ದೇವನೂರ ಮಹಾದೇವ ವಿರಚಿತ ಕಥಾಕಾವ್ಯ ‘ಕುಸುಮಬಾಲೆ’-
[ಕುಸುಮಬಾಲೆ ಪುಸ್ತಕ ರೂಪದಲ್ಲಿ ಪ್ರಕಟವಾಗುವ ಮುನ್ನ ಪಂಚಮ, ಸುದ್ದಿ ಸಂಗಾತಿ, ಆಂದೋಲನ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ಅದರ ಭಾಗಗಳು ಧಾರಾವಾಹಿಯಾಗಿ ಬಂದಿತ್ತು. ಇಲ್ಲಿರುವ ಭಾಗದ ಕೃಪೆ: -‘ಪಂಚಮ’ (ಸಂಪುಟ: 08, ಸಂಚಿಕೆ: 19, ಅಕ್ಟೋಬರ್ 05, 1984) ಇದನ್ನು ಹುಡುಕಿ ನಮಗೆ ಕಳಿಸಿದ ಉಪನ್ಯಾಸಕರಾದ ಆರ್.ಶ್ರೀಧರ್ ಅವರಿಗೆ ಧನ್ಯವಾದಗಳು]
ನಂಜಲಗೂಡ್ಲ ದಿಕ್ಕಿಂದ ಹೊಲಾರ ಅಮಾಸನು ಬಾಡ್ಗ ಸೈಕಲ್ನಲ್ಲಿ ಅದರ ಹ್ಯಾಂಡಲ ಹಿಡ್ಕಳ್ದೇನೆ ಕಯ್ಯ ಹಿಂದ್ಕೂ ಮುಂದ್ಕೂ ಬೀಸ್ತ ಆ ಸೈಕಲ್ನೂ ನಲೀಸ್ತಾ ತಾನೂ ನಲೀತಾ ಊರದಿಕ್ಕ ಬರುತ್ತಿದ್ದನು.
ಕುಟ್ಟೋ ತಮ್ಮಟ ಮುಂದ ಕುಣೀತಾ ಬೆಳೆದ ಅಮಾಸನಿಗ, ಅವ್ನ ಸೈಕಲ್ನ ಹ್ಯಾಂಡಲ್ನಲ್ಲಿ ನೇತಾಡೊ ಗೋಣಿ ಚೀಲ್ದ ಸಾಮಾನನ್ನು ‘ಯಾನುಡ ಅದು’ ಅಂತ ಯಾರಾರು ಕೇಳುದ್ರ ‘ಐ, ಚರ್ಮಕನ್ನಿ ಬುದ್ದೈ’ ಅಂತಿದ್ದನಾದರೂ ಅವು ಚರ್ಮವಾಗಿರದೆ ಮುಟ್ಟಿನ ಸ್ಯಾಲವಾಗಿದ್ದವು. ಮುಟ್ಟಿನ ಸ್ಯಾಲ ಸಂಪಾದನ ಕಾಯಕದ ಯಶಸ್ಸಗಾಗಿ ಅಮಾಸನು ನೂರರವರಗ ನಂಬರ್ ಕಲ್ತು ಅದ ಜೋತಿಸಿಗಳ ಮಂತ್ರದ ಅಂಕಿಯಂತೆ ಬಳುಸ್ತಾ,
ಊರಲ್ಲಿ ಯಾವಾವ ಹಟ್ಟಿಯಲ್ಲಿ ಯಾವಾವ ಹೆಂಗಸು ಯಾವಾವ ದಿನವು ಮುಟ್ಟಾಗುವಳು ಎಂಬುದರ ಒಂದು ಕರಾರುವಾಕ್ಕಾದ ಪಂಚಾಗ್ವ ರಚುಸಿಕೊಂಡಿದ್ದನು. ಮಾರಾಜರು ನಂಬೋ ಒಂಟಿಕೊಪ್ಪಲ್ ಪಂಚಾಂಗವು ಸುಳ್ಳಾದರೂ ಅಮಾಸನ ಪಂಚಾಂಗವು ಯಾರದಾದರೂ ಪ್ರಕೃತಿ ಯತ್ವಾಸದಿಂದಾಗಿ ಹೆಚ್ಚೆಂದರೆ ಒಂದ್ ದಿನ ಹೆಚ್ಚೂಕಮ್ಮಿಯಾಗುತ್ತಿತ್ತೊ ಪರಂತು ನಿಜ ಆಗುತ್ತಿತ್ತು.
ಈ ನಿಜವ ಹಿಡ್ದು, ನಿದ್ದವು ತೂಕಡಿಸೋ ಕಾಲವ ಅರಿತವನಾದ ಅಮಾಸನು, ಆ ವ್ಯಾಳದಲಿ ಅಗತ್ಯವಾದೆಡೆ ಚಣಮಾತ್ರದ ಭೇಟಿ ನೀಡಿ ಸೂರಡಿ ಸಿಕ್ಕಿಸೊ ಮುಟ್ಟಿನ ಸ್ಯಾಲಗಳ ಮಾಯಮಾಡ್ತ, ಸಾಕಷ್ಟು ಸ್ಯಾಲಭಾಗ್ಯ ಪಡ್ದು ನೇಮನಿಷ್ಠಗ ಹೆಸುರಾದ ಮ್ಯಾಗಲಕೇರಿ ಯಮ್ಕಗಳ್ಗ ಇದು ಯಾತರ ಕೆಲ್ಸ ಅಂಬುದ ಅರುವಾಗಿಸದೆ ದಿಕ್ಕೆಡಿಸಿದ್ದನು.
