ಉದಯವಾಣಿ, ಹೊತ್ತಿಗೆ ಹೊಸತು- “ಎದೆಗೆ ಬಿದ್ದ ಅಕ್ಷರ”

[2012ರ ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಿತ ಲೇಖನ] 
ಲೇ.: ದೇವನೂರು ಮಹಾದೇವ
ಪ್ರ:ಅಭಿನವ17/18-2, ಮೊದಲನೇ ಮುಖ್ಯ ರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40 
ಮುಖಪುಟ ವಿನ್ಯಾಸ : ಕೆ. ಜೆ. ಸಚ್ಚಿದಾನಂದ 
ಮು- 2012, ಬೆಲೆ:150 ರೂ 

ಇಲ್ಲಿನವು ಒಂದೂವರೆಯಿಂದ ಎರಡೂವರೆ ಪುಟದವರೆಗಿನ ಲೇಖನಗಳು. ಕೆಲವಷ್ಟೆ ಕೊಂಚ ದೀರ್ಘವಾಗಿವೆ. ಜೊತೆಗೆ, ಅಲ್ಲಲ್ಲಿ ಮಾಡಿದ ಭಾಷಣಗಳು, ಬರೆದ ಟಿಪ್ಪಣಿಗಳು, ಸಂದರ್ಶನ ಇತ್ಯಾದಿಗಳೆಲ್ಲ ಇಲ್ಲಿ ಜಾಗ ಪಡೆದಿವೆ.

ಬಹಳ ಕಾಲ ಬರೆಯದೇ ಉಳಿದಿರುವ, ಬರೆಯುತ್ತ ಬರೆಯುತ್ತ ಲೋಲುಪರಾಗುವ ಅಪಾಯವನ್ನು ಗೆಲ್ಲಲು ನಿರಂತರ ಪ್ರಯತ್ನಿಸುತ್ತಿರುವಂತೆ ಕಾಣುವ ದೇವನೂರು ಮಹಾದೇವರ ಈ ಪುಸ್ತಕ ಸಹೃದಯರು ಕಕ್ಕುಲಾತಿಯಿಂದ ಎತ್ತಿಕೊಳ್ಳುವಂತಿದೆ. ಇಲ್ಲಿನ ಪುಟ್ಟ ಪುಟ್ಟ ಬರಹಗಳು ಮತ್ತು ಅವು ಹೇಳದೇ ಉಳಿದಿರುವ ಅನೇಕ ಸಂಗತಿಗಳು ಈ ಪುಸ್ತಕಕ್ಕೊಂದು ಗಾಂಭೀರ್ಯವನ್ನು ಕೊಟ್ಟಿವೆ.

ದಶಕದಿಂದೀಚೆಗೆ ಕನ್ನಡದ ಬರವಣಿಗೆ ವಿಚಿತ್ರ ನಿಲುವಿಗೆ ಬಂದು ನಿಂತಿದೆ. ಇತ್ತೀಚೆಗೆ ಬಂದ ಆತ್ಮಕಥನಗಳು ಹಲವಾರು. ಉಳಿದ ಬರಹಗಳು ಆತ್ಮಕಥನಗಳ ರೀತಿಯಲ್ಲಿ ಸುತ್ತಿದಲ್ಲಿಯೇ ಸುತ್ತುವುದರಲ್ಲಿ ಮೈಮರೆತಂತೆ ಕಾಣುತ್ತಿವೆ. ಇಂಥ ಸನ್ನಿವೇಶದಲ್ಲಿ ಭಾವುಕ ಸಂವೇದನೆಗಳಿಗಿಂತ ಹೊರತಾದ ಹೊಸತಾದ ಹೊತ್ತಗೆಯೊಂದು ಬೇಕಿತ್ತು.ಬ್ರಾಹ್ಮಣ ಸಂವೇದನೆ, ಗೌಡ ಸಂವೇದನೆ, ಬಂಟ ಸಂವೇದನೆ, ಲಿಂಗಾಯತ ಸಂವೇದನೆ, ದಲಿತ ಸಂವೇದನೆ ಇತ್ಯಾದಿಗಳ ಪ್ರವಾಹದಲ್ಲಿ ಎಲ್ಲರೂ ಒಂದೇ ದಿಕ್ಕಿನಲ್ಲಿ ಸಾಗುತ್ತಿರುವಾಗ ಭಿನ್ನವಾದ ಧ್ವನಿಯೊಂದರ ಅಗತ್ಯವನ್ನು ಪೂರೈಸುವಂತೆ ಮಹಾದೇವರು ಈ ಪುಸ್ತಕದ ಮೂಲಕ ಮಾತನಾಡಿದ್ದಾರೆ. ಆತ್ಮಕಥನಗಳ ಮಧ್ಯೆ ಆತ್ಮವಿಮರ್ಶೆಯ ಕಥನವೊಂದರ ತುರ್ತನ್ನು ತುಂಬಿಕೊಟ್ಟಿದ್ದಾರೆ. ಸುಮಾರು ನಾಲ್ಕು ದಶಕಗಳಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ಮೂಡಿರುವ ಈ ಯೋಚನಾಲಹರಿಗಳು ಈಗಲೂ ಪ್ರಸ್ತುತವೆಂಬಂತೆ ಆಪ್ತವಾಗುತ್ತವೆ.

