ನಮಗೆ ಕಂಡಿರುವ ಒಬ್ಬನೇ ದೇವರು ಬುದ್ಧ… -ಬಂಜಗೆರೆ ಜಯಪ್ರಕಾಶ್

[ಬಂಜಗೆರೆ ಜಯಪ್ರಕಾಶ್ ಅವರು ‘ಎದೆಗೆ ಬಿದ್ದ ಅಕ್ಷರ’ ಕುರಿತು ಮಾತನಾಡಿದ ಸಂದರ್ಭ… ]
ಭೈರಪ್ಪ ಒಬ್ಬ ಕಾದಂಬರಿಕಾರರಾಗಿ ಸಾಹಿತ್ಯದಲ್ಲಿ ಇರಬೇಕಾದ ನ್ಯಾಯಪ್ರಜ್ಞೆಯನ್ನು ಇಟ್ಟುಕೊಳ್ಳದೆ ಅವಾಸ್ತವಿಕ ವಿಷಯಗಳನ್ನು ಸತ್ಯ ಅನ್ನುವ ರೀತಿಯಲ್ಲಿ ಜನರ ಮುಂದೆ ಬಿಂಬಿಸುವುದು ಮತ್ತು ಈಗಾಗಲೇ ಬಾಧೆಗೊಳಗಾಗಿರುವ ಜನರಿಗೆ ಬರೆ ಎಳೆಯುವುದಕ್ಕೆ ಪ್ರಯತ್ನ ಪಡುವುದು ಆತ್ಮಸಾಕ್ಷಿರಹಿತ ನಡೆ. ಇದಕ್ಕೆ ಪರ್ಯಾಯವಾಗಿ ನಮ್ಮ ಎದುರು ಕಾಣುವುದು ದೇವನೂರ ಮಹಾದೇವ. ಅವರ ಒಟ್ಟು ಬರವಣಿಗೆಯ ಹಿಂದಿರುವ ಸಾತ್ವಿಕತೆ ಹಾಗೂ ಸುಮಾರು ನಲವತ್ತು ವರ್ಷಗಳ ಸಾಮಾಜಿಕ ಸಂಚಲನೆಯನ್ನು ಕುರಿತು ಸ್ವತಃ ಅದರಲ್ಲಿ ಪಾಲುದಾರರಾಗಿ ಬರೆದಿರುವ ಎದೆಗೆ ಬಿದ್ದ ಅಕ್ಷರದಂತಹ ಚಿಂತನಶೀಲ ಕೃತಿ ನಮ್ಮ ಕಣ್ಣ ಮುಂದಿದೆ.
ಈ ಸಮಾಜದಲ್ಲಿ ಯಾರಿಗಾದರೂ ಆಕ್ರೋಶಭರಿತವಾದ ಭಾವನೆಯಿಂದ ಬೈಗುಳದ ಭಾಷೆಯನ್ನು ಬಳಸಿ ಅತ್ಯಂತ ತೀವ್ರಕೋಪವನ್ನು ಪ್ರಕಟಿಸುವ ಹಕ್ಕು ಇದ್ದರೆ ಅದು ದೇವನೂರ ಮಹಾದೇವ ಅವರಿಗೆ ಮಾತ್ರ. ಕಾರಣವೇನೆಂದರೆ, ಅವರು ನಮ್ಮ ಭಾರತೀಯ ಸಮಾಜದ ಕಟ್ಟಕಡೆಯ ಮನುಷ್ಯನ ಪ್ರತಿನಿಧಿಯಾಗಿ ಬರೆಯುತ್ತಿದ್ದಾರೆ. ಸಾವಿರಾರು ವರ್ಷಗಳ ಅವಮಾನ, ನಿರಂತರ ದೌರ್ಜನ್ಯ, ಅತ್ಯಾಚಾರ, ಶ್ರಮದ ಸುಲಿಗೆ… ಈ ರೀತಿಯ ಬರ್ಬರತೆಗೆ ಗುರಿಯಾಗಿಯೂ ಎದೆಗೆ ಬಿದ್ದ ಅಕ್ಷರ ವ್ಯಕ್ತಪಡಿಸುವುದು ದ್ವೇಷವನ್ನಲ್ಲ; ಈ ತಪ್ಪುಗಳನ್ನು ತಿದ್ದಿ ನಡೆಯಿರಿ ಎನ್ನುವಂತಹ ತಾಯ್ತನದ ನಿಲುವು. ಈ ಸಮಾಜದಲ್ಲಿ ಅಲ್ಪಸ್ವಲ್ಪ ಸವಲತ್ತುಗಳನ್ನು ಪಡೆದವರೂ ಸೇರಿದಂತೆ ಸಂಪೂರ್ಣ ಅವಕಾಶಗಳು, ಸೌಲಭ್ಯಗಳು, ಮಹಾದೇವು, ಜ್ಞಾನ ಮತ್ತು ಸಂಸ್ಕೃತಿಗಳ ಏಕಸ್ವಾಮ್ಯವನ್ನು ಪಡೆದಂತೆ ಅನುಭವಿಸಿದ ಜಾತಿಗಳವರಿಗೆ ಇದು ಒಂದು ಕಡೆ ಮರ್ಮಾಘಾತವನ್ನು ಉಂಟುಮಾಡಬೇಕು. ಅದೇ ಸಂದರ್ಭದಲ್ಲಿ ಜ್ಞಾನೋದಯವನ್ನೂ ಕೊಡಬೇಕು. ಇದು ಬುದ್ಧ ನಡೆದ ದಾರಿ, ಅಂಬೇಡ್ಕರ್ ನಡೆದ ದಾರಿ. ಆ ಕಾಲಘಟ್ಟದಲ್ಲಿ ಈ ಸಾವಿರಾರು ಜನರ ಮೊಟ್ಟಮೊದಲ ದನಿಯಾಗಿ ಮೂಡಿಬಂದ ಅಂಬೇಡ್ಕರ್ ಉಗ್ರ ಹೋರಾಟದ ಪ್ರತಿಪಾದನೆಯನ್ನು ಮಾಡಿದ್ದರೆ, ಹಿಂಸಾತ್ಮಕ ಹೋರಾಟದ ಮೂಲಕ ಬಿಡುಗಡೆಯನ್ನು ಬಯಸಿದ್ದರೆ, ಭಾರತದ ಪ್ರತಿ ಹಳ್ಳಿ ರಣರಂಗವಾಗಿ ಉರಿದುಹೋಗುತ್ತಿತ್ತು. ಆದರೆ ಈ ಮನುಷ್ಯ ಕೇಳಿದ್ದು ಸಮಾನತೆ ಮತ್ತು ಭ್ರಾತೃತ್ವವನ್ನು. ಅವರ ಬಹಳ ಮುಖ್ಯವಾದ ಉದ್ದೇಶ ಇದ್ದಿದ್ದು ಸಹೋದರತೆ ನೀಡಿ, ಸಮಾನತೆ ಕೊಡಿ ಅದು ಸೌಹಾರ್ದತೆಗೆ ಕಾರಣವಾಗುತ್ತದೆ ಅಂತ. ಸಮಾನತೆ ಇಲ್ಲದಿದ್ದರೆ ಭ್ರಾತೃತ್ವ ಬರುವುದಿಲ್ಲ, ಭ್ರಾತೃತ್ವವಿಲ್ಲದೆ ಸೌಹಾರ್ದತೆ ಕಾಣಲು ಸಾಧ್ಯವಿಲ್ಲ. ಇದನ್ನು ದೇವನೂರ ಮಹಾದೇವ ತಮ್ಮ ಬರವಣಿಗೆಯ ನಡಿಗೆಯಲ್ಲಿ ತಮ್ಮದೇ ಆಗಿರುವಂತಹ ಒಂದು ರೀತಿಯ ಲಘುಹಾಸ್ಯದ ದಾಟಿಯಲ್ಲಿ ಎಂತಹ ಪಾಪದ ಅತಿರೇಕಗಳನ್ನೂ ಕೂಡ ಕ್ಷಮಿಸಿ, ಇನ್ನಿದು ನಡೆಯಬಾರದು ಎನ್ನುವಂತಹ ನೈತಿಕ ಆಗ್ರಹದಿಂದ ಖಂಡಿಸಿ, ಪಾಪ ಇವರು ಮನುಷ್ಯರಲ್ಲವೇ? ಏನೋ ಹೀಗಾಗಿ ಬಿಟ್ಟಿದ್ದಾರೆ ಎನ್ನುವ ಕನಿಕರದಿಂದ ಅವರನ್ನೂ ಜೊತೆಗೆ ಕರೆದುಕೊಂಡು ಈ ಸಮಾನತೆಯ ಹಾದಿಗೆ ಅಂದರೆ ಎಲ್ಲರ ಬಿಡುಗಡೆಯ, ಎಲ್ಲರ ಸೌಖ್ಯದ ಒಂದು ಆದರ್ಶದ ಕಡೆಗೆ ಅಥವಾ ಒಂದು ಆಶಯದ ಕಡೆಗೆ ನಡೆಸುತ್ತಿರುವ ಅವರ ಆ ತಾಯ್ತನ, ಆ ದೃಷ್ಟಿಕೋನ… ಅದನ್ನು ಮಾತ್ರವೇ ನಾವು ಭಾರತೀಯ ಸಂಸ್ಕೃತಿಯ ನಿಜವಾದ ನಿಲುದಾಣ ಎಂದು ಕರೆಯಬಹುದು. ಇದರ ಮುಂದೆ ಇನ್ನುಳಿದ ಎಲ್ಲ ಉಗ್ರಪ್ರತಿಪಾದನೆಗಳು, ವಕ್ರಪ್ರತಿಪಾದನೆಗಳು ನಾಚಿಕೆಪಟ್ಟುಕೊಂಡು ನೇಪಥ್ಯಕ್ಕೆ ಸರಿಯಬೇಕು.
ಈ ನಿಟ್ಟಿನಲ್ಲಿ ನಮಗೆ ಕಂಡಿರುವ ಒಬ್ಬನೇ ದೇವರು ಬುದ್ಧ, ನಮಗೆ ಕಂಡಿರುವ ಒಂದೇ ಧರ್ಮ ಅಂಬೇಡ್ಕರ್ ಮತ್ತು ನಮಗೀಗಾ ಕರ್ನಾಟಕದ ಸಂಸ್ಕೃತಿಗೆ ಕಾಣುತ್ತಿರುವ ಒಬ್ಬನೇ ಒಬ್ಬ ಸಖ, ಸ್ನೇಹಿತ, ಮಾರ್ಗದರ್ಶಿ ಅದು ದೇವನೂರ ಮಹಾದೇವ.