ನೈಜ ಖಾದಿಗೆ ಒಳ್ಳೆಯ ದಿನಗಳು ಬರಬಹುದೇ? -ಪಿ. ಓಂಕಾರ್

khadi

ವಾರದಲ್ಲಿ ಒಂದು ದಿನ ಕೇಂದ್ರ ಸರಕಾರದ ಎಲ್ಲ ನೌಕರರು ಖಾದಿ ಬಟ್ಟೆ ಧರಿಸಬೇಕು ಎಂದು ಫರ್ಮಾನು ಹೊರಡಿಸಲು ಕೇಂದ್ರ  ಸರ್ಕಾರ ನಿರ್ಧರಿಸಿದೆ. ಬೆನ್ನಲ್ಲೆ, ಕರ್ನಾಟಕ ಸರ್ಕಾರ ಕೂಡ ತನ್ನ ನೌಕರರಿಗೆ ಒಂದು ದಿನ ಖಾದಿ ಕಾಯಂ ಮಾಡುವ ಇಂಗಿತ ವ್ಯಕ್ತಪಡಿಸಿದೆ.ಮಾತ್ರವಲ್ಲ, ಖಾದಿಯನ್ನು ಪ್ರೋತ್ಸಾಹಿಸಲು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಬ್ರಾಂಡ್ ರಾಯಭಾರಿಯಾಗುತ್ತಾರೆನ್ನುವ ಸುದ್ದಿಯೂ ಇದೆ. ಶತಮಾನದ ಹಿಂದೆ  ಹಳ್ಳಿಗಳಲ್ಲಿ ಕೃಷಿಗೆ ಪೂರಕ ಸ್ವಉದ್ಯೋಗ, ಸ್ವಾವಲಂಬನೆಗೆ ಖಾದಿ ಮಂತ್ರವನ್ನು ಸಾರಿದ್ದ ಗಾಂಧೀಜಿ ಅದನ್ನು ಬ್ರಿಟಿಷ್ ವಸಾಹತುಶಾಹಿ ವಿರುದ್ಧ ಅಸ್ತ್ರವನ್ನಾಗಿಯೂ ಬಳಸಿದ್ದರು. ಅದನ್ನು ನಮ್ಮ ಪ್ರಧಾನಿ,ಸಿಎಂ ಪಠಿಸುತ್ತಿರುವುದನ್ನು ನೋಡಿದರೆ, ದೇಶದಲ್ಲಿ ಖಾದಿಗೆ ಮತ್ತೆ ಒಳ್ಳೆಯ ದಿನಗಳು ಬರಬಹುದೆನ್ನಿಸುತ್ತಿದೆ. ಸರಕಾರಿ ನೌಕರರು ವಾರದ ಒಂದು ದಿನ ಖಾದಿ ವಸ್ತ್ರ ಧರಿಸಿದರೆ ಬೇಡಿಕೆ ಹೆಚ್ಚಬಹುದು; ಮಳಿಗೆಗಳಲ್ಲಿ ವ್ಯಾಪಾರ ಕುದುರಬಹುದು; ಹತ್ತಿ ಬೆಳೆದ ರೈತರು,ನೂಲು ಮಾಡಿದವರು,ಬಣ್ಣ ಹಾಕಿದವರು,ನೇಯ್ದವರು ಸಹಿತ ಉತ್ಪಾದನೆ-ಮಾರಾಟ ನಿರತ ಎಲ್ಲರ ಬದುಕು ಹಸನಾಗಬಹುದು. ಈ ಕಾರಣಕ್ಕೆ ಸರಕಾರಗಳ ನಿರ್ಧಾರ ಖಂಡಿತಾ ಸ್ವಾಗತಾರ್ಹ.

