ದೇವನೂರ ಮಹಾದೇವರ “ಎದೆಗೆ ಬಿದ್ದ ಅಕ್ಷರ” ಮಾನವೀಯತೆಯ ಸಾಕ್ಷಾತ್ಕಾರ-ರಾಮಚಂದ್ರ ಗಂಗಾ

 [8.5.2025 ಮೈಸೂರು ದಿಗಂತ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ]

 

 

“ಎದೆಗೆ ಬಿದ್ದ ಅಕ್ಷರ” ನಾಟಕದ ಪ್ರತಿ ದೃಶ್ಯವೂ ನಮ್ಮ ಒಳಗಿನ ಶುದ್ಧ ಶಕ್ತಿಯ ನಿಜವಾದ ಸಾರವನ್ನು ಎಚ್ಚರಿಸುತ್ತದೆ. ನಮ್ಮ ಶಕ್ತಿಶಾಲಿ ಜೀವನವನ್ನು ಪರಿವರ್ತಿಸಿ ಅಂತರಂಗದೊಂದಿಗೆ ಪ್ರಜ್ಞಾಪೂರ್ವಕ ಸಂಪರ್ಕ ಸಾಧಿಸಿ ಜೀವನದ ಎಲ್ಲ ಆದರ್ಶಗಳನ್ನು ಎಚ್ಚರಿಸುವ ಕೆಲಸ ಮಾಡುತ್ತದೆ.

 

ಒಂದು ಒಳ್ಳೆಯ ಬರಹದ ಮೂಲವೇ ಅದು. ನಮ್ಮ ಮನಸ್ಸು, ಹೃದಯ, ಬುದ್ಧಿಶಕ್ತಿ, ನಮ್ಮ ಸಾಮಾಜಿಕ ಸ್ಥಿತಿಗತಿಗಳು, ಇವೆಲ್ಲವನ್ನು ಒಂದು ಒಳ್ಳೆಯದಕ್ಕೆ ಮಿಡಿಯುವಂತೆ ಸಂಯೋಜಿಸುತ್ತದೆ. ಎದೆಗೆ ಬಿದ್ದ ಅಕ್ಷರವೇ ಇದಕ್ಕೆಲ್ಲ ಉತ್ತರ ಕೊಡುವಂತಿದೆ. ದೇವನೂರು ಮಹಾದೇವರ ಈ ಪುಸ್ತಕವು ಅದರ ಉತ್ಕೃಷ್ಟ ವೈವಿಧ್ಯ ಮತ್ತು ಅದು ನೀಡುವ ರೂಪಕಗಳ ಬೆಳಕು ನಮ್ಮನ್ನು ಆಳವಾಗಿ ಕಲಕುತ್ತದೆ. ಹೇಗೆ ಅವರ ಒಡಲಾಳ ವಿಶಾಲವಾದ ಮಾನವ ಸಹಾನುಭೂತಿ ಮತ್ತು ಸಾರ್ವತ್ರಿಕ ಆಕರ್ಷಣೆಯಿಂದ ತುಂಬಿ ತುಳುಕುತ್ತದೋ ಹಾಗೆಯೇ ಇದು ಕೂಡ. ಕೇವಲ ವಿವರಣೆಯನ್ನು ಮೀರಿ ಭಾವನಾತ್ಮಕ ಮತ್ತು ಮಾನವ ಜೀವನದ ಆಳವಾದ ಪರಸ್ಪರ ಸಂಬಂಧವನ್ನು ಪ್ರತಿಬಿಂಬಿಸುತ್ತದೆ ಮತ್ತು ಶ್ರೇಣೀಕೃತ ಸಮಾಜದ ಒಟ್ಟು ವಾಸ್ತವವನ್ನು ಅಸಾಧಾರಣ ಸಂವೇದನೆ ಮತ್ತು ಕಲಾತ್ಮಕ ಆದರ್ಶದೊಂದಿಗೆಯೂ ಚಿತ್ರಿಸುತ್ತದೆ. ದೇವನೂರ ಮಹಾದೇವರವರ ಬರಹಗಳಲ್ಲಿರುವ ಕಲಾತ್ಮಕ ಶ್ರೇಷ್ಠತೆ, ತಾತ್ವಿಕ ಆಳ ಮತ್ತು ಸಾರ್ವತ್ರಿಕ ಆಕರ್ಷಣೆಗಳು ಅವರನ್ನು ಸಾರ್ವಕಾಲಿಕ ಶ್ರೇಷ್ಠ ಭಾರತೀಯ ಮತ್ತು ದೇಶಕಾಲಗಳನ್ನು ಮೀರಿದ ಲೇಖಕರೆಂದು ಪರಿಗಣಿಸುವಂತೆ ಮಾಡಿದೆ.

