ರಾಜ್ಯಗಳ ಕಾಲು ಕತ್ತರಿಸುತ್ತಿರುವ ತೆರಿಗೆ-ದೇವನೂರ ಮಹಾದೇವ

[ಪ್ರಜಾವಾಣಿ 1.9.2025ರ ಪತ್ರಿಕೆಯ ವಿಶ್ಲೇಷಣೆ ವಿಭಾಗದಲ್ಲಿ ಪ್ರಕಟವಾದ ದೇವನೂರ ಮಹಾದೇವ ಅವರ ಲೇಖನ]
ಬಹಳ ಹಿಂದೆಯೇ ತೆಲುಗು ದೇಶಂ ನಾಯಕ ಎನ್.ಟಿ.ರಾಮರಾವ್ ಅವರು ಭಾರತವನ್ನು ಆಳುತ್ತಿರುವುದೇ ರಾಜ್ಯಗಳು; ಕೇಂದ್ರ ಕೇವಲ ಒಂದು ಪರಿಕಲ್ಪನೆ ಮಾತ್ರ ಎಂದಿದ್ದರು. ದೇಶದ ನಿಜವಾದ ಅಭಿವೃದ್ಧಿ ಸಾಧ್ಯವಾಗುವುದು ರಾಜ್ಯಗಳಿಗೆ ಹೆಚ್ಚು ಸಂಪನ್ಮೂಲಗಳು ದೊರಕುವಂತಾದರೆ ಮಾತ್ರ ಎನ್ನುವುದು ಅವರ ಮಾತಿನ ಆಶಯ.ಇದು ಸರಿಯಾದ ಗ್ರಹಿಕೆ ಅನ್ನಿಸುತ್ತದೆ. ಹೀಗಾಗೆ ಸಂವಿಧಾನದ ತಳಪಾಯವಾದ ಒಕ್ಕೂಟ ವ್ಯವಸ್ಥೆ, ಭಾರತದ ವೈವಿಧ್ಯತೆ, ಇವುಗಳ ಆಂತರ್ಯವನ್ನು ಅರ್ಥಮಾಡಿಕೊಂಡು ಹಣಕಾಸು ಆಯೋಗವು ಕಾರ್ಯ ನಿರ್ವಹಿಸಬೇಕಿರುತ್ತದೆ.
ನಮ್ಮ ಸಂವಿಧಾನವು ಭಾರತವನ್ನು ರಾಜ್ಯಗಳ ಒಕ್ಕೂಟ ಎಂದು ಸ್ಪಷ್ಟಪಡಿಸುತ್ತದೆ. ಸುಪ್ರೀಂ ಕೋರ್ಟ್ ನ ಪೂರ್ಣಪೀಠ ನೀಡಿರುವ ಸಾಂವಿಧಾನಿಕ ಆದೇಶದಲ್ಲೂ ಭಾರತದ ಒಕ್ಕೂಟ ಸ್ವರೂಪವು ಸಂವಿಧಾನದ ಮೂಲ ರಚನೆಯ ಭಾಗವೆಂದು ಹೇಳಲಾಗಿದೆ. ಇದರ ಭಾಗವಾಗಿ ತೆರಿಗೆ ಸಂಗ್ರಹ ಮಾಡುವ ಮತ್ತು ಶಾಸನಗಳನ್ನು ರೂಪಿಸುವ ಅಧಿಕಾರವನ್ನು ಕೇಂದ್ರಕ್ಕೂ ಹಾಗೂ ರಾಜ್ಯಗಳಿಗೂ ಹಂಚಲಾಗಿದೆ. ಸಂವಿಧಾನದ ಆರ್ಟಿಕಲ್ 246ರ ಅನ್ವಯ ರೂಪಿಸಲಾಗಿರುವ ಶೆಡ್ಯೂಲ್ 7ರಲ್ಲಿ ಕೇಂದ್ರ ಹಾಗೂ ರಾಜ್ಯಗಳ ಪರಮಾಧಿಕಾರ ಇರುವ ಬಾಬತ್ತುಗಳನ್ನು ನಿರ್ದಿಷ್ಟೀಕರಿಸಲಾಗಿದೆ. ಜೊತೆಗೆ ಕೇಂದ್ರ ಹಾಗೂ ರಾಜ್ಯಗಳು ಸೇರಿ ಶಾಸನಗಳನ್ನು ಮಾಡಬಹುದಾದ ಸಮವರ್ತಿ ಪಟ್ಟಿಯನ್ನು ನೀಡಲಾಗಿದೆ. ಇದರ ಅನುಸಾರ ಜನರ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಿರುವ ಆಹಾರ, ಆರೋಗ್ಯ, ಶಿಕ್ಷಣ, ಕೃಷಿ, ಉದ್ಯೋಗ, ಭದ್ರತೆಯಂತಹ ಎಲ್ಲಾ ಜವಾಬ್ದಾರಿಗಳು ಮೂಲಭೂತವಾಗಿ ರಾಜ್ಯಗಳ ಜವಾಬ್ದಾರಿಯಾಗಿದೆ. ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಏಕರೂಪತೆ ತರುವ ಮತ್ತು ಗುಣಮಟ್ಟಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುವ ಅಧಿಕಾರ, ಜೊತೆಗೆ ದೇಶದ ರಕ್ಷಣೆ, ವಿದೇಶಾಂಗ ಇತ್ಯಾದಿ ಜವಾಬ್ದಾರಿಗಳಿವೆ.