ಆದರೆ,ಇಂಥ ಯಾವುದೆ ಸದಾಶಯದ ಸರ್ಕಾರಿ ಯೋಜನೆಗಳು ನೆಲಮಟ್ಟದ ವಾಸ್ತವವನ್ನರಿಯದೆ ಮೇಲ್‌ಸ್ತರದಲ್ಲೆ ನೆಲೆಗೊಂಡರೆ ಅರ್ಥಪೂರ್ಣ ಅನುಷ್ಠಾನ ಅಸಾಧ್ಯ. ಕರ್ನಾಟಕದ ಖಾದಿ ಉತ್ಪಾದನೆಯ ಸದ್ಯದ ಸ್ಥಿತಿಗತಿಯನ್ನು ಅವಲೋಕಿಸಿದರೆ ಖಾದಿ ಉಡುಗೆ ಕಡ್ಡಾಯ ವಿಷಯದಲ್ಲೂ ಇಂಥದೆ ಅನುಮಾನಗಳೇಳುತ್ತವೆ. ದಶಕದ ಹಿಂದೆ ರಾಜ್ಯ ಖಾದಿ ಮಂಡಳಿ ವ್ಯಾಪ್ತಿಯಲ್ಲಿ ಮುನ್ನೂರರಷ್ಟಿದ್ದ ಉತ್ಪಾದನಾ ಘಟಕಗಳ ಸಂಖ್ಯೆ ಈಗ 146ಕ್ಕೆ ಕುಸಿದಿದೆ. ರಿಯಾಯಿತಿ ನಿಯಮ,ನಿರ್ವಹಣೆ ಸಮಸ್ಯೆ ಮತ್ತಿತರ ಕಾರಣಕ್ಕೆ ಹಲವು ಮುಚ್ಚಿವೆ. ಸ್ಥಾಪಕರ ಕಾಳಜಿಯ ಕಾರಣಕ್ಕೆ ಕೆಲವು ಕುಟುಕು ಜೀವ ಹಿಡಿದುಕೊಂಡಿವೆ. ಈಗಿರುವ ಎಲ್ಲ ಘಟಕಗಳಿಂದ ವಾರ್ಷಿಕ ಸುಮಾರು 100 ಕೋಟಿ ರೂ.ಮೌಲ್ಯದ, ಅಂದಾಜು 6.50 ಲಕ್ಷ ಮೀಟರ್ ಖಾದಿ ಬಟ್ಟೆಯನ್ನು ನೇಯಲಾಗುತ್ತಿದೆ. ಅಂತೆಯೆ, ರಾಜ್ಯದಲ್ಲಿ ಪೊಲೀಸರ ಹೊರತು 5.25 ಲಕ್ಷ ರಾಜ್ಯ ಸರಕಾರಿ,1ಲಕ್ಷಕ್ಕಿಂತ ಹೆಚ್ಚು ಕೇಂದ್ರ ಸರಕಾರಿ ನೌಕರರಿದ್ದಾರೆ. ಒಬ್ಬ ನೌಕರನಿಗೆ ವರ್ಷಕ್ಕೆ ಕನಿಷ್ಠ ನಾಲ್ಕು ಮೀಟರ್ ಅಗತ್ಯ ಎಂದುಕೊಂಡರೂ 24 ಲಕ್ಷ ಮೀಟರ್ ಖಾದಿ ಬಟ್ಟೆ ಬೇಕೇಬೇಕು. ಅಂದರೆ, ಈಗಿನ ಉತ್ಪಾದನೆ ಪ್ರಮಾಣ ಸಂಭವನೀಯ ಬೇಡಿಕೆಯ ನಾಲ್ಕನೆ ಒಂದು ಭಾಗಕ್ಕಿಂತ ಕಡಿಮೆ ಇದೆ. ಮಾತ್ರವಲ್ಲ, ಉತ್ಪಾದಿತ ಬಟ್ಟೆಯ ಪೈಕಿ ಬಹುಪಾಲನ್ನು ಸಾರ್ವಜನಿಕರು ಖರೀದಿಸುತ್ತಿದ್ದಾರೆ ಕೂಡ.

