ಜೋಶಿ ವಿರುದ್ಧ ಹೋರಾಟಕ್ಕೆ ಮಹಾದೇವ ಬೆಂಬಲ

[ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಹೇಶ ಜೋಶಿ ವಿರುದ್ಧ ‘ಕನ್ನಡ ನಾಡು ನುಡಿ ಜಾಗೃತಿ ಸಮಿತಿ’ಯ ನೇತೃತ್ವದಲ್ಲಿ 2025 ಮೇ 17ರಂದು ಮಂಡ್ಯದಲ್ಲಿ ಹಮ್ಮಿಕೊಂಡಿರುವ ‘ಮೈಸೂರು ವಿಭಾಗಮಟ್ಟದ ಜನಾಂದೋಲನ’ಕ್ಕೆ ಸಾಹಿತಿ ದೇವನೂರ ಮಹಾದೇವ ಬೆಂಬಲ ಸೂಚಿಸಿದ 12.5.2025ರ ಪ್ರಜಾವಾಣಿ ಪತ್ರಿಕಾ ವರದಿ]

https://www.prajavani.net/district/mysuru/kannada-mysuru-3282650

ಮೈಸೂರಿನಲ್ಲಿ ಸಾಹಿತಿ ದೇವನೂರ ಮಹಾದೇವ ಅವರೊಂದಿಗೆ ಶನಿವಾರ ನಡೆದ ಮಾತುಕತೆಯಲ್ಲಿ ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ. ಜಯಪ್ರಕಾಶಗೌಡ ಮಾತನಾಡಿದರು. ಸಾಹಿತಿ ಟಿ.ಸತೀಶ್ ಜವರೇಗೌಡ, ಕಾಂಗ್ರೆಸ್ ಮುಖಂಡ ಎನ್.ಎಸ್. ಗೋಪಿನಾಥ್ ಪಾಲ್ಗೊಂಡಿದ್ದರು

ಮೈಸೂರು: ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಹೇಶ ಜೋಶಿ ವಿರುದ್ಧ ‘ಕನ್ನಡ ನಾಡು ನುಡಿ ಜಾಗೃತಿ ಸಮಿತಿ’ಯ ನೇತೃತ್ವದಲ್ಲಿ ಮೇ 17ರಂದು ಮಂಡ್ಯದಲ್ಲಿ ಹಮ್ಮಿಕೊಂಡಿರುವ ‘ಮೈಸೂರು ವಿಭಾಗಮಟ್ಟದ ಜನಾಂದೋಲನ’ಕ್ಕೆ ಸಾಹಿತಿ ದೇವನೂರ ಮಹಾದೇವ ಬೆಂಬಲ ಸೂಚಿಸಿದ್ದಾರೆ.

ಸಮಿತಿಯ ನಿಯೋಗವು ಇಲ್ಲಿನ ಅವರ ನಿವಾಸದಲ್ಲಿ ಶನಿವಾರ ಭೇಟಿಯಾಗಿ ಮಾತುಕತೆ ನಡೆಸಿತು.

‘ಜೋಶಿಯವರು ದುರಾಡಳಿತ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸರ್ವಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಇದೆಲ್ಲ ಕಾರಣದಿಂದ ಅವರ ವಿರುದ್ಧ ಹೋರಾಟ ನಡೆಸಲಾಗುತ್ತಿದೆ’ ಎಂದು ಸಮಿತಿಯವರು ತಿಳಿಸಿದರು. ‘ಇದೆಲ್ಲವನ್ನೂ ಮುಖ್ಯಮಂತ್ರಿಯವರ ಗಮನಕ್ಕೆ ತಂದು ಸೂಕ್ತ ಕಾನೂನು ಕ್ರಮ ಆಗುವಂತೆ ಮಾಡಲು ಸಹಕರಿಸಬೇಕು’ ಎಂದು ಕೋರಿದರು.

‘ಇದಕ್ಕೆ ಪ್ರತಿಕ್ರಿಯಿಸಿದ ಮಹಾದೇವ, ಈ ಎಲ್ಲಾ ಬೆಳವಣಿಗೆಗಳು ಮಾಧ್ಯಮದ ಮೂಲಕ ಗೊತ್ತಾಗಿದೆ. ನಿಮ್ಮ ಹೋರಾಟಕ್ಕೆ ನನ್ನ ನೈತಿಕ ಬೆಂಬಲವಿದೆ. ಹೋರಾಟ ಮುಂದುವರಿಯಲಿ. ನಾನೂ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಕ್ರಮ ಜರುಗಿಸುವಂತೆ ಒತ್ತಾಯಿಸುತ್ತೇನೆ ಎಂದು ತಿಳಿಸಿದ್ದಾರೆ’ ಎಂದು ಸಮಿತಿಯವರು ಮಾಹಿತಿ ನೀಡಿದ್ದಾರೆ.

ನಿಯೋಗ ತೆರಳಲು ನಿರ್ಧಾರ: ಇದಕ್ಕೂ ಮುನ್ನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ನಗರದ ಸಾಹಿತಿಗಳು, ಪ್ರಾಧ್ಯಾಪಕರು, ಹೋರಾಟಗಾರರು, ಸಂಘ ಸಂಸ್ಥೆಗಳ ಪ್ರಮುಖರು, ಮಹೇಶ್ ಜೋಶಿ ವಿರುದ್ಧದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಜೋಶಿ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ಸಮಗ್ರ ತನಿಖೆಗೆ ಒತ್ತಾಯಿಸಲು ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳಬೇಕೆಂದು ನಿರ್ಣಯಿಸಲಾಯಿತು.