ಸಂವಿಧಾನದ ಆಶಯಕ್ಕೆ ತಕ್ಕಂತೆ ಒಕ್ಕೂಟ ಸ್ವರೂಪವನ್ನು ಸಮತೋಲಿಸುವುದಕ್ಕೆ ಒಂದು ಮಾದರಿ ಎಂದರೆ ಯುಪಿಎ ಸರ್ಕಾರದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನೇಮಿಸಿದ್ದ ವೈ.ವಿ.ರೆಡ್ಡಿಯವರ ಅಧ್ಯಕ್ಷತೆಯ 14ನೆಯ ಹಣಕಾಸು ಆಯೋಗ. ಈ ಆಯೋಗವು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದು ಮತ್ತೊಂದರ ಸ್ವಾಯತ್ತತೆಯನ್ನು ಅತಿಕ್ರಮಿಸದಂತೆ ಎಚ್ಚರವಹಿಸಿತ್ತು. ಜನಜೀವನದೊಡನೆ ಬೆರೆತು ರಾಜ್ಯಗಳು ಕಾರ್ಯ ನಿರ್ವಹಿಸಬೇಕಾಗಿರುವುದರಿಂದ ರಾಜ್ಯಗಳ ತೆರಿಗೆ ಪಾಲನ್ನು 32% ರಿಂದ 42%ಕ್ಕೆ ಏರಿಸಿತ್ತು. ರಾಜ್ಯಗಳಿಗೆ ಯಾವುದೇ ಷರತ್ತುಗಳಿಲ್ಲದೆ ಅನುದಾನವನ್ನು ನೀಡಿ ತಮ್ಮದೇ ಆದ ಯೋಜನೆಗಳನ್ನು ರೂಪಿಸಿಕೊಳ್ಳುವುದಕ್ಕೂ ಅವಕಾಶ ಮಾಡಿಕೊಟ್ಟಿತ್ತು. ಕೇಂದ್ರ ಆಯೋಜಿತ ಯೋಜನೆಗಳಿಗೆ ಅವಕಾಶ ತಗ್ಗಿಸಿ ರಾಜ್ಯಗಳ ವ್ಯವಹಾರಗಳಲ್ಲಿ ಹಸ್ತಕ್ಷೇಪವನ್ನು ಮಿತಿಗೊಳಿಸಲು ಪ್ರಯತ್ನಿಸಿತ್ತು.
ಒಕ್ಕೂಟ ವ್ಯವಸ್ಥೆಗೆ ಪೂರಕವಾಗಿದ್ದ ಈ ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡಬೇಕಾದ ಹೊಣೆಗಾರಿಕೆಯು ತದನಂತರ ಪ್ರಧಾನಿಯಾಗಿ ಬಂದ ಮೋದಿಯವರಿಗೆ ಎದುರಾಗುತ್ತದೆ. ಇದು ಅವರಿಗೆ ನುಂಗಲಾರದ ತುತ್ತಾಗಿತ್ತು. ರಾಜ್ಯಗಳ ತೆರಿಗೆ ಪಾಲನ್ನು 42%ನಿಂದ ಕೆಳಗೆ ಇಳಿಸುವುದಕ್ಕೆ ವೈ.ವಿ.ರೆಡ್ಡಿಯವರ ಮನವೊಲಿಸುವ ಮೋದಿಯವರ ಪ್ರಯತ್ನ ವಿಫಲವಾಯಿತು. ಹಾಗಾದರೆ ಪ್ರಧಾನಿ ಮೋದಿಯವರಿಗೆ ಒಕ್ಕೂಟ ವ್ಯವಸ್ಥೆ ಉಳಿಯುವುದು ಬೇಕಿರಲಿಲ್ಲವೆ? ಮೋದಿಯವರು ಪಳಗಿದ ಆರ್.ಎಸ್.ಎಸ್ ಸಿದ್ಧಾಂತದ ಮೂಲವನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ.
ಆರ್‌ಎಸ್‌ಎಸ್ ಗುರೂಜಿ ಗೋಲ್ವಾಲ್ಕರ್ ಅವರು “‘ನಮ್ಮ ದೇಶವನ್ನು ರಾಜ್ಯಗಳ ಒಕ್ಕೂಟ’ ಎಂದು ಸಂವಿಧಾನ ರಚನಕಾರರು ಕರೆದಿದ್ದಾರೆ… ಈಗಿನ ಒಕ್ಕೂಟ ರಚನೆಯಲ್ಲಿ ಛಿದ್ರತೆಯ ಬೀಜಗಳು ಅಡಗಿವೆ” ಎಂದು ಶಂಕಿಸುತ್ತಾರೆ. (ಉಲ್ಲೇಖ: ಗೋಲ್ವಾಲ್ಕರ್, ಚಿಂತನಗಂಗಾ, ಮೂರನೇ ಮುದ್ರಣ, ಪುಟ 229, ಪ್ರಕಟಣೆ: ಸಾಹಿತ್ಯಸಿಂಧು, ಬೆಂಗಳೂರು) ಹಾಗೂ, ಹೀಗೂ ಹೇಳುತ್ತಾರೆ: “ಇದಕ್ಕಾಗಿ ನಮ್ಮ ದೇಶದ ಸಂವಿಧಾನದ ಒಕ್ಕೂಟ ಸ್ವರೂಪದ ಎಲ್ಲ ಮಾತನ್ನು ಆಳವಾಗಿ ಹೂತುಹಾಕಬೇಕಿದೆ. ಭಾರತದಲ್ಲಿ ‘ಸ್ವಯಂ ಅಧಿಕಾರ’ವುಳ್ಳ ಅಥವಾ ‘ಭಾಗಶಃ ಸ್ವಯಂ ಅಧಿಕಾರ’ವುಳ್ಳ ರಾಜ್ಯಗಳ ಅಸ್ತಿತ್ವವನ್ನೆ ಅಳಿಸಿ ಹಾಕಬೇಕು… ಏಕಾತ್ಮಕ ಸರಕಾರದ ಪದ್ಧತಿಯನ್ನು ಸ್ಥಾಪಿಸುವಂತೆ ಸಂವಿಧಾನವನ್ನು ಪುನಃ ಬರೆದಿಡೋಣ”ಎನ್ನುತ್ತಾರೆ. (ಉಲ್ಲೇಖ: ಗೋಲ್ವಾಲ್ಕರ್, ಚಿಂತನಗಂಗಾ, ಮೂರನೇ ಮುದ್ರಣ, ಪುಟ 474, ಪ್ರಕಟಣೆ: ಸಾಹಿತ್ಯಸಿಂಧು, ಬೆಂಗಳೂರು)
ಹೀಗೆ ಸೈದ್ಧಾಂತಿಕತೆ, ತಾತ್ವಿಕತೆಗಳಲ್ಲೇ ಭ್ರಷ್ಟವಾಗಿರುವ ಆರ್‌ಎಸ್‌ಎಸ್‌ನಲ್ಲಿ ಮುಳುಗಿ ಎದ್ದು ಪಳಗಿದ ಸೈದ್ಧಾಂತಿಕ ಭ್ರಷ್ಟ ಮೋದಿಯವರು ಒಕ್ಕೂಟ ವ್ಯವಸ್ಥೆಯನ್ನು ಹೇಗೆ ತಾನೆ ಸಹಿಸಿಯಾರು? ಅದಕ್ಕಾಗಿ ಅವರು ಹಣಕಾಸು ಆಯೋಗವು ರಾಜ್ಯಗಳಿಗೆ ನಿಗದಿ ಪಡಿಸಿದ್ದ 42% ತೆರಿಗೆ ಪಾಲು ತನ್ನಷ್ಟಕ್ಕೆ ತಾನೇ ಕುಸಿದು ಹೋಗುವಂತೆ ಮಾಡಿಬಿಟ್ಟರು.