ರಾಜ್ಯದಲ್ಲಿನ ಖಾದಿ ಸಂಘಗಳ ಈಗಿನ ಸ್ಥಿತಿ-ಗತಿಯಲ್ಲಿ ಇದಕ್ಕಿಂತ ಹೆಚ್ಚಿನ ಉತ್ಪಾದನೆ ಅಸಂಭವ. ಕರ್ನಾಟಕದ ಮಟ್ಟಿಗೆ ಇರುವುದರಲ್ಲೇ ತುಸು ಸದೃಢವಾಗಿರುವುದು ಧಾರವಾಡ ಸಮೀಪದ ಗರಗ ಕ್ಷೇತ್ರೀಯ ಸೇವಾ ಸಂಘ. 1985ರಲ್ಲಿ ಸುಮಾರು 3 ಸಾವಿರ ಮಂದಿ ಕೃಷಿ ಚಟುವಟಿಕೆ ಜೊತೆ ಜೊತೆಯಲ್ಲೇ ಖಾದಿ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದರು. ಪ್ರತಿ ಮೀಟರ್ ದರ ಅತ್ಯಂತ ಕಡಿಮೆ ಇದ್ದ ಆ ದಿನಗಳಲ್ಲಿಯೂ ವಾರ್ಷಿಕ 5 ಕೋಟಿ ರೂ .ವಹಿವಾಟು ನಡೆಯುತ್ತಿತ್ತು. ಧಾರವಾಡ ತಾಲೂಕು ಸೇವಾ ಸಂಘದಡಿ ನಡೆಯುತ್ತಿದ್ದ ಚಟುವಟಿಕೆ ಕ್ರಮೇಣ ಆಡಳಿತ ಮತ್ತಿತರ ಕಾರಣಕ್ಕೆ ನಾಲ್ಕು ಕ್ಷೇತ್ರೀಯ ಸಂಘಗಳಲ್ಲಿ ಹಂಚಿಹೋಯಿತು.ಇದರಲ್ಲೊಂದು ಮುಚ್ಚಿ ಹೋಗಿದೆ. ಈ ಮಧ್ಯೆ,ಧಾರವಾಡ-ಗರಗದ ನಡುವಿನ ಸಾವಿರಾರು ಎಕರೆ ಪ್ರದೇಶ ಕೈಗಾರಿಕಾ ವಲಯವೆನಿಸಿಕೊಂಡಿತು. ಸರ್ಕಾರ ರೈತರ ಜಮೀನನ್ನು ವಶಕ್ಕೆ ಪಡೆದು ಕೈಗಾರಿಕೆಗಳಿಗೆ ನೀಡಿತು. ಭೂಮಿ ತೆತ್ತ ಜನ ಅದಕ್ಕೆ ಫಲವಾಗಿ ಕಾರ್ಖಾನೆಗಳಲ್ಲಿ ಸಣ್ಣಪುಟ್ಟ ಕೆಲಸ ಪಡೆದರು. ಖಾದಿ ನೆಲೆಯ ಸನಿಹದಲ್ಲೆ ಬೃಹತ್ ಡಿಸ್ಟಿಲರಿ ತಲೆ ಎತ್ತಿತು. ಜನರಿಗೆ ಒಳಿತ್ಯಾವುದು,ಕೆಡುಕ್ಯಾವುದು ಎನ್ನುದನ್ನು ನಿರ್ಣಯಿಸಲಾಗದ ಗೊಂದಲ. ಸಹಜವಾಗಿಯೆ ನೂಲುವಿಕೆ,ನೇಯುವಿಕೆಯ ಕಸುಬುಗಳಿಂದ ದೂರಾದರು. ಕೃಷಿಯೊಂದಿಗೆ ಬೆಸೆದುಕೊಂಡಿದ್ದ ಖಾದಿಯ ಆದರ್ಶ ಕ್ಷೀಣಿಸಿತು. ಗರಗದಲ್ಲೀಗ ನೂಲುವವರು,ನೇಯುವವರು ಸೇರಿ 250 ಮಂದಿ ಉಳಿದಿದ್ದಾರೆ. ರಾಷ್ಟ್ರಧ್ವಜಕ್ಕೆ ಬಟ್ಟೆ ನೇಯ್ದುಕೊಡುವ ಹೊಣೆ,ಗುಣಾತ್ಮಕತೆಯನ್ನು ಕಾಯ್ದುಕೊಂಡಿರುವ ಕಾರಣಕ್ಕೆ ಸಂಘ ತುಸು ಲಾಭದಾಯಕವಾಗಿದೆ. ಆದರು,ಅತ್ತಲಿತ್ತಲಿನ ತೊಳಲಾಟದ ಮಧ್ಯೆ ಇಲ್ಲುಳಿದಿಕೊಂಡಿರುವ ಖಾದಿ ಕಾರ್ಮಿಕರುಗಳದ್ದು ಸದಾ ನಿಟ್ಟುಸಿರು. ತಾವು ನೂತು,ನೇಯ್ದ ಬಟ್ಟೆ ಮುಂಬಯಿಗೆ ಹೋಗಿ, ತಿರಂಗದ ಸ್ವರೂಪ ಪಡೆದು ದೇಶಪ್ರೇಮದ ಸಂಕೇತವಾಗಿ ಹಾರುವುದನ್ನು ನೋಡುವುದಷ್ಟೆ ಇವರ ಪಾಲಿನ ಗರಿಷ್ಟ ಸುಖ.

ರಾಜ್ಯ ಮಾತ್ರವಲ್ಲ ದೇಶದೆಲ್ಲೆಡೆ ನೈಜ ಖಾದಿ ಉತ್ಪಾದನಾ ಕ್ಷೇತ್ರ ಹಲವು ಗಂಭೀರ ಸಮಸ್ಯೆ,ಸವಾಲುಗಳನ್ನೆದುರಿಸುತ್ತಿದೆ. ನೂಲುವಿಕೆ,ನೇಯುವ ಕಸುಬಿನ ವಿಸ್ತರಣೆ ಸಾಧ್ಯವಾದರೂ ಅದಕ್ಕೆ ಜನರನ್ನು ಎಲ್ಲಿಂದ ಕರೆತರುವುದೆನ್ನುವುದು ದೊಡ್ಡ ಪ್ರಶ್ನೆ. ಕೃಷಿ ಭೂಮಿ ಕೈಗಾರಿಕೆ ಇತ್ಯಾದಿಗಳ ಪಾಲಾಗಿರುವುದರಿಂದ ಪರಸ್ಪರ ಅವಲಂಬನೆಯ ದುಡಿಮೆ ಸಾಧ್ಯವಿಲ್ಲ.ಖಾದಿ ಕಸುಬನ್ನಷ್ಟೆ ನೆಚ್ಚಿ ದುಡಿದರೂ ‘ಉದ್ಯೋಗ ಖಾತ್ರಿ’ಯ ಕನಿಷ್ಠ ಕೂಲಿ ಮೊತ್ತದಷ್ಟು ಪ್ರತಿಫಲ ದೊರೆಯುತ್ತಿಲ್ಲ. ಹೀಗಾಗಿ ತೋಳಿನಲ್ಲಿ ಕಸುವಿರುವ ಯಾರೂ ಇತ್ತ ಸುಳಿಯರು.ಒಂದು ಕಾಲಕ್ಕೆ ಖಾದಿ, ಗುಡಿ ಕೈಗಾರಿಕೆಗೆ ಹೆಸರಾಗಿ,ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದ ಮೈಸೂರು ಜಿಲ್ಲೆ ಬದನವಾಳು ಕೇಂದ್ರ ‘ಕಾಲವಶ’ವಾಗಿ, ಪ್ರಸ್ತುತ ಹೊಳೆನರಸೀಪುರ ಸೊಸೈಟಿ ಆಶ್ರಯದಲ್ಲಿ ಕುಟುಕು ಜೀವ ಸವೆಸುತ್ತಿದೆ. ಇಲ್ಲೆಲ್ಲ ದುಡಿಯುತ್ತಿರುವವರ ಮುಖಗಳು ನಿರೀಕ್ಷೆಯ ಭಾರದಲ್ಲೇ ನೆರಿಗೆಗಟ್ಟಿವೆ.