ಸ್ವಪ್ರತಿಭೆಯಿಂದ ಈ ಕಾಯಕ್ವ ಕಂಡುಹಿಡ್ದವನಾಗಿ ಅದನು ನೇಮನಿಷ್ಠೇಲಿ ಆಚರಿಸುತಲಿದ್ದ ಅಮಾಸನು, ಮಾಲನ್ನು ಫ್ರೆಸ್ಸಾಗಿ ಬಿಕರಿ ಮಾಡಲು ಸಿಕ್ಕಿದಂದೇ ನೇರವಾಗಿ ನಂಜಲಗೂಡ ಹೊಳ ತಲುಪಿ ಅಲ್ಲಿ ಅಗಸನ ಯಾಸದಲಿ ಮಾಲು ಹಸನುಮಾಡಿ ಅಡ್ವಾನ್ಸ್ ಕೊಟ್ಟಿದ್ದ ಸಾಬರಿಗ ನಿಯತ್ತಲಿ ಮಾರುತಿದ್ದನು.
ಅಮಾಸನ ಈ ಕಾಯಕವೂ, ಕೂಲಿಕೆಲ್ಸಕ್ಕಿಂತ ಹೆಚ್ಚೂ ಲಾಭಾದಾಯಕವಾಗಿಯೂ, ಅನಿಶ್ಚಯತೆ ಇಲ್ಲದ್ದಾಗಿಯೂ ಹಾಗೂ ಯಾರಗಾದರೂ ಮುಟ್ಟುನಿಂತು ಸಂಭವಿಸೋ ಲುಕ್ಸಾನಿಗ ಪ್ರಕೃತಿಯು ಹೊಸ ಗಿರಾಕಿ ಕೂಡುಸ್ತ ಅದು ಅಲ್ಲಲ್ಲಿಗ ಸಮನಾಗಿ, ಇದು ಅಮಾಸನ ಹೊಟ್ಟಬಟ್ಟ ಬೀಡಿ ಸಿನುಮಾ ಸೈಕಲ್ ಬಾಡ್ಗಗೂ ಆಗಿ ಉಳುದುದು ಇವನ ನೆಚ್ಚಿ ಮಾರಿಗುಡಿ ನೆಲಕ್ಕಂಟಿ ಬಾಯ ಬುಟ್ಕಂಡಿದ್ದ ಕುರಿಯಯ್ಯಗ ಗಂಜಿನೀರ ಕಾಣಿಸ್ತಿತ್ತು.
ಯಾವ ಪ್ರಕಾರವಾಗಿ ಸೈಕಲ್ ಮ್ಯಾಲ ಬರುತ್ತಿದ್ದ ಅಮಾಸನು ಯಾರ ಕಣ್ಣುಗ ಬೀಳುವಂತವನಾದನೆಂದರೆ, ಮಠದ ಒಂದೈಡ ಪಡಸಾಲದಲ್ಲಿ ಇಸ್ಪೀಟು ಆಡ್ತ ದುಡ್ಡುಕಾಸು ಹೊಡ್ದು ಗೋರಾಕಿ ಕೊಂಡಿದ್ದವನ ಕಣ್ಣುಗ ಬೀಳುವಂತಾದನು.
ಈಗ ತನ್ನ ಕಾಲ್ಬಳಿ ಗುಡ್ಡವಾಗಿ ಬಿದ್ದಿದ್ದಂಥ ಶ್ರೀಲಕ್ಷ್ಮಿ ಚಂಚಲವ ಅರಿತವನಾದ ಅವ ನೆಪ ತೆಗ್ದು ಆಟ ನಿಲ್ಸಕಾ ಕಣ್ಲಿಯ ಬಿಂಕಿ ಕಡೆಸ್ತ ಹಲ್ಮುಡ್ಯ ಖಚ್ಗಂಡೂ “ನೋಡ್ರುಡಾ ನೋಡ್ರುಡಾ! ಹೊಟ್ಟಗ ಹಿಟ್ಟು ಇಲ್ದೆಯಿರೊ ಆ ಹೊಲೀನ್ ಕೊಬ್ಬ! ನಾವ್ ನೋಡ್ಲಿ ಅಂತ್ಲಿಯ ಹಾವ್ನ ಥರ್ವಾಗಿ ನಲೀತಾ ಬತ್ತಾ ಅವ್ನಲ್ಲಾ! ಬಡ್ಡೇದ್ನಗ ಆ ಹ್ಯಾಂಡಲ್ನೆ ಹಿಡ್ಕಳಕ ಆಗಬಾರ್ದು… ಆ ಥರ್ವಾಗಿ ಅವ್ನ ಆ ಏಡು ಮುಂಗೈನಿಗ ಕತ್ತರ್ಸಿ ಅತ್ತಾಗೊಂದು ಇತ್ತಾಗೊಂದು ಎಸ್ದ್ ಬುಟ್ರೀಗಪ್ಪಾ…” ಅಂತ ಬಾಯೊಳಗಲ ಹಲ್ಗಳನ್ನಾಗ ನೊರಗುಟ್ಸಿದನು.
ಆಟ ದೊಡ್ಡದು…