ಅದು ಹೀಗೆ: ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ, ಕೇಂದ್ರ ಹಾಗೂ ರಾಜ್ಯಗಳು ಸಮಾಲೋಚಿಸಿ ದೇಶದ ಅಭಿವೃದ್ಧಿ ರೂಪಿಸುತ್ತಿದ್ದ ಸ್ವತಂತ್ರ ಯೋಜನಾ ಆಯೋಗವನ್ನು ರದ್ದು ಮಾಡಿ, ಬದಲಿಗೆ ಕೇಂದ್ರದ ಹಣಕಾಸು ಇಲಾಖೆಯ ಉಪ-ಇಲಾಖೆಯಂತಿರುವ ನೀತಿ (NITI) ಆಯೋಗ ಸ್ಥಾಪಿಸಿದರು. ಆಮೇಲೆ, ರಾಜ್ಯಗಳೊಡನೆ ಹಂಚಿಕೊಳ್ಳದ ಮೇಲ್ತೆರಿಗೆ ಸೆಸ್ (Cess) ಮತ್ತು ಸರ್ ಚಾರ್ಜ್ (Sur-Charge)ಗಳನ್ನು ನಿರಂತರವಾಗಿ ಹೆಚ್ಚಿಸುತ್ತ ಬಂದರು. ಮೋದಿ ಪೂರ್ವದಲ್ಲಿ ಸೆಸ್ ಮತ್ತು ಸರ್‌ಚಾರ್ಜ್ ಪ್ರಮಾಣ ಶೇಕಡಾ 10ಕ್ಕಿಂತ ಮೇಲೆ ದಾಟಿರಲಿಲ್ಲ. 20, ಡಿಸೆಂಬರ್ 2022ರಂದು ರಾಜ್ಯಸಭೆಯಲ್ಲಿ ಜಾನ್‌ಬ್ರಿಟ್ವಾಸ್ ಪ್ರಶ್ನೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೆಸ್ ಮತ್ತು ಸರ್ ಚಾರ್ಜ್ ಗಳ ಪಾಲು ಶೇಕಡ 28.1 ಇದೆ ಎಂದು ಉತ್ತರಿಸುತ್ತಾರೆ. ಪ್ರಧಾನಿಯವರಿಗೆ ಇಷ್ಟಾದರೂ ಸಮಾಧಾನವಾಗಲಿಲ್ಲ ಎಂದು ಕಾಣುತ್ತದೆ. ರಾಜ್ಯಗಳಿಗೆ ನೀಡುತ್ತಿದ್ದ ಅನುದಾನ ಹಾಗೂ ಶರತ್ತಿನ ಯೋಜನಾ ಪಾಲನ್ನು ದೊಡ್ಡಮಟ್ಟದಲ್ಲಿ ಕಡಿತಗೊಳ್ಳುವಂತೆ ನೋಡಿಕೊಂಡರು. ಹೀಗೆಲ್ಲಾ ಆಗುತ್ತ, 2020-21ನೇ ಸಾಲಿನ ಬಜೆಟ್ಟಿನ ಪರಿಷ್ಕೃತ ಅಂಕಿ-ಅಂಶಗಳ ಪ್ರಕಾರ ರಾಜ್ಯಗಳ ಪಾಲು ಶೇಕಡ 28.9ಕ್ಕೆ ಕುಸಿದುಬಿಟ್ಟಿತು.