ಇದನ್ನೆಲ್ಲ ಸುಧಾರಿಸಲಾಗದೆ? ಖಾದಿ ವಿಲೇಜ್ ಇಂಡಸ್ಟ್ರೀಸ್ ಕಮಿಷನ್(ಕೆವಿಐಸಿ) ಅಡಿ ಬರುವ ಈ ಘಟಕಗಳಿಗೆ ನೂಲುವಿಕೆ, ನೇಯ್ಗೆ,ಹೊಲಿಗೆ, ಮಾರಾಟ ಎಲ್ಲದಕ್ಕೂ ನಿಗದಿತ ದರ ಚೌಕಟ್ಟಿದೆ. ರಾಜ್ಯದ ಚಿತ್ರದುರ್ಗ ಸಹಿತ ದೇಶದ ಏಳೆಂಟು ಕಡೆ ಕೆವಿಐಸಿ ಹಂಜಿ ತಯಾರಿಕೆ ಘಟಕಗಳನ್ನು ಹೊಂದಿದೆ. ಅವು ರೈತರಿಂದ ಹತ್ತಿ ಖರೀದಿಸಿ,ಶುದ್ಧೀಕರಿಸಿ ಹಂಜಿ ಮಾಡುತ್ತವೆ. ಅದನ್ನು ಉತ್ಪಾದಕ ಸಂಘಗಳು ಖರೀದಿಸಿ,ಸುಧಾರಿತ ಅಂಬರ್ ಚರಕದಲ್ಲಿ ನೂಲನ್ನಾಗಿಸಿ ಬಟ್ಟೆ ನೇಯುತ್ತವೆ. ಹೀಗೆ ಚರಕದಲ್ಲಿ ನೂತರಷ್ಟೆ ಖಾದಿ. ಯಂತ್ರದಲ್ಲಿ ತೆಗೆದ ನೂಲನ್ನು ಖರೀದಿಸಿ ಅದೇ ಮಗ್ಗದಲ್ಲಿ ನೇಯ್ದರೆ ಕೈಮಗ್ಗ. ಈ ಎರಡನ್ನೂ ಮಾಡದೆ, ಚರಕದಲ್ಲಿ ತೆಗೆದ ನೂಲು ಮತ್ತು ಯಂತ್ರದ ನೂಲನ್ನು ಹಾಸು-ಹೊಕ್ಕಿನಲ್ಲಿ ಬೆರೆಸಿ, ಖಾದಿ ಎಂದೆ ಕಲಬೆರಕೆ ಬಟ್ಟೆ ಮಾರುವ ನಿಪುಣರು; ಪೂರ್ತಿ ಯಂತ್ರದ ನೂಲು ಮತ್ತು ಪವರ್‌ಲೂಂನಲ್ಲಿ ಬಟ್ಟೆ ನೇಯ್ದು ಖಾದಿ ಎಂದು ನಂಬಿಸುವ ನಕಲಿ ವ್ಯವಹಾರಸ್ಥರು ಹೆಚ್ಚಿದ್ದಾರೆ. ಅಧ್ಯಯನವೊಂದರ ಪ್ರಕಾರ ದೇಶದಲ್ಲಿ ಶೇ.50ರಿಂದ 60ರಷ್ಟು ಇಂಥ ನಕಲಿ-ಬೆರಕೆ ಖಾದಿ ಮಾರುಕಟ್ಟೆಯಲ್ಲಿ ಪ್ರಕಾಶಿಸುತ್ತಿದೆ. ದರ ಪೈಪೋಟಿಯಲ್ಲೂ ಇವರೇ ಗೆಲ್ಲುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಖಾದಿ ಮಂಡಳಿ ಬಳಿ ಯಾವುದೇ ಅಸ್ತ್ರಗಳಿಲ್ಲ; ಸುಧಾರಣೆಯ ದಾರಿಯೂ ತೋಚುತ್ತಿಲ್ಲ.