 

ಈ ನಾಟಕವು ಕಲಾಮಂದಿರದ ಕಿರುರಂಗಮಂದಿರದಲ್ಲಿ ಮೇ ೪, ೨೦೨೫ರಂದು ಪ್ರದರ್ಶನಗೊಂಡಿತು. ಮೈಸೂರಿನ ಕಾವಲುಮನೆ ಸಾಂಸ್ಕೃತಿಕ ಕೇಂದ್ರವು ಈ ನಾಟಕವನ್ನು ಪ್ರಸ್ತುತಪಡಿಸಿತು. ನಾಡಿನ ಹೆಸರಾಂತ ರಂಗ ನಿರ್ದೇಶಕ ಡಾ| ಸಿ.ಬಸವಲಿಂಗಯ್ಯನವರ ಒಟ್ಟು ದೃಶ್ಯ ಸಂಯೋಜನೆ ಬಲು ಸೊಗಸಾಗಿ ಬಂದಿದ್ದು ನಮ್ಮ ಆಂತರಿಕ ಶಕ್ತಿಯನ್ನು ಜಾಗೃತಗೊಳಿಸಿತ್ತು ಎನ್ನಬಹುದು. ಈ ಪುಸ್ತಕದ ಎಲ್ಲಾ ಲೇಖನಗಳು ನಮ್ಮ ಜೀವದ ಪ್ರಜ್ಞೆಯನ್ನು ಕೆಳ ಆಯಾಮದಿಂದ ಉನ್ನತ ಆಯಾಮಕ್ಕೆ ಏರಿಸುತ್ತದೆ. ಸಮಾಜ ಬದುಕುತ್ತಿರುವ ಹೀನಾಯ ಪರಿಸ್ಥಿತಿಯಿಂದ ನಮ್ಮನ್ನು ಹೇಗೆ ಉನ್ನತೀಕರಿಸಿಕೊಳ್ಳಬಹುದು ಎಂದು ಸಾರಿ ಸಾರಿ ಹೇಳುತ್ತದೆ. ಅಲ್ಲದೇ ಜಾತಿ, ಮೇಲುಕೀಳು, ಬಡವ-ಶ್ರೀಮಂತ ಈ ಎಲ್ಲ ಗೋಡೆಗಳನ್ನು ದಾಟಿ ಹೇಗೆ ಮಾನವೀಯತೆಯತ್ತ ತಿರುಗಿ ಮನುಷ್ಯತ್ವ, ದಯೆ ಎಂಬ ಅಂತಿಮ ಮೂಲದೊಂದಿಗೆ ಸಂಪರ್ಕ ಸಾಧಿಸಬಹುದು ಎನ್ನುವುದನ್ನು ಸಾಬೀತುಪಡಿಸುತ್ತದೆ.

 