ಈಗ ಕರ್ನಾಟಕ ರಾಜ್ಯದ ಗತಿಯನ್ನೇ ನೋಡಿ, ಇಡೀ ದೇಶದಲ್ಲೆ ತೆರಿಗೆ ಕಟ್ಟುವುದರಲ್ಲಿ ಎರಡನೆ ಸ್ಥಾನದಲ್ಲಿರುವ ಹಾಗೂ ಜನಸಂಖ್ಯಾ ನಿಯಂತ್ರಣವನ್ನು ಯಶಸ್ವಿಯಾಗಿ ಮಾಡಿರುವ ಕರ್ನಾಟಕಕ್ಕೇನೆ ಈ ಹಿಂದೆ ಇದ್ದ ರಾಜ್ಯದ ತೆರಿಗೆ ಪಾಲು ಶೇಕಡ 4.71 ರಿಂದ 3.64ಕ್ಕೆ ಇಳಿದಿದೆ. ಇದಿಷ್ಟೇ ಅಲ್ಲ, ನಿರ್ದಿಷ್ಟ ಅನುದಾನದಡಿ ಕರ್ನಾಟಕಕ್ಕೆ ನೀಡಿದ್ದ 6000 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆಯಾಗಿಲ್ಲ. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಕರ್ನಾಟಕದ ಭದ್ರ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ 5300 ಕೋಟಿ ರೂಪಾಯಿಗಳೂ ಬಿಡುಗಡೆಯಾಗಿಲ್ಲ. ಇಷ್ಟಲ್ಲದೆ, ಕರ್ನಾಟಕಕ್ಕೆ ಆಗಿದ್ದ ಅನ್ಯಾಯವನ್ನು ಸರಿದೂಗಿಸಲು 15ನೆಯ ಹಣಕಾಸು ಆಯೋಗ ನಿಗದಿ ಪಡಿಸಿದ್ದ ವಿಶೇಷ ಅನುದಾನ 5496 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಕೊಡಲೇ ಇಲ್ಲ. ಒಕ್ಕೂಟ ವ್ಯವಸ್ಥೆಯನ್ನು ನೆನಪಿಸುವ ರಾಜ್ಯಗಳನ್ನು ತನ್ನ ಶತ್ರುಗಳೇನೊ ಎಂಬಂತೆ ಕೇಂದ್ರ ಸರ್ಕಾರ ನೋಡುತ್ತಿರುವಂತಿದೆ.
ಹೀಗೆ ಭಾರತದ ತೆರಿಗೆ ಪದ್ಧತಿಯು ಸೂತ್ರವಿಲ್ಲದ ಗಾಳಿಪಟದಂತೆ ಯದ್ವಾತದ್ವಾ ಆಡುತ್ತ ಇದರಿಂದಾಗಿಯೂ ನಮ್ಮ ಒಕ್ಕೂಟ ವ್ಯವಸ್ಥೆ ಉಸಿರಾಡಲು ಕಷ್ಟಪಡುತ್ತಿದ್ದರೂ ಯಾಕೆ ಯಾರೂ ಬೆಚ್ಚುತ್ತಿಲ್ಲ? ಬಹುತೇಕ ಮಾಧ್ಯಮಗಳು ಮಾರಿಕೊಂಡಿರುವುದರಿಂದ ಅವಕ್ಕೆ ದನಿ ಇಲ್ಲ, ಗದ್ದಲ ಮಾತ್ರವಿದೆ. ಆದರೆ ಜನಪ್ರತಿನಿಧಿಗಳೂ ಸಮಾಜಮುಖಿ ಜನಾಂದೋಲನಗಳೂ ಗಂಭೀರವಾಗಿ ಚರ್ಚಿಸುತ್ತಿಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ಪ್ರಜ್ಞಾವಂತರು ಇದನ್ನೆಲ್ಲಾ ಮಾತಾಡುತ್ತಿದ್ದರೂ ಅದು ಕೇಳಿಸುತ್ತಿಲ್ಲ, ಸಮುದಾಯವನ್ನು ಮುಟ್ಟುತ್ತಿಲ್ಲ. ಈ ಎಲ್ಲವೂ ಈ ಎಲ್ಲರೂ ಜಡಗೊಂಡಿವೆ. ಚಿಗುರುತ್ತಿಲ್ಲ.
ಹೀಗಿರುವಾಗ ಭಾರತಕ್ಕೆ ದಿಕ್ಕು ಕಾಣಿಸುವವರು ಯಾರು? ಕ್ರಿಯಾಶೀಲರಾಗಬೇಕಾಗಿರುವವರು ಯಾರು? ಯಾರು ನಾಳೆ ಬದುಕಿ ಬಾಳಬೇಕು ಎಂದುಕೊಂಡಿರುವವರೊ ಅವರು, ಅಂದರೆ ವಿದ್ಯಾರ್ಥಿ ಯುವಜನತೆ- ಅವರು ನಾಳೆ ಬದುಕಿ ಬಾಳಬೇಕು ಎಂಬ ಕಾರಣಕ್ಕಾಗಿಯೇ, ಈಗಲೇ ಸಂಘಟಿತರಾಗಿ ಮಾತಾಡಬೇಕಾಗಿದೆ.