ಹಾಗೆ ನೋಡಿದರೆ, ಖಾದಿ ಮಾತ್ರವಲ್ಲ ಇಡೀ ವಸ್ತ್ರ  ಉದ್ಯಮವೆ ಸೂಜಿಯ ಕಣ್ಣಿನಷ್ಟು ಸೂಕ್ಷ್ಮಾತಿ ಸೂಕ್ಷ. ಹಾಸು-ಹೊಕ್ಕುಗಳಲ್ಲಿ ಪೋಣಿಸಿಕೊಂಡ ಎಳೆಗಳಲ್ಲಿ ಯಾವುದು ಅಸಲಿ,ಯಾವುದು ನಕಲಿ ಎನ್ನುವುದು ಗ್ರಾಹಕನ ಅರಿವಿಗೆ ಬರುವುದೇ ಇಲ್ಲ. ದುಡಿಯುವ ಕೈಗಳಿಗೆ ಶಕ್ತಿ ತುಂಬುವ ಸದಾಶಯದೊಂದಿಗೆ ಯೋಜನೆಯನ್ನು ಜಾರಿಗೆ ತಂದರೆ ಅದನ್ನು ಕಬಳಿಸಲು ಬಂಡವಾಳಶಾಹಿ ವ್ಯವಸ್ಥೆ ಹೊಂಚಿ ಕುಳಿತಿರುತ್ತದೆ. ಹಿಂದೆ ಲಾಲೂ ಪ್ರಸಾದ್ ಯಾದವ್ ರೈಲ್ವೆ ಮಂತ್ರಿಯಾಗಿದ್ದಾಗ, ರೈಲ್ವೆಯ ಅಗತ್ಯಕ್ಕೆ ಖಾದಿ ಬಟ್ಟೆ ಖರೀದಿಸುವ ನಿರ್ಧಾರ ಪ್ರಕಟಿಸಿದರು.ಅಲ್ಲಿ ಕೂಡ ನೈಜ ಖಾದಿಯ ಪೂರೈಕೆ ಸಾಧ್ಯವಾಗದೆ, ನಕಲಿಯೆ ರಾರಾಜಿಸಿದ್ದರಿಂದ ಸದಾಶಯ ವಿಫಲವಾಯಿತು. ಕರ್ನಾಟಕದ ಒಂದು ಶೈಕ್ಷಣಿಕ ವಿಭಾಗದಲ್ಲಿ ಮಕ್ಕಳ ಸಮವಸ್ತ್ರಕ್ಕೆ ಕೈಮಗ್ಗ ಬಟ್ಟೆ ಖರೀದಿಸುವುದನ್ನು ಕಡ್ಡಾಯ ಮಾಡಲಾಗಿದೆ. ಪವರ್‌ಲೂಂಗೆ ಮೊರೆ ಹೋಗದೆ ಇನ್ನೂ ಶ್ರಮಶಕ್ತಿ ಆಧರಿಸಿ ಮಗ್ಗ ಹೊಡೆಯುವ ನೇಕಾರರಿಗೆ ಒಳಿತು ಮಾಡುವುದು ಯೋಜನೆ ಆಶಯ.
ಇಲ್ಲಿಯೂ ಕಾಲಮಿತಿ,ಪೂರೈಕೆ ಸಮಸ್ಯೆ ಮತ್ತಿತರ ಕಾರಣಕ್ಕೆ ಯೋಜನೆ ಲಾಭ ‘ಪವರ್’ಫುಲ್ ವ್ಯವಹಾರಸ್ಥರ ಪಾಲಾಗುತ್ತಿದೆ ಎಂಬ ಆಕ್ಷೇಪವಿದೆ.