ಒಟ್ಟು ನಾಟಕದ ದೃಶ್ಯಗಳು ಮಾನವ ಲೋಕದಲ್ಲಿ ಅನೇಕ ಮಾನವೀಯ ಮೌಲ್ಯಗಳಿವೆ. ನಮ್ಮ ಸಂಸ್ಕೃತಿಯೊಂದಿಗೆ ಅವು ಹಾಸುಹೊಕ್ಕಾಗಿವೆ. ಹಾಗೆಯೇ ಚೈತನ್ಯವು ಅದನ್ನು ವ್ಯಕ್ತಪಡಿಸುವ ಸಾಮರ್ಥ್ಯ ಕೂಡ ಹೊಂದಿದೆ. ಆದರೆ ಅದಕ್ಕೆ ಅವಕಾಶಗಳು ಬೇಕು ಅಷ್ಟೇ ಎನ್ನುವಂತಹ ಅನೇಕ ದೃಶ್ಯಗಳು, ನಮ್ಮನ್ನು ನಾವು ಮಾಡಬೇಕಾದ ಜವಾಬ್ದಾರಿಗಳತ್ತ ಎಚ್ಚರಿಸುತ್ತವೆ ಹಾಗೂ ಮಾನವೀಯತೆಯನ್ನು ಎಚ್ಚರಿಸಿ ನಮ್ಮನ್ನು ಕರಗಿಸುತ್ತವೆ. ನಾವು ನಡೆದುಕೊಳ್ಳುತ್ತಿರುವ ರೀತಿ ಸರಿ ಇದೆಯೇ ಎಂದು ಆತ್ಮವಿಮರ್ಶೆಗೆ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ. ನಾವು ಇರುವ ರೀತಿ ನಡೆದುಕೊಳ್ಳುವ ರೀತಿ ಮತ್ತು ಮನುಷ್ಯರೊಂದಿಗೆ ನಡೆದುಕೊಳ್ಳಬೇಕಾದ ಮಾನವೀಯ ನಡವಳಿಕೆಗಳನ್ನು ಜಾಗೃತಗೊಳಿಸುತ್ತದೆ. ಅಷ್ಟೇ ಅಲ್ಲ ನಮ್ಮ ರೀತಿ ನೀತಿಗಳ ನಮ್ಮ ನೈತಿಕ ಅಧಃಪತನದ ಸಂಕೀರ್ಣ ಸಂದರ್ಭಗಳನ್ನು ಎತ್ತಿ ತೋರಿಸಿ, ಮನಃಪರಿವರ್ತನೆಯ ಕಡೆ ನಮ್ಮನ್ನು ನೋಡುವಂತೆ ಮಾಡುತ್ತದೆ. ಇಲ್ಲಿಯ ಪ್ರತಿಯೊಂದು ಘಟನೆಗಳಿಗೂ ನಾವು ಬೇರೆಯವರತ್ತ ಕೈತೋರಿಸಿ ಜಾರಿಕೊಳ್ಳುವ ರೀತಿಯನ್ನು ಹಂಗಿಸಿ ನಾವು ಕೂಡ ಇಂತಹ ಅಮಾನವೀಯ ಕ್ರಿಯೆಯಲ್ಲಿ ಎಷ್ಟು ಪಾತ್ರ ವಹಿಸಿದ್ದೀವಿ ಎನ್ನುವುದನ್ನು ಸೂಚಿಸುತ್ತದೆ. ಎಲ್ಲದರಲ್ಲಿಯೂ ಜಾರಿಕೊಳ್ಳುವ ನಮ್ಮನ್ನು ತಡೆದು ನಿಲ್ಲಿಸಿ ಪ್ರಶ್ನೆ ಮಾಡುತ್ತದೆ. ಆತ್ಮಸಾಕ್ಷಿಯನ್ನು ಜಗ್ಗಿಸುತ್ತದೆ. “ಈ ಭೂಮಿ ನಿನ್ನದು ಎನ್ನುವುದಾದರೆ, ಅದು ಎಲ್ಲರದು ಅಂತ ಯಾಕಾಗಬಾರದು” ಎಂಬ ಲಿಯೋ ಟಾಲ್ ಸ್ಟಾಯ್ ರವರ ಮಾತು ಧ್ವನಿಸುತ್ತದೆ. ಒಟ್ಟಾರೆಯಾಗಿ ಈ ನಾಟಕವನ್ನು ರಂಗದ ಮೇಲೆ ಸೊಗಸಾಗಿ ರಂಗರೂಪಕ್ಕೆ ತಂದಿದ್ದಾರೆ.

 

ರಂಗದ ಮೇಲೆ ಸುಧೀರ್ ಕುಮಾರ್, ಮಲ್ಲಿಕ್ ಉತ್ತಮವಾಗಿ ನಟಿಸಿದರು ಜೊತೆಗೆ ಭೀಮ್‌ ರಾವ್, ಮಹದೇವ, ಉಮಾಶಂಕರ್ ದೀಕ್ಷಿತ್, ಸಂಜೀವ್ ಪಾಟೀಲ್, ಚಂದು, ಜಯ ಪಗಡೆ, ಸುಮ ಪ್ರಾಂತ್, ಶೋಭ ಶಿವರಾಜು, ರೂಪಶ್ರೀ, ರೇಖಾ, ಮಹಾದೇವಿ, ಷಹನಾಜ್ ರಹಮಾನ ಮುಂತಾದ ನಟ-ನಟಿಯರು ಉತ್ತಮವಾಗಿ ನಟಿಸಿದರು. ರಂಗದ ಹಿಂದಿನ ಹೊಣೆಯನ್ನು ಬಿ.ಎಂ.ರಾಮಚಂದ್ರ, ಪ್ರಶಾಂತ್ ಹೆಬ್ಬಸೂರು, ಶಿಶಿರ ಭಾಶಾ, ಮಧುಮಳವಳ್ಳಿ, ಸುಬ್ರಮಣ್ಯ, ರವಿಶಂಕರ್, ಸಿದ್ಧೇಶ್ ಬದನವಾಳು, ಸಿಂಚನ, ದೇವಾನಂದ ವರಪ್ರಸಾದ್, ಭೀಮರಾವ್, ಸುಮಾ ಪ್ರಶಾಂತ್, ರೂಪಶ್ರೀ, ರೇಖಾ, ಅಭಿಷೇಕ್.ಆರ್, ಟಿ.ಎಚ್.ಲವಕುಮಾರ್, ಸಂಜೀವ್ ಪಾಟೀಲ್‌, ಕಾರ್ತಿಕ್ ಎಸ್. ಮುಂತಾದವರು ಹೊತ್ತಿದ್ದರು.