಪ್ರತೀಕವಾಗಿದ್ದಾನೆ. ಕುರಿಯಯ್ಯನ ಜೀವನ ಅವನಲ್ಲಿ ಮತ್ತೆ ಮರುಕಳಿಸಬಾರದು ಎಂಬ ನಿರೂಪಕನ ದರ್ಶನ ಇದರ ಹಿಂದೆ ಇದೆ. ಊರಿನ ಹೆಂಗಸು ಬಂಗಾರಿಯ ಕಣ್ಣಲ್ಲಿ ಅಮಾಸ ಜೀವನೋತ್ಸಾಹದ ಸಂಕೇತವಾದರೆ, ಊರಿನ ಗೌಡರ ಕಣ್ಣಲ್ಲಿ ಹುಲಿಯಾಗಿ ಮೂಡಿಬರುವ ಪ್ರತೀಕವಾಗಿದ್ದಾನೆ. ಅಮಾಸನಲ್ಲಿ ಪ್ರಚಂಡವಾದ ಕ್ರಿಯಾಶೀಲತೆ, ಜೀವಂತಿಕೆ ಇದೆ. ಅವನಿಗೆ ಕುರಿಯಯ್ಯ ಬೆಳೆಸಿದ ತೆಂಗಿನಮರ, ಊರಿನ ಮಾರಿಗುಡಿ ಎರಡನ್ನೂ ಮೀರಿ ಬೆಳೆಯುವ ಪ್ರಚಂಡವಾದ ಶಕ್ತಿಯಿದೆ. ದಲಿತರ ಬದುಕಿನ ಬದಲಾವಣೆಗೆ ಆತ ಸಂಘರ್ಷದ ಬೀಜವಾಗಿದ್ದಾನೆ. ಈ ದೃಷ್ಟಿಯಿಂದ ಈ ಕತೆಯು ಮಹಾದೇವರ ಇತರೆ ಕತೆಗಳಿಗಿಂತ ಭಿನ್ನವಾಗಿದೆ. ಆಶಯ ಮತ್ತು ಅಭಿವ್ಯಕ್ತಿಗಳೆರಡರಲ್ಲೂ ಇದು ಹೊಸ ಸಾಮಾಜಿಕ ಮತ್ತು ರಾಜಕೀಯವಾದ ತಿಳುವಳಿಕೆಯನ್ನು ಆಳದಲ್ಲಿ ಹುದುಗಿಸಿಕೊಂಡಿದೆ.