ಅಸ್ಪೃಶ್ಯತೆ, ಹಿಂಸೆಯಂಥ ಅಮಾನವೀಯ ವಿಚಾರಗಳನ್ನು ವಿರೋಧಿಸುತ್ತ ಮಹಾದೇವ, “ಮನುಷ್ಯನಾಗಿ ಹುಟ್ಟಿದ ಮನುಷ್ಯ-ಮನುಷ್ಯನಾಗೇ ಉಳಿಯಲು ಎಷ್ಟೊಂದು ಕಷ್ಟ” ಎಂದು ನೊಂದುಕೊಳ್ಳುತ್ತಾರೆ. ಮನುಷ್ಯತ್ವವನ್ನು ಪ್ರತಿಪಾದಿಸುವುದೇ ಇಲ್ಲಿನ ಎಲ್ಲ ಬರಹಗಳ ಆಶಯ.

ಇದಕ್ಕೆ ಮಹಾದೇವರು ಬಳಸಿದ ಶೈಲಿ ಮತ್ತು ಭಾಷೆಯೂ ಅಪ್ಪಟ ಅವರದ್ದೇ. ಒಂದೆಡೆ ಅವರು ಗಂಡಭೇರುಂಡವನ್ನು, ಮತ್ತೊಂದೆಡೆ ತ್ರಿವಿಕ್ರಮನ ಬೇತಾಳವನ್ನು ರೂಪಕಗಳಾಗಿ ಬಳಸುತ್ತಾರೆ. ಗಾಢವಾಗಿ ಚಿಂತಿಸುವಂತೆ ಮಾಡುವ ಎಷ್ಟೊಂದು ಉಪಕತೆಗಳು! ಪ್ರಗತಿಪರವಾಗಿ ಯೋಚಿಸುವ ಕುವೆಂಪು, ಆಲನಹಳ್ಳಿ ಕೃಷ್ಣ, ಲಂಕೇಶ್, ಅನಂತಮೂರ್ತಿ ಮೊದಲಾದವರಿಗೆ ಮುಖಾಮುಖಿಯಾಗುವ ಕ್ಷಣಗಳು, ಅವರ ಅಂತರಂಗದೊಳಗೆ ಮೌನವನ್ನು ತುಂಬುವ ಮಾತುಗಳು ಓದುಗರನ್ನು ಮತ್ತೆ ಮತ್ತೆ ಕಾಡಲಾರಂಭಿಸುತ್ತವೆ. ಕೆಲವಂತೂ ಆವರಣದಲ್ಲಿ ವಿಡಂಬನೆಯನ್ನೂ ಹೂರಣದಲ್ಲಿ ಗಂಭೀರ ಚಿಂತನೆಯನ್ನೂ ಹೊಂದಿವೆ.

ಮಹಾದೇವರ ಅಕ್ಷರಗಳು ಈಗ ಕನ್ನಡಿಗರ ಎದೆಗೆ ಬಿದ್ದಿವೆ.

ಬೆಂಗಳೂರಿನ ‘ಅಭಿನವ’ದ 300ನೆಯ ಪುಸ್ತಕವಿದು. ಯು.ಆರ್.ಅನಂತಮೂರ್ತಿ ಗೌರವಮಾಲಿಕೆಯಲ್ಲಿ ಮೊದಲನೆಯದು.

ಯಾಜ್ಞಿ