ರಂಗದ ಮೇಲೆ ‘ಎದೆಗೆ ಬಿದ್ದ ಅಕ್ಷರ’

[ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಕ್ರತಿಯನ್ನು ನಾಟಕವಾಗಿ ಪ್ರದರ್ಶಿಸಲಾಗುತ್ತಿದೆ.   ಮೈಸೂರಿನ ‘ಕಾವಲುಮನೆ ಸಾಂಸ್ಕೃತಿಕ ಕೇಂದ್ರ’ ಈ ನಾಟಕ ಪ್ರಸ್ತುತಪಡಿಸುತ್ತಿದ್ದು,  ರಂಗ ನಿರ್ದೇಶಕ -ಸಿ.ಬಸವಲಿಂಗಯ್ಯ, ನಿರ್ದೇಶನ ಮಾಡಿದ್ದಾರೆ. 2025 ಮೇ 4ರಂದು ಸಂಜೆ 6.30ಕ್ಕೆ ನಗರದ ವಿನೋಬಾ ರಸ್ತೆಯ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಮೊದಲ ಪ್ರದರ್ಶನ ನಡೆಯಲಿದೆ. ಮರು ಪ್ರದರ್ಶನವನ್ನು ಮೇ 9, 18, 23, 24, 25ರಂದು ಕಿರು ರಂಗಮಂದಿರದಲ್ಲೇ ಆಯೋಜಿಸಲಾಗಿದೆ. ಈ ಕುರಿತ ಪ್ರಜಾವಾಣಿ ವಾರ್ತೆ 2 ಮೇ 2025]
ಮೇ 4ರಂದು ಮೈಸೂರಿನಲ್ಲಿ ಚೊಚ್ಚಲ ಪ್ರದರ್ಶನ
ದೇವನೂರ ಮಹಾದೇವರ ಲೇಖನಗಳಿಗೆ ರಂಗರೂಪ
ಮೈಸೂರು: ಸೂಕ್ಷ್ಮಸಂವೇದನೆಯ ಸಾಹಿತಿ ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಕೃತಿಯು ರಂಗರೂಪದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದು, ಮೇ 4ರಂದು ಚೊಚ್ಚಲ ಪ್ರದರ್ಶನಕ್ಕೆ ತಾಲೀಮು ನಡೆದಿದೆ.
ಕಥೆಗಳೇ ಇಲ್ಲದ ಕೃತಿಯು ನಾಟಕದ ರೂಪದಲ್ಲಿ ಬರುತ್ತಿರುವುದು ವಿಶೇಷ. ಪ್ರಬಂಧ, ಭಾಷಣ, ವಿಚಾರ ಹಾಗೂ ಲೇಖನಗಳ ಹೂರಣವಾದ ‘ಎದೆಗೆ ಬಿದ್ದ ಅಕ್ಷರ’ದಲ್ಲಿ 19 ಲೇಖನಗಳಿದ್ದು, ಇವೆಲ್ಲದರ ಆಶಯವನ್ನು ಒಟ್ಟುಗೂಡಿಸಿ ರಂಗರೂಪ ನೀಡಲಾಗಿದೆ. ವರ್ತಮಾನದ ತಲ್ಲಣಗಳನ್ನು ಪ್ರತಿಧ್ವನಿಸುವ ನಾಟಕ ಇದಾಗಲಿದೆ. ವಚನಗಳು ಸೇರಿದಂತೆ 20 ಹಾಡುಗಳನ್ನು ಸಂಯೋಜನೆ ಮಾಡಲಾಗಿದೆ. ಪಪೆಟ್ ಹಾಗೂ ಅನಿಮೇಷನ್ ಪ್ರಯೋಗವೂ ಇದೆ.
ಇಡೀ ನಾಟಕದಲ್ಲಿ ಎಲ್ಲಿಯೂ ದೇವನೂರ ಮಹಾದೇವ ಪಾತ್ರ ಬರುವುದಿಲ್ಲ. ಆದರೆ, ಅವರ ಆಶಯಗಳಿಗೆ ಪೂರಕವಾಗಿ, ಯು.ಆರ್.ಅನಂತಮೂರ್ತಿ ಆದಿಯಾಗಿ ನಾಡಿನ ಹಲವು ಸಾಹಿತಿಗಳು-ವಿಚಾರವಾದಿಗಳ ಪಾತ್ರಗಳು ಬರುತ್ತವೆ.
ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕೃತಿಯನ್ನು ರಂಗಕ್ಕೆ ತಂದಿದ್ದ ಸಿ.ಬಸವಲಿಂಗಯ್ಯ ಈ ನಾಟಕವನ್ನು ನಿರ್ದೇಶಿಸಿದ್ದಾರೆ. ಎಸ್.ನಟರಾಜ್ ಬೂದಾಳ್ ಹಾಗೂ ಆರ್.ಸಂತೋಷ್ ನಾಯಕ್ ಅವರು ಈ ಕೃತಿಯನ್ನು ರಂಗರೂಪಕ್ಕೆ ತಂದಿದ್ದಾರೆ. ಪ್ರಶಾಂತ್ ಹೆಬ್ಬಸೂರು ರಂಗಸಜ್ಜಿಕೆ, ಸುಬ್ರಹ್ಮಣ್ಯ ಅವರು ಧ್ವನಿವಿನ್ಯಾಸದ ಜವಾಬ್ದಾರಿ ಹೊತ್ತಿದ್ದಾರೆ.
ಮೈಸೂರಿನ ‘ಕಾವಲುಮನೆ ಸಾಂಸ್ಕೃತಿಕ ಕೇಂದ್ರ’ ಈ ನಾಟಕ ಪ್ರಸ್ತುತಪಡಿಸುತ್ತಿದ್ದು, ಮೇ 4ರಂದು ಸಂಜೆ 6.30ಕ್ಕೆ ನಗರದ ವಿನೋಬಾ ರಸ್ತೆಯ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಮೊದಲ ಪ್ರದರ್ಶನ ನಡೆಯಲಿದೆ. ಮರು ಪ್ರದರ್ಶನವನ್ನು ಮೇ 9, 18, 23, 24, 25ರಂದು ಕಿರು ರಂಗಮಂದಿರದಲ್ಲೇ ಆಯೋಜಿಸಲಾಗಿದೆ.
ದೇವನೂರ ಮಹಾದೇವರ ಈ ಕೃತಿಯಲ್ಲಿನ ವಿಚಾರಗಳು ಎಲ್ಲರ ಎದೆಗೆ ಬೀಳಬೇಕು ಎಂಬ ಆಶಯದಿಂದ ರಂಗರೂಪಕ್ಕೆ ತಂದಿದ್ದು ಬಸವಲಿಂಗಯ್ಯ ಪರಿಣಾಮಕಾರಿಯಾಗಿ ನಿರ್ದೇಶನ ಮಾಡಿದ್ದಾರೆ
ಆರ್.ಸಂತೋಷ್ ನಾಯಕ್, ಲೇಖಕ
‘ಎದೆಗೆ ಬಿದ್ದ ಅಕ್ಷರ’ ಜನಕಥನವೇ ಆಗಿದೆ. ವರ್ತಮಾನದ ಸಂಕಟಗಳನ್ನು ಬಿಂಬಿಸುವ ನಾಟಕವು ಪ್ರಜಾಪ್ರಭುತ್ವದ ಆಶಯಗಳನ್ನು ಧ್ವನಿಸುತ್ತದೆ
-ಸಿ.ಬಸವಲಿಂಗಯ್ಯ, ರಂಗ ನಿರ್ದೇಶಕ