ನಿಜ, ಇತಿಮಿತಿಗಳ ಮಧ್ಯೆಯು ಖಾದಿ ಎಲ್ಲ ಬಗೆಯ ಆಧುನಿಕ ವಸ್ತ್ರ-ವಿನ್ಯಾಸಗಳನ್ನು ಒಳಗೊಂಡು,ಯುವಜನರನ್ನೂ ಸೆಳೆಯುತ್ತಿದೆ. ಕೆವಿಐಸಿ ಉನ್ನತ ಅಧಿಕಾರಸ್ಥರು ರೆಂಬೆ-ಕೊಂಬೆಗಳ ಮಟ್ಟದಲ್ಲಿ ಖಾದಿಯನ್ನು ನಯ-ನಾಜೂಕುಗೊಳಿಸಲು ಶ್ರಮಿಸುತ್ತಿದ್ದಾರೆ. ಆದರೆ,ತಳಮಟ್ಟದಲ್ಲಿ ಅದೇ ಸುಕ್ಕುಗಟ್ಟಿದ ಸ್ಥಿತಿ. ದೇಶದ ಒಟ್ಟು  ಬೇಡಿಕೆಗೆ ಹೋಲಿಸಿದರೆ ಖಾದಿ ಉತ್ಪಾದನೆ ಪ್ರಮಾಣ ದಾರದ ಎಳೆಗಿಂತ ಸಣ್ಣದು. ಗಾಂಧಿಯ  ಖಾದಿ ಮಂತ್ರವನ್ನು ಸಾರಾಸಗಟು ಈ ಕಾಲಮಾನಕ್ಕೆ ಅನ್ವಯಿಸುವುದು ಕಷ್ಟ ಹೌದಾದರೂ ಮೂಲ ಆಶಯ,ಆದರ್ಶವನ್ನು ತದ್ವಿರುದ್ಧ ನೆಲೆಯಲ್ಲಿ, ಹೇಗೆಬೇಕೊ ಹಾಗೆ ನೇಯ್ದುಕೊಳ್ಳುವುದು ಒಳಿತಲ್ಲ. ವರ್ತಮಾನಕ್ಕನುಗುಣವಾಗಿಯೆ ನೂಲುವಿಕೆ,ನೇಯ್ಗೆ ಸಹಿತ ನೈಜ ಖಾದಿ ಉತ್ಪಾದನೆ ವ್ಯವಸ್ಥೆಯನ್ನು ಬಲಪಡಿಸದೆ,‘ಎಲ್ಲ ನೌಕರರು ಖಾದಿ ತೊಡಬೇಕು’ಎಂದು ಕಡ್ಡಾಯ ಮಾಡಿದರೆ ಅದರಿಂದ ಯಾರು ಹೆಚ್ಚು ಲಾಭ ಹಿರಿದುಕೊಳ್ಳುತ್ತಾರೆನ್ನುವುದನ್ನು ಬೇರೆ ಹೇಳಬೇಕಿಲ್ಲ. ವಸ್ತ್ರಸಂಹಿತೆಯನ್ನು ಜಾರಿಗೆ ತರುವುದೇ ಆದರೆ ಅದರ ಹೆಚ್ಚಿನ ಎಲ್ಲಾ  ಖಾದಿ ಉತ್ಪಾದನಾ ಘಟಕಗಳ ನೆರಿಗೆಗಟ್ಟಿದ ಮುಖಗಳಲ್ಲಿ ನಗೆಯ ನೂಲು ಅರಳಿಸಲು ಸಂದಾಯವಾಗಬೇಕು. ಅದಾಗದಿದ್ದರೆ, ಸರಕಾರಗಳ ಈ ‘ಕಾಳಜಿ’ಗೆ ನಕಲಿ/ಕಲಬೆರಕೆ ಖಾದಿ ಲಾಬಿಯದೆ ‘ಪ್ರೇರಣೆ’ ಎಂದು ವ್ಯಾಖ್ಯಾನಿಸಲು ಅಡ್ಡಿಯಿಲ್ಲ.