ಅವರು ಕೇಳಬೇಕಾಗಿದೆ, ಬಹುಶಃ ಇವು, ಇಂಥವು: 1) ಮೋದಿಯವರು ಈ ಹಿಂದೆ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಗಳ ಪಾಲನ್ನು ಶೇಕಡಾ 50ಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿದ್ದರು. ನಾವೀಗಇದನ್ನೇ ಮೋದಿಯವರಿಗೆ ಕೇಳಬೇಕಾಗಿದೆ. 2) ಸೆಸ್ ಮತ್ತು ಸರ್‌ಚಾರ್ಜ್ ಗಳನ್ನು ರಾಜ್ಯಗಳು ಮತ್ತು ಕೇಂದ್ರ ಎರಡೂ ಹಂಚಿಕೊಳ್ಳುವಂತಾಗಬೇಕು. 3) ಜನ ಜೀವನದೊಡನೆ ಸಂಬಂಧವಿರುವ ಪರೋಕ್ಷ ತೆರಿಗೆಯನ್ನು ಕಮ್ಮಿ ಮಾಡುತ್ತ, ನೇರ ತೆರಿಗೆಯನ್ನು ಹೆಚ್ಚು ಮಾಡಬೇಕು. ಆದಾಯ ಹೆಚ್ಚಿದಂತೆ ತೆರಿಗೆಯು ಆದಾಯದ ಪ್ರಮಾಣಕ್ಕೆ ಅನುಗುಣವಾಗಿ ಹೆಚ್ಚಾಗುತ್ತಾ ಹೋಗಬೇಕು. 4) ಕಾರ್ಪೊರೇಟ್ ತೆರಿಗೆಯನ್ನು ಈ ಹಿಂದೆ ಇದ್ದಂತೆಯೇ ಶೇಕಡಾ 30ಕ್ಕೆ ಹೆಚ್ಚಿಸಬೇಕು ಹಾಗೂ ಕಾರ್ಪೊರೇಟ್ ಗಳಿಗೆ ನೀಡುತ್ತಿರುವ ಯದ್ವಾತದ್ವಾ ರಿಯಾಯತಿಗಳಿಗೆ ಕಡಿವಾಣ ಹಾಕಬೇಕು. 5) ಈಗ ಇರುವ ಹಣಕಾಸು ಇಲಾಖೆಯ ಉಪ-ಇಲಾಖೆಯಂತಿರುವ ನೀತಿ (NITI) ಆಯೋಗವನ್ನು ರದ್ಧುಪಡಿಸಿ ಮತ್ತೆ ಮೊದಲಿದ್ದಂತೆಯೇ ಯೋಜನಾ ಆಯೋಗವನ್ನು ಮರು ಸ್ಥಾಪಿಸಬೇಕು, ಹೀಗೆ ಇಂಥವು.
ಜೊತೆಗೆ, ನಾವು ಮರೆಯಬಾರದು. ರಾಜ್ಯವೊಂದು ತನ್ನ ಹಿಂದುಳಿದ ಪ್ರದೇಶಗಳಿಗೆ ಒಂದಿಷ್ಟು ಹೆಚ್ಚು ಖರ್ಚು ಮಾಡುವಂತೆಯೇ, ದೇಶವೊಂದು ಕೂಡ ತನ್ನ ಹಿಂದುಳಿದ ರಾಜ್ಯಗಳಿಗೆ ಒಂದಿಷ್ಟು ಹೆಚ್ಚು ಖರ್ಚು ಮಾಡಬೇಕಾಗಿರುತ್ತದೆ. ಹಾಗಾಗಿ ರಾಜ್ಯಗಳು ಸೊರಗದಂತೆ ಕೇಂದ್ರಕ್ಕೂ ನ್ಯಾಯಯುತವಾದ ಪಾಲು ಇರಬೇಕು. ಈ ಮಾನವೀಯ ಹೊಣೆಗಾರಿಕೆ ಬೇಕಾಗಿದೆ, ಎಲ್ಲರಿಗೂ. ಜೊತೆಗೆ ನಾವು ಇದನ್ನು ಮರೆಯಲೇಬಾರದು. ಸ್ವಾತಂತ್ರ್ಯ ಹೋರಾಟಗಾರರ ಕನಸಾಗಿದ್ದ “ಫೆಡರೇಷನ್ ಆಫ್ ಸ್ಟೇಟ್” ಕಡೆಗೆ, ಅರೆಬರೆ ಒಕ್ಕೂಟದಿಂದ ಪೂರ್ಣ ಒಕ್ಕೂಟದ ಕಡೆಗೆ ನಾವು ಚಲಿಸಬೇಕಾಗಿದೆ.